ಕೆಟ್ಟು ಕೆರ ಹಿಡಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಹೋರಾಟಗಳು - ಕೇಶವರೆಡ್ಡಿ ಹಂದ್ರಾಳ

farmers strike keshav reddy handrala

ಕೆಟ್ಟು ಕೆರ ಹಿಡಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಹೋರಾಟಗಳು - ಕೇಶವರೆಡ್ಡಿ ಹಂದ್ರಾಳ

ಅನುಭವ-ಅನುಭಾವ

 

ಕೇಶವರೆಡ್ಡಿ ಹಂದ್ರಾಳ

ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ಎಲ್ಲಾ ಹೋರಾಟಗಳೂ ಕೂಡಾ ಹೇಳಿಕೊಳ್ಳುವಷ್ಟು ನೈತಿಕತೆಯಿಂದ ಕೂಡಿದ್ದವು. ಹೋರಾಟಗಾರರು ಮತ್ತು ಹೋರಾಟಗಳ ಮುಖಂಡರು ಸಹ ಪ್ರಾಮಾಣಿಕತೆ ಮತ್ತು ಬದ್ಧತೆಗಳನ್ನು ಗಟ್ಟಿಯಾಗಿ ಉಳಿಸಿಕೊಂಡಿದ್ದರು. ಆಗ ನಾನು ಬೆಂಗಳೂರಿಗೆ ಕಾಲಿಟ್ಟ ಎಪ್ಪತ್ತರ ದಶಕದ ಆರಂಭದಿಂದ ಹಿಡಿದು ಎಂಬತ್ತರ ದಶಕದ ಅಂತ್ಯದವರೆಗೂ ಇಂಥ ಬದ್ಧತೆಯುಳ್ಳ ಭಾಷಾ ಹೋರಾಟಗಳನ್ನು ಗುರುತಿಸಬಹುದು.

 

ಕೆಟ್ಟು ಕೆರ ಹಿಡಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಹೋರಾಟಗಳು

ಕೆಟ್ಟು ಕೆರ ಹಿಡಿದವರ ಪರವಾಗಿ ಹೋರಾಡಲು ರೂಪುಗೊಂಡ ಅನೇಕ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಪ್ರಗತಿಪರ ಚಳುವಳಿಗಳೇ ಇಂದು ಕೆಟ್ಟು ಕೆರ ಹಿಡಿದು ಕೂತಿರುವುದು ಪ್ರಸ್ತುತ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಅತಿ ದೊಡ್ಡ ವ್ಯಂಗ್ಯವಾಗಿದೆ. ಎಪ್ಪತ್ತರ ದಶಕದಲ್ಲಿ ತೀವ್ರ ಸ್ವರೂಪದ ಜನಪರ ಕಾಳಜಿಯನ್ನು ಉಸಿರನ್ನಾಗಿಸಿಕೊಂಡು ಜನಮನ್ನಣೆಯನ್ನು ಗಳಿಸಿದ್ದ ಈ ಎಲ್ಲಾ ಚಳುವಳಿಗಳು ಇಂದಿನ ದಿನಮಾನಗಳಲ್ಲಿ ಸ್ವಾರ್ಥ, ಲಾಭದಾಯಕ, ಜಾತಿಯ, ಧರ್ಮ ಮತ್ತು ರಾಜಕೀಯ ಕೇಂದ್ರಗಳಾಗಿ ಜನಸಾಮಾನ್ಯರ ಅಸಡ್ಡೆಗೆ ಒಳಗಾಗಿವೆ.

1971 ರಲ್ಲಿ ಹೈಸ್ಕೂಲು ಓದಲೆಂದು ನಾನು ಬೆಂಗಳೂರಿಗೆ ಕಾಲಿಟ್ಪಾಗ ಬೆಂಗಳೂರಿನ ಜನಸಂಖ್ಯೆ 16 -17 ಲಕ್ಷ ಇತ್ತೇನೋ. ಆದರೂ ತನ್ನ ವಿಶಿಷ್ಟತೆಗಳಿಂದ ಹಳ್ಳಿಗರನ್ನು ವಿಪರೀತ ಬೆರಗುಗೊಳಿಸುತ್ತಿತ್ತು. ಆ ಸಂದರ್ಭದಲ್ಲಿ ತಮಿಳರ ಮತ್ತು ಹಿಂದಿಯವರ ಅಧಿಪತ್ಯ ಬೆಂಗಳೂರಿನಲ್ಲಿ ಜೋರಾಗಿತ್ತು. ಹಾಗಾಗಿಯೇ ಹಿಂದಿ ಮತ್ತು ತಮಿಳು ವಿರೋಧಿ ಚಳವಳಿಗಳು ಕೂಡಾ ಬಿರುಸಾಗಿದ್ದವು. ಮೆಟ್ರೊಪಾಲಿಟನ್ ನಗರಗಳಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಒಂದು ರೀತಿಯ ಸಂಕೀರ್ಣ ಬದುಕು ನೆಲೆಗೊಂಡಿದ್ದರೂ ಭಾಷೆಯ ವಿಷಯಕ್ಕೆ ಬಂದಾಗ ಸ್ಥಳೀಯರಲ್ಲಿ ಸ್ವಾಭಿಮಾನ ಜಾಗೃತಗೊಳ್ಳುವುದು ಸ್ವಾಭಾವಿಕ ಸಂಗತಿಯೇ ಸರಿ. ಹಾಗಾಗಿ ಸ್ಥಳೀಯ ಭಾಷಿಕರ ಮತ್ತು ವಲಸೆ ಭಾಷಿಕರ ನಡುವೆ ಸಂಘರ್ಷಗಳು ಸಾಮಾನ್ಯವಾಗಿರುವುದು ಕೂಡಾ ಒಂದು ಸಾಮಾನ್ಯ ಸಂಗತಿಯೇ ಆಗಿರುತ್ತದೆ. ಇದು ಹೊರದೇಶಗಳಲ್ಲಿ ಅಲ್ಲದೆ ಸಂಯುಕ್ತ ರಾಷ್ಟ್ರವಾದ ಭಾರತದ ರಾಜ್ಯಗಳಲ್ಲೂ ಹೆಚ್ಚಾಗಿ ಕಂಡುಬರುತ್ತದೆ. ಭಾರತವು ಬಹುಭಾಷಾ ರಾಷ್ಟ್ರವಾಗಿರುವುದರಿಂದ ರಾಜ್ಯ ರಾಜ್ಯಗಳ ಮಧ್ಯೆ ಇಂಥ ಸಂಘರ್ಷಗಳು ಅಧಿಕವಾಗಿಯೇ ಇರುತ್ತವೆ. ಅದು ಕರ್ನಾಟಕದಲ್ಲೂ ಪ್ರಕಟಗೊಂಡ ಸತ್ಯವೇ ಆಗಿದೆ.

ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ಎಲ್ಲಾ ಹೋರಾಟಗಳೂ ಕೂಡಾ ಹೇಳಿಕೊಳ್ಳುವಷ್ಟು ನೈತಿಕತೆಯಿಂದ ಕೂಡಿದ್ದವು. ಹೋರಾಟಗಾರರು ಮತ್ತು ಹೋರಾಟಗಳ ಮುಖಂಡರು ಸಹ ಪ್ರಾಮಾಣಿಕತೆ ಮತ್ತು ಬದ್ಧತೆಗಳನ್ನು ಗಟ್ಟಿಯಾಗಿ ಉಳಿಸಿಕೊಂಡಿದ್ದರು. ಆಗ ನಾನು ಬೆಂಗಳೂರಿಗೆ ಕಾಲಿಟ್ಟ ಎಪ್ಪತ್ತರ ದಶಕದ ಆರಂಭದಿಂದ ಹಿಡಿದು ಎಂಬತ್ತರ ದಶಕದ ಅಂತ್ಯದವರೆಗೂ ಇಂಥ ಬದ್ಧತೆಯುಳ್ಳ ಭಾಷಾ ಹೋರಾಟಗಳನ್ನು ಗುರುತಿಸಬಹುದು. ವಾಟಾಳ್ ನಾಗರಾಜ್, ಜಿ. ನಾರಾಯಣ ಕುಮಾರ್, ಪ್ರಭಾಕರ್ ರೆಡ್ಡಿ ಮುಂತಾದವರು ಕನ್ನಡ ಚಳವಳಿಗಳ ನಾಯಕತ್ವವನ್ನು ವಹಿಸುತ್ತಿದ್ದರು. ಇವರ ಚಳವಳಿಗಳು ಮತ್ತು ಕನ್ನಡ ಕಾರ್ಯಕ್ರಮಗಳು ಬೆಂಗಳೂರು ನಗರದ ಕೇಂದ್ರ ಭಾಗವಾದ ಮೈಸೂರು ಬ್ಯಾಂಕ್ ವೃತ್ತದಿಂದಲೇ ಪ್ರಾರಂಭವಾಗುತ್ತಿದ್ದದ್ದು. ಗೋಕಾಕ್ ಚಳವಳಿಯಲ್ಲೂ ಈ ಕನ್ನಡ ಪರ ಸಂಘಗಳು ಸಕ್ರಿಯವಾಗಿ ಕೆಲಸ ಮಾಡಿದ್ದವು. ರಾಜಕುಮಾರ್ ಅಭಿಮಾನಿಗಳ ಸಂಘ ಕೂಡಾ ಬೆಂಗಳೂರಿನಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿತ್ತು. ಸ್ವತಃ ರಾಜಕುಮಾರ್ ರವರೇ ಗೋಕಾಕ್ ಚಳವಳಿಯಲ್ಲಿ ಧುಮುಕಿದ್ದು ಆ ಚಳವಳಿಗೆ ಅಪಾರ ಶಕ್ತಿಯನ್ನು ತುಂಬಿತ್ತು. ನಂತರದಲ್ಲಿ ಬೆಂಗಳೂರಿನಲ್ಲಿ ಹುಟ್ಟಿಕೊಂಡ ಅನೇಕ ಕನ್ನಡ ಸಂಘಟನೆಗಳು ಸ್ವಾರ್ಥಪರ ಸಂಘಟನೆಗಳಾಗಿ ಬೆಳೆದವಲ್ಲದೆ ಸಮಾಜ ಘಾತುಕ ಶಕ್ತಿಗಳು ಈ ಸಂಘಟನೆಗಳಲ್ಲಿ ಗುರುತಿಸಿಕೊಂಡವು. ಈಗಂತೂ ಬೆಂಗಳೂರಿನಲ್ಲಿ ಇಂಥ ಎತ್ತುವಳಿ ಕನ್ನಡ ಸಂಘಟನೆಗಳು ನೂರಾರು ಹುಟ್ಟಿಕೊಂಡಿವೆ. ಕೆಲವರಿಗೆ ಜೀವನ ಮಾರ್ಗವೇ ಕನ್ನಡ ಹೋರಾಟವಾಗಿದೆ ! ಇನ್ನು ಇಂಥ ಸಂಘಟನೆಗಳ ನೂರಾರು ನಾಯಕರು ಸರಿಯಾಗಿ ಕನ್ನಡ ಉಚ್ಛರಿಸಲು ಬರದಿದ್ದರೂ ಕನ್ನಡಕ್ಕಾಗಿ ತನು ಮನಗಳನ್ನು ಅರ್ಪಿಸಿ ಧನದ್ರವ್ಯಗಳನ್ನು ಕೊಳ್ಳೆಹೊಡೆಯುತ್ತಿದ್ದಾರೆ. ಕೆಲವು ಕನ್ನಡ ಸಂಘಟನೆಗಳ ನಾಯಕರು ಭೂಗತ ದೊರೆಗಳು ಮತ್ತು ರೌಡಿಶೀಟರ್ ಗಳೂ ಆಗಿದ್ದಾರೆ. ಇನ್ನು ಕನ್ನಡದ ಬಗ್ಗೆ, ಕನ್ನಡ ಶಾಲಾ ಕಾಲೇಜುಗಳಲ್ಲಿ ಪ್ರಾಥಮಿಕ ಭಾಷೆಯಾಗಬೇಕೆಂದು ಕೂಗೆಬ್ಬಿಸುತ್ತಿರುವ ಅನೇಕ ಘನ ಸಾಹಿತಿಗಳು, ಚಿಂತಕರು, ಬುದ್ಧಿಜೀವಿಗಳು ತಮ್ಮ ಮಕ್ಕಳು, ಮೊಮ್ಮೊಕ್ಕಳನ್ನು ಇಂಗ್ಲಿಷ್ ಕಾನ್ವೆಂಟ್ ಗಳಲ್ಲಿ ಓದಿಸಿ ಡಾಲರ್ ಗಳನ್ನು ದುಡಿಯಲು ಫಾರಿನ್ ಗಳಿಗೆ ಅಟ್ಟಿದ್ದಾರೆ ಮತ್ತು ಅಟ್ಟುತ್ತಿದ್ದಾರೆ. ಆದರೆ ಭಾಷಣಗಳಲ್ಲಿ ಮಾತ್ರ ಕನ್ನಡಕ್ಕಾಗಿ ಪ್ರಾಣಗಳನ್ನು ಅರ್ಪಿಸುತ್ತಿದ್ದಾರೆ. ವರ್ಷಪೂರ್ತಿ ಮಲಗಿ ನಿದ್ರಿಸುವ ಇಂಥ ಕನ್ನಡ ಸಂಘಗಳು ಮತ್ತು ಚಳವಳಿ ನಾಯಕರು ನವೆಂಬರ್ ತಿಂಗಳಲ್ಲಿ ಜಾಗೃತಗೊಂಡು ಕನ್ನಡಮ್ಮನ ಸೇವೆಯಲ್ಲಿ ತೊಡಗುವುದು ಆಕೆಯ ಪುಣ್ಯವೇ ಸರಿ. ಇದನ್ನು ನವೆಂಬರ್ ಶೂರತ್ವ ಎಂತಲೂ ಕರೆಯಬಹುದು.

ನೀವು ಚಿಕ್ಕಪೇಟೆ, ಮಾಮೂಲ್ ಪೇಟೆ, ನಗರ್ತರಪೇಟೆ, ಕಾಟನ್ ಪೇಟೆ, ಎಸ್. ಜೆ. ಪಿ ರಸ್ತೆ ಮುಂತಾದ ಕಡೆ ಓಡಾಡಿ ನೋಡಿ. ಕರ್ನಾಟಕಕ್ಕೆ ಬಂದು ನಲವತ್ತು ಐವತ್ತು ವರ್ಷಗಳಾಗಿದ್ದರೂ, ಇಲ್ಲೇ ಹುಟ್ಟಿ ಬೆಳೆದಿದ್ದರೂ ಕೋಟ್ಯಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಸುತ್ತಿದ್ದರೂ ಉತ್ತರ ಭಾರತೀಯರಿಗೆ, ಮುಸ್ಲಿಂ ಬಾಂಧವರಿಗೆ ಕನ್ನಡ ಮಾತನಾಡಲು ಕೂಡಾ ಬರುವುದಿಲ್ಲ. ಅವರ ಅಂಗಡಿ ಮುಂಗಟ್ಟುಗಳಲ್ಲಿ ಕೆಲಸ ಮಾಡುವ ಕನ್ನಡ ಕಾರ್ಮಿಕರು ಅವರ ಭಾಷೆಯನ್ನು ಎರಡು ಮೂರು ತಿಂಗಳಲ್ಲಿ ಕಲಿತು ಲೀಲಾಜಾಲವಾಗಿ ಮಾತನಾಡಲು ಕಲಿತುಬಿಡುತ್ತಾರೆ. ಇಲ್ಲೇ ಬದುಕೆಂಬುದು ಭಾಷೆಗಿಂತಲೂ ದೊಡ್ಡದು ಎನಿಸುವುದು. ಇತ್ತೀಚೆಗಂತೂ ನಮ್ಮ ರಾಜಕಾರಣಿಗಳು ಹೊರದೇಶಗಳ, ಹೊರರಾಜ್ಯಗಳ ಮಲ್ಟಿನ್ಯಾಶನಲ್ ಕಂಪನಿಗಳಿಗೆ, ಬಂಡವಾಳಗಾರರಿಗೆ ಅತ್ಯಂತ ಕಡಿಮೆ ದರದಲ್ಲಿ ಬೆಂಗಳೂರಿನ ಸಾವಿರಾರು ಎಕರೆ ಜಮೀನನ್ನು ಮಾರಿಕೊಂಡಿದ್ದಾರೆ. ಅಂಥ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಿಡುವುದು ಕಸ ಗುಡಿಸುವ ಕೆಲಸಗಳು. ರಾಜಕಾರಣಿಗಳು ಮತ್ತು ಅಧಿಕಾರಿಶಾಹಿ ನೂರಾರು ಕೋಟಿ ರೂಪಾಯಿಗಳನ್ನು ತಮ್ಮ ಜೇಬುಗಳಿಗೆ ಬಿಟ್ಟುಕೊಳ್ಳುತ್ತಿದ್ದಾರೆ. ನಿಜವಾದ ಕನ್ನಡದ ಸಾಮಾನ್ಯ ಜನರಿಗೆ ಬೆಂಗಳೂರಿನಲ್ಲಿ ಸಣ್ಣ ವಸತಿ ಸೌಕರ್ಯ ಕಂಡುಕೊಳ್ಳಲು ಸಹ ಅಸಾಧ್ಯವಾಗಿಬಿಟ್ಟಿದೆ. ಬೆಂಗಳೂರು ನಗರ ಕಾರ್ಪೋರೇಶನ್ ನಲ್ಲಿ ಕಸದ ಕಾಂಟ್ಯಾಕ್ಟ್ ನ್ನು ನಿರಂತರವಾಗಿ ಅನೇಕ ವರ್ಷಗಳಿಂದ ಮನೋಪಲಿ ಮಾಡಿಕೊಂಡಿರುವವರು ಅನ್ಯಭಾಷಿಕರೇ. ಬೆಂಗಳೂರಿನ ರಿಯಲ್ ಎಸ್ಟೇಟ್ ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಗಳು ತೊಂಬತ್ತು ಭಾಗದಷ್ಟು ಅನ್ಯಭಾಷಿಕರ ಒಡೆತನದಲ್ಲಿವೆ. ನಮ್ಮ ಕನ್ನಡದ ಹೋರಾಟಗಾರರು ಕನ್ನಡದ ರಾಜ್ಯೋತ್ಸವ ಆಚರಣೆಗಳಿಗೆ ಇಂಥ ಭೂಪರಿಂದ ವಸೂಲಿಗೆ ಇಳಿಯುತ್ತಾರೆ. ಕೈಗಾರಿಕಾ ವಲಯದಲ್ಲಂತೂ ಬೆರಳೆಣಿಕೆಯಷ್ಟೂ ಕನ್ನಡಿಗರು ನೋಡಸಿಗುವುದಿಲ್ಲ. ಕನ್ನಡ ಭಾಷೆ ಬೆಳೆಯಬೇಕಾದರೆ, ಉಳಿಯಬೇಕಾದರೆ ಕನ್ನಡಿಗರು ಆರ್ಥಿಕವಾಗಿ ಬಲಾಢ್ಯರಾಗಬೇಕೆಂಬ ಕಟುವಾಸ್ತವ ಸತ್ಯವನ್ನು ನಮ್ಮ ಕನ್ನಡದ ರಾಜಕಾರಣಿಗಳು, ಕನ್ನಡದ ಸಾಹಿತಿ-ಚಿಂತಕರು, ಕನ್ನಡದ ಚಳವಳಿಗಾರರು/ ಹೋರಾಟಗಾರರು ಪ್ರಸ್ತುತ ಅರಿತುಕೊಳ್ಳಬೇಕಾಗಿದೆ. ಬರಿ ಭಾಷೆಗಾಗಿ ಹೋರಾಡಿದರೆ ಪ್ರಯೋಜನವಿಲ್ಲ. ಭಾಷೆಯೊಂದಿಗೆ ಬದುಕಿಗಾಗಿಯೂ ಹೋರಾಡಬೇಕೆಂಬ ಕಟು ಸತ್ಯವನ್ನು ನಾವು ಅರಿತುಕೊಳ್ಳಬೇಕಾಗಿದೆ. ಹಾಗೆ ನೋಡಿದರೆ ಕನ್ನಡ ಭಾಷೆ ತನ್ನ ಸತ್ವವನ್ನು ಮತ್ತು ಅಸ್ಥಿತ್ವವನ್ನು ಉಳಿಸಿಕೊಂಡಿರುವುದೇ ಗ್ರಾಮೀಣ ಪ್ರದೇಶಗಳಲ್ಲಿ. ಗ್ರಾಮೀಣ ಪ್ರದೇಶಗಳಲ್ಲೂ ಈಗೀಗ ಶಿಕ್ಷಣದ ವಿಷಯದಲ್ಲಿ ಇಂಗ್ಲಿಷ್ ಭಾಷೆಗೆ ಒಲವನ್ನು ತೋರುತ್ತಿದ್ದಾರೆ. ಏಕೆಂದರೆ ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಅಧ್ಯಯನ ಮಾಡಲು ಕನ್ನಡದಲ್ಲಿ ವ್ಯಾಪಕವಾದ ಸಿಲೆಬಸ್ ನ ವಿಪರೀತ ಕೊರತೆಯಿರುವುದು ಮತ್ತು ಇಂದಿನ ವಿಧ್ಯಾಭ್ಯಾಸದ ಗುರಿ ಉದ್ಯೋಗ ಗಳಿಸಿ ಒಳ್ಳೆಯ ಜೀವನವನ್ನು ಸಾಗಿಸುವುದೆಂಬ ವಿಷಯ ಸಾರ್ವತ್ರಿಕವಾಗಿ ಸಾಬೀತಾಗಿದೆ. ಇರುವುದರಲ್ಲಿ ಬೆಂಗಳೂರಿನಲ್ಲಿ ಪೊಲೀಸ್, ಸಾರಿಗೆ, ಕಾರ್ಪೊರೇಷನ್, ವಿದ್ಯುತ್, ಲೋಕೋಪಯೋಗಿ, ಕಂದಾಯ ಮುಂತಾದ ಇಲಾಖೆಗಳಲ್ಲಿ ಕನ್ನಡ ಮಾತನಾಡುವ ಜನ ಉಳಿದುಕೊಂಡಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಉಳಿಸಲು ಸರ್ಕಾರ ಯೋಗ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದು ಅನಿವಾರ್ಯ ಎಂದೇ ಹೇಳಬೇಕು. ಇಂದಿನ ಕನ್ನಡ ಸಂಘಟನೆಗಳು ಒಂದು ರೀತಿಯ ಭಯೋತ್ಪಾದನೆಯನ್ನು ಹುಟ್ಟಿಸುತ್ತವೆಯೇ ಹೊರತು ವ್ಯವಸ್ಥಿತವಾಗಿ ಹೇಗೆ ಕನ್ನಡ ಭಾಷೆಯನ್ನು ಭದ್ರಗೊಳಿಸಬೇಕೆಂಬ ಆಲೋಚನೆಗಳಾಗಲೀ, ಕಾರ್ಯಕ್ರಮಗಳಾಗಲೀ ಅವರ ಬಳಿ ಸಿಗುವುದಿಲ್ಲ.

