ಅವರು ಅವಮಾನಕ್ಕೆ ಅರ್ಹರಿದ್ದರು... ಆದರೆ ನಾನು "ರುಮಾ...?" ದಯಾ ಗಂಗನಘಟ್ಟ
ಯುದ್ಧದಲ್ಲಿ ಗೆಲುವು ಧರ್ಮ್ಮದ್ದೋ ಅಧರ್ಮದ್ದೋ ಸೋಲಂತೂ ಮನುಷ್ಯತ್ವದ್ದೇ. ರಾಮ ವಾಲಿಯನ್ನು ಕೊಂದಾಗ ನನ್ನನ್ನೂ ಕೊಂದು ಬಿಟ್ಟ.

- ದಯಾ ಗಂಗನಗಟ್ಟ
ಅದೊಂದು ಗುಹೆಗಳಿಂದ ಕೂಡಿದ ಬೆಟ್ಟ ಸಾಲು,ಅಲ್ಲಿನ ಒಂದು ದೊಡ್ಡ ಗುಹೆಯೊಳಗೆ ಹೂವುಗಳಿಂದ ಕೂಡಿದ ಕಾಡಿತ್ತು,ಅದರೊಳಗೆ ಸಾಲು ಸಾಲಾಗಿ ಹಲವು ಭವನಗಳಿದ್ದವು. ರಾಜಭವನವಿತ್ತು. ಅಲ್ಲಲ್ಲಿ ತಿಳಿನೀರಿನಿಂದ ಕೂಡಿದ ಸರೋವರಗಳಿದ್ದವು, ವರ್ಷಪೂರ್ತಿ ಹಣ್ಣು ಬಿಡುವಂತಹ ಮರಗಳಿದ್ದವು.
ದಿವ್ಯ ವಸ್ತ್ರ ಮತ್ತು ಮಾಲೆಗಳನ್ನು ಧರಿಸಿದ ವಾನರರು ಅಲ್ಲಲ್ಲಿ ಓಡಾಡುತ್ತಿದ್ದರು. ಇಂತಹ ಕಿಷ್ಕಿಂಧೆಯೊಳಗೆ ಒಂಟಿಯಾಗಿ ಕುಳಿತು ಸುತ್ತಲಿನ ಜಗತ್ತಿನ ಪರಿವೆಯೇ ಇಲ್ಲದೆ ಅನ್ಯಮನಸ್ಕಳಾಗಿ ಕುಳಿತಿದ್ದಳು 'ರುಮಾ'.ಅವಳ ಮನಸ್ಸು ಇವತ್ತು ತೀವ್ರ ಘಾಸಿಗೊಳಗಾಗಿತ್ತು, ಅವಳು ಅಳುತ್ತಾ ತನಗೆ ತಾನೇ ಗೊಣಗಿಕೊಂಡಂತೆ ಮಾತಾಡತೊಡಗಿದಳು.
" ಹೇಳಲು ನಾನು ಈ ಕಾಡಿನ ರಾಣಿ, ವಾನರ ರಾಜ ಸುಗ್ರೀವನ ಹೆಂಡತಿ, ಆದರೆ ನನ್ನಂತಹಾ ನತದೃಷ್ಟೆ ಬೇರೆ ಯಾರೂ ಇಲ್ಲವೇನೋ, ನನ್ನ ಹುಟ್ಟಾದರೂ ಸಾಮಾನ್ಯದ್ದಾ! ಇಲ್ಲವೇ ಇಲ್ಲ, ಸಮುದ್ರಮಥನದಂತಾ ಮಹಾ ಯಾಗದಲ್ಲಿ ಜನಿಸಿದವಳು ನಾನು, ಅವತ್ತು ಆ ಮಹಾ ಮಂಥನದಲ್ಲಿ ಅಮೃತ, ವಿಷ ಇತ್ಯಾದಿಗಳು ಹುಟ್ಟಿದಂತೆಯೇ ನಾವು ಕೆಲ ಸುಂದರ ಹೆಣ್ಣುಮಕ್ಜಳೂ ಹುಟ್ಟಿದ್ದೆವು. ಅದರಲ್ಲಿ ಕೆಲವರನ್ನು ಇಂದ್ರ ತನ್ನ ಆಸ್ತಾನಕ್ಕೆ ಆರಿಸಿಕೊಂಡು ಅಪ್ಸರೆಯನ್ನಾಗಿ ಮಾಡಿಕೊಂಡ. ನಾನು ಮತ್ತು 'ತಾರೆ' ಇಬ್ಬರೂ ಉಳಿದುಕೊಂಡೆವು. ವಿಷ್ಣು ನಮ್ಮಿಬ್ಬರಲ್ಲಿ ತಾರೆಯನ್ನು ವಾಲಿಗೆ ಹೆಂಡತಿ ಎಂದೂ, ನನ್ನನ್ನು ಸುಗ್ರೀವನಿಗೆ ಹೆಂಡತಿಯೆಂದೂ ನಿರ್ಧರಿಸಿ ವಿವಾಹಮಾಡಿಸಿದ. ಮೊದಲೇ ಹೆಣ್ಣಾಗಿ ಹುಟ್ಟಿದ್ದೆವು, ನಮ್ಮದೇ ನಿರ್ಧಾರ ಅಂತ ಎಲ್ಲಿತ್ತು ನಮಗೆ. ನಾವೆಲ್ಲ ಸಹಿಸಲೆಂದೇ ಹುಟ್ಟಿದವರು! ಅಲ್ಲವಾ? ತಲೆತಗ್ಗಿಸಿ ಅವರ ಅಣತಿಯಂತೆ ಇಗೋ,ಈ ಕಿಷ್ಕಿಂದೆಗೆ ಬಂದು ಸೇರಿದ್ದೆ. ಇನ್ನೇನು ಸುಖವಾಗಿ ಸಂಸಾರ ಮಾಡಿಕೊಂಡಿರಬಹುದಿತ್ತಲ್ಲಾ ಅಂತೀರಾ, ಇಲ್ಲ, ಸುಗ್ರೀವನ ಪತ್ನಿಯಾಗಿ ಬಂದ ನಾನೇನೋ ಪಾಲಿಗೆ ಬಂದದ್ದನ್ನು ಪಂಚಾಮೃತ ಅಂದುಕೊಂಡು ಸಂಸಾರ ನಡೆಸಲು ಖುಷಿಯಾಗೇ ತಯಾರಾದೆ. ಸುಗ್ರೀವ ವೀರ, ಸುಂದರ,ಒಳ್ಳೆಯ ಪತಿಯೇ ಆಗುತ್ತಾನೆಂಬ ಆಸೆ. ಒಲವಿನೊಂದಿಗೇ ಅಂತಃಪುರದ ನನ್ನ ಮಹಲಿನೊಳಗೆ ಶೃಂಗರಿಸಿಕೊಂಡು ಕುಳಿತಿದ್ದೆ. ಆಹಾ ಎಂತಹ ಸುಂದರ ಕ್ಷಣ ನನಗಾಗಿ ಕಾದಿರಬಹುದು, ಬದುಕು ಎಂತಹಾ ಸಂತಸವನ್ನ ನನಗೆ ನೀಡಬಹುದು ಎಂದು ನೆನೆಯುತ್ತಾ ಮನಸ್ಸು ಸಣ್ಣಗೆ ಕಂಪಿಸುತ್ತಿತ್ತು. ಸುಗ್ರೀವ ಒಳಬಂದ. ಮುಂದೆ ನಡೆಯಬಹುದಾದ ಮಧುರ ಕ್ಷಣಗಳನ್ನು ನೆನೆದು ನಾನು ಖುಷಿಯಿಂದ ಕಾಯುತ್ತಿದ್ದೆ. ಆದರೆ ಒಳಬಂದ ಸುಗ್ರೀವ ನನ್ನ ಕಡೆ ತಿರುಗಿಯೂ ನೋಡದೆ, ಪಲ್ಲಂಗದ ಒಂದು ತುದಿಯಲ್ಲಿ ನನಗೆ ಬೆನ್ನು ಮಾಡಿ ಮಲಗಿ ಬಿಟ್ಟ. ನನಗೆ ಏನೂ ತೋಚದಾಯ್ತು. ಏನು ಮಾಡಲಿ, ಪ್ರಶ್ನಿಸಲಾ,ಕೇಳುವುದಾದರೂ ಏನೆಂದು? ರಾತ್ರಿಯಿಡೀ ಮಲಗಿದ್ದ ಆ ಸುಂದರ ಗಂಡನನ್ನೇ ನೋಡುತ್ತಾ ಕುಳಿತುಬಿಟ್ಟೆ. ಮನಸಿನ ಮೇಲೆ ಕಾದ ಸೀಸದಿಂದ ಬರೆ ಎಳೆದಂತಾಗಿತ್ತು, ಹೋಗಲಿ ಇದು ಅವತ್ತಿಗಷ್ಟೇ ನಿಲ್ಲದೇ ಪ್ರತೀ ದಿನದ ಮಾಮೂಲು ಕತೆಯಾಯ್ತು. ಪ್ರಶ್ನಿಸುವ ಹಕ್ಕು ಹೆಣ್ಣಿಗೆ ಎಲ್ಲಿತ್ತು?ಹೊರಗಿನ ಪ್ರಪಂಚಕ್ಕೆ ಸುಗ್ರೀವನ ಪತ್ನಿಯಾಗಿ ಉಳಿದೆ.
