ದಕ್ಷಿಣ ಭಾರತದ ಗಂಗೆಯ ಕತೆ - ಕರುನಾಡ ವ್ಯಥೆ

ಕೇಂದ್ರ ಸರ್ಕಾರದ  ಅನಾದರ, ರಾಜ್ಯದ ಬಿಜೆಪಿ ಸಂಸದರ ಪುಕ್ಕಲುತನದ ಪರಿಣಾಮವಾಗಿ ಕಾವೇರಿ ನದಿ ನೀರು ಹಂಚಿಕೆ ಎಂಬ ಕರಾಳ ಅಧ್ಯಾಯಕ್ಕೆ ತೆರೆ‌ ಬೀಳಲಿಲ್ಲ. ಪರಿಣಾಮ ಬಿಕ್ಕಟ್ಟು ಮುಂದುವರೆದಿದೆ. ಈಗ ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ಮಳೆ ಸುರಿಸದ ಪರಿಣಾಮ ಕಾವೇರಿ ಮೈದುಂಬಿ ಹರಿಯಲೇ ಇಲ್ಲ. ಇದರಿಂದಾಗಿ ರಾಜ್ಯದ ಜಲಾಶಯಗಳ ಒಡಲು ಬರಿದಾಗಿದೆ.ಅಳಿದುಳಿದ ನೀರು ಬೆಂಗಳೂರು-ಮೈಸೂರು ನಗರವಷ್ಟೇ ಅಲ್ಲದೆ ದೂರದ ತುಮಕೂರಿನ ಶಿರಾ ತಾಲ್ಲೂಕಿನ ಜನರ ಬಾಯಾರಿಕೆ ತಣಿಸಬೇಕಿದೆ.

ದಕ್ಷಿಣ ಭಾರತದ ಗಂಗೆಯ ಕತೆ - ಕರುನಾಡ ವ್ಯಥೆ

 ವರ್ತಮಾನ

ಆರ್.ಹೆಚ್.ನಟರಾಜ್‌

ಕಾವೇರಿ ನದಿ ಕರ್ನಾಟಕದ ಜೀವನದಿ.ಮಂಡ್ಯ, ಮೈಸೂರು, ಹಾಸನ,ತುಮಕೂರು, ಕೊಡಗು,ರಾಮನಗರ ಜನರ ಜೀವನಾಡಿ, ಮಹಾನಗರಿ ಬೆಂಗಳೂರಿನ ಜೀವಜಲ. ಕಾವೇರಿಯ ಉಪನದಿ ಹೇಮಾವತಿ ಹಾಸನ, ತುಮಕೂರು ಜಿಲ್ಲೆಗಳ ಜನಜೀವನವನ್ನು ಪೊರೆಯುತ್ತಿದೆ. ಹೀಗೇ ಹಲವಾರು ಉಪನದಿಗಳು ನಾಡಿನ ದಕ್ಷಿಣದ ಹಲವು ಜಿಲ್ಲೆಗಳಿಗೆ ಜೀವನಾಡಿಯಾಗಿವೆ.

ಕೊಡಗಿನ ಬ್ರಹ್ಮಗಿರಿ ತಪ್ಪಲಿನಲ್ಲಿ ಲೋಪಮುದ್ರೆಯಾಗಿ ಜನಿಸಿ,ಕಾವೇರಿಯಾಗಿ ಮೈದುಂಬಿ ಹರಿಯುವ ಈ ನದಿ ನೆರೆಯ ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ ರಾಜ್ಯಗಳ ಪಾಲಿಗೆ ವರ ದೇವತೆ.ಒಟ್ಟಾರೆ ದಕ್ಷಿಣ ಭಾರತದ ಈ ರಾಜ್ಯಗಳ ಗಂಗೆಯಾದ ಕಾವೇರಿ ನದಿ ನೀರು ಹಂಚಿಕೆ ಈ ರಾಜ್ಯಗಳ ನಡುವೆ ಬಿಡಿಸಲಾಗದ ಕಗ್ಗಂಟು.

ಈ ನೀರು ಹಂಚಿಕೆ ಕುರಿತಾದ ವಿವಾದಕ್ಕೆ ಶತಮಾನಗಳ ಇತಿಹಾಸವಿದೆ.ಲಕ್ಷಾಂತರ ಸಂಧಾನ ಮಾತುಕತೆಗಳು ನಡೆದಿವೆ‌. ನ್ಯಾಯಾಲಯದ ತೀರ್ಪುಗಳು ಹೊರಬಿದ್ದಿವೆ.ಆದರೆ,ವಿವಾದ ಮಾತ್ರ ಬಗೆಹರಿದಿಲ್ಲ. ಕಾಲನ ತೆರೆ ಸರಿದಂತೆ ವಿವಾದದ ಸ್ವರೂಪ ಕೂಡಾ ಬದಲಾಗುತ್ತಾ ಬರುತ್ತಿದೆ.

ಸಾಮಾನ್ಯ ಜಲ ವರ್ಷಗಳ ಸಮಯದಲ್ಲಿ ಇದು ಯಾವುದೇ ರೀತಿಯ ವಿವಾದ ಹಾಗೂ ಕಲಹಕ್ಕೆ ಅವಕಾಶವಿರುವುದಿಲ್ಲ.ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾದರೆ, ಯಾವುದೇ ಸಮಸ್ಯೆ ಇರುವುದಿಲ್ಲ ನೀರು ಸಾಕಷ್ಟು ಹರಿದು ಸಮುದ್ರನ ಒಡಲನ್ನು ತಲುಪುತ್ತದೆ. ಆದರೆ, ಮಳೆ ಕಡಿಮೆಯಾದ ವರ್ಷದಲ್ಲಿ ವಿವಾದ,ಜಗಳ, ರಾಜ್ಯ-ರಾಜ್ಯಗಳ ನಡುವೆ ಸಂಘರ್ಷ, ಬಿಕ್ಕಟ್ಟು ಕಟ್ಟಿಟ್ಟ ಬುತ್ತಿ.

