ಕಿಂಗ್‌ಲಿಯರ್‌ನಂತೆ “ಓಹ್ ನಾನೇನು ಮಾಡಿಬಿಟ್ಟೆ” ಎಂದು ಹೇಳುವುದಿದೆಯಲ್ಲ ಅದು..., - ಒಂದು ಗಳಿಗೆ- ಕುಚ್ಚಂಗಿ ಪ್ರಸನ್ನ
Ondu Galige
ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ
ಕಿಂಗ್‌ಲಿಯರ್‌ನಂತೆ
“ಓಹ್ ನಾನೇನು ಮಾಡಿಬಿಟ್ಟೆ”
ಎಂದು ಹೇಳುವುದಿದೆಯಲ್ಲ ಅದು...,
ಯುದ್ಧ ಮತ್ತು ಯುದ್ದದ ಹಿನ್ನೆಲೆಯಲ್ಲಿ ಎಲ್ಲ ದೇಶಗಳಲ್ಲೂ ಎಲ್ಲ ಭಾಷೆಗಳಲ್ಲೂ ಅಸಂಖ್ಯ ಸಿನಿಮಾಗಳು ತಯಾರಾಗಿವೆ. ಯುದ್ದದ ಪರ ಮತ್ತು ವಿರೋಧ ಎನ್ನುವ ನಿಲುವನ್ನು ಹೊಂದಿರುವ ಸಿನಿಮಾಗಳ ಜೊತೆ ಜೊತೆಯಲ್ಲೇ ಪ್ರತ್ಯಕ್ಷ ಯುದ್ಧವನ್ನು ಕಾಣಿಸದೇ, ಯುದ್ದದ ಅಡ್ಡ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ಹೇಳಿರುವ ಸಿನಿಮಾ “ ದ ಬ್ರಿಡ್ಜ್ ಆನ್ ದ ರಿವರ್ ಖ್ವಾಯ್”, ತನ್ನ ಬಹುಪಾಲು ಎಲ್ಲ ಸಿನಿಮಾಗಳಿಗೂ ಆಸ್ಕರ್ ಪ್ರಶಸ್ತಿಗಳನ್ನು ಪಡೆದ ಹೆಸರಾಂತ ನಿರ್ದೇಶಕ ಡೇವಿಡ್ ಲೀನ್ ಈ ಸಿನಿಮಾದ ನಿರ್ದೇಶಕ.
೧೯೫೭ರಲ್ಲಿ ಬಿಡುಗಡೆಯಾದ ಇಂಗ್ಲಿಷ್ ಭಾಷೆಯ ಹಾಲಿವುಡ್ ತಯಾರಿಕೆಯ “ ದ ಬ್ರಿಡ್ಜ್ ಆನ್ ದ ರಿವರ್ ಖ್ವಾಯ್” ಚಲನಚಿತ್ರರಂಗದ ಗಂಭೀರ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಯೋಗ್ಯವಾದ ಸಿನಿಮಾ.
ಅದು ಎರಡನೇ ಮಹಾ ಯುದ್ದದ ಕಾಲ, ೧೯೪೩ರ ಆರಂಭದ ದಿನಗಳು, ಬರ್ಮಾದಲ್ಲಿದ್ದ ಜಪಾನ್ ಯುದ್ದ ಖೈದಿಗಳ ಶಿಬಿರಕ್ಕೆ ಬ್ರಿಟಿಷ್ ಸೈನಿಕ ಸೆರೆಯಾಳುಗಳನ್ನು ಕರೆತರುವ ಮೂಲಕ ಸಿನಿಮಾ ಆರಂಭಗೊಳ್ಳುತ್ತದೆ. ಅಲ್ಲಿ ಖ್ವಾಯ್ ನದಿಗೆ ಅಡ್ಡಲಾಗಿ ಯುದ್ದ ಖೈದಿಗಳನ್ನು ಬಳಸಿಕೊಂಡು ರೈಲ್ವೇ ಸೇತುವೆಯೊಂದನ್ನು ನಿರ್ಮಿಸುವ ಕಾರ್ಯ ಸಾಗಿರುತ್ತದೆ.
