ನಿರಾಡಂಬರತೆಯೇ ಕಲಾವಿದನ ಸಹಜ ಸುಖದ ಆಭರಣ

ಕೇಶವಮಳಗಿ-ನಿರಾಡಂಬರತೆಯೇ ಸಹಜ ಸುಖದ ಆಭರಣ

ನಿರಾಡಂಬರತೆಯೇ ಕಲಾವಿದನ ಸಹಜ ಸುಖದ ಆಭರಣ

ಕೇಶವ ಮಳಗಿ

ಅನುಭಾವ

 

ನಿರಾಡಂಬರತೆಯೇ ಕಲಾವಿದನ ಸಹಜ ಸುಖದ ಆಭರಣ

* ಅಲ್ಬೆ ಕಮೂ: Albert Camus

(ಹುಟ್ಟಿದ್ದು: ನವೆಂಬರ್‌ 7-1913, ಅಲ್ಜೀರಿಯ

ಭೌತಿಕ ಕಣ್ಮರೆ: ಜನವರಿ 4, 1960, ವೆಲೆಬ್ಲೆವಿನ್‌, ಫ್ರಾನ್ಸ್‌)

ಪ್ರತಿ ಕಲಾವಿದನೂ ತನ್ನೊಳಗೆ ಸ್ಫೂರ್ತಿಯ ಸೆಲೆಯೊಂದನ್ನು ಬೈಚಿಟ್ಟುಕೊಂಡಿರುತ್ತಾನೆ. ಈ ಜೀವಜಲ ಆತನ ಬದುಕನ್ನು ವ್ಯಾಪಿಸಿ, ಆತ ಯಾರು ಮತ್ತು ಏನನ್ನು ಹೇಳುತ್ತಾನೆ ಎಂಬುದನ್ನು ತೋರಿಸುವಂತಿರುತ್ತದೆ. ಈ ಜೀವಸೆಲೆ ಬತ್ತುತ್ತ ಹೋದಂತೆ ಆತನ ಅಭಿವ್ಯಕ್ತಿಯಲ್ಲಿ ಇಷ್ಟಿಷ್ಟೇ ಬಿರುಕು-ಕೊರಕು ಕಾಣುತ್ತ ಹೋಗುತ್ತದೆ. ಈ ಅಗೋಚರ ಚಿಲುಮೆಯು ನೀರುಕ್ಕಿಸುವುದನ್ನು ನಿಲ್ಲಿಸಿದಾಗ ಕಲೆ ಬರಡುಭೂಮಿಯಾಗುತ್ತದೆ. ಕಲಾವಿದನ ಕೂದಲುದುರಿ, ತೆಳುವಾಗುತ್ತ ನಡೆದಿವೆ. ಇದೀಗ ಮಾಗಿ, ಮೌನವಾಗುವ ಸಮಯ. ನಾನು ಬರೆದ ಪ್ರಬಂಧಗಳ ಸೆಲೆಯ ಮೂಲವು ನಾನು ಬಹುಕಾಲ ಅನುಭವಿಸಿದ ಬಡತನ ಸೂರ್ಯನ ಬೆಳಕಿನಲ್ಲಿತ್ತು ಎಂದು ಬಲ್ಲೆ. ಆ ನೆನಪುಗಳು ಪ್ರತಿ ಕಲಾವಿದನೂ ಬಳಲುವ ಅಸಮಾಧಾನ ಮತ್ತು ಆತ್ಮತೃಪ್ತಿಗಳೆಂಬ ಎರಡು ಅಪಾಯದಿಂದ ಈಗಲೂ ನನ್ನನ್ನು ಕಾಪಾಡುತ್ತಿವೆ.