ಇದು ಹೀಗೇ ನಡೆಯುತ್ತಿತ್ತು. ಇಂದಲ್ಲಾ ನಾಳೆ ಗಂಡ ಸರಿಹೋಗಬಹುದು. ನನ್ನ ಮೇಲೆ ಅವನಿಗೆ ಒಲವಾಗಬಹುದು ಎಂಬ ಆಸೆಯಿಂದ ದಿನ ಕಳೆಯುತ್ತಿದ್ದ ನನಗೆ ಅವತ್ತು ಬಂದ ಒಂದು ಸುದ್ದಿ ಕಂಗಾಲಾಗಿಸಿತು. ಅವತ್ತು ವಾನರರಿಗೆ ತೊಂದರೆ ಕೊಡುತ್ತಿದ್ದ ಮಾಯಾವಿಯೊಬ್ಬನನ್ನು ಕೊಲ್ಲಲು ವಾಲಿ ಮತ್ತು ಸುಗ್ರೀವ ಇಬ್ಬರೂ ಹೋಗಿದ್ದರು. ಆದರೆ ಹಿಂದುರಿಗಿ ಬಂದದ್ದು ಸುಗ್ರೀವ ಮಾತ್ರ. ಆ ಮಾಯಾವಿಯು ಇವರ ಜೊತೆ ಕಾದಾಡುತ್ತಾ ಗುಹೆಯೊಂದರ ಒಳಗೆ ಹೋದನಂತೆ. ವಾಲಿಯು ಸುಗ್ರೀವನನ್ನು ಹೊರಗೇ ನಿಲ್ಲಲು ಹೇಳಿ ತಾನೊಬ್ಬನೇ ಒಳಗೆ ಹೋದನಂತೆ, ಎಷ್ಟು ಹೊತ್ತಾದರೂ ಹೊರಗೆ ಬರಲೇ ಇಲ್ಲವಂತೆ. ಕೊನೆಗೆ ಗುಹೆಯ ಒಳಗಿಂದ ರಕ್ತ ಹರಿದು ಬರತೊಡಗಿತಂತೆ. ಮಾಯಾವಿ ತನ್ನ ಅಣ್ಣನನ್ನು ಕೊಂದನೆಂದುಕೊಂಡ ಈ ತಮ್ಮ ಗುಹೆಯ ಬಾಯನ್ನ ಒಂದು ಕಲ್ಲಿನಿಂದ ಮುಚ್ಚಿ ಬಂದು ಬಿಟ್ಟನಂತೆ. ಇದು ನನ್ನ ಗಂಡ ಹೇಳಿದ ಕತೆ. ವಾನರರೆಲ್ಲ ಇದನ್ನ ನಂಬಿದರು. ನಾನೂ, ಆದರೆ ದಿನಕಳೆದಂತೆ ನನಗೆ ಇದರ ಬಗ್ಗೆ ಅನುಮಾನ ಮೂಡತೊಡಗಿತು. ಯಾಕಂತೀರಾ? ಇದುವರೆಗೂ ನಾನು ನೋಡದೇ ಇದ್ದ ಸುಗ್ರೀವನನ್ನ ನಾನು ಅವತ್ತಿನಿಂದ ಕಂಡಿದ್ದೆ. ಅದೆಷ್ಟು ಉತ್ಸಾಹ, ಅದೆಂತಹಾ ಖುಷಿಯಿಂದ ಅವನು ಕಿಷ್ಕಿಂದೆಯನ್ನು ಆಳತೊಡಗಿದ್ದ! ಇದಷ್ಟೇ ಆಗಿದ್ದರೆ ತಪ್ಪೇನಿರಲಿಲ್ಲ. ನಿಜವಾದ ವಿಷಯ ಇದದ್ದು ಇಲ್ಲಿ, ಒಂದು ದಿನ ಸುಗ್ರೀವ ಅಣ್ಣನ ಹೆಂಡತಿಯಾದ ತಾರೆಯನ್ನು ತನ್ನ ಹೆಂಡತಿ ಎಂದು ಘೋಷಿಸಿಬಿಟ್ಟ. ಅದಕ್ಕೂ ಮೀರಿ ತಾರೆಯನ್ನೇ ಪಟ್ಟದ ರಾಣಿ ಎಂದೂ ಘೋಷಿಸಿದ! ಸುಗ್ರೀವ ರಾಜನಾದಾಗ ಪಟ್ಟದ ರಾಣಿ ಯಾರಾಗಬೇಕು. ತಾರೆಯ? ನಾನ? ನನ್ನ ಎದೆಯಲ್ಲಿ ಅಗ್ನಿಕುಂಡವೇ ಹೊತ್ತಿಕೊಂಡಂತಾಗಿತ್ತು, ಈ ತಾರೆಯನ್ನು ಸುಗ್ರೀವ ವಶಪಡಿಸಿಕೊಂಡಿದ್ದನೋ? ಆಕೆಯೇ ಅವನನ್ನು ಒಪ್ಪಿಕೊಂಡಿದ್ದಳೋ? ಈಗ ನನ್ನನ್ನು ಕಾಡತೊಡಗಿದ ಪ್ರಶ್ನೆ ಇದು. ನನ್ನ ಮನಸ್ಸು ಒಡೆದು ಚಿದ್ರವಾಯ್ತು, ಸುಗ್ರೀವ ಗುಹೆಯ ಬಾಗಿಲಿಗಷ್ಟೇ ಕಲ್ಲನ್ನು ಎಳೆದಿರಲಿಲ್ಲ, ನನ್ನ ಬದುಕಿಗೇ ಚಪ್ಪಡಿಕಲ್ಲು ಎಳೆದು ಬಿಟ್ಟಿದ್ದ. ರೋಧಿಸಲೂ ಆಗದೆ, ಒಪ್ಪಿಕೊಳ್ಳಲೂ ಆಗದೆ ಒದ್ದಾಡಿ ಹೋಗಿದ್ದೆ, ಎಲ್ಲವೂ ಕಣ್ಣ ಮುಂದೆಯೇ ನಡೆಯುತ್ತಿದ್ದರೂ ಏನನ್ನಾದರೂ ಹೇಳುವ,ಕೇಳುವ ಸ್ವಾತಂತ್ರ್ಯ ವಾದರೂ ನನಗೆಲ್ಲಿತ್ತು?
