ಪಾರ್ಕಿನಲ್ಲಿ ಮನೆ ನಿರ್ಮಾಣ: ಲೈಸೆನ್ಸ್‌ ಗೆ ಮಹಾನಗರಪಾಲಿಕೆ ತಾತ್ಕಾಲಿಕ ತಡೆ ಮನೆ ಕಟ್ಟುತ್ತಿರುವುದು ಪಾರ್ಕಿನೊಳಗೋ ಅಲ್ಲವೋ ಎಂದು ಹೇಳಬೇಕಿದೆ ಟೂಡಾ!?

ತುಮಕೂರು ನಗರದಲ್ಲಿ ಸಾರ್ವಜನಿಕ ಆಸ್ತಿ ತಿನ್ನುವವರ ಪಾಲಾಗಿಬಿಟ್ಟಿದೆ, ರಾಜ್ಯಪಾಲರು, ಮುಖ್ಯಮಂತ್ರಿ ಸಲಹೆಗಾರರಾಗಿದ್ದ ಡಾ. ಗುರುಮೂರ್ತಿ ಎಂಬುವವರು ಖರೀದಿಸಿದ್ದ ಸೈಟನ್ನು ಯಾರೋ ಬೋಗಸ್ ದಾಖಲೆ ಸೃಷ್ಟಿಸಿ ಬರೆಸಿಕೊಂಡು ಇನ್ಯಾರಿಗೋ ಮಾರುತ್ತಾರೆ, ಸೈಟಿನ‌ ಮೇಲೆ ರಸ್ತೆ ಮಾಡಲಾಗುತ್ತದೆ, ಫೋರ್ಜರಿ ದಾಖಲೆ ನಂಬಿ ಸೈಟು ಖರೀದಿ ಮಾಡಿದ ಬ್ಯಾಂಕ್ ಮ್ಯಾನೇಜರ್ ಕೋಟಿ ಖರ್ಚು ಮಾಡಿ ಸಾರ್ವಜನಿಕ ಉದ್ಯಾನದಲ್ಲಿ ಮನೆ ಕಟ್ಟತೊಡಗುತ್ತಾರೆ ಪಾರ್ಕು ಮಾರಾಟವಾಗುತ್ತದೆ, ದೇಶಕ್ಕೆಲ್ಲ ಬುದ್ದಿ ಹೇಳುವವರೇ ಪಾರ್ಕನ್ನು ಖರೀದಿಸಿ ಅಕ್ರಮವಾಗಿ ನಿವೇಶನಗಳನ್ನು ವಿಂಗಡಿಸಿ ಮಾರಿದ್ದಾರೆ, 4 ಪಿಸಿಆರ್ ಕೇಸ್ ಆಗಿದೆ, , ಬೆವರ ಹನಿ ಕನ್ನಡ ದಿನಪತ್ರಿಕೆ ಯ ಸಾರ್ವಜನಿಕ ಹಿತಾಸಕ್ತಿಯ ಫಾಲೋ ಅಪ್ ವರದಿ ಇದು, (ʼಬೆವರ ಹನಿʼ ದಿನಪತ್ರಿಕೆಯ ಆಗಸ್ಟ್ 24 ಹಾಗೂ 26ರ ವರದಿಗಳ ಫಾಲೋ ಅಪ್)

ಪಾರ್ಕಿನಲ್ಲಿ ಮನೆ ನಿರ್ಮಾಣ: ಲೈಸೆನ್ಸ್‌ ಗೆ  ಮಹಾನಗರಪಾಲಿಕೆ ತಾತ್ಕಾಲಿಕ ತಡೆ  ಮನೆ ಕಟ್ಟುತ್ತಿರುವುದು ಪಾರ್ಕಿನೊಳಗೋ ಅಲ್ಲವೋ ಎಂದು ಹೇಳಬೇಕಿದೆ ಟೂಡಾ!?

