ಆರ್ಥಿಕ ಹಿನ್ನೋಟ 2025: ಪ್ರಗತಿಯೋ? ಅಸಮಾನತೆ ಹೆಚ್ಚಳವೋ?
‘ ಬೆವರ ಹನಿʼ ವಿಶೇಷ ತೆರಿಗೆ ನೀತಿಗಳು, ಗ್ರಾಮೀಣ -ನಗರ ಪ್ರದೇಶಗಳ ನಡುವಿನ ಅಂತರ, ಅಸಂಘಟಿತ ಕಾರ್ಮಿಕರ ಹೆಚ್ಚಳ, ನಿರುದ್ಯೋಗ, ಜಾಗತೀಕರಣ ಮತ್ತು ಜಾತಿ ಆಧಾರಿತ ತಾರತಮ್ಯಗಳು ಇದಕ್ಕೆ ಪ್ರಮುಖ ಕಾರಣಗಳು.ಈಗ ಹೇಳಿ ಇದು ನಿಜವಾಗಿಯೂ ಆರ್ಥಿಕ ಪ್ರಗತಿಯೇ? ಡಾ.ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಆದ ರೂಪಾಯಿ ಅಪಮೌಲ್ಯವನ್ನು "ಮೌಲ್ಯ ಇಳಿಯುತ್ತಿರುವುದು ಕೇಂದ್ರ ಸರ್ಕಾರದ್ದೋ, ಇಲ್ಲವೆ ರೂಪಾಯಿಯದ್ದೋ" ಎಂದು ಗೇಲಿ ಮಾಡಿ, "ನಾವು ಅಧಿಕಾರಕ್ಕೆ ಬಂದರೆ ರೂಪಾಯಿ ಮೌಲ್ಯವನ್ನು 40 ರೂಪಾಯಿಗಳಿಗೆ ತರುತ್ತೇವೆ" ಎಂದು ಹೇಳಿಕೊಂಡಿದ್ದ ನರೇಂದ್ರ ಮೋದಿ, ಈಗ ಪ್ರಧಾನಿಯಾಗಿ ರೂಪಾಯಿ ಅಪಮೌಲ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.ಅವರ ಪಕ್ಷದ ನಾಯಕರು ತಮಗೆ ಅಪತ್ಯವಾಗುವ ಎಲ್ಲ ಜಾಗತಿಕ ಮಾಪಕಗಳನ್ನೂ ತಳ್ಳಿಹಾಕುವ ತಮ್ಮ ತಂತ್ರದಂತೆ 'ರೂಪಾಯಿ ಅಪಮೌಲ್ಯವು ಅರ್ಥ ವ್ಯವಸ್ಥೆಗೆ ಒಂದು ಬಗೆಯಲ್ಲಿ ಒಳ್ಳೆಯದೇ' ಎಂದು ನಂಬಿಸಲು ಹೊರಟಿದ್ದಾರೆ.

ಎಸ್.ಆರ್.ವೆಂಕಟೇಶ ಪ್ರಸಾದ್
ಬೆಂಗಳೂರು: 2025, ಭಾರತದ ಆರ್ಥಿಕತೆಯ ಮಿಶ್ರ ಫಲದ ವರ್ಷ. ಜಾಗತಿಕ ಆರ್ಥಿಕ ಮಂದಗತಿ ಮತ್ತು ಭೌಗೋಳಿಕ ರಾಜಕೀಯ ಸಮಸ್ಯೆಗಳ ಹೊರತಾಗಿಯೂ ದೊಡ್ಡ ಪ್ರಮಾಣದ ದೇಶಿಯ ಬಳಕೆ, ಸೇವಾ ವಲಯದ ರಫ್ತು ಮತ್ತು ಉತ್ಪಾದನಾ ಕ್ಷೇತ್ರದ ಬೆಳವಣಿಗೆಯಿಂದ ದೇಶವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿ ಮುಂದುವರಿದಿದೆ. ಭಾರತ,ಈ ವರ್ಷವೂ ಜಾಗತಿಕ ಆರ್ಥಿಕ ಬೆಳವಣಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಇದೆ. ಆದಾಯ ತೆರಿಗೆ ವಿನಾಯಿತಿಗಳು, ಹೊಂದಾಣಿಕೆಯ ಹಣಕಾಸು ನೀತಿಗಳು, ಜಿಎಸ್‌ಟಿ ಸುಧಾರಣೆ, ಅಮೆರಿಕದೊಂದಿಗಿನ ಸಂಭಾವ್ಯ ವ್ಯಾಪಾರ ಒಪ್ಪಂದ- ಇದಕ್ಕೆ ಪೂರಕವಾಗಿರುವ ಅಂಶಗಳು.
