ಹೆಚ್ಚುತ್ತಿರುವ ಕೊರೋನಾ: ನಗರದಲ್ಲಿ ಸ್ಯಾನಿಟೈಸೇಶನ್

tumakuru-sanitization-covid

ಹೆಚ್ಚುತ್ತಿರುವ ಕೊರೋನಾ: ನಗರದಲ್ಲಿ ಸ್ಯಾನಿಟೈಸೇಶನ್


ಹೆಚ್ಚುತ್ತಿರುವ ಕೊರೋನಾ: ನಗರದಲ್ಲಿ ಸ್ಯಾನಿಟೈಸೇಶನ್

ತುಮಕೂರು: ಕೊರೊನಾ  ಪುನಃ ಹರಡುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ನಗರದಾದ್ಯಂತ ಎಲ್ಲ ಬಡಾವಣೆಗಳಲ್ಲಿ ರೋಗ ನಿರೋಧಕ ದ್ರಾವಣವನ್ನು ಸಿಂಪಡಿಸುವ ಕಾರ್ಯಕ್ಕೆ ತುಮಕೂರು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಮಂಗಳವಾರ ಮಧ್ಯಾಹ್ನ ಮೇಯರ್ ಬಿ.ಜಿ. ಕೃಷ್ಣಪ್ಪ ಚಾಲನೆ ನೀಡಿದರು. 


ಈ ಸಂದರ್ಭದಲ್ಲಿ ಆಯುಕ್ತೆ ರೇಣುಕಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್, ಪಟ್ಟಣ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಧರಣೇಂದ್ರ ಕುಮಾರ್, ಸದಸ್ಯರಾದ ಸಿ.ಎನ್. ರಮೇಶ್, ಬಿ.ಎಸ್. ಮಂಜುನಾಥ್ ಇದ್ದರು.


ಪಾಲಿಕೆಯ 2 ವಾಹನಗಳು


ಚಾಲನೆ ನೀಡಿದ ಬಳಿಕ “ಬೆವರಹನಿ” ಜೊತೆ ಮಾತನಾಡಿದ ಮೇಯರ್ ಬಿ.ಜಿ. ಕೃಷ್ಣಪ್ಪ, “ಪ್ರಸ್ತುತ ಪಾಲಿಕೆಯ ಎರಡು ವಾಹನಗಳಲ್ಲಿ ಈ ಸಿಂಪಡಣೆ ಕೆಲಸ ಆರಂಭಿಸಲಾಗಿದೆ. ನಗರದ ಬಸ್ ನಿಲ್ದಾಣ, ಮಾರುಕಟ್ಟೆ ಮೊದಲಾದ ಜನನಿಬಿಡ ಪ್ರದೇಶಗಳಲ್ಲಿ ಸಿಂಪಡಣೆ ಮಾಡಲಾಗುವುದು. ಬುಧವಾರದಿಂದ ನಗರದಲ್ಲಿ ವಾರ್ಡ್ವಾರು ಸಿಂಪಡಣಾ ಕಾರ್ಯ ಆರಂಭಿಸಲಾಗುತ್ತದೆ” ಎಂದರು. 


ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಮಾತನಾಡಿ, “ಪಾಲಿಕೆಯ ಈ ಸಿಂಪಡಣಾ ವಾಹನಕ್ಕೆ (ಟ್ರಾö್ಯಕ್ಟರ್ ಇಂಜಿನ್) 400 ಲೀಟರ್ ಸಾಮರ್ಥ್ಯದ ಟ್ಯಾಂಕ್ ಅಳವಡಿಸಲಾಗಿದೆ.  ಇಂತಹ ಎರಡು ವಾಹನಗಳು ಪಾಲಿಕೆಯಲ್ಲಿವೆ. ವಾಹನಕ್ಕೆ 10 ಲೀಟರ್ ಡೀಸೆಲ್ ಹಾಕಿದರೆ, ಸುಮಾರು 200 ಮೀಟರ್‌ಗಳಷ್ಟು ದೂರ ಈ ದ್ರಾವಣವನ್ನು ಸಿಂಪಡಿಸಬಹುದು” ಎಂದು ಮಾಹಿತಿ ನೀಡಿದರು.


ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡುತ್ತ, “ಪಾಲಿಕೆಯ ಈ ಎರಡು ವಾಹನಗಳ ಜೊತೆಗೆ ಇನ್ನೂ ಎರಡು ದೊಡ್ಡ ವಾಹನಗಳನ್ನು ಒದಗಿಸಿಕೊಡುವಂತೆ ನಾವು ಅಗ್ನಿಶಾಮಕದಳಕ್ಕೆ ಮನವಿ ಮಾಡಿದ್ದೇವೆ. ಮೇಯರ್ ಜೊತೆಯಲ್ಲಿ ನಾನು ಅಗ್ನಿಶಾಮಕದಳದ ಕಚೇರಿಗೆ ಹೋಗಿ ಈ ಬಗ್ಗೆ ಮನವಿ ಮಾಡಿದ್ದು, ಅವರು ನಮ್ಮ ಬೇಡಿಕೆಗೆ ಒಪ್ಪಿದ್ದಾರೆ. ಬುಧವಾರದಿಂದ ಅಗ್ನಿಶಾಮಕ ದಳದ ಎರಡು ವಾಹನಗಳು ನಮಗೆ ಲಭಿಸಲಿದ್ದು, ಅವುಗಳನ್ನೂ ನಗರದಾದ್ಯಂತ ಸ್ಯಾನಿಟೈಸ್ ಮಾಡಲು ಬಳಸಿಕೊಳ್ಳಲಾಗುವುದು” ಎಂದು “ಬೆವರಹನಿ”ಗೆ ತಿಳಿಸಿದರು.