ಮೊರ್ಬಿ ಎಂಬ ಭ್ರಷ್ಟಾಚಾರದ ತೂಗು ಸೇತುವೆ

ನಾ ದಿವಾಕರ -ಲೇಖನ-ಮಾರ್ಬಿ ಸೇತುವೆ

ಮೊರ್ಬಿ ಎಂಬ ಭ್ರಷ್ಟಾಚಾರದ ತೂಗು ಸೇತುವೆ

ಮೊರ್ಬಿ ಎಂಬ ಭ್ರಷ್ಟಾಚಾರದ ತೂಗು ಸೇತುವೆ


ವರ್ತಮಾನ

ನಾ ದಿವಾಕರ


ಬಂಡವಾಳಶಾಹಿ ಅರ್ಥವ್ಯವಸ್ಥೆಗೂ ಆಡಳಿತ ವ್ಯವಸ್ಥೆಯ ಹಣಕಾಸು ಭ್ರಷ್ಟಾಚಾರಕ್ಕೂ ಅವಿನಾಭಾವ ಸಂಬಂಧ ಇರುತ್ತದೆ. ಬಂಡವಾಳಶಾಹಿ ಹೂಡಿಕೆದಾರರು ತಮ್ಮ ಮಾರುಕಟ್ಟೆ ಸಾಮ್ರಾಜ್ಯದ ವ್ಯಾಪ್ತಿಯನ್ನು ವಿಸ್ತರಿಸಲು, ಹಣಕಾಸು-ಔದ್ಯೋಗಿಕ-ಔದ್ಯಮಿಕ ಬಂಡವಾಳದ ಬಾಹುಗಳನ್ನು ಸಣ್ಣ ಪ್ರಮಾಣದ ಚರಂಡಿ ನಿರ್ಮಾಣದಿಂದ ತೂಗು ಸೇತುವೆ, ಬೃಹತ್ ಸಾರ್ವಜನಿಕ ಕಟ್ಟಡಗಳವರೆಗೂ ಹರಡಿಕೊಂಡಿರುತ್ತಾರೆ. 


2016ರಲ್ಲಿ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಬಹುಮುಖ್ಯವಾಗಿ ಚರ್ಚೆಗೊಳಗಾದ ವಿಷಯ ಎಂದರೆ ಭ್ರಷ್ಟಾಚಾರದ ನಿರ್ಮೂಲನೆ. ಅರ್ಥವ್ಯವಸ್ಥೆಯಲ್ಲಿರುವ ನಗದು ಚಲಾವಣೆಯನ್ನು ನಿಯಂತ್ರಿಸಿದರೆ ಅಥವಾ ವ್ಯವಹಾರಗಳೆಲ್ಲವನ್ನೂ ಡಿಜಿಟಲೀಕರಣಗೊಳಿಸಿದರೆ ಭ್ರಷ್ಟಾಚಾರ ತಂತಾನೇ ಕಡಿಮೆಯಾಗುತ್ತದೆ ಎಂಬ ಒಂದು ನಂಬಿಕೆಯನ್ನು ಹುಟ್ಟಿಸಲಾಯಿತು. 


