ಕಾರ‍್ತೀಕ ಮಾಸದ ಒಂದು ಇಳಿಸಂಜೆ
ಕಾರ‍್ತೀಕ ಮಾಸದ ಒಂದು ಇಳಿಸಂಜೆ
ಕತಾ ಸರಿತ್ಸಾಗರ
ಕೇಶವ ಮಳಗಿ
ಕಾರ‍್ತೀಕ ಮಾಸದ ಒಂದು ಇಳಿಸಂಜೆ
ಈ ಸಂಬಂಧವಿನ್ನು ಉಳಿಯಲಾರದು ಎಂಬ ಜೀವ ಹಿಂಡುವ ಹೆದರಿಕೆ ಹುದುಲಿನಲ್ಲಿ ಸಿಕ್ಕ ಒಣಗಿದೆಲೆಯಂತೆ ತಳ ಸೇರಿ ಕರಗಿಹೋಗಿತ್ತು. ಕಾಲದ ನರ‍್ದಯತೆಯ ಎದುರು ಸಂಬಂಧವನ್ನು ಉಳಿಸಿಕೊಳ್ಳುವುದಾಗಲಿಲ್ಲ. ಆದರೆ, 'ಅನುಭವವು ಸವಿಯಲ್ಲ, ಅದರ ನೆನಪೇ ಸವಿಯು', ಎನ್ನುವಂತೆ ಯಾವುದೂ ಮರೆಯುವುದಾಗಿರಲಿಲ್ಲ. ಬದುಕಿನಲ್ಲಿ ಬಿಕ್ಕಟ್ಟು ಎದುರಾದಾಗಲೆಲ್ಲ ಉಸಿರುಗಟ್ಟಿಸುವ ರಣ ಬೇಸಿಗೆಯಲ್ಲಿ ಸುಳಿವ ದೈವಿಕ ಗಾಳಿ ಒಡಲು ಸೇರಿ ಬದುಕುವಂತೆ ಎಳೆಯ ಮುಖ ಮೈಮನಸ್ಸುಗಳನ್ನು ತುಂಬುತ್ತಿತ್ತು. ಸಂಕಟದ ಗಳಿಗೆಯನ್ನು ಮೀರಿ ಮತ್ತೆ ಜೀವನದ ಗಂಟನ್ನು ಹೆಗಲಿಗೇರಿಸಿ ಮುನ್ನಡೆವ ಕಸುವು ತುಂಬುತ್ತಿತ್ತು.
ಹಳೆಯ ನೆನಪಿನ ಸಿಬುರುಗಳನ್ನು ಎಳೆಎಳೆ ಬಿಡಿಸಿ, ಗೂಡು ಕಟ್ಟಿ, ಬಿಚ್ಚಿ, ಮತ್ತೆ ಹೆಣೆದು . . , ವಾಸ್ತವದ ಬದುಕಿನ ಪರಿವೆಯೇ ಇಲ್ಲದೆ ಒಳಗೆ ಕಟ್ಟಿಕೊಂಡ ಬೇರೊಂದು ಜಗತ್ತು. ಹೊರಗಿನ ನಿಜದ ಲೋಕದಲ್ಲಿನ ಅವಮಾನ, ಕತ್ತು ಸೀಳುವ ಸ್ರ‍್ದೆ , ಉಳಿದವರನ್ನು ಕೊಂದು ತಿಂದೇ ಬದುಕುವ ಹುಚ್ಚು ಉನ್ಮಾದ, ಕೊನೆಗೆ ನಿರ‍್ಥಕತೆ. ಆದರೆ ಎಲ್ಲವೂ ವಾಸ್ತವ. ಒಳಗೆ ಕಟ್ಟಿಕೊಂಡ ಲೋಕದಲ್ಲಿ ಯಾವುದೂ ನಿಜವಲ್ಲ, ಕನಸೋ-ಭ್ರಮೆಯೋ ಎಂದು ಅರಿವಾಗುವ ಮೊದಲೇ ಕರಗಿಹೋದ ಕ್ಷಣದ ಸುಖ. ಆದರೂ ನೆಮ್ಮದಿ, ಹಿತ, ಸರ‍್ಥಕಭಾವ.
