ಒಂದು ಗಳಿಗೆ -Kuchangi prasanna 190 ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದ ಜಿಲ್ಲೆಯ ಕುರಿತು…,
ಒಂದು ಗಳಿಗೆ -Kuchangi prasanna 190 ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದ ಜಿಲ್ಲೆಯ ಕುರಿತು…,
ಒಂದು ಗಳಿಗೆ
-Kuchangi prasanna
190 ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದ ಜಿಲ್ಲೆಯ ಕುರಿತು…,
ಹತ್ತು ತಾಲೂಕುಗಳ, ಹತ್ತೂವರೆ ಸಾವಿರ ಚದರ ಕಿಲೋ ಮೀಟರ್ ವಿಸ್ತೀರ್ಣದ ಇವತ್ತು ನಾವು ತುಮಕೂರು ಎಂದು ಕರೆಯುತ್ತಿರುವ ಜಿಲ್ಲೆ ಹುಟ್ಟಿ 190 ವರ್ಷಗಳಾಗಿವೆ. ಬ್ರಿಟಿಷರ ಆಡಳಿತದ ದಿನಗಳವು, ಮೈಸೂರಿನ ಕಮೀಶನರ್ ಆಗಿದ್ದ ಸರ್ ಮಾರ್ಕ್ ಕಬ್ಬನ್ 1832ರಲ್ಲಿ ಚಿತ್ರದುರ್ಗ ವಿಭಾಗಕ್ಕೆ ಲಗತ್ತಾದಂತೆ ತುಮಕೂರು ಜಿಲ್ಲೆಯನ್ನು ಸೃಜಿಸಿದ ಎಂದು ಆಧುನಿಕ ಇತಿಹಾಸ ಹೇಳುತ್ತದೆ. ಮೇಜರ್ ಜನರಲ್ ರಿಚರ್ಡ್ ಸ್ಟೂವರ್ಟ್ ಡಾಬ್ಸ್ ತುಮಕೂರು ಜಿಲ್ಲೆಯ ಮೊಟ್ಟ ಮೊದಲ ಡಿಸ್ಟ್ರಿಕ್ಟ್ ಕಲೆಕ್ಟರ್, 1835ರಿಂದ 1861ರವರೆಗೆ ಈತ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ. ಈಗ ಶಿರಾ ಗೇಟಿನಲ್ಲಿರುವ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಹೆಸರೂ ಡಾಬ್ಸ್ ಬಂಗಲೆ ಅಂತಾನೇ ಗೊತ್ತಾ. ಡಾಬ್ಸ್ ಪೇಟೆ ಕೂಡಾ ಈತನ ಹೆಸರಿನಲ್ಲೇ ರೂಪುಗೊಂಡಿರುವ ಊರು. ಅದಿರಲಿ.
1862ರಲ್ಲಿ ಲೆವಿನ್ ಬೆಂಥಾಮ್ ಬೌರಿಂಗ್ ತುಮಕೂರನ್ನು ಚಿತ್ರದುರ್ಗ ವಿಭಾಗದಲ್ಲಿ ಪ್ರತ್ಯೇಕಿಸಿ ಸ್ವತಂತ್ರ ಜಿಲ್ಲೆ ಎಂದು ಆದೇಶಿಸಿದ. ಇಂತಾ ತುಮಕೂರು ಜಿಲ್ಲೆಯ ಹತ್ತು ತಾಲೂಕುಗಳ ಪೈಕಿ ಪಾವಗಡ ಯಾವ ರೀತಿಯಲ್ಲೂ ಜಿಲ್ಲೆಗೆ ಭೂಸಂಪರ್ಕ ಹೊಂದೇ ಇಲ್ಲ ಎಂದರೆ ಅಚ್ಚರಿ ಎನಿಸುವುದಿಲ್ಲವೇ. ಮಧುಗಿರಿ ದಾಟಿದ ಬಳಿಕ ಆಂಧ್ರ ಪ್ರದೇಶದ ಮಡಕಸಿರಾ ಮೂಲಕ ಪಾವಗಡ ತಲುಪಬೇಕು. ಜಿಲ್ಲಾ ಕೇಂದ್ರಕ್ಕೆ ಸರಿಯಾಗಿ 100 ಕಿಲೋಮೀಟರ್ ದೂರದಲ್ಲಿದೆ. ರಾಜ್ಯದ ಇತರ ಎಲ್ಲ ಜಿಲ್ಲೆಗಳಲ್ಲೂ ತಾಲೂಕು ಕೇಂದ್ರಗಳು 20-30 ಕಿಮೀ ದೂರದಲ್ಲಿದ್ದರೆ, ತುಮಕೂರು ಜಿಲ್ಲೆಯಲ್ಲಿ ಮಾತ್ರ ತಿಪಟೂರು , ತುರುವೇಕೆರೆ, ಚಿಕ್ಕನಾಯಕನಹಳ್ಳಿಗಳು 60-70 ಕಿಲೋ ಮೀಟರ್ ಗಳಷ್ಟು ದೂರದಲ್ಲಿವೆ. ಹೀಗಾಗಿ ಈ ಜಿಲ್ಲೆಯಲ್ಲಿ ಸಮರ್ಥ ಆಳ್ವಿಕೆ ಮಾಡುವ ಜಿಲ್ಲಾಧಿಕಾರಿಗಳು ತುಸು ಗಟ್ಟಿತನವನ್ನೂ ಹೊಂದಿರಬೇಕಾಗುತ್ತದೆ. ಮೂರು ಲೋಕಸಭಾ ಕ್ಷೇತ್ರಗಳು ಹಾಗೂ ಹನ್ನೊಂದು ವಿಧಾನ ಸಭಾ ಕ್ಷೇತ್ರಗಳಲ್ಲಿ ತುಮಕೂರು ಜಿಲ್ಲೆ ಹರಡಿಕೊಂಡಿದೆ. ಹನ್ನೊಂದು ವಿಧಾನ ಸಭಾ ಕ್ಷೇತ್ರಗಳ ಪೈಕಿ ಪಾವಗಡ ಮತ್ತು ಕೊರಟಗೆರೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿರುವ ಕ್ಷೇತ್ರಗಳು. ಶಿರಾ ಮತ್ತು ಪಾವಗಡ ತಾಲೂಕುಗಳನ್ನು ಸೇರಿಸಿಕೊಂಡಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರವೂ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಸದ್ಯದ ತುಮಕೂರು ಜಿಲ್ಲೆಯ ಜನಸಂಖ್ಯೆ ಸುಮಾರು 28 ಲಕ್ಷ.
ಉತ್ತರ ದಕ್ಷಿಣವಾಗಿ ನಾಲ್ಕು ಸಾವಿರ ಅಡಿಗೂ ಎತ್ತರದಲ್ಲಿ ಸಾಗಿರುವ ಬೆಟ್ಟ ಶ್ರೇಣಿಗಳು ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಕಾವೇರಿ ನದಿ ಕಣಿವೆಗಳನ್ನು ರೂಪಿಸಿವೆ. ಇತ್ತೀಚೆಗೆ ಕೊರಟಗೆರೆ, ಮಧುಗಿರಿ ತಾಲೂಕುಗಳಲ್ಲಿ ಮೈದುಂಬಿ ಹರಿದ ಜಯಮಂಗಲಿ ಮತ್ತು ದಕ್ಷಿಣದಲ್ಲಿ ಗುಬ್ಬಿ-ತುರುವೇಕೆರೆ ತಾಲೂಕಿನಲ್ಲಿ ರೂಪುಗೊಳ್ಳುವ ಶಿಂಷಾ ಜಿಲ್ಲೆಯ ಎರಡು ಮುಖ್ಯ ಜೀವದಾಯಿ ನದಿಗಳು.
ಹತ್ತನೇ ಶತಮಾನದ ಆರಂಭದ ವರ್ಷಗಳಲ್ಲಿ ಗಂಗರು ಈ ಭೂಪ್ರದೇಶವನ್ನು ಆಳಿದ್ದಾರೆ, ನಂತರ ರಾಷ್ಟ್ರಕೂಟರು, ಚಾಲುಕ್ಯರು, ಬಹು ದೀರ್ಘಾವಧಿಗೆ ನೊಳಂಬರು, ಒಂದಷ್ಟು ಪ್ರದೇಶಗಳನ್ನು ಚೋಳರೂ ಸಹ ಆಳಿದ್ದಾರೆ. ಅಲ್ಲದೆ ತುಮಕೂರು ಜಿಲ್ಲಾ ಪ್ರದೇಶವು 13ರಿಂದ 17ನೇ ಶತಮಾನದವರೆಗೂ ವಿಜಯ ನಗರ ಸಾಮ್ರಾಜ್ಯದ ಭಾಗವಾಗಿ ಬಿಟ್ಟಿತ್ತು. 18-19ನೇ ಶತಮಾನದಲ್ಲಿ ಮೈಸೂರು ಅರಸರು ನಮ್ಮ ಜಿಲ್ಲೆಯನ್ನು ಆಳಿದರು. ಈ ನಡುವೆ ತುಸು ಅವಧಿಗೆ ಹೈದರಾಲಿ -ಟಿಪ್ಪೂ ಕೂಡಾ ಇದ್ದರು, ಹೆಸರು ಮೈಸೂರು ಅರಸರದೇ ಆಗಿದ್ದರೂ ರೆಸಿಡೆಂಟ್ ಕಮೀಶನರ್ ಗಳ ರೂಪದಲ್ಲಿ ಬ್ರಿಟಿಷರು ಆಳ್ವಿಕೆ ನಡೆಸಿದರು ಎನ್ನುವುದೂ ವಾಸ್ತವ ಸಂಗತಿಯೇ ಸರಿ.
