ಕ್ಯಾಸೆಟ್ ಯುಗದ ಹರಿಕಾರ ಮಹೇಶ್ ಎನ್.ಎಸ್.ಶ್ರೀಧರ ಮೂರ್ತಿ

ಕ್ಯಾಸೆಟ್ ಯುಗದ ಹರಿಕಾರ ಮಹೇಶ್
ಎನ್.ಎಸ್.ಶ್ರೀಧರ ಮೂರ್ತಿ
ಎಚ್.ಎಂ.ಮಹೇಶ್ ಅವರ ನಿಧನದೊಂದಿಗೆ ಮಧುರ ಗೀತೆಗಳ ಒಂದು ಪ್ರಮುಖ ಕೊಂಡಿ ಕಳಚಿದಂತಾಗಿದೆ. 1944ರಲ್ಲಿ ಕಾಸರಗೋಡಿನ ಸಮೀಪದ ಗಡಿನಾಡಿನಲ್ಲಿ ಜನಿಸಿದ ಮಹೇಶ್ ಅವರ ತಂದೆ ನಾರಾಯಣ ಭಟ್ ಪತ್ರಕರ್ತರು, ಸಂಗೀತದತ್ತ ಕೂಡ ಆಸಕ್ತಿಯನ್ನು ಹೊಂದಿದವರು. ಮಂಗಳೂರಿನ ಸೆಂಟ್ ಅಲೋಷಿಯಸ್ ಕಾಲೇಜಿನಲ್ಲಿ ಪದವಿ ಪಡೆದ ಮಹೇಶ್ ಅವರಿಗೆ ಇದ್ದ ಆಸೆ ಗಾಯಕರಾಗ ಬೇಕು ಎನ್ನುವುದು. ತಂದೆ ಮದ್ರಾಸಿನ ಕೆಲವು ಪತ್ರಿಕೆಗಳಿಗೆ ಬರೆಯುತ್ತಾ ಇದ್ದಿದ್ದರಿಂದ ಅಲ್ಲಿನ ಸಂಪರ್ಕ ಇದ್ದೇ ಇತ್ತು. ಅವಕಾಶ ಹುಡುಕುತ್ತಾ ಮಹೇಶ್ ಮದ್ರಾಸಿಗೆ ಬಂದರು. ಇದೇ ಸಮಯದಲ್ಲಿ ಕನ್ನಡ ಚಿತ್ರಗೀತೆಗಳಿಗೆ ಒಂದು ಗಂಡಾಂತರದ ಸ್ಥಿತಿ ಉಂಟಾಗಿತ್ತು. ಆಗ ಚಿತ್ರಗೀತೆಗಳು ಜನರನ್ನು ತಲುಪುತ್ತಾ ಇದ್ದಿದ್ದು ಗ್ರಾಮಾಪೋನ್ ಪ್ಲೇಟ್ಗಳ ಮೂಲಕ. ಆಗ ಇದಿದ್ದು ಕೊಲಂಬಿಯಾ ಗ್ರಾಮಾಪೋನ್ ಪ್ಲೇಟ್ ಕಂಪನಿ ಮಾತ್ರ. ಇದರ ದಕ್ಷಿಣ ಭಾರತದ ಪ್ರತಿನಿಧಿಯಾಗಿ ಎ.ವಿ.ಎಂ.ಚೆಟ್ಟಿಯಾರ್ ಅವರ ‘ಸರಸ್ವತಿ ಸ್ಟೋರ್ಸ್’ ಇತ್ತು. ಅಲ್ಲಿ ಎಲ್ಲಾ ಭಾಷೆಗಳಿಗೂ ಪ್ರತಿನಿಧಿಗಳು ಇದ್ದರೂ ಕನ್ನಡ ವಿಭಾಗವನ್ನು ಮ್ಯಾನೇಜರ್ ಆದ ಕಣ್ಣನ್ ಅವರೇ ನೋಡಿ ಕೊಳ್ಳುತ್ತಿದ್ದರು. ಅವರು ಕನ್ನಡ ಮುದ್ರಿಕೆಗಳ ಕುರಿತು ಆಸಕ್ತಿಯನ್ನೇನು ತೋರುತ್ತಾ ಇರಲಿಲ್ಲ. 1968ರಲ್ಲಿ ಇದು ವಿಪರೀತಕ್ಕೆ ಹೋಗಿ ಕನ್ನಡ ವಿಭಾಗವನ್ನು ಮುಚ್ಚಲು ನಿರ್ಧರಿಸಲಾಯಿತು. ಇದಕ್ಕೆ ಕೊಟ್ಟ ಕಾರಣ ಕನ್ನಡ ಗ್ರಾಮಾಪೋನ್ ಪ್ಲೇಟ್ಗಳಿಗೆ ಮಾರುಕಟ್ಟೆ ಇಲ್ಲ. ಆಗ ಕನ್ನಡ ಚಿತ್ರಗೀತೆಗಳನ್ನು ಉಳಿಸಲು ಹೋರಾಟ ನಡೆಸಿದವರು ಆರ್.