*
ಕಳೆದುಕೊಳ್ಳುವ ಭಯ ಶುರುವಾದದ್ದು ಮ್ಯಾಟ್ರಿಕ್ ಪರೀಕ್ಷೆ ಇನ್ನೇನು ಹತ್ತಿರ ಬಂದೇ ಬಿಟ್ಟಿತು ಎನ್ನುವಾಗ. ಎರಡೂವರೆ ರ‍್ಷಗಳು ಆಕಾಶದ ಚಂಚಲ ಮೋಡಗಳಂತೆ ಸರಿದುಹೋಗಿದ್ದವು. ಊರಿಗೆ ಬಂದೊಡನೆ ಶಾಲೆಗೆ ಹೆಸರು ಹಚ್ಚುವುದು, ಪರಿಚಯ ಮಾಡಿಕೊಳ್ಳುವುದು, ಕರೆದವರ ಮನೆಗೆ ಅತಿಥಿಗಳಾಗಿ ಚಹಾ-ಫರಾಳಕ್ಕೆ ಹೋಗುವುದು ಎಲ್ಲ ವಾರದಲ್ಲೇ ಮುಗಿದುಹೋಗಿ ಊರವರೇ ಆದಂತಾಗಿತ್ತು. ಊರ ಹುಡುಗ-ಹುಡುಗಿಯರ ಚಿಕ್ಕ ಗುಂಪು ಬೆಳಗ್ಗೆಯೇ ನಗರೇಶ್ವರ ದೇವಳಕ್ಕೆ ಹೋಗುವುದು ರೂಢಿ. ನಸುಕಲ್ಲೇ ಸ್ನಾನ ಮಾಡಿ ದೇವಸ್ಥಾನದ ತರ‍್ಥ ಹೂವು ಪಡೆದು ಶಾಲೆಗೆ ಹೋಗುವುದು, ಓದಿನಲ್ಲಿ ಬೆರಕಿಯಿದ್ದವರು ಗಣಿತ-ವಿಜ್ಞಾನದ ವಿಷಯಗಳಿಗೆ ಶಿಕೋಣಿಗೆ ಹೋಗುವುದು ಕೂಡ ಪದ್ಧತಿಯೇ. ಈ ಸಣ್ಣ ಗುಂಪಿಗೆ ತಾನೂ ಸೇರಿಕೊಂಡಾಗ ಆಕೆಯ ಗೆಳೆತನ ಇನ್ನಷ್ಟು ನಿಕ್ಕಿಯಾಗಿತ್ತು. ತನ್ನವು ನಗರದ ಛಾಪಿರುವ ಟೆರಿಕಾಟ್ ಚಡ್ಡಿ-ಬುರ‍್ಟ್ಗಳಾದರೆ ಆಕೆಯದು ಅಗಲ ಹೂಗಳಿರುತ್ತಿದ್ದ ಪರಕಾರ, ಪೋಲಕಾ, ಗೊಂಡೆ, ರಿಬ್ಬನ್ ಹಾಕಿದ ಹೆರಳು. ಶಿಕೋಣಿ ಮುಗಿದು ಮನೆಗೆ ಬರುವಾಗ ಹರಟೆಗೆ ಅನುವಾಗಲೆಂದು ಹಾಸುಗಲ್ಲಿಗಳ ಭತ್ತೇರಪ್ಪನ ಹಾದಿಯನ್ನು ಹಿಡಿಯುತ್ತಿದ್ದೆವು.