ಈ ಅವಧಿಯಲ್ಲಿ 1916ರಲ್ಲಿ ತುಮಕೂರು ಪುರಸಭೆ ಅಸ್ತಿತ್ವಕ್ಕೆ ಬಂತು. ತುಮಕೂರಿನ ನಾಗರಿಕರು ಈ ಪುರಸಭೆಯನ್ನು ನಡೆಸಿದರು. ಆಮೇಲೆ ನಗರ ಸಭೆ ಆಯಿತು, 12 ವರ್ಷಗಳ ಹಿಂದೆ ತುಮಕೂರು ಮಹಾನಗರಪಾಲಿಕೆಯಾಗಿ ರೂಪುಗೊಂಡಿತು. ಸದ್ಯಕ್ಕೆ ತುಮಕೂರು ನಗರದಲ್ಲಿ ಮೂರು ಲಕ್ಷ ಜನ ವಾಸವಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಯಡಿ ಒಂದು ಸಾವಿರ ಕೋಟಿ ಹಣ ಪಡೆದರೂ ತುಮಕೂರು ಮಧ್ಯಮ ಗಾತ್ರದ ನಗರ ಮಾತ್ರ.
ಈ ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮುಖ್ಯವಾಗಿ ವ್ಯಾಪಾರಸ‍್ಥರು, ಸರ್ಕಾರಿ ನೌಕರರು, ಸಣ್ಣ ಪುಟ್ಟ ಕೈಗಾರಿಕೋದ್ಯಮಿಗಳು, ಸ್ವಯಂ ಉದ್ಯೋಗಸ್ಥರೇ ಹೆಚ್ಚು ಇರುವ ತುಮಕೂರಿನ ಜನರು ವರ್ಷಕ್ಕೆ ಸುಮಾರು 80-100 ಕೋಟಿ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ ನೆನಪಿರಲಿ.
ಇಂಥಾ ತುಮಕೂರು ಜಿಲ್ಲೆಯ ಬಸ್ಸು ತಲುಪದ ಊರೊಂದರಲ್ಲಿ ಹುಟ್ಟಿ, ಹೋಬಳಿ ಮಟ್ಟದ ದೊಡ್ಡ ಊರೊಂದರಲ್ಲಿ ಬೆಳೆದು, ಇಂಜಿನಿಯರಿಂಗ್ ಓದಿ, ರಾಜಧಾನಿ ಸೇರಿ, ವಿಮಾನಗಳು ಮತ್ತು ರಾಕೆಟ್‍ಗಳಿಗೆ ಬಿಡಿಭಾಗಗಳನ್ನು ತಯಾರಿಸುವ ಕಾರ್ಖಾನೆಯೊಂದನ್ನು ಸ್ಥಾಪಿಸಿ, ವಾರ್ಷಿಕ ಕೋಟಿಗಟ್ಟಲೆ ಮೊತ್ತದ ಉಪಕರಣಗಳನ್ನು ರಫ್ತು ಮಾಡುತ್ತಾ, ಶ್ರೇಷ್ಟ ಉದ್ಯಮಿ ಎಂಬ ರಾಷ್ಟ್ರ ಪ್ರಶಸ್ತಿಯನ್ನು ಖುದ್ದು ರಾಷ್ಟ್ರಪತಿಯವರಿಂದ ಸ್ವೀಕರಿಸಿರುವ ನನ್ನ ಗೆಳೆಯನೊಬ್ಬ ಜಿಲ್ಲೆಯ ರಾಜಕಾರಣದಲ್ಲಿ ನೆಲೆ ಕಾಣಲು ಹೆಣಗಾಡುತ್ತಿದ್ದಾನೆ.
