ಸಿದ್ಧಗಂಗಾ ಮಠಕ್ಕೆ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ

ಸಿದ್ಧಗಂಗಾ ಮಠಕ್ಕೆ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ
ಸಿದ್ಧಗಂಗಾ ಮಠಕ್ಕೆ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ
ಸಿದ್ಧಗಂಗಾ ಮಠಕ್ಕೆ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ

ಸಿದ್ಧಗಂಗಾ ಮಠಕ್ಕೆ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ


ತುಮಕೂರು: ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಮಹಾತ್ಮಗಾಂಧಿ ಸೇವೇ ಪ್ರಶಸ್ತಿಯನ್ನು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡಿರುವ ತುಮಕೂರಿನ ಶ್ರೀ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಮತ್ತು ಶ್ರೀ ಸಿದ್ಧಗಂಗಾ ಮಠಕ್ಕೆ ನೀಡಲಾಗಿದೆ.
೨೦೨೧ನೇ ಸಾಲಿನ ಪ್ರಶಸ್ತಿಯನ್ನು ಶ್ರೀಮಠಕ್ಕೆ ನೀಡಲಾಗಿದ್ದು, ೨೦೨೦ನೇ ಸಾಲಿನ ಪ್ರಶಸ್ತಿಯನ್ನು ಸ್ವಾತಂತ್ರö್ಯ ಹೋರಾಟಗಾರರದ, ಗಾಂಧೀ ತತ್ವಾದರ್ಶಗಳನ್ನು ಆಧರಿಸಿಕೊಂಡು ಬರುತ್ತಿರುವ ಗಾಂಧೀವಾದಿ, ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ‍್ಯ ಹೋರಾಟಗಾರರಾದ “ಶ್ರೀಮತಿ ಮೀರಾಬಾಯಿ ಕೊಪ್ಪಿಕರ್” ಅವರಿಗೆ ನೀಡಿ ಗೌರವಿಸಲಾಗುತ್ತಿದೆ.
ತುಮಕೂರು: “ನಡೆದಾಡುವ ದೇವರು” ಎಂದೇ ಖ್ಯಾತರಾದ ಪರಮಪೂಜ್ಯ ಡಾ: ಶಿವಕುಮಾರ ಸ್ವಾಮೀಜಿಯವರ ಮಹದಾಶಯದಂತೆ ಸತತವಾಗಿ ೮೦ ವರ್ಷಗಳ ಕಾಲ ಅನ್ನದಾಸೋಹ ಹಾಗೂ ಅಕ್ಷರ ದಾಸೋಹದ ತವರಾಗಿ ಜಾತಿ-ಧರ್ಮ ಬೇಧವಿಲ್ಲದೇ, ಪ್ರಾಂತ್ಯ-ಪ್ರದೇಶ ತಾರತಮ್ಯ ಮಾಡದೇ ಲಕ್ಷಾಂತರ ಮಕ್ಕಳಿಗೆ ಅನ್ನ, ಆಶ್ರಯ ಮತ್ತು ವಿದ್ಯೆಯನ್ನು ದಾನ ಮಾಡಿದ, ರಾಷ್ಟ್ರದಲ್ಲೇ ಪ್ರತಿಷ್ಠಿತ ಸಂಸ್ಥೆ ಎಂದು ಹೆಸರಾದ ಶ್ರೀ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ಧಗಂಗಾ ಮಠ, ಕ್ಯಾತಸಂದ್ರ, ತುಮಕೂರು, ಸಾಧನೆಗಳ ತವರೆನಿಸಿದೆ.
ಶರಣರ ನಾಡಾದ ಸಿದ್ಧಗಂಗೆ ಶಿವಾರಾಧನೆಗೆ ಪ್ರಸಿದ್ಧ. ಶ್ರೀಮಠವು ೬೦೦ ವರ್ಷಗಳ ಹಿಂದೆ ಶ್ರೀ ಗೋಸಲ ಸಿದ್ಧೇಶ್ವರರಿಂದ ಸ್ಥಾಪಿಸಲಾಯಿತು. ಶ್ರೀ ಗೋಸಲ ಸಿದ್ಧೇಶ್ವರರ ತಪಸ್ಸಿನ ಶಕ್ತಿಯಿಂದ ಬಂಡೆಯಲ್ಲಿ ಗಂಗೋದ್ಭವವಾದ ಕಾರಣ ಕ್ಷೇತ್ರವು ಸಿದ್ಧಗಂಗಾ ಎಂಬ ಹೆಸರಿನಿಂದ ಪ್ರಖ್ಯಾತವಾಯಿತು.
