ಇಲಾಖಾ ತರಬೇತಿಯಲ್ಲೇ ಹನಿಮೂನ್!

ಆತ್ಮ ಕಥನ-ಚಿಕ್ಕಣ್ಣ,ಐಎಎಸ್(ವಿ)

ಇಲಾಖಾ ತರಬೇತಿಯಲ್ಲೇ ಹನಿಮೂನ್!

ಹಳ್ಳಿ ಹೈದನ ನೂರೆಂಟು ನೆನಪು

ಚಿಕ್ಕಣ್ಣ , ಐಎಎಸ್ (ವಿ)

 

(ಹಿಂದಿನಿಂದ)
        ಬುಧವಾರ ನಮ್ಮ ತರಬೇತಿ ಕಾರ್ಯಕ್ರಮ ಪಕಟವಾಯಿತು. ಅದರಂತೆ ಮೊದಲ 6 ತಿಂಗಳ ಕೇಂದ್ರ ಕಛೇರಿಯಲ್ಲಿ. ನಂತರ, ಜನವರಿ 30, 1967 ರಿಂದ ಕೊಪ್ಪಳದ ಎಟಿಐನಲ್ಲಿ ಎರಡು ತಿಂಗಳು, ಅಲ್ಲಿಂದ ಎರಡು ತಿಂಗಳು ರಾಯಚೂರು ಸಹಾಯಕ ನಿರ್ದೇಶಕರ ಕಛೇರಿಯಲ್ಲಿ, ಅಲ್ಲಿಂದ ಎರಡು ತಿಂಗಳು ಗುಲಬರ್ಗ ಮಾದರಿ ಮರ ಕೆಲಸ ಮತ್ತು ಕಮ್ಮಾರಿಕೆ ಕೇಂದ್ರ - ಹೀಗೆ ಫೀಲ್ಡ್ ಟ್ರೈನಿಂಗ್ 6 ತಿಂಗಳು. ಅದು ಮುಗಿದ ಮೇಲೆ, ಅಂದರೆ ಜುಲೈ ಆಗಸ್ಟ್ ತಿಂಗಳು ಮೈಸೂರು ಪೇಪರ್ ಮಿಲ್ಸ್ ಭದ್ರಾವತಿ, ಸೆಪ್ಟೆಂಬರ್- ಅಕ್ಟೋಬರ್ 1967 ಹೊಸ ಸರ್ಕಾರಿ ವಿದ್ಯುತ್ ಕಾರ್ಖಾನೆ ಮತ್ತು ನವೆಂಬರ್-ಡಿಸೆಂಬರ್ ಎರಡು ತಿಂಗಳು ಭಾರತೀಯ ದೂರವಾಣಿ ಕಾರ್ಖಾನೆ (ಕೇಂದ್ರ ಸರ್ಕಾರದ ಉದ್ಯಮ) ಇಲ್ಲಿ ತರಬೇತಿ ಎಂದು ನಿಗದಿ ಮಾಡಿ ಆದೇಶವಾಗಿತ್ತು. ಬೇರೇನೂ ವಿಧಿ ಇಲ್ಲ. ಹೊಸದಾಗಿ ಕೆಲಸಕ್ಕೆ ಸೇರಿದ್ದು ತರಬೇತಿಯಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ' ಎಂದುಕೊಂಡು ಸುಮ್ಮನಾದೆ.


