ಹಳ್ಳಿ ಹೈದನ ನೂರೆಂಟು ನೆನಪು-5 ಸಿ.ಚಿಕ್ಕಣ್ಣ, ಐಎಎಸ್(ವಿ) “ ಮದ್ಗಿರಿವರೆಗೆ ಕೆಂಪು ಮೂತಿ ಬಸ್ಸು, ಪುರವರದವರೆಗೆ ಕರಿ ಮೂತಿ ಬಸ್ಸು” (ಹಿಂದಿನ ‘ಕಿನ್ನರಿ’ಯಿಂದ)

ಹಳ್ಳಿ ಹೈದನ ನೂರೆಂಟು ನೆನಪು-5 ಸಿ.ಚಿಕ್ಕಣ್ಣ, ಐಎಎಸ್(ವಿ) “ ಮದ್ಗಿರಿವರೆಗೆ ಕೆಂಪು ಮೂತಿ ಬಸ್ಸು, ಪುರವರದವರೆಗೆ ಕರಿ ಮೂತಿ ಬಸ್ಸು” (ಹಿಂದಿನ ‘ಕಿನ್ನರಿ’ಯಿಂದ)

ಹಳ್ಳಿ ಹೈದನ ನೂರೆಂಟು ನೆನಪು-5 ಸಿ.ಚಿಕ್ಕಣ್ಣ, ಐಎಎಸ್(ವಿ) “ ಮದ್ಗಿರಿವರೆಗೆ ಕೆಂಪು ಮೂತಿ ಬಸ್ಸು, ಪುರವರದವರೆಗೆ ಕರಿ ಮೂತಿ ಬಸ್ಸು” (ಹಿಂದಿನ ‘ಕಿನ್ನರಿ’ಯಿಂದ)

ತುಮಕೂರು ಜಿಲ್ಲೆಯವರೇ ಆದ ವಿಶ್ರಾಂತ ಐಎಎಸ್ ಅಧಿಕಾರಿ ಸಿ.ಚಿಕ್ಕಣ್ಣನವರ ಜೀವನ ಚರಿತ್ರೆ ‘ಅಗ್ನಿ ಹಂಸ’ ಪುಸ್ತಕದ ಅಧ್ಯಾಯಗಳನ್ನು ಕಳೆದ ನಾಲ್ಕು ವಾರಗಳಿಂದ ಓದುತ್ತಿದ್ದೀರಿ, ಈ ಬರಹ ಕೇವಲ ಅವರ ಮುಕ್ಕಾಲು ಶತಮಾನದ ಬದುಕಿನ ಖಾಸಗಿ ಮಾಹಿತಿಯನ್ನಷ್ಟೇ ಅಲ್ಲದ ಸ್ವಾತಂತ್ರö್ಯ ಪೂರ್ವ ಹಾಗೂ ಆನಂತರದ ನಮ್ಮ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಜೀವನದ ಪ್ರಾಮಾಣಿಕ ದಾಖಲೆಯೂ ಆಗಿದೆ. ಮಹಾತ್ಮ ಗಾಂಧಿ ಅವರ ಹತ್ಯೆ, ಗ್ರಾಮಾಂತರ ಪ್ರದೇಶಗಳಲ್ಲಿ ಬಸ್ ಸಂಚಾರ ಆರಂಭಗೊAಡದ್ದು, ಇವೆಲ್ಲಕ್ಕಿಂತ ಮುಖ್ಯವಾಗಿ ಹಳ್ಳಿಗಳಲ್ಲಿ ಶಾಲೆಗಳು ಆರಂಭವಾದದ್ದು, ಆರಂಭಿಕ ದಿನಗಳಲ್ಲಿ ಹಿಂದುಳಿದ ವರ್ಗದ ಜಾತಿಗಳಿಗೆ ಸೇರಿದ ಮಕ್ಕಳು ಶಾಲೆಗೆ ಸೇರದೇ ಇದ್ದ ಸಂಗತಿಗಳನ್ನೂ ಈ ಅಧ್ಯಾಯ ಅರಿವು ಮಾಡಿಕೊಡುತ್ತದೆ. ಪ್ರೀತಿಯಿಂದ ಓದಿ- ಸಂಪಾದಕ 
     
ಹಳ್ಳಿ ಹೈದನ ನೂರೆಂಟು ನೆನಪು-5
ಸಿ.ಚಿಕ್ಕಣ್ಣ, ಐಎಎಸ್(ವಿ)
“ ಮದ್ಗಿರಿವರೆಗೆ ಕೆಂಪು ಮೂತಿ ಬಸ್ಸು, ಪುರವರದವರೆಗೆ ಕರಿ ಮೂತಿ ಬಸ್ಸು”
(ಹಿಂದಿನ ‘ಕಿನ್ನರಿ’ಯಿಂದ)