99% ಲೋಕಲ್

ಕುಚ್ಚಂಗಿ ಪ್ರಸನ್ನ

 

ತುಮಕೂರು: ನಗರದ ಬಟವಾಡಿಯ ಪಾರ್ಕಿನಲ್ಲಿ ಅಕ್ರಮವಾಗಿ ಮನೆ ನಿರ್ಮಾಣಕ್ಕೆ ನೀಡಿದ್ದ ಪರವಾನಗಿಯನ್ನು ಮಹಾನಗರಪಾಲಿಕೆ ತಾತ್ಕಾಲಿಕವಾಗಿ ರದ್ದುಪಡಿಸಿದೆ. ಅಂದರೆ ಸದ್ಯಕ್ಕೆ ಮನೆ ನಿರ್ಮಾಣ ನಿಲ್ಲಿಸಿ ಎಂದರ್ಥ.

ಮಹಾನಗರಪಾಲಿಕೆ ಆಯುಕ್ತರು ಸಹಿ ಮಾಡಿರುವ ದಿನಾಂಕ 12.09.2023ರ ಈ ನೋಟೀಸಿನ ಎರಡೂ ಪುಟಗಳನ್ನು ನಿರ್ಮಾಣದ ಅಂತಿಮ ಹಂತದಲ್ಲಿರುವ ಆ ಮನೆಯ ಮುಂಭಾಗ ಇನ್‌ಸುಲೇಶನ್ ಟೇಪ್‌ಗಳಲ್ಲಿ ಅಂಟಿಸಿರುವುದು ಕಂಡು ಬಂದಿದೆ. (ಚಿತ್ರಗಳನ್ನು ನೋಡಿ)

ಬಟವಾಡಿಯ ಸರ್ವೆ ನಂ 35/1ಬಿರಲ್ಲಿ ಸಾರ್ವಜನಿಕ ಉದ್ಯಾನವನಕ್ಕೆಂದು ಮೀಸಲಾಗಿರುವ 0.20 ಗುಂಟೆಯ ಒಂದು ಭಾಗದಲ್ಲಿ ಲೋಕೇಶ್ ಬಾಬು ಎಂಬುವವರು ಅಕ್ರಮವಾಗಿ ಮನೆ ನಿರ್ಮಿಸುತ್ತಿದ್ದಾರೆ ಹಾಗೂ ಪಾರ್ಕನ್ನು 10 ನಿವೇಶನಗಳಾಗಿ ವಿಂಗಡಿಸಿ ಮಾರಾಟ ಮಾಡಲಾಗಿದ್ದು ಇದು ಕಾನೂನು ಬಾಹಿರ ಎಂದು ಕ್ರಮವಾಗಿ ಆಗಸ್ಟ್ 24 ಹಾಗೂ 26ರ ʼಬೆವರ ಹನಿʼ ದಿನಪತ್ರಿಕೆಯಲ್ಲಿ ವಿವರವಾದ ತನಿಖಾ ವರದಿಗಳನ್ನು ಪ್ರಕಟಿಸಿದ್ದು ನಿಮಗೆ ನೆನಪಿರಬಹುದು. ( ಒಂದು ವೇಳೆ ಆ ವರದಿ ನಿಮ್ಮ ಗಮನಕ್ಕೆ ಬಂದಿಲ್ಲದೇ ಹೋದಲ್ಲಿ ಪತ್ರಿಕೆಯ ವೆಬ್ ಸೈಟ್  bevarahani.com  ನಲ್ಲಿ ಓದಿಕೊಳ್ಳಬಹುದು).

ಮಹಾನಗರ ಪಾಲಿಕೆ ಆಯುಕ್ತರ ದಿನಾಂಕ 12.09.2023ರ ಆದೇಶ ಸಂಖ್ಯೆ ತುಮಪಾ/ತಾಂಶಾ/ ಹೆಚ್.ಬಿ.ಎಲ್/ಸಿಆರ್-100/2023-24ರ ಆದೇಶದ ಭಾಗ ಹೀಗಿದೆ:

ಆದೇಶ

“ ಶ್ರೀ ಲೋಕೇಶ್ ಬಾಬು ಇವರು ಪಾಲಿಕೆಗೆ ಸ್ವತ್ತಿನ ಮಾಲೀಕತ್ವದ ದಾಖಲೆಗಳನ್ನು ಮರೆಮಾಚಿ ನಿವೇಶನ ಸಂಖ್ಯೆ -28 ಆಸ್ತಿ ಸಂಖ್ಯೆ 901/28/6063 ಪಿಐಡಿ 89462ರಂತೆ ಆಸ್ತಿ ಸಂಖ್ಯೆ ಪಡೆದು ನಂತರ (ಟಿಎಂಕೆ-ಎಲ್‌ಬಿಪಿಎಎಸ್-18459/22-23/ಬಿಪಿ)ರಂತೆ ವಾಸದ ಉದ್ದೇಶಕ್ಕೆ ಕಟ್ಟಡ ಪರವಾನಗಿ ಕಾನೂನು ಬಾಹಿರವಾಗಿ ಪಡೆದಿರುವುದನ್ನು ಕರ್ನಾಟಕ ಪೌರ ನಿಗಮ ಅಧಿನಿಯಮ 1976ರ ಕಲಂ 443(3)ರಂತೆ ಪ್ರದತ್ತವಾದ ಅಧಿಕಾರ ಚಲಾಯಿಸಿ ಕಟ್ಟಡ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಿ ಆದೇಶಿಸಿದೆ”

ಸಹಿ/- ಆಯುಕ್ತರು,

ತುಮಕೂರು ಮಹಾನಗರಪಾಲಿಕೆ

ಲೋಕೇಶ್ ಬಾಬು ಅವರು ಸ್ವತ್ತಿನ ಮಾಲೀಕತ್ವದ ದಾಖಲೆಗಳನ್ನು ಮರೆಮಾಚಿ ನಿವೇಶನ ಸಂಖ್ಯೆ ಹಾಗೂ ಪಿಐಡಿ ಸಂಖ್ಯೆ ಪಡೆದಿರುವುದಲ್ಲದೇ, ಕಟ್ಟಡ ಪರವಾನಗಿಯನ್ನೂ ಕಾನೂನು ಬಾಹಿರವಾಗಿ ಪಡೆದಿದ್ದಾರೆ ಎಂಬುದಾಗಿ ಆಯುಕ್ತರ ಮೇಲಿನ ಆದೇಶ ಹೇಳುತ್ತದೆ.

‘ಬೆವರ ಹನಿ’ ಪ್ರಶ್ನೆ:

ಲೋಕೇಶ್ ಬಾಬು ಅವರು ಸ್ವತ್ತಿನ ಮಾಲೀಕತ್ವದ ದಾಖಲೆಗಳನ್ನು ಮರೆಮಾಚಿ ನಿವೇಶನ ಸಂಖ್ಯೆ ಹಾಗೂ ಪಿಐಡಿ ಸಂಖ್ಯೆ ಪಡೆದಿದ್ದಾರೆ ಹಾಗೂ ಕಾನೂನುಬಾಹಿರವಾಗಿ ಮನೆ ಕಟ್ಟಲು ಲೈಸೆನ್ಸ್ ಪಡೆದಿದ್ದಾರೆ ಎಂದು ನಿರ್ದಿಷ್ಟವಾಗಿ ಹಾಗೂ ಖಚಿತವಾಗಿ ಹೇಳುತ್ತಿರುವ ಮಹಾನಗರಪಾಲಿಕೆ ತಾನೇ ಮಾಡಿರುವ ಈ ಆದೇಶಗಳನ್ನು ತಕ್ಷಣ ಶಾಶ್ವತವಾಗಿ ರದ್ದುಪಡಿಸಲಿಲ್ಲವೇಕೆ?

ಹಾಗೂ ಪಾಲಿಕೆಯನ್ನು ದಿಕ್ಕುತಪ್ಪಿಸಿದ ಲೋಕೇಶ್ ಬಾಬು ಮತ್ತು ಕಾನೂನು ಬಾಹಿರವಾಗಿ ಖಾತೆ ಮಾಡಿಕೊಟ್ಟದ್ದಲ್ಲದೇ ಮನೆ ಕಟ್ಟಲು ಕಾನೂನು ಬಾಹಿರವಾಗಿ ಪರವಾನಗಿಯನ್ನೂ ನೀಡಿದ ತನ್ನ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಿಲ್ಲವೇಕೆ ?

ಸದ್ಯಕ್ಕೆ ಈ ಪ್ರಶ್ನೆಯನ್ನು ಪಕ್ಕಕ್ಕಿಟ್ಟು, ಲೋಕೇಶ್ ಬಾಬು ಅವರು ಕಾನೂನು ಬಾಹಿರವಾಗಿ ಪಡೆದ ಮನೆ ನಿರ್ಮಾಣ ಪರವಾನಗಿಯನ್ನು ಶಾಶ್ವತವಾಗಿ ರದ್ದುಪಡಿಸುವ ಬದಲು ತಾತ್ಕಾಲಿಕವಾಗಿ ರದ್ದುಪಡಿಸಲು ಕಾರಣಗಳೇನು ಎಂಬುದನ್ನು ಎರಡು ಪುಟಗಳ ಆದೇಶ ಏನಾದರೂ ವಿವರಿಸುತ್ತದೆಯೇ ಎಂಬುದನ್ನು ನೋಡೋಣ.

“ ತುಮಕೂರು ನಗರದ ವಾರ್ಡ್ ನಂ.35ರ ಬಟವಾಡಿ ಸರ್ವೆ ನಂ. 35 ರಿ. ಸರ್ವೆ ನಂ.35/1 ಬಿರಲ್ಲಿ ವಿಸ್ತೀರ್ಣ 0-20 ಗುಂಟೆ ಜಮೀನನ್ನು ಅಸಿಯಾಬಿ ಮತ್ತು ಮಗಳಾದ ರಾಬಿಯಾಬಿರವರಿಂದ ಸೈಯದ್ ಗೌಸ್ ಇವರು ದಿ.10.08.1982ರಂದು ಕ್ರಯಕ್ಕೆ ಪಡೆದು ನಂತರ ಶ್ರೀಮತಿ ಸಿ.ಎನ್.ಶಾರದ ಕೋಂ ಎಸ್.ನಾಗಣ್ಣ ಇವರು ದಿ. 13.06.2005ರಂದು ಕ್ರಯಕ್ಕೆ ಪಡೆದು ಅಳತೆ 68*320 ಅಡಿಗಳಿಗೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 13.08.2005ರಂದು ಬಿಡಿ ನಿವೇಶನ ಮಂಜೂರಾತಿ ಪಡೆದಿದ್ದಾರೆ.

( ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರವು ತನ್ನ ದಿನಾಂಕ 13.08.2005ರಂದು ಈ 0.20 ಗುಂಟೆ ಸ್ವತ್ತನ್ನು ಬಿಡಿ ನಿವೇಶನ ಎಂಬುದಾಗಿ ಪರಿವರ್ತಿಸಿ ಕೊಟ್ಟಿತ್ತು, ಆದರೆ ಅದೇ ಪ್ರಾಧಿಕಾರವು ತನ್ನ ದಿನಾಂಕ 26.06.2012ರ ಸಭೆಯಲ್ಲಿ “ ಶ್ರೀಮತಿ ಸಿ.ಎನ್.ಶಾರದ ಕೋಂ ಎಸ್.ನಾಗಣ್ಣ ಅವರು ಬಿಡಿ ನಿವೇಶನವನ್ನು ಅಕ್ರಮವಾಗಿ ಬಹು ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟ ಮಾಡಿದ್ದಾರೆಂದು ತಿಳಿಸಿ ತನ್ನ ಈ ಬಿಡಿ ನಿವೇಶನ ಪರಿವರ್ತನೆ ಆದೇಶವನ್ನು ರದ್ದುಪಡಿಸಿದೆ.)

