ಬಿಲ್ಲು ಬಾಣ ತಂದಿದೀಯೇನಪ್ಪಾ ಕರ್ಣಾ?-೬೦ರ ಹಿನ್ನೋಟ-ಡಾ.ಹೆಚ್.ವಿ.ರಂಗಸ್ವಾಮಿ
ಬಿಲ್ಲು ಬಾಣ ತಂದಿದೀಯೇನಪ್ಪಾ ಕರ್ಣಾ?-೬೦ರ ಹಿನ್ನೋಟ-ಡಾ.ಹೆಚ್.ವಿ.ರಂಗಸ್ವಾಮಿ
ಭಾಗ 3
ಡಾ.ಹೆಚ್.ವಿ.ರಂಗಸ್ವಾಮಿ
ಬಿಲ್ಲು ಬಾಣ ತಂದಿದೀಯೇನಪ್ಪಾ ಕರ್ಣಾ?
ನಾನು ಐದನೆ ಕ್ಲಾಸಿನಲ್ಲಿರುವಾಗ ನಾನು ಅಪ್ಪನ ಕೂಡ ಕಣಕಟ್ಟೆ ಸಂತೆಗೆ ಹೋಗಿದ್ದೆ. ಅಪ್ಪ ಪೌರಾಣಿಕ ನಾಟಕಗಳ ಅಭಿಮಾನಿ. ಸಂತೆ ಬೀದಿಯಲ್ಲಿ ಅಡ್ಡಾಡುತ್ತಿರುವಾಗ ಒಬ್ಬ ಪುಸ್ತಗಳನ್ನ ಮಾರಾಟಕ್ಕೆ ಹರಡಿಕೊಂಡು ಕೂತಿದ್ದ. ಅಪ್ಪನ ಕಣ್ಣಿಗೆ ಪೌರಾಣಿಕ ಪಾತ್ರವಿರುವ ಕಿರೀಟಧಾರಿ ವ್ಯಕ್ತಿಯೊಬ್ಬನ ಚಿತ್ರವಿದ್ದ ಪುಸ್ತಕ ಬಿತ್ತು.
ʼ ಅದು ಯಾವ ಪುಸ್ತಕ? ʼ ಅಂತ ಅಪ್ಪ ಕೇಳಿದ್ದಕ್ಕೆ ನಾನು ‘ದಾನ ಶೂರ ಕರ‍್ಣ’ ಅಂದೆ. ಅಪ್ಪ ಆ ಪುಸ್ತಕವನ್ನು ಕೊಂಡು ನನ್ನ ಕೈಗಿಟ್ಟರು. ಅಪ್ಪ ಮನೆಯಲ್ಲಿರುತ್ತಿದ್ದಾಗ ಒಂದು ಚಾಪೆ ಹಾಸಿಕೊಂಡು ದಿಂಬಿನ ಮೇಲೆ ತಲೆ ಇಟ್ಟು ಕಾಲು ಮಡಿಸಿ, ಕಾಲ ಮೇಲೆ ಕಾಲು ಹಾಕಿಕೊಂಡು ಮಲಗುವುದು ರೂಡಿ. ಆಗ ನಾವು ಯಾವುದಾದರೂ ಪಾಠವನ್ನು ಬಾಯಿಂದ ಓದುತ್ತಿದ್ದರೆ, ಅದೂ ಪೌರಾಣಿಕವಾಗಿದ್ದರೆ ಅಪ್ಪನ ಕಿವಿ ಚುರುಕಾಗುತ್ತಿದ್ದವು. ಆ ಪ್ರಸಂಗವನ್ನು ಪೂರ‍್ತಿ ಕೇಳಿಸಿಕಂಡು ವಿವರಣೆ ಬೇರೆ ಶುರುವಾಗುತ್ತಿತ್ತು. ತಾನು ನಾಟಕಗಳಲ್ಲಿ ನೋಡಿದ್ದು ಮತ್ತು ಕೇಳಿದ್ದಕ್ಕೆ ಸಮೀಕರಿಸಿ ಅದು ಅಂಗಲ್ಲ, ಇಂಗಲ್ಲ ಅಂತ ಅಪ್ಪನ ವಿವರಣೆ ಬೇರೆ. ಪುಸ್ತಕ ಬರೆದವನಿಗಿಂತ ಅಪ್ಪನಿಗೆ ಗೊತ್ತೆ ಅಂತ ನಮ್ಮ ಕುಹಕ.