ನಿಜ ಹೇಳಬೇಕೆಂದರೆ ಬಡತನವು ನನಗೆಂದೂ ದುರದೃಷ್ಟಕರ ಸಂಗತಿಯಗಿರಲಿಲ್ಲ, ಅದು ಸೂರ್ಯನ ಬೆಳಕಿನಿಂದ ಹೊಳೆಯುತ್ತಿತ್ತು. ನನ್ನ ಬಂಡಾಯವು ಈ ಬೆಳಕಿನಲ್ಲಿ ನಿಗಿನಿಗಿಸುತ್ತಿತ್ತು. ಯಾವುದೇ ಸೋಗಲಾಡಿತನವಿಲ್ಲದ ಆ ಬಂಡಾಯವು ಬದುಕಿನ ಪ್ರತಿಯೊಬ್ಬರನ್ನು, ಪ್ರತಿಯೊಂದನ್ನೂ ಬೆಳಕಿನೆಡೆಗೆ ತರುವ ಹುಮ್ಮಸ್ಸನ್ನು ಪಡೆದಿತ್ತು. ಈ ಬಗೆಯ ಪ್ರೀತಿಯನ್ನು ಮನಸ್ಸು ಸಹಜವಾಗಿ ಹೊರಸೂಸಿತು, ಎನ್ನುವುದಕ್ಕೆ ಖಾತರಿಯಿಲ್ಲ. ಆದರೆ, ಬದುಕಿನಲ್ಲಿ ಬಂದೊದಗಿದ ಸಂದರ್ಭಗಳು ನನಗೆ ಸಹಾಯ ಮಾಡಿದವು. ಈ ಸಹಜ ಉಪೇಕ್ಷೆಯನ್ನು ಸರಿಮಾಡಲೆಂಬಂತೆ ನನ್ನನ್ನು ಬಡತನ ಮತ್ತು ಸೂರ್ಯಬೆಳಕಿನಡೆ ಸಿಲುಕಿಸಲಾಗಿತ್ತು.

ಸೂರ್ಯ ಬೆಳಕಿನಡಿಯಲ್ಲಿ, ಇತಿಹಾಸದಲ್ಲಿ ‘ಎಲ್ಲವೂ ಸರಿಯಿದೆ’ ಎಂದು ಬಡತನ ಹೇಳುತ್ತಿತ್ತು. ಇತಿಹಾಸವೇ ‘ಎಲ್ಲವೂ ಅಲ್ಲ’ವೆಂದು ಸೂರ್ಯನ ಬೆಳಕು ಹೇಳುತ್ತಿತ್ತು. ನಿಜ. ನಾನು ಲೋಕವನ್ನು ಬದಲಿಸ ಬಯಸಿದ್ದೆ. ಆದರೆ, ನಾನು ದಿವ್ಯವೆಂದು ಭಾವಿಸಿದ್ದ ಲೋಕವನ್ನಲ್ಲ. ಗುರಿ ಅನಿಶ್ಚಿತವಾದ, ಯಾತನೆಯ ಬಿಗಿಕಟ್ಟಿನ ಹಗ್ಗದ ನಡಿಗೆಯನ್ನು ಇಷ್ಟಿಷ್ಟೇ ದಾಟುತ್ತ, ಕಠಿಣವಾದ ನನ್ನ ವೃತ್ತಿಯನ್ನು ಆರಂಭಿಸಿದ್ದು ಹೀಗೆಯೇ. ಸಿಟ್ಟು ಮತ್ತು ಸಮ್ಮತಿಗಳು ಇಲ್ಲದೆ ಕಲೆ ಇಲ್ಲವೆನ್ನುವುದು ನಿಜವಾದರೆ ನಾನು ಕಲಾವಿದನಾಗಿದ್ದೆ.