ಮರುದಿನ ಬೆಳಿಗ್ಗೆ ಮಾವನವರಾದ ದೊಡ್ಡಕರಿಯಪ್ಪನವರಿಗೂ ವಿಷಯ ಗೊತ್ತಾಗಿ ಚಿಕ್ಕಮ್ಮನ ಮನೆಗೆ ಬಂದರು. ನಂತರ ಅತ್ತೆ ಚೌಡಮ್ಮನವರು ಬಂದು ಕೂಡಿಕೊಂಡರು. ತಿಂಡಿಯಾದ ಮೇಲೆ ಮಾವನವರು 'ಮಗನನ್ನು ಇಲ್ಲೇ ಸ್ಕೂಲಿಗೆ ಸೇರಿಸುತ್ತೀರಂತೆ' ಎಂದರು. ತಂದೆಯವರು 'ಹೌದು, ಸ್ಕೂಲ್ ಇಲ್ಲೇ ಚೆನ್ನಾಗಿದೆಯಂತೆ. ರಂಗಶಾಮಯ್ಯನವರು ಅಂತ ಒಳ್ಳೆ ಮೇಷ್ಟ್ರು ಇದ್ದಾರೆ ಅಂತ ಕೇಳಿದೆವು, ಅದಕ್ಕೆ ಇಲ್ಲ ಸೇರಿಸೇನೆ. ರಂಗಶಾಮಯ್ಯನವರು ನಿಮಗೆ ಚೆನ್ನಾಗಿ ಗೊತ್ತಂತೆ ಬಂದು ಒಂದು ಮಾತು ಹೇಳಿ' ಎಂದರು. ಅದಕ್ಕೇನು, ಅವರು ನಮ್ಮ ಪಕ್ಕದ ಬಡಕನಹಳ್ಳಿಯವರೇ, ಜೊತೆಗೆ ನಮ್ಮವರೇ, ಸೇರಿಸೋಕೆ ಏನು ತೊಂದರೆ ಇಲ್ಲ, ಬರೀ ಈಗಲೇ ಹೋಗೋಣ' ಎಂದರು. 


ಅಪ್ಪ, ಮಾವ, ನಾನು ಮೂವರೂ ಶಾಲೆಗೆ ಹೋದೆವು. ಪುರವರ ಇಟಕದಿಬ್ಬನಹಳ್ಳಿಯ ಮುಖ್ಯರಸ್ತೆಗೆ ಹೊಂದಿಕೊAಡAತೆ ಬಡಕನಹಳ್ಳಿ ಗಿರೇಗೊಂಡನಹಳ್ಳಿಯ ಮಧ್ಯಭಾಗದಲ್ಲಿ 1 ರಿಂದ 4ನೇ ತರಗತಿಯವರೆಗೆ ಇದ್ದ ಶಾಲೆ, ಸುತ್ತಮುತ್ತಲ 8 ಹಳ್ಳಿಗಳಲ್ಲಿ ಒಳ್ಳೆಯ ಹೆಸರನ್ನು ಮಾಡಿದ್ದರೂ ಶಾಲೆಗೆ ಮಕ್ಕಳನ್ನು ಸೇರಿಸಲು ಹಳ್ಳಿಯವರು ಹಿಂದೇಟು ಹಾಕುತ್ತಿದ್ದ ಕಾಲ,
[[
     ಶಾಲೆಗೆ ಬಂದ ನಮ್ಮನ್ನು ರಂಗಸ್ವಾಮಯ್ಯ ಮೇಷ್ಟ್ರು ಸ್ವಾಗತಿಸಿ, 'ಬನ್ನಿ ದೊಡ್ಡಕರಿಯಪ್ಪನವರೇ' ಎಂದು ಬರಮಾಡಿಕೊಂಡು, ಇವರು ನಿಮ್ಮ ಭಾವ ಚೌಡಪ್ಪನವರಲ್ಲವೇ' ಎಂದು ಪಕ್ಕದಲ್ಲಿದ್ದ ನಮ್ಮ ತಂದೆಯವರ ಕಡೆ ಬೆರಳು ಮಾಡಿದರು. 'ಹೌದು' ಎಂದಾಗ, ಸುತ್ತ 8/10 ಹಳ್ಳಿಗಳಿಗೇ ಸಾಹುಕಾರರು. ಏನು ಈ ಕಡೆ ದಯಮಾಡಿದ್ದೀರಿ' ಎಂದು ನಮ್ಮ ತಂದೆಯವರನ್ನು ಮೇಷ್ಟ್ರು ಕೇಳಿದರು. ಅವರ ಮಗನನ್ನು ಈ ಸ್ಕೂಲಿಗೆ ದಾಖಲು ಮಾಡಲು ಬಂದಿದ್ದಾರೆ' ಎಂದರು ಮಾವನವರು. 'ಓಹೋ, ಇದಕ್ಕಿಂತ ಸಂತೋಷ ಇನ್ನೇನು? ಸುತ್ತಲ ಹಳ್ಳಿಗಳಿಗೆ ಹೋಗಿ ಮಕ್ಕಳನ್ನು ಶಾಲೆಗೆ ಸೇರಿಸಿ ಎಂದೂ ಗೋಗರೆದರೂ ನಮ್ಮ ಹಳ್ಳಿ ಜನ ಕ್ಯಾರೇ ಅನ್ನಲ್ಲ. ಅಂಥಾದ್ರÀಲ್ಲಿ ಅಷ್ಟು ದೂರದಿಂದ ಇಲ್ಲಿಗೆ ಬಂದು ತಮ್ಮ ಮಗನನ್ನು ದಾಖಲಿಸುತ್ತಿರೋದು ನಮ್ಮ ಸ್ಕೂಲಿಗೇ ಹೆಮ್ಮೆ ಅಲ್ಲವೇ' ಎಂದ ಮೇಷ್ಟ್ರು, ಅಂದೇ ಹಾಜರಾತಿ ಪುಸ್ತಕದಲ್ಲಿ ನನ್ನ ಹೆಸರು, ವಯಸ್ಸು, ನಮ್ಮ ಊರಿನ ವಿಳಾಸ ಇತ್ಯಾದಿ ವಿವರಗಳನ್ನು ದಾಖಲಿಸಿದರು. ಆಣೆಗಳ ಲೆಕ್ಕದಲ್ಲಿದ್ದ ಫೀಯನ್ನು ಅಪ್ಪ ಪಾವತಿಸಿದರು.