ಈ ರೀತಿ ಸಂತೆಯಿಂದ ಕೊಂಡು ತಂದ ದಾನಶೂರ ಕರ‍್ಣ ನಾಟಕ ಪುಸ್ತಕವನ್ನು ನಾನು ಅಪ್ಪ ಮನೆಯಲ್ಲಿರುವಾಗ ಓದಿ ಹೇಳಬೇಕಿತ್ತು. ನಾನು ಅದನ್ನು ಪೂರ‍್ತಿ ಓದಿ ಮುಗಿಸಿದ ನಂತರವೇ ಅಪ್ಪನಿಗೆ ಸಮಾಧಾನವಾಗಿದ್ದು. ನಾನು ಹೊಸದಾಗಿ ಸಂಪಾದಿಸಿದ್ದ ಈ ಪುಸ್ತಕವನ್ನ ಬ್ಯಾಗಿನಲ್ಲಿ ಇಟ್ಟುಕೊಂಡು ಸ್ಕೂಲಿಗೂ ತಗಂಡು ಹೋಗುತ್ತಿದ್ದೆ. ಪಾಠದ ಪುಸ್ತಕವಲ್ಲದೆ ಪೌರಾಣಿಕ ಚಿತ್ರವಿರುವ ಪುಸ್ತಕ ಎಲ್ಲರ ಗಮನ ಸೆಳೆಯುತ್ತಿತ್ತು. ಹೀಗಿರುವಾಗ ಅದು ಒಂದು ಬಾರಿ ನಮ್ಮ ಕ್ಲಾಸ್ಟೀರ‍್ಸ ಮಾದಪ್ಪ ಮಾಸ್ತರ ಕಣ್ಣಿಗೂ ಬಿತ್ತು. ಸ್ವಲ್ಪ ದಿನದಲ್ಲೇ ಎಲ್ಲಾ ಅಕ್ಕ-ಪಕ್ಕದ ಹಳ್ಳಿಗಳ ಶಾಲಾ ಶಿಕ್ಷಕರ ಸಭೆಯೊಂದು ಆಣೇಗೆರೆಯಲ್ಲಿ ಆಯೋಜನೆಗೊಳ್ಳುವುದಿತ್ತು. ಆ ದಿನ ಶಾಲಾ ಮಕ್ಕಳಿಂದ ಒಂದು ನಾಟಕವನ್ನು ಏರ್ಪಡಿಸುದು ಆಣೇಗೆರೆ ಶಾಲೆ ಮುಖ್ಯೋಪಾಧ್ಯಾಯರ ಜವಾಬ್ದಾರಿಯಾಗಿತ್ತು. ಸಮಾದಪ್ಪ ಮಾಸ್ತರು ಜಿ. ಆರ್ ಎಂ ಗೆ ನನ್ನ ಬಳಿ ಇರುವ ಪುಸ್ತಕದ ಬಗ್ಗೆ ತಿಳಿಸಿ ಅದೇ ನಾಟಕವನ್ನು ಪ್ರಾಕ್ಟೀಸು ಮಾಡಿಸುವುದು ಅಂತ ತರ‍್ಮಾನಿಸಲಾಯ್ತು. ಸರಿ ಪಾತ್ರಗಳ ಹಂಚಿಕೆ ಶುರುವಾಯ್ತು. ಸರಿ ಮುಖ್ಯ ಪಾತ್ರದಾರಿ ದಾನಶೂರ ಕರ‍್ಣ ನಾನೇ! ಎ.ಜಿ. ಬಸವರಾಜು ದುರ‍್ಯೋಧನ. ಲೋಕೇಶ್ವರಪ್ಪ ಅರ‍್ಜುನ, ಶಿವಣ್ಣ ಭೀಮ, ಸುಲೋಚನ ಸೋಮಪ್ರಭೆ…ಇತ್ಯಾದಿ.