ಇರಲಿ, ನನ್ನ ಬಾಲ್ಯವನ್ನು ಆವರಿಸಿದ್ದ ಬೆಚ್ಚಗಿನ ಅನುರಾಗ ನನ್ನನ್ನು ಕೋಪತಾಪಗಳಿಂದ ದೂರವಿಟ್ಟಿತ್ತು. ನಾನು ಬರಿಗೈಲಿ ಎಂಬಂತೆ ಬದುಕಿದ್ದರೂ ಉಲ್ಲಾಸ ತುಳುಕುತ್ತಿತ್ತು. ನನ್ನೊಳಗೆ ಅಪರಿಮಿತ ಸಾಮರ್ಥ್ಯ ತುಂಬಿತ್ತು. ಮಾಡಬೇಕಿದ್ದುದ್ದನೆಲ್ಲ ಸಾಧಿಸುವ ವಿಧಾನವನ್ನು ಕಂಡುಕೊಳ್ಳುವುದು! ಅದಕ್ಕೆ ಬಡತನ ಎಂದೂ ನನ್ನ ದಾರಿಗಡ್ಡವಾಗಿರಲಿಲ್ಲ. ಆಫ್ರಿಕಾದಲ್ಲಿ ಸೂರ್ಯ ಮತ್ತು ಸಮುದ್ರಕ್ಕೆ ದುಡ್ಡುಕಾಸು ನೀಡಬೇಕಿಲ್ಲ.

ಅಡೆತಡೆಗಳೇನಾದರೂ ಇದ್ದರೆ ಅದು ಪೂರ್ವಗ್ರಹ ಮತ್ತು ಹೆಡ್ಡತನಗಳದ್ದಾಗಿತ್ತು. ಇವು ನನಗೆ ಬಹಳಷ್ಟು ಹಾನಿ ಮಾಡಿದ ’ಹಮ್ಮುಬಿಮ್ಮು’ಗಳನ್ನು ಬೆಳೆಸಿದವು. ಇವು ನನ್ನ ವ್ಯಕ್ತಿತ್ವವನ್ನಾಳುವ ಬದಲು ಸ್ವಾಭಿಮಾನವಿದೆ ಎಂದು ಒಪ್ಪಿಕೊಂಡು ಅದನ್ನು ಪಳಗಿಸುವುದು ಉತ್ತಮವೆನ್ನಿಸಿತು. ನನ್ನ ಅನೇಕ ಬಲಹೀನತೆಗಳನ್ನು ಪರೀಕ್ಷಿಸಿದಾಗ ಸಮಾಜವನ್ನು ರೋಗದಂತೆ ತಿಂದು ಹಾಕುತ್ತಿರುವ ದ್ವೇಷಾಸೂಯೆಗಳು ನನ್ನೊಳಗಿಲ್ಲ ಎಂಬುದನ್ನು ಕಂಡುಕೊಂಡೆ.

ಈ ವಿನಾಯಿತಿಗಾಗಿ ಗೌರವ ನೀಡಬೇಕಾದುದು ನನಗಲ್ಲ, ನನ್ನ ಕುಟುಂಬದವರಿಗೆ. ಕಡುಬಡವರಾಗಿದ್ದ ಅವರು ಯಾವುದರ ಕುರಿತೂ ಕರುಬುತ್ತಿರಲಿಲ್ಲ. ತಮ್ಮ ಅಪಾರ ಮೌನ, ಅಪಾರ ಸಂಯಮ, ತಾಳ್ಮೆ ತುಂಬಿದ ಆತ್ಮಗೌರವಗಳ ಖನಿಗಳಾಗಿದ್ದ ಈ ನನ್ನ ಜನರಿಗೆ ಓದುಬರಹ ತಿಳಿದಿರಲಿಲ್ಲ. ಆದರೆ, ನನಗವರು ಮೌಲಿಕವಾದ, ಬಾಳ್ವಿಕೆಯ ಪಾಠಗಳನ್ನು ಕಲಿಸಿದರು. ಇದ್ದರೂ ನಾನು ಮಾತ್ರ ಎಲ್ಲದರ ಕುರಿತೂ ಕನಸುಗಳಲ್ಲಿ ಮುಳುಗಿ ಹೋಗಿದ್ದೆ. ಈಗಲೂ ಪ್ಯಾರಿಸ್‌ನ ಅತಿ ಸಿರಿವಂತರಲ್ಲಿ ಕಾಣುವ ಅನುಕಂಪದ ‘ಗೈರುಹಾಜರಿ’ ನನ್ನನ್ನು ಸೆಳೆಯುತ್ತದೆ. ಅತ್ಯಂತ ವ್ಯಾಕುಲತೆ ಹುಟ್ಟಿಸುವುದೆಂದರೆ ಭರವಸೆಯೇ ಇಲ್ಲದ ಬಡತನ ಅಥವ ನಗರಗಳ ನರಕಗಳಂತಿರುವ ಕೊಳಗೇರಿಗಳಲ್ಲಿ ಕಾಣುವ ಬದುಕು.

