ಕೇಂದ್ರ ಸರ್ಕಾರದ ಡಾಕ್ಯುಮೆಂಟರಿ ಫಿಲಂನಲ್ಲಿ ಪಾತ್ರ
ಕೇಂದ್ರ ಸರ್ಕಾರದ ಡಾಕ್ಯುಮೆಂಟರಿ ಫಿಲಂನಲ್ಲಿ ಪಾತ್ರ
ಕೇಂದ್ರ ಸರ್ಕಾರದ ಡಾಕ್ಯುಮೆಂಟರಿ ಫಿಲಂನಲ್ಲಿ ಪಾತ್ರ
ಮಾರ್ಚ್ 1962, 2ನೇ ಬಿಕಾಂ ತರಗತಿಗಳು ಇನ್ನೇನು ಮುಗಿಯುವ ಹಂತದಲ್ಲಿದ್ದವು, ನನ್ನ Optional Subject, Insurance Classನಲ್ಲಿರುವಾಗ 'ಪ್ರಿನ್ಸಿಪಾಲ್‌ರು ನಿನ್ನನ್ನು ಕರೆಯುತ್ತಾರೆ' ಎಂದು ಜವಾನ ಬಂದು ಹೇಳಿದ, ಹೆದರಿಕೆಯಾಯಿತು. ಯಾರಾದರೂ ನನ್ನ ಮೇಲೆ ದೂರು ಕೊಟ್ಟರಾ? ಎಂಬ ಪ್ರಶ್ನೆಗಳೊಂದಿಗೆ ಪಾಂಶುಪಾಲರ ಛೇಂಬರ್ ಪ್ರವೇಶಿಸಿದೆ. ಅವರ ಪಕ್ಕದಲ್ಲಿ ನಾಲೈದು ಮಂದಿ ಹೊರಗಿನಿಂದ ಬಂದ ವ್ಯಕ್ತಿಗಳು ಕುಳಿತಿದ್ದರು. ನಾನು ಪ್ರಾಂಶುಪಾಲ ರೆಡ್ಡಿಯವರ ಹತ್ತಿರ ಹೋಗಿ Yes Sir' ಅಂದೆ. 'ಚಿಕ್ಕಣ್ಣ, ನಿನಗೆ ನಾಟಕದಲ್ಲಿ ಒಳ್ಳೆ ಅಭಿರುಚಿ ಇದೆ. ಸಂಘ ಸಂಸ್ಥೆಗಳು ಚಟುವಟಿಕೆಗಳಲ್ಲಿ Active ಆಗಿದ್ದೀಯೆ, ನೋಡು ಇವರು Government of India, I & B ಇಂದ ಬಂದಿರುವ ಅಧಿಕಾರಿಗಳು' ಎಂದು ಅವರ ಕಡೆ ತೋರಿಸಿದರು. ನಾನು 'ನಮಸ್ಕಾರ ಸರ್' ಎಂದು ಹೇಳಿ, 'ನಾನು ಏನು ಮಾಡಬೇಕು ಸರ್' ಎಂದೆ ಪ್ರಾಂಶುಪಾಲರನ್ನು ನೋಡಿ. 'ಏನಿಲ್ಲ, ಇವರು ಕಾಲೇಜು ಗ್ರಂಥಾಲಯಗಳು | ವಾಚನಾಲಯಗಳು (Library and Reading Rooms) ವಿದ್ಯಾರ್ಥಿಗಳಿಗೆ ಹೇಗೆ ಉಪಯೋಗ ವಾಗುತ್ತಿವೆ ಎಂಬ ವಿಷಯದಲ್ಲಿ ಒಂದು 5 ನಿಮಿಷದ Documentary Film ಮಾಡ್ತಿದ್ದಾರೆ. ಅದಕ್ಕೆ Lead Role ನಲ್ಲಿ ಒಬ್ಬ ಹುಡುಗ ಮತ್ತು ಒಂದು ಹುಡುಗಿ ಬೇಕು. ಇಬ್ಬರೂ ಕಾಲೇಜು ವಿದ್ಯಾರ್ಥಿಗಳಾಗಿರಬೇಕು. Male