ನನಗೆ ಆಶ್ಚರ್ಯ ವಾಗಿದ್ದು ತಾರೆಯ ಬಗ್ಗೆ. ಅವಳು ಸುಗ್ರೀವನೊಂದಿಗೆ ಬಹಳ ಸಹಜವೆಂಬಂತೆ ಇದ್ದುಬಿಟ್ಟಳು. ನನ್ನ ಜೊತೆ ಒಮ್ಮೆಯೂ ಮುಖ ಕೊಟ್ಟು ಒಂದು ಮಾತೂ ಆಡದ ಸುಗ್ರೀವ ಅವಳೊಡನೆ ನಗುನಗುತ್ತಾ ಸರಸದಿಂದ ಮಾತನಾಡುತ್ತಿದ್ದ. ಇಬ್ಬರೂ ಕೂಡಿದಾಗ ಕೇಳಿಬರುತ್ತಿದ್ದ ನಗು ನನ್ನ ಎದೆಯನ್ನ ಇರಿಯುತ್ತಿತ್ತು. ಈ ನಡುವೆ ದಾಸಿಯೊಬ್ಬಳಿಂದ ತಿಳಿದು ಬಂದ ವಿಷಯವೊಂದು ನನ್ನನ್ನ ಇನ್ನಷ್ಟು ಕುಗ್ಗಿಸಿತು. ಅದೇನಂದ್ರೆ, ಈ ಸುಗ್ರೀವ ಮತ್ತೆ ತಾರೆ ಸಮುದ್ರ ಮಥನದ ಸಮಯದಲ್ಲೇ ಒಬ್ಬರನ್ನೊಬ್ಬರು ಬಯಸಿದ್ದರಂತೆ. ತಾರೆಯನ್ನು ಮನಸಾರೆ ಬಯಸಿದ ಸುಗ್ರೀವನಿಗೆ ಅವಳು ಮಡದಿಯಾಗದೆ, ನನ್ನನ್ನು ಬಯಸದೆಯೂ ಸುಗ್ರೀವನು ಮಹಾವಿಷ್ಣುವಿನ ಆಣತಿಯಂತೆ ಮದುವೆಯಾಗಬೇಕಾಯಿತಂತೆ! ಇಲ್ಲಿ ನನ್ನ ತಪ್ಪಾದರೂ ಏನಿದೆ ಹೇಳಿ? ವಾನರರ ಬದುಕಿಗೆ ಅದರದೇ ಆದ ಒಂದು ಸಂವಿಧಾನವಿದೆ. ಇಲ್ಲಿ ಹೆಣ್ಣು ಮತ್ತು ಅಧಿಕಾರ ತೋಳ್ಬಲವಿದ್ದವನಿಗೆ ಮಾತ್ರ. ತೋಳ್ಬಲದಲ್ಲಿ ಸುಗ್ರೀವ ವಾಲಿಯನ್ನು ಗೆಲ್ಲಲಾಗದು ಎಂದು ಅವನಿಗೆ ಗೊತ್ತಿತ್ತು. ಹಾಗಾಗಿ ಸುಮ್ಮನೇ ನನ್ನನ್ನು ಮದುವೆಯಾದ. ಇಷ್ಟೆಲ್ಲಾ ಹುನ್ನಾರ ಮಾಡಿ ಮತ್ತೆ ತಾನು ಬಯಸಿದ ತಾರೆಯನ್ನು ಪಡೆದ, ಆದರೆ ನನ್ನ ಗತಿ. ನನ್ನ ಬದುಕು ಹಾಳಾದದ್ದಕ್ಕೆ ಯಾರನ್ನ ಹೊಣೆ ಮಾಡಲಿ? ಒಂದು ಕುಟುಂಬದಲ್ಲಿ ಇದ್ದಕ್ಕಿದ್ದಂತೆ ಬಹಳ ದೊಡ್ಡ ಪರಿವರ್ತನೆಗಳು ಆದಾಗ, ಆ ಪರಿಸ್ಥಿತಿಗೆ ಮನೆಯವರು ಹೇಗೆ ಹೊಂದಿಕೊಂಡಿರುತ್ತಾರೆ? ಅಥವಾ ಹೊಂದಿಕೊಳ್ಳುವ ಅನಿವಾರ್ಯಕ್ಕೆ ಸಿಕ್ಕಿಕೊಂಡಿರುತ್ತಾರೆ. ಯಾರ್ಯಾರ ಕನಸುಗಳು ನುಚ್ಚುನೂರಾಗಿರುತ್ತವೆ ಗೊತ್ತಾಗುವುದೇ ಇಲ್ಲ. ಇಲ್ಲಿ ಬದುಕು ನರಕವಾದದ್ದು ನನ್ನದೇ. ಹಲ್ಲುಕಚ್ಚಿ ಎಲ್ಲವನ್ನೂ ಸಹಿಸಿದೆ. ಹೇಳಿಕೊಳ್ಳಲು ನನ್ನವರಾದರೂ ಯಾರಿದ್ದರು, ಒಂಟಿಯಾದೆ. ಆ ತಾರೆಯಾದರೋ ನಾವಿಬ್ಬರೂ ಒಂದೇ ಸ್ಥಳದಲ್ಲಿ ಹುಟ್ಟಿದ್ದರೂ, ನನಗಿಂತ ಚಲುವೆಯಾಗಿದ್ದಳು. ಬಹಳ ಬುದ್ಧಿವಂತಳಿದ್ದಳು, ರಾಜತಾಂತ್ರಿಕ ವಿಚಾರಗಳನ್ನು ತಿಳಿದವಳಾಗಿದ್ದಳು. ತಾರೆಗೆ ಒಂದು ವಿಶೇಷ ಶಕ್ತಿಯಿತ್ತು. ನಮಗೇನಾದರೂ ದೊಡ್ಡ ಆಪತ್ತು ಬಂದರೆ, ಆ ಸಮಯದಲ್ಲಿ ನಮಗೆ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಅವಳು ತನ್ನ ಸೂಕ್ಷ್ಮ ಬುದ್ದಿಯಿಂದ ಸಲಹೆ ಕೊಡುತ್ತಿದ್ದಳು. ವಾಲಿಗೂ ಸಹ ಹಲವು ಸಮಯದಲ್ಲಿ ಸಲಹೆ ಸೂಚನೆ ಕೊಟ್ಟಿದ್ದಳು...ಇಂಥಹ ತಾರೆ "ಬಹು" ಸಂಬಂಧವನ್ನು ಗಂಡಿನೊಡನೆಯ "ಅಹಂ"ನೊಡನೆ ಹೇಗೆ ಸಂಭಾಳಿಸಿದಳು ಎನ್ನುವದು ನನಗೆ ಇವತ್ತಿಗೂ ಸೋಜಿಗ ಮತ್ತು ಕುತೂಹಲದ ವಿಷಯ ಅಥವಾ ಪ್ರೀತಿ ಅವಳನ್ನು ಕುರುಡಾಗಿಸಿತ್ತೇನೋ? ಇಂತಹ ತಾರೆಯ ಮುಂದೆ ಸಾಧಾರಣಳಾದ, ಸಾಮಾನ್ಯ ಹೆಣ್ಣಾದ ನಾನು ಸುಗ್ರೀವನಿಗೆ ಹೇಗಾದರೂ ರುಚಿಸಬೇಕು!? ನಾನೂ ಬೇರೆ ದಾರಿಯಿಲ್ಲದೇ ಎಲ್ಲವನ್ನೂ ಒಪ್ಪದೆಯೂ ಅಪ್ಪದಂತೆ ಬದುಕ ತೊಡಗಿದೆ.
ಇದು ಇಷ್ಟಕ್ಕೇ ನಿಂತಿದ್ದರೆ ಸಾಕಿತ್ತು ಆದರೆ ವಿಧಿಗೆ ಇಷ್ಟರಲ್ಲೇ ಸಮಾಧಾನವಿರಲಿಲ್ಲ ಅನಿಸುತ್ತದೆ. ನನ್ನ ಬದುಕಿನ ದುರದೃಷ್ಟದ ಮಜಲು ತೆರೆದುಕೊಂಡದ್ದು ನಾವೆಲ್ಲಾ ಸತ್ತುಹೋದ ಎಂದುಕೊಂಡಿದ್ದ ವಾಲಿ ತಿರುಗಿ ಕಿಷ್ಕಿಂದೆಗೆ ಬಂದಾಗ. ಅಬ್ಬರಿಸುತ್ತಾ ಬಂದವನೇ ವಾಲಿ ಮೊದಲು ಮಾಡಿದ್ದು ತನ್ನ ಪತ್ನಿಯ ಜೊತೆ ಕುಳಿತಿದ್ದ ಸುಗ್ರೀವನನ್ನು ಬಡಿದದ್ದು. ಅವನನ್ನು