ಮುಧೋಳ್ ಎಂಬ ಹೆಸರು ಒಪ್ಪದ ಮುದ್ದ !!

ಮುಧೋಳ್ ಎಂಬ ಹೆಸರು ಒಪ್ಪದ ಮುದ್ದ !!

ಮುಧೋಳ್ ಎಂಬ ಹೆಸರು ಒಪ್ಪದ ಮುದ್ದ !!

ಮುದ್ದನಿಗೆ ಕಜ್ಜಿ ವಿರೋಧಿ ಇಂಜೆಕ್ಷನ್, ರೇಬಿಸ್ ವಿರುದ್ದದ ಇಂಜೆಕ್ಷನ್, ನಮ್ಮೂರು ನಾಯಿ ಪಾಳ್ಯವಾಗಿ ಬದಲಾಗಿರುವುದರಿಂದ ಮಕ್ಕಳು ಮರಿಗಳಾಗದಂತೆ ಇವನಿಗೆ ಇಂಜೆಕ್ಷನ್ ಕೊಡಿಸುವ ಇವೇ  ಮುಂತಾದ ನನ್ನ ಹುನ್ನಾರಗಳು ಸಾಕಾರಗೊಂಡಿಲ್ಲ. ಡಾಕ್ಟರ್ ಬಳಿ ಈ ವಿಷಯಗಳನ್ನು ಪ್ರಸ್ತಾಪಿಸಿದರೆ “ನೀವು  ಅದರ ಕೊರಳಿಗೆ ಬೆಲ್ಟ್ ಹಾಕಿ ಚೈನ್ ಬಿಗಿಯುವವರೆಗೆ ಇವ್ಯಾವ ಕೆಲಸಗಳು ಸಾಧ್ಯವಾಗುವುದಿಲ್ಲ” ಎನ್ನುತ್ತಾರೆ. ಈಗ ಇವನನ್ನು ಬಂಧಿಸುವುದೋ ಅಥವಾ ಈ ಮೇಲಿನ ನನ್ನ ಆಸೆಗಳನ್ನು ತ್ಯಜಿಸಿ ಹೊಂದಿಕೊಂಡು ಹೋಗುವುದೋ.

ಪ್ರಬಂಧ


ಕೃಷ್ಣಮೂರ್ತಿ ಬಿಳಿಗೆರೆ

ಮುಧೋಳ್ ಎಂಬ ಹೆಸರು ಒಪ್ಪದ ಮುದ್ದ !!


ಈ ನಾಯಿಗೆ ಒಂದು ಹೆಸರಿಡಬೇಕೆಂದು ಯೋಚಿಸುತ್ತಿದ್ದಾಗ ಅನೇಕ ಬಗೆಯ ಹೆಸರುಗಳು ಬಂದು ಹೋದವು. ಮುಧೋಳ್ ನಾಯಿಯ ಚಹರೆ ಈ ನಾಯಿಗೆ ಇದ್ದುದರಿಂದ ಮುಧೋಳ್ ಎಂಬ ಹೆಸರು ಫೈನಲ್ ಅಯಿತು. ಆದರೆ ಈ ಹೆಸರನ್ನು ಆ ನಾಯಿಗೆ ಶಾಶ್ವತಗೊಳಿಸುವುದು ಎರಡು ಕಾರಣಗಳಿಗಾಗಿ ಸಾಧ್ಯವಾಗಲಿಲ್ಲ. ನನ್ನ ಜೀವನ ಸಂಗಾತಿ ನನ್ನನ್ನೇ ನೀನು ಮುಧೋಳ್ ನಾಯಿಯ ಹಾಗೆ ಇದ್ದೀಯ ಸರಿಯಾಯ್ತು ಬಿಡು ಎಂದದ್ದು ಮೊದಲ ಕಾರಣ, ಬೀದಿ ನಾಯಿಯೊಂದನ್ನು ಕರೆದು  ಅನ್ನವನ್ನೋ ರೊಟ್ಟಿಯನ್ನೋ  ಹಾಕತೊಡಗಿ ಅದಕ್ಕೊಂದು ಹೆಸರು ಇಟ್ಟ ತಕ್ಷಣ ಅದು ನಾವು ಹೇಳಿದಂತೆ ಕೇಳುತ್ತದೆ ಎಂದು ತಿಳಿದಿದ್ದೆವು. ಅದು ಹಾಗಾಗಲಿಲ್ಲ. ಮುಧೋಳ್ ಎಂದು ಕರೆದರೆ ಅದು ತಿರುಗಿಯೂ ನೋಡುತ್ತಿರಲಿಲ್ಲ. ಅದರಷ್ಟ್ಟಕ್ಕದೇ ಬಂದಾಗ ಅನ್ನ ಹಾಕಬೇಕಾಗಿತ್ತು. ಎಷ್ಟೇ ಪ್ರೀತಿ ತೋರಿ ಮುಧೋಳ್, ಮುಧೋಳ್ ಎಂದು ಕೂಗಿಕೊಂಡರೂ ಅದು ಕ್ಯಾರೇ ಅನ್ನುತ್ತಿರಲಿಲ್ಲ. ಒಂದು ದಿನ ನನ್ನ ಒಳ ಮನಸ್ಸು  ಮುದ್ದ ಮುದ್ದ ಮುದ್ದ ಎಂದು ಕೂಗಿ ಕರೆಯಲು ಪ್ರೇರೇಪಿಸಿತು. ಹಾಗೆಯೇ ಕರೆದೆ, ಓಡಿ ಓಡಿ ಬಂದು ಮೈಮೇಲೆ ಬಿದ್ದು ಇದು ಸ್ವಾಮಿ ನನ್ನ ಹೆಸರು ಎಂಬಂತೆ ಒಪ್ಪಿಗೆ ಸೂಚಿಸಿದ. ಅಂದೇ ಅವನ ಹೆಸರಿನ ಮರು ನಾಮಕರಣವಾಯಿತು. ಇದು ಎರಡನೆ ಅಸಲಿ ಕಾರಣ. 


ತನಗೆ ಗೊತ್ತು ಗುರಿ ಇಲ್ಲದ ನಾಯಿಯ ತಳಿಯೊಂದರ ಹೆಸರನ್ನು ತನಗೆ ಇಟ್ಟು ಕೂಗಿದರೆ ನಾನು ಅವರ ಕೂಗಿಗೆ ಓಗೊಡಬೇಕಾ ಎಂಬುದು ಮುದ್ದನ ಚಿಂತನೆ ಇರಬೇಕು. ಮುದ್ದನಿಗೆ ಮುದ್ದ ಎಂಬ ಹೆಸರು ಪ್ರಿಯವಾಯಿತು. ಈಗ ಒಂದೇ ಸೊಲ್ಲಿಗೆ ಎಷ್ಟೇ ದೂರದಲ್ಲಿರಲಿ ಓಡಿ ಬರುತ್ತಾನೆ. ಎಂಥ ಮಾಮೇರಿ ಮೂಳೆ ಕಡಿಯುತ್ತಿದ್ದರೂ, ಎಷ್ಟೋ ಹೆಣ್ಣು ನಾಯಿಗಳಿಂದೊಡಗೂಡಿದ ನಾಯಿ ಪಡೆಯ ಮಧ್ಯದಲ್ಲೇ ಇರಲಿ, ತನ್ನ ಪ್ರತಿಸ್ಪರ್ಧಿ ನಾಯಿಯೊಂದಿಗಿನ ಕಾಳಗದಲ್ಲೇ ಇರಲಿ ಓಡೋಡಿ ಬಂದು ನಮಗೆ ಸ್ನೇಹ -ಪ್ರೀತಿ ಸಲ್ಲಿಸುತ್ತಾನೆ. 


ಮುದ್ದ ನಮ್ಮೂರಿಗೆ ಧಾವಿಸುವ ಮುನ್ನ ತಿಪಟೂರಿನ ನಮ್ಮ ಬಂಧುಗಳ ಮನೆಯಲ್ಲಿದ್ದ, ಆಗಿನ್ನೂ ಇವನು ಸಣ್ಣ ಕುನ್ನಿ. ಇವನಿಗೆ ಅವರು ಪುಟ್ಟ ಹಾಸಿಗೆ ಕೊಟ್ಟು ಮಲಗಿಸುತ್ತಿದ್ದರು. ಬೆಳೆಯುತ್ತಾ ಬೆಳೆಯುತ್ತಾ ಇವನಿಗೆ ಏನನ್ನಿಸಿತೋ ಏನೋ ತಾನು ಹಾಸಿಗೆ ಮೇಲೆ ಮಲಗುವುದು  ಅವಮಾನವೆಂದು  ಅನಿಸಿರಬೇಕು. ನಾಯಿಗಳ ಘನತೆಗೆ ಅದು ಸಲ್ಲದೆಂದು ತೀರ್ಮಾನಿಸಿರಬೇಕು. ಹಾಸಿಗೆ ಮೇಲೆ ಮಲಗುವುದು ಸೋಮಾರಿ ಮನುಷ್ಯರ ರೋಗ ಲಕ್ಷಣವೆಂದು ಈ ಮುದ್ದನಿಗೆ ತೋರಿಬಂದಿದ್ದರೆ ಅದರಲ್ಲೇನು ಆಶ್ಚರ್ಯ,  ಈತ ಹಾಸಿಗೆ ತೊರೆದು ಮನೆಯ ವರಾಂಡದಲ್ಲಿ ಅಥವ ಬೀದಿಯಲ್ಲಿ ಮಲಗಲು ನಿರ್ಧರಿಸಿದ.