ಜಪಾನ್ ಸೇನೆಗೆ ಸೆರೆ ಸಿಕ್ಕಿರುವ ಬ್ರಿಟಿಷ್ ಯೋಧರ ತಂಡದ ನಾಯಕ ಕರ್ನಲ್ ನಿಕೊಲ್ಸನ್ (ಅಲೆಕ್ ಗಿನ್ನೆಸ್), ಮೇಲಿನವರ ಆದೇಶಗಳನ್ನು ಹಿಂದೆ ಮುಂದೆ ನೋಡದೇ, ಪರಿಣಾಮಗಳನ್ನು ಗಣಿಸದೇ,ಪ್ರಾಣ ಹೋದರೂ ಚಿಂತೆ ಇಲ್ಲ ಎಂದು ಸುಮ್ಮನೆ ಪಾಲಿಸುವುದೇ ಸೈನಿಕ ಶಿಸ್ತು ಎಂದು ನಂಬಿರುವ ಆ ಬ್ರಿಟಿಷ್ ಕರ್ನಲ್, ಅವರ ಕಂಪನಿ(ತAಡ)ಗೆ ಅವರ ಹೆಡ್ ಕ್ವಾಟರ‍್ಸ್ನಿಂದ ಶರಣಾಗಿ ಎಂದು ಆದೇಶದಿಂದಾಗಿ ತಾವೆಲ್ಲ ಶರಣಾಗಿರುವುದರಿಂದ ಅಲ್ಲಿಂದ ಪರಾರಿಯಾಗುವ ಪ್ರಯತ್ನವನ್ನು ಮಾಡಬಾರದು ಎಂದು ಇತರ ಎಲ್ಲರಿಗೂ ಸೂಚನೆ ನೀಡುವಷ್ಟು ವಿನೀತ. ಆದರೆ, ಅದೇ ಸೇನಾ ಶಿಸ್ತನ್ನು ಎಲ್ಲ ಹಂತದಲ್ಲೂ ಪಾಲಿಸಬೇಕೆಂದು ಪ್ರಾಣವನ್ನು ಪಣವಾಗಿರಿಸಿ ವಿರೋಧಿಸುವಾತನೂ ಹೌದು.
ಹೆಚ್ಚೂ ಕಮ್ಮಿ ನಮ್ಮ ಮಲೆನಾಡಿನಂತಿದ್ದ ಪರಿಸರವದು, ದಟ್ಟ ಕಾಡು, ನಡುವೆ ಬಂಡೆಗಳ ನಡುವೆ ಧುಮ್ಮಿಕ್ಕ ಹರಿವ ನದಿ, ಅಲ್ಲಿ ಆ ಶಿಬಿರದಲ್ಲಿದ್ದ ಜಪಾನ್ ಕಮಾಂಡರ್ ಕರ್ನಲ್ ಸೈಟೋ (ಸೆಸ್ಯೂ ಹವಾಕಾರ) ಎಲ್ಲ ಯುದ್ದ ಖೈದಿಗಳೂ ರೈಲ್ವೇ ಸೇತುವೆ ನಿರ್ಮಿಸುವ ಕೆಲಸದಲ್ಲಿ ತೊಡಗಬೇಕೆಂದು ಆದೇಶಿಸುತ್ತಾನೆ. ಸಹಜವಾಗೇ ಬ್ರಿಟಿಷ್ ಸೇನಾ ನಾಯಕ ಕರ್ನಲ್ ನಿಕೊಲ್ಸನ್ ಸೈಟೋ ಆದೇಶವನ್ನು ಪಾಲಿಸಲು ಒಪ್ಪುವುದಿಲ್ಲ. ಜಿನಿವಾ ಶಾಂತಿ ಒಪ್ಪಂದದ ಪ್ರಕಾರ ಸೇನೆಯ ಅಧಿಕಾರಿಗಳು ದೈಹಿಕ ಕೆಲಸಗಳನ್ನು ಮಾಡುವಂತಿಲ್ಲ ಎಂದು ಒಪ್ಪಂದದ ಪ್ರತಿಯನ್ನು ತೋರಿಸಿ ಕಡು ವಿರೋಧ ತೋರುತ್ತಾನೆ.
ಬ್ರಿಟಿಷ್ ಕರ್ನಲ್‌ನ ಪ್ರತಿರೋಧ ಕಂಡು ಕ್ರುದ್ಧನಾಗುವ ಕರ್ನಲ್ ಸೈಟೋ, ನಿಕೊಲ್ಸನ್‌ಗೆ ಸರಿಯಾಗಿ ಇಕ್ಕಿಸಿ, ಬಿರು ಬಿಸಿಲಲ್ಲಿ ಕಾದು ಕರಗಿಹೋಗುವಂತಿದ್ದ ತಗಡಿನ ನಾಯಿಗಳನ್ನು ಕೂಡಬಹುದಾದ ಪುಟ್ಟ ಷೆಡ್‌ನೊಳಕ್ಕೆ ಸೆರೆ ಹಾಕಿಸುತ್ತಾನೆ.