ಮೋಸಗಾರನೆಂದು ಜರಿದು ಒದ್ದು ಹೊರಗೆ ಹಾಕಿದಾಗ ಮೊದಲು ಖುಷಿಪಟ್ಟವಳೇ ನಾನು. ಆದರೆ ನನ್ನ ಈ ಖುಷಿ ಬಹಳ ಹೊತ್ತು ನಿಲ್ಲಲಿಲ್ಲ. ವಾಲಿಯು ತನ್ನ ಪತ್ನಿಯನ್ನು ಸುಗ್ರೀವನು ಭೋಗಿಸಿದ ಎಂಬ ಸಿಟ್ಟಿಗೆ ಯಾವ ತಪ್ಪು ಮಾಡದ ನನ್ನ ಮೇಲೆ ಗುಬ್ಬಚ್ಚಿಯ ಮೇಲೆ ಎರಗುವ ಗಿಳಿಯಂತೆ ಎರಗಿ ಬಿಟ್ಟಿದ್ದ. ತನ್ನ ಬಾಹುಬಲ, ಮನಸಿನ ರೋಷ ಎಲ್ಲವನ್ನೂ ತೀರಿಸಿಕೊಳ್ಳುವವನಂತೆ ರೊಚ್ಚಿನಲ್ಲಿ ನನ್ನನ್ನು ಹೊಸಕತೊಡಗಿದ. ಪ್ರತಿ ದಿನವೂ ನನ್ನ ಮೇಲೆ ಸುಗ್ರೀವನ ಕೋಪವನ್ನು ಸುರಿದೂ ಸುರಿದೂ ಅರೆ ಜೀವ ವಿರುವ ಹೆಣವಾಗಿಸಿಬಿಟ್ಟ. ಇದನ್ನೂ ಒಪ್ಪಿದೆ. ಒಪ್ಪದೇ ಬೇರೆ ದಾರಿಯಾದರೂ ಏನಿತ್ತು ನನಗೆ?. ಮನಸ್ಸಿಗೆ ಒಂದು ಸಮಾಧಾನ ಮಾಡಿಕೊಳ್ಳುತ್ತಿದ್ದೆ "ರುಮಾ, ಅಳಬೇಡ, ಸಹಿಸು. ಇನ್ನೊಬ್ಬಳನ್ನು ನಿನ್ನ ಹಾಸಿಗೆಗೆ ಎಳೆತಂದು ನಿನ್ನನ್ನು ತುಚ್ಛವಾಗಿ ಕಂಡ ಸುಗ್ರೀವನು ಕೊಟ್ಟ ಮಾನಸಿಕ ಹಿಂಸೆಗಿಂತ ಈ ವಾಲಿಯು ಕೊಡುತ್ತಿರುವ ದೈಹಿಕ ಹಿಂಸೆ ದೊಡ್ಡದಲ್ಲ" ಎಂದುಕೊಂಡು ಕಾಲ ಹಾಕಿದೆ, ಇದರ ನಡುವೆ ಸುಗ್ರೀವ ಮತ್ತೆ ಕಿಷ್ಕಿಂದೆಯ ವಶಕ್ಕಾಗಿ ಪ್ರಯತ್ನಿಸುತ್ತಿದ್ದಾನಂತೆ, ನನ್ನ ಪತ್ನಿ ರುಮೆಯನ್ನು ಬಿಡಿಸಿಕೊಳ್ಳಲು ಸಹಾಯ ಮಾಡಿ ಎಂದು ರಾಮನ ಮೊರೆ ಹೊಕ್ಕಿದ್ದಾನಂತೆ ಎಂಬ ಸುದ್ದಿ ಬಂತು. ಮನಸಿನ ಮೂಲೆಯಲ್ಲೆಲ್ಲೋ ಸುಗ್ರೀವನಿಗೆ ಬುದ್ಧಿ ಬಂದಿರಬಹುದೆಂಬ ಆಸೆ ಮೊಳೆಯಿತು. ಕಾದೆ, ಕಾದೆ, ಕಾದೆ, ಆದರೆ ಅಷ್ಟು ಸುಖದ ನಸೀಬು ನನಗೆಲ್ಲಿತ್ತು, ರಾಮನ ಸಹಾಯದಿಂದ ವಾಲಿಯನ್ನು ಕೊಂದು ಮತ್ತೆ ರಾಜ್ಯವನ್ನು ಪಡೆದ ಸುಗ್ರೀವ ಸೀದಾ ಹೊಕ್ಕಿದ್ದು ತಾರೆಯ ಅಂತಃಪುರವನ್ನ!!