ಈ ನಂಬಿಕೆ ಎಷ್ಟು ಗಾಢವಾಗಿತ್ತೆಂದರೆ, 2014ರ ಚುನಾವಣೆಗಳಿಗೂ ಮುನ್ನ ಲೋಕಪಾಲ್ ಮಸೂದೆಯ ಬಗ್ಗೆ ಪುಂಖಾನುಪುಂಖವಾಗಿ ಉಪನ್ಯಾಸ ನೀಡುತ್ತಿದ್ದ ರಾಜಕೀಯ ನಾಯಕರು ಈವರೆಗೂ ಲೋಕಪಾಲ್ ಸ್ಥಾಪಿಸುವ ಬಗ್ಗೆ ಚಕಾರವೆತ್ತುತ್ತಿಲ್ಲ. ನಗದು ಚಲಾವಣೆಯನ್ನು ನಿಯಂತ್ರಿಸಿದರೆ ಭ್ರಷ್ಟಾಚಾರವನ್ನು ಕೊನೆಗಾಣಿಸಬಹುದು ಎಂಬ ಅತಾರ್ಕಿಕ ನಂಬಿಕೆಯೊಂದಿಗೇ ಭಾರತ ನಡೆದುಬಂದಿದೆ. ಆದರೆ ದಿನದಿಂದ ದಿನಕ್ಕೆ ಆಡಳಿತ ವ್ಯವಸ್ಥೆಯೊಳಗಿನ ಭ್ರಷ್ಟಾಚಾರದ ಬೇರುಗಳು ನಿರಂತರವಾಗಿ ಹೊರಬರುತ್ತಲೇ ಇವೆ. ರಾಜಕಾಲುವೆಗಳ ಒತ್ತುವರಿಯಿಂದ ಹಿಡಿದು ಹೆದ್ದಾರಿ ಕಾಮಗಾರಿಗಳವರೆಗೆ ಭ್ರಷ್ಟರ ಸಾಮ್ರಾಜ್ಯ ಸುಭದ್ರ ನೆಲೆ ಸ್ಥಾಪಿಸಿರುವುದನ್ನು ಈ ವರ್ಷದ ಮಳೆಗಾಲದ ದುರಂತಗಳಲ್ಲಿ ಪ್ರತ್ಯಕ್ಷವಾಗಿಯೇ ಕಂಡಿದ್ದೇವೆ. ಕಿತ್ತುಹೋಗುವ ಹೊಸ ಡಾಂಬರು ರಸ್ತೆಗಳು, ಕುಸಿಯುವ ಕಟ್ಟಡಗಳು, ಕೊಚ್ಚಿಹೋಗುವ ಸೇತುವೆಗಳು ಇವೆಲ್ಲವೂ ಸಾಮಾನ್ಯ ಜನತೆಯ ದೃಷ್ಟಿಯಲ್ಲಿ ಸಹಜ ಪ್ರಕ್ರಿಯೆ ಎನ್ನುವಷ್ಟು ಮಟ್ಟಿಗೆ ರೂಢಿಗತವಾಗಿಬಿಟ್ಟಿವೆ. 
ಗುಜರಾತ್‌ನ ಮೋರ್ಬಿ ತೂಗುಸೇತುವೆಯ ಕುಸಿತ ಮತ್ತು ಇದರಿಂದ ಸಂಭವಿಸಿದ ಅಮಾಯಕರ ದುರಂತ ಸಾವುಗಳು ಭಾರತದ ಆಡಳಿತ ವ್ಯವಸ್ಥೆಯಲ್ಲಿ ಬಂಡವಾಳ ಮತ್ತು ಹೂಡಿಕೆದಾರರ ಲಾಭಕೋರತನ ಸೃಷ್ಟಿಸಿರುವ ಭ್ರಷ್ಟಾಚಾರದ ಬ್ರಹ್ಮಾಂಡ ಸ್ವರೂಪವನ್ನು ತೆರೆದಿಟ್ಟಿದೆ. ಭಾರತದಲ್ಲಿ ಈ ರೀತಿಯ ಸೇತುವೆ ಕುಸಿತ ಮತ್ತು ಅಮಾಯಕರ ಸಾವುಗಳು ಹೊಸತೇನಲ್ಲ. ಪ್ರತಿಯೊಂದು ದುರಂತದ ಹಿಂದೆಯೂ ಬಂಡವಾಳಿಗರ ಲೋಭ ಮತ್ತು ದುರಾಸೆಯೇ ಅಡಗಿದ್ದರೂ, ಸಾರ್ವಜನಿಕ ವಲಯದಲ್ಲಿ ಗುರುತಿಸುವುದು ಯಾವುದೋ ಒಂದು ರಾಜಕೀಯ ಅಸ್ಮಿತೆಯೇ ಆಗಿರುತ್ತದೆ. ಹಾಗಾಗಿ ದುರಂತದಲ್ಲಿ ಮಡಿದ ಜನರೂ ಸಹ ರಾಜಕೀಯ ದಾಳಗಳಾಗಿ ಪರಿಣಮಿಸುತ್ತಾರೆ. 


ʼ ಸರ್ಕಾರದ ವೈಫಲ್ಯ ʼ ಎಂದು ವ್ಯಾಖ್ಯಾನಿಸುತ್ತಲೇ ಈ ದುರಂತಗಳಿಗೆ ಮೂಲ ಕಾರಣವಾದ ಮಾರುಕಟ್ಟೆ ಬಂಡವಾಳದ ಪಾತ್ರವನ್ನು ನಿರ್ಲಕ್ಷಿಸುವುದರ ಮೂಲಕ, ಬಂಡವಾಳ ವ್ಯವಸ್ಥೆಯ ಪೋಷಣೆಗೆ ಪೂರಕವಾದ ಭ್ರಷ್ಟಾಚಾರದ ಬೇರುಗಳನ್ನು ಸುಸ್ಥಿತಿಯಲ್ಲಿ ಕಾಪಾಡಲಾಗುತ್ತದೆ. ರಾಜಕೀಯ ದೋಷಾರೋಪಗಳ ನಡುವೆ, ಪರಿಹಾರದ ಚೆಕ್ಕುಗಳು ಸಾವುಗಳಿಂದ ನೊಂದ ಜನತೆಯ ಬಾಯಿ ಮುಚ್ಚಿಸುತ್ತವೆ. ಇಂತಹ ಪ್ರತಿಯೊಂದು ಮಾನವ ನಿರ್ಮಿತ ದುರ್ಘಟನೆಯಲ್ಲೂ ಹತ್ತಾರು-ನೂರಾರು ಕುಟುಂಬಗಳು ತಮ್ಮ ಜೀವನ ಮತ್ತು ಜೀವನೋಪಾಯದ ತಲ್ಲಣಗಳನ್ನು ಮೌನವಾಗಿಯೇ ಸಹಿಸಿಕೊಳ್ಳುವಂತಹ ಒಂದು ವ್ಯವಸ್ಥೆಯನ್ನು ನಾಗರಿಕರಾದ ನಾವೇ ನಿರ್ಮಿಸಿಕೊಂಡಿದ್ದೇವೆ. 

ಗುಜರಾತ್‌ನ ಮೋರ್ಬಿ ತೂಗು ಸೇತುವೆಯ ಕುಸಿತದಲ್ಲಿ 140ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇನ್ನೂ 200ಕ್ಕೂ ಹೆಚ್ಚು ಜನರ ಪತ್ತೆಯಾಗಬೇಕಿದೆ. ನೂರಾರು ಜನರು ಗಾಯಗೊಂಡಿದ್ದಾರೆ. ಈ ಘಟನೆಯ ಬಗ್ಗೆ ಕೂಲಂಕುಷ ತನಿಖೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಆಜ್ಞಾಪಿಸಿದ್ದು, ವಿಶೇಷ ತನಿಖಾ ದಳವನ್ನೂ ರೂಪಿಸಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ, ಆಡಳಿತ ವ್ಯವಸ್ಥೆಯ ಅಸಡ್ಡೆ ಮತ್ತು ರಾಜಕೀಯ ಪಕ್ಷಗಳ ಮೇಲಾಟಗಳ ನಡುವೆಯೇ ತನಿಖೆಯೂ ಮುಂದುವರೆದು, ಕೊನೆಗೊಮ್ಮೆ ಇಡೀ ಘಟನೆಯೇ ವಿಸ್ಮೃತಿಗೆ ಜಾರುತ್ತದೆ. ಮಡಿದ ಅಮಾಯಕರು ನೆನಪುಗಳಿಂದ ಮರೆಯಾಗುತ್ತಾರೆ. ಉಳಿದುಕೊಂಡ ಮೃತರ ಕುಟುಂಬಗಳು ಪರಿಹಾರದ ಮೊತ್ತದೊಂದಿಗೆ ಹೊಸ ಬದುಕನ್ನು ಕಟ್ಟಿಕೊಳ್ಳಲು ಹವಣಿಸುತ್ತಾರೆ. ಮನುಜ ಜೀವವನ್ನು ಹಣಕಾಸು ನೆರವಿನ ಮೂಲಕವೇ ಅಳೆಯುವ ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಜನಸಾಮಾನ್ಯರ ಬದುಕೂ ಸಹ ಮಾರುಕಟ್ಟೆಯ ಒಂದು ಭಾಗವಾಗಿಯೇ ಮುಂದುವರೆಯುತ್ತದೆ. ಮಾರುಕಟ್ಟೆಯ ವ್ಯತ್ಯಯಗಳು ಜೀವನೋಪಾಯದ ಪಲ್ಲಟಗಳನ್ನು ನಿಯಂತ್ರಿಸುವAತೆಯೇ ಭ್ರಷ್ಟ ಆಡಳಿತ ವ್ಯವಸ್ಥೆಯ ಬೇರುಗಳು ಬದುಕಿನ ಮಾರ್ಗಗಳನ್ನೂ ನಿಯಂತ್ರಿಸುತ್ತವೆ. 


ಮೋರ್ಬಿ ತೂಗುಸೇತುವೆಯ ಕುಸಿತಕ್ಕೆ ಹಲವು ಕಾರಣಗಳಿವೆ. ಇತ್ತೀಚೆಗಷ್ಟೇ ನವೀಕರಣಗೊಂಡ 140 ವರ್ಷಗಳ ತೂಗು ಸೇತುವೆಯ ಇಡೀ ಭಾರವನ್ನು ಹೊರುವ ಮುಖ್ಯ ಕೇಬಲ್‌ಗಳು ದುರ್ಬಲವಾಗಿದ್ದರಿಂದಲೇ ಕುಸಿತ ಸಂಭವಿಸಿದೆ ಎಂದು ಹೇಳಲಾಗಿದೆ. ಅಂದರೆ ನವೀಕರಣದ ಸಂದರ್ಭದಲ್ಲಿ ಈ ಮುಖ್ಯ ಕೇಬಲ್‌ಗಳನ್ನು ಬದಲಿಸಿ ಹೊಸತನ್ನು ಅಳವಡಿಸಬೇಕಿತ್ತು. 750 ಅಡಿ ವಿಸ್ತಾರ ಇರುವ ಈ ತೂಗು ಸೇತುವೆ ಒಮ್ಮೆಲೆ ಗರಿಷ್ಟ 133 ಜನರ ಭಾರವನ್ನು ತಡೆಯುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಮೋರ್ಬಿ ನಗರಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ. ಆದರೆ ಅವಘಡ ಸಂಭವಿಸಿದಾಗ ಸೇತುವೆಯ ಮೇಲೆ 500ಕ್ಕೂ ಹೆಚ್ಚು ಜನರಿದ್ದುದಾಗಿ ವರದಿಯಾಗಿದೆ. ಇತ್ತೀಚೆಗಷ್ಟೇ 2 ಕೋಟಿ ರೂ ವೆಚ್ಚದಲ್ಲಿ ಶೇ 100ರಷ್ಟು ನವೀಕರಣ ಮಾಡಿರುವುದಾಗಿ ಹೇಳಿರುವ ಗುತ್ತಿಗೆದಾರ ಕಂಪನಿ ಒರೆವಾ, ತನ್ನ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುವ ಬದಲು, ಇದು ದೇವರ ಆಟ ಎಂದು ಹೇಳಿರುವುದು ನಮ್ಮ ಸಮಾಜದಲ್ಲಿ ಅಂತರ್ಗತವಾಗಿರುವ ಅಸೂಕ್ಷ್ಮತೆಯ ಸಂಕೇತವಾಗಿದೆ.


