ಹೋಬಳಿಗೊಂದು ಕನ್ನಡ ಭವನ, ಗ್ರಾಮಕ್ಕೊಂದು ಗ್ರಂಥಾಲಯ ಜಿಲ್ಲಾ ಕಸಾಪ ಅಧ್ಯಕ್ಷ ಅಭ್ಯರ್ಥಿ ಕೆ.ಎಸ್.ಸಿದ್ದಲಿಂಗಪ್ಪ ಆಶಯ

ಹೋಬಳಿಗೊಂದು ಕನ್ನಡ ಭವನ, ಗ್ರಾಮಕ್ಕೊಂದು ಗ್ರಂಥಾಲಯ   ಜಿಲ್ಲಾ ಕಸಾಪ ಅಧ್ಯಕ್ಷ ಅಭ್ಯರ್ಥಿ ಕೆ.ಎಸ್.ಸಿದ್ದಲಿಂಗಪ್ಪ ಆಶಯ


ಹೋಬಳಿಗೊಂದು ಕನ್ನಡ ಭವನ, ಗ್ರಾಮಕ್ಕೊಂದು ಗ್ರಂಥಾಲಯ


ಜಿಲ್ಲಾ ಕಸಾಪ ಅಧ್ಯಕ್ಷ ಅಭ್ಯರ್ಥಿ ಕೆ.ಎಸ್.ಸಿದ್ದಲಿಂಗಪ್ಪ ಆಶಯ


ತಿಪಟೂರು: ಗ್ರಾಮೀಣ ಭಾಗದಿಂದ ವಿವಿಧೆಡೆಗಳಲ್ಲಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿದ್ದು, ಇದೀಗ ಕನ್ನಡಿಗರ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವ ಸಲುವಾಗಿ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಪ್ರತಿಯೊಬ್ಬರು ತಮಗೆ ಮತ ನೀಡಿ ಬೆಂಬಲಿಸಬೇಕೆಂದು ಅಭ್ಯರ್ಥಿ ಕೆ.ಎಸ್. ಸಿದ್ದಲಿಂಗಪ್ಪ ಮನವಿ ಮಾಡಿದರು.
ನಗರದ ಜಯದೇವ ವಿದ್ಯಾರ್ಥಿ ನಿಲಯದಲ್ಲಿ ಮಂಗಳವಾರ ತಾಲ್ಲೂಕು ಸಾಹಿತ್ಯ ಅಭಿಮಾನಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. 
ಕಳೆದ ಹಲವಾರು ವರ್ಷಗಳಿಂದಲೂ ಸರ್ಕಾರದ ಅನುದಾನಗಳ ಮೂಲಕವೇ ಪರಿಷತ್ತಿನ ಅಭಿವೃದ್ಧಿಗೆ ಚಿಂತನೆ ನಡೆಸುತ್ತಾ ಬಂದಿದ್ದು, ಚುನಾವಣೆಯ ನಂತರ ಜಯಗಳಿಸಿದ ಮೇಲೆ ಪ್ರತಿಯೊಂದು ಹೋಬಳಿವಾರು ಸರ್ಕಾರೇತರ ಅಂದರೆ ಕನ್ನಡ ಅಭಿಮಾನಿಗಳ ಸಹಕಾರದೊಂದಿಗೆ ಸರಳ ಕಾರ್ಯಕ್ರಮದ ಮೂಲಕವೇ ಜನರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಹಿತಿ ತಲುಪಿಸಲಾಗುವುದು. ಎಲ್ಲರನ್ನೂ ಜೊತೆ ಸೇರಿಸಿಕೊಂಡು ಕನ್ನಡ ಉಳಿವಿಗೆ ನೆಲೆ ಮಾಡಿಕೊಡುವ ಕಾರ್ಯವನ್ನು ಮಾಡಲಾಗುವುದು ಎಂದರು.