ಯುದ್ಧದಲ್ಲಿ ಗೆಲುವು ಧರ್ಮ್ಮದ್ದೋ ಅಧರ್ಮದ್ದೋ
ಸೋಲಂತೂ ಮನುಷ್ಯತ್ವದ್ದೇ. ರಾಮ ವಾಲಿಯನ್ನು ಕೊಂದಾಗ ನನ್ನನ್ನೂ ಕೊಂದು ಬಿಟ್ಟ.
ನನ್ನನ್ನು ದಾಳವಾಗಿಸಿ ರಾಮನ ಅನುಕಂಪವನ್ನು ಗಿಟ್ಟಿಸಿಕೊಳ್ಳುವ ನೀಚ ಪ್ರಯತ್ನವನ್ನು ಮಾಡಿದ ಸುಗ್ರೀವ ಗೆದ್ದಬಿಟ್ಟ. ತನ್ನ ಶಕ್ತಿಯ ಮೇಲೆ ಸೊಕ್ಕಿದ್ದ ವಾಲಿ ಒಬ್ಬ ಗಂಡಸಾಗಿ ತಾರೆಯಂತಹ ಹೆಣ್ಣಿನ ಮನಸ್ಸನ್ನು ಗೆಲ್ಲಲಾಗದೇ ಸೋತ. ಪ್ರೀತಿಯ ಮಹಾಪೂರವನ್ನೇ ಹೊತ್ತಿದ್ದ ನನ್ನ ಒಲವನ್ನು ಕಡೆಗಣಿಸಿದ ಸುಗ್ರೀವ ತನಗೆ ಬೇಕಾದ್ದನ್ನು ಪಡೆಯುವಲ್ಲಿ ಸಫಲನಾದ ನಿಜ. ಆದರೆ ವಾಲಿಯು ತಿರುಗಿ ಬಂದಾಗ ಅವನೊಂದಿಗೆ ಮತ್ತೆ ಮೊದಲಿನಂತೆಯೇ ಸಂಸಾರ ನಡೆಸಿ ಸುಗ್ರೀವನನ್ನು ಮರೆತೇ ಬಿಟ್ಟಿದ್ದ ತಾರೆಗೂ, ಎಲ್ಲಾ ಹಂತದಲ್ಲೂ ಸುಗ್ರೀವನನ್ನೇ ಪೂಜಿಸಿದ ನನಗೂ ವ್ಯತ್ಯಾಸವನ್ನು ತಿಳಿಯದ ಸುಗ್ರೀವ ನನಗೆ ಯಾವತ್ತಿಗೂ ನನಗಿಂತಲೂ ನತದೃಷ್ಟನೇ ಎನಿಸುತ್ತದೆ, ಹೆಣ್ಣನ್ನು ಭೋಗವಸ್ತು, ತಮ್ಮ ಬದುಕಿನ ಇಬ್ಬಂದಿ ನಡೆಗಳಿಗೆ ದಾಳವಾಗಿಸಿಕೊಳ್ಳಬಹುದು ಎಂದುಕೊಂಡ ಗಂಡು ಪ್ರಪಂಚದ ಕಡೆಗೆ ನನಗೆ ತಿರಸ್ಕಾರಕ್ಕಿಂತ ಹೆಚ್ಚು ಮರುಕವಿದೆ. ನಾನು ರುಮಾ,ಹೌದು ಯಾವ ಗುರುತೂ,ಗುರಿಯೂ ಇಲ್ಲದೇ ಬದುಕುತ್ತಿರಯವ ರುಮಾ. ಆದರೂ ನನ್ನನ್ನೂ ಗೆಲ್ಲುವವನು ಬೇಕಿತ್ತು... ನಾನೂ ಸೋಲಲು ಹಪಾಹಪಿಸುತ್ತಿದ್ದೆ. ಆದರೆ ಈ ಸೋಲಿದೆಯಲ್ಲ ಅದನ್ನ ಸೋಲು ಅಂತ ಕರೆದು ಅದಕ್ಕಾದರೂ ಯಾಕೆ ಅವಮಾನಿಸಲಿ?
ಅವಮಾನಕ್ಕೆ ಈಡಾದವರು ಮುಂದೆನಾದರೋ... ಅವಮಾನಕ್ಕೆ ಅವರು ಅರ್ಹರೇ ಆಗಿದ್ದರು. ಆದರೆ ನಾನು... ಈ ರುಮಾ...
bevarahani1