ತಾವು ಕಾಳಜಿ ಮತ್ತು ಪ್ರೀತಿಯಿಂದ ಹಾಸಿಕೊಟ್ಟ ಹಾಸಿಗೆಯಲ್ಲಿ ಮಲಗುವುದಿಲ್ಲವೆಂದರೆ ಇದು ತಮಗೆ ಮಾಡಿದ ಅವಮಾನವೆಂದೇ ಭಾವಿಸಿದ ಅ ಮನೆಯವರು ಚೈನು ಹಾಕಿ ಬಂಧಿಸಿದರು. ಇದು ಮುದ್ದನಿಗೂ ಆ ಮನೆಯವರಿಗೂ ಭಿನ್ನಾಭಿಪ್ರಾಯ ತಲೆದೋರಲು ಕಾರಣವಾಯಿತು, ಇದು ಕೆಲವೇ ದಿನಗಳಲ್ಲಿ ಸದರಿ  ಮನಸ್ತಾಪ ತೀವ್ರಗೊಂಡು ಅವರು ಇವನನ್ನು ಮಾತಾಡಿಸದೇ ಇದ್ದಾಗ ಪಕ್ಕದ ನಮ್ಮೂರಿಗೆ ದಾರಿ ಹಿಡಿದು ಬಂದವನು ಈ ಮುದ್ದ. ಇವನ ಚರಿತ್ರೆ ನಮಗೆ ಗೊತ್ತಾಗಿದ್ದು ಇತ್ತೀಚೆಗೆ. 


ಈಗ ಮುದ್ದ ತನ್ನ ಹುಟ್ಟಿದೂರನ್ನು ಮರೆತಿದ್ದಾನೆ. ನಮ್ಮ ಕೇರಿಯಲ್ಲಿ ಹಲವು ಬಣ್ಣದ ಹಲವು ಗುಣವಿಶೇಷಗಳ ಬೇರೆ ಬೇರೆ ವಯೋಮಾನದ ನಾಯಿ ಪಡೆಯೊಂದಿಗೆ ತನ್ನದೇ ಪಾಳೆಪಟ್ಟು ಕಟ್ಟಿಕೊಂಡು ಆಳ್ವಿಕೆ ನಡೆಸುತ್ತಿದ್ದಾನೆ. 


ಮುದ್ದ ಸ್ವಾಭಿಮಾನಿಯಾಗಿದ್ದುದರಿಂದಲೇ ಅಲ್ಲವೆ ಹಂಗಿನರಮನೆಯನ್ನು, ಮೆತ್ತನೆಯ ಹಾಸಿಗೆಯನ್ನು ತೊರೆದು ಬಂದದ್ದು. ಏನೋ ನಮ್ಮ ಪ್ರೀತಿಗೆ ಕಟ್ಟುಬಿದ್ದು ಮುದ್ದ ಎಂಬ ಹೆಸರಿಗೆ ಒಪ್ಪಿದ್ದಾನಷ್ಟ್ಟೆ.  ಹೀಗಾಗಿ ಮುದ್ದ ಇಲ್ಲಿಯೂ ತನ್ನ ಮೂಲ ಗುಣವನ್ನು ಬಿಡಲು ಒಪ್ಪುತ್ತಿಲ್ಲ. ಎಷ್ಟೇ ಪೂಸಿ ಹೊಡೆದು ಕೊರಳಿಗೆ ಬೆಲ್ಟ್ ಹಾಕಲು ಪ್ರಯತ್ನಪಟ್ಟರೂ ಅದಕ್ಕವನು ಅವಕಾಶ ಕೊಟ್ಟಿಲ್ಲ. ಮೊದಲು ನಯವಾಗಿ ತಿರಸ್ಕರಿಸಿದ, ನಾನು ಪಟ್ಟು ಬಿಡದೆ ಒತ್ತಾಯ ಪೂರ್ವಕವಾಗಿ ಬೆಲ್ಟ್ ಹಾಕಿ ಅರೆ ಬೀದಿ ನಾಯಿಯಾಗಿದ್ದ ಇವನನ್ನು ಪೂರ್ಣ ಸಾಕಿದ ನಾಯಿಯಾಗಿಸಲು ಕೊರಳು ಹಿಡಿದಾಗ ತನ್ನ ಉಗ್ರರೂಪ ತೋರಿದ. ಅಷ್ಟೊತ್ತಿಗೆ ನಮ್ಮ ಸ್ನೇಹ  ಬೆಸುಗೆಯಾಗಿದ್ದರಿಂದ ಬಾಯಿ ಹಾಕಲಿಲ್ಲ ಅಷ್ಟೆ. ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದರೂ ತನ್ನ ಹಲ್ಲಿನ ಚೂಪು ಎಷ್ಟೆಂದು ಪರಿಚಯಿಸುತ್ತಿದ್ದನೆಂದು ಕಾಣುತ್ತದೆ. ಕೊಂಡು ತಂದ ಹೊಸ ಬೆಲ್ಟ್ ಮತ್ತು ಚೈನು ಮೂಲೆ ಸೇರಿವೆ.