ಇಡೀ ವಿವಾದದತ್ತ ಒಮ್ಮೆ ಇಣುಕಿ ನೋಡಿದರೆ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ದಶಕಗಳಿಂದ ಬಂದಿರುವ ನ್ಯಾಯ ತೀರ್ಮಾನಗಳು ಕರ್ನಾಟಕಕ್ಕೆ ನಿರಾಶೆ ತರುತ್ತಲೇ ಇವೆ. ನ್ಯಾಯಾಲಯದಲ್ಲಿ ಕರ್ನಾಟಕದ ಪರವಾಗಿ ಯಾಕೆ ಒಂದೂ ತೀರ್ಪು ಬರಲಿಲ್ಲ ಎಂಬುದು ಜನಸಾಮಾನ್ಯರ ಪ್ರಶ್ನೆಯಾದರೆ,ರಾಜಕೀಯವಾಗಿ ತೀರ್ಮಾನ ಹೊರಬಿದ್ದ ಸಮಯದಲ್ಲೂ ಕರ್ನಾಟಕಕ್ಕೆ ಮಲತಾಯಿ ಧೋರಣೆ ಇದ್ದದ್ದೆ. ಇದಕ್ಕೆ ಪ್ರಮುಖ ಕಾರಣ ಕರ್ನಾಟಕದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ.

ಬ್ರಿಟಿಷರ ಅವಧಿಯಿಂದಲೂ ಇದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಅಂದು ಮದ್ರಾಸ್ ಪ್ರೆಸಿಡೆನ್ಸಿಯಲ್ಲಿದ್ದ ಬ್ರಿಟಿಷರ ಮರ್ಜಿಯಲ್ಲಿ ಮೈಸೂರಿನ ಅರಸರ ಆಳ್ವಿಕೆಯಿತ್ತು.ಇದರ ಪರಿಣಾಮ ಮದ್ರಾಸ್ ನಲ್ಲಿನ ಬ್ರಿಟಿಷ್ ವೈಸರಾಯ್ ಗಳು ನದಿ ನೀರಿನ ಹಂಚಿಕೆ ವಿಷಯದಲ್ಲಿ ಪ್ರಭಾವ ಬೀರುತ್ತಿದ್ದರು

ಇದಾದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವಕ್ಕೆ ಬಂದರೂ ಸಂಕಷ್ಟ ನಿವಾರಣೆಯಾಗಲಿಲ್ಲ.ದೆಹಲಿಯ ಆಡಳಿತ ಚುಕ್ಕಾಣಿ ಹಿಡಿದವರ ಮೇಲೆ ತಮಿಳುನಾಡಿನ ರಾಜಕೀಯದ ಪ್ರಭಾವ ಹೆಚ್ಚಾಗಿತ್ತು. ಕೇಂದ್ರದ ಅಡಳಿತ ‌ರೂಡ ಸರ್ಕಾರ ಅದು ಕಾಂಗ್ರೆಸ್, ಬಿಜೆಪಿ ಅಥವಾ ತೃತೀಯ ರಂಗವಾಗಿರಲಿ ತಮಿಳು ನಾಡು ಪ್ರಮುಖ ಪಾತ್ರ ನಿರ್ವಹಣೆ ಮಾಡುತಿತ್ತು. ಇದರ ಪರಿಣಾಮವಾಗಿ ಜಲ ವಿವಾದದಲ್ಲಿ ತಮಿಳು ನಾಡಿನ ಪರವಾದ ನಿರ್ಧಾರ ಹೊರ ಬೀಳುತ್ತಿದ್ದವು.

ರಾಜಕೀಯವಾಗಿ ತಮಿಳು ನಾಡಿನ ಪಕ್ಷಗಳು ಜಿದ್ದಾಜಿದ್ದಿನ ಕಲಹಕ್ಕೆ ಇಡೀ ದೇಶದಲ್ಲಿ ಹೆಸರುವಾಸಿ. ಆದರೆ ಕಾವೇರಿ ನದಿ ನೀರು ಹಂಚಿಕೆಯಂತಹ ವಿಷಯ ಬಂದಾಗ ರಾಜಕೀಯವನ್ನು ಮೀರಿ ಇಲ್ಲಿನ ಪಕ್ಷಗಳು ಒಗ್ಗಟ್ಟು ಮೆರೆಯುತ್ತವೆ.ರಾಜ್ಯದ ಹಿತಾಸಕ್ತಿಯ ವಿಷಯ ಬಂದಾಗ ರಾಜಕೀಯ ದ್ವೇಷ ಮರೆತು ಒಂದಾಗುತ್ತವೆ