ಜಪಾನ್ ದೇಶವನ್ನು ಹಿಂದಿಕ್ಕಿ ಸುಮಾರು 375 ಲಕ್ಷ ಕೋಟಿಯ ಗಾತ್ರದೊಂದಿಗೆ ವಿಶ್ವದ ನಾಲ್ಕನೇ ದೊಡ್ಡ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಿದೆ. ಇದರ ನಡುವೆಯೇ ಜಾಗತಿಕ ಸವಾಲುಗಳು,ನಿರುದ್ಯೋಗ ಮತ್ತು ಮಾರುಕಟ್ಟೆ ಏರಿಳಿತಗಳು ಅದಕ್ಕೆ ಸವಾಲಾಗಿ ಅಡೆ-ತಡೆಗಳನ್ನು ನಿರ್ಮಿಸುತ್ತಲೇ ಇದೆ. ಇನ್ನೊಂದೆಡೆ, ವಿಶ್ವ ಅಸಮಾನತೆ ವರದಿ 2026ರ ಪ್ರಕಾರ ಭಾರತದಲ್ಲಿ ಅಸಮಾನತೆ ಹೆಚ್ಚುತ್ತಿದೆ.ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಇದ್ದದ್ದಕ್ಕಿಂತಲೂ ಈಗಲೇ ಅಸಮಾನತೆ ಹೆಚ್ಚು ಎನ್ನುತ್ತದೆ ವರದಿ.
ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ: ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್, ಫೆಬ್ರವರಿಯಲ್ಲಿ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ವೈಯಕ್ತಿಕ ಆದಾಯಕ್ಕೆ 12 ಲಕ್ಷ ರೂಪಾಯಿವರೆಗೆ ಮತ್ತು ವೇತನದಾರರಿಗೆ 12.75 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದರು.ಇದು ಮಧ್ಯಮ ವರ್ಗಕ್ಕೆ ಸಮಾಧಾನ ತಂದಿತು.
ಜಿಎಸ್ ಟಿ ದರ ಪರಿಷ್ಕರಣೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಳಗೊಂಡಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಂಡಳಿಯು ಸೆಪ್ಟೆಂಬರ್ 22 ರಿಂದ ಜಾರಿಗೆ ಬರುವಂತೆ ಜಿಎಸ್ ಟಿ ದರ ಪರಿಷ್ಕರಣೆ ಜಾರಿಗೆ ತಂದಿತು, ಎಂದೋ ಆಗಬೇಕಿದ್ದ ಕೆಲಸ ಇದು. ಜಿಎಸ್‌ಟಿ ಜಾರಿ ಸಂದರ್ಭದಲ್ಲಿ ಹಾಕಲಾಗಿದ್ದ ಯದ್ವಾತದ್ವಾ ತೆರಿಗೆಯನ್ನು ಇಳಿಸಿದ್ದು, ದಿನಸಿ ಉತ್ಪನ್ನಗಳು, ಕೃಷಿ ಉಪಕರಣಗಳು, ಔಷಧ, ಬಟ್ಟೆ ಮತ್ತು ವಾಹನಗಳು ಸೇರಿದಂತೆ ಜನರ ನಿತ್ಯದ ಬದುಕಿನಲ್ಲಿ ಬಳಸುವ ಸರಿ ಸುಮಾರು 380 ಉತ್ಪನ್ನಗಳ ಬೆಲೆ ಇಳಿಕೆಗೆ ದಾರಿಮಾಡಿಕೊಟ್ಟಿತು.