ಎನ್.ಜಯಗೋಪಾಲ್ ಮತ್ತು ಚಿ.ಉದಯಶಂಕರ್. ಇಬ್ಬರೂ ಹಾಡು ಬರೆಯುವುದರ ಜೊತೆಗೆ ಮಾರುಕಟ್ಟೆ ಇದೆ ಎಂದು ತೋರಿಸಿ ಕೊಡಲು ತಾವೇ ಮಾರಾಟಕ್ಕೆ ಕೂಡ ಇಳಿದು ಈ ವಿಭಾಗವನ್ನು ಉಳಿಸಿ ಕೊಳ್ಳಲು ಶ್ರಮಿಸಿದರು. ಆಗ ಉದಯಶಂಕರ್ ಕಣ್ಣಿಗೆ ಬಿದ್ದಿದ್ದು ಉದ್ಯೋಗ ಅರಿಸಿ ಬಂದಿದ್ದ ಮಹೇಶ್. ಅವರನ್ನು ಸರಸ್ವತಿ ಸ್ಟೋರ್ಸ್ ಗೆ ಸೇರಿಸಿ ಕನ್ನಡ ವಿಭಾಗ ರಕ್ಷಿಸುವ ಜವಾಬ್ದಾರಿ ವಹಿಸಿದರು.ಮಹೇಶ್ ಈ ಕೆಲಸವನ್ನು ಶ್ರದ್ದೆಯಿಂದ ಮಾಡಿದರು. ರಾಜ್ಯಾದ್ಯಂತ ಪ್ರವಾಸ ಮಾಡಿ ಕನ್ನಡ ಗ್ರಾಮಾಪೋನ್ ಪ್ಲೇಟ್ಗಳ ಬೇಡಿಕೆ ಹೆಚ್ಚಿಸಿದರು. ಮೇಯಪ್ಪ ಚಟ್ಟಿಯಾರ್ ಅವರ ಮನ ಒಲಿಸಿ ‘ದಾಸರ ಪದ’ ಕಾಳಿಂಗ ರಾಯರ ಭಾವಗೀತೆಗಳ ಗ್ರಾಮಾಪೋನ್ ಪ್ಲೇಟ್ಗಳನ್ನು ಹೊರ ತಂದರು. ಅವು ಅಪಾರ ಬೇಡಿಕೆಯನ್ನು ಪಡೆದು ಕೊಂಡಿತು. ಇದರಿಂದ ಸ್ಪೂರ್ತಿ ಪಡೆದ ಮಹೇಶ್ ಎಂ.ರಂಗರಾವ್ ಸಂಗೀತ ನಿರ್ದೇಶನದಲ್ಲಿ ‘ಗಜಮುಖನೆ ಗಣಪತಿಯೆ’ ಗ್ರಾಮಾಪೋನ್ ಪ್ಲೇಟ್ ತಂದರು. ಈ ಮುದ್ರಿಕೆಯ ‘ಗಜಮುಖನೆ ಗಣಪತಿಯೆ’ ಶರಣು ಶರಣಯ್ಯ ಶರಣು ಬೆನಕ; ‘ಭಾದ್ರಪದ ಶುಕ್ಲದ ಚೌತಿಯಂದು’ ಮೊದಲಾದ ಗೀತೆಗಳು ನಾಡಿನ ಮನೆ ಮನೆಯಲ್ಲಿಯೂ ಕೇಳಿ ಬಂದವು. ಈ ನಡುವೆ ಕೊಲಂಬಿಯಾ ಕಂಪನಿ ಪಾಲಿಡರ್ ಸಂಸ್ಥೆಯ ಪೈಪೋಟಿ ಎದುರಿಸಿತು. ರಾಜ್ ಕುಮಾರ್ ಅವರ ‘ದಾರಿ ತಪ್ಪಿದ ಮಗ’ ಮತ್ತು ‘ಶ್ರೀನಿವಾಸ ಕಲ್ಯಾಣ’ ಚಿತ್ರದ ಹಕ್ಕುಗಳನ್ನು ಪಡೆಯುವಲ್ಲಿ ಪಾಲಿಡರ್ ಯಶಸ್ವಿಯಾಯಿತು. ಮಹೇಶ್ ಉದಯಶಂಕರ್ ಅವರ ಸಹಾಯದಿಂದ ರಾಜ್ ಕುಮಾರ್ ಅವರ ಮನ ಒಲಿಸಿ ಮುಂದೆ ಹೀಗೆ ಆಗದಂತೆ ನೋಡಿ ಕೊಂಡರು.