    ಆ ಕಾಲದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ Top Five ಇಲಾಖೆಗಳಲ್ಲಿ ಒಂದಾಗಿತ್ತು. 1902ರಲ್ಲಿ ಮಂಡ್ಯ ಜಿಲ್ಲೆಯ ಶಿವನಸಮುದ್ರದಲ್ಲಿ ಜಲವಿದ್ಯುತ್ ಘಟಕ ಪ್ರಾರಂಭವಾಗಿ, ಅಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯನವರು 'ಕೈಗಾರಿಕೀಕರಣ, ಇಲ್ಲವೇ ನಾಶ' (Industrialise or Perish) ಎಂಬ ಸಂದೇಶವನ್ನು ನೀಡಿದ್ದು ಜನ ಮಾನಸದಲ್ಲಿ ಹಾಗೂ ಆಡಳಿತದಲ್ಲಿರುವವರಲ್ಲಿ ಗಾಢವಾಗಿ ಚಿಂತಿಸುವಂತೆ ಮಾಡಿತ್ತು. ಪರಿಣಾಮವಾಗಿ 1912ರಲ್ಲಿ ಮೈಸೂರು ಸಂಸ್ಥಾನದ ಕೈಗಾರಿಕಾ ಸಮೀಕ್ಷೆಯನ್ನು ನಡೆಸಲು ಅಂದಿನ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಆದೇಶಿಸಿದರು. 1913ರಲ್ಲಿ ನಮ್ಮ ಕೈಗಾರಿಕಾ ಇಲಾಖೆ ಆರಂಭಿಸಲಾಗಿ, ನಂತರ ಅದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ' ಎಂದು ನಾಮಕರಣವಾಯಿತು. 1915ರಲ್ಲಿ ಸರ್ಕಾರಿ ಗಂಧದೆಣ್ಣೆ ಕಾರ್ಖಾನೆ ಮೈಸೂರಲ್ಲ್ಲಿ, 1918ರಲ್ಲಿ ಬೆಂಗಳೂರಲ್ಲಿ ಮೈಸೂರು ಸಾಬೂನು ಕಾರ್ಖಾನೆ, ಮಂಗಳೂರಲ್ಲಿ ವಾಸ ಹೆಂಚಿನ ಕಾರ್ಖಾನೆ, 1919ರಲ್ಲಿ ಬೆಂಗಳೂರಿನ ಮಿನರ್ವ ಮಿಲ್ ಸ್ಥಾಪನೆಯಾದವು.


      ಕೈಗಾರಿಕಾಭಿವೃದ್ಧಿಗೆ ಪೂರಕವಾಗಿ 1913ರಲ್ಲಿ ಮೈಸೂರು ಬ್ಯಾಂಕು, ವಾಣಿಜ್ಯ ಮಂಡಳಿಗಳನ್ನು ಬೆಂಗಳೂರಲ್ಲಿ ಸ್ಥಾಪಿಸಲಾಯಿತು. ಇದರ ಬೆನ್ನ ಹಿಂದೆ ಬೆಂಗಳೂರಿನಲ್ಲಿ ಸಿಗರೇಟು ತಯಾರಿಕಾ ಕಂಪನಿ ಆರಂಭವಾಯಿತು. ನಂತರ 1923ರಲ್ಲಿ ಭದ್ರಾವತಿಯ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (MISL), 1924ರಲ್ಲಿ ಮೈಸೂರಿನಲ್ಲಿ ಕೆಆರ್ ಮಿಲ್, 1927ರಲ್ಲಿ ಕೃಷ್ಣರಾಜೇಂದ್ರ ಟೆಕ್ನಲಾಜಿಕಲ್ ಇನ್ಸ್ಸ್ಟಿಟ್ಯೂಟ್ (ಈಗಿನ ಎಸ್‌ಜೆ ಪಾಲಿಟೆಕ್ನಿಕ್) ಆರಂಭಿಸಿ ಅನೇಕ ತಂತ್ರಜ್ಞರನ್ನು ತಯಾರಿಸಲು ನೆರವಾಯಿತು. ಅದಾದ ಮೇಲೆ 1934ರಲ್ಲಿ ಬಿಹೆಚ್‌ಇಎಲ್, ರೆಂಕೋ ಕಾರ್ಖಾನೆ, 1934ರಲ್ಲಿ ಅಮ್ಕೊ ಬ್ಯಾಟರೀಸ್, 1935ರಲ್ಲಿ ಕೃಷ್ಣ ಫ್ಲೋರ್ ಮಿಲ್, 1937ರಲ್ಲಿ ಭದ್ರಾವತಿಯಲ್ಲಿ ಮೈಸೂರು ಕಾಗದದ ಕಾರ್ಖಾನೆ, ನಂತರ ಜಿಇಎಫ್ ಕಾರ್ಖಾನೆಗಳು, 1938ರಲ್ಲಿ ಮೈಸೂರು ವೆಜಿಟೆಬಲ್ ಆಯಿಲ್ ಕಾರ್ಖಾನೆ, 1940ರಲ್ಲಿ ಕೇಂದ್ರ ಸರ್ಕಾರದ ಹೆಚ್‌ಎಎಲ್ ಕಾರ್ಖಾನೆ, 1946ರಲ್ಲಿ ಭಾರತೀಯ ಟೆಲಿಫೋನ್ ಕಾರ್ಖಾನೆ (ಐಟಿಐ), ಮೈಸೂರು ಕಿರ್ಲೋಸ್ಕರ್ ಕಾರ್ಖಾನೆ, ಬೆಂಗಳೂರು ಮತ್ತು ಹರಿಹರದಲ್ಲಿ ಆರಂಭವಾದವು.