ಅಲ್ಲಿ ಆ ಯುದ್ದದ ಖೈದಿಗಳ ಶಿಬಿರದಲ್ಲಿ ರೋಗಿಗಳನ್ನು ಹಾಗೂ ವಿಕಲಾಂಗರನ್ನು ನೋಡಿಕೊಂಡು ಆರೈಕೆ ಮಾಡುತ್ತಿದ್ದ ಆಸ್ಟೆçÃಲಿಯಾ ಮೂಲದ ಸೇನಾ ವೈದ್ಯ ಮೇಜರ್ ಕ್ಲಿಪ್ಟನ್ (ಜೇಮ್ಸ್ ಡೊನಾಲ್ಡ್) ಕರ್ನಲ್ ನಿಕೊಲ್ಸನ್ ಸಾಯದಂತೆ ಆಗಾಗ ಆಹಾರ ನೀಡಿ, ನೋಡಿಕೊಳ್ಳುತ್ತಾನೆ.
ಕೆಲವು ದಿನ ಕಳೆದು, ಕಡೆಗೆ ಜಪಾನ್ ಕಮಾಂಡರ್ ಕರ್ನಲ್ ಸೈಟೋನೇ ಸೋತಂತಾಗಿ, ಸೆರೆಯಲ್ಲಿರಿಸಿದ್ದ ಕರ್ನಲ್ ನಿಕೊಲ್ಸನ್ ಹಾಗೂ ಆತನ ತಂಡದ ಸೇನಾಧಿಕಾರಿಗಳನ್ನು ತಗಡಿನ ಷೆಡ್‌ಗಳಿಂದ ಮುಕ್ತಗೊಳಿಸುತ್ತಾನೆ. ಅವರೂ ಕೂಡಾ ಉದ್ದೇಶಿತ ಸೇತುವೆಯನ್ನು ಅಚ್ಚುಕಟ್ಟಾಗಿ ಕಟ್ಟಿ ಮುಗಿಸುವ ಇರಾದೆ ತೋರಿ ಅದರಂತೆ ಉಸ್ತುವಾರಿ ಮಾಡತೊಡಗುತ್ತಾರೆ. ನಿಗದಿತ ಮೂರು ತಿಂಗಳಲ್ಲೇ ಸೇತುವೆ ಪೂರ್ಣಗೊಂಡೂ ಬಿಡುತ್ತದೆ.
ಅಷ್ಟೊತ್ತಿಗೆ ಇನ್ನೊಂದು ಕಡೆ ಕತೆ ಮತ್ತೊಂದು ತಿರುವು ಪಡೆದುಕೊಳ್ಳತೊಡಗಿರುತ್ತದೆ. ಇದೇ ಶಿಬಿರದಿಂದ ಸಿನಿಮಾ ಆರಂಭದಲ್ಲೇ ಮರ‍್ನಾಲ್ಕು ಅಮೆರಿಕನ್ ಯುದ್ದ ಖೈದಿಗಳು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿ, ಅವರಲ್ಲಿ ಮೂವರು ಜಪಾನ್ ಸೈನಿಕರ ಗುಂಡಿಗೆ ಬಲಿಯಾಗಿ ಒಬ್ಬ ಮಾತ್ರ ಜೀವ ಉಳಿಸಿಕೊಂಡು ತಪ್ಪಿಸಿಕೊಂಡು ಬಿಟ್ಟಿರುತ್ತಾನೆ. ಆತನ ಹೆಸರು ಶಿರ‍್ಸ್ (ವಿಲಿಯಮ್ ಹೋಲ್ಡೆನ್), ಗಾಯಗೊಂಡು, ಸುಸ್ತಾಗಿ ಪ್ರಾಣಹೋಗುವ ಸ್ಥಿತಿಯಲ್ಲಿದ್ದ ಆತನನ್ನು ಬರ್ಮಾನ ಹಳ್ಳಿಯೊಂದರ ಜನರು ಆರೈಕೆ ಮಾಡಿ, ಅಲ್ಲಿಂದ ಪಾರಾಗಲು ನೆರವಾಗುತ್ತಾರೆ. ಈ ಶಿರ‍್ಸ್ ಅದು ಹೇಗೋ ದೋಣಿಯೊಂದರಲ್ಲಿ ಸಾಗುತ್ತಾ ಶ್ರೀಲಂಕಾದಲ್ಲಿದ್ದ ಅಮೆರಿಕಾ ಸೇನಾ ತರಬೇತಿ ಶಿಬಿರದಲ್ಲಿ ಆಶ್ರಯ ಪಡೆದುಕೊಂಡುಬಿಟ್ಟಿರುತ್ತಾನೆ. ಆದರೆ ಸಾಮಾನ್ಯ ಸೈನಿಕನಾದ ಆತ ಸೇನಾಧಿಕಾರಿ ಎಂದು ಸುಳ್ಳು ಹೇಳಿಕೊಂಡು ಆಶ್ರಯಪಡೆದು, ಅಲ್ಲಿ ಆಸ್ಪತ್ರೆಯಲ್ಲಿದ್ದ ದಾದಿಯೊಬ್ಬಳ ಪ್ರೇಮಪಾಶದಲ್ಲೂ ಸಿಕ್ಕಿ ಆನಂದದಲ್ಲಿರುತ್ತಾನೆ. ಇಂಥಾ ಶಿರ‍್ಸ್ನನ್ನ ಸೇನಾ ಕಮಾಂಡೋ ನೆಲೆಗೆ ಕರೆಸಿ, ಬರ್ಮಾದಲ್ಲಿ ಜಪಾನ್ ಸೇನಾ ಖೈದಿನಲ್ಲಿರುವ ಬ್ರಿಟಿಷ್ ಯೋಧರು ನಿರ್ಮಿಸುತ್ತಿರುವ ರೈಲ್ವೇ ಸೇತುವೆಯನ್ನು ಸ್ಫೋಟಿಸಿ ಬರುವ ಹೊಣೆಯನ್ನು ಹೊರಿಸಲಾಗುತ್ತದೆ. ನಾಲ್ವರ ತಂಡಕ್ಕೆ ಮೇಜರ್ ವಾರ್ಡನ್(ಜಾಕ್ ಹಾಕಿನ್ಸ್) ನಾಯಕ. ತೀರಾ ಬೋಳೆ ಸ್ವಭಾವದ ವಾರ್ಡನ್ ಜೊತೆ ಶಿರ‍್ಸ್ ಬರ್ಮಾಕ್ಕೆ ವಿಮಾನದಲ್ಲಿ ಪ್ಯಾರಾ ಚೂಟ್ ಕಟ್ಟಿಕೊಂಡು ಜಿಗಿಯುತ್ತಾನೆ. ಹೀಗೆ ಜಿಗಿಯುವಾಗಲೇ ದೊಡ್ಡದೊಂದು ತಾಟಿ ನಿಂಗಿನ ಮರಕ್ಕೆ ಸಿಕ್ಕಿಕೊಂಡು ಒಬ್ಬ ಸತ್ತೇ ಹೋಗುತ್ತಾನೆ. ಉಳಿದ ಮೂವರು ಈ ಮೊದಲು ಶಿರ‍್ಸ್ನನ್ನು ಕಾಪಾಡಿದ್ದ ಸ್ಥಳೀಯ ಗ್ರಾಮಸ್ಥರ ನೆರವಿನೊಂದಿಗೆ ದಟ್ಟ ಕಾಡಿನೊಳಗೆ ನುಗ್ಗಿ ಬರುವಾಗ ವಾರ್ಡನ್ ಮುಂದೆ ಹೆಜ್ಜೆ ಇಡಲಾಗದಷ್ಟು ಗಾಯಗೊಂಡು ಕುಸಿಯುತ್ತಾನೆ. ಆ ನೆರವಿಯಲ್ಲಿದ್ದ ಸದಾ ಹಸನ್ಮುಖಿಯರಾದ ನಾಲ್ವರು ತರುಣಿಯರು ವಾರ್ಡನ್‌ನನ್ನು ಸ್ಟೆçಚರ್‌ನಲ್ಲಿ ಒಯ್ಯುತ್ತಾರೆ. ಸೇತುವೆಯನ್ನು ಪ್ಲಾಸ್ಟಿಕ್ ಸಿಡಿಮದ್ದು ಬಳಸಿ ಸ್ಫೋಟಿಸುವ ಯೋಜನೆ ಅಂತಿಮ ಹಂತಕ್ಕೆ ಬಂದು, ಸಿದ್ಧತೆಯಲ್ಲಿ ತೊಡಗುತ್ತಾರೆ.
ಅದೇ ಇರುಳಲ್ಲಿ, ಇತ್ತ ಸೇನಾ ಖೈದಿಗಳ ಶಿಬಿರದಲ್ಲಿ ಸೇತುವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಾಗೂ ಮರುದಿನ ಅಲ್ಲಿಂದ ಬೇರೊಂದು ಯುದ್ಧ ಖೈದಿಗಳ ಶಿಬಿರಕ್ಕೆ ಸ್ಥಳಾಂತರಗೊಳ್ಳುವ ಖುಷಿಯಲ್ಲಿ ಎಲ್ಲರೂ ಸಂಭ್ರಮದಿAದ ಹಾಡು, ನೃತ್ಯಗಳಲ್ಲಿ ಮಗ್ನರಾಗಿರುತ್ತಾರೆ.