ಆದರೆ, ಹಾಗೆ ಹೆಗಲ ಸಂಗಾತಿಗಳಾಗಿ ಹೆಜ್ಜೆ ಹಾಕುವಾಗ ಅದಾಗ ಚಿಗುರೊಡೆಯುತ್ತಿದ್ದ ಆಕೆಯ ಎದೆಯ ಏದುಸಿರಿಗೆ ತಾನು ಕರಗಿ ಆವಿಯಾದಂತೆ, ಒಳಗೊಳಗೆ ಬೆವತಂತೆ ಅನ್ನಿಸುತ್ತಿತ್ತು. ಈ ಸುಖ ಹೀಗೆ ಇರಲೆಂಬ ಬಯಕೆ. ಒಮ್ಮೆ, ಶಿಕೋಣಿಯ ಹುಡುಗ-ಹುಡುಗಿಯರೆಲ್ಲ ಊರಿಗೆ ಬಂದಿದ್ದ ತಂಬೂ ಥೇಟರಿನಲ್ಲಿ 'ಮೂಗ ಮನಸುಲು' ಸಿನಿಮಾ ನೋಡಿ, ಅಂತ್ಯದ ದುರಂತವನ್ನು ಸಹಿಸುವುದಾಗದೆ ಅಳತ್ತಳುತ್ತ ಮನಗೆ ಬರುವಾಗ ಕತ್ತಲೆಯಲ್ಲಿ ಹಾಸುಗಲ್ಲಿನ ಬೀದಿಯಲ್ಲಿ ಬಿದ್ದು ಗಾಯವಾಗಿತ್ತು. ಆಗ ತನ್ನ ಕಾಲಿಗೆ ಸೀಗೆಕಾಯಿಯ ಪೊಲ್ಟೀಸ್ ಹಾಕಿದ್ದು ಆಕೆಯ ತಾಯಿ. ಬಿಸಿ ಹಾಲಿಗೆ ಅರಿಸಿಣವನ್ನು ಹಾಕಿಕೊಟ್ಟು, ಮುಂಜಾಲಿಗೆ ಬ್ಯಾನಿ ಕಡಿಮಿ ಆಕ್ತೆತಿ ಕುಡಿ, ಎಂದಿದ್ದರು. ಪೊಲ್ಟೀಸ್‌ನ ಬಿಸಿ ಸೀಗೆಯ ಹಬೆ, ಹಾಲಿನ ಅರಿಸಿಣದ ವಾಸನೆ ಮೂವತ್ತು ವರ‍್ಷಗಳಾದರೂ ಬೆನ್ನು ಬಿಟ್ಟಿರಲಿಲ್ಲ.
*
ಪರೀಕ್ಷೆ ಮುಗಿದಿದ್ದೇ ಕುಟುಂಬ ಗಂಟುಮೂಟೆ ಕಟ್ಟಿ, ಪ್ರತಿಯೊಬ್ಬರೂ ಪ್ರತಿದಿನ ಒಬ್ಬರಿಗೊಬ್ಬರ ಮುಖ ನೋಡಬೇಕಾದ ಈ ಸಣ್ಣ ಊರಿನಿಂದ ವರ‍್ಗವಾದ ಇನ್ನೊಂದು ಊರಿಗೆ ಹೊರಟಿತ್ತು. ಅಲ್ಲಿಗೆ ಆಕೆಯೊಡನೆ ಸಂಬಂಧವೂ ಕೊನೆಗೊಳ್ಳಲಿತ್ತು. ಪರೀಕ್ಷೆಯ ಸಿದ್ಧತೆಯ ಜ್ವರ ಒಂದೆಡೆಯಾದರೆ, ಆಕೆಯನ್ನು ಕಳೆದುಕೊಳ್ಳುವ ಭಯದ ಜ್ವರ ಇನ್ನೊಂದೆಡೆಯಾಗಿ ಎಲ್ಲ ಮುಗಿದರೆ ಸಾಕು ಎನ್ನುವಂತಾಗಿತ್ತು. ಓದಾಕ ಬುಕ್ಕು ಬೇಕಾಗೈತಿ, ಎಂದು ಆಕೆ ನನ್ನ ಮನೆೆಗೆ ಬಂದರೆ, ನೋಟ್ಸು ತಗೊಂಡು ರ‍್ತೀನಿ, ಎಂದು ನಾನು ಎಡತಾಕುತ್ತಿದ್ದೆವು. ಎಲ್ಲರೂ ಪರೀಕ್ಷೆ ಹೇಗೆ ತೆಗೆದಿದ್ದೇವೆ, ಎಷ್ಟು ಮಾರ್ಕ್ಸ್ ಬೀಳಬಹುದು, ಎಂದು ಅರ‍್ಚಿಸುತ್ತಿದ್ದರೆ, ತಾವಿಬ್ಬರು ಅರಿಯದ ದುಃಖದಲ್ಲಿ ಮನೆ ತಲುಪುತ್ತಿದ್ದೆವು.
