ದೇವೇಗೌಡರ ಪಕ್ಷ ಉಳಿಸಿಕೊಳ್ಳುವ ಹೋರಾಟದ ಅಂತಿಮ ಹಂತ

ದೇವೇಗೌಡರು ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಜೈಲಿನಲ್ಲಿದ್ದರು ಎಂಬ ಸಂಗತಿ ಹೆಚ್ಚು ಪ್ರಚಾರ ಪಡೆದುಕೊಂಡಿಲ್ಲ.

   ದೇವೇಗೌಡರ ಪಕ್ಷ ಉಳಿಸಿಕೊಳ್ಳುವ ಹೋರಾಟದ ಅಂತಿಮ ಹಂತ

 ಒಂದು ಗಳಿಗೆ

ಕುಚ್ಚಂಗಿ ಪ್ರಸನ್ನ

 

      ಜೆಡಿಎಸ್‌ - ಬಿಜೆಪಿ ಮೈತ್ರಿ ಅಂತಿಮಗೊಂಡಿದೆ. ದಿಲ್ಲಿಯಲ್ಲಿ ಶುಕ್ರವಾರ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಮಗ ಸಿನಿಮಾ ಹೀರೋ ನಿಖಿಲ್‌ ಜೊತೆ ಬಿಜೆಪಿಯ ನಾಮಮಾತ್ರ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ನೈಜ ಅಧ್ಯಕ್ಷ ಅಮಿತ್‌ ಶಾ ಎದುರು ಕೂತು ಮಾತುಕತೆ ಮಾಡಿದರು, ಭಾರತ ಮಟ್ಟದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿದರು. ಪತ್ರಕರ್ತರ ಎದುರು ಕೂತು ಮೋದಿ ಅವರು ಮತ್ತೊಮ್ಮೆ ಈ ದೇಶದ ಪ್ರಧಾನ ಮಂತ್ರಿ ಆಗಬೇಕು ಅಂತ ಘೋಷಿಸಿದರು. ಜೆಡಿಎಸ್‌ ಬಿಜೆಪಿ ಜೊತೆ ಮೈತ್ರಿಗೆ ಒಪ್ಪಿದ ಸಂಗತಿಯನ್ನ ಎಕ್ಸ್‌ ತಾಣದಲ್ಲಿ ಜೆಪಿ ನಡ್ಡಾ ಗ್ರೂಪ್‌ ಫೋಟೋ ಸಹಿತ ಪ್ರಕಟಿಸಿದ್ದೇ ತಡ, ಫೇಸ್‌ಬುಕ್‌ನಲ್ಲಿ ತರಾವರಿ ಕಾಮೆಂಟುಗಳು ಬಂದು ಬೀಳತೊಡಗಿದವು. “ ಕುಮಾರಸ್ವಾಮಿ ಈ ಇಳಿವಯಸ್ಸಿನಲ್ಲಿ ಅಪ್ಪ ದೇವೇಗೌಡರ ಪಟಾಪಟಿ ಲಾಡಿ ನಿಕ್ಕರ್‌ ಬಿಚ್ಚಿಸಿ ಆರ್‌ಎಸ್‌ಎಸ್‌ನ ಖಾಕಿ ಚಡ್ಡಿ ತೊಡಿಸಿಬಿಟ್ರಲ್ಲಪ್ಪೋ” ಎನ್ನುವುದು ಇಂಥಾ ಪ್ರತಿಕ್ರಿಯೆಗಳ ಪೈಕಿ ಕ್ಲಾಸಿಕ್‌ ಅಂತ ನನಗೆ ಅನಿಸಿತು.

1977ರಲ್ಲಿ ಲೋಕನಾಯಕ ಜಯಪ್ರಕಾಶರು ರಚಿಸಿದ ಜನತಾಪಕ್ಷದ ನೇಗಿಲು ಹೊತ್ತ ರೈತನಿಂದ ಹಿಡಿದು ಜಾತ್ಯತೀತ ಜನತಾ ದಳದ ತೆನೆ ಹೊತ್ತ ಮಹಿಳೆವರೆಗೂ ಕರ್ನಾಟಕದ ಜನರಿಗೆ ಅದರಲ್ಲೂ ರೈತಾಪಿ ವರ್ಗಕ್ಕೆ ಇವತ್ತಿಗೂ ಜನತಾ ಪಕ್ಷ ಎಂಬ ಹೆಸರು ಕೇಳಿದರೇ ಸಾಕು ಕಣ್ಣಲ್ಲಿ ಮಿಂಚು ಹೊಳೆಯುತ್ತದೆ. 1980ರಲ್ಲಿ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನುಅಧಿಕಾರಕ್ಕೆ ತಂದವರು ಇದೇ ಜನರು.