     ಶಾಲೆಗೆ ಸೇರ್ಪಡೆಯಾಗಿ ಮನೆಗೆ ಬಂದು ವಿಷಯ ಹೇಳಿದಾಗ, ಅಮ್ಮನಿಗೆ ಎಲ್ಲಿಲ್ಲದ ಸಂತೋಷ ನನ್ನನ್ನು ಅಪ್ಪಿಕೊಂಡು ಚೆನ್ನಾಗಿ ಓದಿ ದೊಡ್ಡ ಕೆಲ್ಲಕ್ಕೆ ಸೇರಿಕೋ ಬೇಕು, ನಿನ್ನ ಚಿಕ್ಕಮ್ಮನ ಮನೇಲೇ ಇದ್ದು ಅವರ ಮಕ್ಕಳಾದ ಚೌಡಪ್ಪ, ಬನಪ್ಪ, ಚಿಕ್ಕಚೌಡಪ್ಪ, ಸಣ್ಣಚೌಡಪ್ಪ ಇವರ ಜತೆ ಜಗಳ ಮಾಡಿಕೋ ಬೇಡ. ಯಾರಿಗೂ ಬೇಜಾರು ಮಾಡಬೇಡ' ಎಂದು ಬುದ್ಧಿ ಹೇಳಿದರು. ನಂತರ ಚೌಡತ್ತೆ ಮನೆಗೆ ಹೋದೆವು. ಅತ್ತೆಯವರೂ ನಮ್ಮನ್ನು ಆದರದಿಂದ ಸ್ವಾಗತಿಸಿ, ಹಬ್ಬದ ಊಟ ಆಣಿ ಮಾಡಿದ್ದಲ್ಲದೆ, 'ಆಣ್ಣ ನಾವೆಲ್ಲ ಇಲ್ವಾ, ನಾನು ಈ ಊರಲ್ಲಿದ್ರೂ ನಿನ್ನ ಮಗನ್ನ ರಂಗಮ್ಮಕ್ಕನ ಮನೇಲಿ ಯಾಕೆ ಬಿಡಬೇಕು? ಅವನು ಇಲ್ಲೇ ಇರಲಿ' ಮುಂತಾಗಿ ಕೋಪ ತೋರಿಸಿದರು. ಕೊನೆಗೆ ಮಾವನವರು ಒಂದು ತೀರ್ಮಾನ ಕೊಟ್ಟು, 'ಚಿಕ್ಕಣ್ಣ ಎಲ್ಲಿರಬೇಕು ಅಂತ ತೀರ್ಮಾನ ಮಾಡ್ತಾನೋ ಅಲ್ಲಿರಲಿ' ಎಂದು ನನ್ನ ಕಡೆ ನೋಡಿದರು. ಯಾವುದನ್ನು ಯೋಚಿಸದೆ ನಾನು ಚಿಕ್ಕಮ್ಮನ ಮನೇಲೇ ಇರ್ತೀನಿ' ಎಂದೆ. ಅಲ್ಲಿಗೆ ವಿಷಯ ಇತ್ಯರ್ಥವಾದಂತಾಯಿತು. ಆದಾದ ಮಾರನೇ ದಿನ ನನ್ನ ಅಮ್ಮ, ಅಪ್ಪ, ನನ್ನ ಅಕ್ಕ ಚೌಡಮ್ಮ ತಿಪ್ಪನಹಳ್ಳಿಗೆ ಹಿಂದಿರುಗಿದರು.