     ದೇಶದಲ್ಲಿ, ಜವಹರ್‌ಲಾಲ್ ನೆಹರೂ ಅವರ ನೇತೃತ್ವದಲ್ಲಿ, ಮೊದಲ ಪಂಚವಾರ್ಷಿಕ ಯೋಜನೆ ಕೈಗೊಂಡು ಮೈಸೂರು ಸಂಸ್ಥಾನ ಕೈಗಾರಿಕಾಭಿವೃದ್ಧಿಗೆ ಅತಿ ಹೆಚ್ಚು ಆರ್ಥಿಕ ನೆರವು ನೀಡಿದ್ದರು. ಎರಡನೇ ಪಂಚವಾರ್ಷಿಕ ಯೋಜನೆಗಳಲ್ಲಿ ಸಣ್ಣ ಕೈಗಾರಿಕೆಗಳು ಗುಡಿ ಕೈಗಾರಿಕೆಗಳು, ಖಾದಿ ಮತ್ತು ಗ್ರಾಮೋದ್ಯೋಗಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಯಿತು. ಅದೇ ಸಮಯದಲ್ಲಿ ಮೈಸೂರು ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಯಿತು. ಮೂರನೇ ಪಂಚವಾರ್ಷಿಕ ಯೋಜನೆಯಲ್ಲಿ ಸಮಗ್ರ ಕೈಗಾರಿಕಾ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿ ರೇಷ್ಮೆ ಅಭಿವೃದ್ಧಿ, ರೇಷ್ಮೆ ಕೈಗಾರಿಕೆಗಳು ಮೈಸೂರು ಮತ್ತು ಚನ್ನಪಟ್ಟಣದಲ್ಲಿ ಆರಂಭವಾದವು. 1940ರ ಸುಮಾರಿಗೆ ಸರ್ಕಾರಿ ವಿದ್ಯುತ್ ಕಾರ್ಖಾನೆ (ಜಿಇಎಫ್) ಸ್ಥಾಪಿಸಿ ವಿದ್ಯುತ್ ಉಪಕರಣಗಳು, Transformer ಗಳು, ಮೋಟಾರ್, ಪಂಪ್‌ಗಳನ್ನು ಉತ್ಪಾದನೆ ಮಾಡಲಾಯಿತು. 1961ರಲ್ಲಿ ಪಶ್ಚಿಮ ಜರ್ಮನಿಯ ನೆರವಿನೊಂದಿಗೆ ಬೆಂಗಳೂರಲ್ಲಿ ಎನ್ ಜಿಇಎಫ್ ಸ್ಥಾಪಿಸಲಾಯಿತು. ಈ ಎಲ್ಲಾ ಕೈಗಾರಿಕಾ ಅಭಿವೃದ್ಧಿಗಳ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ನಿಗಾ ವಹಿಸಲು ಮೈಸೂರು ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿ ನಿಗಮ (ಈಗಿನ ಕೆಎಸ್‌ಐಐಡಿಸಿ) ಪ್ರಾರಂಭಿಸಿ, ರಾಜ್ಯ ಸರ್ಕಾರವು ಕೆಲವು ಹೊಸ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಆಡಳಿತದಲ್ಲಿ ಪಾಲುಗಾರಿಕೆ ಹೊಂದುವ ಯೋಜನೆಯನ್ನು ಆರಂಭಿಸಲಾಯಿತು.