ಆದರೆ ಮೊಟ್ಟಮೊದಲ ಬಾರಿಗೆ 2014 ರಿಂದ ಇಲ್ಲಿಯವರೆಗೆ ತಮಿಳುನಾಡಿನ ರಾಜಕೀಯ ಮರ್ಜಿ ಬೇಕಿಲ್ಲದ ಸ್ಪಷ್ಟ ಬಹುಮತದ ಬಿಜೆಪಿ ನೇತೃತ್ವದ ಎನ್.ಡಿ.ಎ.ಸರ್ಕಾರಕ್ಕೆ ಲಭಿಸಿತು. ಕರ್ನಾಟಕದಿಂದ ಅತ್ಯಧಿಕ ಸಂಖ್ಯೆಯ ಬಿಜೆಪಿ ಸಂಸದರು ಆಯ್ಕೆಯಾದರು. ಈ ಹಿನ್ನೆಲೆಯಲ್ಲಿ ಬಿಕ್ಕಟ್ಟಿಗೆ ತಾರ್ಕಿಕ ಅಂತ್ಯ ಸಿಗಲಿದೆ,ರಾಜ್ಯದ ಬಹುದಿನದ ಅನ್ಯಾಯದ ಅಧ್ಯಾಯ ಕೊನೆಯಾಗಲಿದೆ ಎಂದು ಭಾವಿಸಲಾಗಿತ್ತು.ಇದಕ್ಕೆ ಪೂರಕವೆಂಬಂತೆ ನ್ಯಾಯಮಂಡಳಿಯ ಅಂತಿಮ ತೀರ್ಪು ಹಾಗೂ ರಾಜ್ಯದಲ್ಲೂ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿತ್ತು.

ʼಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ದಕ್ಕಲಿಲ್ಲʼ ಎಂಬ ಲೋಕಾರೂಡಿಯ ಮಾತಿನಂತೆ ಕಾವೇರಿ ನದಿ ನೀರಿನ ಹಂಚಿಕೆಯ ವಿಚಾರದಲ್ಲಿ ಕರ್ನಾಟಕದ ಅನ್ಯಾಯದ ಅಧ್ಯಾಯಕ್ಕೆ ತೆರೆ ಬೀಳಲೇ ಇಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಬಗ್ಗೆ ದೃಢವಾದ ನಿರ್ಧಾರ ತೆಗೆದುಕೊಳ್ಳಲಿಲ್ಲ.ಅತಿ ಹೆಚ್ಚಿನ ಸಂಖ್ಯೆಯ ಸಂಸದರಿದ್ದರೂ ಇವರಾರೂ ಈ ವಿಚಾರವಾಗಿ  ಪ್ರಧಾನಿ ಮೋದಿ ಅವರ ಮುಂದೆ ಮಾತನಾಡಲು ಸಾಧ್ಯವಾಗಲಿಲ್ಲ.

ಕೇಂದ್ರ ಸರ್ಕಾರದ ಈ ಅನಾದರ, ರಾಜ್ಯದ ಬಿಜೆಪಿ ಸಂಸದರ ಪುಕ್ಕಲುತನದ ಪರಿಣಾಮವಾಗಿ ಕಾವೇರಿ ನದಿ ನೀರು ಹಂಚಿಕೆ  ಎಂಬ ಕರಾಳ ಅಧ್ಯಾಯಕ್ಕೆ ತೆರೆ‌ ಬೀಳಲಿಲ್ಲ. ಪರಿಣಾಮ ಬಿಕ್ಕಟ್ಟು ಮುಂದುವರೆದಿದೆ. ಈಗ ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ಮಳೆ ಸುರಿಸದ ಪರಿಣಾಮ ಕಾವೇರಿ ಮೈದುಂಬಿ ಹರಿಯಲೇ ಇಲ್ಲ. ಇದರಿಂದಾಗಿ ರಾಜ್ಯದ ಜಲಾಶಯಗಳ ಒಡಲು ಬರಿದಾಗಿದೆ.ಅಳಿದುಳಿದ ನೀರು ಬೆಂಗಳೂರು-ಮೈಸೂರು ನಗರವಷ್ಟೇ ಅಲ್ಲದೆ ದೂರದ ತುಮಕೂರಿನ ಶಿರಾ ತಾಲ್ಲೂಕಿನ ಜನರ ಬಾಯಾರಿಕೆ ತಣಿಸಬೇಕಿದೆ.

ಇಂತಹ ಸಂಕಷ್ಟದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ತಮಿಳುನಾಡಿಗೆ ನೀರು ಬಿಡಬೇಕಾದ ಪರಿಸ್ಥಿತಿ ಬಂದೊದಗಿದೆ. ಅಂತಿಮ ತೀರ್ಪು ಪ್ರಕಟಿಸಿದ ನ್ಯಾಯಮಂಡಳಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಅಧರಿಸಿ,ರಾಜ್ಯಗಳಿಗೆ ನೀರಿನ ಹಂಚಿಕೆ ಮಾಡಿದೆ.ಈ ವೇಳೆ ನ್ಯಾಯಮಂಡಳಿ ಅಂತರ್ಜಲ,ಹಾಗೂ ತಮಿಳುನಾಡಿನಲ್ಲಿ ಸುರಿಯುವ ಹಿಂಗಾರು ಮಳೆಯ ಲೆಕ್ಕಾಚಾರ ಮಾಡಿಲ್ಲ ಎಂಬ ದೊಡ್ಡ ಲೋಪದ ನಡುವೆಯೂ ಮಳೆ ಅಭಾವದ ಸಮಯದಲ್ಲಿ ಬೇಕಾದ ಸಂಕಷ್ಟ ಸೂತ್ರದ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿಲ್ಲ.