ಇತ್ತ ಜಪಾನ್ ಕಮಾಂಡರ್ ಕರ್ನಲ್ ಸೈಟೋ, ಮರು ದಿನ ಬೆಳಿಗ್ಗೆ ಆ ಹೊಸ ಸೇತುವೆಯಲ್ಲಿ ರೈಲು ಸಂಚರಿಸುವ ಹೊತ್ತಿನಲ್ಲಿ ಅದು ಏನಾದರೂ ಸಮರ್ಪಕವಾಗಿಲ್ಲದೇ ಕುಸಿದು ಅನಾಹುತವಾದಲ್ಲಿ ಅದರ ಹೊಣೆಯನ್ನು ಹೊರಲೇ ಬೇಕಾಗಿರುವ ತಾನು,ಬದುಕಿದ್ದೂ ಏನು ಪ್ರಯೋಜನ ಎಂದು ಭಾವಿಸಿ, ಜಪಾನೀ ಆತ್ಮಹತ್ಯಾ ಪದ್ದತಿ ‘ಹರಾಕರಿ’ ಮೂಲಕ ತನ್ನ ಪ್ರಾಣ ಕಳೆದುಕೊಳ್ಳುವ ಸಿದ್ದತೆ ಮಾಡಿಕೊಳ್ಳುತ್ತಾನೆ. ಅದಕ್ಕಾಗಿ ಪತ್ರವೊಂದನ್ನು ಬರೆದು, ತನ್ನ ತಲೆ ಕೂದಲನ್ನು ತುಸು ಕತ್ತರಿಸಿ, ಆ ಪತ್ರಕ್ಕೆ ಲಗತ್ತಿಸಿ ಸೀಲ್ ಮಾಡಿ, ಹರಾಕರಿಗೆ ಅಗತ್ಯವಿರುವ ಕಠಾರಿಯನ್ನು ಸಜ್ಜು ಮಾಡಿಟ್ಟುಕೊಳ್ಳುತ್ತಾನೆ.
ಆ ಮರದ ಸೇತುವೆಯ ಮೇಲೆ, ಇಂಗ್ಲೆಂಡ್‌ನಲ್ಲಿ ಓದುವಾಗ ಇಂಗ್ಲಿಷ್ ಕಲಿತಿದ್ದ ಮತ್ತು ಸ್ಕಾಚ್‌ಗೆ ಮಾರು ಹೋಗಿದ್ದ ಕರ್ನಲ್ ಸೈಟೋ ಮತ್ತು 28 ವರ್ಷಗಳ ಸುದೀರ್ಘ ಅವಧಿಗೆ ಸೇನೆಯಲ್ಲಿದ್ದು ಒಂದು ಸಲವೂ ಹತ್ತು ತಿಂಗಳಿಗಿAತ ಹೆಚ್ಚು ಅವಧಿಗೆ ಮನೆಯಲ್ಲಿ ನೆಲೆ ಕಂಡಿರದ ಕರ್ನಲ್ ನಿಕೊಲ್ಸನ್ ಆ ದಿನ ನಡೆಸುವ ಮುಖಾಮುಖಿಯೇ ಇಡೀ ಸಿನಿಮಾದ ಹೈಲೈಟ್ ಎನ್ನಬಹುದು. ಸಿನಿಮಾದ ಪ್ರಧಾನ ಪಾತ್ರಗಳೂ ಅವರಿಬ್ಬರೇ, ಅವರಲ್ಲಿ ನಾಯಕ ಯಾರು ಪ್ರತಿ ನಾಯಕ ಯಾರು ಎಂಬುದನ್ನು ಪ್ರೇಕ್ಷಕರೇ ನಿರ್ಧರಿಸಬೇಕಾದÀಷ್ಟು ಶಕ್ತಿಶಾಲಿ ಪಾತ್ರಗಳವು.
ರಾತ್ರಿ ಉಕ್ಕಿ ಹರಿಯುತ್ತಿದ್ದ ಖ್ವಾಯ್ ನದಿಯ ನೀರಿನ ರಭಸ ಮುಂಜಾನೆ ಹೊತ್ತಿಗೆ ಇಳಿದು, ಮೇಜರ್ ವಾರ್ಡನ್ ಸೂಚನೆಯಂತೆ ಸೇತುವೆಗೆ ಅಳವಡಿಸಿದ್ದ ಸ್ಫೋಟಕದ ವೈರ್ ಮೇಲೆದ್ದು ಕಾಣುವಂತಾಗಿಬಿಟ್ಟಿರುತ್ತದೆ. ಟ್ರೇನ್ ಬರುವುದನ್ನೇ ಕಾಯುತ್ತ ಡಿಟೊನೇಟರ್ ಒತ್ತಲು ಕಾಯುತ್ತ ಕೂತಿರುವಾಗ, ಮೇಲೆ ಅಡ್ಡಾಡುತ್ತಿದ್ದ ಕರ್ನಲ್ ನಿಕೊಲ್ಸನ್ ಕಣ್ಣಿಗೆ ಆ ವೈರು ಬಿದ್ದು ಬಿಡುತ್ತದೆ, ಆತ ಕರ್ನಲ್ ಸೈಟೋನನ್ನೂ ಕರೆದುಕೊಂಡು ಅದೇನು ನೋಡೋಣವೆಂದು ನದಿಯ ಕಡೆ ಇಳಿದುಬಿಡುತ್ತಾನೆ. ಅಷ್ಟೊತ್ತಿಗಾಗಲೇ ದೂರದಲ್ಲಿ ರೈಲಿನ ಸೀಟಿಯ ಸದ್ದು , ಚಕ್ರದ ಗಡಗಡ ಸದ್ದು ಕೇಳತೊಡಗಿರುತ್ತದೆ.