ದಲಿತ ಮತ್ತು ರೈತ ಚಳವಳಿಗಳು ಕೂಡಾ ಭಾಷಾ ಚಳವಳಿಯ ಹಾದಿಯನ್ನೇ ಹಿಡಿದಿವೆ. ನನಗೆ ಅರಿವಿರುವಂತೆ ದೇಶಾದ್ಯಂತ ಅಲ್ಲದೆಯೇ ಕರ್ನಾಟಕದಲ್ಲೂ ಕೂಡಾ ಸಾಮಾಜಿಕ ಚಳವಳಿಗಳಿಗೆ ಒಂದು ಹೊಸ ರೂಪ ಮತ್ತು ವ್ಯಾಪಕವಾದ ಗಟ್ಟಿ ನೆಲೆ ಮತ್ತು ಚಲನೆ ಸಿಕ್ಕಿದ್ದು 1975 ರಲ್ಲಿ ಜಾರಿಯಾದ ತುರ್ತು ಪರಿಸ್ಥಿತಿಯ ಕಾರಣದಿಂದಾಗಿಯೇ. ಕರ್ನಾಟಕದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ, ದಲಿತ ಚಳವಳಿ ಮತ್ತು ರೈತ ಚಳವಳಿಗಳಿಗೆ ಒಂದು ಗಟ್ಟಿ ಆಯಾಮ ಸಿಕ್ಕಿದ್ದು ತುರ್ತು ಪರಿಸ್ಥಿತಿಯ ನಂತರವೇ. ತುರ್ತು ಪರಿಸ್ಥಿತಿಯ ಕಾಲದಲ್ಲಿ ಹುಟ್ಟಿಕೊಂಡ ಜೆ. ಪಿ. ಚಳವಳಿಯ ಪ್ರಭಾವ ಕೂಡಾ ಕಡಿಮೆಯಾದದ್ದೇನೂ ಅಲ್ಲ. ಇದೇ ಕಾರಣಕ್ಕಾಗಿ ಸ್ವಾತಂತ್ರ್ಯ ಬಂದಾಗಿನಿಂದಲೂ ಅಸ್ಥಿತ್ವದಲ್ಲಿದ್ದ ಕಾಂಗ್ರೆಸ್ ಪಕ್ಷದ ಆಡಳಿತ ಹೇಳ ಹೆಸರಿಲ್ಲದೆ ನೆಲಕಚ್ಚಿಹೋಯಿತು. ಎಪ್ಪತ್ತು ಎಂಬತ್ತರಲ್ಲಿ ಮತ್ತು ಸ್ವಲ್ಪ ಮಟ್ಟಿಗೆ ತೊಂಬತ್ತರ ದಶಕದಲ್ಲೂ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕರ್ನಾಟಕದ ದಲಿತ ಚಳವಳಿ ಕ್ರಮೇಣ ಚೂರು ಚೂರಾಗಲು ಪ್ರಾರಂಭಿಸಿತು. ಪ್ರೊಫೆಸರ್ ಬಿ. ಕೃಷ್ಣಪ್ಪರಂತ ಸಂವೇದನಾಶೀಲ ಚಿಂತಕ ಮತ್ತು ನಾಯಕನನ್ನು ಕಳೆದುಕೊಂಡ ನಂತರ ದಲಿತ ಸಂಘರ್ಷ ಸಮಿತಿಗಳು ಪೇಲವವಾಗತೊಡಗಿದವು. ದಲಿತ ಚಳವಳಿಯ ನಾಯಕರಲ್ಲಿ ಸ್ವಾರ್ಥ, ಒಳ ಜಾತಿ ವೈಷಮ್ಯ, ರಾಜಕೀಯ ಲಲಾಸೆಗಳು ಹುಟ್ಟಿಕೊಂಡು ತಾನು ಹುಟ್ಟುವಾಗ ಇದ್ದ ಖದರನ್ನು ದಲಿತ ಚಳವಳಿ ಸಂಪೂರ್ಣವಾಗಿ ಕಳೆದುಕೊಂಡಿತು. ಸಣ್ಣ ಉದಾಹರಣೆಯೆಂದರೆ ದಿವಂಗತ ದಲಿತ ಕವಿ ಸಿದ್ದಲಿಂಗಯ್ಯ. ಸಿದ್ದಲಿಂಗಯ್ಯ ಮತ್ತು ದೇವನೂರು ಮಹಾದೇವ ರವರು ಮನಸ್ಸು ಮಾಡಿದ್ದರೆ ಕರ್ನಾಟಕದ ದಲಿತ ಸಂಘಟನೆಗಳು ಒಂದು ಗಟ್ಟಿಯಾದ ಶಾಶ್ವತ ಸ್ಥಾಯಿಯನ್ನು ಉಳಿಸಿಕೊಳ್ಳಬಹುದಿತ್ತು. ಮತ್ತು ಚಳವಳಿಗೆ ಒಂದು ನಿರ್ಧಿಷ್ಟ ವೇಗವನ್ನು ಗಳಿಸಿಕೊಡಬಹುದಿತ್ತು. ಎಡ ಮತ್ತು ಬಲ ಎಂಬ ಬಲವಾದ ಜಾತಿ ನಂಬಿಕೆ ದಲಿತ ಸಂಘಟನೆಗೆ ಬಲವಾದ ಪೆಟ್ಟು ನೀಡಿತು. ಈಗ ಬಿಡಿ ರಾಜ್ಯದಾದ್ಯಂತ ದಲಿತ ಸಂಘಟನೆಗಳು ಹಳ್ಳಿ ಹಳ್ಳಿಗಳಲ್ಲಿ, ಕೇರಿ, ಕೇರಿಗಳಲ್ಲಿ ಹುಟ್ಟಿಕೊಂಡಿವೆ. ಇಂಥ ಸಂಘಟನೆಗಳು ಅನಕ್ಷರಸ್ಥ ದಲಿತರಿಗೇನೂ ಸಹಾಯಹಸ್ತ ನೀಡುತ್ತಿಲ್ಲ. ಬದಲಾಗಿ ಇಂಥ ಸಂಘಟನೆಗಳ ನಾಯಕರು ಅನಕ್ಷರಸ್ಥ ಮತ್ತು ಬಡ ಹಳ್ಳಿಗಾಡಿನ ದಲಿತರ ಹೆಸರಿನಲ್ಲಿ ಸುಲಿಗೆ ಮಾಡುವುದು, ಹಣ ಮಾಡುವುದರಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ದಲಿತ ಹೋರಾಟ ಅನೇಕ ದಲಿತ ನಾಯಕರ ದಿನನಿತ್ಯದ ಬದುಕಿಗೆ ಆಧಾರವಾಗಿದ್ದರೆ ಇನ್ನು ನಗರ, ಪಟ್ಟಣಗಳಲ್ಲಿ ಹೋರಾಟ ಮಾಡುತ್ತಿರುವ ನಾಯಕರು ಇನೋವಾ ದಂಥ ಕಾರುಗಳನ್ನು ಇಟ್ಟುಕೊಂಡು ಕಾರುಬಾರು ನಡೆಸುತ್ತಾ ವಿಲಾಸಮಯ ಜೀವನದಲ್ಲಿ ಮುಳುಗಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಮುಂತಾದ ಮಹನೀಯರುಗಳ ಭಾವಚಿತ್ರ ಗಳು ಇವರ ಆಯುಧಗಳಾಗಿವೆ. ಮೀಸಲಾತಿಯ ಎಲ್ಲಾ ಸೌಲಭ್ಯಗಳೂ ಉಳ್ಳ ದಲಿತರ ಪಾಲಾಗುತ್ತಿವೆಯೇ ಹೊರತು ಕಟ್ಟಕಡೆಯ ದಲಿತರಿಗೆ ಇನ್ನೂ ಸಿಗದೇ ಇರುವುದು ದುರಂತವೆಂದೇ ಕರೆಯಬಹುದು. ಯಾವುದೇ ಜಾತಿಯ ಕಟ್ಟಕಡೆಯ ಬಡವನಿಗೆ ಆಯಾ ಜಾತಿಗೆ ಮೀಸಲಿಟ್ಟಿರುವ ಸೌಲಭ್ಯಗಳನ್ನು ತಲುಪಿಸುವ ಒಂದು ಹೊಸ ವೈಜ್ಞಾನಿಕ ಮತ್ತು ನ್ಯಾಯಯುತ ಮಾರ್ಗಗಳನ್ನು ನಮ್ಮ ಸಂವಿಧಾನದಡಿಯಲ್ಲಿ ಕಂಡುಕೊಳ್ಳುವ ಪ್ರಯತ್ನಗಳನ್ನು ಇಂದು ಹೋರಾಟಗಾರರು ಮಾಡಬೇಕಾಗಿದೆ. ಜನಪ್ರತಿನಿಧಿಗಳು ಕೂಡ ಆ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಆದರೆ ಅದೊಂದು ಮಿಲಿಯನ್ ಡಾಲರ್ ಪ್ರಶ್ನೆಯೇ ಸರಿ.