ಇಂತಹ ಲೋಪದ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದೆ.ಮುಂಬರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನೆರೆಯ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಜೊತೆಗಿನ ಮೈತ್ರಿ ಮೇಲೆ ಹೆಚ್ಚು ಅವಲಂಬಿತವಾಗಿದೆ.ಅದೇ ರೀತಿಯಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ತಮಿಳುನಾಡಿನ ಪ್ರಮುಖ ಪ್ರತಿಪಕ್ಷ ಅಣ್ಣಾ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದು, ಲೋಕಸಭಾ ಚುನಾವಣೆಯಲ್ಲಿ ಇದನ್ನು ಬಹುವಾಗಿ ನೆಚ್ಚಿಕೊಂಡಿದೆ.ಹೀಗಾಗಿ ಸದ್ಯ ಉದ್ಭವಿಸಿರುವ ಪರಿಸ್ಥಿತಿಯಲ್ಲಿ ಯಾವ ರೀತಿಯ ತೀರ್ಮಾನ ಹೊರಬೀಳುತ್ತದೆ. ಇದು ರಾಜ್ಯದ ಅನ್ನದಾತರ ಪಾಲಿಗೆ ಏನಾಗಲಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ.

ಒಟ್ಟಾರೆಯಾಗಿ ರಾಜಕೀಯ ಚದುರಂಗದಾಟದಲ್ಲಿ ರಾಜ್ಯದ ‌ಜನತೆಗೆ ಸೋಲು‌ ಕಟ್ಟಿಟ್ಟ ಬುತ್ತಿ ಎನ್ನುವುದು ಹಲವಾರು ನಿದರ್ಶನಗಳಿಂದ ನೋಡಬಹುದು.

ಕರ್ನಾಟಕದಲ್ಲಿ ಅರವತ್ತರ ದಶಕದಲ್ಲಿ ಕೈಗೊಂಡ ಹಾರಂಗಿ, ಕಬಿನಿ ಮತ್ತು ಹೇಮಾವತಿ ಜಲಾಶಯಗಳ ನಿರ್ಮಾಣದ ಬಗ್ಗೆ ಅಸಮಾಧಾನಗೊಂಡಿದ್ದ ತಮಿಳುನಾಡು ಸರ್ಕಾರವು 1971ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ತಕರಾರು ಸಲ್ಲಿಸಿತು

ಆದರೆ ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ದೃಷ್ಟಿಯಿಂದ ಅಂದಿನ ಪ್ರಧಾನ ಮಂತ್ರಿಗಳು ನೀಡಿದ ಭರವಸೆಯನ್ವಯ 1972ರಲ್ಲಿ ತಮಿಳುನಾಡು ಸರ್ಕಾರವು ದಾವೆಯನ್ನು ಹಿಂಪಡೆಯಿತು.

ಈ ಮಧ್ಯೆ ತಮಿಳುನಾಡಿನ ಕಾವೇರಿ  ನೀರ್ಪಾಸಾನ ವಿಳಯ ಪೊಂಗಲ್' ಎಂಬ ಸಂಸ್ಥೆಯು 1983ರಲ್ಲಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿ,ಕರ್ನಾಟಕ ಈ ಜಲಾಶಯಗಳ ಮೂಲಕ ತನ್ನ ಪಾಲಿನ ನೀರು ಕಬಳಿಸುತ್ತಿದೆ.ಇದರಿಂದ ತಮಿಳುನಾಡು ಬರ ಪೀಡಿತ ರಾಜ್ಯವಾಗಲಿದೆ ಎಂದು ಅಳಲು ತೋಡಿಕೊಂಡಿತು. ಜಲಾನಯನ ಪ್ರದೇಶವನ್ನು ಆಧರಿಸಿ ನೀರು ಹಂಚಿಕೆ ಮಾಡಬೇಕು ಇದಕ್ಕಾಗಿ ನ್ಯಾಯ ಮಂಡಳಿ ರಚಿಸಬೇಕು ಎಂದು ಮನವಿ ಸಲ್ಲಿಸಿತು.ಇಂತಹ ಅರ್ಜಿ ಸಲ್ಲಿಸಿದ ಸಂಸ್ಥೆಯ ಜೊತೆಗೆ ಅಂದಿನ ರಾಜ್ಯ ಸರ್ಕಾರ ತೆರೆಮರೆಯಲ್ಲಿ ಸಹಕಾರ ನೀಡಿದ್ದು ಗುಟ್ಟಾಗೇನೂ ಇರಲಿಲ್ಲ.

ಕೊಡಗಿನ ಭಾಗಮಂಡಲದಲ್ಲಿ ತಣ್ಣಗೆ-ಸಣ್ಣಗೆ ಹರಿವ ಕಾವೇರಿ

ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯ ಮಂಡಳಿ ರಚನೆಗೆ ಆದೇಶಿಸಿತು.ಅದರಂತೆ  1990ರಲ್ಲಿ ಕಾವೇರಿ ನ್ಯಾಯಮಂಡಳಿ ರಚನೆಯಾಯಿತು. ಈ ನ್ಯಾಯಮಂಡಳಿ ಮುಂದೆ  ಕರ್ನಾಟಕ 465 ಟಿ.ಎಂ.ಸಿ, ಕೇರಳ 99.8 ಟಿ.ಎಂ.ಸಿ, ತಮಿಳುನಾಡು 573.5 ಟಿ.ಎಂ.ಸಿ ಮತ್ತು ಪಾಂಡಿಚೇರಿ 9.35 ಟಿ.ಎಂ.ಸಿ ನೀರನ್ನು ತಮಗೆ ಹಂಚಿಕೆ ಮಾಡಬೇಕು ಎಂದು ಮನವಿ ಸಲ್ಲಿಸಿದವು. ಈ ಮೂಲಕ ಒಟ್ಟಾರೆ 1,150 ಟಿ.ಎಂ.ಸಿ ನೀರಿನ ಬೇಡಿಕೆ ಸಲ್ಲಿಸಲಾಯಿತು. ವಾಸ್ತವ ಸಂಗತಿ ಎಂದರೆ ಸರಾಸರಿ ಕಾವೇರಿ ನದಿಯಲ್ಲಿ ಲಭ್ಯವಿರುವ ನೀರಿನ ಪ್ರಮಾಣ  ಸುಮಾರು 740 ರಿಂದ 850 ಟಿ.ಎಂ.ಸಿ.ಮಾತ್ರ.