ಇನ್ನೇನು, ಮುಂದೇನು ಎನ್ನುವಂಥ ಸಸ್ಪೆನ್ಸ್ ನೋಡುಗನನ್ನು ಆವರಿಸಿಕೊಂಡು ಕುರ್ಚಿಯ ತುದಿಯಲ್ಲಿ ಕೂರಿಸಿಬಿಟ್ಟಿರುತ್ತದೆ. ನದಿಯಲ್ಲಿ ಹರಿದು ಸಾಗಿದ್ದ ವೈರನ್ನೇ ಹಿಡಿದು ಕರ್ನಲ್ ನಿಕೊಲ್ಸನ್ ಡಿಟೋನೇಟರ್ ತನಕ ಬಂದು ಬಿಡುತ್ತಾನೆ. ಆ ಇಬ್ಬರೂ ಕರ್ನಲ್‌ಗಳನ್ನು ಕೊಲ್ಲು ಎಂದು ಡಿಟೋನೇಟರ್ ಬಳಿ ಇದ್ದ ಯುವ ಯೋಧನಿಗೆ ಮತ್ತೊಂದು ದಡಲ್ಲಿದ್ದ ಶಿರ‍್ಸ್ ಕೂಗಿ ಹೇಳುತ್ತಾನೆ. ಆತ ಕರ್ನಲ್ ಸೈಟೋನನ್ನು ಕೊಂದೇ ಬಿಡುತ್ತಾನೆ. ಅಷ್ಟು ಹೊತ್ತಿಗೆ ಬೆಟ್ಟದ ನೆತ್ತಿಯಲ್ಲಿ ಅಡಗಿ ಎಲ್ಲವನ್ನೂ ದುರ್ಬೀನಿನಿಂದ ನೋಡುತ್ತಿದ್ದ ಮೇಜರ್ ವಾರ್ಡನ್ ಮಾರ್ಟರ್‌ನಿಂದ ನದಿಗೆ ಷೆಲ್‌ಗಳನ್ನು ಸಿಡಿಸತೊಡಗುತ್ತಾನೆ. ಕೆಳಗಿನ ಗದ್ದಲ, ಕಾಳಗ ನೋಡಿ ಮೇಲಿನಿಂದ ಸೈನಿಕರು ಇಳಿದು ಬರತೊಡಗುತ್ತಾರೆ. ಸೈಟೋನನ್ನು ಕೊಂದ ಯುವ ಯೋಧನೂ ಸತ್ತು ಹೋಗುತ್ತಾನೆ.
ಶಿರ‍್ಸ್ನ ಮುಖ ಕಂಡು ಕರ್ನಲ್ ನಿಕೊಲ್ಸನ್ “ ನೀನು” ಎಂದು ಅಚ್ಚರಿ, ಆತಂಕದಿAದ ಕೇಳುತ್ತಾನೆ, “ ಸೇತುವೆಯನ್ನು ಸ್ಫೋಟಿಸಿ ನಾಶಮಾಡಬೇಕೆಂಬುದು ಮೇಲಿನ ಆದೇಶ” ಎನ್ನುತ್ತಾನೆ ಶಿರ‍್ಸ್. “ ನಾನೇನು ಮಾಡಿ ಬಿಟ್ಟೆ” ಎಂದು ಕರ್ನಲ್ ಹತಾಶೆಯಿಂದ ನುಡಿಯುವ ಹೊತ್ತಿಗೆ ಮತ್ತೊಂದು ಷೆಲ್ ಸಮೀಪದಲ್ಲೇ ಸಿಡಿದು, ಕರ್ನಲ್ ನಿಕೊಲ್ಸನ್ ಸ್ಫೋಟದ ಆಘಾತಕ್ಕೆ ಕೆಳಕ್ಕೆ ಬೀಳುತ್ತಾನೆ. ಟ್ರೇನ್ ಶಿಳ್ಳೆ ಹತ್ತಿರವಾಗುತ್ತದೆ, ಇಂಜಿನ್ ಆ ಮರದ ಸೇತುವೆಯನ್ನು ಪ್ರವೇಶಿಸತೊಡಗುತ್ತದೆ. ಮತ್ತೆ ಸಾವರಿಸಿಕೊಂಡು ಎದ್ದು ತಟ್ಟಾಡುತ್ತ, ಎದ್ದು ನಿಲ್ಲುವ ಕರ್ನಲ್ ನಿಕೊಲ್ಸನ್ ತೂರಾಡುತ್ತ ಹೋಗಿ ಆ ಡಿಟೊನೇಟರ್ ಮೇಲೇ ಬಿದ್ದು ಬಿಡುತ್ತಾನೆ, ಸೇತುವೆ ಸ್ಫೋಟಗೊಂಡು ರೈಲು ನದೀಮುಖವಾಗಿಬಿದ್ದು ಬಿಡುತ್ತವೆ.