Lead Roleಗೆ ನಿನ್ನ ಹೆಸರನ್ನು ನಾನು ಸೂಚಿಸಿದ್ದೇನೆ. ಅದಕ್ಕಾಗಿ ಅವರು ಬಂದಿದ್ದಾರೆ' ಎಂದರು. I&Bನವರು ನನ್ನನ್ನು ಆಪಾದಮಸ್ತಕ' ನೋಡಿ, ಓಕೆ ಸರ್, ಇದರಲ್ಲಿ ಆತನಿಗೆ ಯಾವುದೇ ಡೈಲಾಗ್ ಡೆಲಿವರಿ ಇರುವುದಿಲ್ಲ. ಲೈಬ್ರರಿಗೆ ಎಂಟ್ರಿ, ಮಸ್ತಕ ರಾಕ್ ನಲ್ಲಿ ಪುಸ್ತಕ ಅವಲೋಕಿಸಿ, ನಂತರ ಯಾವುದಾದರೂ ಒಂದು ಮಸ್ತಕವನ್ನು ಆರಿಸಿಕೊಂಡು, ನಿಧಾನವಾಗಿ ರೀಡಿಂಗ್ ರೂಂಗೆ ತೆಗೆದುಕೊಂಡು ಹೋಗಿ ತನ್ನಯತೆಯಿಂದ ಕುಳಿತು, ಪುಸ್ತಕವನ್ನು ಓದುತ್ತಾ, ಪಕ್ಕದಲ್ಲಿ ನೋಟ್ ಬುಕ್ ಇಟ್ಟುಕೊಂಡು ನೋಟ್ಸ್ ಮಾಡುವುದು. ಇಷ್ಟೇ ಆತನ ರೋಲ್' ಎಂದರು. ನನಗೆ ಖುಷಿಯಾಯಿತು. 'ಇದೇನು ಕಷ್ಟವಿಲ್ಲ, ಮಾಡೇನೆ ಸಾರ್ ಎಂದೆ. “ಸರಿ ಈಗ ನೀನು ಕ್ಲಾಸ್‌ಗೆ ಹೋಗು, ಯಾವತ್ತಿನಿಂದ Shooting ಆರಂಭವಾಗುತ್ತೆ ಅಂತ ನಾನು ತಿಳಿಸುತ್ತೇನೆ' ಎಂದು ಹೇಳಿ ಭುಜತಟ್ಟೆ 'Best of Luck' ಎಂದರು ಪ್ರಾಂಶುಪಾಲರು, ಅವರೆಲ್ಲರಿಗೂ ಧನ್ಯವಾದ ಹೇಳಿ ಮತ್ತೆ ಕ್ಲಾಸ್‌ಗೆ ಮರಳಿದೆ.
ಪ್ರಾಂಶುಪಾಲರ ಕಛೇರಿಯಲ್ಲಿ ಏನು ನಡೆಯಿತೆಂದು ಪ್ರೊ|| ಗೋಪಾಲ್ ಕೇಳಿದರು. ಎಲ್ಲವನ್ನು ಹೇಳಿದಾಗ ತುಂಬ ಖುಷಿ ಪಟ್ಟರು. ನನ್ನ 8 ಜನ ಸಹಪಾಠಿಗಳೂ ನನಗೆ Congrats ಎಂದರು. ಸಂಜೆ ಹಾಸ್ಟೆಲ್‌ನಲ್ಲಿ ಇದನ್ನು ಹೇಳಿದೆ. ಎಲ್ಲ ಕಡೆ ಸುದ್ದಿಯಾಗಿ ಎಲ್ಲಾ ನನಗೆ ಅಭಿನಂದನೆಗಳನ್ನು ಹೇಳುವವರೇ. ಫಿಲಂ ನೋಡಿದ ಮೇಲೆ ಇದನ್ನೆಲ್ಲಾ ಹೇಳಿ ಎಂದೆ ನಾನು. ಸ್ಟುಡಿಯೋಗೆ ಹೋಗಿ ರಾಣೋಜಿಯವರಿಗೆ ವಿಷಯ ಹೇಳಿದೆ. 'ನೋಡ್ದಾ! ನಾನೇಳಲಿಲ್ವಾ ನಿನಗೆ ಸಿನಿಮಾದಲ್ಲಿ ಚಾನ್ಸ್ ಸಿಗುತ್ತೆ ಅಂತ' ಎಂದು ಹೊಗಳಿದರು. 