ನಗರದ ಜೀವದಾಯಿನಿ ಕೆರೆಗಳಲ್ಲಿ ಮಾಲಿನ್ಯ !? ನಡೆದಿದೆ ಯುಜಿಡಿ ಕಾಮಗಾರಿ- ಸೇರುತ್ತಿದೆ ಕೊಳಚೆ ನೀರು 

‘ ಬೆವರ ಹನಿ’ ವಿಶೇಷ ಆರ್.ಎಸ್.ಅಯ್ಯರ್

ನಗರದ ಜೀವದಾಯಿನಿ ಕೆರೆಗಳಲ್ಲಿ ಮಾಲಿನ್ಯ !?   ನಡೆದಿದೆ ಯುಜಿಡಿ ಕಾಮಗಾರಿ- ಸೇರುತ್ತಿದೆ ಕೊಳಚೆ ನೀರು 


ನಗರದ ಜೀವದಾಯಿನಿ ಕೆರೆಗಳಲ್ಲಿ ಮಾಲಿನ್ಯ !?


ನಡೆದಿದೆ ಯುಜಿಡಿ ಕಾಮಗಾರಿ- ಸೇರುತ್ತಿದೆ ಕೊಳಚೆ ನೀರು 

‘ ಬೆವರ ಹನಿ’ ವಿಶೇಷ
ಆರ್.ಎಸ್.ಅಯ್ಯರ್


ತುಮಕೂರು: ‘ಸ್ಮಾರ್ಟ್ಸಿಟಿ’ ಎನಿಸಿರುವ ತುಮಕೂರು ನಗರದಲ್ಲಿ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಒಂಭತ್ತು ಕೆರೆಗಳಲ್ಲಿ ಬಹುತೇಕ ಕೆೆರೆಗಳಿಗೆ ಕೊಳಚೆ ನೀರು ಹರಿದುಬರುತ್ತಿದೆಯೆಂಬ ಆತಂಕ ಹಾಗೂ ಕೆರೆಯಂಗಳದೊಳಗೇ ಒಳಚರಂಡಿ ಯೋಜನೆಯ ಮ್ಯಾನ್‌ಹೋಲ್ ಮತ್ತು ಪೈಪ್‌ಲೈನ್ ಕಾಮಗಾರಿ ಆಗಿದೆಯೆಂಬ ಕಳವಳಕಾರಿ ಸಂಗತಿ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.


ಪಾಲಿಕೆ ವ್ಯಾಪ್ತಿಯ ಕೆರೆಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲು ಸಮಿತಿಯೊಂದು ಅಸ್ತಿತ್ವದಲ್ಲಿದೆ. ಪಾಲಿಕೆಯ ಉಪ ಆಯುಕ್ತರ (ಅಭಿವೃದ್ಧಿ) ಅಧ್ಯಕ್ಷತೆಯಲ್ಲಿ ನಡೆದಿರುವ ಈ ಸಮಿತಿ ಸಭೆಯಲ್ಲಿ ಇಂತಹುದೊಂದು ಗಂಭೀರ ವಿಷಯ ಪ್ರಸ್ತಾಪವಾಗಿದ್ದು, ಆ ಮೂಲಕ ಚರ್ಚಾಸ್ಪದ ವಿಷಯ ಬೆಳಕಿಗೆ ಬಂದಿದೆ. ಸಮಿತಿ ಸಭೆಯಲ್ಲಿ ಪಾಲಿಕೆ ಆಯುಕ್ತರು ಒಳಗೊಂಡು, ನಗರಾಭಿವೃದ್ಧಿ ಪ್ರಾಧಿಕಾರ, ಸಣ್ಣನೀರಾವರಿ ಇಲಾಖೆ, ಪೊಲೀಸ್ ಇಲಾಖೆ, ಭೂದಾಖಲೆಗಳ ಇಲಾಖೆ, ಸರ್ವೆ ಶಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರೆಂಬುದು ಗಮನಾರ್ಹ. 


ಪ್ರತಿ ಕೆರೆಯಲ್ಲೂ ಕೊಳಚೆ ನೀರಿನ ಸಮಸ್ಯೆ ಇದೆಯೆಂಬುದು ಈ ಸಭೆಯಲ್ಲಿ ಚರ್ಚಿತವಾಗಿರುವ ಪ್ರಮುಖ ಅಂಶ. ಹೀಗಾಗಿ ಕೊಳಚೆ ನೀರು ಕೆರೆಗೆ ಹರಿದುಬರುವುದನ್ನು ನಿರ್ಬಂಧಿಸಬೇಕೆಂಬುದು ಈ ಸಭೆಯ ತೀರ್ಮಾನ ಹಾಗೂ ಸಂಬಂಧಿತ ಇಂಜಿನಿಯರ್‌ಗಳಿಗೆ ನೀಡಲಾಗಿರುವ ಸೂಚನೆ.