     ಈ ಎಲ್ಲಾ ಕೈಗಾರಿಕೆಗಳ ಆಡಳಿತವನ್ನು ಸಮನ್ವಯಗೊಳಿಸಲು ಕೈಗಾರಿಕಾ ನಿರ್ದೇಶನಾಲಯದಲ್ಲಿBoard of Management for Industrial Concerns ಎಂದು ರಚನೆ ಮಾಡಿ, ಕೈಗಾರಿಕಾ ಸಚಿವರ ಅಧ್ಯಕ್ಷತೆಯಲ್ಲಿ ಕೈಗಾರಿಕಾ ಇಲಾಖಾ ಕಾರ್ಯದರ್ಶಿಯವರು, ಕೈಗಾರಿಕಾ ಇಲಾಖಾ ನಿರ್ದೇಶಕರು, ಈ ಎಲ್ಲ ಕೈಗಾರಿಕೆಗಳ ವ್ಯವಸ್ಥಾಪಕ ನಿರ್ದೇಶಕರುಗಳು ಇದರ ಸದಸ್ಯರಾಗಿದ್ದು ಕೈಗಾರಿಕಾ ಜಂಟಿ ನಿರ್ದೇಶಕರು ಅದರ ಕಾರ್ಯದರ್ಶಿಯಾಗಿ ಸಮನ್ವಯಗೊಳಿಸುತ್ತಿದ್ದರು.

      ಕೈಗಾರಿಕೆಗಳನ್ನು ಸುಸೂತ್ರವಾಗಿ ಸಮನ್ವಯಗೊಳಿಸುವ ಜತೆಗೆ ರಾಜ್ಯದಲ್ಲಿ ಕಚ್ಚಾ ವಸ್ತುಗಳಾದ, ಉಕ್ಕು, ಕಬ್ಬಿಣ, ಕಲ್ಲಿದ್ದಲು, ಸಿಮೆಂಟ್‌ಗಳ ಸರಬರಾಜನ್ನು ನಿಯಂತ್ರಣಗೊಳಿಸುವುದು, ಹೊರದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ಪ್ಲಾಸ್ಟಿಕ್, ಸ್ಪೆನ್‌ಲೆಸ್ ಸ್ಟೀಲ್, ಅಗರ ಬತ್ತಿ, ಕೆಮಿಕಲ್ಸ್, ಬ್ಯಾಟರಿ Spares ಮುಂತಾದ ವಸ್ತುಗಳ ಆಮದಿಗೆ Essentiality Certificates ಗಳನ್ನು ನೀಡುವುದು; ರಫ್ತು ಕೈಗಾರಿಕೆಗಳಲ್ಲಿ ತಯಾರಾದ ವಸ್ತುಗಳನ್ನು ಹೊರ ದೇಶಗಳಿಗೆ ರಫ್ತು ಮಾಡಲು ಬೇಕಾದ ಕಾಯ್ದೆಗಳು, Incentive ಗಳನ್ನು ರೂಪಿಸುವುದೂ ಕೈಗಾರಿಕೆ ಇಲಾಖೆಯ ಜವಾಬ್ದಾರಿಯಾಗಿತ್ತು.