ಇದೇ ವೇಳೆಗೆ ಗ್ರಾಮಾಪೋನ್ ಪ್ಲೇಟ್ಗಳ ಯುಗ ಮುಗಿದು ಕ್ಯಾಸೆಟ್ ಯುಗ ಆರಂಭವಾಯಿತು. ಎಲ್ಲಾ ಭಾಷೆಗಳಲ್ಲಿಯೂ ಕ್ಯಾಸೆಟ್ಗಳು ಬಂದರೂ ಸರಸ್ವತಿ ಸ್ಟೋರ್ಸ್ ಕನ್ನಡದಲ್ಲಿ ಈ ಪ್ರಯತ್ನ ಮಾಡಲೇ ಇಲ್ಲ. ಇದಕ್ಕಾಗಿ ಬೇಡಿಕೆ ಸಲ್ಲಿಸುತ್ತಿದ್ದ ಡೀಲರ್ಗಳು ಬೇಸತ್ತು ಖಾಸಗಿಯಾಗಿ ಧ್ವನಿಸುರಳಿ ಮಾಡಲು ಆರಂಭಿಸಿದರು. ಇದು ಕಾನೂನಿನ ದೃಷ್ಟಿಯಿಂದ ತಪ್ಪಾಗಿತ್ತು ಜೊತೆಗೆ ಗ್ರಾಮಾಪೋನ್ ಪ್ಲೇಟ್ಗಳ ಬೇಡಿಕೆಗೂ ಹೊಡೆತ ಕೊಟ್ಟಿತು. ಈಗ ಮತ್ತೆ ಮಹೇಶ್ ಅವರ ಬೆಂಬಲಕ್ಕೆ ಬಂದವರು ಉದಯಶಂಕರ್ ಮತ್ತು ಜಯಗೋಪಾಲ್ ಅವರೇ. ಇಬ್ಬರ ಬೆಂಬಲದಿಂದ ಮಹೇಶ್ ಸರಸ್ವತಿ ಸ್ಟೋರ್ಸ್ಗೆ ರಾಜೀನಾಮೆ ನೀಡಿ ‘ಸಂಗೀತ ಕಂಪನಿ’ ಆರಂಭಿಸಿದರು. ವಾರ್ತಾ ಇಲಾಖೆಯ ಎಚ್.ರಾಮಕೃಷ್ಣ ಅವರ ನೆರವನ್ನು ಪಡೆದು ಜಪಾನಿನ ಸೋನಿ ಹೈಸ್ಪೀಡ್ ಕ್ಯಾಸೆಟ್ ಕಾಪಿಯಿಂಗ್ ಯಂತ್ರವನ್ನು ತರಿಸಿ ಕೊಂಡರು. ಹೀಗೆ ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಕಾನೂನು ಸಮ್ಮತಿ ಪಡೆದ ಕ್ಯಾಸೆಟ್ ಕಂಪನಿಯಾಗಿ ಸಂಗೀತ ರೂಪುಗೊಂಡಿತು. ಇದರಿಂದಾಗಿ ಕನ್ನಡ ಚಿತ್ರಗೀತೆಗಳೂ ಕೂಡ ಕ್ಯಾಸೆಟ್ ಮೂಲಕ ಮಧ್ಯಮ ವರ್ಗದ ಮನೆ ಮನಗಳನ್ನು ತಲುಪುವುದು ಸಾಧ್ಯವಾಯಿತು. ಮಹೇಶ್ ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಸಲ ಗೌರವ ಧನ ಕೊಡುವ ಪದ್ದತಿಯನ್ನೂ ಕೂಡ ಜಾರಿಗೆ ತಂದರು. ಚಿಕ್ಕದಾಗಿ ಆರಂಭವಾದ ಸಂಗೀತ ಸಂಸ್ಥೆ ಮಹೇಶ್ ಅವರ ಅರ್ಪಣಾ ಭಾವದಿಂದ ದೊಡ್ಡದಾಗಿ ಬೆಳೆಯಿತು. ಚಿತ್ರಗೀತೆಗಳ ಜೊತೆಗೆ ಬಾಲಮುರಳಿ ಕೃಷ್ಣ, ಆರ್.