1980 ರಲ್ಲಿ ಕರ್ನಾಟಕದಲ್ಲಿ ರೈತ ಸಂಘಟನೆ ಮತ್ತು ಹೋರಾಟಗಳು ವ್ಯಾಪಕ ನೆಲೆಯನ್ನು ಪಡೆದುಕೊಂಡರೂ ಅದಕ್ಕಿಂತಲೂ ಮೊದಲು ಅಲ್ಲಲ್ಲಿ ರೈತ ಚಳವಳಿಗಳ ನೆರಳನ್ನು ಕಾಣಬಹುದಾಗಿದೆ. ಈ ಚಳವಳಿಗಳು ಮತ್ತು ಹೋರಾಟಗಳು ಹೆಚ್ಚಾಗಿ ಸಮಾಜವಾದಿ ಸಿದ್ಧಾಂತಗಳ ಮೂಲ ಬೇರುಗಳಿಂದಲೇ ಚಿಗುರೊಡೆದಂತಹವುಗಳೇ. ಹಾಗಾಗಿ ಸಮಾಜವಾದದಲ್ಲಿ ನಂಬಿಕೆಯುಳ್ಳ ರಾಜಕಾರಣಿಗಳು ಪ್ರಾಂತೀಯ ಮಟ್ಟಗಳಲ್ಲಿ ನಡೆಯುತ್ಥಿದ್ದ ರೈತ ಹೋರಾಟಗಳನ್ನು ಬೆಂಬಲಿಸುತ್ತಿದ್ದರು.