ನೀರು ಹಂಚಿಕೆಯ ಕುರಿತು ವಾದ-ಪ್ರತಿವಾದ ಆಲಿಸಿದ ನ್ಯಾಯಮಂಡಳಿ 25/06/1991 ರಂದು ಮಧ್ಯಂತರ ಆದೇಶ ನೀಡಿತು. ಕರ್ನಾಟಕದ ಪಾಲಿಗೆ ನೀರು ಉಳಿಯಲಿ ಬಿಡಲಿ, ವರ್ಷಕ್ಕೆ 205 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕೆಂಬ ಈ ಮಧ್ಯಂತರ ಆದೇಶವನ್ನು ಕರ್ನಾಟಕದ ಪಾಲಿಗೆ ಮರಣಶಾಸನವೆಂದು ಬಣ್ಣಿಸಲಾಯಿತು.ಈ ಆದೇಶದ ವಿರುದ್ಧ ಕರ್ನಾಟಕದಲ್ಲಿ ಭುಗಿಲೆದ್ದ ಆಕ್ರೋಶ ಹಲವು ಮನೆ-ಮನಗಳನ್ನು ಸುಟ್ಟು ಧ್ವಂಸ ಮಾಡಿತು.

ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ದಿವಂಗತ ಎಸ್.ಬಂಗಾರಪ್ಪ ಕೈಗೊಂಡ ತೀರ್ಮಾನ ಅಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವನ್ನು ಬೆಚ್ಚುವಂತೆ ಮಾಡಿತು. ಇದು ನಂತರದಲ್ಲಿ ರಾಜ್ಯ ಸರ್ಕಾರದ ಮೇಲಿರುವ ಅಭಿಪ್ರಾಯವನ್ನೇ ಬದಲಾಯಿಸಿತು ಎಂಬ ಆರೋಪಗಳಿವೆ.ಇದು ಅಷ್ಟು ಸುಲಭವಾಗಿ ಒಪ್ಪಬಹುದಾದ ವಿಷಯವಲ್ಲ ಒದೊಂದು ಚರ್ಚಾಸ್ಪದ ವಿಷಯ.ಆದರೆ ಅಂದಿನ ಮುಖ್ಯಮಂತ್ರಿ ತೋರಿದ ಧೋರಣೆ ರಾಜ್ಯದ ಮನೋಬಲ ಹೆಚ್ಚಿಸಿದ್ದಂತೂ ನಿಜ.

ಈ ಕುರಿತಂತೆ ನ್ಯಾಯಾಂಗ,ರಾಜಕೀಯ ಹೋರಾಟವೂ ನಡೆಯಿತು. ಅಂತಿಮವಾಗಿ ಕಾವೇರಿ ನ್ಯಾಯಮಂಡಳಿ ದಿನಾಂಕ: 05/02/2007 ರಂದು ಅಂತಿಮ ಆದೇಶವನ್ನು ಹೊರಡಿಸಿತು.ಈ ತೀರ್ಪಿನಿಂದ ಕರ್ನಾಟಕಕ್ಕೆ ಸ್ವಲ್ಪ ಅನುಕೂಲ ಮತ್ತು ಅನಾನುಕೂಲವೂ ಆಗಿದೆ. ಅನುಕೂಲವೆಂದರೆ, ನ್ಯಾಯಮಂಡಳಿ ಮಧ್ಯಂತರ ತೀರ್ಪಿನಲ್ಲಿ ಪ್ರತಿ ವರ್ಷ 205 ಟಿ.ಎಂ.ಸಿ ಬಿಡಬೇಕೆಂದು ಆದೇಶಿಸಿರುವುದನ್ನು ಮಾರ್ಪಡಿಸಿ ಅಂತಿಮ ತೀರ್ಪಿನಲ್ಲಿ 192 ಟಿ.ಎಂ.ಸಿ.ಗೆ ಇಳಿಸಿದೆ. ಹಾಗೂ ಮಧ್ಯಂತರ ತೀರ್ಪಿನಲ್ಲಿ ಮಿತಿಗೊಳಿಸಿದ್ದ 11.2 ಲಕ್ಷ ನೀರಾವರಿ ಪ್ರದೇಶವನ್ನು 18.85 ಲಕ್ಷ ಎಕರೆಗಳಿಗೆ ವಿಸ್ತರಿಸಬಹುದಾಗಿದೆ. ಆದರೆ, ಕರ್ನಾಟಕವು ಕೈಗೊಂಡಿರುವ ಎಲ್ಲಾ ನೀರಾವರಿ ಯೋಜನೆಗಳಿಗೆ ಈಗ ಹಂಚಿಕೆಯಾಗಿರುವ ನೀರಿನ ಪ್ರಮಾಣ ಸಾಕಾಗುವುದಿಲ್ಲ.