ಭಾರತೀಯ ಸ್ಟೇಟ್ ಬ್ಯಾಂಕ್ ನ ಅಂದಾಜಿನ ಪ್ರಕಾರ, ಆದಾಯ ತೆರಿಗೆ ಮಿತಿ ಸಡಲಿಕೆ ಮತ್ತು ಜಿಎಸ್‌ಟಿ ಕಡಿತದಿಂದ ಅರ್ಥ ವ್ಯವಸ್ಥೆಯಲ್ಲಿ 5.31 ಲಕ್ಷ ಕೋಟಿ ರೂಪಾಯಿ ಮೌಲ್ಯದ ಬೇಡಿಕೆ ಸೃಷ್ಟಿಯಾಗಲಿದೆ. ಇದರಿಂದ ಆರ್ಥಿಕತೆಗೆ ಅನುಕೂಲವಾಗಲಿದೆ.
2025 ರಲ್ಲಿ ಭಾರತದ ಆರ್ಥಿಕತೆಯನ್ನು ರೂಪಿಸುವಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿನ ಅಧಿಕ ಹೂಡಿಕೆ, ಖಾಸಗಿ ಬಳಕೆಯಲ್ಲಿನ ಉತ್ತಮ ಚೇತರಿಕೆ,ಉತ್ಪಾದನಾ ಕ್ಷೇತ್ರದಲ್ಲಿನ ಗಮನಾರ್ಹ ಬೆಳವಣಿಗೆ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಡಿಜಿಟಲ್ ಆರ್ಥಿಕತೆ(ಇ-ಕಾಮರ್ಸ್, ಡಿಜಿಟಲ್ ಪಾವತಿ) ಇವು ಪ್ರಮುಖ ಪಾತ್ರ ವಹಿಸಿದವು.
ಷೇರುಪೇಟೆ: 2025ರಲ್ಲಿ ಷೇರು ಪೇಟೆಯಲ್ಲಿ ಹೂಡಿಕೆದಾರರಿಗೆ ಹೆಚ್ಚಿನ ಲಾಭವೇನು ಆಗಲಿಲ್ಲ .ಒಂದು ಹಂತದಲ್ಲಿ ಬಿಎಸ್ ಸಿ ಸೆನ್ಸೆಕ್ಸ್ 86,159 ಸೂಚ್ಯಂಕ ಮತ್ತು ನಿಫ್ಟಿ 26,325.8 ಸೂಚ್ಯಂಕದ ದಾಖಲೆಯ ಎತ್ತರಕ್ಕೆ ತಲುಪಿದ್ದವು.ಆದರೆ,ಡಿ.31ರಂದು ಷೇರು ಪೇಟೆ ವಹಿವಾಟಿನ ಅಂತ್ಯದ ವೇಳೆಗೆ ಸೆನ್ಸೆಕ್ಸ್ 85220.60 ಹಾಗೂ ನಿಫ್ಟಿ 26,129 ತಲುಪಿತ್ತು.ಒಟ್ಟಾರೆ,2025 ರಲ್ಲಿ ಬಿ ಎಸ್ ಸಿ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇಕಡ 10 ರಷ್ಟು ಏರಿಕೆ ದಾಖಲಿಸಿದವು.ವಿದೇಶಿ ಹೂಡಿಕೆದಾರರು ನಿರಂತರವಾಗಿ ಬಂಡವಾಳ ಮಾರುಕಟ್ಟೆಯಿಂದ ಹಣ ಹಿಂಪಡೆದರು.ಇದು ವಾರ್ಷಿಕ ದಾಖಲೆಯ 1.6 ಟ್ರಿಲಿಯನ್ ರೂಪಾಯಿಗಳು. ಆದರೂ, ಅಕ್ಟೋಬರ್ 2024 ಮತ್ತು ಸೆಪ್ಟೆಂಬರ್ 2025ರ ನಡುವೆ 86 ಐಪಿಓಗಳು ಸುಮಾರು 1.71 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದವು.ಇದು ಹಿಂದಿನ ವರ್ಷಕ್ಕಿಂತ ದುಪ್ಪಟ್ಟು. ದೇಶೀಯ ಹೂಡಿಕೆದಾರರ ಉತ್ಸಾಹ,ಮ್ಯೂಚುವಲ್ ಫಂಡ್ ಗಳು, ವಿಮೆ ಸಂಸ್ಥೆಗಳ ಹೂಡಿಕೆಯ ಆಸಕ್ತಿ ಮತ್ತು ನಂಬಿಕೆಯಿಂದ ಇದು ಸಾಧ್ಯವಾಯಿತು.