    ನಾನು ಶಾಲೆಯ ಹಾಗೂ ಗಿರೇಗೊಂಡನಹಳ್ಳಿಯ ಚಿಕ್ಕಮ್ಮನ ಮನೆಯ ವಾತಾವರಣಕ್ಕೆ ಬೇಗ ಹೊಂದಿಕೊAಡೆ. ಮೇಷ್ಟ್ರುಗಳಾದ ರಂಗಶಾಮಯ್ಯನವರು, ತಿಪ್ಪೆರಂಗಯ್ಯನವರು, ರಂಗಯ್ಯನವರು ಶಾಲೆಯ ಹುಡುಗರಿಗೆ ಗದರಿಸದೆ, ಏಟು ಕೊಡದೆ ಪ್ರೀತಿಯಿಂದ ಕಲಿಸುತ್ತಿದ್ದರು. ಮೇಲಾಗಿ ಚಿಕ್ಕಮ್ಮ ಮತ್ತು ಅವರ ಮಕ್ಕಳು ನನ್ನನ್ನು ತುಂಬಾ ಆದರದಿಂದ ಕಾಣುತ್ತಿದ್ದರು. ಚಿಕ್ಕಪ್ಪ ದೊಡ್ಡಚೌಡಯ್ಯನವರು ಸೊಂಟದಿAದ ಕೆಳಭಾಗದ ಹಾಗೂ ಕಾಲುಗಳ ಸ್ವಾಧೀನ ಕಳೆದುಕೊಂಡು ಸದಾ ಒಂದೇ ಕಡೆ ಕೂತಿರುತ್ತಿದ್ದರು, ಇಲ್ಲ ಮಲಗಿರುತ್ತಿದ್ದರು. ಅವರಿಗೆ ಇಬ್ಬರು ಹೆಂಡತಿಯರು. ಮನೆಯಲ್ಲಿ ಒಟ್ಟು 8 ಜನ, ಚಿಕ್ಕಮನೆಯಾದ್ದರಿಂದ ನಾನು ಅವರ ಮಕ್ಕಳ ಜತೆ ಅವರ ಮನೆ ಮಗನಂತೆ ಎಲ್ಲಾ ಕೆಲಸಗಳಲ್ಲೂ ನೆರವಾಗುತ್ತಿದ್ದೆ. ರಜಾ ದಿನಗಳಲ್ಲಿ ಅವರ ಜತೆ ಹೊಲಕ್ಕೆ ಹೋಗುತ್ತಿದ್ದೆ. 'ಬಿಸಿಲಲ್ಲಿ ಕೆಲಸ ಮಾಡಬೇಡ, ಆ ಮರದ ಕೆಳಗೆ ಕುಂತುಕೋ' ಎಂದು ಚಿಕ್ಕಮ್ಮ ಆಗಾಗ್ಗೆ ಹೇಳುತ್ತಿದ್ದರೂ ನಾನು ತಲೆಗೆ ಹಾಕಿಕೊಳ್ಳದೆ, ಅಣ್ಣ-ತಮ್ಮಂದಿರ ಜೊತೆ ವ್ಯವಸಾಯದ ಕೆಲಸ ಮಾಡುವುದನ್ನು ಕಲಿತೆ. ಶಾಲೆಯಿಂದ ಮನೆಗೆ ಬಂದು ಮನೆಯ ಮುಂದಿನ ಅಂಗಳವನ್ನೆಲ್ಲಾ ಗುಡಿಸಿ ಸ್ವಚ್ಛಮಾಡುವ ಕೆಲಸ ನನ್ನದು. ಇದನ್ನೆಲ್ಲಾ ನೀನು ಮಾಡಬಾರದು. ನಿಮ್ಮಪ್ಪ ಅಮ್ಮನಿಗೆ ನೀನು ನಮ್ಮ ಮನೆ ಕಸ ಗುಡಿಸುತ್ತಾನೆಂದು ತಿಳಿದರೆ ಏನು ತಿಳಿದುಕೊಳ್ತಾರೆ, ಬೇಡಪ್ಪ!' ಎನ್ನುತ್ತಿದ್ದರು ಚಿಕ್ಕಪ್ಪ, 'ನಾನು ಈ ಮನೆಯ ಮಗನಲ್ಲವೇ ಕಾಕ (ಚಿಕ್ಕಪ್ಪ), ನಾನು ಇಲ್ಲಿ ಕಲಿಯೋಕೆ ಬಂದಿದ್ದೇನೆ ಹೊರತು, ಸುಮ್ಮ ಕುಂತುಕೊAಡು ಕಾಲ ಕಳೆಯೋದಕ್ಕಲ್ಲ' ಎಂದು ಅವರಿಗೆ ನೇರವಾಗಿ ಒಂದು ದಿನ ಉತ್ತರ ನೀಡಿದ ಮೇಲೆ ಅವರಿಂದ ಆಕ್ಷೇಪಣೆಗಳು ಬರುವುದು ನಿಂತಿತು.