1977ರಲ್ಲಿ ದಿಲ್ಲಿಯಲ್ಲಿ ಸರ್ಕಾರ ರಚಿಸಿದ ಜನತಾರಂಗ ಐದು ವರ್ಷ ಪೂರ್ತಿ ಗದ್ದುಗೆಯಲ್ಲಿ ಉಳಿಯದೇ ಹೋದರೂ ಇಡೀ ದೇಶದ ಜನಜೀವನದ ಮೇಲೆ ಬೀರಿದ ಪ್ರಭಾವವನ್ನು ಕಡೆಗಣಿಸುವಂತಿಲ್ಲ. 1977ರಲ್ಲಿ 542 ಲೋಕಸಭಾ ಸೀಟುಗಳ ಪೈಕಿ 295 ಜನತಾ ರಂಗದ ಅಭ್ಯರ್ಥಿಗಳು ಗೆದ್ದಿದ್ದರು, ಆದರೆ ಮೂರೇ ವರ್ಷದಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಗೆದ್ದವರು ಕೇವಲ 30 ಮಂದಿ ಮಾತ್ರ. ಅಲ್ಲಿಂದಾಚೆಗೆ ಚುನಾವಣಾ ರಾಜಕೀಯದಲ್ಲಿ ಜನತಾರಂಗ ಇಟ್ಟಲ್ಲೇ ಕರಗಿಹೋಗುವ ಕರ್ಪೂರದಂತೆ ನಾಪತ್ತೆಯಾಗಿಬಿಟ್ಟಿತು.

1977ರ ಜನವರಿ 23ರಂದು ರಚನೆಯಾದ ಜನತಾ ಪಕ್ಷ ಹಾಗೂ ಜನತಾ ರಂಗದೊಳಗೆ ಇವತ್ತು ಭಾರತೀಯ ಜನತಾ ಪಾರ್ಟಿ ಎಂದು ಕರೆಯುವ ಭಾರತೀಯ ಜನ ಸಂಘವೂ ವಿಲೀನವಾಗಿತ್ತು, ಆದರೂ ಆ ಚುನಾವಣೆಯಲ್ಲಿ ಜನ ಸಂಘ ತನ್ನ ದೀಪದ ಗುರುತಿನಲ್ಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ತುಮಕೂರಿನಲ್ಲಿ ದಿವಂಗತ ಎಸ್.ಮಲ್ಲಿಕಾರ್ಜುನಯ್ಯನವರ ಪರ ಕ್ಯಾನ್‌ವಾಸ್‌ ಮಾಡಿದ ನನಗೆ “ ದೀಪದ ಗುರುತಿಗೆ ನಿಮ್ಮ ಮತ- ದೇಶಕ್ಕೇ ಹಿತ” ಎಂಬ ಘೋಷಣೆ ಇನ್ನೂ ನೆನಪಿದೆ. ನಿಜ ಅವತ್ತು ಏಳನೇ ತರಗತಿ ಪಬ್ಲಿಕ್‌ ಪರೀಕ್ಷೆ ಮುಗಿಸಿದ್ದ ನಾನು ಮಾತ್ರವಲ್ಲ ಇಡೀ ದೇಶಕ್ಕೆ ದೇಶವೇ ಇಂದಿರಾ ಕಾಂಗ್ರೆಸ್‌ ವಿರುದ್ಧ ಸೆಟೆದು ನಿಂತಿತ್ತು. ಜನತಾ ರಂಗದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿತ್ತು- ಓಟು ಮಾಡಿತ್ತು. ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿ ಲಾಲ್‌ ಕೃಷ್ಣ ಅಡ್ವಾಣಿ ಜನತಾ ರಂಗ ಸರಕಾರದ ಪಾಲುದಾರಾಗಿ  1977ರ ಮಾರ್ಚಿ 23ರಿಂದ ಎರಡು ವರ್ಷ 122 ದಿನ ಅಧಿಕಾರದ ರುಚಿ ಅನುಭವಿಸಿದರು. ಜನತಾ ರಂಗ ಕರಗಿಹೋದರೂ ಜನ ಸಂಘದ ನಾಯಕತ್ವ ಮಾತ್ರ ವಾಸ್ತವಕ್ಕೆ ಕಣ್ಣು ತೆರೆದುಕೊಂಡು ಬಿಟ್ಟಿತು. 1980ರಲ್ಲಿ ಭಾರತೀಯ ಜನ ಸಂಘವು ಭಾರತೀಯ ಜನತಾ ಪಾರ್ಟಿಯ ಹೆಸರಿನಲ್ಲಿ ದೀಪದ ಬದಲಿಗೆ ಕಮಲದ ಗುರುತಿನೊಂದಿಗೆ ಮರು ಜೀವ ಪಡೆದುಕೊಂಡು ಬೆಳಕಿಗೆ ಬಂದಿತು.