ಇದಿಷ್ಟೇ ಅಲ್ಲದೇ ಕಾಲೇಜು ದಿನಗಳಿಂದಲೇ ಸಾಮಾಜಿಕ ಪರಿವರ್ತನೆಯನ್ನೂ ಜೀವನದ ನಡೆಯನ್ನಾಗಿ ಮಾಡಿಕೊಂಡು, ಜಾತಿ ರಹಿತ ಮದುವೆಯಾಗಿ ಜಾತಿ ವಿನಾಶದತ್ತ ಒಂದು ಹೆಜ್ಜೆ ಇಟ್ಟವನಾಗಿ, ಸಕ್ರಿಯ ರಾಜಕಾರಣದಲ್ಲಿ ತೀವ್ರ ಆಸಕ್ತಿ ಹೊಂದಿದ್ದರೂ, ಚುನಾವಣೆಯೊಂದು ಘೋಷಣೆಯಾದಲ್ಲಿ, ಕಣಕ್ಕಿಳಿಯುವ ಅಭ್ಯರ್ಥಿಗಳ ಹೆಸರು ಕೇಳುತ್ತಲೇ ಇವರೇ ಗೆಲ್ಲುತ್ತಾರೆ ಎಂಬುದನ್ನು ಖರಾರುವಕ್ಕಾಗಿ ಅಂದಾಜು ಮಾಡಬಲ್ಲ ಈ ನನ್ನ ಗೆಳೆಯನಿಗೆ ತುಮಕೂರು ಜಿಲ್ಲೆಯ ಪಕ್ಷ ರಾಜಕೀಯ ವ್ಯವಸ್ಥೆಯಲ್ಲಿ ಒಂದು ಸ್ಪಷ್ಟ ನೆಲೆ ಕಂಡುಕೊಳ್ಳಲು ಆಗುತ್ತಿಲ್ಲ.
ಐದಾರು ವರ್ಷಗಳ ಹಿಂದೆ ಅಧಿಕೃತವಾಗಿ ರಾಜಕೀಯ ಚಟುವಟಿಕೆ ಆರಂಭಿಸಿದ ಈ ನನ್ನ ಗೆಳೆಯನಿಗೆ ತಾನು ಮೊದಲ ಹೆಜ್ಜೆಗಳನ್ನು ಇರಿಸಿದ ರಾಜಕೀಯ ಪಕ್ಷ ಸೆಕ್ಯುಲರ್ ಅಲ್ಲ ಎನ್ನಿಸಿ, ಬುದ್ದಿ ಜೀವಿ, ಸಮಾಜವಾದಿ ಗೆಳೆಯರೊಂದಿಗೆ ಸಮಾಲೋಚನೆ ನಡೆಸಿ, ರಾಷ್ಟ್ರೀಯ ಪಕ್ಷವೊಂದಕ್ಕೆ ಸೇರ್ಪಡೆಯಾದ, ಸ್ವತಂತ್ರ ಇಂಡಿಯಾದಷ್ಟೇ ಸುದೀರ್ಘ ಇತಿಹಾಸವುಳ್ಳ, ಈ ನೆಲದ ಸಾಮಾಜಿಕ ಸಂರಚನೆಯನ್ನು ಅರ್ಥ ಮಾಡಿಕೊಂಡಿರುವ, ತುಳಿತಕ್ಕೊಳಗಾದ ಜನರ ಪರವಾಗಿರುವ ಸುವ್ಯವಸ್ಥಿತ ರಾಜಕೀಯ ಸಂಘಟನೆ ಎನ್ನುವುದೇ ಆ ಪಕ್ಷದ ಹೆಗ್ಗಳಿಕೆ. ಇಂತಾ ರಾಜಕೀಯ ಪಕ್ಷದ ಸಕ್ರಿಯ ಪದಾಧಿಕಾರಿಯಾಗಿಯಾದರೂ ತನ್ನನ್ನು ಗುರುತಿಸಬೇಕಿತ್ತು ಎನ್ನುವುದು ಈತನ ಅಳಲು, ಸರಿಸುಮಾರು ಈತನೊಂದಿಗೇ ಇಂತದ್ದೇ ರಾಜಕೀಯ ಉದ್ದೇಶ ಹೊಂದಿ ಇದೇ ರಾಜಕೀಯ ಪಕ್ಷ ಸೇರಿರುವ ನನ್ನ ಮತ್ತೊಬ್ಬಳು ಗೆಳತಿಯ ಅಳಲೂ ಇದೇ ಆಗಿದೆ. ಈಕೆ ವೃತ್ತಿಯಲ್ಲಿ ವೈದ್ಯೆ ಕೂಡಾ.