“ನನ್ನ ಮರಿತೀದಿ. ಗೊತ್ತೆತಿ,” ಎಂದು ಆಕೆ ಹೇಳಿದಾಗ, “ಶಕ್ಯನೆ ಇಲ್ಲ, ನಗರೇಶ್ವರ ಆಣೆ,” ಎಂದಿದ್ದೆ. ಕಡೆಗೆ, ಆಕೆ “ಸಾಯನ್ಸ್ ತಗೋ, ಪತ್ರಾ ಬರಿಯೂದು ಮರೀಬ್ಯಾಡ,” ಎಂದು ಕಣ್ಣೀರನ್ನು ಒರೆಸಿಕೊಳ್ಳುತ್ತ ಹೇಳಿದ್ದಳು. ಹ್ಞು, ನೀನೂ ಪತ್ರಾ ಬರೀ ಎಂದು ಬಿಗುಮಾನದಲ್ಲಿ ಅಳು ತಡೆದು ನಾನು ಹೇಳಿದ್ದೆ.
******
ಈಗ ಮೂವತ್ತು ವರ್ಷಗಳಾದ ಮೇಲೆ, ಅಸಿಡಿಟಿ, ಬೊಜ್ಜು, ಕಚೇರಿಯಲ್ಲಿ ಸಹೋದ್ಯೋಗಿಗಳ ಷಡ್ಯಂತ್ರ, ಅಪರೂಪದ ಬಡ್ತಿಗಳಲ್ಲಿ ಬದುಕು ಸಾಗಿಸುತ್ತಿದ್ದವನಿಗೆ ಆ ಸಣ್ಣ ಊರು ಜಗ್ಗಿ ಕರೆದೊಯ್ಯುತ್ತಿದೆ. ಎಲ್ಲೋ ಇದ್ದ ತನ್ನನ್ನು ಹುಡುಕಿ, ಹಳೆಯ ವಿದ್ಯರ‍್ಥಿ ಮಿಲನ ಮತ್ತು ಶಾಲೆಯ ಪುನರುಜ್ಜೀವನಕ್ಕಾಗಿ ನಿಮ್ಮನ್ನು ಸಂರ‍್ಕಿಸುತ್ತಿದ್ದೇವೆ. ಶಿಥಿಲಗೊಂಡ ಶಾಲೆ ಮರುನರ‍್ಮಾಣಕ್ಕೆ ಧನ ಸಹಾಯ ಮಾಡಿ, ಇಂಥ ದಿನ ಪುರ‍್ಮಿಲನ ಕರ‍್ಯಕ್ರಮಕ್ಕೆ ಬನ್ನಿ ಎಂಬ ಒಕ್ಕಣೆಯ ಪತ್ರ ಬದುಕಿನ ಗತಿಯನ್ನೇ ಬದಲಿಸುವಷ್ಟು ಪ್ರಬಲವಾಗಿತ್ತು.