1953ರಿಂದ 9 ವರ್ಷ  ಕಾಂಗ್ರೆಸ್‌ ಸದಸ್ಯರಾಗಿದ್ದ ಲೋಕೋಪಯೋಗಿ ಇಲಾಖಾ ಗುತ್ತಿಗೆದಾರ  ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು  , 1962ರ ಚುನಾವಣೆಯಲ್ಲಿ ಟಿಕೆಟ್‌ ಕೊಡದ ಕಾಂಗ್ರೆಸ್‌ನ್ನು ತೊರೆದು ಹೊಳೆ ನರಸೀಪುರ ವಿಧಾನ ಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದು ವಿಧಾನ ಸಭೆಗೆ ಕಾಲಿಡುತ್ತಾರೆ. ಅಲ್ಲಿಂದ 1989ರವರೆಗೆ ನಿರಂತರ ಹೊಳೆನರಸೀಪುರದಿಂದ ಶಾಸಕರಾಗುತ್ತಾರೆ. ದೇವೇಗೌಡರು 1962 ಮತ್ತು 1967ರಲ್ಲಿ ಪಕ್ಷೇತರರಾಗಿ 1972ರಲ್ಲಿ ಕಾಂಗ್ರೆಸ್‌ ( ಓ) ಅಭ್ಯರ್ಥಿಯಾಗಿ, 1978, 83, 85ರಲ್ಲಿ ಜನತಾ ಪಕ್ಷದಿಂದ ಗೆಲ್ಲುತ್ತಾರೆ. ಆದರೆ 1898ರಲ್ಲಿ ಕಾಂಗ್ರೆಸ್‌ನ ಜಿ.ಪುಟ್ಟಸ್ವಾಮಿಗೌಡರ ಎದುರು ಸೋಲುವ ದೇವೇಗೌಡರು, 1994ರಲ್ಲಿ ರಾಮನಗರದಿಂದ ಜನತಾದಳದ ಅಭ್ಯರ್ಥಿಯಾಗಿ ವಿಧಾನ ಸೌಧಕ್ಕೆ ಕಾಲಿಡುತ್ತಾರೆ.