ನಮ್ಮದು ಶೂನ್ಯ ಬಜೆಟ್ನಾಟಕವಾಗಿತ್ತು. ಪೌರಾಣಿಕ ನಾಟಕವೆಂದ ಮೇಲೆ ಬಿಲ್ಲು, ಬಾಣ ಮತ್ತು ಗದೆಗಳು ಬೇಕೇ ಬೇಕು. ಇದಾವುದರ ಜವಾಬ್ಧಾರಿಯನ್ನ ಶಾಲೆಯ ಆಡಳಿತ ಮಂಡಳಿ ವಹಿಸುವುದಿಲ್ಲವೆಂದು ನಾಟಕದ ತಾಲೀಮು ಶುರುವಾದ ಮೇಲೆಯೇ ನಮಗೆ ಅರ‍್ಥವಾದ್ದು. ಹಾಗಾಗಿ ಎಲ್ಲಾ ಅಗತ್ಯ ಪರಿಕರಗಳ ಜವಾಬ್ದಾರಿಯನ್ನು ನಾವೇ ಹೊರಬೇಕಾಯ್ತು. ನಾನು ಮತ್ತೆ ಲೋಕೇಶಪ್ಪ ಇಂತಕ ಕರಕುಶಲತೆಯಲ್ಲಿ ಪಳಗಿದ್ದೆವು. ತೋಟದಲ್ಲಿ, ಹೊಲಗಳಲ್ಲಿ ಆಟವಾಡುತ್ತಲೆ ಮಣ್ಣಿನ ಗೊಂಬೆ, ಕಾಲು ತೂರಿಸಿ ಮರಳ ಮನೆ ಮಾಡುವುದಲ್ಲದೆ; ರಟ್ಟು ಕತ್ತರಿಸಿ ದೇವರುಗಳನ್ನು ಮಾಡುವುದು ಆಟವಾಡುತ್ತಲೆ ರೂಢಿಯಾಗಿತ್ತು. ಈ ಅಭ್ಯಾಸ ಈಗ ಉಪಯೋಗಕ್ಕೆ ಬಂತು. ಪಾತ್ರದಾರಿಗಳಿಗೆ ಬೇಕಾದ ಎಲ್ಲಾ ಕಿರೀಟ, ಗದೆ ಮತು ಬಾಣಗಳನ್ನ ಒದಗಿಸುವ ಜವಾಬ್ದಾರಿ ನಮ್ಮ ಹೆಗಲಿಗೇ ಬಿತ್ತು. ನಾವೇನು ಈ ಜವಾಬ್ಧಾರಿ ಹೊರಲು ಸಿದ್ದರಿರಲಿಲ್ಲ. ನಾನು ಮತ್ತೆ ಲೋಕೇಶಪ್ಪ ನಮಗಾಗಿ ಮಾಡಿದ್ದ ಕಿರೀಟ ಮತ್ತು ಬಿಲ್ಲನ್ನು ಒಂದು ದಿನ ಪ್ರಾಕ್ಟೀಸು ಮಾಡಿಸುತ್ತಿದ್ದ ಸಮಾದಪ್ಪ ಮಾಸ್ತರ ಮುಂದೆ ಹಾಜರು ಪಡಿಸಿದ್ದೇ ತಡ, ನಮ್ಮ ಕಸುಬಿಗೆ ಎಲ್ಲಿಲ್ಲದ ಮಾನ್ಯತೆ ಸೃಷ್ಟಿಯಾಯ್ತು. ʼನಂಗೂ ಒಂದು ಮಾಡಿಕೊಡು, ನಂಗೆ ಬಿಲ್ಲು-ಬಾಣ ಅಂತʼ ಅಂತ ಒಬ್ಬ ಪಾತ್ರಧಾರಿ ಹೇಳಿದರೆ, ʼ ನಂಗೆ ಕಿರೀಟ ಮತ್ತೆ ಗದೆʼ ಅಂತ ಒಬ್ಬರಾದ ಮೇಲೆ ಮತ್ತೊಬ್ಬರು ಪಾತ್ರಧಾರಿಗಳು ಮುಗಿಬಿದ್ದರು. ರಟ್ಟು, ಬಣ್ಣದ ಶೀಟುಗಳು ಮತ್ತು ಗಮ್ಮು ನಮಗೆ ಒದಗಿಸುವಂತೆ ತಾಕೀತು ಮಾಡಿ, ಸಿದ್ಧಪಡಿಸುವ ಜವಾಬ್ದಾರಿಯನ್ನು ನಾವು ಒಪ್ಪಿಕೊಂಡದ್ದಾಯ್ತು.