ಸಕಲ ಜೀವಿಗಳಲ್ಲೂ ಪ್ರೀತಿಯಿಂದಿರಬೇಕೆಂಬ ಒಂದೇ ಕಾರಣದಿಂದ ನಮ್ಮಂತ ಹುಲುಮಾನವರ ಜೊತೆಗೂ ಬಾಂಧವ್ಯ ಇಟ್ಟುಕೊಂಡಿದೆೆ ಎಂದು ಅನಿಸುತ್ತದೆ. ಇಲ್ಲದಿದ್ದರೆ ಅದು ಯಾವಾಗಲೂ ಬಾಲ ಅಲ್ಲಾಡಿಸಿಕೊಂಡು ನಾವು ಹಾಕಿದ್ದನ್ನು ತಿಂದುಕೊಂಡು ಮನೆಯ ಬಾಗಿಲಲ್ಲಿ ಬಿದ್ದಿರುತ್ತಿತ್ತು. ಮುದ್ದ ಎಂದು ಕರೆದಾಗ ಎಲ್ಲಿದ್ದರೂ ಬರುವುದು ನಿಜವಾದರೂ ಎಷ್ಟು ಕರೆದರೂ ಗೇಟು ದಾಟಿ ಒಳಬರುವುದಿಲ್ಲ, ಅದಕ್ಕೆ ಮನುಷ್ಯರ ಬುದ್ಧಿ ಚೆನ್ನಾಗಿ ಗೊತ್ತು. ಒಮ್ಮೆ ಒಳಗೆ ಕರೆದವರು ಇನ್ನೊಮ್ಮೆ ಬೈದು ಓಡಿಸುತ್ತಾರೆ. ಅದರ ಬದಲು ಒಳಗೇ ಹೋಗದಿದ್ದರೆ. ಹೀಗೆ ಮುದ್ದ ತಾನು ಸಾಕು ನಾಯಿ ಎಂದು ಕರೆಸಿಕೊಳ್ಳುವುದಕ್ಕಿಂತ ಬೀದಿ ನಾಯಿ ಎಂದು ಕರೆಸಿಕೊಳ್ಳಲು ಹೆಚ್ಚು ಇಷ್ಟ್ಟಪಡುತ್ತಾನೆ. ಅದೀಗ ನನ್ನ ಸ್ನೇಹ ಬಂಧವನ್ನೂ, ಬೀದಿಯ ಸ್ವಾತಂತ್ರ್ಯವನ್ನು ತೂಗಿಸಿಕೊಂಡು ಮುನ್ನಡೆಯುತ್ತಿದೆ. 


