ಇಂದಿನಿಂದ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ: ಉತ್ತರ ಭಾಗದ ಚರ್ಚೆಗೆ ಅವಕಾಶ: ಸ್ಪೀಕರ್‍

vidhana-mandala-belagavi-speaker-kageri

ಇಂದಿನಿಂದ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ:  ಉತ್ತರ ಭಾಗದ ಚರ್ಚೆಗೆ ಅವಕಾಶ: ಸ್ಪೀಕರ್‍

 

 

ಇಂದಿನಿಂದ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ:

ಉತ್ತರ ಭಾಗದ ಚರ್ಚೆಗೆ ಅವಕಾಶ: ಸ್ಪೀಕರ್‍

 

ಬೆಳಗಾವಿ: ಸೋಮವಾರದಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಆರಂಭಗೊಳ್ಳುತ್ತಿದೆ. ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಸಂಬಂಧಿಸಿದ ವಿಷಯಗಳ ಕುರಿತ ಚರ್ಚೆಗೆ ಎರಡು ದಿನಗಳನ್ನು ಮೀಸಲಿಡುವ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ಕರ್ನಾಟಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

 

ಭಾನುವಾರ ಸಂಜೆ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಗೇರಿಯವರು, ಉತ್ತರ-ಕರ್ನಾಟಕ ಪ್ರದೇಶದ ನಿರ್ದಿಷ್ಟ ವಿಷಯಗಳನ್ನು ಚರ್ಚೆಗೆ ಕೈಗೆತ್ತಿಕೊಳ್ಳಲು ಹಲವು ಸದಸ್ಯರಿಂದ ಮನವಿಗಳು ಬಂದಿವೆ. "ನಾನು ಕಲಾಪ ಪ್ರಾರಂಭವಾಗುವ ಮುನ್ನ ನಾಳೆ ಬೆಳಗ್ಗೆ 10.30ಕ್ಕೆ ನಿಗದಿಪಡಿಸಲಾಗಿರುವ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಿ, ಎರಡು ದಿನಗಳನ್ನು ಉತ್ತರ ಕರ್ನಾಟಕ ನಿರ್ದಿಷ್ಟ ವಿಷಯಗಳಿಗೆ ಮೀಸಲಿಡುವ ಸಾಧ್ಯತೆಯನ್ನು ಅನ್ವೇಷಿಸಲು ಪ್ರಯತ್ನಿಸುತ್ತೇನೆ" ಎಂದು ಸ್ಪೀಕರ್ ಹೇಳಿದರು.

 

ವಿಧಾನಸಭಾ ಅಧಿವೇಶನದಲ್ಲಿ ಇಡೀ ಕರ್ನಾಟಕದ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಿದೆ ಎಂದ ಸಭಾಧ್ಯಕ್ಷರು, ಪ್ರತಿಪಕ್ಷಗಳು ಎತ್ತುವ ಸಮಸ್ಯೆಗಳಿಗೆ ಆಡಳಿತ ಪಕ್ಷ ಸ್ಪಂದಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕಲಾಪ ಅರ್ಥಪೂರ್ಣವಾಗಿರುತ್ತವೆ ಮತ್ತು ಅದರ ಫಲಶ್ರುತಿ ಜನರ ಹಿತಾಸಕ್ತಿಗೆ ಅನುಗುಣವಾಗಿರುತ್ತದೆ ಎಂದು ತಾವು ನಿರೀಕ್ಷಿಸುವುದಾಗಿ ಕಾಗೇರಿ ಹೇಳಿದರು.

 

ಕೋವಿಡ್ -19 ಹಿನ್ನೆಲೆಯಲ್ಲಿ ಎರಡು ವರ್ಷಗಳ ತರುವಾಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. "ಅಧಿಕಾರಿಗಳು ಈ ಸಂದರ್ಭಕ್ಕೆ ಸಜ್ಜಾಗಿದ್ದು ಕಲಾಪವನ್ನು ಸುಗಮವಾಗಿ ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ ಎಂಬುದು ತಮಗೆ ಹರ್ಷವೆನಿಸುತ್ತದೆ ಎಂದು ಸ್ಪೀಕರ್ ಹೇಳಿದರು.

 

ಹಲವಾರು ಸಂಘಟನೆಗಳು ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಲು ನಿರ್ಧಾರ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾಗೇರಿ, ಆ ಪ್ರತಿಭಟನಾಕಾರರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುವ ನಿರೀಕ್ಷೆ ವ್ಯಕ್ತಪಡಿಸಿದರು. “ಈ ವಿಷಯ ಪ್ರತಿಭಟನೆಯ ನಿರ್ಧಾರ ಮಾಡಿರುವ ಸಂಸ್ಥೆಗಳು ಮತ್ತು ಸರ್ಕಾರದ ನಡುವಿನದಾಗಿದ್ದು,. ಬೇಡಿಕೆಗಳತ್ತ ಗಮನಹರಿಸುವುದು  ಸರಕಾರಕ್ಕೆ ಬಿಟ್ಟ ವಿಚಾರ ಎಂದರು.

 

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸ್ಪೀಕರ್, ಸೋಮವಾರ ಸರ್ಕಾರದಿಂದ ಮಸೂದೆಗಳ ಮಂಡನೆಯನ್ನು ನಿರೀಕ್ಷಿಸುವುದಾಗಿಯೂ ಹೇಳಿದರು.