1991ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಹಾಸನದಿಂದ ಲೋಕಸಭೆ ಪ್ರವೇಶಿಸಿದ ದೇವೇಗೌಡರು , 1998ರಲ್ಲಿ ಜನತಾ ದಳದಿಂದ ಗೆಲ್ಲುತ್ತಾರೆ. 1999ರಲ್ಲಿ ಮತ್ತೆ ಜಿ.ಪುಟ್ಟಸ್ವಾಮಿಗೌಡರ ಎದುರು ಜೆಡಿ(ಎಸ್‌) ಉಮೇದುವಾರರಾಗಿ ಸೋಲು ಕಾಣುತ್ತಾರೆ. ಮತ್ತೆ 2002ರಲ್ಲಿ ಕನಕಪುರದಿಂದ ಡಿ.ಕೆ.ಶಿವಕುಮಾರ್‌ ಎದುರು ಗೆಲ್ಲುವ ಗೌಡರು 2004ರಲ್ಲಿ ಅದೇ ಕನಕಪುರದಿಂದ ತೇಜಸ್ವಿನಿ ಎದುರು ಸೋಲು ಕಾಣುತ್ತಾರೆ, ಆದರೆ ಹಾಸನದಿಂದಲೂ ಕಣಕ್ಕಿಳಿದಿದ್ದ ಗೌಡರು ಅಲ್ಲಿ ಗೆಲುವು ಕಾಣುತ್ತಾರೆ.2009 ಹಾಗೂ 2014ರಲ್ಲೂ ಲೋಕಸಭೆಯಲ್ಲಿ ಹಾಸನವನ್ನು ಪ್ರತಿನಿಧಿಸುತ್ತಾರೆ. ಆದರೆ 2019ರ ಚುನಾವಣೆಯಲ್ಲಿ ಕಾಂಗ್ರೆಸ್-‌ ಜೆಡಿಎಸ್‌ ಅಭ್ಯರ್ಥಿಯಾಗಿ ತುಮಕೂರಿನಿಂದ ಸೋಲುತ್ತಾರೆ. ತುಮಕೂರು ಲೋಕ ಸಭಾ ಕ್ಷೇತ್ರದಿಂದ ದೇವೇಗೌಡರನ್ನು ಗೆಲ್ಲಿಸಿಬಿಟ್ಟರೆ ಅವರು ಮತ್ತು ಅವರ ಕುಟುಂಬದ ದಳಪತಿಗಳು ಶಾಶ್ವತವಾಗಿ ತುಮಕೂರು ಜಿಲ್ಲೆಯಲ್ಲಿ ನೆಲೆಯೂರಿ ತಮ್ಮನ್ನು ನಿರಾಶ್ರಿತರನ್ನಾಗಿ ಬಿಡುತ್ತಾರೆ ಎಂಬ ಆತಂಕದಿಂದ ಅವರನ್ನು ಅವರ ಪಕ್ಷದ ಶಾಸಕರೇ ಗೆಲ್ಲಿಸಲಿಲ್ಲ ಎಂಬ ಮಾತು ಈ ಚುನಾವಣೆಯ ನಂತರ ಜಿಲ್ಲೆಯ ರಾಜಕೀಯ ರಂಗದಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿತು. ಗೌಡರು 1996ರಲ್ಲಿ ರಾಜ್ಯ ಸಭೆಗೂ ಕಾಲಿಟ್ಟರು ಹಾಗೂ ಈಗಲೂ ತುಮಕೂರಿನಿಂದ ಸೋತ ನಂತರ ಅದೇ ಕಾಂಗ್ರೆಸ್‌ ಬೆಂಬಲದೊಂದಿಗೆ ರಾಜ್ಯ ಸಭಾ ಸದಸ್ಯರಾಗಿದ್ದಾರೆ

ದೇವೇಗೌಡರು ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಜೈಲಿನಲ್ಲಿದ್ದರು ಎಂಬ ಸಂಗತಿ ಹೆಚ್ಚು ಪ್ರಚಾರ ಪಡೆದುಕೊಂಡಿಲ್ಲ.

ದೇವೇಗೌಡರು ಎರಡು ಅವಧಿಗೆ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದವರು. 1989ರಲ್ಲಿ ಸುಬ್ರಮಣ್ಯ ಸ್ವಾಮಿ ಅವರು ರಾಷ್ಟ್ರೀಯ ಅಧ್ಯಕ್ಷರಾದ  ಜನತಾ ಪಕ್ಷ( ಜಯ ಪ್ರಕಾಶ್‌ ನಾರಾಯಣ ಬಣ)ದ ಕರ್ನಾಟಕ ಘಟಕ ಅಧ್ಯಕ್ಷರಾಗುತ್ತಾರೆ. ನಂತರ 1994ರಲ್ಲಿ ಜನತಾ ದಳದ ರಾಜ್ಯ ಅಧ್ಯಕ್ಷರಾಗುತ್ತಾರೆ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ ಗೌಡರು 1994ರ ಡಿಸೆಂಬರ್‌ನಲ್ಲಿ ನಾಡಿನ ಮುಖ್ಯಮಂತ್ರಿಯೂ ಆಗುತ್ತಾರೆ. ನಾಲ್ಕು ವರ್ಷಗಳ ಬಳಿಕ ರಾಷ್ಟ್ರೀಯ ಅಧ್ಯಕ್ಷರೂ ಆಗುತ್ತಾರೆ.

ವಿರೋಧ ಪಕ್ಷಗಳು ಕಾಂಗ್ರೆಸ್‌ ಬೆಂಬಲದೊಂದಿಗೆ ರಚಿಸಿದ್ದ ಯುನೈಟೆಡ್‌ ಫ್ರಂಟ್‌ ಸಮ್ಮಿಶ್ರ ಸರ್ಕಾರದಲ್ಲಿ ಗೌಡರು ಅನಿರೀಕ್ಷಿತವಾಗಿ 1996ರ ಜೂನ್‌ 11ರಂದು ದೇಶದ ಅತ್ಯುನ್ನತ ಎನಿಸಿದ ಪ್ರಧಾನ ಮಂತ್ರಿ ಪದವಿಯನ್ನೂ ತಲುಪುತ್ತಾರೆ. ಆದರೆ ಪ್ರಧಾನಿಯಾದ ವೇಗದಲ್ಲೇ ವರ್ಷ ತುಂಬುವ ಮೊದಲೇ ಮಾಜಿಯೂ ಆಗಿ ಬಿಡುತ್ತಾರೆ.