ಆಣೇಗೆರೆ ಇದ್ದುದು ಪಂಚನಹಳ್ಳಿ ಶಿಂಗಟಿಗೆರೆ ಮರ‍್ಗದಲ್ಲಿ. ರಸ್ತೆಯ ಎಡ ಭಾಗದಲ್ಲಿ ಪರ‍್ತ ಆವರಿಸಿಕೊಂಡಿರುವ ಊರು. ಬಲ ಭಾಗದಲ್ಲಿ ಆಣೇಗೆರೆ ಇನ್ನೇನು ಮುಗಿಯಿತು ಅನ್ನುವಾಗ ಸಿಕ್ಕುವ ಏಕೈಕ ಮನೆ -ಆಗ ಇದ್ದುದು- ಈ ಲೋಕೇಶಪ್ಪ ಅನ್ನುವ ಗೆಳೆಯನ ಮನೆ. ಅದು ರಸ್ತೆಗೆ ಮುಖ ಮಾಡಿದ್ದ ಮನೆ. ಈಗ ನಿಧಾನಕ್ಕೆ ರಸ್ತೆಯ ಎಡಭಾಗಕ್ಕೂ ಊರು ಬೆಳೆಯುತ್ತಿದೆ. ಈ ಮನೆಯ ಪಡಸಾಲೆಯಲ್ಲಿ ನಾವು ನಮ್ಮ ಕಿರೀಟ, ಗದೆ ಕಾಮಗಾರಿ ಶುರುಮಾಡಿಕೊಂಡದ್ದೆ, ಪಡಸಾಲೆಗೆ ಜೀವ ಕಳೆ ಬರಲಾರಂಭಿಸಿತು. ಎಲ್ಲರ ಕುತೂಹಲಕ್ಕೆ ಕಾರಣವಾಗಿ ತೋಟ-ತುಡಿಕೆಗೆ ಹೋಗಿ ಬರುವ ಜನರೆಲ್ಲಾ ಒಂದು ಬಾರಿ ಹೊಕ್ಕು ಹೋಗುವಂತಾಯ್ತು. ತಮ್ಮ ಕಿರೀಟ, ಬಿಲ್ಲು-ಬಾಣಗಳ ಜವಾಬ್ದಾರಿಗಳನ್ನ ನಮಗೆ ವಹಿಸಿದ್ದವರೆಲ್ಲಾ ಅಲ್ಲಿಗೆ ಜಮಾಯಿಸಿ, ಅವುಗಳು ರೂಪು ಪಡೆದುಕೊಳ್ಳುವುದನ್ನುನೋಡಿ ಆನಂದಿಸಿ ಹೋಗುತ್ತಿದ್ದರು. ಅವನ ಕಿರೀಟ ನಂದಕ್ಕಿಂತ ಚೆನ್ನಾಗಿದೆ, ನಂಗೂ ಹಂಗೇ ಇರಲಿ, ನನ್ನ ಕಿರೀಟಕ್ಕೆ ಮಿರಿ-ಮಿರಿ ಮಿಂಚೋ ಬಣ್ಣದ್ದು ಪೇಪರ ಹಾಕು ಅಂತೆಲ್ಲಾ, ತರಲೆ-ತಗಾದೆ ಶರುವಾಯ್ತು. ಈ ಎ.ಜಿ.ಬಸವರಾಜು ಅನ್ನುವ ಉಢಾಳ ಗೆಳೆಯ ಒಂದು ಕಿರೀಟವನ್ನ ತಲೆಗೆ ಸಿಕ್ಕಿಸಿಕೊಂಡು ರಸ್ತೆಗೆ ಇಳದೇ ಬಿಟ್ಟ. ರಸ್ತೆಯಲ್ಲಿ ನಿಂತು ಗದೆ ಬೀಸಿಕೊಂಡು ʼಡೈಲಾಗ್ʼ ಶುರು ಹಚ್ಚಿ ಬಿಟ್ಟ. ಛರ‍್ಮನ್ಮಗ ಬೇರೆ, ಅದೂ ದರ‍್ಯೋಧನನ ಪಾತ್ರಧಾರಿ! ನಮಗೆ ನಿಯಂತ್ರಿಸುವುದೇ ಕಷ್ಟವಾಗಿ ಹೋಯ್ತು. ಕಿರೀಟ ಗದೆಯೊಂದಿಗೇನೆ ಮನೆಗೆ ಹೋಗಿ ತನ್ನ ಅವ್ವನಿಗೆ ಒಂದು ಬಾರಿ ತೋರಿಸಿಕಂಡೆ ಬಂದುಬಿಡ್ತೀನಿ ಅಂತ ಬೇರೆ! ʼಇದು ಹುಲಿ ವೇಷವಲ್ಲ, ಬೀದೀಲಿ ಕುಣಿಯೋಕೆʼ ಅಂತ ಹೇಳಿ ಸುಮ್ಮನೆ ಮಾಡಿದ್ದಾಯ್ತು.