ನಾನು ಹುಟ್ಟಿದ್ದು ಅತಿ ಬಡವನಾಗಿ, ಕಾರ್ಮಿಕವರ್ಗ ವಾಸಿಸುವ ನೆರೆ-ಹೊರೆಯಲ್ಲಿ. ಆದರೂ ಜೀವಜುಮ್ಮೆನ್ನಿಸುವ ನಗರಗಳ ಕೊಳಗೇರಿಗಳನ್ನು ನೋಡುವವರೆಗೂ ನಿಜವಾದ ದೌರ್ಭಾಗ್ಯ ಏನೆಂಬುದು ಗೊತ್ತಾಗಿರಲಿಲ್ಲ. ನಗರಗಳ ಕೊಳಗೇರಿಗಳ ಪರಿಸರಕ್ಕೆ ಹೋಲಿಸಿದರೆ ಕಡುಬಡವ ಅರಬ್ಬರು ಕೂಡ ಸುಸ್ಥಿತಿಯಲ್ಲಿರುವಂತೆ ಸಿರಿವಂತರಂತೆ ಕಾಣುತ್ತಾರೆ. ಕೈಗಾರಿಕೆಗಳೇ ನಗರಗಳ ಈ ನರಕಸದೃಶ್ಯ ಕೊಳಗೇರಿಗಳಿಗೆ ಕಾರಣವಾಗಿವೆ.

ಊಹಿಸಲೂ ಸಾಧ್ಯವಾಗದಂಥ ಸಿರವಂತರ ನಡುವೆ ಬದುಕುವವರನ್ನು ನಾನು ಆಗೀಗ ಭೇಟಿ ಆಗುತ್ತಿರುತ್ತೇನೆ. ಬಹಳ ಕಾಲದ ಹಿಂದೆ ಒಂದು ವಾರದ ಕಾಲ ನಿಸರ್ಗದತ್ತ ಐಷಾರಾಮಿ ಬದುಕನ್ನು ನಾನು ಸವಿದಿದ್ದೆ. ಛಾವಣಿಯಿಲ್ಲದ ಸಮುದ್ರದ ದಂಡೆಯ ಮೇಲೆ ರಾತ್ರಿ ನಿದ್ದೆ ಮಾಡುತ್ತಿದ್ದೆವು. ನಾನಂತೂ ಹಣ್ಣು ತಿಂದು ಜೀವಿಸಿದ್ದೆ. ದಿನದ ಬಹುಪಾಲನ್ನು ಏಕಾಂಗಿಯಾಗಿ ನೀರಿನಲ್ಲಿ ಕಳೆಯುತ್ತಿದ್ದೆ. ಆಗ ನಾನು ಕಲಿತ ಪಾಠ ಸುಖದ ಆಮಿಷಗಳಿಗೆ ಅಥವ ಸುಸಜ್ಜಿತ ಮನೆಗೊಳಗೆ ಅಡಗಿರುವ ವ್ಯಂಗ್ಯ, ಅಸಹನೆ, ಕೋಪಗಳಿಗೆ ಹೇಗೆ ಪ್ರತಿಕ್ರಿಸಬೇಕೆಂದು ಹೇಳಿಕೊಟ್ಟಿದೆ. ಈಗಲೂ ನಾನು ಬದುಕುವುದು ‘ನಾಳಿನ ಚಿಂತ್ಯಾಕ’ ಎಂಬಂತೆ. ಆ ಕಾರಣವಾಗಿಯೇ ನಾನೊಬ್ಬ ಅದೃಷ್ಟಶಾಲಿ ಅಂದುಕೊಳ್ಳುವೆ. ಆಸ್ತಿ ಗಳಿಸುವುದು ನನಗೆ ತಿಳಿದಿಲ್ಲ. ಎಲ್ಲವೂ ಬಯಸದೆಯೇ ಬಂದರೂ ಉಳಿಸಿಕೊಳ್ಳುವುದು ಕಲೆ ನನಗೊಲಿದಿಲ್ಲ.