ರಾಜ್ಯದ ಕಾವೇರಿ ಜಲಾನಯನ ಪ್ರದೇಶದ 27.28 ಲಕ್ಷ ಎಕರೆ ಜಮೀನಿನ ನೀರಾವರಿ ಅಗತ್ಯ 408 ಟಿ.ಎಂಸಿ. ಕುಡಿಯುವ ಉದ್ದೇಶಕ್ಕಾಗಿ ಕಾವೇರಿ ಜಲಾನಯನ ಪ್ರದೇಶದ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಒಟ್ಟು 50ಕ್ಕೂ ಹೆಚ್ಚು ಟಿ.ಎಂ.ಸಿ ನೀರು ಅಗತ್ಯವಿದ್ದರೆ ಮಹಾನಗರ ಬೆಂಗಳೂರಿನ ಅಗತ್ಯ 30 ಟಿ.ಎಂ.ಸಿ.ಗಳಿಗೂ ಅಧಿಕ ಎನ್ನುವ ಲೆಕ್ಕಾಚಾರವಿದೆ.

ಈ ತೀರ್ಪಿನಲ್ಲಿ ತಮಿಳುನಾಡಿಗೆ ಅನುಕೂಲಕರವಾದ ಹಲವು ಅಂಶಗಳಿವೆ.ಜಲ ಮಾಪನ ಕೇಂದ್ರವನ್ನು ಬಿಳಿಗುಂಡ್ಲುವಿನಲ್ಲಿ ಗುರುತಿಸಲಾಗಿದೆ. ಅಲ್ಲಿಂದ ಮೆಟ್ಟೂರು ನಡುವಿನ ಪ್ರದೇಶವೂ ಕರ್ನಾಟಕಕ್ಕೇ ಸೇರಿದ್ದರೂ ಆ ಪ್ರದೇಶದಲ್ಲಿ ಮಳೆ ಮತ್ತು ಇತರ ಹಳ್ಳಗಳಿಂದ ಹರಿಯುವ ನೀರನ್ನು ತಮಿಳುನಾಡಿಗೆ ಹರಿದ ನೀರಿನ ಲೆಕ್ಕದಲ್ಲಿ ಸೇರಿಸಿ ಪರಿಗಣಿಸಲಾಗುತ್ತಿಲ್ಲ.ಈ ಪ್ರದೇಶದಲ್ಲಿ ಸುರಿಯುವ ಮಳೆಯ ಪ್ರಮಾಣವನ್ನು ನ್ಯಾಯಮಂಡಳಿ ಪರಿಗಣಿಸಿಲ್ಲ. ಜೊತೆಗೆ ತಮಿಳುನಾಡಿನ ಮುಖಜ ಭೂಮಿ ಪ್ರದೇಶದಲ್ಲಿ ಒದಗುವ ಸುಮಾರು 88 ಟಿ.ಎಂ.ಸಿ ಮತ್ತು  ಅಂತರ್ಜಲದ ಸುಮಾರು 30 ಟಿ.ಎಂ.ಸಿಗೂ ಹೆಚ್ಚು ಇರುವ ನೀರಿನ ಪ್ರಮಾಣವನ್ನು ನ್ಯಾಯಮಂಡಳಿ ಪರಿಗಣಿಸಿರುವುದಿಲ್ಲ. ಇದರಿಂದ ತಮಿಳುನಾಡಿಗೆ ಅನುಕೂಲವಾಗಿದೆ. ಈ ಹಿನ್ನೆಲೆ ಮೇಕೆ ದಾಟುವಿನಲ್ಲಿ ಬೆಂಗಳೂರಿನ ಕುಡಿಯುವ ನೀರನ್ನು ಸಂಗ್ರಹಿಸಲು ಅಣೆಕಟ್ಟು ನಿರ್ಮಾಣ ಮಾಡಲು ಅವಕಾಶ ನೀಡಬೇಕೆಂಬ ರಾಜ್ಯದ ಅದರಲ್ಲೂ ಕಾಂಗ್ರೆಸ್‌ ಸರ್ಕಾರದ ಪ್ರತಿಪಾದನೆಗೆ ಸಮರ್ಥನೆಯಾಗಿ ಒದಗಿಬರುತ್ತದೆ.

ಇಷ್ಟಾದರೂ ತಮಿಳುನಾಡು ಹೆಚ್ಚಿನ ನೀರಿನ ಬೇಡಿಕೆಯನ್ನು ಮುಂದಿಟ್ಟುಕೊಂಡು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದೆ.ಇದೇ ರೀತಿಯಲ್ಲಿ ಕರ್ನಾಟಕ, ಕೇರಳ ಮತ್ತು ಪಾಂಡಿಚೇರಿ ರಾಜ್ಯಗಳೂ ಅರ್ಜಿ ಸಲ್ಲಿಸಿದ್ದು,ವಿಚಾರಣೆ ಬಾಕಿ ಇದೆ.

ಇವೆಲ್ಲವೂ ಸಾಮಾನ್ಯ ಜಲ ವರ್ಷದಲ್ಲಿ ಅಂದರೆ ಸಕಾಲದಲ್ಲಿ ಸಾಕಷ್ಟು ಮಳೆ ಬಂದು, ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ಎಲ್ಲ ಜಲಾಶಯಗಳು ಭರ್ತಿಯಾಗಿ ನೀರು ಯಥೇಚ್ಚವಾಗಿ ಹರಿದುಹೋಗುವಾಗ ಚರ್ಚೆಗೆ ಬರುವುದಿಲ್ಲ.ಯಾವ ವರ್ಷ  ಮಳೆ ಕಡಿಮೆಯಾಗಿ ನೀರಿನ ಹರಿವು ಇಲ್ಲವಾಗುತ್ತದೆಯೋ ಆಗ ಇವೆಲ್ಲವೂ ಮುನ್ನೆಲೆಗೆ ಬರುತ್ತವೆ.