ಭಾರತದ ಆರ್ಥಿಕತೆಯಲ್ಲಿ ಬಂಡವಾಳ ಮಾರುಕಟ್ಟೆಗೆ ಮಹತ್ವದ ಸ್ಥಾನ ಇದ್ದರೂ, ಶೇಕಡ 9.5 ರಷ್ಟು ಜನರು ಮಾತ್ರ ಬಂಡವಾಳ ಪೇಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಬಂಡವಾಳ ಮಾರುಕಟ್ಟೆ ಎಂದರೆ ಅಲ್ಲಿ ಷೇರುಗಳ ಖರೀದಿ ಮತ್ತು ಮಾರಾಟ ಮಾತ್ರವಲ್ಲ; ಮ್ಯೂಚುವಲ್ ಫಂಡ್ ಗಳು, ಇ ಟಿ ಎಫ್(ವಿನಿಮಯ ವಹಿವಾಟು ನಿಧಿ), ಕಾರ್ಪೊರೇಟ್ ಬಾಂಡ್ ಗಳು, ಸಂಕೀರ್ಣ ಉತ್ಪನ್ನವಾದ ಫ್ಯೂಚರ್ ಮತ್ತು ಆಪ್ಷನ್ಸ್ (ಎಫ್ ಅಂಡ್ ಓ)ಗಳ ವ್ಯವಹಾರವೂ ನಡೆಯುತ್ತದೆ. ಕಮಾಡಿಟಿ ಮಾರ್ಕೆಟ್ ನಲ್ಲಿ ಚಿನ್ನ, ಬೆಳ್ಳಿ ಸೇರಿ ಇತರ ಖನಿಜ ಉತ್ಪನ್ನಗಳು,ಕಚ್ಚಾತೈಲ ಮತ್ತು ಕೃಷಿ ಉತ್ಪನ್ನಗಳ ವಹಿವಾಟು ನಡೆಯುತ್ತದೆ.
ಹಣದುಬ್ಬರ-ರೆಪೋ ದರ ಇಳಿಕೆ: 2025 ರಲ್ಲಿ ಭಾರತವು ದಶಕದ ಅತ್ಯಂತ ಕನಿಷ್ಠ ಮಟ್ಟದ ಹಣದುಬ್ಬರವನ್ನು ದಾಖಲಿಸಿತು. ನವೆಂಬರ್ ತಿಂಗಳಿನಲ್ಲಿ ಶೇಕಡ 0.7 ರಲ್ಲಿತ್ತು. ಹಣದುಬ್ಬರ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಆರ್ ಬಿ ಐ ರೆಪೋ ದರವನ್ನು ಅಕ್ಟೋಬರ್ ವರೆಗೆ ಶೇಕಡ 5.5ಕ್ಕೆ ಕಾಯ್ದುಕೊಂಡಿತ್ತು.ನಂತರ, ಡಿಸೆಂಬರ್ ನಲ್ಲಿ 25 ಮೂಲಾಂಶ ಇಳಿಸಿ ಶೇಕಡ 5.25 ನಿಗದಿ ಮಾಡಿತು.ಇದರಿಂದ ಸಾಲ ಅಗ್ಗವಾಗಿ,ಠೇವಣಿಗಳ ಮೇಲಿನ ಬಡ್ಡಿ ದರ ಕುಸಿತ ಕಂಡಿತು.