ಉತ್ತರದಾಯಿತ್ವದ ಪ್ರಶ್ನೆ


ಇಂತಹ ದುರಂತಗಳು ನಮ್ಮ ನಡುವೆ ನಡೆಯುತ್ತಲೇ ಇವೆ. ನೂರಾರು ಕಾರ್ಮಿಕರು, ಸಾರ್ವಜನಿಕರು ಬಲಿಯಾಗುತ್ತಲೇ ಇದ್ದಾರೆ. ನೂರಾರು ಕುಟುಂಬಗಳು ತಮ್ಮ ನೆಲೆಯನ್ನು ಕಳೆದುಕೊಳ್ಳುತ್ತಲೇ ಇವೆ. ಈ ದುರಂತಗಳು ಯಾವ ಸರ್ಕಾರದ ಅವಧಿಯಲ್ಲಿ ಸಂಭವಿಸಿವೆ ಅಥವಾ ಯಾವ ರಾಜಕೀಯ ಪಕ್ಷದ ಆಡಳಿತದಲ್ಲಿ ನಡೆದಿವೆ ಎನ್ನುವುದಕ್ಕಿಂತಲೂ, ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯ ನಡುವೆಯೂ, ಕೋಟ್ಯಂತರ ರೂಗಳ ಬಂಡವಾಳ ಹೂಡಿಕೆಯ ಹೊರತಾಗಿಯೂ ಏಕೆ ಈ ದುರಂತಗಳು ಸಂಭವಿಸುತ್ತಿವೆ ಎಂಬ ಪ್ರಶ್ನೆ ನಾಗರಿಕರನ್ನು ಕಾಡಬೇಕಿದೆ. ಮೇಲೆ ನಿದರ್ಶನ ರೂಪದಲ್ಲಿ ಉಲ್ಲೇಖಿಸಲಾದ ಘಟನೆಗಳಲ್ಲಿ ಇಂತಹ ನೂರಾರು ಕುಟುಂಬಗಳು ನಿರ್ಗತಿಕವಾಗಿವೆ. ಸರ್ಕಾರ ಮಡಿದವರ ಕುಟುಂಬದವರಿಗೆ, ಗಾಯಗೊಂಡವರಿಗೆ ನೀಡುವ ಪರಿಹಾರದ ಮೊತ್ತ ಆ ಕ್ಷಣದ ಸಾಂತ್ವನ ಮಾತ್ರವಾಗಿರುತ್ತದೆ. ಆದರೆ ಇಂತಹ ದುರಂತಗಳನ್ನು ತಮ್ಮ ಜೀವನದ ಮೂಲ ನೆಲೆಯನ್ನೇ ಕಳೆದುಕೊಂಡ ಅನಾಥ ಕುಟುಂಬಗಳೂ ಇರುತ್ತವೆ. ಈ ಕುಟುಂಬಗಳಿಗೆ ಉತ್ತರದಾಯಿ ಯಾರು ? ಆಡಳಿತ ಯಂತ್ರವೋ, ರಾಜಕೀಯ ಪಕ್ಷಗಳೋ, ಆಡಳಿತಾರೂಢ ಸರ್ಕಾರಗಳೋ ಅಥವಾ ಅಧಿಕಾರಶಾಹಿಯೋ ?

ಜಲ್ಲಿ, ಗಾರೆ, ಸಿಮೆಂಟು ಇಟ್ಟಿಗೆಗಳಿಂದ ಹಿಡಿದು ಕಟ್ಟಡಗಳನ್ನು, ಸೇತುವೆಗಳನ್ನು ಅಲಂಕರಿಸುವ ಅತ್ಯಾಧುನಿಕ ಐಷಾರಾಮಿ ವಸ್ತುಗಳವರೆಗೂ ಪೂರೈಕೆ ಮತ್ತು ಸರಬರಾಜು ಸರಪಳಿಯನ್ನು ವ್ಯಾಪಿಸಿರುವ ಭ್ರಷ್ಟಾಚಾರದ ಕಬಂಧ ಬಾಹುಗಳು ಅಧಿಕಾರಶಾಹಿಯ ಒಳಗೆ, ರಾಜಕೀಯ ವ್ಯವಸ್ಥೆಯೊಳಗೆ ಮತ್ತು ಗ್ರಾಮ ಪಂಚಾಯತ್‌ನಿAದ ಸಂಸತ್ತಿನವರೆಗೆ ಹರಡಿಕೊಂಡಿವೆ. ಈ ಭ್ರಷ್ಟಾಚಾರದ ಪರಿಣಾಮವಾಗಿಯೇ ಕಳಪೆ ವಸ್ತುಗಳ ಬಳಕೆಯಾಗುತ್ತದೆ, ಕಳಪೆ ಕಾಮಗಾರಿ ನಡೆಯುತ್ತದೆ. ಗುತ್ತಿಗೆ ಪಡೆದ ಪ್ರಭಾವಶಾಲಿ ಉದ್ಯಮಿಗಳು ತಮ್ಮ ರಾಜಕೀಯ-ಮಾರುಕಟ್ಟೆ ಪ್ರಭಾವವನ್ನು ಬಳಸಿ ಅಪರಾಧ ಮುಕ್ತರಾಗುತ್ತಾರೆ. ರಾಜಕೀಯ ಪಕ್ಷಗಳು ಹಿಂದೆAದೋ ನಡೆದ ಅವಘಡಗಳತ್ತ ಬೆರಳು ತೋರುತ್ತಾ “ ನಿಮ್ಮ ಕಾಲದಲ್ಲಿ ಇದು ನಡೆದಿರಲಿಲ್ಲವೇ ?” ಎಂದು ಹೇಳುತ್ತಾ, ಪರಸ್ಪರ ರಾಜಕೀಯ ದೋಷಾರೋಪಗಳಲ್ಲಿ ಮುಳುಗಿ, ಎಂತಹ ಅನಾಹುತವಾದರೂ ವಿಸ್ಮೃತಿಗೆ ಜಾರುವಂತೆ ಮಾಡುತ್ತವೆ. 