ಹಣವನ್ನು ಧಾರಾಳವಾಗಿ ಕಳಿಸಿದ್ದೆ. ಆಕೆಯೂ ಈ ಕರ‍್ಯಕ್ರಮಕ್ಕೆ ಬರಬಹುದು ಎನ್ನುವ ಬೆಳಕಿನ ಕಿಡಿ ಹುರುಪು, ಉತ್ಸಾಹ ತುಂಬಿ, ಸಾವಿರ ಕಿಲೋಮೀಟರ್ ದೂರದಿಂದ ಈ ಊರಿನಂತೆ ಹೊರಡುವಂತೆ ಮಾಡಿತ್ತು. ಕೆಟ್ಟ ಥಂಡಿ, ಗಂಟೆಗಟ್ಟಲೆ ತಡವಾದ ರೈಲು ಈ ಪ್ರಯಾಣವನ್ನು ಹಣ್ಣು ಮಾಡಿ ಹತಾಶೆ ಮೂಡಿಸಿದ್ದವು. ಕೈ ಎಣಿಕೆಯಷ್ಟು ಜನ ವಾಸಿಸುವ ಈ ಊರಿಗೆ ಮೂರು ಸಂಜೆಗೆ ಬಂದು ನಿಂತ ರೈಲಿ ನಿಂದÀ ಯಾರು ಇಳಿದಾರು? ಖಾಲಿ ಹೊಡೆವ ನಿಲ್ದಾಣದಲ್ಲಿ ಇಳಿದವನು ನಾನೊಬ್ಬನೆ. ಎಂಟು ಗಂಟೆ ತ
ಡವಾಗಿ ರೈಲು ಬಂದಾಗ ಜನ ಬಂದು ಸ್ವಾಗತಿಸಬೇಕು ಎಂಬುದು ಹುಂಬತನವೆನ್ನುತ್ತ ಹೈರಾಣಾಗಿ ರೈಲಿನಿಂದ ಇಳಿದು ಹೆಜ್ಜೆ ಹಾಕಿದೆ.
ನಾಲ್ಕು ಹೆಜ್ಜೆಯೂ ಇಟ್ಟಿರಲಿಲ್ಲ. “ ಕೂದಲಿಗೆ ಬಣ್ಣಾ ಹಾಕೀದಿ. ಥೋಡೆ ಮೈ ಬಿಟ್ಟೀದಿ, ಉಳಿದ್ದೆಲ್ಲಾ ಹಂಗೇ ಇದ್ದೀ,” ಎನ್ನುವ ಧ್ವನಿ ಬಂದತ್ತ ನೋಡಿದೆ. ಸಪೂರ ದೇಹ, ಬರಿಗೊರಳು, ಬಳೆಗಳಿಲ್ಲದ ಕೈ, ನೆರೆತ ಕೂದಲು, ಹತ್ತಿ ಬಟ್ಟೆಯ ಪತ್ತಲ, ಕಾಲಲ್ಲಿ ಹವಾಯಿ ಚಪ್ಪಲಿ ಹಾಕಿ ಮುಗುಳ್ನಗೆಯಲ್ಲಿ ಆಕೆ ಕಂಬಕ್ಕೆ ಮರೆಯಾಗಿ ನಿಂತಿದ್ದಳು. ಕೃತಕತೆಯಿಲ್ಲದ ನಿಲುವು, ತುಟಿಯಲ್ಲಿ ಮಾಸದ ಮುಗುಳ್ನಗು, ಹೊಳೆವ ಮುಖದ ಸೊಬಗು, ಕಳೆದುಹೋದ ರ‍್ಷಗಳ ಅಂತರವನ್ನು ಅಳಸಿ ಹಾಕಿದವು.
“ಗಾಡಿ ಇಷ್ಟ್ ತಡಾ ಮಾಡಿ ಬಂದ್ರ ಯಾರು ಕಾಯ್ಕೋತ ನಿಂದ್ರತಾರೋಪ, ನಾನೇ ಎಲ್ಲಾರನ್ನೂ ಕಳಿಸೀನಿ. ಆರಾಮಿದ್ದಿಯಿಲ್ಲೊ. ಹೆಣ್ತಿ-ಮಕ್ಕಳ ವಿಚಾರ ಆಮ್ಯಾಲ ಹೇಳವತಿ, ಆ ಬ್ಯಾಗ್ ಕೊಡು” ಎಂದು ಕೈಯಲ್ಲಿದ್ದ ಲಗೇಜನ್ನು ಎಳೆದು ಇಸಿದುಕೊಂಡಳು. ನನ್ನ ತಬ್ಬಿಬ್ಬು ಕಂಡು, ಹಂಗ್ಯಾಕ ಘಾಬರಿ ಆಗೇದಿ, ನಾನೇ, ಮುದುಕಿ ಆಗೇನಿ, ಅಷ್ಟೇ, ಎಂದು ಬೆನ್ನಿಗೆ ಮೆತ್ತಗೆ ಬಾರಿಸಿದಳು.