ಅಂತೂ ನಾಟಕ ಆಡಲೇ ಬೇಕಾದ ದಿನ ಬಂದೇ ಬಿಟ್ಟಿತು. ಬೆಳಿಗ್ಗೆಯೆಲ್ಲಾ ಸಭೆ ಮುಗಿಸಿಕೊಂಡ ಅಕ್ಕ-ಪಕ್ಕದ ಗ್ರಾಮಗಳ ಪ್ರೈಮರಿ ಮತ್ತು ಮಾಧ್ಯಮಿಕ ಶಾಲೆಗಳ ಎಲ್ಲಾ ಮಾಸ್ತರರು ಊಟದ ನಂತರ ಪ್ರರ‍್ಶನದ ಸ್ಥಳದಲ್ಲಿ ಜಮಾಯಿಸಿದ್ದರು. ನಮಗೋ ಸಡಗರವೋ ಸಡಗರ! ಪುರಾತೇಶ್ವರ ದೇವಸ್ಥಾನದ ಹಿಂಭಾಗಕ್ಕೆ ಇದ್ದ ಆಯರ‍್ವೇದ ಆಸ್ಪತ್ರೆ ಜರುಗುತ್ತಿದ್ದ ಕಟ್ಟಡದ ಮುಂಭಾಗ ರಂಗಸ್ಥಳವಾಯ್ತು. ಸಮಾದಪ್ಪ ಮಾಸ್ತರರು ದಾನಶೂರ ರ‍್ಣ ಪುಸ್ತಕ ಹಿಡಿದುಕೊಂಡು ʼಡೈಲಾಗ್ʼ ಮರೆತವರಿಗೆ ಹಿಂದಿನಿಂದ ಹೇಳಿಕೊಡಲು ಸಿದ್ಧರಾಗಿದ್ದರು. ನಾಟಕವೆಂದರೆ ಒಂದು ರೀತಿಯಲ್ಲಿ ಬಯಲು ನಾಟಕವೆ. ಯಾವ ರಂಗಸಜ್ಜಿಕೆಯಿಲ್ಲದ, ಬಣ್ಣ ಬೆಡಗು ಇಲ್ಲದ ರೀತಿಯಲ್ಲಿ ನಾಟಕ ಶುರುವಾಯ್ತು. ಮಾಸ್ತರುಗಳು ಮಾತ್ರವೆ ಸ್ಕೂಲ್ಬೆಂಚುಗಳ ಮೇಲೆ ಆಸೀನರಾಗಿದ್ದರು. ಅವರ ಮುಂದೆ ನೆಲದ ಮೇಲೆ ಐದರಿಂದ ಏಳನೇ ತರಗತಿವರೆಗಿನ ವಿದ್ಯರ‍್ಥಿ ವೃಂದ, ಮಾಸ್ತರ ಹಿಂಭಾಗದಲ್ಲಿ ಕುತೂಹಲದಿಂದ ನಿಂತು ನೋಡುತ್ತಿದ್ದ ಅಪ್ಪ-ಅಮ್ಮಂದಿರು, ಊರಿನ ಕೆಲವರು ಮತ್ತೆ ದಾರಿಹೋಕರು. ಬಹುಶ: ಮಕ್ಕಳು ಮಾಡುವ ಯಾವುದೇ ಚಟುವಟಿಕೆಗಳಲ್ಲಿ ಕುತೂಹಲವೇ ಪ್ರಾಧಾನ್ಯವಾಗಿರುತ್ತದೆ. ಅದಕ್ಕಾಗಿಯೇ ತೋಟ ಹೊಲಗಳಿಗೆ ಹೋಗಬೇಕಿದ್ದ ಜನರೂ ಸ್ವಲ್ಪ ಹೊತ್ತಾದರೂ ನಿಂತು ನೋಡಿಯೇ ಹೋಗುತ್ತಿದ್ದರು.