     ಇವುಗಳ ಜತೆಗೆ ಸಣ್ಣ ಕೈಗಾರಿಕಾ ಅಭಿವೃದ್ಧಿಗೆ ಆಯ್ದ ಕೆಲವು ಜಿಲ್ಲೆಗಳಲ್ಲಿ, ಕೇಂದ್ರ ಸರ್ಕಾರದ ಸಬ್ಸಿಡಿ ನೀಡುವುದು, ನೇಕಾರರು ಗುಡಿ ಕೈಗಾರಿಕೆಯವರಿಗೆ ಸಾಲ, ಮಾರುಕಟ್ಟೆ ಸಹಾಯ ಹಾಗೂ Subsidy ಗಳನ್ನು ಬಿಡುಗಡೆ ಮಾಡುವುದು ಮುಂತಾದ ಕೆಲಸಗಳೂ ನಮ್ಮ ಇಲಾಖೆಯ ಕಕ್ಷೆಗೆ ಬರುತ್ತಿದ್ದವು.

     ತರಬೇತಿಯ ದಿನಗಳನ್ನು, ಸ್ನೇಹಿತರೆಲ್ಲ ಸೇರಿ Enjoy ಮಾಡಿದೆವು. ಜಂಟಿ ನಿರ್ದೇಶಕರು ಎಸ್‌ಎಸ್‌ಐ ವಿಭಾಗದ ಅಫ್ಲಾಬ್ ಅಹಮದ್ ಖಾನ್, ಜಂಟಿ ನಿರ್ದೇಶಕರು, ಗ್ರಾಮೀಣ ಅಭಿವೃದ್ಧಿ ಪ್ರಾಜೆಕ್ಟ್, ಔರಾದ್ಕರ್, ಕಾರ್ಯದರ್ಶಿ, ಬಿಎಂಐಸಿ, ಮಾಣಿಕ ಭಟ್, ವಿಲಿಯಂ ನಜರೆತ್ ಮುಂತಾದ ಹಿರಿಯ ಅಧಿಕಾರಿಗಳು ಅವರವರ ಇಲಾಖೆಗಳ ಸಮಗ್ರ ಮಾಹಿತಿಯನ್ನು ನೀಡಿದರು. ಔರಾದ್ಕರ್ ತಮ್ಮ ಕೈಕೆಳಗೆ ಬರುತ್ತಿದ್ದ Rural Industries Projects ರಾಜ್ಯದ 7 ಜಿಲ್ಲೆಗಳಲ್ಲಿದ್ದು ಇಬ್ಬಿಬ್ಬರನ್ನು ಒಂದೊಂದು ಆರ್‌ಐಪಿಗೆ ಒಂದು ವಾರದ ಕಾಲ ನಿಯೋಜಿಸಿದ್ದರು, ಅದರ ಅಂಗವಾಗಿ ನಾನು ಮತ್ತು ಈರಯ್ಯ ಧಾರವಾಡಕ್ಕೆ ಒಂದು ವಾರ ಕಾಲ ಹೋಗಿದ್ದೆವು. ಅಲ್ಲಿ ನಮಗೆ ರಾಜಾತಿಥ್ಯದ ಜತೆಗೆ ಧಾರವಾಡದ ಖಾನಾವಳಿ ಊಟ, ರೊಟ್ಟಿ, ಕಾಯಿಪಲ್ಯ, ಜೋಳದ ಭಕ್ರಿ ಊಟ ಪರಿಚಯವಾಯಿತು. 'ಹೆಂಗಸರ ಹೆರಿಗೆ ಆಸ್ಪತ್ರೆ' ಎಂಬ ನಾಮಫಲಕ ನೋಡಿ, ಪಕ್ಕದಲ್ಲಿದ್ದ ಮುತ್ತಳ್ಳಿಯವರನ್ನು 'ಧಾರವಾಡದಲ್ಲಿ ಗಂಡಸರಿಗೂ ಹೆರಿಗೆ ಆಗುತ್ತೇನೀ' ಅಂದೆ. ಅವರು ಕಕ್ಕಾಬಿಕ್ಕಿ ಆದರು. 'ಯಾಕೆ ಸಾರ್ ಹಂಗೆ ಕೇಳಾಕತ್ತೀರಿ ಅಂದರು. 'ಅಲ್ಲಿ ಬೋರ್ಡ್ ನೋಡ್ರಿ' ಅಂತ ತೋರಿಸಿದೆ. ಗೊಳ್ಳೆಂದು ನಕ್ಕು, 'ಇಲ್ಲಿ ಹಂಗೆ ಸರ್' ಅಂದರು. ಇನ್ನೊಂದು ದಿನ ಹುಬ್ಬಳ್ಳಿಯಾಗೆ 'ಹರಿಯಣ ಹೆಂಡ ಲೂಮ್ ಕೆಂಪ' ಎಂಬ ಫಲಕ ನೋಡಿ 'ಇದೇನೀ, ಮುತ್ತಳ್ಳಿಯವರೇ' ಅಂದೆ. ಇದು 'ಹರಿಯಾಣ ಹ್ಯಾಂಡ್ ಲೂಮ್ ಕ್ಯಾಂಪ್ ಸರ್' ಅಂದರು. ಬಹಳ ಕನ್ನಡ ಅಕ್ಷರಗಳು ಮರಾಠಿ ಪ್ರಭಾವದಿಂದ ಕೂಡಿದ್ದವು. ಒಂದು ವಾರ ಕಾಲ ಧಾರವಾಡದ ವಾತಾವರಣವನ್ನು ಅನುಭವಿಸಿ ಅಧ್ಯಯನ ಮಾಡಿ ಮಿಶ್ರಾ ಫೇಡೆಯೊಂದಿಗೆ ಹಿಂದಿರುಗಿದೆವು.
******