ಹಾಗೆಂದು ನಮ್ಮ ಜೊತೆ ಪ್ರೀತಿ ಖುಷಿ ಹಂಚಿಕೊಳ್ಳುವುದಕ್ಕೆ ಮುದ್ದ ಕಂಜೂಸಾಟ ಆಡುವುದಿಲ್ಲ. ನನ್ನೆತ್ತರಕ್ಕೂ ನೆಗೆದು ಮುದ್ದಿಸುತ್ತಾನೆ, ಕುಯ್ಗುಡುತ್ತಾನೆ, ಮೈಮುರಿಯುತ್ತಾನೆ ನೆಲಕ್ಕತ್ನಾಗಿ ಬಾಗಿ ತನ್ನ ಸಂತಸ ತೋರುತ್ತಾನೆ. ಹಾದಿ ಬೀದಿಯಲ್ಲಿ ನಾನು ಸಿಕ್ಕಿದರೆ ವಿಶೇಷ ಮನ್ನಣೆ ನೀಡಿ ನನ್ನ ಬಳಿಗೆ ಬಂದು ನುಲಿಯುತ್ತಾನೆ, ಕಂಡವರು ನಿಮ್ಮ ನಾಯಿಯೇ ಇದು ಎಂದು ಪ್ರಶ್ನಿಸಿದರೆ ಹೌದು ಎಂದು ಬಲು ಹೆಮ್ಮೆಯಿಂದ ಹೇಳುವ ಹೊತ್ತಿಗೆ ನನ್ನನ್ನು ಬಿಟ್ಟು ತನ್ನ ನಾಯಿ ಪಡೆಯತ್ತ ಸಾಗಿ ಲೀನವಾಗುತ್ತಾನೆ. ನಿಮ್ಮ ನಾಯಿಯೆ ಎಂದು ಕೇಳಿದವರಿಗೆ ಸಹಜವಾಗಿಯೇ ಅನುಮಾನ ಶುರುವಾಗಿ ಹುಸಿ ನಗುತ್ತಾ ನನ್ನತ್ತ ನೋಡುತ್ತಾರೆ.


