ಹಿಂದಿನ ‘ಕಿನ್ನರಿ’ಯಿಂದ 'ಮುಂದೆ ಚೆನ್ನಾಗಿ ಓದಿ ದೊಡ್ಡ ಆಫೀಸರಾಗು' ಎಂದು ಹರಸಿದ ಗುರುಗಳು  

ಹಿಂದಿನ ‘ಕಿನ್ನರಿ’ಯಿಂದ 'ಮುಂದೆ ಚೆನ್ನಾಗಿ ಓದಿ ದೊಡ್ಡ ಆಫೀಸರಾಗು' ಎಂದು ಹರಸಿದ ಗುರುಗಳು  

ಹಿಂದಿನ ‘ಕಿನ್ನರಿ’ಯಿಂದ  'ಮುಂದೆ ಚೆನ್ನಾಗಿ ಓದಿ ದೊಡ್ಡ ಆಫೀಸರಾಗು' ಎಂದು ಹರಸಿದ  ಗುರುಗಳು   

 

 

ಹಿಂದಿನ ‘ಕಿನ್ನರಿ’ಯಿಂದ

'ಮುಂದೆ ಚೆನ್ನಾಗಿ ಓದಿ ದೊಡ್ಡ ಆಫೀಸರಾಗು' ಎಂದು ಹರಸಿದ

ಗುರುಗಳು

ಮೇ ತಿಂಗಳ ಕೊನೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂತು. ನಮ್ಮ ಹಾಸ್ಟೆಲ್‌ನಲ್ಲಿ 16 ಜನ ಪರೀಕ್ಷೆ ಬರೆದಿದ್ದರು. ಅವರ ಪೈಕಿ ನಾನೊಬ್ಬನೇ ಫಸ್ಟ್ ಕ್ಲಾಸ್‌ನಲ್ಲಿ ಪಾಸು ಮಾಡಿದ್ದು. ಮನೆಯಲ್ಲಿ ಎಲ್ಲರೂ ಖುಷಿಪಟ್ಟರು. ಅಂಕಪಟ್ಟಿ ಮತ್ತು ಕ್ಯಾರೆಕ್ಟರ್ ಸರ್ಟಿಫಿಕೇಟ್ ತರಲು ಒಂದು ದಿನ ಮಧುಗಿರಿಗೆ ಹೋದೆ. ಶಾಲೆಯ ಮುಂದೆ ದೊಡ್ಡ ಕ್ಯೂ ಇತ್ತು. ಮಧಾಹ್ನದ ಹೊತ್ತಿಗೆ ಎರಡನ್ನು ಪಡೆದು ಶಾಲೆಯಲ್ಲಿದ್ದ ನಮ್ಮ ಕ್ಲಾಸ್ ಟೀಚರ್ ಟಿಎನ್‌ಎನ್‌, ಚರಿತ್ರೆ ಟೀಚರ್ ಪಾವಗಡ ಕೃಷ್ಣಮೂರ್ತಿ, ಕನ್ನಡ ಮೇಷ್ಟ್ರು ಅಹಮದ್‌ ಶರೀಫ್ ಅವರಿಗೆ ಮಾರ್ಕ್ಸ್ ಕಾರ್ಡ್ ತೋರಿಸಿದೆ. ಖುಷಿಪಟ್ಟು ಬೆನ್ನ ತಟ್ಟಿ 'ಮುಂದೆ ಚೆನ್ನಾಗಿ ಓದಿ ದೊಡ್ಡ ಆಫೀಸರಾಗು' ಎಂದು ಯಥಾ ಪ್ರಕಾರ ಹರಸಿದರು.

 