ಕೆ.ಶ್ರೀಕಂಠನ್ ಮೊದಲಾದವರ ಶಾಸ್ತ್ರೀಯ ಸಂಗೀತ, ಮೈಸೂರು ಅನಂತ ಸ್ವಾಮಿ, ಸಿ.ಅಶ್ವತ್ಥ್ ಮೊದಲಾದವರಿಂದ ಭಾವಗೀತೆ, ಬಿ.ವಿ.ಕಾರಂತರಂವರಿಂದ ರಂಗ ಗೀತೆ, ಬಿ.ಕೆ.ಸುಮಿತ್ರ ಮೊದಲಾದವರಿಂದ ಜನಪದ ಗೀತೆ ಹೀಗೆ ವೈವಿಧ್ಯಮಯ ಕ್ಯಾಸೆಟ್ಗಳನ್ನು ತಂದರು. ಇದರಿಂದ ಒಂದು ರೀತಿಯಲ್ಲಿ ಕ್ಯಾಸೆಟ್ ಕ್ರಾಂತಿಯೇ ಸಂಭವಿಸಿತು. ಉದಯಶಂಕರ್ ಅವರ ನೆರವಿನಿಂದ ರಾಜ್ ಕುಮಾರ್ ಅವರ ‘ಮಂತ್ರಾಲಯಕೆ ಹೋಗೋಣ’ ಕ್ಯಾಸೆಟ್ ತಂದರು. ಇದಂತೂ ದಾಖಲೆ ಸಂಖ್ಯೆಯಲ್ಲಿ ಮಾರಾಟವಾಯಿತು. ಇದರ ‘ವಾರ ಬಂತಮ್ಮ ಗುರುವಾರ ಬಂತಮ್ಮ’ ಎಲ್ಲೆಡೆ ಕೇಳಿ ಬಂದಿತು. ಹೀಗೆ ಮಹೇಶ್ ಮಾಡಿದ ಸಾಧನೆ ಒಂದೆರಡಲ್ಲ… ಸಾವಿರಾರು ಚಿತ್ರಗೀತೆ, ಭಾವಗೀತೆ, ಜನಪದ ಗೀತೆ, ಭಕ್ತಿ ಗೀತೆ ಎಲ್ಲವೂ ಅವರಿಂದ ಇಂದು ನಮಗೆ ಲಭ್ಯವಾಗಿದೆ. ಕನ್ನಡ ಚಿತ್ರರಂಗ ಇಂದು ತನ್ನ ಸುವರ್ಣ ಯುಗ ಕಾಣುತ್ತಿದ್ದರೆ ಅದಕ್ಕೆ ಮಹೇಶ್ ಅವರ ಕೊಡುಗೆ ಸಾಕಷ್ಟು ಇದೆ.
ಅಪಾರ ಸಾಧನೆ ಮಾಡಿದ್ದರೂ ವಿನಯಶಾಲಿಯಾಗಿದ್ದ ಮಹೇಶ್ ಅವರ ಜೊತೆಗೆ ಮಾತಿಗೆ ಕುಳಿತರೆ ಇತಿಹಾಸವೇ ಕಣ್ಣ ಮುಂದೆ ಬರುತ್ತಾ ಇತ್ತು. ಹೋಗಿ ಬನ್ನಿ ಸರ್. ಕನ್ನಡ ನಾಡು ಎಂದೆಂದಿಗೂ ನಿಮ್ಮ ಕೊಡುಗೆಗೆ ಋಣಿಯಾಗಿರುತ್ತದೆ.