ಮುದ್ದ ನಾನು  ತೋಟಕ್ಕೆ ಹೊರಟರೆ, ನನಗಿಂತ ಮುಂಚೆ ತೋಟದ ಹಾದಿ ಹಿಡಿಯುತ್ತಾನೆ. ಆ ದಾರಿಯಲ್ಲಿ ಒಮ್ಮೊಮ್ಮೆ ಇವನ ವೈರಿ ಪಡೆ ಎದುರಾಗುವುದುಂಟು. ಆಗ ಅವನಿಗೆ ಹೋರಾಟದ ಉತ್ಸಾವಿದ್ದರೆ ಅವರೊಂದಿಗೆ ಹೋರಾಡಿ ಕಚ್ಚಿಸಿಕೊಂಡೋ ಕಚ್ಚಿಯೋ ಬರುತ್ತಾನೆ. ಹೆಚ್ಚು ಸಲ ಈ ಹೋರಾಟಕ್ಕೆ ಹೋಗದೆ  ಆ ದಾರಿಯನ್ನೇ ತ್ಯಜಿಸಿ  ತೋಟದಲ್ಲಿ ಕಾಣಿಸಿಕೊಳ್ಳುತ್ತಾನೆ. ಅಷ್ಟರಮಟ್ಟಿಗೆ ಇವನು ಶಾಂತಿ ಪ್ರಿಯ. ಎರಡು ಮೂರು ನಾಯಿಯೊಂದಿಗೆ ಹೋರಾಡಲು ಹೋಗಿ ಮೈಕೈಗೆಲ್ಲಾ ಕಚ್ಚಿಸಿಕೊಂಡ ಹಿನ್ನೆಲೆಯಲ್ಲಿ ಈ ಶಾಂತಿ ಪ್ರಿಯತೆ ಇವನೊಳಗೆ ಉದ್ಭವವಾಗಿದ್ದರೆ ಅದನ್ನು ತಪ್ಪು ಎನ್ನುವುದು ಹೇಗೆ. ತೋಟದ ಬೇಲಿ ಸಾಲುಗಳಲ್ಲಿ ಇವನ ಶಾಂತಿ ಪ್ರಿಯತೆ ಮಾಯವಾಗಿ ಮೂಲ ಪ್ರವೃತ್ತಿ ಗರಿಗೆದರುತ್ತದೆ. ಗೌಜಗ, ನವಿಲು, ಅಳಿಲು ಮುಂಗುಸಿ. ಇತ್ಯಾದಿಗಳನ್ನು ಹಿಡಿಯಲು ವ್ಯರ್ಥ ಪ್ರಯತ್ನ ಮಾಡತೊಡಗುತ್ತಾನೆ. ಕೊನೆಗೆ ಹಲಸಿನ ಮರದಲ್ಲಿ ಬಿದ್ದ ಹಣ್ಣಿಗೆ  ಬೇಕೋ ಬೇಡವೂ ಎನ್ನುವಂತೆ ಬಾಯಿ ಹಾಕಿ, ರುಚಿ ಹತ್ತಿ ಹೊಟ್ಟೆ ತುಂಬಾ ತಿಂದು ನನ್ನತ್ತ ಬರುತ್ತಾನೆ, ನನ್ನನ್ನು ಮೆಚ್ಚಿಸಲೋ ಎಂಬಂತೆ ಅಲ್ಲಿ ಮಿಡತೆ ಬೇಟೆಯಲ್ಲಿ  ನಿರತವಾದ ಕೊಕ್ಕರೆಗಳನ್ನು ಓಡಿಸಿಕೊಂಡು ಹೋಗುತ್ತಾನೆ, ಅವು ಹಾರಿದರೆ ತಾನೂ ಹಾರಲು ಯತ್ನಿಸಿ ಖುಷಿಪಡುತ್ತಾ ಹಸಿರು ಹುಲ್ಲು ತಿನ್ನತೊಡಗುತ್ತಾನೆ. ನಾನು ಸಾಯಬೀಳೋ ಕೆಲಸದಲ್ಲಿ ಮುಳುಗಿ ಹೋಗಿದ್ದರೆ ಅವ ನಿದ್ದೆಗೆ ಜಾರುತ್ತಾನೆ.  ಆಗಾಗ್ಗೆ ಎದ್ದು ನನ್ನ ಬಳಿ ಬಂದು ನಾನು ಬೆವರೊರೆಸಿಕೊಳ್ಳುತ್ತಿರುವುದನ್ನು ನೋಡಿ “ಅಯ್ಯೋ ಮನುಷ್ಯ ಜನ್ಮವೇ” ಎಂದು ನನಗೆ ಕೇಳುವಂತೆಯೇ ಬಾಲ ಅಲ್ಲಾಡಿಸಿ ಮತ್ತೆ ಹೋಗಿ ಮಲಗುತ್ತಾನೆ. ನನಗೆ ಬೇಸರವಾಗಿ ಅಥವ ಜ್ಞಾನೋದಯವಾಗಿ ನಾನೂ ಒಂದು ಗಳಿಗೆ ಮರದ ನೆರಳಿಗೆ ಹೋಗಿ ಉಳಿದುಕೊಳ್ಳುತ್ತೇನೆ. ಮಬ್ಬುಗತ್ತಲಾಗುವವರೆಗೂ ನಾನೇನಾದರೂ ತೋಟದಲ್ಲೇ ಇದ್ದರೆ ಮುದ್ದನೂ ಇರುತ್ತಾನೆ. ಚಿರತೆಗಳು ನಮ್ಮ ತೋಟದ ಸಾಲಿಗೆ ಬರುತ್ತವೆಯಾದ್ದರಿಂದ ಮುದ್ದನಿಗೆ ಪ್ರಾಣ ಭಯವಿರುತ್ತದೆ. ಮುದ್ದ ತನ್ನ ಪ್ರಾಣದ ಹಂಗು ತೊರೆದು ನನ್ನನ್ನು ಕಾಯುತ್ತಾನೆಂದು ಭಾವಿಸುವುದು ನನಗೆ ತುಂಬಾ ಇಷ್ಟ. ಹಾಗೇ ಇರುತ್ತದೆ ಅವನ ನಡೆನುಡಿ. 
ಮುದ್ದ ಜಗ್ಲುನಾಯಿಯಲ್ಲ, ಹಾಕಿದ್ದನ್ನು ತಿಂದು ಬೊಗಳುವುದಿಲ್ಲ. ಅವನಿಗಿಷ್ಟವಾದರೆ ನಮ್ಮನ್ನು ಮೆಚ್ಚಿಸಲು ಒಮ್ಮೊಮ್ಮೆ ಬೊಗುಳುತ್ತಾನೆ ಎಂಬುದು ನಿಜ. ಮನೆಯ ಮುಂದೆ ಅವ ಮಲಗಿದ್ದರೂ ಆಗಾಗ್ಗೆ ನಮ್ಮ ಜೊತೆಗಿನ ಕಿರುಗಣ್ ಸಂಧಾನದಲ್ಲಿ ತೊಡಗಿರುವುದು ಇವನ ವಿಶೇಷ. ಬರೀ ಅನ್ನ, ಬರೀ ಮುದ್ದೆ, ಬರೀ ರೊಟ್ಟಿ ಇವನು ಮುಟ್ಟುವುದೇ ಇಲ್ಲ. ಹಾಲು ಕಡ್ಡಾಯ. 