ಜನವರಿ 1948, 30ನೇ ತಾರೀಖು, ತರಗತಿಗೆ ಇದ್ದಕ್ಕಿದ್ದಂತ ಮುಖ್ಯೋಪಾಧ್ಯಾಯರಾದ ರಂಗಶಾಮಯ್ಯನವರು ಬಂದು ವಿದ್ಯಾರ್ಥಿಗಳನ್ನೆಲ್ಲಾ ಪ್ರಾರ್ಥನೆ ಮಾಡುವ ಸ್ಥಳಕ್ಕೆ ಕರೆದು ತಂದು ನಿಲ್ಲಿಸಿ, 'ಮಕ್ಕಳೇ ಈ ದಿನ ಬ್ರಿಟಿಷರ ವಿರುದ್ಧ ಶಾಂತಿ ಅಹಿಂಸೆಯ ಮೂಲಕ ಹೋರಾಟ ಮಾಡಿ ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ತಂದು ಕೊಟ್ಟ ಮಹಾತ್ಮ ಗಾಂಧಿಯವರನ್ನು ಯಾರೋ ಒಬ್ಬ ಅವರ ಎದೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ' ಎಂದು ಬಿಕ್ಕಳಿಸುತ್ತಾ ಕಣ್ಣೀರೊರಿಸಿಕೊಂಡು ಹೇಳುತ್ತಿದ್ದರೆ ನಮ್ಮ ಕಣ್ಣುಗಳಲ್ಲಿಯೂ ಧಾರಾಕಾರವಾಗಿ ನೀರು ಎಂದು ಮೂಕರಾದೆವು. ಅಂದಿನಿAದ ಮೂರು ದಿನಗಳ ಶೋಕಾಚರಣೆ ಎಂದು ಘೋಷಿಸಿ ಶಾಲೆಗೆ ರಜೆ ಘೋಷಿಸಿದರು.


    ಈ ಮಧ್ಯೆ, ತಿಪ್ಪನಹಳ್ಳಿಯಿಂದ ಗಿರೇಗೊಂಡನಹಳ್ಳಿಗೆ ಬಂದಿದ್ದ ನಮ್ಮ ಚಿಕ್ಕಪ್ಪನವರಾದ ದೊಡ್ಡಚಿಕ್ಕಪ್ಪನವರು (ಅವರೂ ಇದೇ ಊರಿನಲ್ಲಿ ಮದುವೆಯಾಗಿದ್ದರು) ಮನೆಗೆ ಬಂದು 'ಏ ಚಿಕ್ಕಣ್ಣ, ತಿಪ್ಪನಹಳ್ಳಿ ಒಳಗೂ ಈ ವರ್ಷನೇ ಒಂದು ಸ್ಕೂಲು ಶುರುವಾಗೃತೆ : 4 ರಿಂದ 5 ಹುಡುಗರು ಸ್ಕೂಲಿಗೆ ಸರ‍್ಕೊಂಡವ್ರೇ, ನಾಗೇಶರಾವ್ ಅಂತ ಒಬ್ರು ಮೇಷ್ಟ್ರು ಪಾಠ ಮಾಡ್ತಾವ್ರೆ, ನೀನೂ ಬಂದು ಅಷ್ಟೇ ಸೇರ್ಕೋಬೋದು' ಎಂದರು. 'ಇಲ್ಲ ನನಗೆ ಇದೇ ಸ್ಕೂಲು ಇಷ್ಟ. ನಾನು ಇಲ್ಲೇ ಇರ್ತೀನಿ' ಎಂದು ಹೇಳಿ ಹೊರಗೆ ಓಡಿದೆ.


     ಮಾರ್ಚ್ 1948ರ ಹೊತ್ತಿಗೆ ಮೊದಲನೆ ಕ್ಲಾಸಿನ ಪರೀಕ್ಷೆಗಳೆಲ್ಲ ಮುಗಿದು ಶಾಲೆಗೆ ಬೇಸಿಗೆ ರಜೆ ಘೋಷಣೆಯಾಯ್ತು. ಒಂದು ದಿನ ಇದ್ದಕ್ಕಿದ್ದಂತೆ ಅಪ್ಪ ಗಿರೇಗೊಂಡನ ಹಳ್ಳಿಯಲ್ಲಿ ಪ್ರತ್ಯಕ್ಷರಾದರು. ಬ್ಯಾಗಲ್ಲಿ ಮಾವಿನ ಹಣ್ಣು, ಬಿಸ್ಕತ್ ಪೊಟ್ಟಣ ತಂದು ನನ್ನ ಕೈಗೆ ಕೊಟ್ಟರು. ಊಟವಾದ ಮೇಲೆ 'ಆಪ್ಪಾ, ನೀವು ಊರಿಂದ ನಡ್ಕೊಂಡು ಬಂದ್ರಾ ಎಂದು ಅಪ್ಪನನ್ನು ನಾನು ಕೇಳಿದೆ. 'ನಿಂಗೆ ಗೊತ್ತಿಲ್ವಾ ಮಗು, ಈಗ ಶಿರಾದಿಂದ ಮದ್ಗಿರಿಗೆ, ಮದ್ಗಿರಿಯಿಂದ ಪುರವರಕ್ಕೆ ಒಂದು ಮೋಟಾರು ಬಸ್ಸು ಬಿಟ್ಟಿವೆ. ನಾನು ಬಡವನಹಳ್ಳಿಯಿಂದ ಕೆಂಪುಮೂತಿ ಬಸ್‌ನಲ್ಲಿ ಮದ್ಗಿರಿಗೆ ಬಂದೆ. ಕರೆಮೂತಿ ಬಸ್ಸಿನಲ್ಲಿ ಪುರವಾರಕ್ಕೆ ಬಂದೆ. ಅಲ್ಲಿಂದ ನಡೆದುಕೊಂಡು ಬಂದೆ' ಎಂದು ಹೇಳಿದರು. ಇದನ್ನು ಕೇಳಿ ನನಗೆ ಅತೀವ ಆನಂದ, ಅಪ್ಪ ನಾನು ಬಸ್ ನೋಡಬೇಕು ಎಂದೆ. 'ಆಯ್ತು. ನಾಳೆಗೆ ಬಸ್‌ನಲ್ಲೇ ಮಧುಗಿರಿ ತನಕ ಹೋಗಿ, ಆಮೇಲೆ ಬಡವನಹಳ್ಳಿಗೆ ಹೋಗೋಣ ಎಂದು ಆಶ್ವಾಸನೆ ಇತ್ತರು. ನನಗೆ ಖುಷಿಯಾಯಿತು,