ಚಿನ್ನ-ಬೆಳ್ಳಿ ಗಗನಮುಖಿ: ಚಿನ್ನ ಮತ್ತು ಬೆಳ್ಳಿ ಧಾರಣೆ ದಾಖಲೆ ಏರಿಕೆಯನ್ನು ಕಾಣುತ್ತಿದೆ. 2025 ಜನವರಿ ಒಂದರಂದು 10 ಗ್ರಾಂ ಚಿನ್ನದ ದರ (24 ಕ್ಯಾರೆಟ್) 78,000 ರೂಪಾಯಿ ಇದ್ದದ್ದು,ಡಿಸೆಂಬರ್ ವೇಳೆಗೆ 1,41,385 ಗಳನ್ನು ರೂಪಾಯಿಗಳಿಗೆ ತಲುಪಿತ್ತು.ವಾರ್ಷಿಕ ಶೇಕಡ 68 ರಷ್ಟು ಏರಿಕೆ. ಎರಡು ವರ್ಷಗಳ ಅವಧಿಯಲ್ಲಿ ದುಪ್ಪಟ್ಟು ದುಬಾರಿ. ಇನ್ನು, ಬೆಳ್ಳಿ ಧಾರಣೆ ಕೆ.ಜಿ.ಗೆ 2.40 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದೆ.ಇದು ಶೇಕಡ 139 ರಷ್ಟು ಏರಿಕೆ. 1979 ರಿಂದ ವಾರ್ಷಿಕ ಏರಿಕೆಯಲ್ಲಿ ನೂತನ ದಾಖಲೆ.
ಅಮೂಲ್ಯ ಲೋಹಗಳ ಈ ದರ ಏರಿಕೆಯ ನಾಗಾಲೋಟ ಕೇವಲ ಬೇಡಿಕೆಯ ಕಾರಣಕ್ಕಾಗಿ ಆದದ್ದಲ್ಲ. ಇದು ಜಾಗತಿಕ ಮತ್ತು ದೇಶೀಯ ಆರ್ಥಿಕತೆಯಲ್ಲಿನ ಅಸ್ಥಿರತೆ ಮತ್ತು ಅನಿಶ್ಚಿತತೆಯ ಪ್ರತಿಬಿಂಬ. ಆರ್ಥಿಕ ಬಿಕ್ಕಟಿನ ಮುನ್ಸೂಚನೆ ಎನ್ನುವುದು ತಜ್ಞರ ಅಭಿಪ್ರಾಯ. ಜೊತೆಗೆ, ಕಾಗದ ಕರೆನ್ಸಿಯ ಭವಿಷ್ಯ ಮತ್ತು ಭೌಗೋಳಿಕ ರಾಜಕೀಯ ಸ್ಥಿರತೆಯ ಬಗೆಗಿನ ಆಳವಾದ ಆತಂಕದ ಲಕ್ಷಣ. ಜಾಗತಿಕ ಅಶಾಂತಿಯ ಮಾಪಕ ಎನ್ನಲಾಗುತ್ತಿದೆ.
ರೇಟಿಂಗ್ ಹೆಚ್ಚಳ: ಆಗಸ್ಟ್ ತಿಂಗಳಿನಲ್ಲಿ ಜಾಗತಿಕ ರೇಟಿಂಗ್ ಸಂಸ್ಥೆ ಎಸ್ ಅಂಡ್ ಪಿ ಭಾರತದ ಆರ್ಥಿಕತೆಯ ರೇಟಿಂಗ್ ಮಟ್ಟವನ್ನು 18 ವರ್ಷಗಳಲ್ಲಿ ಮೊದಲ ಬಾರಿಗೆ ಮೇಲ್ದರ್ಜೆಗೆ ಏರಿಸಿತು.