ಮೋರ್ಬಿ ದುರಂತದಲ್ಲಿ ಸಂಸದರೊಬ್ಬರ ಸಂಬAಧಿಯ 12 ಜನರ ಇಡೀ ಕುಟುಂಬವೇ ಸರ್ವನಾಶವಾಗಿದೆ. 10 ವರ್ಷದ ಹಸುಳೆ ತನ್ನ ಕಣ್ಣೆದುರಲ್ಲೇ ಪೋಷಕರನ್ನು ಕಳೆದುಕೊಂಡಿದೆ. ಒಂದು ಸಣ್ಣ ಹೋಟೆಲ್ ನಡೆಸುವ ಜಡೇಜಾ ಎಂಬುವರ ಇಡೀ ಕುಟುಂಬ ಇಂದಿಗೂ ಪತ್ತೆಯಾಗಿಲ್ಲ. ಸಾರ್ವಜನಿಕ ಚರ್ಚೆಗಳಲ್ಲೂ, ಸಾಮಾಜಿಕ ತಾಣಗಳ ವಾದ ವಿವಾದಗಳಲ್ಲೂ ಈ ದುರಂತಗಳಿಗೆ ಕಾರಣರು ಯಾರು ಎನ್ನುವುದೇ ಮುಖ್ಯವಾಗಿ, “ ಕಾರಣ ಏನು ” ಎಂಬ ಪ್ರಶ್ನೆ ಮರೆಯಾಗಿಬಿಡುತ್ತದೆ. ಹಾಗಾಗಿಯೇ ಈ ಅನಾಹುತಗಳಿಗೆ ಕಾರಣವಾದ ಭ್ರಷ್ಟಾಚಾರದ ಮೂಲ ಬೇರುಗಳು ಸುಸ್ಥಿತಿಯಲ್ಲಿ ಉಳಿಯುತ್ತವೆ. ಮೇಲೆ ಉಲ್ಲೇಖಿಸಿದ ಮತ್ತು ಇತರ ಅನೇಕಾನೇಕ ಘಟನೆಗಳಲ್ಲಿ ನೈಜ ಅಪರಾಧಿಗಳಿಗೆ ಶಿಕ್ಷೆಯಾಗಿದ್ದಲ್ಲಿ ಬಹುಶಃ ಉಳಿದವರು ಎಚ್ಚೆತ್ತುಕೊಳ್ಳಲು ಸಾಧ್ಯವಿತ್ತು. ಆದರೆ ಇಂತಹ ಘಟನೆಗಳ ತನಿಖೆ, ವಿಚಾರಣೆ ಮತ್ತು ದಂಡನೆ ತಾರ್ಕಿಕ ಅಂತ್ಯ ತಲುಪಿದೆಯೋ ಇಲ್ಲವೋ ಎನ್ನುವುದೇ ಸಾರ್ವಜನಿಕರ ಗಮನಕ್ಕೆ ಬರುವುದಿಲ್ಲ. ಇಂತಹ ಅನಾಹುತಗಳಿಗೆ ಕಾರಣವಾದ ಎಷ್ಟು ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ? ಈ ಕಾಮಗಾರಿಗಳಿಗೆ ಮಂಜೂರಾತಿ ನೀಡಿದ ಅಧಿಕಾರಶಾಹಿ ಮತ್ತು ಆಡಳಿತಶಾಹಿಯ ಎಷ್ಟು ಜನರು ಶಿಕ್ಷೆಗೊಳಗಾಗಿದ್ದಾರೆ ? ಎಷ್ಟು ಜನ ಸಚಿವರು, ಶಾಸಕರು ತಮ್ಮ ಬೇಜವಾಬ್ದಾರಿಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ ? ಯಾರು ಉತ್ತರದಾಯಿಯಾಗಿದ್ದಾರೆ ?