ಸಾಮಾನ್ಯ ವರ್ಷಗಳಲ್ಲಿ ಉತ್ತಮ ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗಿ ತಮಿಳುನಾಡಿಗೆ ನ್ಯಾಯಮಂಡಳಿ ನಿಗದಿ ಪಡಿಸಿದ್ದಕ್ಕಿಂತ ಸುಮಾರು 200 ಟಿ.ಎಂ.ಸಿ ಗಿಂತಲೂ ಹೆಚ್ಚು ನೀರು ಹರಿದಿದೆ. ಆದರೆ ಈಗ ಸಾಕಷ್ಟು ಮಳೆ ಇಲ್ಲದೆ ಜಲಾಶಯಗಳು ಭರ್ತಿಯಾಗದೆ ನಮ್ಮ ರೈತರೇ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ತಮಿಳುನಾಡಿಗೆ ಹೆಚ್ಚು ನೀರು ಬಿಡಲು ಸಾಧ್ಯವಾಗುವುದಿಲ್ಲ. ಆದುದರಿಂದ, ಕಾವೇರಿ ನದಿ ಪ್ರಾಧಿಕಾರವು ಒಂದು ಸಂಕಷ್ಟ ಸೂತ್ರವನ್ನು ರೂಪಿಸಿ ಇಂತಹ ಕಷ್ಟದ ಸಂದರ್ಭದಲ್ಲಿ ನೀರಾವರಿ ಮತ್ತು ಕುಡಿಯುವ ನೀರಿನ     ಹಂಚಿಕೆ ಪ್ರಮಾಣ ನಿಗದಿಮಾಡುವುದು ಅತ್ಯವಶ್ಯಕ.ಇಂತಹ ಸಮಯದಲ್ಲಿ ರಾಜಕೀಯ ಇಚ್ಛಾಶಕ್ತಿಯ ಅಗತ್ಯ ನಿರ್ಮಾಣವಾಗುತ್ತದೆ. ದಿವಂಗತ ಮುಖ್ಯಮಂತ್ರಿ ಬಂಗಾರಪ್ಪ ನೆನಪಿಗೆ ಬರುತ್ತಾರೆ.

 

 ಕಾವೇರಿನ ನೀರಿನ ಹಂಚಿಕೆ:

(ನ್ಯಾಯ ಮಂಡಳಿ ತೀರ್ಪಿನಂತೆ)

2007ರ ಫೆ.5ರಂದು ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪಿನಂತೆ ನೀರು ಹಂಚಿಕೆ ಪ್ರಮಾಣ : 740 ಟಿಎಂಸಿ

ಕಾವೇರಿಯಲ್ಲಿ ಲಭ್ಯವಾಗುವ ಒಟ್ಟು ನೀರಿನ ಪ್ರಮಾಣ - 419 ಟಿಎಂಸಿ

ತಮಿಳುನಾಡಿನ ಪಾಲು- 270 ಟಿಎಂಸಿ

ಕರ್ನಾಟಕದ ಪಾಲು- 30 ಟಿಎಂಸಿ

ಕೇರಳದ ಪಾಲು- 07 ಟಿಎಂಸಿ

ಪುದುಚೆರಿ ಪಾಲು- 10 ಟಿಎಂಸಿ

ಪರಿಸರ ಸಂರಕ್ಷಣೆಗೆ ಮೀಸಲು-04 ಟಿಎಂಸಿ

ತಮಿಳುನಾಡಿನ ಪೂಂಪುಹಾರ್‌ನಲ್ಲಿ ಬಂಗಾಳಕೊಲ್ಲಿ ಯಲ್ಲಿ ವಿಲೀನಗೊಳ್ಳುವ ಕಾವೇರಿ

ಸಮುದ್ರಕ್ಕೆ ಹರಿದು ಹೋಗುವ ಪ್ರಮಾಣ- ಲೆಕ್ಕ ಮಾಡುತ್ತಿಲ್ಲ

ಬಿಳಿಗುಂಡ್ಲು ಮಾಪನ ಕೇಂದ್ರದಿಂದ ತಮಿಳುನಾಡಿಗೆ ಕರ್ನಾಟದಿಂದ ಬಿಡುಗಡೆ ಮಾಡುವ ವಾರ್ಷಿಕ ಪ್ರಮಾಣ : 192 ಟಿಎಂಸಿ

 

ತಮಿಳುನಾಡಿಗೆ ಮಾಸವಾರು ನೀರು ಬಿಡುಗಡೆ ವಿವರ:

ಜೂನ್‌ : 10 ಟಿಎಂಸಿ

ಜುಲೈ : 34 ಟಿಎಂಸಿ

ಆಗಸ್ಟ್‌ : 50 ಟಿಎಂಸಿ

ಸೆಪ್ಟೆಂಬರ್‌ : 40 ಟಿಎಂಸಿ

ಅಕ್ಟೋಬರ್‌ : 22 ಟಿಎಂಸಿ

ನವೆಂಬರ್‌ : 15 ಟಿಎಂಸಿ

ಡಿಸೆಂಬರ್‌ : 8 ಟಿಎಂಸಿ

ಜನವರಿ : 3 ಟಿಎಂಸಿ

ಫೆಬ್ರವರಿ : 2.5 ಟಿಎಂಸಿ

ಮಾರ್ಚ್‌ : 2.5 ಟಿಎಂಸಿ

ಏಪ್ರಿಲ್‌ : 2.5 ಟಿಎಂಸಿ

ಮೇ : 2.5 ಟಿಎಂಸಿ

 