ವಿದೇಶಿ ನೇರ ಹೂಡಿಕೆ: ವಿಮಾ ಕ್ಷೇತ್ರದಲ್ಲಿ ಶೇಕಡ 100 ರಷ್ಟು ವಿದೇಶಿ ನೇರ ಹೂಡಿಕೆ(ಎಫ್ ಡಿಐ)ಗೆ ಅವಕಾಶ ನೀಡುವ ಮಸೂದೆಗೆ ಸಂಸತ್ತು ಒಪ್ಪಿಗೆ ನೀಡಿತು.ಇದರಿಂದ ವಿಮಾ ಸಂಸ್ಥೆಗಳ ನಡುವೆ ಪೈಪೋಟಿ ಹೆಚ್ಚಿ ವಿಮಾ ವೆಚ್ಚ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.
ಅಸಮಾನತೆ ಹೆಚ್ಚಳ: ಭಾರತದ ಅಂಕಿ-ಅಂಶಗಳು ಆರ್ಥಿಕ ಪ್ರಗತಿಯನ್ನು ಹೇಳುತ್ತವೆ.ಆದರೆ,ಇದರ ನಡುವೆಯೇ ದೇಶದಲ್ಲಿ ಅಸಮಾನತೆ ಹೆಚ್ಚುತ್ತಿದೆ. 'ವಿಶ್ವ ಅಸಮಾನತೆ ವರದಿ 2026'ರ ಪ್ರಕಾರ, ಕೇವಲ ಶೇಕಡ ಒಂದರಷ್ಟು ಶ್ರೀಮಂತರು ದೇಶದ ಶೇಕಡ 40 ರಷ್ಟು ಸಂಪತ್ತನ್ನು ಕ್ರೋಡೀಕರಿಸಿ ಕೊಂಡಿದ್ದಾರೆ.ಕೆಳಸ್ಥರದ ಶೇಕಡ 50ರಷ್ಟು ಜನರಲ್ಲಿ ಕೇವಲ ಶೇಕಡ ಮೂರರಷ್ಟು ಸಂಪತ್ತು ಹಂಚಿಕೆಯಾಗಿದೆ. ಇದು ಆದಾಯ, ಸಂಪತ್ತು ಮತ್ತು ಲಿಂಗ ಅಸಮಾನತೆಯನ್ನು ತೋರಿಸುತ್ತದೆ.2000-2023ರ ವರೆಗಿನ ಅವಧಿಯಲ್ಲಿ ದೊಡ್ಡ ಶ್ರೀಮಂತರ ಆಸ್ತಿಯಲ್ಲಿ ಶೇಕಡ 62 ರಷ್ಟು ಹೆಚ್ಚಳವಾಗಿದೆ.
ಭಾರತದಲ್ಲಿ ಸ್ವಾತಂತ್ರ್ಯ ನಂತರ ಬಿಲಿಯನೇರ್ ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. 2025ರ ವೇಳೆಗೆ ಇವರ ಸಂಖ್ಯೆ 358 ಕ್ಕೆ ಏರಿಕೆಯಾಗಿತ್ತು. ಅದೇ ರೀತಿ ಲಕ್ಷಾಂತರ ಜನ ಪ್ರತಿ ವರ್ಷ ಬಡತನದ ಕೂಪಕ್ಕೆ ತಳ್ಳಲ್ಪಡುತ್ತಿದ್ದಾರೆ. ಆ ಅಂಕಿ-ಅಂಶಗಳನ್ನು ಮುಚ್ಚಿಡಲು ಬಡತನದ ಮಾನದಂಡಗಳನ್ನೇ ಬದಲಿಸಲಾಗಿದೆ. ಈಗ ಸಂಪತ್ತಿನ ಅಸಮಾನತೆಯು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಸಮಯದಲ್ಲಿ ಇದ್ದದ್ದಕ್ಕಿಂತಲೂ ಹೀನಾಯ ಸ್ಥಿತಿಗೆ ತಳ್ಳಲ್ಪಟ್ಟಿದೆ ಎಂದು ಹೇಳುತ್ತವೆ ವರದಿಗಳು.