1980 ರಲ್ಲಿ ಕರ್ನಾಟಕದ ನರಗುಂದ, ನವಲಗುಂದ ಗಳಲ್ಲಿ ನಡೆದ ರೈತ ದಂಗೆ ರೈತ ಹೋರಾಟಕ್ಕೆ ಒಂದು ಹೊಸ ನೆಲೆಯನ್ನು ಒದಗಿಸಿತಲ್ಲದೆ ರೈತ ಸಮುದಾಯದಲ್ಲಿ ನಿರೀಕ್ಷೆಗೆ ಮೀರಿದ ಸಂಚಲನವನ್ನು ಮೂಡಿಸಿತ್ತು. ನೀರಿಗಾಗಿ ನಡೆದ ರೈತ ಚಳವಳಿಯಲ್ಲಿ ರೈತರ ಮೇಲೆ ಗುಂಡು ಹಾರಿಸಲಾಯಿತು. ಇಬ್ಬರು ರೈತರು ಗೋಲಿಬಾರ್ ನಲ್ಲಿ ಮೃತಪಟ್ಟಾಗ ಅದು ಹಿಂಸೆಗೆ ತಿರುಗಿತು. ಹಿಂಸೆಯಲ್ಲಿ ಸರ್ಕಾರಿ ಅಧಿಕಾರಿ ಕೂಡಾ ಸಾವಿಗೀಡಾಗುತ್ತಾರೆ. ಈ ಪ್ರಕರಣದಿಂದಾಗಿ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ಕಳೆದುಕೊಳ್ಳುತ್ತದೆ. ರಾಜ್ಯದಾದ್ಯಂತ ರೈತ ಸಂಘಟನೆ ಸಕ್ರಿಯವಾಗುತ್ತದೆ. ಪ್ರೊಫೆಸರ್ ನಂಜುಂಡ ಸ್ವಾಮಿಯವರು ರೈತ ಸಂಘದ ಅಧ್ಯಕ್ಷರಾದ ನಂತರ ರೈತ ಚಳವಳಿ ಬಲಗೊಳ್ಳುತ್ತದೆ. ರೈತ ಸಂಘಟನೆಯಲ್ಲಿ ಕ್ರಮೇಣ ಜಾತಿಯತೆಯ ವಾಸನೆ ಹುಟ್ಟಿಕೊಳ್ಳುತ್ತದೆ. ಪುಟ್ಟಣ್ಣಯ್ಯ ನವರ ಬಣ ಪ್ರಬಲಗೊಳ್ಳುತ್ತದೆ. ನಂತರ ಕೋಡಿಹಳ್ಳಿ ಚಂದ್ರಶೇಖರ್.