ಗ್ರಾಮೀಣ ಭಾಗದಲ್ಲಿರುವಂತಹ ಕನ್ನಡ ಪ್ರತಿಭೆಗಳನ್ನು ಹೊರ ಜಗತ್ತಿಗೆ ಪರಿಚಯಿಸಲು ಹಾಗೂ ಜನರ ಜ್ಞಾನ ಭಂಡಾರವನ್ನು ವೃದ್ಧಿಸಲು ಅನೇಕ ಕಾರ್ಯಯೋಜನೆಗಳನ್ನು ರೂಪಿಸಲಾಗುವುದು. ಹೋಬಳಿ, ಗ್ರಾಮಗಳ ಮಟ್ಟದಲ್ಲಿನ ಗ್ರಂಥಾಲಯಗಳಿಗೆ ಜೀವ ನೀಡುವ ಜೊತೆಗೆ ಸ್ಥಳೀಯರ ಸಹಕಾರದಿಂದ ಹೋಬಳಿವಾರು ಕನ್ನಡ ಸಾಹಿತ್ಯ ಪರಿಷತ್ತಿನ ಭವನಗಳನ್ನು ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ಜಾಗೃತಿ ಕಾರ್ಯಕ್ರಮ, ವಿಶೇಷ ಕಾರ್ಯಗಾರಗಳ ಮೂಲಕ ಸಾಹಿತಿಗಳ ಜ್ಞಾನ ಹಂಚಿಕೆಗೆ ಒತ್ತು ನೀಡಲಾಗುವುದು. ಅಲ್ಲದೇ ಆಯಾ ಕ್ಷೇತ್ರಗಳಲ್ಲಿ ಆಗಬೇಕಾದಂತಹ ಪರಿಷತ್ತಿನ ಅಗತ್ಯ ಕಾರ್ಯಗಳನ್ನು ಪೂರೈಸಲು ಕ್ರಮ ತೆಗೆದುಕೊಳ್ಳಲು ಸಿದ್ಧರಾಗಿದ್ದೇನೆ. ಅದ್ದರಿಂದ ನ. 21ರಂದು ನಡೆಯುವ ಚುನಾವಣೆಯಲ್ಲಿ ಸದಸ್ಯರು ಹೆಚ್ಚಿನ ಮತ ನೀಡುವ ಮೂಲಕ ಕನ್ನಡದ ಸೇವೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
ಹೊನ್ನವಳ್ಳಿ ಕೆ.ಪಿ.ಎಸ್. ಶಾಲೆ ಪ್ರಾಂಶುಪಾಲ ಶಿವಕುಮಾರ್ ಮಾತನಾಡಿ, ಕಳೆದ ಹಲವಾರು ದಶಕಗಳಿಂದಲೂ ಕನ್ನಡಿಗರ, ಕನ್ನಡದ ಸೇವೆಯನ್ನು ಸಲ್ಲಿಸುತ್ತಿರುವವರಿಗೆ ಮತ ನೀಡಿದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಪರಿಷತ್ತಿನ ಮೂಲಕ ಮಾಡಲು ಕ್ರಮ ತೆಗೆದುಕೊಳ್ಳುವ ಭರವಸೆಯಿದೆ. ಕನ್ನಡದ ಪ್ರಾಧ್ಯಾಪಕರು ಆಗಿರುವುದರಿಂದ ಕನ್ನಡದ ಉಳಿವಿಗೆ, ಬೆಳವಣಿಗೆಗೆ ಕಾರಣೀಭೂತರಾಗುವ ವಿಶ್ವಾಸವಿದೆ ಎಂದರು.
ಹುಳಿಯಾರಿನ ನಿವೃತ್ತ ಪ್ರಾಂಶುಪಾಲ ನಟರಾಜು, ಎಂ.ಎಚ್. ನಾಗರಾಜು, ಜಾನಪದ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಸಣ್ಣಹೊನ್ನಯ್ಯ, ನಿವೃತ್ತ ಪ್ರಾಂಶುಪಾಲ ಶಂಕರಪ್ಪ, ಪ್ರಾಧ್ಯಾಪಕ ಮಂಜಪ್ಪ, ನೀಲಕಂಠಯ್ಯ, ಮಹಲಿಂಗಪ್ಪ, ಬಸವರಾಜು, ಶಿಕ್ಷಕ ದಯಾನಂದ್ ಇದ್ದರು.