ತೆರಿಗೆ ನೀತಿಗಳು, ಗ್ರಾಮೀಣ -ನಗರ ಪ್ರದೇಶಗಳ ನಡುವಿನ ಅಂತರ, ಅಸಂಘಟಿತ ಕಾರ್ಮಿಕರ ಹೆಚ್ಚಳ, ನಿರುದ್ಯೋಗ, ಜಾಗತೀಕರಣ ಮತ್ತು ಜಾತಿ ಆಧಾರಿತ ತಾರತಮ್ಯಗಳು ಇದಕ್ಕೆ ಪ್ರಮುಖ ಕಾರಣಗಳು.ಈಗ ಹೇಳಿ ಇದು ನಿಜವಾಗಿಯೂ ಆರ್ಥಿಕ ಪ್ರಗತಿಯೇ?
ಬಂಡವಾಳ ಹೂಡಿಕೆ ಹೆಚ್ಚಳ: ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ ಉತ್ಪಾದನೆ, ನಿರ್ಮಾಣ ಮತ್ತು ಸಾರ್ವಜನಿಕ ಬಂಡವಾಳ ಹೂಡಿಕೆಗಳು ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿವೆ. ಸರ್ಕಾರಗಳು ಮೂಲಸೌಕರ್ಯ ಅಭಿವೃದ್ಧಿಗಾಗಿ ಮಾಡಿದ ವೆಚ್ಚಗಳು,
ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ನವೀಕರಿಸಬಹುದಾದ ಇಂಧನ ಕ್ಷೇತ್ರಗಳಿಗೆ ನೀಡಿದ ಬೆಂಬಲ (ಉತ್ಪಾದನೆಗೆ ಸಂಬಂಧಿಸಿದ ಪ್ರೋತ್ಸಾಹಕ ಯೋಜನೆಗಳು) ಮತ್ತು ಖಾಸಗಿ ವಲಯದ ಬಂಡವಾಳ ಹೂಡಿಕೆಯಲ್ಲಿನ ಹೆಚ್ಚಳವೂ ಆರ್ಥಿಕ ಬೆಳವಣಿಗೆ ಬೆಂಬಲವಾಗಿ ನಿಂತವು.
ಸೇವಾ ಕ್ಷೇತ್ರದ ರಫ್ತು ಹೆಚ್ಚಳ: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ರಫ್ತು ದೇಶಕ್ಕೆ ವಿದೇಶಿ ಹಣದ ಹರಿವನ್ನು ಹೆಚ್ಚಿಸಲು ಆ ಮೂಲಕ ಚಾಲ್ತಿ ಖಾತೆಯನ್ನು ಸ್ಥಿರಗೊಳಿಸಲು ನೆರವಾಗಿದೆ.
ರೂಪಾಯಿ ಕುಸಿತ- ಆತಂಕಕಾರಿ ಬೆಳವಣಿಗೆ
ರೂಪಾಯಿ ಅಪಮೌಲ್ಯ: ದೇಶದ ಆರ್ಥಿಕತೆಗೆ ತೀವ್ರ ಆತಂಕವನ್ನು ಉಂಟು ಮಾಡುತ್ತಿರುವುದು ಡಾಲರ್ ಎದುರು ರೂಪಾಯಿ ಅಪಮೌಲ್ಯದ ಬೆಳವಣಿಗೆ. 1991ರಲ್ಲಿ ರೂಪಾಯಿ ಮೌಲ್ಯ ಡಾಲರ್ ಎದುರು 17 ರೂಪಾಯಿ ಇದ್ದದ್ದು,34 ವರ್ಷಗಳ ಅವಧಿಯಲ್ಲಿ ವಾರ್ಷಿಕ ಸುಮಾರು ಶೇಕಡ 4.5 ರಂತೆ ಕುಸಿಯುತ್ತಾ 2025 ಡಿಸೆಂಬರ್ ವೇಳೆಗೆ 91 ರೂಪಾಯಿಗಳನ್ನು ದಾಟಿತು. ಈ ಅಪಮೌಲ್ಯ ರೂಪಾಯಿಗೆ ಏಷ್ಯಾದಲ್ಲೇ ಅತ್ಯಂತ ಕಳಪೆ ಕರೆನ್ಸಿ ಎನ್ನುವ ಅಪಖ್ಯಾತಿ ತಂದಿತು.