   ಮಾರನೆ ದಿನ ಒಂದು ಸಣ್ಣ ಕಬ್ಬಿಣದ ಪೆಟ್ಟಿಗೆಯಲ್ಲಿ ನನ್ನ ಬಟ್ಟೆಬರೆ, ಶಾಲಾ ಪುಸ್ತಕಗಳನ್ನು ತುಂಬಿಕೊAಡು ಅಪ್ಪನ ಜತೆ ಹೊರಡಲು ಅನುವಾದೆ. ಚಿಕ್ಕಪ್ಪ, ಚಿಕ್ಕಮ್ಮ, ನಾನು ಮನೆ ಬಿಟ್ಟು ಹೋಗುತ್ತಿರುವುದಕ್ಕೆ ಕಣ್ಣೀರು ಹಾಕಿ ಬೀಳ್ಕೊಟ್ಟರು. ನಾನು ಅಪ್ಪನ ಜತೆ ಪುರವರದಿಂದ ಕರಿಮೂತಿ ಬಸ್ ಹತ್ತಿ ಮಧುಗಿರಿಗೆ ಬಂದು, ನಂತರ ಮಧುಗಿರಿಯಿಂದ ಬಡವನಹಳ್ಳಿಗೆ ಕೆಂಪುಮೂತಿ ಬಸ್ ಹತ್ತಿ ಅಲ್ಲಿಂದ ತಿಪ್ಪನಹಳ್ಳಿಯವರೆಗೂ ನಡೆದುಕೊಂಡು ಬಂದು ಊರು ಸೇರಿದೆವು.