ನನ್ನ ಮಟ್ಟಿಗೆ ಸುಖಸೌಖ್ಯವೆಂದರೆ ನಿರಾಡಂಬರತೆ. ಸ್ಪ್ಯಾನಿಶ್ ಮತ್ತು ಉತ್ತರ ಆಫ್ರಿಕನ್ ಮನೆಗಳ ನಿರಾಡಂಬರತೆ ನನಗೆ ಮೆಚ್ಚು. ನಾನು ವಾಸಿಸುತ್ತ ಬರಹದಲ್ಲಿ ತೊಡಗ ಬಯಸುವ ಸ್ಥಳವೆಂದರೆ ಹೊಟೇಲಿನ ಕೋಣೆಗಳು. ಇಂಥಲ್ಲಿ ಬರುವ ಸಾವೂ ನನಗೆ ಸುಖ-ಸಮ್ಮತವೇ. ಕೌಟುಂಬಿಕ ಬದುಕು ನನಗೆ ಒಗ್ಗಿ ಬರುವುದಿಲ್ಲ. ಇದು ಅಂತರಂಗದ ನೆಮ್ಮದಿಯ ಬದುಕಿಗೆ ತದ್ವಿರುದ್ಧವಾಗಿರುತ್ತದೆ. ಮಧ್ಯಮವರ್ಗದ ಸುಖೀಜೀವನ ನನ್ನನ್ನು ಬೇಸರಕ್ಕೆ ಸಿಲುಕಿಸಿ, ದಿಗಿಲು ಹುಟ್ಟಿಸುತ್ತದೆ. ಈ ಅಸಾಮರ್ಥ್ಯದ ಕುರಿತು ಬಡಾಯಿ ಕೊಚ್ಚಿಕೊಳ್ಳುವುದೇನೂ ಇಲ್ಲ. ನನ್ನ ಅಕ್ಷಮ್ಯ ತಪ್ಪುಗಳಾಗಿರುವುದು ಈ ಕಾರಣದಿಂದಲೇ. ನನಗೆ ಹಕ್ಕಾಗಿ ದೊರಕಬೇಕಾದುದನ್ನು ಮಾತ್ರ ನಾನು ದ್ವೇಷಿಸಲಾರೆ.