ನಂತರ ನಮ್ಮ ಹಾಸ್ಟೆಲ್ ವಾರ್ಡ್‌ನ್ ಆರ್. ಚಿಕ್ಕಯ್ಯನವರ ಮನೆಗೆ ಹೋದೆ. ಅವರು ಹಾಸ್ಟೆಲ್‌ಗೆ ಹೋಗಿದ್ದಾರೆ, ಅಲ್ಲಿಯೇ ಹೋಗು' ಎಂದರು ಅವರ ಶ್ರೀಮತಿ. ಹಾಸ್ಟೆಲ್ ಕಡೆ ಓಡಿದೆ. ಅಲ್ಲಿ ಚಿಕ್ಕಯ್ಯನವರು ಎಂ.ಎಲ್.ಎ.ಯವರಾದ ಶ್ರೀ ಮಾಲಿಮರಿಯಪ್ಪ ಅವರ ಜೊತೆ ಮಾತನಾಡುತ್ತಾ ಕುಳಿತಿದ್ದರು. ನನ್ನನ್ನು ನೋಡಿದ ಕೂಡಲೇ 'ಬಾರೋ ಇಲ್ಲಿ!! ನಮ್ಮ ಹಾಸ್ಟೆಲ್‌ಗೆ ಒಳ್ಳೆ ಹೆಸರು ತಂದೆ' ಎಂದು ಪ್ರೀತಿಯಿಂದ ಕರೆದು 'ಸಾರ್,ಇವನು ನಮ್ಮ ಅಣ್ಣ, ಪಾಳ್ಯದ ಚೌಡಪ್ಪ ಅವರ ಮಗ, ತಿಪ್ಪನಹಳ್ಳಿಯವನು. ನಮ್ಮ ಹಾಸ್ಟೆಲ್‌ನಲ್ಲೇ ಇದ್ದು, SSLCಯಲ್ಲಿ ಇವನೊಬ್ಬನೇ Ist Class ಬಂದಿದ್ದಾನೆ ಯಾವಾಗಲೂ ಸಿನಿಮಾಕ್ಕೋಗಿ ಕಾಲ ಕಳೀತಾ ಇದ್ದ, ಒಂದು ಸಲ ಬೈದಿದ್ದೆ. ಆ ಮೇಲೆ ಸರಿಹೋದ, ಅವನು ಪಾಸಾಗೋದೆ ಇಲ್ಲ ಅಂತ ಅಂದುಕೊಂಡಿದ್ದೆ. ಆದರೆ 1st Class ಬಂದಿದ್ದಾನೆ' ಎಂದು ಶ್ರೀ ಮಾಲಿಮರಿಯಪ್ಪನವರಿಗೆ ವಿವರಿಸಿದರು.

 'ಹಾಸ್ಟೆಲ್ ಮಾಡಿದ್ದಕ್ಕೂ ಸಾರ್ಥಕ ಆಯ್ತು ಚಿಕ್ಕಯ್ಯನವರೆ, ಹುಡುಗ ಚೂಟಿಯಾಗಿದ್ದಾನೆ ಎಂದು, ನನ್ನ ಕಡೆ ತಿರುಗಿ 'ಮುಂದೇನು ಮಾಡ್ತೀಯಪ್ಪ' ಅಂದರು. `ಪಿಯುಸಿ ಸೇರುತ್ತಿದ್ದೇನೆ ಸಾರ್' ಎಂದೆ. 'Very Good' ಎಂದು ಹೇಳಿ 'ಮುಂದೆ ಏನಾದರೂ ಸಹಾಯ ಬೇಕಾದರೆ ನನ್ನ ಕಾಣು' ಎಂದರು. ಅವರಿಬ್ಬರಿಗೂ ಕಾಲಿಗೆರಗಿ ಆಶೀರ್ವಾದ ಪಡೆದ ಒಳಗೆ ಹೋಗಿ ಅಡಿಗೆಯವರಿಗೂ, ಇತರ ಪರಿಪಾಲಕರಿಗೂ ಧನ್ಯವಾದ ಹೇಳಿ ಊರಿಗೆ ಹಿಂದಿರುಗಿದೆ. ಮನೇಲಿ ಹಬ್ಬದ ಅಡಿಗೆ ಮಾಡಿದ್ದರು. ಕನ್ನಡದಲ್ಲಿ ಅತೀ ಹೆಚ್ಚು, Mathematicsನಲ್ಲಿ ಕಡಿಮೆ ಅಂಕಗಳು ಬಂದಿದ್ದವು. ಗಣಿತದಲ್ಲಿ ನಾನು ಹಿಂದೆ ಎಂದು ಸಾಬೀತಾಗಿತ್ತು, ಮತ್ತೊಮ್ಮೆ.

 

ಮಾರ್ಕ್ಸ್ ಕಾರ್ಡ್ ನೋಡಿದ ಮೇಲೆ ಅಪ್ಪ ನನ್ನನ್ನು ಕರೆದು 'ಮುಂದೆ ಓದಲೇ ಬೇಕಾ?' ಎಂದು ಪ್ರಶ್ನಿಸಿದರು. ಅಕ್ಕ ಮಧ್ಯ ಬಾಯಿ ಹಾಕಿ 'ಅವತ್ತೇ ತೀರ್ಮಾನ ಆಗಿತ್ತಲ್ಲಪ್ಪಾ, ಫೇಲಾದ ದಿನ ಅವನು ಮನೇಲಿರೋದು ಅಂತ ಈಗ ನೋಡು

ಫಸ್ಟ್  Class ಬಂದವನೆ, ಅವನು ಮುಂದೆ ಓದಲಿ, ತುಮಕೂರಿಗೆ ಸೇರಿಸು' ಅಂದು ಅಮ್ಮನೂ ದನಿ ಗೂಡಿಸಿದರು. ಸಂಜೆ ಊರಲ್ಲಿ 'ಸಂಪೂರ್ಣ ರಾಮಾಯಣ' ನಾಟಕ ಇತ್ತು.