ಶನಿವಾರ ಊರಿಗೆ ಹೋಗಿ ಅಕ್ಕಿ, ಬೇಳೆ, ಪಾತ್ರೆ ಪಡಗ, ತೆಂಗಿನ ಕಾಯಿ, ಹಾಸಿಗೆ ಎಲ್ಲಾ ಬಸ್ ಮೇಲೆ ಹಾಕಿಕೊಂಡು ಬಂದು, ಕಾಂತಮ್ಮನ ಜತೆ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಸೆಟಲ್ ಆದೆ. ಮಲ್ಲೇಶ್ವರ ಕೆಸಿ ಜನರಲ್ ಆಸ್ಪತ್ರೆ ಎದುರು ಬಿದಿರು ಬುಟ್ಟಿ ಹೆಣೆಯುವವರಲ್ಲಿ ಎರಡು ಬಿದಿರು ಕುರ್ಚಿ ಒಂದು ಟೀಪಾಯಿ ತಂದೆ. ಮಂಚ ಇಲ್ಲ. ನೆಲದ ಮೇಲೆ ಮಲಗೋದು, ಪಕ್ಕದಲ್ಲಿದ್ದ ಸೌದೆ ಅಂಗಡಿಯಿಂದ ಸೌದೆ ತಂದು ಅಡುಗೆ ಮಾಡೋದು ಹೀಗೆ ಸಂಸಾರ ಆರಂಭಿಸಿದೆವು.