'ಇದೆಲ್ಲಾ ಕಾಶಿ ವಿಶ್ವನಾಥನ ಕೃಪೆ ಸರ್' ಎಂದು ಹೇಳಿ, ಅಲ್ಲಿಂದ ದೇವಸ್ಥಾನಕ್ಕೆ ಹೋಗಿ ದೇವರಿಗೆ ಅಡ್ಡಬಿದ್ದು ಶಾಸ್ತ್ರಿಗಳಿಂದ ತೀರ್ಥ ಹೂವು ತೆಗೆದುಕೊಂಡು, ಪಕ್ಕದಲ್ಲೇ ಇದ್ದ ನವಗ್ರಹಗಳಿಗೆ ಮೂರು ಸುತ್ತು ಹೊಡೆದು, ಕುಂಕುಮ ಹಚ್ಚಿಕೊಂಡು ಹೊರಗೆ ಬಿಲ್ವಪತ್ರೆ ಮರದ ಕೆಳಗೆ ಇದ್ದ ಕಲ್ಲು ಹಾಸಿನ ಮೇಲೆ ಕುಳಿತೆ. ದೇವಸ್ಥಾನದ ಪರಿಚಾರಕರಾಗಿ ಕೆಲಸ ಮಾಡುತ್ತಿದ್ದ ಗಂಗಪ್ಪನವರು ನನ್ನ ಕಂಡು ಹತ್ತಿರ ಬಂದರು. 'ಅವತ್ತು ನಾಟಕ ತುಂಬಾ ಚೆನ್ನಾಗಿತ್ತು ಸಾರು, ನಿಮ್ಮ ಪಾರ್ಟ್ ಅಂತೂ ಸಕತ್ತಾಗಿತ್ತು. ಆ ಮೀಸೆ ಒಂದು ಕೆಳಗೆ ಬೀಳದಿದ್ದರೆ ಇನ್ನೂ ನಾಟಕ ಕಳೆಕಟ್ಟಿತ್ತು' ಅಂದರು. 'ಆ, ಮೇಕಪ್ ಮ್ಯಾನ್, ಮೀಸೇನ ಸರಿಯಾದ ಗಂ ಹಾಕದೇ ಅಂಟಿಸಿದ್ದರಿಂದಲೇ ಇಷ್ಟೆಲ್ಲಾ ಆಯ್ತು' ಎಂದು ಹೇಳಿ, 'ಗಂಗಪ್ಪ ನಿನ್ನ ಹತ್ತಿರ ಒಂದು ವಿಷಯ ಕೇಳಬಹುದಾ ಅಂದೆ. `ಏನೇಳಿ” ಅಂದರು, ನನ್ನ ಪಕ್ಕಕ್ಕೆ ಆತ ಬಂದು ಕುಳಿತ. ತಡವಾಗಿದ್ದರಿಂದ ಶಾಸ್ತ್ರಿಗಳು ಪೂಜೆಯನ್ನು ಸಮಾಪ್ತಿಗೊಳಿಸಲು ಆಣೆಯಾಗುತ್ತಿದ್ದರು. 'ಹಾಸ್ಟೆಲ್ ಟ್ರಸ್ಟಿನ ಅಜ್ಜಿ ಇದ್ದಾರಲ್ಲ, ಅವರ ಜತೆ ನಾಟಕದ ದಿನ ಒಂದು ಹುಡುಗಿ ಬಂದಿತ್ತು. ಅವರು ಯಾರು?' ಅಂದೆ. “ಓ, ಅದಾ ಅವರ ಮೊಮ್ಮಗಳು, ಗಾಂಧಿನಗರ ಹೈಸ್ಕೂಲ್‌ನಲ್ಲಿ ಓದ್ತಾ ಇದೆ. ಯಾವಾಗಲಾದರೂ ಬಸ್ಸಲ್ಲಿ ಆಜ್ಜಿ ಈ ಕಡೆ ಬರುವಾಗ ಕರೆದುಕೊಂಡು ಬತ್ತಾರೆ ಅಂದ, ಅಷ್ಟರಲ್ಲಿ ಶಾಸ್ತ್ರಿಗಳು ಗಂಗಣ್ಣ, ಬಾಪ್ಪ ಲೈಟು ಆರಿಸಿ, ಭದ್ರವಾಗಿ ಎರಡೂ ಕಡೆ ಬೀಗ ಹಾಕು' ಎಂದು ಕೂಗಿದರು. ಗಂಗಪ್ಪ ಆ ಕಡೆ ಹೋದರು. ನಾನು ರೂಂನತ್ತ ನಡೆದೆ.