 

ಮೇಷ್ಟ್ರು ವೀರಕ್ಯಾತಯ್ಯನವರ ಸೂಚನೆಯಂತೆ ರಾತ್ರಿಯಲ್ಲಿ ಸೈಡ್‌ ವಿಂಗ್‌ನಲ್ಲಿ ನಿಂತು ಡೈಲಾಗ್ ಪ್ರಾಂಪ್ಟ್ ಮಾಡಿದೆ. ಬೆಳಿಗ್ಗೆ 6 ಗಂಟೆಗೆ ನಾಟಕ ಮುಗಿಯಿತು.

 

ಅದರ ಮುಂದಿನ ವಾರ, ತುಮಕೂರಿಗೆ ಹೋದೆ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ಅರ್ಜಿ ತೆಗೆದುಕೊಂಡು ಭರ್ತಿಮಾಡಿದೆ. Subject ಎನ್ನುವ ಕಾಲಂನಲ್ಲಿ Commerce ಎಂದು ಬರೆದೆ. ನಾನು ಹೈಸ್ಕೂಲಿನಲ್ಲಿ Optional Hindi ತೆಗೆದುಕೊಂಡಿದ್ದು, ಬಿಎ ಓದಲು ನನಗೆ ಇಷ್ಟ ಇರಲಿಲ್ಲ. ಬಿಕಾಂ ಓದುವ ಆಸೆ, ಸರದಿ  ಸಾಲಿನಲ್ಲಿ ನನ್ನ ಸರದಿ ಬಂದಾಗ ಅಡ್ಮಿಷನ್ ಕಮಿಟಿಯಲ್ಲಿ ಇದ್ದವರು ನನ್ನನ್ನು ಆಪಾದಮಸ್ತಕದವರೆಗೂ ದಿಟ್ಟಿಸಿ ನೋಡಿ, 'ನೀನು SSLCC Maths ನಲ್ಲಿ ತುಂಬಾ ಕಡಿಮೆ ಮಾರ್ಕ್ಸ್ ತಕ್ಕೊಂಡಿದ್ದೀಯಾ, Commerceಗೆ Maths ಸಹ ಮುಖ್ಯ, Arts Course ಆಯ್ಕೆ ಮಾಡಿಕೋ' ಅಂದರು. 'ಇಲ್ಲ ಸಾರ್, ನಾನು ಬಿಕಾಂ ಓದಬೇಕೆಂದು ತುಂಬಾ ಆಸೆ ಇಟ್ಟುಕೊಂಡಿದ್ದೇನೆ. ದಯವಿಟ್ಟು ನನಗೆ ಕಾಮರ್ಸ್‌ Admission ಕೊಡಿ' ಎಂದೆ. ಅವರು ಒಳಗೆ Principal ಹತ್ತಿರ ಹೋಗಿ ಚರ್ಚಿಸಿ ಹೊರ ಬಂದು ಆಗಲಿ, ಕಾಮರ್ಸ್‌ಗೆ Admission ಮಾಡ್ತೀವಿ' ಎಂದು ಹೇಳಿದರು. 'ಇನ್ನೊಂದು ವಾರ ಬಿಟ್ಟು ಬಂದು ಫೀಸು ಕಟ್ಟಿ, ಕಾಲೇಜಿಗೆ ಸೇರಿಕೊ' ಎಂದರು. ನಾನು `Thank You Sir' ಎಂದು ಹೇಳಿ ಊರ ಹಾದಿ ಹಿಡಿದೆ.

 