ನಾನು ಮೊದಲೇ ಇದು ಶೂನ್ಯ ಬಂಡವಾಳದ ನಾಟಕ ಪ್ರರ‍್ಶನ ಅಂತ ಹೇಳಿದ್ದಿದೆ. ಅದೂ ಪೌರಾಣಿಕ ನಾಟಕವೆಂದ ಮೇಲೆ ಬಿಲ್ಲು, ಗದೆಗಳಷ್ಟೇ ಅಲ್ಲ, ನಾಟಕದ ಪಾತ್ರಧಾರಿಗಳಿಗೆ ಬಣ್ಣದ ಅಗತ್ಯವೂ ಇರುತ್ತದೆ. ಇದಾವುದೂ ನಮಗೆ ಶಾಲೆ ಮೂಲಕ ಒದಗಿಸಿರಲಿಲ್ಲವಾಗಿ ನಮ್ಮ ಮನೆಗಳಿಂದಲೇ ಪೌಡರ್, ಕುಂಕುಮ ಇತ್ಯಾದಿಗಳನ್ನು ಪೇಪರ‍್ನಲ್ಲಿ ಸುತ್ತಿಕೊಂಡು ತಂದಿದ್ದ ನಾವು ಅದನ್ನೇ ಬಳಿದುಕೊಂಡು ಸಿದ್ಧರಾದೆವು. ಬಿಲ್ಲು, ಬಾಣಗಳು ಕಚ್ಚಾ ಆಗಿದ್ದಾಗ್ಯೂ ಆಕರ‍್ಷಕವಾಗಿದ್ದವು, ಆದರೆ ಕೆಲವರು ಬಳಿದುಕೊಂಡಿದ್ದ ಬಣ್ಣಗಳು ಮಕರಂದನನ್ನು ನೆನಪಿಸುವಂತಿದ್ದು, ನೋಡುಗರಲ್ಲಿ ನಗು ಉಕ್ಕಿಸುವಂತಿತ್ತು. ತದೇಕ ಚಿತ್ತದಿಂದ ನೆರೆದಿದ್ದವರೆಲ್ಲಾ ನಾಟಕ ನೋಡುವುದರಲ್ಲಿ ತಂಗಿದ್ದರು. ಒಂದು ಹಂತದಲ್ಲಿ ಕರ‍್ಣನ ಪರ‍್ಟು ಮಾಡಿದ್ದ ನಾನು ಅರ‍್ಜುನನಿಗೆ ಗುರಿ ಇಟ್ಟ ಬಾಣ, ಆ ಪಾತ್ರಧಾರಿಯನ್ನು ತಾಕದೆ ಮುಂದುವರೆದು ಪಂಚನಹಳ್ಳಿ ಶಾಲೆಯ ಹಿಂದಿ ಪಂಡಿತರಾದ ಧನಶೇಖರಪ್ಪ ಮಾಸ್ತರಿಗೆ ಬಡಿದು ಮಾಸ್ತರುಗಳೆಲ್ಲಾ ನಗೆ ಮತ್ತು ತಮಾಶೆಯಲ್ಲಿ ಮುಳುಗುವಂತಾಯ್ತು. ನಾಟಕದ ಪ್ರದರ್ನನವಂತೂ ಯಶಸ್ವಿಯಾಗಿ ಜರುಗಿತು. ಕೊನೆಯಲ್ಲಿ ಅರ‍್ಜುನನಿಂದ ಕರ‍್ಣನ ವಧೆಯಾದಾಗ, “ಪ್ರಾಣ ಕಾಂತ ನನ್ನನ್ನು ಬಿಟ್ಟು ಹೋದೆಯಾ?” ಅಂತ ಸೋಮಪ್ರಭೆ ಗೋಳಿಡುವಾಗ ಕೆಲವರ ಕಣ್ಣುಗಳು ತೇವಗೊಂಡಿದ್ದು ನಾಟಕ ಪರಿಣಾಮಕಾರಿಯಾಗಿತ್ತೆಂದು ತಿಳಿಯಲು ಸಾಕಾಗಿತ್ತು.