ಈ ಜಟಿಲ ಪ್ರಶ್ನೆಗಳು ನಮ್ಮ ನಾಗರಿಕ ಪ್ರಜ್ಞೆಯನ್ನು ಕೊಂಚ ಮಟ್ಟಿಗಾದರೂ ಕದಡಿದರೆ, ಸಮಾಜವೂ ಎಚ್ಚೆತ್ತುಕೊಳ್ಳಲು ಸಾಧ್ಯ. ಇಲ್ಲವಾದರೆ ಸೇತುವೆಯ ಮೇಲೆ ನಡೆಯುವ ಮುನ್ನ ಜೀವವಿಮೆ-ಅಪಘಾತ ಮಾಡಿಸಬೇಕಾದ ಪರಿಸ್ಥಿತಿಯೂ ಎದುರಾಗಬಹುದು. ಇಡೀ ವ್ಯವಸ್ಥೆಯನ್ನು ಆವರಿಸಿರುವ ರಾಜಕೀಯ-ಅಧಿಕಾರಶಾಹಿಯ ಭ್ರಷ್ಟಾಚಾರದ ಬೇರುಗಳನ್ನು ಬುಡಸಮೇತ ತೊಡೆದುಹಾಕದೆ ಹೋದರೆ ಬಹುಶಃ ಭಾರತ ಮತ್ತಷ್ಟು ಕುಸಿದ ಸೇತುವೆಗಳಿಗೆ ಸಾಕ್ಷಿಯಾಗುತ್ತಿರುತ್ತದೆ. ಮಡಿದವರಿಗೆ ಸಂತಾಪ, ಬದುಕುಳಿದವರಿಗೆ ಹಣಕಾಸು ಪರಿಹಾರ ಇವೆರಡರ ನಡುವೆ ಜಾರಿ ಹೋಗುವ ಅನೇಕಾನೇಕ ಮನುಜ ಜೀವಗಳು ಯಾವುದೇ ಮೌಲ್ಯವಿಲ್ಲದ ಸರಕುಗಳಂತೆ ವಿಸ್ಮೃತಿಗೆ ಜಾರುತ್ತವೆ. 



ಕುಸಿದ ಸೇತುವೆಗಳ ಇತಿಹಾಸ


ಕಳಪೆ ಕಾಮಗಾರಿ, ರಾಜಕೀಯ ನಾಯಕರ ಭ್ರಷ್ಟಾಚಾರ, ಗುತ್ತಿಗೆದಾರರ ಅಪ್ರಾಮಾಣಿಕತೆ, ಅಧಿಕಾರಿಗಳ ಭ್ರಷ್ಟಾಚಾರದ ಕರ್ಮಕಾಂಡ, ಟೆಂಡರ್ ಪ್ರಕ್ರಿಯೆಯಲ್ಲಿ ನಡೆಯುವ ವಶೀಲಿಬಾಜಿ, ಶಿಫಾರಸು ಮತ್ತು ರಾಜಕೀಯ ಒತ್ತಡಗಳು, ನಿರ್ಮಾಣ ಕಾರ್ಯದಲ್ಲಿ ಕಳಪೆ ವಸ್ತುಗಳ ಬಳಕೆ, ಇದೀಗ ಸುದ್ದಿಯಲ್ಲಿರುವ ಆಡಳಿತಾರೂಢ ಪಕ್ಷಗಳ ಕಮಿಷನ್ ದಂಧೆ ಈ ಎಲ್ಲದರ ಹಿನ್ನೆಲೆಯಲ್ಲಿ ನೋಡಿದಾಗ ಭಾರತದಲ್ಲಿ ಸೇತುವೆಗಳು ಕುಸಿಯುವುದು ಅಚ್ಚರಿ ಎನಿಸುವುದಿಲ್ಲ. 


ಇತ್ತೀಚೆಗೆ ಬೆಂಗಳೂರು ಮೈಸೂರು ನಡುವೆ ನೂತನವಾಗಿ ನಿರ್ಮಿಸಲಾದ ಹೆದ್ದಾರಿಯೇ ಮಳೆಯ ರಭಸಕ್ಕೆ ಕುಸಿದಿದೆ. ಈ ದುರಂತಗಳಿಗೆ ನೈಸರ್ಗಿಕ ವಿಕೋಪವನ್ನೇ ದೂಷಿಸುವ ಮೂಲಕ, ತಮ್ಮ ಭ್ರಷ್ಟ ಪರಂಪರೆಯನ್ನು ಸುರಕ್ಷಿತವಾಗಿ ಮುಂದುವರೆಸುವ ಕಲೆಯನ್ನು ನಮ್ಮ ಆಡಳಿತ ವ್ಯವಸ್ಥೆ ಕರಗತ ಮಾಡಿಕೊಂಡಿದೆ. ಹಾಗಾಗಿಯೇ ಯಾವುದೇ ದುರಂತ ಸಂಭವಿಸಿದರೂ, ಎಷ್ಟೇ ಜನರು ಮೃತಪಟ್ಟರೂ, ಯಾವ ಘಟನೆಯೂ ತಾರ್ಕಿಕ ಅಂತ್ಯ ತಲುಪುವುದಿಲ್ಲ, ಅಪರಾಧದ ಮೂಲ ಪತ್ತೆಯಾಗುವುದಿಲ್ಲ, ನೈಜ ಅಪರಾಧಿಗಳು ಶಿಕ್ಷೆಗೊಳಗಾಗುವುದೂ ಇಲ್ಲ.