ಈ ಮಧ್ಯೆ ಅಕ್ಕನಿಗೆ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ 3ನೇ ಹೆರಿಗೆಯಾಗಿ ಗಂಡು ಮಗು ಆಯ್ಕೆಂದೂ, ತಾಯಿ, ಮಗು ಚೆನ್ನಾಗಿದ್ದಾರೆಂದೂ, ಅಕ್ಕ ನಿನ್ನನ್ನು ಕೇಳುತ್ತಿದ್ದಾರೆಂದು ಜಯಣ್ಣನಿಂದ ಕಾರ್ಡು ಬಂತು, ಕೂಡಲೇ ಮಧುಗಿರಿ: ಬಸ್ ಹತ್ತಿದೆ. ಆಸ್ಪತ್ರೆಗೆ ಹೋಗಿ ಅಕ್ಕ ಮತ್ತು ಮಗುವನ್ನು ನೋಡಿದೆ. 'ಯಾವಾಗ ಡಿಸ್‌ಚಾರ್ಜ್ ಮಾಡ್ತಾರೆ' ಎಂದೆ. 'ಇವತ್ತೋ ನಾಳೆನೋ' ಅಂದರು ಭಾವನವರು, 'ಬಾಣಂತಿನೂ ಮಗೂನು ಭಕ್ತರಹಳ್ಳಿಯಲ್ಲಿ ಯಾರು ನೋಡ್ಕೊಳ್ತಾರೆ. ತಿಪ್ಪನಹಳ್ಳಿಗೆ ಕರೆದುಕೊಂಡು ಹೋಗು' ಅಂದ ಅಮ್ಮನಿಗೆ, 'ಅಂಗೇ ಆಗಲಿ, ನಮ್ಮನ್ನು ತಿಪ್ಪನಹಳ್ಳಿಗೆ ಬಿಟ್ಟು ನೀನು ಬೆಂಗಳೂರಿಗೆ ಹೋಗು' ಅಂದರು ಅಮ್ಮ ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ಮಧುಗಿರಿಯಿಂದ ಒಂದು Taxi ಮಾಡಿಕೊಂಡು ಅವರನ್ನು ಊರಿಗೆ ಕರೆತಂದೆ. ಎರಡು ದಿನ ಇದ್ದು ನಂತರ ನಾನು ಬೆಂಗಳೂರಿಗೆ ಹಿಂದಿರುಗಿದೆ.
ಏಪ್ರಿಲ್ ಮೊದಲ ವಾರ, ಇನ್ನೇನು ಕಾಲೇಜು ಆಂತರಿಕ 2ನೇ ಬಿಕಾಂ ಪರೀಕ್ಷೆಗಳು ಮುಗಿಯಲು 2 ದಿನ ಇದ್ದವು. ಪ್ರಿನ್ಸಿಪಾಲರಿಂದ ಕರೆ ಬಂತು. 'ಹೋಗಿ ನಮಸ್ಕಾರ ಸರ್' ಎಂದೆ. 'ನೋಡಪ್ಪ, ನೀನು ಭಾನುವಾರ ಬೆಳಗ್ಗೆ 8 ಗಂಟೆಗೆ ಶೂಟಿಂಗ್‌ಗೆ ಹಾಜರಾಗಬೇಕು. ಕೋಟು, ಟೈ ಯಾವುದೂ ಬೇಡ. ಸಿಂಪಲ್ಲಾಗಿ ಒಂದು ಇಸ್ತ್ರಿ ಮಾಡಿದ ಕಲರ್ ಶರಟು, ಒಂದು ಪ್ಯಾಂಟು, ಕಾಲಿಗೆ ಚಪ್ಪಲಿ ಹಾಕಿಕೊಂಡು ಶೇವ್ ಮಾಡಿಕೊಂಡು ಬಂದು ಬಿಡು, ಮಿಕ್ಕದ್ದನ್ನು ಫಿಲಂ ಡಿವಿಷನ್‌ನವರು ಹೇಳುತ್ತಾರೆ ಎಂದರು. "ಆಗಲಿ ಸಾರ್' ಎಂದು ಕ್ಲಾಸಿಗೆ ಹೋಗಿ, ಹಾಸ್ಟೆಲ್‌ಗೆ ಹಿಂದಿರುಗಿದೆ.
