``ಮಸಾಲಾ ಜಯರಾಮ್ ಅದೃಷ್ಟವಂತ ಶಾಸಕ’’ ಮಾಜಿ ಜಿ.ಪಂ. ಸದಸ್ಯ ಎನ್.ಆರ್.ಜಯರಾಮ್
``ಮಸಾಲಾ ಜಯರಾಮ್ ಅದೃಷ್ಟವಂತ ಶಾಸಕ’’
ಮಾಜಿ ಜಿ.ಪಂ. ಸದಸ್ಯ ಎನ್.ಆರ್.ಜಯರಾಮ್
ತುರುವೇಕೆರೆ: ``ತುರುವೇಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಮಸಾಲಾ ಜಯರಾಮ್ ಒಂದು ರೀತಿಯಲ್ಲಿ ಅದೃಷ್ಟದ ಶಾಸಕ. ಅವರ ಇದುವರೆಗಿನ ಅವಧಿ ಅವರಿಗೆ ಸುವರ್ಣಯುಗದಂತೆ’’. ಹೀಗೆ ಶಾಸಕ ಮಸಾಲಾ ಜಯರಾಮ್ ರವರನ್ನು ಬಣ್ಣಿಸಿದವರು ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಎನ್.ಆರ್. ಜಯರಾಮ್.
ತಾಲೂಕಿನ ಜಿ. ದೊಡ್ಡೇರಿಯಲ್ಲಿ ನಡೆದ ಗ್ರಾಮ ದೇವತೆ ಶ್ರೀ ಕೆಂಪಮ್ಮ ದೇವಿಯವರ ದ್ವಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಹೀಗೆ ಕೊಂಡಾಡಿದರು.
ಪ್ರತಿ ವರ್ಷ ಮಳೆ ಇಲ್ಲದೇ ಬರಗಾಲ ತಾಂಡವಾಡುತ್ತಿತ್ತು. ರೈತಾಪಿಗಳು ಮಳೆ ಇಲ್ಲದೇ, ವಿದ್ಯುತ್ತಿನ ಸಮಸ್ಯೆಯಿಂದ ಬಳಲಿ ಬೆಂಡಾಗಿದ್ದರು. ವಿದ್ಯುತ್ ಕಛೇರಿ ಮುಂದೆ ಪ್ರತಿಭಟನೆ ಮಾಡುವುದು ಸಾಮಾನ್ಯವಾಗಿತ್ತು. ಆದರೆ ಈಗ ಅವರ ಅದೃಷ್ಟವೋ ಏನೋ ಅವರು ಶಾಸಕರಾದ ದಿನದಂದಲೂ ಉತ್ತಮವಾಗಿ ಮಳೆ ಬೀಳುತ್ತಿದೆ. ಕ್ಷೇತ್ರದ ಬಹುತೇಕ ಕೆರೆ ಕಟ್ಟೆಗಳು ಭರ್ತಿಯಾಗಿವೆ.
ನಾವು ಕಾಂಗ್ರೆಸ್‌ನವರೇ ಆದರೂ ಸಹ ವೈಯಕ್ತಿಕವಾಗಿ ದೂರಲು ಮನಸ್ಸು ಬರುವುದಿಲ್ಲ ಎಂದು ಎನ್.ಆರ್. ಜಯರಾಮ್ ಹೇಳಿದರು.
ಮತ್ತೊಬ್ಬ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮರಳುಕುಪ್ಪೆ ಶ್ರೀನಿವಾಸ್ ಮಾತನಾಡಿ ಮಾಯಸಂದ್ರ ಹೋಬಳಿಯ ಕೆಲವು ಗ್ರಾಮಗಳಿಗೆ ಕೆರೆಗಳು ನೀರು ತುಂಬಿಸುವ ಕಾರ್ಯ ಇದೆ. ಹೇಮಾವತಿ ನಾಲಾ ನೀರು ಹರಿಯದಿರುವ ಕಡೆ ಏತ ನೀರಾವರಿ ವ್ಯವಸ್ಥೆ ಮಾಡಬೇಕು. ಕುಗ್ರಾಮಗಳಿಗೆ ಬಸ್ ಸೌಕರ್ಯ ಒದಗಿಸಬೇಕಿದೆ. ಹದಗೆಟ್ಟಿರುವ ರಸ್ತೆಗಳ ದುರಸ್ತಿಯಾಗಬೇಕು ಎಂದು ಅಹವಾಲುಗಳ ಪಟ್ಟಿಯನ್ನು ಶಾಸಕರ ಮುಂದೆ ಶ್ರೀನಿವಾಸ್ ಮುಂದಿಟ್ಟರು.