ಕೊನೆಗೂ ನಾನು ಹೇಳಬೇಕೆಂದಿರುವುದು ಬಡತನವು ಅಸೂಯೆಯನ್ನು ಒಳಗೊಂಡಿಲ್ಲ. ನನ್ನ ಅನಾರೋಗ್ಯ ಸಹ ಅಂತಿಮವಾಗಿ ಮನುಷ್ಯನ ಮನಸ್ಸಿನ ಸ್ವಾತಂತ್ರಕ್ಕೆ ಮಹತ್ವ ನೀಡುವಂತೆ ಮಾಡಿ, ಮಾನವ ಬಯಕೆಗಳತ್ತ ವಿಮುಖನನ್ನಾಗಿಸಿತು. ಕೋಪವನ್ನು ಶಮನ ಮಾಡಿತು. ಒಬ್ಬ ಕಲಾವಿದನಾಗಿ ಉಳಿದವರನ್ನು ಮೆಚ್ಚಿಕೊಳ್ಳುತ್ತೇನೆ. ಬುವಿಯ ಮೇಲೆ ಇದಕ್ಕಿಂತ ಸಗ್ಗ ಬೇಕೆ? ಇತ್ತೀಚಿನ ದಿನಮಾನದಲ್ಲಿ ಲೇಖಕನೊಬ್ಬನನ್ನು ಹೀಯಾಳಿಸಲು ಆತನ ಕೃತಿಗಳನ್ನು ಬಳಸುವುದು ಹೆಚ್ಚಾಗುತ್ತಿದೆ. ನನ್ನ ಕೃತಿಗಳ ಭಾವುಕತೆಯಂತೆಯೇ ನನ್ನ ಭಾವುಕತೆಯೂ ಎಂದೂ ಇನ್ನೊಬ್ಬರ ವಿರುದ್ಧವಿದ್ದಿಲ್ಲ. ನಾನು ಪ್ರೀತಿಸಿದ ಜನಗಳು ಎಲ್ಲ ಕಾಲಕ್ಕೂ ನನಗಿಂತ ಉತ್ತಮರಾಗಿದ್ದರು. ಬಡತನವು ನನಗೆ ವಿಶ್ವಾಸ, ನಿಷ್ಠೆ, ಮೌನ ಸಹನೆಗಳನ್ನು ಕಲಿಸಿತೆ ಹೊರತು ದ್ವೇಷಾಸೂಯೆಯನ್ನಲ್ಲ. ಎಂದಾದರೂ ನಾನವನ್ನು ಮರೆತರೆ ನನ್ನನ್ನು, ನನ್ನ ದೋಷಗಳನ್ನು ದೂರಬೇಕೆ ವಿನಹ ನಾನು ಹುಟ್ಟಿದ ಪರಿಸರವನ್ನಲ್ಲ.

ಆ ಕಾಲದ ನೆನಪುಗಳು ನನ್ನ ಕೌಶಲದ ಕುರಿತು ತೃಪ್ತಿಪಡುವಂತೆ ಮಾಡಿವೆ. ಬರಹಗಾರರ ಸಾಮಾನ್ಯವಾಗಿ ಉಲ್ಲೇಖಿಸದ ವಿಷಯವೊಂದನ್ನು ಆದಷ್ಟು ಸರಳವಾಗಿ ಹೇಳಬಯಸುವೆ. ನಾನು ಸಂಪೂರ್ಣ ತೃಪ್ತಿ ನೀಡಿದ ಒಂದು ಪುಸ್ತಕ ಇಲ್ಲವೆ ಒಂದು ಪುಟವನ್ನು ಇಲ್ಲಿಯವರೆಗೆ ಬರೆದಿದ್ದೇನೆ ಎಂದುಕೊಂಡಿಲ್ಲ. ಉಳಿದ ಲೇಖಕರಿಗೂ ಇಂಥ ಅನುಭವವಾಗುತ್ತೊ, ಇಲ್ಲವೋ. ನನಗಂತೂ ಬರೆದು ಮುಗಿಸಿದ ಪುಟವೊಂದನ್ನು ಮತ್ತೊಮ್ಮೆ ಓದುವುದಾಗುವುದಿಲ್ಲ. ಈ ಮಾತು ಕೇಳಿಸಿಕೊಳ್ಳಲು ಸಿದ್ಧವಿದ್ದರೆ ಹೇಳುವೆ: ನನ್ನ ಕೆಲವು ಕೃತಿಗಳು ಯಶಸ್ಸು ನನ್ನನ್ನು ಬೆರಗಾಗಿಸಿದ್ದು ನಿಜ. ಸಹಜ ಸಂಕೋಚದಿಂದ ಅದಕ್ಕೆ ಒಗ್ಗಿಕೊಂಡಿರುವೆ. ನನ್ನ ಸಮಕಾಲೀನ ಕೆಲವು ಲೇಖಕರು ನಿಜಕ್ಕೂ ಶ್ರೇಷ್ಠರು, ಅವರಿಗೆ ಹೋಲಿಸಿದರೆ ನಾನಿನ್ನೂ ಅಂಬೆಗಾಲಿಡುತ್ತಿರುವವನು ಅನ್ನಿಸುತ್ತದೆ. ಲೇಖಕ ಬದುಕುವುದು ಕೆಲವು ಸಹಜ ಸಂತೋಷಗಳಿಗಾಗಿ. ಅವು ಆತನನ್ನು ಸಂಪೂರ್ಣ ತೃಪ್ತಿಪಡಿಸುತ್ತವೆ. ನನಗೆ ಇಂಥ ಸಂತೋಷ ಒದಗುವುದು ಕೃತಿಯೊಂದು ಕಲ್ಪನೆಯಲ್ಲಿ ರೂಪುಗೊಳ್ಳತೊಡಗಿದಾಗ. ವಸ್ತು ತಟ್ಟನೆ ಹೊಳೆದು, ಇದ್ದಕ್ಕಿದ್ದಂತೆ ಅರಿವಿನ ಸ್ಫೋಟದಲ್ಲಿ ಒಡಮೂಡತೊಡಗಿ, ಕಲ್ಪನೆ, ಜಾಣತನಗಳೆರಡು ಮೇಳವಿಸಿದಾಗ ಉಂಟಾಗುವ ಮಧುರ ಅನುಭವ. ಈ ಕ್ಷಣಗಳು ಹುಟ್ಟಿದಂತೆಯೇ ಮರೆಯಾಗಿಬಿಡುತ್ತವೆ. ಉಳಿಯುವುದೆಲ್ಲ, ದೀರ್ಘಕಾಲದ ಕಠಿಣ ಪರಿಶ್ರಮ ಬಯಸುವ ಬರವಣಿಗೆ.