ಇತ್ತೀಚೆಗೆ ನನ್ನ ಮಂಜುಳೆಗೂ ಮುದ್ದನನ್ನು ಕಂಡರೆ ಅಕ್ಕರೆ, ಅದನ್ನವಳು ತೋರಿಸಿಕೊಳ್ಳುವುದಿಲ್ಲ ಅಷ್ಟ್ಟೆ. ಮುದ್ದನಂತೆ ನಾನೂ ಲಳೇವಾಗಿರುವುದರಿಂದ ನನ್ನನ್ನು ಮುದ್ದನೊಂದಿಗೆ ಸಮೀಕರಿಸಿ ಹಾಲು ಮೊಸರು ಬೆರಸಿದ ಅನ್ನ ದೋಸೆ ರೊಟ್ಟಿ ಹಾಕುತ್ತಾಳೆ. ಮುದ್ದ ತಕ್ಷಣ ಅವನ ಊಟದ ತಟ್ಟೆಯತ್ತ ಧಾವಿಸುವುದಿಲ್ಲ,  ಆಗಲೂ ಸ್ವಾಭಿಮಾನದ ಬಿಂಕ ಬಿಡುವುದಿಲ್ಲ. ನಾನು ತೋಟಕ್ಕೆ ಹೋಗಿ ಬಂದಿದ್ದೇನೆ ಎಂಬ ಭಾವದಲ್ಲಿ ಗತ್ತಿನಿಂದ ತಿನ್ನುತ್ತಾನೆ.  ಮುದ್ದ ಸ್ವಲ್ಪ ಚಿರತೆಯಂತವನು. ನಾವು ಅನ್ನ ರೊಟ್ಟಿ ಇತ್ಯಾದಿ ಅದರ ತಟ್ಟೆಗೆ ಹಾಕುವಾಗ ಏನನ್ನೋ ಯೋಚಿಸುವವನಂತೆ ಎತ್ತಲೋ ನೋಡುತ್ತಿರುತ್ತಾನೆ. ನಾವು  ಹಾಕುವ ಊಟ ಹಾಕಿ ಜಾಗ ಖಾಲಿ ಮಾಡಬೇಕಷ್ಟೆ, ಅಲ್ಲೇ ನಿಂತಿದ್ದರೆ ನನ್ನಾದರೆ ಗುರಾಯಿಸುತ್ತಾನೆ, ಮಂಜುಳೆಯನ್ನಾದರೆ ಗುರಾಯಿಸದೇ ಹಾಕಿದ ಊಟದತ್ತ ಕಣ್ಣೆತ್ತಿಯೂ ನೋಡದೆ ಸುಮ್ಮನೆ ನಿಲ್ಲುತ್ತಾನೆ. ಜಾಗ ಖಾಲಿ ಮಾಡಿದರೆ ಒಂದಗಳೂ ಬಿಡದೆ ತಿಂದು ಇವಳ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ನೀವು ಹಾಕುವ ಊಟದಿಂದ ನಾನು ಬದುಕುತ್ತಿಲ್ಲ ಎನ್ನುವುದನ್ನೂ, ನಾನೇನು ನಿಮ್ಮ ಸಾಕಿದ ಗುಲಾಮ ನಾಯಿಯೇನಲ್ಲ ಎಂಬುದನ್ನು ತೋರಿಸಲೋ ಎಂಬಂತೆ ಒಂದೆರಡು ದಿನ ಕಣ್ಮರೆಯಾಗುವುದೂ ಉಂಟು. ಮತ್ತೆ ನಮ್ಮ ಅವನ ಭೇಟಿಯಾದಾಗ, ಅವನಿಗೂ ನಮಗೂ ಏಕಕಾಲದಲ್ಲಿ ಅಗಲಿಕೆಯ ನೋವು ಕರಗಿ ಖುಷಿಗೊಂಡು ಬೊಗುಳತೊಡಗುತ್ತವೆ.