ಕ್ಯಾತಸಂದ್ರದ ಗುಂಡ್ಲಮ್ಮನ ಕೆರೆಗೆ ಹರಿಯುವ ಕೊಳಚೆ ನೀರನ್ನು ಸಂಸ್ಕರಿಸಿ ಶುದ್ಧೀಕರಿಸಿದ ನೀರನ್ನು ಕೆರೆಗೆ ಹರಿಸುವ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದೆ. ಇಷ್ಟಾಗಿಯೂ ಬೇರೆಡೆಗಳಿಂದ ಕೊಳಚೆ ನೀರು ಹರಿಯುವುದನ್ನು ನಿರ್ಬಂಧಿಸಬೇಕು. ಶೆಟ್ಟಿಹಳ್ಳಿ ಕಂದಕಟ್ಟೆ ಕೆರೆಗೆ ಜಯನಗರ ಮತ್ತಿತರ ಕಡೆಯಿಂದ ಬರುವ ಕೊಳಚೆ ನೀರನ್ನು ನಿರ್ಬಂಧಿಸಬೇಕು. ಇದೇ ರೀತಿ ಸತ್ಯಮಂಗಲ ಕೆರೆ, ಹೊನ್ನೇನಹಳ್ಳಿ ಲಿಂಗಾಪುರ ಕೆರೆ, ಹೊನ್ನೇನಹಳ್ಳಿ ಕೆರೆ, ಗಾರೆನರಸಯ್ಯನ ಕಟ್ಟೆ, ಉಪ್ಪಾರಹಳ್ಳಿ ಕೆರೆಗಳಲ್ಲೂ ಕೊಳಚೆ ನೀರನ್ನು ನಿರ್ಬಂಧಿಸಬೇಕೆಂದು ಸಭೆಯಲ್ಲಿ ಚರ್ಚಿಸಲಾಗಿದೆ. 


ಇತರ ಕೆರೆಗಳ ಪರಿಸ್ಥಿತಿ


ಇವಿಷ್ಟೇ ಅಲ್ಲದೆ ಪಾಲಿಕೆ ವ್ಯಾಪ್ತಿ ಹೊರತಾದ ಆದರೆ ನಗರದೊಳಗಿನ ಇತರೆ ಕೆರೆಗಳ ಬಗ್ಗೆಯೂ ಪರಿಶೀಲಿಸಲಾಗಿದೆ. 


ಅಕ್ಕ-ತಂಗಿ ಕೆರೆಯು ಅರಣ್ಯ ಇಲಾಖೆಯ ಸುಪರ್ದಿನಲ್ಲಿದ್ದು, ಕೆರೆಯೊಳಗೇ ಯುಜಿಡಿ ಮ್ಯಾನ್‌ಹೋಲ್‌ಗಳಿವೆ. ಇದರ ನಿರ್ವಹಣೆ ಪಾಲಿಕೆಗೆ ಕಷ್ಟಸಾಧ್ಯ. ಮಳೆಗಾಲದಲ್ಲಿ ಮಳೆ ನೀರು ತುಂಬಿ ಪಕ್ಕದ ತಗ್ಗುಪ್ರದೇಶಗಳಿಗೆ ಹರಿದು ಸಮಸ್ಯೆ ಆಗುತ್ತಿದೆ. ಮರಳೂರು ಕೆರೆಗೆ ಕಲುಷಿತ ಮತ್ತು ರೊಚ್ಚು ನೀರು ಹರಿದುಬರುತ್ತಿದೆಯೆಂದು ಗುರುತಿಸಲಾಗಿದೆ.


ಕೆರೆಗಳೊಳಗೇ ಯುಜಿಡಿ


ಮತ್ತೊಂದು ಕಳವಳಕಾರಿ ಸಂಗತಿಯ ಬಗೆಗೂ ಸಭೆಯು ಪರಿಶೀಲಿಸಿದೆ. ಅದೇನೆಂದರೆ ನಗರದ ಅನೇಕ ಕೆರೆಗಳ ಒಳಗೆ ಒಳಚರಂಡಿ ಯೋಜನೆಯ ಮ್ಯಾನ್‌ಹೋಲ್ ಮತ್ತು ಪೈಪ್‌ಲೈನ್ ಕಾಮಗಾರಿ ಆಗಿರುವುದು ಮತ್ತು ಇದರಿಂದಲೂ ಕಲುಷಿತ ನೀರು ಸೇರ್ಪಡೆಗೊಳ್ಳಬಹುದೆಂಬುದು. ಇದಂತೂ ಸಾರ್ವಜನಿಕ ಚರ್ಚೆಗೆ ಗ್ರಾಸವೊದಗಿಸಿದೆ.