ಇನ್ನೊಂದು ಕಡೆ, ಕಲಾವಿದನಿಗೆ ಹೆಮ್ಮೆಯಿಂದ ಬೀಗುವ ಹಿಗ್ಗೂ ಇರುತ್ತದೆ. ಅದರಲ್ಲೂ, ಫ್ರೆಂಚ್ ಸಮಾಜದಲ್ಲಿ ಬರಹಗಾರನ ವೃತ್ತಿ ಪ್ರತಿಷ್ಠೆಯ ವಿಷಯವೇ ಸರಿ. ನಾನಿದನ್ನು ಯಾವುದೇ ಕುಹಕವಿಲ್ಲದೆ, ಆದರೆ ಕೊಂಚ ವಿಷಾದದಿಂದ ಹೇಳುತ್ತಿರುವೆ. ಈ ಅರ್ಥದಲ್ಲಿ ನಾನೂ ಉಳಿದವರಂತೆಯೇ ಹಾಸ್ಯಾಸ್ಪದ ಕಾಯಿಲೆಗೆ ತುತ್ತಾದವನು. ದ್ವೇಷಾಸೂಯೆ, ಕುಹಕಗಳನ್ನೇ ನಿಯಮವಾಗಿರಿಸಿಕೊಂಡ ಸಮಾಜದಲ್ಲಿ, ಲೇಖಕರು ಸಹಜ ಸಂತೋಷಗಳನ್ನು ಬಲಿ ಕೊಡುವ ದಿನ ಬರಬಹುದು. ನಿಜ ಹೇಳಬೇಕೆಂದರೆ, ಇಪ್ಪತ್ತು ವರ್ಷಗಳ ಲೇಖನವೃತ್ತಿಯಲ್ಲಿ ಸಂತಸದ ಗಳಿಗೆಗಳು ದೊರಕಿರುವುದು ಮುಷ್ಟಿಯಷ್ಟು, ಕಾಲ ಕಳೆದಂತೆ ಅವೂ ಕಡಿಮೆಯಾಗುತ್ತಿವೆ.