ಪ್ರಾಥಮಿಕ-ಮಾಧ್ಯಮಿಕ ಶಿಕ್ಷಣ


       1938ರಲ್ಲಿ ಮನೆಯ ಯಜಮಾನರಾಗಿದ್ದ ತಾತ ಚಿಕ್ಕಣ್ಣನವರು ನಿಧನರಾದ ನಂತರ ಅಣ್ಣ ತಮ್ಮಗಳಲ್ಲಿ ವೈಮನಸ್ಸು ಬಂದು ಆಸ್ತಿ ಭಾಗವಾಗಿತ್ತು. ದೊಡ್ಡಚೌಡಪ್ಪನವರ ಮಗ ತಿಪ್ಪೆಚೌಡಪ್ಪ, ಕರಿಯಪ್ಪನವರ ಮಗ ಕೆಂಪಣ್ಣ, ಚಿಕ್ಕಚೌಡಪ್ಪನವರ ಮಗ ಚಿಕ್ಕಜ್ಜಪ್ಪ (ಚಿಕ್ಕಣ್ಣ) ಇವರು ತಮ್ಮ ಸಂಸಾರ ಸಮೇತ ಒತ್ತಟ್ಟಿಗಿದ್ದರು. ತಂದೆಯವರು, ನಮ್ಮ ಚಿಕ್ಕಪ್ಪ ದೊಡ್ಡಚಿಕ್ಕಪ್ಪ, 2ನೇ ಚಿಕ್ಕಪ್ಪ ಅಪ್ಪಯ್ಯ (ಚಿಕ್ಕಣ್ಣ ಇವರು ಒಟ್ಟಾಗಿ ಹೊಸ ಮನೆಯಲ್ಲಿ ಸಂಸಾರ ಹೂಡಿದರು. ಕೊನೆಯವರಾದ ಶಂಕರಪ್ಪನವರು ತುಮಕೂರಿನಲ್ಲಿ ಇಂಟರ್ ಓದುತ್ತಿದ್ದರು. ಇವರ ಜತೆಗೆ ತಾತನವರ ಸಾಕು ತಮ್ಮನಾದ ಎಳೇ ಚೌಡಪ್ಪನವರೂ ನಮ್ಮ ಸಂಸಾರದ ಒಂದು ಭಾಗವಾಗಿದ್ದು, ಅವರ ಮಗ ಚಿಕ್ಕಣ್ಣ ಸಹ ನಮ್ಮ ಒಟ್ಟು ಕುಟುಂಬದ ಸದಸ್ಯರಾಗಿದ್ದರು. ಹೀಗೆ ಅಂದಾಜು 30 ಜನ ಇದ್ದ ಬೃಹತ್ ಕುಟುಂಬದ ಯಜಮಾನರಾಗಿ ನಮ್ಮ ತಂದೆ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಜಕ್ಕೇನಹಳ್ಳಿ, ಬಳೆಹಳ್ಳಿ, ಚಂದ್ರಗಿರಿ, ಬಡವನಹಳ್ಳಿ, ನಾಗೇನಹಳ್ಳಿ, ದಂಡಿನದಿಬ್ಬ ಇತ್ಯಾದಿ, ಸುಮಾರು ಎಂಟು ಹಳ್ಳಿಗಳಲ್ಲಿ ನಮಗೆ ಸೇರಿದ ಜಮೀನುಗಳಿದ್ದವು. ಇವುಗಳ ಕಂದಾಯ ದಾಖಲೆಗಳು, ಕಂದಾಯ ಪಾವತಿ, ಗುತ್ತಿಗೆಗೆ ನೀಡಿದ ಜಮೀನುಗಳ ಬೆಳೆ ವಸೂಲಿ ಮುಂತಾದ ಕಾರ್ಯಗಳನ್ನು ನಿರ್ವಹಿಸಲು ಊರಿನವರೇ ಆದ ಕರೇನಾಯ್ಕ ಎಂಬುವವರನ್ನು ತಂದೆಯವರು ನೇಮಿಸಿಕೊಂಡು ಹಜಾರದ ರೂಮಿನಲ್ಲಿ ಒಂದು ಕಚೇರಿಯನ್ನೇ ತೆರೆದಿದ್ದರು. ಸದಾ ಶಲ್ಯ, ಪಂಚೆ, ಗರಿಗರಿಯಾದ ಶರಟು, ಕರಿಯ ಕೋಟು, ತಲೆಗೆ ಮೈಸೂರು ಪೇಟ, ಕಾಲಿಗೆ ಪಂಪ್‌ಶೂಗಳನ್ನು ಧರಿಸಿ ತಂದೆಯವರು ಮಧುಗಿರಿ ಕಚೇರಿಗಳಿಗೂ, ಕೋರ್ಟುಗಳಿಗೂ ಠೀವಿಯಿಂದ ಹೋಗಿ ಬರುತ್ತಿದ್ದುದನ್ನು ನಾವು ಅಣ್ಣ ತಮ್ಮಂದಿರು ನೋಡಿ ಹೆಮ್ಮ ಪಡುತ್ತಿದ್ದೆವು, ಸಿರಾ ಮಧುಗಿರಿಗೆ ಬಸ್ ಸಂಚಾರ ಇದ್ದದ್ದು ಬಡವನಹಳ್ಳಿ ಮಾರ್ಗವಾಗಿ ಸಜ್ಜೆಹೊಸಳ್ಳಿಗೂ ಬಸ್ ಬಂದು, ತಂದೆಯವರು ಬಸ್‌ನಲ್ಲೇ ಓಡಾಡಲು ಆರಂಭಿಸಿದ್ದರು. ಬಸ್‌ಗಳ ಮುಂದಿನ ಸೀಟಿನಲ್ಲಿ ತಾಲ್ಲೂಕು ಅಮಲ್ದಾರರನ್ನು ಬಿಟ್ಟರೆ, ನನ್ನ ತಂದೆಯವರಿಗೆ ಸ್ಥಳ ಮೀಸಲಾಗಿರುತ್ತಿತ್ತು ಎಂದು ಕೇಳಿದ್ದೇನೆ.