ವಿದೇಶಿ ಹೂಡಿಕೆದಾರರು 2025 ಜುಲೈನಿಂದ ನವೆಂಬರ್ 25 ರವರೆಗೆ 1 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯ ಷೇರುಗಳನ್ನು ಭಾರತದ ಷೇರುಪೇಟೆಯಲ್ಲಿ ಮಾರಾಟ ಮಾಡಿದರು.ಒಟ್ಟಾರೆ,ವಾರ್ಷಿಕ 1.6 ಟ್ರಿಲಿಯನ್ ರೂಪಾಯಿಗಳ ಹೊರ ಹರಿವು. ಭಾರತದ ಬಂಡವಾಳ ಪೇಟೆಯಲ್ಲಿ ಈಗ ಅವರ ಪಾಲು ಶೇಕಡ 17ಕ್ಕೆ ಕುಸಿದಿದೆ.ಇದು ಕಳೆದ 15 ವರ್ಷಗಳಲ್ಲೇ ಕನಿಷ್ಠ. ಈ ಬೆಳವಣಿಗೆ ಸೇರಿದಂತೆ ಭಾರತ- ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಅನಿಶ್ಚಿತತೆ ಹಾಗೂ ಜಾಗತಿಕ ನಕಾರಾತ್ಮಕ ಬೆಳವಣಿಗೆಗಳು ರೂಪಾಯಿ ಮೌಲ್ಯ ಕುಸಿಯಲು ಕಾರಣ ಎಂದು ತಜ್ಞರು ಗುರುತಿಸಿದ್ದಾರೆ.
ರೂಪಾಯಿ ಅಪಮೌಲ್ಯದ ಲಾಭ ರಫ್ತು ಆಧಾರಿತ ಉದ್ಯಮಗಳಿಗೆ ದೊರೆಯುತ್ತದಾದರೂ,ರಫ್ತಿಗಿಂತ ಆಮದನ್ನೇ ಹೆಚ್ಚು ಅವಲಂಬಿಸಿರುವ ಭಾರತ ದೇಶಕ್ಕೆ ದೊಡ್ಡ ಹೊರೆಯಾಗಲಿದೆ.
ಡಾ.ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಆದ ರೂಪಾಯಿ ಅಪಮೌಲ್ಯವನ್ನು "ಮೌಲ್ಯ ಇಳಿಯುತ್ತಿರುವುದು ಕೇಂದ್ರ ಸರ್ಕಾರದ್ದೋ, ಇಲ್ಲವೆ ರೂಪಾಯಿಯದ್ದೋ" ಎಂದು ಗೇಲಿ ಮಾಡಿ, "ನಾವು ಅಧಿಕಾರಕ್ಕೆ ಬಂದರೆ ರೂಪಾಯಿ ಮೌಲ್ಯವನ್ನು 40 ರೂಪಾಯಿಗಳಿಗೆ ತರುತ್ತೇವೆ" ಎಂದು ಹೇಳಿಕೊಂಡಿದ್ದ ನರೇಂದ್ರ ಮೋದಿ, ಈಗ ಪ್ರಧಾನಿಯಾಗಿ ರೂಪಾಯಿ ಅಪಮೌಲ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.ಅವರ ಪಕ್ಷದ ನಾಯಕರು ತಮಗೆ ಅಪತ್ಯವಾಗುವ ಎಲ್ಲ ಜಾಗತಿಕ ಮಾಪಕಗಳನ್ನೂ ತಳ್ಳಿಹಾಕುವ ತಮ್ಮ ತಂತ್ರದಂತೆ 'ರೂಪಾಯಿ ಅಪಮೌಲ್ಯವು ಅರ್ಥ ವ್ಯವಸ್ಥೆಗೆ ಒಂದು ಬಗೆಯಲ್ಲಿ ಒಳ್ಳೆಯದೇ' ಎಂದು ನಂಬಿಸಲು ಹೊರಟಿದ್ದಾರೆ.
bevarahani1