ಪ್ರಸ್ತುತ ರೈತ ಸಂಘದ ಗತಿ ನೋಡಿದರೆ ಅಯ್ಯೋ ಅನ್ನಿಸುತ್ತದೆ. ರೈತ ಸಂಘದ ಅನೇಕ ನಾಯಕರು ಬೆಂಗಳೂರಿನಲ್ಲಿ ಝಾಂಡಾ ಹೂಡಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವವರಲ್ಲದೆ ರೈತ ಹೋರಾಟವನ್ನು ತಮ್ಮ ಸ್ವಾರ್ಥಕ್ಕೆ ಬಲಿಕೊಟ್ಟಿದ್ದಾರೆ. ರೈತರನ್ನು ಅಡ್ಡ ಇಟ್ಟುಕೊಂಡು ನೈತಿಕವಲ್ಲದ ಅನೇಕ ವ್ಯವಹಾರಗಳಲ್ಲಿ ನಿರಂತರವಾಗಿ ತೊಡಗಿದ್ದಾರೆ. ಜಿಲ್ಲೆ ಜಿಲ್ಲೆಗಳಲ್ಲಿ, ತಾಲೂಕು ತಾಲೂಕುಗಳಲ್ಲಿ ಇಂದು ರೈತ ಸಂಘಟನೆಗಳು ತಲೆ ಎತ್ತಿವೆ. ಒಂದಾನೊಂದು ಕಾಲದಲ್ಲಿ ರೈತ ನಾಯಕರುಗಳಿಗೆ ಎದುರುತ್ತಿದ್ದ ಎಲ್ಲಾ ಇಲಾಖೆಗಳ ಅಧಿಕಾರಿಶಾಹಿ ಇಂದು ಅದೇ ರೈತರೊಂದಿಗೆ ಕುಡಿಯುತ್ತಾರೆ, ತಿನ್ನುತ್ತಾರೆ. ರೈತ ಸಂಘಟನೆಗಳು ಕೂಡಾ ದಲಿತ ಸಂಘಟನೆಗಳ ದಾರಿಯನ್ನೇ ಹಿಡಿದುಬಿಟ್ಟವು. ಇವೊತ್ತು ನಗರದಲ್ಲೇ ಅಲ್ಲದೆ ತಾಲೂಕು ಮಟ್ಟದಲ್ಲಿ ಅನೇಕ ರೈತ ಮತ್ತು ದಲಿತ ನಾಯಕರು ಅಧಿಕಾರಿಶಾಹಿಯೊಂದಿಗೆ ಭ್ರಷ್ಟಾಚಾರದಲ್ಲಿ ಕೈ ಜೋಡಿಸಿದ್ದಾರೆ. ಮತ್ತೆ ಕೆಲವು ನಾಯಕರು ರಾಜಕೀಯ ಅಧಿಕಾರ ಪಡೆಯಲು ರಾಜಕಾರಣಿಗಳ ಚೇಲಾಗಳೂ ಆಗಿಬಿಟ್ಟಿದ್ದಾರೆ.