ಇಂಜಿನಿಯರ್ ಗೆಳೆಯನಾದರೋ ಶಾಸಕನಾಗಬೇಕೆಂಬ ದೊಡ್ಡ ಹಂಬಲ ಹೊಂದಿದ್ದಾನೆ, ಆದರೆ ಈಕೆಗೆ ತಾನು ವಾಸವಿರುವ ವಾರ್ಡಿನ ಕಾರ್ಪೊರೇಟರ್ ಆದರೆ ಸಾಕು ಎನ್ನುವಷ್ಟು ಅಲ್ಪ ತೃಪ್ತಿ, ಆದರೆ ಅಂಥ ಪುಟ್ಟ ಆಸೆಯೂ ಕೈಗೂಡಲಿಲ್ಲ.
ಇದು ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ಸ್ಥಿತಿಯಾದರೆ, ಇತ್ತ ದಿಲ್ಲಿ ಮತ್ತು ಇಲ್ಲಿ ಎರಡೂ ಕಡೆ ರಾಜಕೀಯ ಅಧಿಕಾರವನ್ನು ಹೊಂದಿರುವ ಶತಮಾನದ ಸಾಂಘಿಕ ಸಂರಚನೆಯ ಹಿನ್ನೆಲೆಯುಳ್ಳ, ಸುದೀರ್ಘ ಅವಧಿಗೆ ವಿರೋಧ ಪಕ್ಷವಾಗೇ ಇದ್ದ ಈ ರಾಜಕೀಯ ಪಕ್ಷಕ್ಕೆ ಆಡಳಿತ ನಡೆಸುವುದೇ ದೊಡ್ಡ ಸವಾಲಾಗಿಬಿಟ್ಟಿದೆ.
ಈ ಪಕ್ಷದಲ್ಲೂ ನನ್ನ ಗೆಳೆಯನ ವೈದ್ಯ ಸೋದರನೊಬ್ಬರಾಜಕೀಯ ಮಹತ್ವಾಕಾಂಕ್ಷೆ ಹೊಂದಿ ವರ್ಷಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದಾನೆ. ರಾಷ್ಟ್ರೀಯ ಹಾಗೂ ರಾಜ್ಯಮಟ್ಟದಲ್ಲಿ ವೈದ್ಯ ಸಂಘಟನೆಗಳೊಂದಿಗೆ ಗುರುತಿಸಿಕೊಂಡು, ಕೇಂದ್ರದಲ್ಲಿ ಸಚಿವರೊಬ್ಬರ ಆಪ್ತರಾಗಿದ್ದರೂ ಕಳೆದ ಚುನಾವಣೆಯಲ್ಲಿ ವಿಧಾನ ಸಭೆಗೆ ಟಿಕೆಟ್ ಪಡೆಯಲಾಗಲಿಲ್ಲ. ನನಗೆ ಟಿಕೆಟ್ ಕೊಡಿ ಎಂದು ಗಟ್ಟಿ ದನಿಯಲ್ಲಿ ಕೇಳುವ ಪರಿಸ್ಥಿತಿಯೂ ಆ ಪಕ್ಷದಲ್ಲಿಲ್ಲ.
ಈ ಮೂವರೂ ಆರ್ಥಿಕವಾಗಿ ಸ್ಥಿತಿವಂತರಾಗಿದ್ದಾರೆ, ಶೈಕ್ಷಣಿಕವಾಗಿ ಉನ್ನತ ಹಂತದಲ್ಲಿದ್ದಾರೆ, ಸಾಮಾಜಿಕ ಬದಲಾವಣೆಗೆ ನೈಜ ತುಡಿತವಿದೆ, ರಾಜಕೀಯ ಸ್ಪಷ್ಟತೆಯಿದೆ. ಆದರೂ ಇವರಿಂದ ಸಕ್ರಿಯ ರಾಜಕಾರಣ ಮಾಡಲು ಮತ್ತು ತಂತಮ್ಮ ರಾಜಕೀಯ ಪಕ್ಷಗಳ ಪರಿಧಿಯಲ್ಲಿ ತಮ್ಮ ಹಕ್ಕುಗಳನ್ನು ದಿಟ್ಟವಾಗಿ ದನಿ ಎತ್ತಿ ಕೇಳಲು ಆಗುತ್ತಿಲ್ಲ.