ಬಂಡವಾಳ ಮತ್ತು ಮಾರುಕಟ್ಟೆ ಭಾರತದ ಆರ್ಥಿಕತೆಯ ಎಲ್ಲ ವಲಯಗಳನ್ನೂ ಆಕ್ರಮಿಸಿಕೊಂಡ ನಂತರ ಕಳೆದ 20 ವರ್ಷಗಳಲ್ಲಿ ಉಂಟಾಗಿರುವ ಇಂತಹ ದುರಂತಗಳ ಸರಣಿಯನ್ನೇ ಪಟ್ಟಿ ಮಾಡಬಹುದು. 


ಸರ್ಕಾರಗಳು ಸಾರ್ವಜನಿಕ ಬಳಕೆಗೆ ಅಗತ್ಯವಾದ ಮೂಲ ಸೌಕರ್ಯಗಳ ನಿರ್ಮಾಣವನ್ನು ಹೊರಗುತ್ತಿಗೆ ನೀಡುವ ಮೂಲಕ, ಕಾಮಗಾರಿಯ ಗುಣಮಟ್ಟ ಮತ್ತು ಸುಸ್ಥಿರತೆಯ ಜವಾಬ್ದಾರಿಯನ್ನು ಗುತ್ತಿಗೆದಾರರ ಮೇಲೆಯೇ ಹೊರಿಸುವುದರಿಂದ, ಈ ಕಾಮಗಾರಿಗಳ ನೇಪಥ್ಯದಲ್ಲಿ ನಡೆಯುವ ರಾಜಕೀಯ ಭ್ರಷ್ಟಾಚಾರವೆಲ್ಲವೂ ಸಾರ್ವಜನಿಕರಿಗೆ ಅಪಾರದರ್ಶಕವಾಗಿಯೇ ಉಳಿದುಬಿಡುತ್ತದೆ. 


2001ರ ಜೂನ್ 22ರಂದು ಮಂಗಳೂರು ಚೆನ್ನೈ  ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲು, 140 ವರ್ಷ ಹಳೆಯದಾದ ಸೇತುವೆಯೊಂದನ್ನು ದಾಟುವಾಗ, ಕಡಲುಂಡಿ ನದಿಗೆ ಬಿದ್ದು 60 ಜನರು ಮೃತಪಟ್ಟಿದ್ದರು. 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 


2002ರ ಸೆಪ್ಟಂಬರ್ 10ರಂದು ಕೊಲ್ಕತ್ತಾ-ನವದೆಹಲಿ ಮಾರ್ಗದಲ್ಲಿ ರಾಜಧಾನಿ ಎಕ್ಸ್ಪ್ರೆಸ್ ರೈಲು 130 ಕಿಮೀ ವೇಗದಲ್ಲಿ ಸಂಚರಿಸುತ್ತಿದ್ದಾಗ ಹಳಿತಪ್ಪಿ ಬಿಹಾರದ ರಾಫಿಗಂಜ್ ಬಳಿಯ ಧಾವೆ ನದಿಯ ಸೇತುವೆಯಿಂದ ನದಿಗೆ ಬಿದ್ದಿತ್ತು. ಈ ದುರಂತದಲ್ಲಿ 80 ಜನರು ಮೃತಪಟ್ಟಿದ್ದರು. 170ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಘಟನೆಗೆ ವಸಾಹತು ಕಾಲದ ಸೇತುವೆ ತುಕ್ಕು ಹಿಡಿದಿರುವುದೇ ಕಾರಣವಿರಬಹುದು ಎಂದು ಹೇಳಲಾಗಿತ್ತು. ಹಿಂದೆ ನಕ್ಸಲರ ಕೈವಾಡ ಇದೆ ಎಂದೂ ಹೇಳಲಾಗಿತ್ತು. 


2007ರ ಸೆಪ್ಟಂಬರ್ 10ರಂದು ಹೈದರಾಬಾದ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯೊಂದು ಕುಸಿದು 15 ಕಾರ್ಮಿಕರು ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು. ಭಾರಿ ಮಳೆಯ ಕಾರಣ ಮೇಲ್ಸೇತುವೆ ಕುಸಿದಿತ್ತು ಎಂದು ಹೇಳಲಾಗಿತ್ತು. ಮಳೆಯ ಸಂದರ್ಭದಲ್ಲಿ ಸೇತುವೆಯ ಕೆಳಗೆ ಆಶ್ರಯ ಪಡೆದಿದ್ದ ಕಾರ್ಮಿಕರು ಮತ್ತು ಪ್ರಯಾಣಿಕರು ಸಾವನ್ನಪ್ಪಿದ್ದರು. 20ಕ್ಕೂ ಹೆಚ್ಚು ವಾಹನಗಳು ಜಖಂ ಆಗಿದ್ದವು. 