ದೇವೇಗೌಡರು ಮತ್ತವರ ಮಗ ಕುಮಾರಸ್ವಾಮಿಯವರ ಹಿಡಿತದಲ್ಲಿರುವ ಈಗಿನ ಜನತಾ ದಳ ಸೆಕ್ಯುಲರ್‌ ಎಂಬುದು ಸೃಷ್ಟಿಯಾದದ್ದು 1999ರಲ್ಲಿ. ವಿಶ್ವನಾಥ ಪ್ರತಾಪ್‌ ಸಿಂಗ್‌ 1988ರಲ್ಲಿ ಜನತಾಪಕ್ಷದ ಒಂದು ಭಾಗದೊಂದಿಗೆ ಕೆಲ ಸಣ್ಣಪುಟ್ಟ ಪಕ್ಷಗಳನ್ನು ಸೇರಿಸಿಕೊಂಡು ಜನತಾ ದಳ ರಚಿಸಿದ್ದರು. ನಂತರ 1999ರಲ್ಲಿ ಜನತಾ ದಳದ ಕೆಲವು ನಾಯಕರು ಬಿಜೆಪಿಯತ್ತ ವಾಲಿದ್ದರಿಂದ ಸಿದ್ದರಾಮಯ್ಯ ಮತ್ತು ಮಧು ದಂಡವತೆ ಮೊದಲಾದವರು ದೇವೇಗೌಡರ ಜನತಾ ದಳ (ಸೆಕ್ಯುಲರ್‌ )ನಲ್ಲಿ ಗುರುತಿಸಿಕೊಂಡರು.

2004ರ ವಿಧಾನ ಸಭಾ ಚುನಾವಣೆಯಲ್ಲಿ ಈ ಜೆಡಿ(ಎಸ್‌)ನ 58 ಅಭ್ಯರ್ಥಿಗಳು ಗೆಲ್ಲುವ ಮೂಲಕ ಪಕ್ಷಕ್ಕೆ ಜೀವಕಳೆ ಬಂತಾದರೂ , ಕುಮಾರ ಸ್ವಾಮಿ 2006ರಲ್ಲಿ ಪಕ್ಷದ ಶಾಸಕರನ್ನು ರಾತ್ರೋರಾತ್ರಿ ಕರೆದೊಯ್ದು ಯಡಿಯೂರಪ್ಪನವರೊಂದಿಗೆ ಸೇರಿ ಬಿಜೆಪಿ- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಮಾಡುವುದರೊಂದಿಗೆ, ಅಹಿಂದ ಸಮಾವೇಶದಲ್ಲಿ ಭಾಗವಹಿಸಿದರು ಎಂಬ ನೆಪವೊಡ್ಡಿ ಸಿದ್ದರಾಮಯ್ಯನವರನ್ನು ಉಚ್ಚಾಟನೆ ಮಾಡುವುದರೊಂದಿಗೆ ಜನತಾ ದಳ (ಸೆಕ್ಯುಲರ್)‌ ಒಂದು ನಿರ್ಣಾಯಕ ಹಂತವನ್ನು ತಲುಪಿ ನಿಂತಿತು. ಮುಂದಿನದೆಲ್ಲ ಕುಮಾರ ಪರ್ವ.

ನಾನು 40 ವರ್ಷ ಕಷ್ಟಪಟ್ಟು ಕಟ್ಟಿಬೆಳೆಸಿದ ಪಕ್ಷವನ್ನುಉಳಿಸಿಕೊಳ್ಳುವ ಸಲುವಾಗಿ ಬಿಜೆಪಿ ಜೊತೆ ಮೈತ್ರಿಗೆ ಮುಂದಾದೆ, ವೀಲ್‌ ಚೇರ್‌ನಲ್ಲಿ ಹೋಗಿ ಮೋದಿಯನ್ನು ಭೇಟಿಯಾದೆ ಅಂದದ್ದಕ್ಕಾಗಿ ಇಷ್ಟೆಲ್ಲ ಒಂದೇ ಉಸಿರಿಗೆ ಹೇಳಬೇಕಾಗಿ ಬಂತು.