ಮತ್ತೊಬ್ಬ ವೈದ್ಯ ಗೆಳೆಯ ಇಂಥದ್ದೇ ಸಾಮಾಜಿಕ ಸನ್ನಿವೇಶದಲ್ಲಿ ಬೆಳೆದು ಬಂದವ, ಸರ್ಕಾರಿ ಸೇವೆಗೆ ಸೇರಿದ, ಒಂದಷ್ಟು ವರ್ಷದ ಬಳಿಕ ಸ್ವಂತದ ಆಸ್ಪತ್ರೆಯನ್ನೂ ಮಾಡಿಕೊಂಡ, ಮಕ್ಕಳನ್ನೂ ವೈದ್ಯರನ್ನಾಗಿ ಮಾಡಿದ, ಈತನೊಳಗೂ ರಾಜಕೀಯ ಮಹತ್ವಾಕಾಂಕ್ಷೆ ಚಿಕ್ಕಂದಿನಿಂದಲೇ ಉಸಿರಾಡುತ್ತಿದೆ. ಆದರೆ ಈತ ಮೇಲಿನ ಮೂವರಿಗಿಂತ ತುಸು ಜಾಣ, ಹಣ, ಮದ್ಯ ಹಂಚಿ ಮಾಡುವ ರಾಜಕೀಯ ನನ್ನದಲ್ಲ ಎನ್ನುತ್ತ ಸುಮ್ಮನೆ ನಿವೃತ್ತಿಯ ದಿನಗಳನ್ನು ಕಳೆಯುತ್ತಿದ್ದಾನೆ.
ಈ ನಾಲ್ವರೂ ಗೆಳೆಯರು ಈ ದೇಶದ ಜಾತಿ ಪದ್ಧತಿಯಲ್ಲಿ ಅತ್ಯಂಕ ಕೆಳ ಸ್ತರ ಎಂದು ಪರಿಗಣಿಸಿರುವ ಅಸ್ಪೃಶ್ಯ ಜಾತಿಯಲ್ಲಿ ಜನಿಸಿರುವುದೇ ಇವರು ರಾಜಕಾರಣದಲ್ಲಿ ಏಳಿಗೆ ಕಾಣಲು ಕಾರಣವಲ್ಲ ಎಂದರೆ ನಿಮ್ಮಲ್ಲಿ ಬಹಳಷ್ಟು ಜನ ಒಪ್ಪುವುದಿಲ್ಲ ಅಂತ ನನಗೆ ಗೊತ್ತು. ಹಂಗಂತ ಮೇಲ್ಜಾತಿಗಳಲ್ಲಿ ಹುಟ್ಟಿದವರೆಲ್ಲರೂ ರಾಜಕಾರಣದಲ್ಲಿ ಯಶಸ್ಸು ಕಂಡಿದ್ದಾರೆಯೇ ಎಂಬ ಪ್ರಶ್ನೆಗೂ ಇಲ್ಲ ಎಂಬ ಉತ್ತರವನ್ನೇ ನೀಡಬೇಕಾಗುತ್ತದೆ.
ಮತ್ತೊಬ್ಬ ಗೆಳೆಯ ರಾಜಧಾನಿಯಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಪಾಠ ಮಾಡುವಷ್ಟು ಮೇಧಾವಿ, ನ್ಯಾಯವಾದಿಯಾಗಿ ಸ್ವಂತದ ಕಚೇರಿ, ಸಾಕಷ್ಟು ಜೂನಿಯರ್ ಗಳು ಮತ್ತು ಕಕ್ಷಿದಾರರನ್ನು ಹೊಂದಿರುವಾತ, ಈತ ಸಾಮಾಜಿಕವಾಗಿ ಮೇಲುಸ್ತರದ ಜಾತಿಗೆ ಸೇರಿದ್ದರೂ, ಕೌಟುಂಬಿಕವಾಗಿ ರಾಜಕೀಯ ಹಿನ್ನೆಲೆ ಹೊಂದಿದ್ದರೂ ಈತನ ಜಾತಿಯವರೇ ನಿರ್ಣಾಯಕ ಸಂಖ್ಯೆಯಲ್ಲಿರುವ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ್ದರೂ, ಈತನ ಸಜ್ಜನಿಕೆಯ ರಾಜಕಾರಣ ವಿಧಾನವು ಟಿಕೆಟ್ ಪಡೆಯಲು ಅನುವು ಮಾಡಿಕೊಡುತ್ತಿಲ್ಲ.