ಒಂದು ಹದಿನೈದು ದಿನ ನಾವಿಬ್ಬರೂ ಒಟ್ಟಿಗೆ ಇದ್ದೆವು. ಯಾವುದೋ ರೂಂ ಮಾಡಿಕೊಂಡ ಬಿಎ (ಆನರ್ಸ್) ಓದುತ್ತಿದ್ದ ತಮ್ಮ ಜಯಣ್ಣ ರೂಂ ಖಾಲಿ ಮಾಡಿಕೊಂಡು ನಮ್ಮ ಮನೆಗೆ ಬಂದ. ಊರಿನಲ್ಲಿದ್ದ ಚಿಕ್ಕಪ್ಪನ ಮಗ ಚೌಡಪ್ಪ ಬಿಎಸ್ಸಿಯಲ್ಲಿ ಡುಂಕಿ ಹೊಡೆದು ಕೆಲಸ ಹುಡುಕುತ್ತೇನೆಂದು ಬೆಂಗಳೂರಿಗೆ ಬಂದು ಮನೆಯಲ್ಲಿ ಜಾಂಡಾ ಹೂಡಿದ. Grant-in-Aid ಇತ್ಯಾದಿ ಕೆಲಸಕ್ಕೆಂದು ವಾರಕ್ಕೊಮೆ, 15 ದಿನಕ್ಕೊಮ್ಮೆ ಬರುತ್ತಿದ್ದ, ಮೇಷ್ಟ್ರು ಶಂಕರಪ್ಪನವರು ಬಂದು ರಾತ್ರಿ ಮಲಗಿ ಬೆಳಗ್ಗೆ ಎದ್ದು ದಂಡಿನ ದಿಬ್ಬಕ್ಕೆ ಹಿಂತಿರುಗುತ್ತಿದ್ದರು. ಕಷ್ಟವಾದರೂ ಮೊದಲ 6 ತಿಂಗಳ ಸಂಸಾರ ರಥ ಕುಂಟಿಕೊಂಡು ನಡೆಯಿತು, ಅದನ್ನು ನಿಭಾಯಿಸುವ ಧೈರ್ಯವೂ ನನಗೆ ಬಂತು.


ಕೊಪ್ಪಳದಲ್ಲಿ ಹನಿಮೂನ್


ಕೈಗಾರಿಕಾ ಇಲಾಖಾ ನಿರ್ದೇಶಕರು 2 ವರ್ಷದ ಪ್ರೋಬೇಷನರಿ ಅವಧಿಯ ತರಬೇತಿ ವೇಳಾಪಟ್ಟಿ ನಿಗದಿಪಡಿಸಿದಂತೆ, 27-7-1966ರಿಂದ ಕೇಂದ್ರ ಕಛೇರಿಯ ಮೊದಲ 6 ತಿಂಗಳುಗಳ ತರಬೇತಿಯನ್ನು ಮುಗಿಸಿ, ರಾತ್ರಿ ರೈಲಿನಲ್ಲಿ ನಾನೂ ನನ್ನ ಪತ್ನಿ ಇಬ್ಬರೂ ಕೊಪ್ಪಳಕ್ಕೆ ಪ್ರಯಾಣ ಬೆಳೆಸಿದೆವು, ಅಲ್ಲಿರುವ ಇಲಾಖೆಯ ಕಸುಬುದಾರರ ತರಬೇತಿ ಕೇಂದ್ರ (ಎ.ಟಿ.ಐ.)ದಲ್ಲಿ 2 ತಿಂಗಳ ತರಬೇತಿ ಕಾರ್ಯಕ್ರಮ, ಕೊಪ್ಪಳ ಪಟ್ಟಣದ ರೈಲು ನಿಲ್ದಾಣ ಮುಂದಿದ್ದ ಎರಡು ಎಕರೆ ಪ್ರದೇಶದಲ್ಲಿದ್ದ FARM HOUSE ನಲ್ಲಿ, ಅಲ್ಲಿಯ ದೊಡ್ಡ ಜಮೀನ್ದಾರರಾದ ಕರಡಿ ಸಂಗಣ್ಣ (Sr) ಅವರು ರೈಲು ಬೋಗಿಯಂತೆ ಕಟ್ಟಿಸಿದ್ದ ಸಣ್ಣ ಮನೆಯಲ್ಲಿ ವಾಸ್ತವ್ಯ ಹೂಡಿದೆವು. ಈ ಮನೆ ನಮ್ಮ ಎಟಿಐಗೆ ತುಂಬ ಹತ್ತಿರವಿತ್ತು. ದಿನವೂ ನಾನು ಎಟಿಐಗೆ ಹೋಗಿ ಬರುತ್ತಿದ್ದೆ. ಕರಡಿ ಕುಟುಂಬದವರು ನನ್ನ ಪತ್ನಿಗೆ ಅಡಿಗೆ ಮಾಡಲು ಬಿಡದೆ, ಅವರ ಮನೆಯಿಂದಲೇ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಗನ್ ಪೌಡರ್ ಥರದ ಮೆಣಸಿನಕಾಯಿ ಚಟ್ನಿಪುಡಿ, ಗಟ್ಟಿ ಹಾಲು, ಮೊಸರು ಕಳುಹಿಸುತ್ತಿದ್ದರು. ಸದಾ ಗಿಜಿಗುಡುತ್ತಿದ್ದ ಬೆಂಗಳೂರಿನ ಮನೆಯಲ್ಲಿ ನಾನೂ ಅವಳೂ, ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುವ ಅವಕಾಶವನ್ನು ಮಿಸ್ ಮಾಡಿಕೊಳ್ಳುತ್ತಿದ್ದೆವು ಎನಿಸತೊಡಗಿತು.