ಆದಾಗ್ಯೂ, ನನ್ನ ಪ್ರಬಂಧಗಳು ರೂಪಿಸಿರುವ ಸತ್ಯದ ಹಿಂದಿನ ನೆನಪುಗಳು ನನ್ನ ಬರಹದ ಕೌಶಲವನ್ನು ಸಾರ್ವಜನಿಕಗೊಳಿಸುವ ಅವಕಾಶ ನೀಡಿ ಸಂತಸ ಪಡುವಂತೆ ಮಾಡಿವೆ. ಜತೆಗೆ, ನಿರಾಕರಣೆಗೂ ಕಾರಣವಾಗಿ ಗೆಳೆತನಗಳು ತಪ್ಪಿ ಹೋಗಿವೆ. ಅಭಿನಂದಿಸುವವರನ್ನು ಗುಮಾನಿಯಿಂದ ಕಂಡರೆ, ನನ್ನಮ್ಮ ನಾವು ಅನುಮಾನಿಸಿಕೊಂಡಂತೆ ಎನ್ನುವುದೂ ನಿಜ . . .

"ಬದುಕಲ್ಲಿ ಹತಾಶೆಯಿಲ್ಲದೆ ಪ್ರೀತಿಯೂ ಇಲ್ಲ." ಎನ್ನುವುದು ನನ್ನ ಸಾಲುಗಳೇ. ಈ ಸಾಲುಗಳು ಬರೆದಾಗ ನಾನಿನ್ನೂ ಅಂಥ ಹತಾಶೆಯ ಅನುಭವಕ್ಕೆ ಪಕ್ಕಾಗಿರಲಿಲ್ಲ. ಹತಾಶೆ ಸುಳಿದಾಗ ನನ್ನೊಳಗಿನ ಅನಿಯಂತ್ರಿತ ಜೀವನಪ್ರೀತಿಯೊಂದನ್ನು ಬಿಟ್ಟು ಎಲ್ಲವನ್ನೂ ನಾಶ ಮಾಡಿದೆ. ಉಳಿದವರಂತೆ ನಾನೂ ನನ್ನ ನಡವಳಿಕೆ ತಿದ್ದಿಕೊಂಡು ನೀತಿವಂತನಾಗಲು ಯತ್ನಿಸಿದ್ದೇನೆ. ಅದಕ್ಕೆ ತೆತ್ತ ಬೆಲೆ ಅಗಾಧ. ಮನುಷ್ಯ ಪರದೇಶಿಯಾಗಿದ್ದಾಗಲೂ ಆತ ಕನಸುವುದನ್ನು ಯಾರೂ ಕಸಿಯಲಾರರು. ಆ ನಿಟ್ಟಿನಲ್ಲಿ, ಲೇಖಕನ ಕೃತಿಗಳು ತನ್ನನ್ನು ತಾನೇ ಪುನಾರೂಪಿಸಿಕೊಳ್ಳಲು, ಕಲೆಯ ಬಳಸುದಾರಿಯನ್ನು ಕಂಡುಕೊಳ್ಳುತ್ತವೆ. ತನ್ನ ಹೃದಯದಲ್ಲಿ ಕಾದಿಟ್ಟ ಎರಡೊ-ಮೂರೊ ಸರಳ ಪ್ರತಿಮೆಗಳು ಅದಕ್ಕೆ ಅನುವು ಮಾಡಿಕೊಡುತ್ತವೆ. ಇದಕ್ಕೆ ಇರಬೇಕು ನಾನಿನ್ನೂ ಬರವಣಿಗೆಯನ್ನು ಆರಂಭಿಸಿಯೇ ಇಲ್ಲ ಎಂಬ ಭಾವದಲ್ಲಿ ಬದುಕುತ್ತೇನೆ.

 

 

 

: ತಮ್ಮದೇ ನಾಟಕವೊಂದರ ರಂಗ ತಾಲೀಮಿನಲ್ಲಿ ನಟರಿಗೆ ದೃಶ್ಯದ ಭಾವವನ್ನು ವಿವರಿಸುತ್ತಿರುವ ಕಮೂ