ಕಾವೇರಿ ನದಿ- ಪುಟ್ಟ ಪರಿಚಯ

ಭಾರತದ ದಕ್ಷಿಣದಲ್ಲಿರುವ ಏಕೈಕ ಮಹಾ ನದಿ ಕಾವೇರಿ ಕರ್ನಾಟಕದ ಜೀವನದಿ. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ತಲಕಾವೇರಿಯಲ್ಲಿ ಉಗಮಿಸುವ ಈ ನದಿ, ಮೈಸೂರು ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಮುಖ್ಯವಾಗಿ ಈಶಾನ್ಯ ದಿಕ್ಕಿನಲ್ಲಿ ಹರಿಯುವ ಈ ನದಿಯ ಪಥ ಸುಮಾರು ೭೬೫ ಕಿ.ಮಿ.ಗಳಷ್ಟು ಉದ್ದವಾಗಿದೆ. ಕಾವೇರಿಯ ಉಪನದಿಗಳಲ್ಲಿ ಶಿಂಷಾ, ಹೇಮಾವತಿ, ಅರ್ಕಾವತಿ,[ಕಪಿಲಾ ಅಥವಾ ಕಬಿನಿ], ಲಕ್ಷ್ಮಣ ತೀರ್ಥ ಮತ್ತು ಲೋಕಪಾವನಿ ನದಿಗಳನ್ನು ಹೆಸರಿಸಬಹುದು.

ಕಾವೇರಿ ಜಲಾನಯನ ಪ್ರದೇಶವು 81,155 ಚದರ ಕಿಲೋಮೀಟರ್ (31,334 ಚದರ ಮೈಲಿ) ಎಂದು ಅಂದಾಜಿಸಲಾಗಿದ್ದು, ಹಾರಂಗಿ, ಹೇಮಾವತಿ, ಕಬಿನಿ, ಭವಾನಿ, ಲಕ್ಷ್ಮಣ ತೀರ್ಥ, ಅರ್ಕಾವತಿ ಮತ್ತು ತಮಿಳುನಾಡು-ಕೇರಳ ಗಡಿಯಲ್ಲಿ ಹುಟ್ಟಿ ಕೊಯಮತ್ತೂರು ಮೂಲಕ ಹರಿಯುವ ನೊಯ್ಯಲ್‌   ಸೇರಿದಂತೆ ಹಲವು ಉಪನದಿಗಳಿವೆ. ನದಿ ಜಲಾನಯನ ಪ್ರದೇಶವು ಮೂರು ರಾಜ್ಯಗಳನ್ನು ಮತ್ತು ಕೇಂದ್ರ ಪ್ರದೇಶವನ್ನು ಈ ಕೆಳಗಿನಂತೆ ಒಳಗೊಂಡಿದೆ: ತಮಿಳುನಾಡು, 43,868 ಚದರ ಕಿಲೋಮೀಟರ್ (16,938 ಚದರ ಮೈಲಿ); ಕರ್ನಾಟಕ, 34,273 ಚದರ ಕಿಲೋಮೀಟರ್ (13,233 ಚದರ ಮೈಲಿ); ಕೇರಳ, 2,866 ಚದರ ಕಿಲೋಮೀಟರ್ (1,107 ಚದರ ಮೈಲಿ), ಮತ್ತು ಪುದುಚೇರಿ, 148 ಚದರ ಕಿಲೋಮೀಟರ್ (57 ಚದರ ಮೈಲಿ). ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಬಂಗಾಳಕೊಲ್ಲಿಯನ್ನು ಪ್ರವೇಶಿಸಲು ಸುಮಾರು 800 ಕಿಲೋಮೀಟರ್ (500 ಮೈಲಿ) ಹರಿಯುತ್ತದೆ. ಚಾಮರಾಜನಗರ ಜಿಲ್ಲೆಯಲ್ಲಿ ಇದು ಶಿವನಸಮುದ್ರ ದ್ವೀಪವನ್ನು ರೂಪಿಸುತ್ತದೆ, ಇದರ ಎರಡೂ ಬದಿಯಲ್ಲಿ ಸುಮಾರು 100 ಮೀಟರ್ (330 ಅಡಿ) ಇಳಿಯುವ ಸುಂದರವಾದ ಶಿವನಸಮುದ್ರ ಜಲಪಾತವಿದೆ. ನದಿ ವ್ಯಾಪಕವಾದ ನೀರಾವರಿ ವ್ಯವಸ್ಥೆಗೆ ಮತ್ತು ಜಲವಿದ್ಯುತ್ ಶಕ್ತಿಗೆ ಮೂಲವಾಗಿದೆ. ಈ ನದಿಯು ಶತಮಾನಗಳಿಂದ ನೀರಾವರಿ ಕೃಷಿಯನ್ನು ಬೆಂಬಲಿಸಿದೆ ಮತ್ತು ಪ್ರಾಚೀನ ಸಾಮ್ರಾಜ್ಯಗಳು ಮತ್ತು ದಕ್ಷಿಣ ಭಾರತದ ಆಧುನಿಕ ನಗರಗಳ ಜೀವನಾಡಿಯಾಗಿ ಕಾರ್ಯನಿರ್ವಹಿಸಿದೆ. ಕಾವೇರಿ ನದಿ ನೀರು ಹಂಚಿಕೆ ವ್ಯಾಜ್ಯಗಳು ಸಾವಿರಾರು ವರ್ಷಗಳಿಂದ ನಡೆದು ಬಂದಿದ್ದು ತಮಿಳು ಸಂಗಮ್ ಸಾಹಿತ್ಯದಲ್ಲಿ ಬಹಳವಾಗಿ ವಿವರಿಸಲಾಗಿದೆ.