ಕೊಪ್ಪಳದ ಎರಡು ತಿಂಗಳ ವಾಸ್ತವ್ಯ, ಒಂದು ರೀತಿಯ ನಮ್ಮ ಹನಿಮೂನ್ ಸಮಯವೆಂಬಂತೆ ಕಾಲ ಕಳೆದೆವು. ತರಬೇತಿ ಚೆನ್ನಾಗಿ ನಡೆದು, 2 ತಿಂಗಳು ಕೊಪ್ಪಳದಲ್ಲಿ ಕಳೆದುದೇ ಗೊತ್ತಾಗಲಿಲ್ಲ. ಅವಧಿ ಮುಗಿದ ನಂತರ ಅವಳನ್ನು ಊರಿಗೆ ಬಿಟ್ಟು ಬಂದು, ನಾನು ಮುಂದಿನ ತರಬೇತಿಗಾಗಿ ರಾಯಚೂರು ಸಹಾಯಕ ನಿರ್ದೇಶಕರ ಕಛೇರಿಗೆ ಹಾಜರಾದೆ.


ರಾಯಚೂರು ಸ್ಟೇಷನ್ ರಸ್ತೆಯಲ್ಲಿದ್ದ, ಸಹಾಯಕ ನಿರ್ದೇಶಕರ ಕಛೇರಿಯ ಮೇಲೆ ಒಂದು ಕೋಣೆ ಖಾಲಿ ಇತ್ತು. ಅದರಲ್ಲಿಯೇ ವಾಸ್ತವ್ಯ ಹೂಡಿಕೊಂಡು, ರೈಲ್ವೆ ಸ್ಟೇಷನ್ ಕ್ಯಾಂಟೀನಲ್ಲಿ ಊಟ ಮಾಡಿಕೊಂಡು, ಸಹಾಯಕ ನಿರ್ದೇಶಕ ಜೊರಾಪುರ ಅವರ ಕಛೇರಿಯಲ್ಲಿ ಕುಳಿತು, ಸಹಾಯಕ ನಿರ್ದೇಶಕರ ಕರ್ತವ್ಯಗಳೂ, ಅವರ ಇಲಾಖೆಯ ಆರ್ಥಿಕ ಗುರಿ, ಸಾಧನೆಯ ಅಂಕಿ-ಅಂಶಗಳು, ಜಿಲ್ಲೆಯಲ್ಲಿ ನಡೆಯುವ ಸಭೆಗಳು, ಜನ ಸಂಪರ್ಕ, ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡೆ. ಏಪ್ರಿಲ್ ತಿಂಗಳಾದ್ದರಿಂದ ಕಂಡಾಪಟ್ಟೆ ಬಿಸಿಲು. ಹೇಗೋ ಎರಡು ತಿಂಗಳು ಕಾಲ ಕಳೆದು ಮುಂದಿನ ತರಬೇತಿ ಕೇಂದ್ರವಾದ ಎಂಸಿಎಸ್‌ಸಿ (Model Carpentry and Smithy Centre) ಗುಲಬರ್ಗದತ್ತ ಪಯಣಿಸಿದೆ.

(ಮುಂದುವರೆಯುವುದು)