ಈ ನಾಟಕ ಪ್ರರ‍್ಶನ ಮುಗಿದಾದ ಮೇಲೂ ಪಾತ್ರಧಾರಿಗಳಾದ ನಮ್ಮನ್ನು ರ‍್ಣ, ರ‍್ಜುನ, ಭೀಮ ಅಂತಲೇ ಸಹಪಾಠಿಗಳು ಕರೆಯುತ್ತಿದ್ದರು. ಕೆಲವೊಬ್ಬರು ಮಾಸ್ತರುಗಳೂ ಅದೇ ರೀತಿ ಸ್ವಲ್ಪ ದಿನ ಕರೆಯುತ್ತಿದ್ದುದು ನೆನಪಿದೆ. ಇದು ಇದೇ ರೀತಿ ಮುಂದುವರೆದು ನಾನು ಆರನೇ ಕ್ಲಾಸಿಗೆ ಪಂಚನಹಳ್ಳಿಗೆ ಸೇರಲು ಅಪ್ಪನ ಜೊತೆ ಟಿ.ಸಿ.ಯೊಂದಿಗೆ ಮುಖ್ಯೋಪಾಧ್ಯಾಯರ ಕೊಠಡಿ ಹೊಕ್ಕ ಕೂಡಲೆ; ʼ ಅಗೋ ಸರ್, ನಮ್ಮ ಸ್ಕೂಲಿಗೆ ಬಂದ ರ‍್ಣ!ʼ ಅಂತ, ಅಲ್ಲಿ ನೆರೆದಿದ್ದ ಮಾಸ್ತರರಿಂದ ಒಕ್ಕೊರಲಿನ ಉದ್ಘಾರ ಕೇಳಿಬರಲಾಗಿ, ಹೊಸ ವಾತಾವರಣದ ಕಾರಣಕ್ಕೆ ಸ್ವಲ್ಪ ಗಾಬರಿಯಲ್ಲಿದ್ದ ನನಗೆ ನಿರಾಳವಾಯ್ತು. ಅದರಲ್ಲೂ ಧನಶೇಖರಪ್ಪ ಮಾಸ್ತರರಂತೂ “ಇಲ್ಲಿಗೂ ಏನಾದ್ರೂ ಬಿಲ್ಲು ಬಾಣ ತಂದಿದೀಯೇನಪ್ಪಾ ಕರ‍್ಣಾ?” ಅಂದೇ ಬಿಡಬೇಕೆ? ಇರಲಿ ಪಂಚನಹಳ್ಳಿ ಮಾಧ್ಯಮಿಕ ಶಾಲೆ ವಿಷಯಕ್ಕೆ ಆಮೇಲೆ ಬರುತ್ತೇನೆ. ಈಗ ಮತ್ತೆ ಆಣೇಗೆರೆಗೆ ವಾಪಸ್ಸಾಗೋಣ.
ನಮ್ಮ ಮುಖ್ಯೋಪಾಧ್ಯಾಯರಾಗಿದ್ದ ಜಿ ಆರ್ಎಂ ಮಾಸ್ತರು ಆಣೇಗೆರೆ ಶಾಲೆಗೆ ಸ್ಕೌಟ್ಸ್ಗೆ ಸಂಬಂಧಿಸಿದ ಮಾಸ್ತರೂ ಆಗಿದ್ದರು. ಈ ವಿಷಯದಲ್ಲಿ ಅವರೇನೂ ಅಂತಹ ಆಸಕ್ತಿಯಿಂದ ನಮ್ಮನ್ನ ತೊಡಗಿಸಿರಲಿಲ್ಲ. ಸ್ಕೌಟ್ಸ್ಗೆ ಸೇರಿದ್ದವರ ಪಟ್ಟಿಯಲ್ಲಿ ನನ್ನ ಹೆಸರೂ ಇತ್ತು. ಹೀಗಿರುವಾಗ ಚಿಕ್ಕಮಗಳೂರಿನಲ್ಲಿ ಈ ಕುರಿತಾದ ʼಸ್ಕೌಟ್ಸ್ಕ್ಯಾಂಪುʼ ಜರುಗುವುದಿತ್ತು. ನಾವು ಐದು ಜನರನ್ನ ಜಿ ಆರ್ಎಂ ಮಾಸ್ತರು ಕ್ಯಾಂಪಿಗೆ ಅಂತ ಕರೆದುಕೊಂಡು ಚಿಕ್ಕಮಗಳೂರಿಗೆ ಹೊರಟರು. ಆ ಐದು ಜನರಲ್ಲಿ ಡಿ.