ಪ್ರೀತಿ ಅತಿಯಾದರೆ ಇವನು ಅಟ್ಲುಗಾಲಲ್ಲಿ ನನ್ನ ಮೇಲೆ ಹತ್ತಿ ಅಂಗಿ ಪ್ಯಾಂಟು ಗಬ್ಬುಗಯಾಲು ಮಾಡಬಹುದು. ಅಲ್ಲೆಲ್ಲೋ ಯಾವುದೋ ಪ್ರಾಣಿಯ ಅವಶೇಷದೂಟ ಮಾಡಿ ಬಂದು ನನ್ನನ್ನು ಮೂಸಬಹುದು, ಲಳೇವಾಗಿ ನನ್ನ ಪ್ಯಾಂಟನ್ನು ತನ್ನ ಬಾಯಲ್ಲಿ ಕಚ್ಚಿ ಎಳೆಯಬಹುದು. ಆದರೆ ನಾನು ಮಾತ್ರ ಒಮ್ಮೊಮ್ಮೆ ಅವನ ಮೇಲೆ ಉಕ್ಕುವ ಪ್ರೀತಿಯನ್ನು ತೋರುವಂತಿಲ್ಲ. ಉದಾಹರಣೆಗೆ, ನನ್ನ ಮೊಪೆಡ್ ಮೇಲೆ ಹತ್ತಿಸಿಕೊಳ್ಳಲು ಕರೆದರೆ ನಿರಾಕರಿಸುವುದು, ಸ್ನಾನ ಮಾಡಿಸಲು ಹಿಡಿದು ನೀರು ಸುರಿಯಲು ಯತ್ನಿಸಿದರೆ ದೇಶಭ್ರಷ್ಟನಂತೆ ಓಡಿ ಹೋಗಿ ಅಲ್ಲೆಲ್ಲೋ ಬಗ್ಗಡದ ನೀರಿನಲ್ಲಿ ಒದ್ದಾಡುವುದು, ಇತ್ಯಾದಿಗಳೆಲ್ಲಾ ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಸದ್ಯಕ್ಕೆ ಒಂದು ವಿಷಯದಲ್ಲಿ ಮಾತ್ರ ಮುದ್ದ ನನ್ನ ಸಾಮಿಷ್ಯವನ್ನು ಇಷ್ಟಪಡುತ್ತಾನೆ, ಅದೇನೆಂದರೆ ಇವನ ಸಂಗಡಿಗ ನಾಯಿಗಳ ಒಡನಾಟದಲ್ಲಿನ ಸಂಬಂಧದಿಂದಾಗಿ ಇವನ ಮೈಗೆ ಹತ್ತುವ ಉಣ್ಣೆಗಳು ಇವನ ಬಾಯಿಗೆಟಕದಂತಾ ಜಾಗಗಳಲ್ಲಿ, ಮುಖ್ಯವಾಗಿ ಕಣ್ಣಿನ ರೆಪ್ಪೆ, ಕಿವಿ, ಹಣೆ ಭಾಗಗಳಲ್ಲಿ ಜಾಗ ಮಾಡಿಕೊಂಡು ಕೊಡಬಾರದ ಕಷ್ಟ್ಟ ಕೊಡುತ್ತಿದ್ದಾಗ, ನಾನು ಅವುಗಳನ್ನು ಕಿತ್ತೆಸೆಯುವ ನೆಪದಲ್ಲಿ ಇವನನ್ನು ಎಷ್ಟಾದರೂ ಪ್ರೀತಿ ಮಾಡಬಹುದು, ಅವನ ಸ್ಪರ್ಷ ಸುಖ ಅನುಭವಿಸಬಹುದು. ನಾಯಿ ಕೂಟದ ರಣಾಂಗಣದಲ್ಲಿ ಆದ ಗಾಯಗಳಿಗೆ ಮುಲಾಮು ಹಚ್ಚಿಸಿಕೊಳ್ಳುವುದು ಅದಕ್ಕೆ ಹೇಗೆ ಗೊತ್ತಾಗುತ್ತದೆಯೋ ಗೊತ್ತಿಲ್ಲ. 


ಇಂಥ ಮುದ್ದನಿಗೆ ಕಜ್ಜಿ ವಿರೋಧಿ ಇಂಜೆಕ್ಷನ್, ರೇಬಿಸ್ ವಿರುದ್ದದ ಇಂಜೆಕ್ಷನ್, ನಮ್ಮೂರು ನಾಯಿ ಪಾಳ್ಯವಾಗಿ ಬದಲಾಗಿರುವುದರಿಂದ ಮಕ್ಕಳು ಮರಿಗಳಾಗದಂತೆ ಇವನಿಗೆ ಇಂಜೆಕ್ಷನ್ ಕೊಡಿಸುವ ಇವೇ  ಮುಂತಾದ ನನ್ನ ಹುನ್ನಾರಗಳು ಸಾಕಾರಗೊಂಡಿಲ್ಲ. ಡಾಕ್ಟರ್ ಬಳಿ ಈ ವಿಷಯಗಳನ್ನು ಪ್ರಸ್ತಾಪಿಸಿದರೆ “ನೀವು  ಅದರ ಕೊರಳಿಗೆ ಬೆಲ್ಟ್ ಹಾಕಿ ಚೈನ್ ಬಿಗಿಯುವವರೆಗೆ ಇವ್ಯಾವ ಕೆಲಸಗಳು ಸಾಧ್ಯವಾಗುವುದಿಲ್ಲ” ಎನ್ನುತ್ತಾರೆ. ಈಗ ಇವನನ್ನು ಬಂಧಿಸುವುದೋ ಅಥವಾ ಈ ಮೇಲಿನ ನನ್ನ ಆಸೆಗಳನ್ನು ತ್ಯಜಿಸಿ ಹೊಂದಿಕೊAಡು ಹೋಗುವುದೋ.


*******