ಶ್ರೀ ಮಠವು ವೀರಶೈವ ಪರಂಪರೆಯ ವಿರಕ್ತಮಠವಾಗಿದ್ದು, ೧೯೧೭ರಲ್ಲಿ ಆರಂಭವಾದ ಶ್ರೀ ಸಿದ್ಧಲಿಂಗೇಶ್ವರ ಉಚಿತ ವಿದ್ಯಾರ್ಥಿ ನಿಲಯದಲ್ಲಿ ವಿವಿಧ ಸಮುದಾಯದ ಎಂಟು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸತಿ, ಊಟ ಸಹಿತ ಇಲ್ಲಿ ತ್ರಿವಿಧ ದಾಸೋಹ ಪಡೆಯುತ್ತಿದ್ದಾರೆ.
ಶ್ರೀ ಉದ್ಧಾನ ಸ್ವಾಮಿಗಳಿಂದ ೧೯೩೦ರ ಮಾರ್ಚ್ ೩೦ರಂದು ದೀಕ್ಷೆ ಪಡೆದ ಶ್ರೀಮಠದ ಹಿರಿಯ ಶ್ರೀಗಳಾ ಶ್ರೀ ಶಿವಕುಮಾರ ಸ್ವಾಮಿಗಳವರ ಸಾಧನೆ ಇಡೀ ದೇಶಕ್ಕೇ ಮಾದರಿಯಾಗಿದೆ. ತ್ರಿವಿಧ ದಾಸೋಹಿಗಳೆಂದೇ ಪ್ರಖ್ಯಾತರಾಗಿದ್ದ ಶ್ರೀಗಳಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಧರ್ಮ ಪ್ರಸಾರ ಉದ್ದೇಶದ ಜೊತೆಗೆ ಸಮಾಜಮುಖಿ ಕಾರ್ಯಗಳೇ ಮಠದ ಜೀವಾಳವಾಗಿದ್ದು, ಶೈಕ್ಷಣಿಕ ರಂಗದಲ್ಲಿ ಮಠದ ಕೊಡುಗೆ ಅಪಾರವಾಗಿದೆ. ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಶಿಕ್ಷಕ ತರಬೇತಿ ಸಂಸ್ಥೆ, ಸಂಸ್ಕೃತ ಕಾಲೇಜು, ಕನ್ನಡ ಪಂಡಿತ ತರಗತಿ ವಿಭಾಗ, ದೈಹಿಕ ತರಬೇತಿ ಕಾಲೇಜು, ಸಂಗೀತ ಪಾಠಶಾಲೆ, ಸಮನ್ವಯ ಶಿಕ್ಷಣ ಸಂಸ್ಥೆ ಮತ್ತಿತರ ವಿಭಾಗಗಳ ಶೈಕ್ಷಣಿಕ ಸಂಸ್ಥೆಗಳು ಶ್ರೀ ಮಠದಿಂದ ನಡೆಯುತ್ತಿವೆ. ನಾಡಿನ ಉದ್ದಗಲಕ್ಕೂ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಶ್ರೀ ಮಠದ ಶಿಕ್ಷಣ ಸಂಸ್ಥೆಗಳು ಗ್ರಾಮೀಣ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರದಾನವಾಗಿವೆ.
ಬೆಟ್ಟದ ಮೇಲೆ ಸಿದ್ಧಲಿಂಗೇಶ್ವರ ಹಾಗೂ ಗಂಗಾಮಾತೆ ಮಂದಿರಗಳಿವೆ. ಬೆಟ್ಟದ ಬುಡದಲ್ಲಿಯೇ ಹಳೆಯ ಮಠವಿದ್ದು, ಶ್ರೀ ಉದ್ಧಾನ ಸ್ವಾಮಿಗಳ ಗದ್ದುಗೆಯಿದ್ದು ಅದು ಜಾಗೃತ ಸ್ಥಾನವಾಗಿದೆ. ಅತಿಥಿಗೃಹ, ವಿದ್ಯಾರ್ಥಿ ನಿಲಯ, ಪ್ರಸಾದ ವಿತರಣಾ ಮಂದಿರ, ಮಹಾನವಮಿ ಮಂಟಪ, ಮರುಳಾರಾಧ್ಯರ ಗದ್ದುಗೆ, ಗೋಶಾಲೆ ಮೊದಲಾದುವು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.
ಶ್ರೀ ಶಿವಕುಮಾರ ಸ್ವಾಮಿಗಳ ನಂತರ ಶ್ರೀಮಠದ ಮಠಾಧೀಶರಾಗಿರುವ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಹಿರಿಯ ಶ್ರೀಗಳ ಪರಂಪರೆಯನ್ನು ಮುಂದುವರೆಸಿಕೊAಡು ಬಂದಿದ್ದು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದ್ದಾರೆ.
ತ್ರಿವಿಧ ದಾಸೋಯಕ್ಕೆ ಇಡೀ ವಿಶ್ವದಲ್ಲೇ ಪ್ರಖ್ಯಾತಿಯಾಗಿ ಶಿಕ್ಷಣದೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀ ಸಿದ್ಧಗಂಗಾ ಮಠಕ್ಕೆ ೨೦೨೧ನೇ ಸಾಲಿನ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ ನೀಡಿರುವುದರಿಂದ ಪ್ರಶಸ್ತಿಯ ಘನತೆಯನ್ನ ಹೆಚ್ಚಿಸಿದೆ ಎಂದು ಹೇಳಬಹುದು.