ಹಾಗಿದ್ದರೆ, ಹತ್ತು ಪರ್ಸೆಂಟ್ ಮುಸ್ಲಿಮರಿರುವ ಉಳಿದಂತೆ ಎಪ್ಪತ್ತೈದು ಪರ್ಸೆಂಟ್ ಹಿಂದುಳಿದ ಜಾತಿಗಳವರು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರೇ ಇದ್ದರೂ ತುಮಕೂರು ಜಿಲ್ಲೆ ಲಿಂಗಾಯಿತರು ಹಾಗೂ ಒಕ್ಕಲಿಗರ ಪರಂಪರಾಗತ ರಾಜಕೀಯ ನೆಲೆ ಎಂಬುದಾಗೇ ಬಿಂಬಿಸಿಕೊಳ್ಳುತ್ತ ಬಂದಿದೆ.
ಸ್ವಾತಂತ್ರ್ಯಾನಂತರದ ಮೊದಲ ಚುನಾವಣೆಯಲ್ಲಿ ತುಮಕೂರು ವಿಧಾನ ಸಭಾ ಕ್ಷೇತ್ರದಿಂದ ರಾಮರಾವ್ ಎಂಬ ಬ್ರಾಹ್ಮಣರೊಬ್ಬರು ಶಾಸಕರಾಗಿ ಚುನಾಯಿತರಾಗಿದ್ದರು, ಅವರು ಸಚಿವರೂ ಆಗಿದ್ದರು ಎಂಬುದು ಇತಿಹಾಸ. ಕಾಂಗ್ರೆಸ್ ಪ್ರಾಧಾನ್ಯವಾಗಿದ್ದಾಗ ಕೆಲವು ಮುಸ್ಲಿಮರು ಶಾಸಕರಾಗಿ ಆಯ್ಕೆಯಾದರು. ಬಿಜೆಪಿ ನೆಲೆ ಕಂಡುಕೊಂಡ ಮೇಲೆ ಹಿಂದೂ ಭಾವುಕತನವನ್ನು ತುಂಬಿ ನಾಲ್ಕೈದು ಅವಧಿಗೆ ಲಿಂಗಾಯಿತರು ಇಲ್ಲಿ ಆಯ್ಕೆಯಾಗುತ್ತ ಬಂದಿದ್ದಾರೆ. ತುಮಕೂರಿನ ನಂತರ ತಿಪಟೂರು ಬ್ರಾಹ್ಮಣರನ್ನು ಶಾಸಕರನ್ನಾಗಿ ಚುನಾಯಿಸಿದೆ. ಅವರನ್ನು ಬಿಟ್ಟರೆ ಲಿಂಗಾಯಿತರು ಮಾತ್ರವೇ ಗೆಲ್ಲುವುದು ಎಂದು ಅಲ್ಲಿ ನಂಬಿಸಲಾಗಿದೆ.
ಕುಣಿಗಲ್ ಮತ್ತು ತುರುವೇಕೆರೆ ಹಾಗೂ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರಗಳು ಒಕ್ಕಲಿಗರನ್ನು ಬಿಟ್ಟು ಇತರ ಜಾತಿಯವರು ಕಣಕ್ಕಿಳಿದರೂ ವ್ಯರ್ಥ ಎನ್ನುವಂತ ಮಾತು ಬಾಣದಂತೆ ಬರುತ್ತವೆ. ಗುಬ್ಬಿ ಕ್ಷೇತ್ರ ಹೇಳಿ ಕೇಳಿ ಲಿಂಗಾಯಿತರದು ಅಲ್ವಾ ಎನ್ನುತ್ತಾರೆ, ಆದರೂ ಅಲ್ಲಿ ಕಳೆದ ನಾಲ್ಕು ಅವಧಿಯಿಂದ ಒಕ್ಕಲಿಗರು ಗೆಲ್ಲುತ್ತ ಬಂದಿದ್ದಾರೆ.
ಶಿರಾ ಮತ್ತು ಮಧುಗಿರಿ ಮತ್ತದೇ ಒಕ್ಕಲಿಗರ ನೆಲೆ, ವಿಶೇಷ ಎಂದರೆ ಕುಂಚಿಟಿಗರ ಪ್ರಾಬಲ್ಯವಿರುವ ಕ್ಷೇತ್ರಗಳು , ಯಾವ ಪಕ್ಷವಾದರೂ ಅವರೇ ಗೆಲ್ಲಬೇಕು. ಇವರ ನಡುವೆ ಮಧುಗಿರಿ ಮೀಸಲು ಟ್ಯಾಗ್ ಕಳೆದುಕೊಂಡು ಸಾಮಾನ್ಯ ಕ್ಷೇತ್ರವಾದ ಮೇಲೂ ಅಲ್ಲಿ ಕೆ.ಎನ್.ರಾಜಣ್ಣನವರು ಅವರ ಜನಸಂಘಟಿಸುವ ಸ್ವ ಸಾಮರ್ಥ್ಯ ಹಾಗೂ ಸಹಕಾರ ರಂಗದ ಮೇಲಿರುವ ಹಿಡಿತದಿಂದಾಗಿ ಶಾಸಕರಾಗಿ ಚುನಾಯಿತರಾಗಿದ್ದು, ಬರುವ ಚುನಾವಣೆಯಲ್ಲೂ ಬಲ ಪರೀಕ್ಷೆಗೆ ಇಳಿದಿದ್ದಾರೆ.