ಹೊಸಹಳ್ಳಿಯಿಂದ ನಾನು ಮತ್ತು ರಾಜಪ್ಪ, ಆಣೆಗೆರೆಯಿಂದ ಎ.ಜಿ.ಬಸವರಾಜು, ತೆರೆಸಾಪುರ ಆಶ್ರಮದಿಂದ ಹೆನ್ರಿ ಅನ್ನುವವನೊಬ್ಬ. ಬಸ್ಸಿನಲ್ಲಿ ಹೋಗುವ ಮರ‍್ಗ ಮಧ್ಯದಲ್ಲಿ ನಮ್ಮ ತಾಲ್ಲೂಕು ಕೇಂದ್ರವಾದ ಕಡೂರು ಹೇಗಿರುತ್ತದೆಂದು ನೋಡುವ ಕುತೂಹಲ. ಬಸ್ಸಿನ ಕಿಟಕಿಯಿಂದ ಇಣುಕಿ ನೋಡಿದ್ದೇ ನೋಡಿದ್ದು. ಸಾಲು ಸಾಲಾಗಿ ಅಂಗಡಿಗಳು, ಸಾಲಾಗಿ ರ‍್ಕಾರಿ ಕಚೇರಿಗಳು ರಸ್ತೆಗುಂಟಾ ಒತ್ತೊತ್ತಾಗಿ ಕಾಣಲಾಗಿ ತಾಲ್ಲೂಕು, ಜಿಲ್ಲೆ ಅಂದರೆ ಸಾಲು-ಸಾಲು ಅಂಗಡಿಗಳು ಮತ್ತು ರ‍್ಕಾರಿ ಕಚೇರಿಗಳು ಅಂತ ಮನವರಿಕೆಯಾಯ್ತು.
ಚಿಕ್ಕಮಗಳೂರು ನಮ್ಮ ಜಿಲ್ಲಾ ಕೇಂದ್ರ ಅಂತ ಗೊತ್ತಿತ್ತು. ಅದೂ ಮಲ್ನಾಡು ಇಲ್ಲಿಂದಲೇ ಶುರು ಅಂತ ನಮ್ಮೂರಿನ ಸುತ್ತ ಮುತ್ತಲಿನ ಕಾಫಿ ತೋಟಕ್ಕೆ ಕೆಲಸ ಹುಡುಕಿ ಹೋಗುತಿದ್ದವರು ರ‍್ಣಿಸುತ್ತಿದ್ದುದು ನಮ್ಮ ಸ್ಮೃತಿ ಪಟಲದಲ್ಲಿ ದಾಖಲಾಗಿತ್ತಾಗಿ ಕಿಟಿಕಿ ಪಕ್ಕದ ಜಾಗ ಹಿಡಿದುಕೊಂಡು ದಾರಿಗುಂಟಾ ಕತ್ತು ಹೊರ ಹಾಕಿ ನೋಡಿದ್ದೇ ನೋಡಿದ್ದು! ಕಡೂರಿನಿಂದ ಚಿಕ್ಕಮಗಳೂರು ದಾರಿಗುಂಟ ಸಾಗುತ್ತಿದ್ದಂತೆ ಬಯಲು ಮರೆಯಾಗುತ್ತಾ, ಮರೆಯಾಗುತ್ತಾ ನೆಟ್ಟಗಿದ್ದ ರಸ್ತೆ ಅಂಕುಡೊಂಕಾಗಲು ಶುರುವಾಯ್ತು. ಸಮತಟ್ಟು ಪ್ರದೇಶ ಕ್ಷೀಣಿಸುತ್ತಾ ಹಸಿರು ಮರಗಿಡಗಳು ಮತ್ತು ಹಸಿರು ಗುಡ್ಡಗಳು ಎದುರಾಗತೊಡಗಿದವು. ಬಯಲು ಸೀಮೆಯಲ್ಲೇ ಬೆಳೆದ ನಾವು ಈ ಹೊಸ ಪರಿಸರ ಕಂಡು ಪುಳಕಗೊಳ್ಳತೊಡಗಿದೆವು. ನಾವು ಪಾಠಗಳಲ್ಲಿ ಓದಿದ್ದ ಕಾಡು ಈಗ ನಮ್ಮ ಕಣ್ಣ ಮುಂದೆಯೇ ಪ್ರತ್ಯಕ್ಷವಾಗತೊಡಗಿತು.
(ಮುಂದಿನ ವಾರಕ್ಕೆ)