ಒಂದು ವಾರ ಬಿಟ್ಟು ಬಂದು ಫೀಸು ಕಟ್ಟಿದೆ. ಸಂಕಾಪುರದ SSLC ಸ್ನೇಹಿತನೊಬ್ಬ, ಅವನೂ ಕಾಮರ್ಸ್‌ಗೆ ಸೇರಿಕೊಂಡಿದ್ದ. 'ಎಲ್ಲಿರೋದು?' ಎಂದು ಕೇಳಿದೆ. 'ಇಲ್ಲೇ Poor House Colonyಯಲ್ಲಿ ಒಂದು ರೂಂ ಮಾಡಿದ್ದೀನಿ. ದೊಡ್ಡದಾಗಿದೆ. ನೀನು ಬಂದು ಇರಬಹುದು. ಇಬ್ಬರೂ ಬಾಡಿಗೆ ಹಂಚಿಕೊಳ್ಳೋಣ. ಅಡಿಗೆ ಜತೆಯಲ್ಲಿಯೇ ಮಾಡ್ಕೊಂಡು ಕಾಲೇಜಿಗೆ ಹೋಗೋಣ' ಎಂದನು. ಆಗಲಿ ಎಂದು ಹೇಳಿ ಆತನ ಜತೆ ರೂಂಗೆ ಹೋದೆ. ಮಹಡಿ ಮೇಲೆ ಇದ್ದ ಸಿಂಗಲ್ ರೂಂ. ಹಿಂದುಗಡೆ ಸ್ನಾನಕ್ಕೆ, ಅಡಿಗೆ ಮಾಡಿಕೊಳ್ಳಲು ಜಾಗ ಇತ್ತು. ಕೆಳಗೆ ಕಕ್ಕಸು. ಬಾಡಿಗೆ ತಿಂಗಳಿಗೆ 10 ರೂಪಾಯಿ. ಸ್ನೇಹಿತನಾಗಲೇ ಸೀಮೆಎಣ್ಣೆ ಸ್ಟವ್ ಕೊಂಡು ಅನ್ನ ಮಾಡಿಕೊಳ್ಳುತ್ತಿದ್ದ. ಊರಿಂದ ಚಟ್ಟಿಪುಡಿ, ಚಿತ್ರಾನ್ನ ಗೊಜ್ಜು ಇತ್ಯಾದಿ ತಂದಿದ್ದ, ಸಂಜೆಯೇ ನಾನು ಊರಿಗೆ ಹಿಂದಿರುಗಿ ಎರಡು ದಿನ ಬಿಟ್ಟು, ಟ್ರಂಕಿನ ತುಂಬ ಅಕ್ಕಿ, ಬೇಳೆ, ಚಟ್ನಪುಡಿ, ಗೊಜ್ಜುಗಳನ್ನು ಹಾಸಿಗೆ ಹೊದಿಕೆಗಳನ್ನು ಬಸ್ಸಿನ ಮೇಲೆ ಹಾಕಿಕೊಂಡು ಬಂದು ರೂಂನಲ್ಲಿ ಸೆಟ್ಲ್  ಆದೆ. ಬೆಳಗ್ಗೆ ಅನ್ನ ಬೇಯಿಸಿ ಚಿತ್ರಾನ್ನ ಮಾಡಿಕೊಂಡು ತಿಂದು ಇಬ್ಬರೂ ಕಾಲೇಜಿಗೆ ಹೋಗುತ್ತಿದ್ದೆವು. ಸಂಜೆ ಬರುವಾಗ ಬಿ.ಹೆಚ್. ರಸ್ತೆಯಲ್ಲಿದ್ದ ಒಂದು ಹೋಟೆಲ್‌ನಲ್ಲಿ ಇಡ್ಲಿ ಅಥವಾ ಅರ್ಧ ಮಸಾಲೆ ದೋಸೆ ತಿನ್ನುತ್ತಿದ್ದೆವು. ರಾತ್ರಿ ಅನ್ನ ಸಾಂಬಾರ್ ಊಟ. ಒಂದು ವರ್ಷ ಆಡಾಡ್ತಾ ಹೇಗೋ ಕಳೆದು ಹೋಯಿತು.

 

ಜುಲೈ ತಿಂಗಳಲ್ಲಿ ಅಕ್ಕನಿಗೆ ಎರಡನೆಯ ಹೆರಿಗೆಯಾಗಿತ್ತು. ಗಂಡು ಮಗು ಹೆತ್ತಿದ್ದರು. ರಾಜಣ್ಣ ಎಂದು ನಾಮಕರಣ ಮಾಡಿದ್ದರು. ತಿಂಗಳಿಗೊಂದು ಸಲ ಅಥವಾ ಅಕ್ಕಿ, ಚಟ್ನ ಪುಡಿ ಮುಗಿದಾಗ ಊರಿಗೆ ಹೋಗಿ ತೆಗೆದುಕೊಂಡು ಬರುವುದಲ್ಲದೆ, ಚೌಕಾಸಿ ಮಾಡಿ ಅಪ್ಪನಿಂದ ಖರ್ಚಿಗೆ ದುಡ್ಡು ಪಡೆದುಕೊಂಡು ಬರುತ್ತಿದ್ದೆ.

(ಮುಂದಿನ ‘ಕಿನ್ನರಿ’ ಗೆ)