ತನ್ನನ್ನು ಹಿಂಬಾಲಿಸುತ್ತಾನೆ ಎಂಬ ವಿಶ್ವಾಸದಲ್ಲಿ, “ ಜ್ವಾಳದ ಸೀತನಿ ಹೊಲದಾಗಿಂದ ಊರಿಗೆ ಹೋಗೂಣು. ಆ ವಾಸನಿ ನಿನಗ ಭಾಳ ಸೇರತದಂತ ನನಗ ಗೊತ್. . .” ಎಂದು ನಾನು ಕೇಳುತ್ತಿದ್ದೇನೊ ಇಲ್ಲವೊ ಲೆಕ್ಕಿಸದೆ, “ ಲಗ್ನಾ ಯಾಕ ಆಗಿಲ್ಯಂದ. ನಮ್ಮೂರ ಸಾಲಿ, ಮಕ್ಕಳೇ ನನಗ ಎಲ್ಲಾ ಆಗ್ಯಾವ ನೋಡು. ಇಲ್ಲೆ ಟೀಚರ್ ಆಗೀನಿ. ಶಿಕೋಣಿನೂ ತಗೋತೀನಿ. ನಿನ್ನ ಪತ್ತಾ ಹುಡುಕಿ ಪತ್ರಾ ಬರಿಸಿದ್ದು ನಾನೇ. ಬಂದಿ, ಭಾಳ ಛಲೋ ಆತು. ಖರೇ ಅಂದ್ರ, ನಿನ್ನ ನೋಡಬೇಕಂತನೇ ಈ ಖಟಿಪಿಟಿ ಮಾಡಿದ್ನೇನೊ ಅನಸ್ತದ. ಒಮ್ಮೆ ನೋಡಬೇಕ ಅನಿಸಿತ್ತು, ಅಷ್ಟs. . . ಈಗ ಹೇಳು ನಿಂದೇನ ಕಥಿ ಅಂತ,” ಎಂದು ಆಕೆ ಹಿಂದೆ ತಿರುಗಿದಾಗ ಚಳಿ, ಮುಳುಗುವ ಇಳಿಸಂಜೆಯ ಸೂರ್ಯನ ಬೆಳಕು ಆಕೆಯ ಮುಖದ ಮೇಲೆ ಬಿದ್ದು, ಮೂವತ್ತು ವರ್ಷದಿಂದ ಮಾಸದಂತೆ ಜತನವಾಗಿಟ್ಟುಕೊಂಡ ಆಕೆಯ ಮುಗ್ಧ ನಗು, ಕಾಪಿಟ್ಟ ಕಾತರಗಳಿಂದ ತುಂಬಿದ ಮುಖ, ಕೆಂಪಿನಿAದ ಹೊಳೆಯತೊಡಗಿತು.
ಒಳಗೆ ಹೆಪ್ಪುಗಟ್ಟುತ್ತಿದ್ದ ಅಸ್ವಸ್ಥತೆ ತಡೆಯುವುದಾಗದೆ ಜೋಳದ ದಂಟನ್ನು ಹಿಡಿದು ಕುಸಿದು ಕುಳಿತು ಅಳತೊಡಗಿದೆ.
*
(ಐದು ವರ್ಷದ ಹಿಂದೆ ಈ ಕಥೆ ಪ್ರಕಟವಾದಾಗ ಕಥೆಯ ಹೆಸರು ಬೇರೆ ಇತ್ತು! )