ಸದರಿ ಬಿಡಿ ನಿವೇಶನದ ನಕ್ಷೆಯಂತೆ 53*32 ಅಡಿ ವಿಸ್ತೀರ್ಣದ ನಿವೇಶನ ಸಂಖ್ಯೆ ಎಸ್ 10ನ್ನು ಜಿ.ಕೆ.ರವಿರವರಿಗೆ ಕ್ರಯಕ್ಕೆ ನೀಡಿದ್ದಾರೆ. ಈ ಜಿ.ಕೆ.ರವಿ ಅವರಿಂದ ಶ್ರೀಮತಿ ಲಕ್ಷ್ಮಮ್ಮ ಕೋಂ ಹನುಮಂತಯ್ಯ ಹಾಗೂ ಲಕ್ಷ್ಮಮ್ಮ ಕೋಂ ಹನುಮಂತಯ್ಯ ಇವರು ಖರೀದಿಸಿದ್ದು ಲಕ್ಷ್ಮಮ್ಮ ಅವರು ಪಾಲಿಕೆಯಿಂದ ಆಸ್ತಿ ಸಂಖ್ಯೆ 2863/4160/4719 ಪಿಐಡಿ 75254ರಂತೆ ಖಾತೆ ಹೊಂದಿದ್ದಾರೆ. ಈ ಲಕ್ಷ್ಮಮ್ಮ ಎಂಬುವವರು ಇದೇ ಮಹಾನಗರಪಾಲಿಕೆಗೆ ನೊಟೀಸ್‌ನ ಉಲ್ಲೇಖ (1)ರಂತೆ ದೂರು ಸಲ್ಲಿಸಿ, ತಮ್ಮ ನಿವೇಶನದಲ್ಲಿ ಲೋಕೇಶ್ ಬಾಬು ಎಂಬುವವರು ಕಟ್ಟಡ ನಿರ್ಮಿಸುತ್ತಿದ್ದು ಈ ನಿವೇಶನವನ್ನು ಅಳತೆ ಮಾಡಿಸಿಕೊಡಿ ಎಂದು ದಿನಾಂಕ 30.09.2022ರಂದು ದೂರು ನೀಡಿದ್ದಾರೆ.

‘ಬೆವರ ಹನಿ’ ಪ್ರಶ್ನೆ:

( ಶ್ರೀಮತಿ ಲಕ್ಷ್ಮಮ್ಮ ಅವರು ತಮ್ಮ ನಿವೇಶನದಲ್ಲಿ ಲೋಕೇಶ್ ಬಾಬು ಎಂಬುವವರು ಅಕ್ರಮವಾಗಿ ಮನೆ ಕಟ್ಟುತ್ತಿದ್ದಾರೆ, ಆದ್ದರಿಂದ ನಮ್ಮ ನಿವೇಶನವನ್ನು ಅಳತೆ ಮಾಡಿಕೊಡಿ ಎಂದು ದೂರು ನೀಡಿ ಒಂದು ವರ್ಷವಾದರೂ ಸಮಸ್ಯೆಯನ್ನು ಪಾಲಿಕೆ ಇತ್ಯರ್ಥ ಪಡಿಸಿಲ್ಲವೇಕೆ?)