ಈ ಬೃಹನ್ನಾಟಕವನ್ನು ತುಸು ಎತ್ತರದಲ್ಲಿ ಕೂತು ನೋಡುತ್ತಿದ್ದ ವೈದ್ಯ ಮೇಜರ್ ಕ್ಲಿಪ್ಟನ್ ತೀರಾ ವಿಷಾದ ಹಾಗೂ ಬೇಸರದಿಂದ, “ ಹುಚ್ಚುತನ, ಹುಚ್ಚುತನ,ಹುಚ್ಚುತನ(ಮ್ಯಾಡ್‌ನೆಸ್, ಮ್ಯಾಡ್‌ನೆಸ್,ಮ್ಯಾಡ್‌ನೆಸ್) ಎನ್ನುತ್ತಾ ದಾಪುಗಾಲು ಹಾಕತೊಡಗುತ್ತಾನೆ.
ಆ ಸೇತುವೆ ಕಟ್ಟುವ ಆರಂಭದಲ್ಲಿ ವಿರೋಧಿಸಿದ ತನ್ನ ಸೇನಾಧಿಕಾರಿ ಇಂಜಿನಿಯರ್‌ಗಳಿಗೆ ಹೀಗೆ ಸೇತುವೆ ನಿರ್ಮಿಸಿದರೆ ಮುಂದೊAದು ದಿನ ಯುದ್ದ ಮುಗಿದು ಸಾಮಾನ್ಯ ದಿನಗಳಿಗೆ ಮರಳಿದಾಗ ಈ ಸೇತುವೆಯನ್ನು ಬ್ರಿಟಿಷ್ ಯೋಧರು ನಿರ್ಮಿಸಿದರೆಂದು ಜನರು ಮಾತನಾಡಿಕೊಳ್ಳುತ್ತಾರೆ ಎಂದೆಲ್ಲ ಪುಸಲಾಯಿಸಿದ್ದ ಕರ್ನಲ್ ನಿಕೊಲ್ಸನ್ ಕಡೆಯಲ್ಲಿ ಆ ಸೇತುವೆಯನ್ನು ನಾಶಮಾಡಬೇಕೆಂದು ಮೇಲಿನಿಂದ ಆದೇಶವಾಗಿದೆ ಎಂದು ಹೇಳಿದ ಕೂಡಲೇ ಮೂರು ತಿಂಗಳು ತನ್ನ ನೂರಾರು ಸೈನಿಕರ ಶ್ರಮವನ್ನೆಲ್ಲ ಮರೆತು, “ ನಾನೇನು ಮಾಡಿಬಿಟ್ಟೆ” ಎನ್ನುತ್ತ, ಕುಟುಕು ಜೀವ ಹಿಡಿದುಕೊಂಡೇ ಸಿಡಿಮದ್ದನ್ನು ತಾನೇ ಸ್ಫೋಟಿಸುವುದು, ನೋಡುಗರಲ್ಲಿ ಗಾಢ ವಿಷಾದವನ್ನು ಉಂಟು ಮಾಡಿಬಿಡುತ್ತದೆ.