ಎಪ್ಪತ್ತು, ಎಂಬತ್ತರ ದಶಕದಲ್ಲಿ ಶಾಲಾ ಕಾಲೇಜು ವಿಧ್ಯಾರ್ಥಿಗಳು, ವಿಶ್ವವಿದ್ಯಾಲಯದ ಅಧ್ಯಾಪಕರುಗಳು, ಕೈಗಾರಿಕಾ ಕಾರ್ಮಿಕರೇ ಅಲ್ಲದೆ ಸಾಮಾನ್ಯ ಜನತೆ ಕೂಡಾ ಸ್ವಯಂ ಪ್ರೇರಿತರಾಗಿ ಚಳವಳಿಗಳಲ್ಲಿ ಪಾಲ್ಗೊಳ್ಳುತ್ತಿದ್ದದ್ದನ್ನು ನಾನು ಕಣ್ತುಂಬಿಸಿಕೊಂಡವನು ಮತ್ತು ಸ್ವತಃ ಅಂಥ ಚಳವಳಿಗಳಲ್ಲಿ ಹೈಸ್ಕೂಲು ವಿಧ್ಯಾರ್ಥಿಯಾಗಿದ್ದಾಗಿನಿಂದಲೂ ಪಾಲ್ಗೊಂಡವನೇ ಆಗಿದ್ದೇನೆ.

ಎಮರ್ಜೆನ್ಸಿಯಲ್ಲಿ ಸರ್ಕಾರದ ವಿರುದ್ಧ ಪಾಂಪ್ಲೇಟ್ಗಳನ್ನು ಹಂಚುವಾಗ ಸಿಕ್ಕಿಬಿದ್ದು ಮಫ್ತಿ ಪೊಲೀಸರಿಂದ ಪಿರ್ರೆಗಳ ಮೇಲೆ ಹೊಡೆಸಿಕೊಂಡ ಪೆಟ್ಟು ಈಗಲೂ ಚುರ್ ಅನ್ನುತ್ತಿದೆ. ಗೋಕಾಕ್ ಚಳವಳಿಯಲ್ಲಿ ಕನ್ನಡ ವಿರೋಧಿ ಹೋಟೆಲ್ ಮಾಲೀಕನ ಮೇಲೆ ಸೇಡು ತೀರಿಸಿಕೊಳ್ಳಲೆಂದು ಕೆಂಪೇಗೌಡ ರಸ್ತೆಯಲ್ಲಿದ್ದ ಹೋಟೆಲ್ ( ಹರಿರಾಮ್ ಹೋಟೆಲ್ ) ಮೇಲೆ ಕಲ್ಲು ಎಸೆಯುವಾಗ ಪೊಲೀಸರು ಬಾರಿಸಿದ ಲಾಟಿಯಿಂದ ಆದ ಗಾಯದ ಗುರುತು ಈಗಲೂ ನನ್ನ ಬಲಗೈ ಮೇಲೆ ಮಸುಕು ಮಸುಕಾಗಿದೆ. ಹಾಗೆಯೇ ಎಲ್ಲಾ ಜನಪರ ಹೋರಾಟ ಮತ್ತು ಚಳವಳಿಗಳು ಕೂಡಾ ಮಸುಕಾಗುತ್ತಿವೆ. ಈ ಎಲ್ಲಾ ಚಳವಳಿಗಳು ಶಕ್ತಿ ತುಂಬಿಕೊಂಡು ಒಂದು ಪ್ರಾಮಾಣಿಕ ಮತ್ತು ನೈತಿಕ ನೆಲೆಯಲ್ಲಿ ಮತ್ತೆ ಉಸಿರು ಹೊಯ್ದುಕೊಳ್ಳುತ್ತವೆಂಬ ಯಾವ ನಂಬಿಕೆಯೂ ಉಳಿದಿಲ್ಲ.

*