ಪಾಲಿಕೆ ಆಯುಕ್ತರ ಈ ಆದೇಶದ ಎರಡನೇ ಉಲ್ಲೇಖದಲ್ಲಿ ಡಾ.ಎಸ್.ಗುರುಮೂರ್ತಿ ಎಂಬುವವರ ಪ್ರಸ್ತಾಪವಿದೆ. ಡಾ.ಎಸ್.ಗುರುಮೂರ್ತಿ ಅವರು ದಿನಾಂಕ 20.10.2022ರಂದು ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದಾರೆ. ಅದನ್ನು ಪಾಲಿಕೆ ಪರಿಶೀಲಿಸಿದ್ದು ಆ ಪ್ರಕಾರ: ಬಟವಾಡಿ ಸರ್ವೆ ನಂ. 35( ಭಾಗ)ರಲ್ಲಿ ದಿ.20.08.1982ರಂದು ಅನುಮೋದನೆಗೊಂಡಿರುವ ವಿನ್ಯಾಸ ನಕ್ಷೆಯಲ್ಲಿನ ಬಡಾವಣೆಯ 50*30 ಅಡಿ ವಿಸ್ತೀರ್ಣದ ನಿವೇಶನ ಸಂಖ್ಯೆ 28ನ್ನು ಲೇಔಟ್‌ನ ಮೂಲ ಮಾಲೀಕರಾದ ಅಸಿಯಾಬಿ ಮತ್ತು ಅವರ ಮಗಳಾದ ರಾಬಿಯಾಬಿ ಅವರಿಂದ ಸಿದ್ದರಾಮಕ್ಕ ಎಂಬುವವರು ದಿ. 26.8.1982ರಂದು ಕ್ರಯಕ್ಕೆ ಪಡೆದಿದ್ದಾರೆ, ಸದರಿ ಸೈಟನ್ನು ಈ ಡಾ. ಗುರುಮೂರ್ತಿ ದಿ.3.5.1983ರಂದು ಸಿದ್ದರಾಮಕ್ಕನವರಿಂದ ಕ್ರಯಕ್ಕೆ ಪಡೆದಿದ್ದಾರೆ. ಆದರೆ 28ನೇ ಸಂಖ್ಯೆಯ ಈ ನಿವೇಶನವನ್ನು ಮೊಯಿನ್ ಮಹಮ್ಮದ್ ಬಿನ್ ಆದಿಲ್ ಅಹಮದ್ ಎಂಬಾತ ಬೋಗಸ್ ಕ್ರಯಪತ್ರ ಹಾಗೂ ಖೊಟ್ಟಿ ಸಹಿ ಮೂಲಕ ಖೊಟ್ಟಿ ಕ್ರಯಪತ್ರವನ್ನು ದಿ.11.09.2018ರಂದು ಪಡೆದು, ದಿ. 28.9.2018ರಂದು ಪಾಲಿಕೆಯಿಂದ ಆಸ್ತಿ ಸಂಖ್ಯೆ ವರ್ಗಾವಣೆಯನ್ನೂ ಪಡೆದುಕೊಂಡಿದ್ದಾನೆ. ನಂತರ ಲೋಕೇಶ್ ಬಾಬು ಈ ನಿವೇಶನದಲ್ಲಿ ಮನೆ ಕಟ್ಟಲು ಹೊರಟಿದ್ದಾರೆ. ಆದ್ದರಿಂದ ಮೊಯಿನ್ ಮಹಮ್ಮದ್ ಅವರಿಗೆ ಮಾಡಿಕೊಟ್ಟಿರುವ ಖಾತೆಯನ್ನು ಅಮಾನ್ಯಗೊಳಿಸಲು ಹಾಗೂ ಸೈಟ್ ನಂ 28ನ್ನು ಗುರುತಿಸಿಕೊಡುವಂತೆ ಡಾ.ಗುರುಮೂರ್ತಿ ಪಾಲಿಕೆಯನ್ನು ದಿ. 20.10.2022ರ ದೂರು ನೀಡಿದ್ದಾರೆ.

‘ಬೆವರ ಹನಿ’ ಪ್ರಶ್ನೆ:

ಡಾ.ಗುರುಮೂರ್ತಿಯವರ ದೂರಿನಲ್ಲಿ ಸತ್ಯಾಂಶವಿದ್ದಲ್ಲಿ ದೂರು ನೀಡಿ ಒಂದು ವರ್ಷವಾಗುತ್ತ ಬಂದರೂ ಅಕ್ರಮವಾಗಿ ಮೊಯಿನ್ ಮಹಮ್ಮದ್ ಎಂಬಾತನಿಗೆ ಮಾಡಿಕೊಟ್ಟಿರುವ ಖಾತೆಯನ್ನು ಪಾಲಿಕೆ ಅಮಾನ್ಯಗೊಳಿಸಿಲ್ಲವೇಕೆ ಹಾಗೂ 28ನೇ ಸಂಖ್ಯೆಯ ನಿವೇಶನವನ್ನು ಗುರುತಿಸಿಕೊಟ್ಟಿಲ್ಲವೇಕೆ?