ಸೇನೆಯ ಯಾಂತ್ರಿಕ ಶಿಸ್ತು, ಒಣ ಪ್ರತಿಷ್ಟೆಗಳು ಸೃಷ್ಟಿಸಿದ “ ದ ಬ್ರಿಡ್ಜ್ ಆನ್ ದ ರಿವರ್ ಖ್ವಾಯ್”ನ ಅಂತ್ಯದಲ್ಲಿ ಎಲ್ಲರೂ ಹತರಾಗಿದ ದುರಂತವನ್ನು ಕಂಡ ಮೇಜರ್ ಕ್ಲಿಪ್ಟನ್ ಬಾಯಿಯಲ್ಲಿ ನಿರ್ದೇಶಕ ಡೇವಿಡ್ ಲೀನ್ ಹೇಳಿಸುವ “ಹುಚ್ಚುತನ” ವೆಂಬುದು ಕರ್ನಲ್ ಸೈಟೋನ ಹುಚ್ಚುತನವಾಗಿ, ಕರ್ನಲ್ ನಿಕೊಲ್ಸನ್‌ನ ಹುಚ್ಚುತನವಾಗಿ, ಮೇಜರ್ ವಾರ್ಡನ್‌ನ ಹುಚ್ಚುತನವಾಗಿ, ಅದು ಹೇಗೋ ಅಲ್ಲಿಂದ ಪಾರಾಗಿ ಜೀವ ಉಳಿಸಿಕೊಂಡಿದ್ದರೂ ಮತ್ತೆ ಅಲ್ಲಿಗೇ ಹಿಂದಿರುಗುವ ಅಮೆರಿಕನ್ ಯೋಧ ಶಿರ‍್ಸ್ನ ಹುಚ್ಚುತನವಾಗಿ ಕಂಡರೂ ಅಚ್ಚರಿಪಡುವಂತಿಲ್ಲ. ಇಂಥಾ ಹುಚ್ಚುತನವೇ ಇವತ್ತು ಜಗತ್ತಿನೆಲ್ಲೆಡೆ ಹರಡಿಕೊಂಡು, ಇಂಡಿಯಾದ ನೆಲದಡಿಯಲ್ಲಿ ಗರಿಕೆಯ ಗೇಕಿನಂತೆ ಹಬ್ಬಿಕೊಂಡು, ಸಿನಿಮಾ ಮುಗಿದ ಮೇಲೂ ನನ್ನೊಳಗೆ ದುಗುಡವನ್ನು ಹೆಚ್ಚಿಸಿದ್ದರಿಂದಾಗಿ, ಈ ನನ್ನ ಮೇಲಿನ ಹೊರೆಯನ್ನು ನಿಮಗೂ ವರ್ಗಾಯಿಸಿಬಿಡುವಾ ಅಂತ ಕುಂತು ಬರೆದೇ ಬಿಟ್ಟೆ.
ಡೇವಿಡ್ ಲೀನ್ ಯಾರು ಅಂತ ಕೇಳಬೇಡಿ, ಡೇವಿಡ್ ಲೀನ್(೧೯೦೮-೧೯೯೧) ಮಹಾಕಾವ್ಯ ಎನ್ನುವಂತ ಸಿನಿಮಾಗನ್ನು ನಿರ್ದೇಶಿಸಿದ ಪ್ರತಿಭಾನ್ವಿತ. ಆಸ್ಕರ್ ಪ್ರಶಸ್ತಿಗಳು ಆತನುದ್ದಕ್ಕೂ ಸುರಿದು ಗುಡ್ಡೆಬಿದ್ದಿವೆ. “ಲಾರೆನ್ಸ್ ಆಫ್ ಅರೇಬಿಯಾ”, “ಡಾಕ್ಟರ್ ಜಿವಾಗೋ”, “ರಯಾನ್ಸ್ ಡಾಟರ್”, “ಎ ಪ್ಯಾಸೇಜ್ ಟು ಇಂಡಿಯಾ” ಸಿನಿಮಾಗಳನ್ನು ಸೃಷ್ಟಿಸಿಕೊಟ್ಟಿದ್ದ ಡೇವಿಡ್ ಲೀನ್ ಅದಕ್ಕೂ ಮೊದಲು ೧೯೪೬ರಿಂದ ೧೯೫೭ರವರೆಗೆ “ ಆಲಿವರ್ ಟ್ವಿಸ್ಟ್”, “ಗ್ರೇಟ್ ಎಕ್ಸ್ಪೆಕ್ಟೇಶನ್ಸ್” ಹಾಗೂ “ ದ ಬ್ರಿಡ್ಜ್ ಆನ್ ದ ರಿವರ್ ಖ್ವಾಯ್” ಸಿನಿಮಾಗಳನ್ನು ನಿರ್ದೇಶಿಸಿದ್ದ. ಕಾದಂಬರಿಗಳನ್ನು ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ ಎಂಬುದನ್ನು ನಮ್ಮ ನಡುವಿನ ಅದೆಷ್ಟೋ ನಿರ್ದೇಶಕರು ಅರಿತುಕೊಂಡಿರುವಾಗ, ಡೇವಿಡ್ ಲೀನ್‌ನ “ ದ ಬ್ರಿಡ್ಜ್ ಆನ್ ದ ರಿವರ್ ಖ್ವಾಯ್”ನ ಹುಚ್ಚು ಕಮಾಂಡರ್ ಕರ್ನಲ್ ನಿಕೊಲ್ಸನ್ ಕಿಂಗ್‌ಲಿಯರ್‌ನAತೆ “ ಓಹ್ ನಾನೇನು ಮಾಡಿಬಿಟ್ಟೆ” ಎಂದು ಹೇಳುವುದಿದೆಯಲ್ಲ ಅದು...,