2016ರ ಮಾರ್ಚ್ 31ರಂದು ಕೊಲ್ಕತ್ತಾದ ವಿವೇಕಾನಂದ ರಸ್ತೆಯ ಮೇಲ್ಸೇತುವೆ ನಿರ್ಮಾಣ ಹಂತದಲ್ಲಿದ್ದಾಗಲೇ ಕುಸಿದು ಬಿದ್ದು 27 ಜನರು ಮೃತಪಟ್ಟು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಸೇತುವೆಗೆ ಬಳಸಿದ್ದ 150 ಮೀಟರ್ ಉದ್ದದ ಉಕ್ಕಿನ ಹಳಿ ಕುಸಿದು ಬಿದ್ದುದರಿಂದ ಅವಘಡ ಸಂಭವಿಸಿತ್ತು. ಅನೇಕ ಪಾದಚಾರಿಗಳು ಈ ದುರಂತದಲ್ಲಿ ಬಲಿಯಾಗಿದ್ದರು. 

2016ರ ಆಗಸ್ಟ್ 2ರಂದು ಮುಂಬೈ-ಗೋವಾ ಹೆದ್ದಾರಿಯಲ್ಲಿ ರಾಯ್‌ಘಡ್ ಜಿಲ್ಲೆಯಲ್ಲಿ ಸಾವಿತ್ರಿ ನದಿಯ ವಸಾಹತು ಕಾಲದ ಸೇತುವೆಯೊಂದು ಕುಸಿದು, ಎರಡು ಬಸ್ಸುಗಳು ತುಂಬಿ ಹರಿಯುತ್ತಿದ್ದ ನದಿಯ ಪಾಲಾಗಿದ್ದವು. ಈ ಘಟನೆಯಲ್ಲಿ 40ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಹತ್ತು ದಿನಗಳ ನಂತರ ಮೃತ ದೇಹಗಳನ್ನು ಪತ್ತೆ ಹಚ್ಚಲಾಗಿತ್ತು. 


2018ರ ಸೆಪ್ಟಂಬರ್ 4ರಂದು ಕೊಲ್ಕತ್ತಾದ ಮಜೇರ್‌ಹಟ್ ಸೇತುವೆಯು ಕುಸಿದು ಮೂವರು ಬಲಿಯಾಗಿದ್ದರು. 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 50 ವರ್ಷದ ಹಳೆಯ ಈ ಸೇತುವೆ ಹತ್ತುವರ್ಷಗಳಿಂದಲೂ ದುರಸ್ತಿಯಲ್ಲಿತ್ತು. ಸೇತುವೆಯ ಬಿರುಕು ಬಿಟ್ಟಿದ್ದರೂ ನಾಗರಿಕ ಅಧಿಕಾರಿಗಳು ಗಮನಹರಿಸದೆ ಇದ್ದುದು ಈ ಅವಘಡಕ್ಕೆ ಕಾರಣವಾಗಿತ್ತು. 


2017ರ ಮೇ 18ರಂದು ಗೋವಾದ ಪಣಜಿ ಬಳಿಯ ಕುರ್ಚೋರಂ ಗ್ರಾಮದ ಬಳಿ ಇರುವ ಸನ್ವೋರ್ಡಮ್ ನದಿಯನ್ನು ಹಾದು ಹೋಗಿದ್ದ ಪೋರ್ಚುಗೀಸರ ಕಾಲದ ಸೇತುವೆಯು ಕುಸಿದು ಇಬ್ಬರು ಮೃತಪಟ್ಟಿದ್ದರು. ಆತ್ಮಹತ್ಯೆಗೆ ಪ್ರಯತ್ನಿಸಿದ ಯುವಕನೊಬ್ಬನ ಶೋಧ ನಡೆಸಲು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾಗಲೇ ಈ ದುರಂತ ಸಂಭವಿಸಿತ್ತು. 


2018ರ ಮೇ 15ರಂದು ವಾರಣಾಸಿಯಲ್ಲಿ, ವಾಹನದಟ್ಟಣೆ ಹೆಚ್ಚಾಗಿರುವ ರಸ್ತೆಯೊಂದರಲ್ಲಿ ಮೇಲ್ಸೇತುವೆಯೊಂದು ಕುಸಿದು 18 ಜನರು ಮೃತಪಟ್ಟಿದ್ದರು. ಒಂದು ಮಿನಿಬಸ್, ನಾಲ್ಕು ಕಾರುಗಳು, ಹತ್ತು ದ್ವಿಚಕ್ರ ವಾಹನಗಳು ಅಪ್ಪಚ್ಚಿಯಾಗಿದ್ದವು. ಉತ್ತರಪ್ರದೇಶ ಸರ್ಕಾರ 2261 ಮೀಟರ್ ಉದ್ದದ ಈ ಸೇತುವೆಯನ್ನು 129 ಕೋಟಿ ರೂಗಳ ವೆಚ್ಚದೊಂದಿಗೆ ನಿರ್ಮಿಸುತ್ತಿತ್ತು. 


2019ರ ಮಾರ್ಚ್ 14ರಂದು ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣದ ಬಾಬಾರುದ್ದಿನ್ ತಯಾಬ್ಜಿ ಬೀದಿಯನ್ನು ಹಾದು ಹೋಗುವ ಪಾದಚಾರಿ ಸೇತುವೆಯೊಂದು ಕುಸಿದು ಬಿದ್ದು 6 ಜನರು ಮೃತಪಟ್ಟಿದ್ದರು. 29 ಜನರು ಗಾಯಗೊಂಡಿದ್ದರು.