ಆಯುಕ್ತರ ಮೇಲ್ಕಂಡ ಆದೇಶದ ಪುಟ 2ರಲ್ಲಿ ಮುಂದುವರೆದಿರುವಂತೆ ಲಕ್ಷ್ಮಮ್ಮ ಹಾಗೂ ಡಾ.ಗುರುಮೂರ್ತಿ ಇವರ ದೂರುಗಳನ್ನು ಪರಿಶೀಲಿಸಿದ ಬಳಿಕ ಬಟವಾಡಿ ಸರ್ವೆ ನಂ. 35(ಭಾಗ)ರ ದಿ.20.08.1982ರಂದು ಅನುಮೋದನೆಯಾಗಿರುವ ಬಡಾವಣೆಯ ಪಾರ್ಕ್ ಜಾಗದ ವಿಸ್ತೀರ್ಣ 00.11 ಗುಂಟೆ ಹಾಗೂ ದಿ.02.07.1982ರಂದು ಅನುಮೋದನೆಯಾಗಿರುವ ಬಡಾವಣೆಯ ಪಾರ್ಕ್ ಜಾಗದ ವಿಸ್ತೀರ್ಣ 00.09 ಗುಂಟೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ದಿ.13.08.2005ರಂದು ಬಟವಾಡಿ ಸರ್ವೆ ನಂ. 35/1ಬಿ ಎಂದು ಗುರುತಿಸಿ 00.20 ಗುಂಟೆಗೆ ಬಿಡಿ ನಿವೇಶನ ಎಂದು ಅನುಮೋದನೆ ನೀಡಿರುವುದು ಓವರ್ ಲ್ಯಾಪ್ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪಾಲಿಕೆ ಹೇಳಿದೆ.

ಅಲ್ಲದೇ ಲೋಕೇಶ್ ಬಾಬು ಅವರಿಗೆ ಮನೆ ನಿರ್ಮಾಣಕ್ಕೆ ಪರವಾನಗಿ ನೀಡಿದ ನಂತರ , ಮುಂದಿನ ಆದೇಶದವರೆಗೆ ಕಟ್ಟಡ ನಿರ್ಮಾಣ ಕಾಮಗಾರಿ ನಿಲ್ಲಿಸುವಂತೆ ಪಾಲಿಕೆ ದಿ.28.11.2022ರಂದು ನೋಟೀಸ್ ನೀಡಿತ್ತಂತೆ.ಆದರೆ ಲೋಕೇಶ್ ಬಾಬು ಈ ಕುರಿತು ತುಮಕೂರಿನ ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಓಎಸ್ ಸಂ. 469/2023ರಲ್ಲಿ ಪ್ರಕರಣ ದಾಖಲಿಸಿ, ಮನೆ ನಿರ್ಮಾಣ ಮುಂದುವರೆಸಿದ್ದಾರೆ.

‘ಬೆವರ ಹನಿ’ ಪ್ರಶ್ನೆ:

( ಮನೆ ನಿರ್ಮಾಣ ಹೆಚ್ಚೂ ಕಡಿಮೆ ಮುಗಿದಿದ್ದು, ನೆಲ ಮಹಡಿ ಚಾವಣಿಗೆ ಆರ್‌ಸಿಸಿ ಹಾಕಿ, ಒಳ ಭಾಗದಲ್ಲಿ ಪ್ಲಾಸ್ಟರಿಂಗ್ ಕೂಡಾ ಮುಗಿದಿದೆ. ಮನೆ ಕಟ್ಟಿ ಮುಗಿದರೂ ಸುಮ್ಮನೆ ನೋಡುತ್ತ ಅಡ್ಡಾಡುತ್ತಿದ್ದ ಪಾಲಿಕೆಯ ಸಂಬಂಧಿಸಿದ ಅಧಿಕಾರಿ ಹಾಗೂ ನೌಕರರ ವಿರುದ್ಧ ಪಾಲಿಕೆ ಯಾವ ಶಿಸ್ತು ಕ್ರಮವನ್ನೂ ಜರುಗಿಸಿಲ್ಲವೇಕೆ?)

ಹೀಗಾಗಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರವು ಈ ಓವರ್ ಲ್ಯಾಪ್ ಆಗಿರುವ ಕುರಿತು ಅಂತಿಮ ವರದಿ ನೀಡುವವರೆಗೂ , ಲೋಕೇಶ್ ಬಾಬು ನ್ಯಾಯಾಲಯದಲ್ಲಿ ಹೂಡಿರುವ ಪ್ರಕರಣದ ಅಂತಿಮ ಆದೇಶದವರೆಗೆ ಮತ್ತು ಡಾ.ಎಸ್.ಗುರುಮೂರ್ತಿ ಅವರ ಸೈಟ್ ಸಂ. 28ರ ಬೋಗಸ್ ಕ್ರಯದ ಕುರಿತು ಈಗಾಗಲೇ ಎಫ್ ಐ ಆರ್ ಅಗಿರುವ ಪ್ರಕರಣದ ತನಿಖೆ ಮುಗಿಯುವವರೆಗೂ ಕಟ್ಟಡ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸುವುದು ಸೂಕ್ತವೆಂದು ಆಯುಕ್ತರು ಭಾವಿಸಿ ಮೇಲಿನ ಆದೇಶ ಹೊರಡಿಸಿದ್ದಾರೆ.

ಆದರೆ ʼ ಬೆವರ ಹನಿʼ ದಿನಪತ್ರಿಕೆಯು ಆಗಸ್ಟ್ 24ರ ಸಂಚಿಕೆಯ ಮುಖಪುಟದಲ್ಲಿ ಪ್ರಕಟಿಸುವ ವರದಿಯ ಪ್ರಕಾರ ಪ್ರಶ್ನೆ ಇರುವುದು ಲೋಕೇಶ್ ಬಾಬು ಅವರು ಮನೆ ಕಟ್ಟುತ್ತಿರುವ ಜಾಗ ಸರ್ಕಾರವು ಬಟವಾಡಿ ಸರ್ವೆ ನಂ. 35(ಭಾಗ)ರ ದಿ.20.08.1982ರಂದು ಅನುಮೋದನೆಯಾಗಿರುವ ಬಡಾವಣೆಯ ಪಾರ್ಕ್ ಜಾಗದ ವಿಸ್ತೀರ್ಣ 00.11 ಗುಂಟೆ ಹಾಗೂ ದಿ.02.07.1982ರಂದು ಅನುಮೋದನೆಯಾಗಿರುವ ಬಡಾವಣೆಯ ಪಾರ್ಕ್ ಜಾಗದ ವಿಸ್ತೀರ್ಣ 00.09 ಗುಂಟೆ (ಒಟ್ಟು 00.20 ಗುಂಟೆಯೊಳಗೇ ಬರುತ್ತದೆಯೇ ಅಲ್ಲವೇ ಎಂಬುದು. ಈ ಕುರಿತ ಸ್ಪಷ್ಟನೆಯನ್ನು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ -ಟೂಡಾ ನೀಡಬೇಕು ಎಂದು ಮಹಾನಗರಪಾಲಿಕೆ ಹೇಳುತ್ತಿದೆ.

ಟೂಡಾ ಆಯುಕ್ತರು ಏನು ಹೇಳುತ್ತಾರೆ ?

ಈ ಪ್ರಕರಣದಲ್ಲಿ ನಾವು ಈಗಾಗಲೇ ಜಂಟಿ ಸರ್ವೆ ಮಾಡಿದ್ದೇವೆ, ಮಹಾನಗರ ಪಾಲಿಕೆ ಆಯುಕ್ತರ ದಿ.12.09.2023ರ ನಡವಳಿಯ ಪ್ರಕಾರವೂ ಮತ್ತೊಮ್ಮೆ ಸರ್ವೆ ಮಾಡುತ್ತೇವೆ. ಅಂತಿಮವಾಗಿ ಮಹಾನಗರಪಾಲಿಕೆಗೆ ವರದಿ ಸಲ್ಲಿಸುತ್ತೇವೆ.

 

ಗೋಪಾಲ್ ಜಾಧವ್

ಆಯುಕ್ತರು,

ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