ಪ್ರಿನ್ಸಿಪಾಲರ ಸೂಚನೆಯಂತೆ ಭಾನುವಾರ ಟಿಪ್‌ಟಾಪ್ ಆಗಿ ಡ್ರೆಸ್ ಮಾಡಿಕೊಂಡು ರೂಟ್ ನಂ. 11ನೇ ಬಸ್ ಹತ್ತಿ ಮಹಾರಾಣಿ ಕಾಲೇಜು ಹತ್ತಿರ ಇಳಿದು RC ಕಾಲೇಜಿಗೆ ನಡೆದುಕೊಂಡು ಬಂದೆ. ಕಾಲೇಜಿಗೆ ರಜೆಯಾದ್ದರಿಂದ ಬಿಕೋ ಎನ್ನುತ್ತಿತ್ತು. ಕಾಲೇಜು ಸೂಪರಿಂಟೆಂಡೆಂಟ್' ಅಂಜನಪ್ಪನವರೂ, ಲೈಬ್ರರಿಯನ್ ಹಾಗೂ ಫಿಲಂ ಡಿವಿಷನ್‌ರವರು ನನಗಾಗಿ ಕಾಯುತ್ತಿದ್ದರು. ಗ್ರೀನ್ ಕಲರ್ ಷರಟು, ಬಿಳಿ ಪ್ಯಾಂಟು ಹಾಕಿದ್ದೆ. 'Very Good' ಎಂದ ಫಿಲಂ ಟೀಂ ನವರು 'ಇಲ್ಲಿ ಬಾ, ಸ್ವಲ್ಪ ಮುಖಕ್ಕೆ ಬಣ್ಣ ಹಚ್ತೀವಿ, ನಂತರ ತಲೆ ಬಾಚಿಕೋ' ಎಂದು ಹೇಳಿದರು. ಅದರಂತೆ ರೆಡಿಯಾಗಿ ಲೈಬ್ರರಿಯ ಹತ್ತಿರ ಹೋದೆವು. ಒಟ್ಟು ನಿನಗೆ 6 ಷಾಟ್‌ಗಳಿವೆ' ಎಂದು ವಿವರಿಸಿದರು. ಲೈಬ್ರರಿ ಪ್ರವೇಶ ನಂತರ ಬುಕ್ ಶೆಲ್ಫ್ ಹತ್ತಿರ ಹೋಗುವುದು, ನಂತರ ಬುಕ್ ಶೆಲ್ಪಿನಲ್ಲಿ ಪುಸ್ತಕ ಆಯ್ಕೆ ಮಾಡುವುದು, ನಂತರ ಅದನ್ನು ತೆಗೆದುಕೊಂಡು ಪಕ್ಕದಲ್ಲಿರುವ ಟೇಬಲ್‌ಗೆ ಒಂದು ಕುರ್ಚಿಯ ಮೇಲೆ ಕುಳಿತು, ಪುಸ್ತಕ ಓಪನ್ ಮಾಡುವುದು, ನಂತರ ಪುಸ್ತಕ ಓದುವುದರಲ್ಲಿ ಮಗ್ನವಾಗುವುದು, ಸ್ವಲ್ಪ ಹೊತ್ತಿನ ನಂತರ ಅವರು ನೀಡಿದ್ದ ನೋಟ್ ಬುಕ್‌ನಲ್ಲಿ ಜೇಬಿನಿಂದ ಪೆನ್ ತೆಗೆದು Note ಮಾಡಿಕೊಳ್ಳುವುದು ಎಂದು ಸೀಕ್ವೆನ್ಸ್ ನ್ನು ಕ್ಯಾಮರಾಮ್ಯಾನ್ ವಿವರಿಸಿದರು. ಇದಕ್ಕೆ ಧೈರ್ಯದಿಂದ ತಯಾರಾಗಿ ಬಂದಿದ್ದೆ ನನ್ನ ನಾಟಕದ ಆನುಭವ ನನಗೆ ಆಸರೆಯಾಯಿತು,