ಹಂಗೂ ಹಿಂಗೂ ಹಿಂದುಳಿದವರಲ್ಲಿ ಪ್ರಬಲ ಸಂಖ್ಯೆಯಲ್ಲಿರುವ ಕುರುಬರು ಗೆಲ್ಲಲು ಸಾಧ್ಯವಾಗಿರುವುದು ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಮಾತ್ರವೇ. ಅದೂ ಸರದಿಯ ಮೇಲೆ, ಸುರೇಶ್ ಬಾಬು ಮತ್ತವರ ತಂದೆ ಹಾಗೂ ಬಿ.ಲಕ್ಕಪ್ಪ ಗೆದ್ದಿದ್ದರು. ಅವರ ನಂತರದ ಸರದಿ ಮತ್ತೆ ಲಿಂಗಾಯಿತರದೇ ಎನ್ನುವಂತೆ ಫಲಿತಾಂಶ ಹೊರಬೀಳುತ್ತದೆ.
ಜಿಲ್ಲೆಯ ಜನಸಂಖ್ಯೆಯಲ್ಲಿ ಒಂದು ಪರ್ಸೆಂಟ್ ಇರುವ ಲಂಬಾಣಿ ಹಾಗೂ ಅದಕ್ಕಿಂತ ಕಡಿಮೆ ಇರುವ ಬೋವಿಗಳು ಕ್ರಮವಾಗಿ ಕೊರಟಗೆರೆ ಹಾಗೂ ಪಾವಗಡಗಳಿಂದ ಗೆಲ್ಲುತ್ತ ಬಂದಿದ್ದಾರೆ. ಇಲ್ಲೂ ಸರದಿ ನಡೆದಿದೆ. ಅಚ್ಚರಿಯ ಸಂಗತಿ ಎಂದರೆ, ಕೊರಟಗೆರೆ ಮತ್ತು ಪಾವಗಡ ಎರಡೂ ಮೀಸಲು ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಗಳ ಪೈಕಿ ಗೆಲುವಿನ ನಿರ್ಣಾಯಕ ಸಂಖ್ಯೆಯಲ್ಲಿರುವುದು ಎಡಗೈ ಎಂದು ಕರೆಯುವ ಮಾದಿಗ ಸಮುದಾಯ. ಪಾವಗಡದಲ್ಲಿ ತಿಮ್ಮರಾಯಪ್ಪನವರನ್ನು ಬಿಟ್ಟರೆ ಇಡೀ ಜಿಲ್ಲೆಯ ಎಲ್ಲ ಹಳ್ಳಿಗಳಲ್ಲಿ ಸರ್ವೇ ಸಾಮಾನ್ಯವಾಗಿ ಅಸ್ತಿತ್ವದಲ್ಲಿರುವ ಮಾದಿಗರು ತುಮಕೂರು ಜಿಲ್ಲೆಯಲ್ಲಿ ರಾಜಕೀಯ ನಿರಾಶ‍್ರಿತರಂತಿರುವುದು, ಮತ್ತು ಯಾವ ರಾಜಕೀಯ ಪಕ್ಷವೂ ಕಾಲಕಾಲಕ್ಕೆ ಇವರ ಓಟನ್ನು ಸೆಳೆಯುವುದನ್ನು ಬಿಟ್ಟರೆ ಪಕ್ಷದ ಸಾಂಸ್ಥಿಕ ಸಂರಚನೆಯಲ್ಲಿ ನೆಲೆ ಕೊಡುವ ವಿಚಾರದಲ್ಲಿ ಗಂಭೀರವಾಗಿ ತೆಗೆದುಕೊಳ್ಳದೇ ಇರುವುದು ಈ ಸಮುದಾಯದ ರಾಜಕೀಯ ದೌರ್ಬಲ್ಯವಲ್ಲದೇ ಬೇರೇನೂ ಅಲ್ಲ.