ಇಡೀ ತುಮಕೂರು ಮಹಾನಗರದ ಎಲ್ಲ ಪ್ರಮುಖ ಚರಂಡಿಗಳು ಹಾಗೂ ರಾಜಕಾಲುವೆಗಳಲ್ಲಿ ಹರಿಯುವ ಕೊಳಚೆ ನೀರನ್ನು ಭೀಮಸಂದ್ರ ಕೆರೆಗೆ ಹರಿಸಲಾಗುತ್ತಿದೆ, ಅಲ್ಲಿ ಶುದ್ದೀಕರಣ ಘಟಕ ಕಾರ‍್ಯ ನಿರ‍್ವಹಿಸುತ್ತಿದೆಯಾದರೂ ಭೀಮಸಂದ್ರದ ಕೆರೆಯ ನೀರು ಮಲಿನವಾಗಿ ಗ್ರಾಮದ ಜನರ ಪಾಲಿಗೆ ಜೀವಂತ ನರಕ ಎನಿಸಿಬಿಟ್ಟಿದೆ.ಪಾಲಿಕೆ ವ್ಯಾಪ್ತಿ ಕೆರೆಗಳು


ತುಮಕೂರು ಮಹಾನಗರ ಪಾಲಿಕೆಗೆ ವಾಸ್ತವವಾಗಿ 11 ಕೆರೆಗಳು ಹಸ್ತಾಂತರ ಆಗಿದ್ದರೂ, ನಗರದ ಅಂತರಸನಹಳ್ಳಿ ಸಮೀಪವಿರುವ ಏಗೇನಹಳ್ಳಿ ಕಟ್ಟೆ (ಈಗ ಅದು ಎಪಿಎಂಸಿ ತರಕಾರಿ ಮಾರುಕಟ್ಟೆ ಮತ್ತು ಕೆ.ಎಸ್.ಆರ್.ಟಿ.ಸಿ. ಡಿಪೋ ಆಗಿದೆ) ಮತ್ತು ಅಳಶೆಟ್ಟಿ ಕೆರೆ (ಈಗ ಹೇಮಾವತಿ ಯೋಜನೆ ಕಚೇರಿ, ಅರಣ್ಯ ಇಲಾಖೆ, ರೇಷ್ಮೆ ಇಲಾಖೆ, ಸಾಯಬಾಬಾ ದೇವಾಲಯ, ರಾಮಕೃಷ್ಣ-ವಿವೇಕಾನಂದ ಆಶ್ರಮ, ಕೆಲವು ಹಾಸ್ಟೆಲ್ ಗಳು ನರ‍್ಮಾಣಗೊಂಡಿರುವ ಸ್ಥಳ) ಪ್ರಸ್ತುತ ಅಸ್ತಿತ್ವದಲ್ಲಿ ಇಲ್ಲ. ಹೀಗಾಗಿ ಮಿಕ್ಕ 9 ಕೆರೆಗಳಾದ ಬಡ್ಡಿಹಳ್ಳಿ ಕೆರೆ, ಕ್ಯಾತಸಂದ್ರದ ಗುಂಡ್ಲಮ್ಮನ ಕೆರೆ, ಶೆಟ್ಟಿಹಳ್ಳಿ ಕಂದಕಟ್ಟೆ ಕೆರೆ, ಸತ್ಯಮಂಗಲ ಕೆರೆ, ಹೊನ್ನೇನಹಳ್ಳಿ- ಲಿಂಗಾಪುರ ಕೆರೆ, ಹೊನ್ನೇನಹಳ್ಳಿ ಕೆರೆ, ಯಲ್ಲಾಪುರ ಹೊಸ ಕೆರೆ,  ಗಾರೆನರಸಯ್ಯನಕಟ್ಟೆ ಮತ್ತು ಉಪ್ಪಾರಹಳ್ಳಿ ಕಂದಕಟ್ಟೆ- ಇವುಗಳು ಪಾಲಿಕೆಯ ಸುಪರ್ದಿಗೊಳಪಟ್ಟಿವೆ.


ಚರ‍್ಚೆಯೇನೋ ಓಕೆ
ಕ್ರಮ ಏನು, ಯಾವಾಗ?


‘ನಗರದ ಕೆರೆಗಳ ಆತಂಕಕಾರಿ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳ ಸಭೆ ಚರ್ಚಿಸಿರುವುದು ಸರಿ. ಆದರೆ ಇದರ ಫಲಿತಾಂಶ ಏನು? ಕ್ರಮ ಜರುಗಿಸುವುದು ಯಾವಾಗ?’ ಎಂಬುದು ಸಾರ್ವಜನಿಕರ ಪ್ರಶ್ನೆ.


ತುಮಕೂರು ಮಹಾನಗರದ ಕೊಳಚೆಯನ್ನು ಒಡಲಲ್ಲಿ ತುಂಬಿಕೊಳ್ಳುತ್ತಿರುವ ಭೀಮ ಸಂದ್ರದ ಕೆರೆ