ಕುಟುಂಬದ ಹೆಣ್ಣುಮಕ್ಕಳಲ್ಲಿ ಅಕ್ಕ ಚೌಡಮ್ಮನವರೇ ದೊಡ್ಡವರು. ಅಂತೆಯೇ ಗಂಡು ಮಕ್ಕಳಲ್ಲಿ ಎಳೆಚೌಡಪ್ಪನವರ ಮೊಮ್ಮಗ ಚಿಕ್ಕಣ್ಣನವರ ಮಗ ಚೌಡಪ್ಪ, ನಂತರ ನಾನು ದೊಡ್ಡವನು. ಹೀಗೆ ಮನೆಯಲ್ಲಿ ಸುಮಾರು 15-16 ಮಕ್ಕಳಿದ್ದರು. ಗಿರೇಗೌಡನ ಹಳ್ಳಿಯಲ್ಲಿ 1ನೇ ತರಗತಿ ಮುಗಿಸಿ ನಮ್ಮೂರಿಗೆ ಹಿಂದಿರುಗಿದ ನಾನು ಕುಟುಂಬದ ಇತರ ಹುಡುಗರ ಜೊತೆ ಸೇರಿ ಹಳ್ಳಿಯ ಆಟಗಳಾದ ಚಿಣ್ಣೆ-ದಾಂಡು, ಗೋಲಿ-ಗಜ್ಜುಗ, ಕಳ್ಳ-ಪೊಲೀಸ್ ಮುಂತಾದ ಆಟಗಳಲ್ಲಿ ತಲ್ಲೀನನಾಗಿದ್ದರ ಜೊತೆಗೆ, ನಮ್ಮ ಹೊಸಮನೆಯ ಹಿಂದೆಯೇ ಇದ್ದ ಚಟ್ಟಿನ ಬಾವಿಯಲ್ಲಿ ಹುಡುಗರ ಜೊತೆ ಸೇರಿ ಈಜಾಡಲು ಕಲಿತೆ, ಮಾವಿನ ಕಾಯಿ ಕಾಲದಲ್ಲಿ ಹಗಲೆಲ್ಲಾ ತೋಟದಿಂದ ತೋಟಕ್ಕೆ ಲಗ್ಗೆ ಇಟ್ಟು, ಸದಾ ಬಿದ್ದಿರುತ್ತಿದ್ದ ರುಚಿರುಚಿಯಾದ ಮಾವಿನಹಣ್ಣುಗಳನ್ನು, ಬಾಳೆ, ಹಲಸಿನ ಹಣ್ಣುಗಳನ್ನು ಮನಸ್ಸು ತೃಪ್ತಿಯಾಗುವವರೆಗೂ ತಿಂದು ಅದೇ ಕೈಗಳನ್ನು ಅಂಗಿಗೆ ಒರೆಸಿಕೊಂಡು ಮನೆಗೆ ಬರುತ್ತಿದ್ದೆವು. ನಮ್ಮ ನವರಂಗದ ಅಂಗಿಯನ್ನು ಕಂಡ ಅಮ್ಮನ ಕೈಲಿ ಏಟುಗಳನ್ನು ತಿಂದದ್ದನ್ನು ಇನ್ನೂ ಮರೆತಿಲ್ಲ.


       ಬೇಸಿಗೆ ರಜೆ ಮುಗಿದು ಮೇ ತಿಂಗಳಲ್ಲಿ ನನ್ನನ್ನು ನಮ್ಮೂರ ಸರ್ಕಾರಿ ಪ್ರಾಥಮಿಕ ಶಾಲೆಯ | ನೇ ತರಗತಿಗೆ ಸೇರಿಸಿದರು. ಬಡಕನಹಳ್ಳಿ ಶಾಲೆಯಿಂದ ನಮ್ಮ ಮಾವನವರಾದ ದೊಡ್ಡಕರಿಯಪ್ಪನವರು ಟಿ.ಸಿ. (ವರ್ಗಾವಣೆ ಪತ್ರ) ತಂದು ಕೊಟ್ಟಿದ್ದರಿಂದ, ನಮ್ಮೂರ ಶಾಲೆಗೆ ಸೇರಲು ಸುಲಭವಾಯಿತು. ನಮ್ಮ ವಂಶದ ಕೆಲವು ಹುಡುಗರು, ಹುಡುಗಿಯರು ಸೇರಿ 1ನೇ ತರಗತಿಯಲ್ಲಿ 15 ಜನರಿದ್ದೆವು,


       ಶಾಲೆಗೆ ನಾಗೇಶರಾಯರೆಂಬ ಒಬ್ಬರೇ ಮಾಸ್ತರು, ತುಮಕೂರು ಕಡೆಯ ಬ್ರಾಹ್ಮಣರೆಂದು, ತುಂಬ ಬಡತನದಿಂದ ಬಂದು, ಚೆನ್ನಾಗಿ ಓದಿ ಈ ಕೆಲಸಕ್ಕೆ ಸೇರಿಕೊಂಡು ಮೊದಲನೇ ಬಾರಿಗೆ ನಮ್ಮೂರ ಶಾಲೆಗೆ ಬಂದಿದ್ದಾರೆAದು ನಮ್ಮ ತಂದೆ ಹೇಳುತ್ತಿದ್ದರು. ಶಾಲೆಯಲ್ಲಿ ಒಕ್ಕಲಿಗ ಹುಡುಗರ ಸಂಖ್ಯೆಯೇ ಜಾಸ್ತಿ ಇದ್ದು, ನಾಯಕ, ತಿಗಳ, ಮಾದಿಗರ ಮಕ್ಕಳು ಒಬ್ಬರೂ ಶಾಲೆಗೆ ಸೇರಿರಲಿಲ್ಲವಾದರೂ, ಮುಸ್ಲಿಮರ ಹುಡುಗ ಫಕೃದ್ದೀನ್ ನನ್ನ ತರಗತಿಯಲ್ಲಿ ಇದ್ದು, ನಾನೂ ಅವನೂ ಬೇಗ ಗೆಳೆಯರಾದೆವು. 


(ಮುಂದಿನ ‘ಕಿನ್ನರಿ’ಗೆ)