ರಾಜಕಾರಣದಲ್ಲಿ ತನ್ನದೇ ಆದ ನಿಲುವುಗಳನ್ನು ಹೊಂದಿರುವ ಲಂಕೇಶರ ಪ್ರಗತಿರಂಗ, ಆನಂತರ ಜೆಡಿಎಸ್‌ ಈಗ ಕಾಂಗ್ರೆಸ್‌ ಎನ್ನುತ್ತಿರುವ ಸಿನಿಮಾ-ಧಾರವಾಹಿ ಕಲಾವಿದ ಟಿ.ಎಸ್‌.ಹನುಮಂತಗೌಡರು ಪ್ರತಿಕ್ರಿಯಿಸಿ,  ಗೌಡರಾಗಲೀ ಕುಮಾರಸ್ವಾಮಿಯವರಾಗಲೀ ಈ ತೀರ್ಮಾನವನ್ನು 2018-19ರ ಚುನಾವಣೆಗಳಲ್ಲಾದರೂ ತೆಗೆದುಕೊಂಡಿದ್ದರೆ ಅವರ ಪಕ್ಷ ಅಧಿಕಾರಕ್ಕೆ ಬರುತ್ತಿತ್ತು. ಈಗ ತೀರಾ ಲೇಟ್‌ ಆಗಿಬಿಟ್ಟಿತು. ಭವಿಷ್ಯ ಕಷ್ಟ “ ಅಂತ ನಿಟ್ಟುಸಿರು ಬಿಟ್ಟರು.

  

 

ʼನನಗೆ ನನ್ನ ಪಕ್ಷ ಮುಖ್ಯʼ

ಈ ದೇವೇಗೌಡ ಜಾತ್ಯತೀತ ಶಕ್ತಿಗಳನ್ನು ಬಲಪಡಿಸಲು ಪಟ್ಟ ಶ್ರಮವನ್ನು ಗುರುತಿಸುವ ಕನಿಷ್ಟ ಸೌಜನ್ಯವನ್ನು ಕಾಂಗ್ರೆಸ್‌ ಮತ್ತು ಇಂಡಿಯಾ ಮೈತ್ರಿಕೂಟದ ಸದಸ್ಯರು ತೋರಲಿಲ್ಲ, 40 ವರ್ಷ ಕಷ್ಟಪಟ್ಟು ಬೆಳೆಸಿದ ಪಕ್ಷವನ್ನು ಉಳಿಸಿಕೊಳ್ಳುವ ಸಲುವಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದ್ದೇನೆ. 91ರ ಇಳಿ ವಯಸ್ಸಿನಲ್ಲಿ ಈ ದೇವೇಗೌಡನಿಗೆ ಏನು ಬೇಕೆಂದು ಕೇಳಲಿ, ಹೌದು ನಾನು ದಿಲ್ಲಿಯಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮೈತ್ರಿ ಕುರಿತು ಮಾತನಾಡಿದ್ದೇನೆ. ಮೋದಿ ಮತ್ತು ಅಮಿತ್‌ ಶಾ ಅವರಿಗೆ ಈ ದೇವೇಗೌಡ ಏನು ಎಂಬ ಅರಿವಿದೆ. ಸೀಟು ಹಂಚಿಕೆ ಕುರಿತು ಕುಮಾರಸ್ವಾಮಿ ಅಮಿತ್‌ ಶಾ ಜೊತೆ ಕೂತು ಮಾತನಾಡಿ ಅಂತಿಮಗೊಳಿಸುತ್ತಾರೆ. ನನಗೆ ನನ್ನ ಪಕ್ಷ ಮುಖ್ಯ, 2006ರಲ್ಲಿ ಕುಮಾರಸ್ವಾಮಿ ಬಿಜೆಪಿ ಜೊತೆ ಹೋದಾಗಲೂ ಪಕ್ಷವನ್ನು ಉಳಿಸಿಕೊಂಡಿದ್ದೇನೆ. ಈಗಲೂ ಪಕ್ಷವನ್ನು ಉಳಿಸಿಕೊಳ್ಳುತ್ತೇನೆ .

 

ಮಾಜಿ ಪ್ರಧಾನ ಮಂತ್ರಿ ಹೆಚ್‌.ಡಿ.ದೇವೇಗೌಡ

ಸೆ.11ರಂದು ಪಕ್ಷದ ಸಭೆಯಲ್ಲಿ ಕಾರ್ಯಕರ್ತರ ಎದುರು