ಕ್ಯಾಮೆರಾಮ್ಯಾನ್ ಅಷ್ಟರಲ್ಲಾಗಲೇ ಇಡೀ ಮಸ್ತಕ ಭಂಡಾರವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಲೈಟ್ ವ್ಯವಸ್ಥೆ ಮಾಡಿಕೊಂಡು ನಿಂತಿದ್ದರು, ಸೌಂಡ್ ಇಲ್ಲ, Voice over ನಲ್ಲಿ ಕಾಮೆಂಟರಿಯನ್ನು ನುರಿತ ತಜ್ಞರಿಂದ ಹೇಳಿಸುವುದಾಗಿ ಅವರು ತಿಳಿಸಿದರು. ಶೂಟಿಂಗ್ ಆರಂಭವಾಗಿ ಮೊದಲ ಶಾಟ್ ಯಾವುದೇ ಅಡಚಣೆ ಇಲ್ಲದೆ ಆಯಿತು. ನಂತರ ಇತರ ಶಾಟ್‌ಗಳು ಮುಗಿದು Very Good You are a very good Actor' ಎಂದು ಶಭಾಶಗಿರಿ ಕೊಟ್ಟರು Camera Man.
ಮೈ ಎಲ್ಲಾ ಬೆವರಿತ್ತು, 'ಇನ್ನು ನಾನು ಹೋಗಬಹುದಾ ಸಾರ್' ಎಂದೆ. 'ಸ್ವಲ್ಪ ಇಲ್ಲೇ ಕೂತಿರು, ಒಂದು ಸಾರಿ Rushes ನೋಡ್ತೀನಿ, ಏನಾದರೂ ಮಿಸ್ ಆಗಿದ್ದರೆ, Re Shoot ಮಾಡಬೇಕಾಗುತ್ತೆ' ಅಂದರು. ಹಾಗೆ ಮಾಡಿದೆ. ಸ್ವಲ್ಪ ಹೊತ್ತಿನ ನಂತರ 'ಎಲ್ಲಾ ಚೆನ್ನಾಗಿ ಬಂದಿದ. ನೀನು ಹೋಗಬಹುದು' ಎಂದರು. 'Documentary ಯಾವಾಗ Release ಆಗುತ್ತೆ' ಅಂದೆ. 'ಕನಿಷ್ಠ 3 ತಿಂಗಳು ಬೇಕು. ಇಂಗ್ಲಿಷ್ - ಹಿಂದಿ ಭಾಷೆಯಲ್ಲಿ ಕಾಮೆಂಟರಿ ಮಾಡಬೇಕು. ಇದೆಲ್ಲಾ ಆಗಿ ಥಿಯೇಟರಿಗೆ ಬರಲು 4 ರಿಂದ 6 ತಿಂಗಳುಗಳಾಗುತ್ತದೆ' ಎಂದರು. 'ಸರಿ ಸಾರ್' ಎಂದು ಹೇಳಿ, ಅಂಜನಪ್ಪ ಸಾರ್ ಗೆ ನಮಸ್ಕಾರ ಹೇಳಿ ಹಾಸ್ಟೆಲ್‌ಗೆ ನಡೆದುಕೊಂಡು ಬಂದೆ, 'ನಾನೂ ದೇವಾನಂದನ ತರಹ ಕಲಾವಿದನಾದೆ' ಎಂಬ ಅಲ್ಪತೃಪ್ತಿ ಹಾಗೂ ಹೆಮ್ಮೆ ಮನಸ್ಸಿನಲ್ಲಿ ತುಂಬಿತ್ತು.