ವಿ.ಎಸ್.ಎಸ್.ಎನ್. ಅಧ್ಯಕ್ಷ ದೊಡ್ಡೇರಿ ರಾಜಣ್ಣ ಮಾತನಾಡಿ, ಹೇಮಾವತಿ ನೀರು ಹರಿಸುವಲ್ಲಿ ದಿವಂಗತ ವೈ.ಕೆ. ರಾಮಯ್ಯನವರು ಮೊದಲಾಗಿದ್ದರು. ಅವರ ನಂತರ ಬರಡು ಭೂಮಿಗಳಿಗೆ ನೀರು ಹರಿಸಿದ ಕೀರ್ತಿ ಹಾಲಿ ಶಾಸಕರಾಗಿರುವ ಮಸಾಲಾ ಜಯರಾಮ್‌ರವರಿಗೆ ಸಲ್ಲುತ್ತದೆ. ಅವರನ್ನು ಹೇಮಾವತಿಯ ಹರಿಕಾರ ಎಂದರೂ ತಪ್ಪಿಲ್ಲ ಎಂದು ಶಾಸಕ ಮಸಾಲಾ ಜಯರಾಮ್‌ರವರ ಗುಣಗಾನ ಮಾಡಿದರು.
ಮುಖಂಡರ ಅಭಿಮಾನದ ನುಡಿಗಳಿಗೆ ಉತ್ತರಿಸಿ ಮಾತನಾಡಿದ ಶಾಸಕ ಮಸಾಲಾ ಜಯರಾಮ್, ಕ್ಷೇತ್ರದ ಜನತೆ ಬಹಳ ಅಭಿಮಾನ ಮತ್ತು ನಂಬಿಕೆಯಿಟ್ಟು ಶಾಸಕರನ್ನಾಗಿ ಆಯ್ಕೆ ಮಾಡಿರುವುದೇ ಜನರ ಸೇವೆ ಮಾಡಲೆಂದು. ನಾನು ಕೇವಲ ಒಂದು ಪಕ್ಷದ ಪರವಾದ ಶಾಸಕನಲ್ಲ. ಕ್ಷೇತ್ರದ ಸರ್ವ ಜನರ ಪರವಾಗಿ ಇರುವ ಜನಪ್ರತಿನಿಧಿ ಎಂದರು. ಶೆಟ್ಟಿಗೊಂಡನಹಳ್ಳಿಗೆ ವಿದ್ಯುತ್ ಸರಬರಾಜು ಕೇಂದ್ರ ಸ್ಥಾಪನೆಗೆ ಅನುಮೋದನೆ ದೊರಕಿದೆ. ಬರಗಾಲದಿಂದ ತತ್ತರಿಸಿ ಹೋಗಿದ್ದ ಹಲವಾರು ಗ್ರಾಮಗಳಿಗೆ ನೀರು ಸಮೃದ್ಧಿಯಾಗಿದೆ ಎಂದರು.
ಶ್ರೀ ಕೆಂಪಮ್ಮ ದೇವಿ ದೇವಾಲಯದ ಜೀರ್ಣೋದ್ಧಾರಕ್ಕೆ ಮೂಲ ಕಾರಣಕರ್ತರಾದ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಸುಮಿತ್ರಮ್ಮ ಮತ್ತು ಅವರ ಪತಿ ಚಿಕ್ಕಣ್ಣನವರನ್ನು ಗ್ರಾಮಸ್ಥರ ಪರವಾಗಿ ಅಭಿನಂದಿಸಲಾಯಿತು.
ಸಮಾರAಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆಂಪಣ್ಣ, ಎಪಿಎಂಸಿ ಸದಸ್ಯ ತಿಮ್ಮರಾಜು, ಪಿಡಿಓ ಅಣ್ಣೇಗೌಡ, ಗಂಗಣ್ಣಿ, ಶ್ರೀನಿವಾಸ್, ಸಣ್ಣಪ್ಪ, ಪದ್ಮಾವತಿ, ಲಕ್ಕಣ್ಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ದಿವ್ಯ ಕಾರ್ಯಕ್ರಮ ನಿರೂಪಿಸಿದರು.