ಗಾಂಧಿ ಜಯಂತಿಯ ಶುಭಾಶಯಗಳು
ಗಾಂಧಿ ಜಯಂತಿಯ ಶುಭಾಶಯಗಳು
ಕರಣಂ ರಮೇಶ್
ಮೋಹನದಾಸ ಕರಮಚಂದ್ ಗಾಂಧೀಜಿ ಮಹಾತ್ಮ ಎಂದೇ ಜನಜನಿತರಾದವರು. ರಾಷ್ಟ್ರಪಿತ ಎಂದೇ ಗೌರವಿಸಲ್ಪಡುವ ಗಾಂಧೀಜಿ ಪರದಾಸ್ಯದಿಂದ ಭಾರತವನ್ನು, ಭಾರತೀಯರನ್ನು ವಿಮುಕ್ತಿಗೊಳಿಸಿದವರು. ಸತ್ಯಾಗ್ರಹವೆಂಬ ದಿವ್ಯಾಸ್ತ್ರ ಹಿಡಿದು ಬ್ರಿಟೀಷರನ್ನು ಹಿಮ್ಮೆಟ್ಟಿಸಿದವರು. ಭಾರತವನ್ನಾಳುತ್ತಿದ್ದ ಇಂಗ್ಲೀಷರನ್ನೇ ಭಾರತ ಬಿಟ್ಟು ತೊಲಗಿ ಎಂದು ಘರ್ಜಿಸಿದವರು ಗಾಂಧೀಜಿ. ಉಪ್ಪಿನ ಸತ್ಯಾಗ್ರಹ, ಕರನಿರಾಕರಣೆ, ಅಸಹಕಾರ ಚಳವಳಿ, ಕಾಯಿದೆ ಭಂಗ ಹೋರಾಟಗಳಿಂದ ಜನರಲ್ಲಿ ಹೋರಾಟದ ಉತ್ಸಾಹ ತುಂಬಿದವರು. ಇಂದು ನಾವು ಕಾಣುತ್ತಿರುವ ಉಪವಾಸ ಸತ್ಯಾಗ್ರಹ, ಆಮರಣ ಉಪವಾಸಗಳಿಗೆ ಅಂದೇ ಮುನ್ನುಡಿ ಬರೆದವರು!
ಸ್ವಾತಂತ್ರ್ಯ ಚಳುವಳಿಯಲ್ಲಿ ಬಂಧನಕ್ಕೀಡಾದ ಲಕ್ಷಾಂತರ ಜನರ ಮುಂಚೂಣಿಯಲ್ಲಿ ನಿಂತು ಜೈಲು ಪಾಲಾದವರು ಗಾಂಧೀಜಿ. ಸರ್ವೋದಯ ಬಯಸಿದ್ದ ಮಹಾತ್ಮ ರಾಮರಾಜ್ಯ ಸ್ಥಾಪನೆಗಾಗಿ ಹಂಬಲಿಸಿದ್ದರು. ಮಹಾತ್ಮಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಿಂದ ಭಾರತ ದಾಸ್ಯ ಮುಗಿದು ಸ್ವತಂತ್ರ ರಾಷ್ಟ್ರವಾಯಿತು. ನಂತರದ ಬೆಳವಣಿಗೆಗಳಲ್ಲಿ ಅನಿವಾರ್ಯವಾಗಿ ರಾಷ್ಟ್ರ ವಿಭಜನೆಯಾಯಿತು. ೧೯೪೮ರ ಜನವರಿ ೩೦ರಂದು ಹಂತಕನೊಬ್ಬನ ಗುಂಡಿಗೆ ಬಲಿಯಾಗಿ ಅಮರರಾದರು ಗಾಂಧೀಜಿ.
ಗಾಂಧೀಜಿ ನಮ್ಮ ರಾಷ್ಟ್ರದ ಸಂಸ್ಕೃತಿಯ ಒಂದು ಭಾಗವೇ ಆಗಿಹೋಗಿದ್ದಾರೆ. ಬರೀ ಭಾರತಕ್ಕಷ್ಟೇ ಅಲ್ಲದೆ ಇಡೀ ವಿಶ್ವಕ್ಕೇ ಶಾಂತಿ ಮಂತ್ರ ಬೋಧಿಸಿದ ಮಹಾತ್ಮ ಗಾಂಧೀಜಿ ಅವರ ತತ್ವಾದರ್ಶಗಳ ಪಾಲನೆಗೆ ಹಲವು ರಾಷ್ಟ್ರಗಳು ಆದ್ಯತೆ ನೀಡಿವೆ. ಅಮೆರಿಕಾ ಅಧ್ಯಕ್ಷ ಬೈಡನ್ ಕೂಡಾ ಗಾಂಧೀಜಿಯವರ ಮಾತು, ಆದರ್ಶಗಳನ್ನು ಸ್ಮರಿಸುತ್ತಿರುವುದು ಅವರ ಶಕ್ತಿಯ ಸಂಕೇತ ಹಾಗೂ ಗಾಂಧೀಜಿಯವರ ತತ್ವಾದರ್ಶಗಳಿಗೆ ಸಿಕ್ಕುತ್ತಿರುವ ಮಾನ್ಯತೆ!
ಸ್ವಚ್ಛ ಭಾರತ್ ಅಭಿಯಾನ ಆರಂಭಗೊಂಡಿದ್ದೂ ಮಹಾತ್ಮನ ಜನ್ಮದಿನವಾದ ಅಕ್ಟೋಬರ್ ೨ ರಂದು. ಆ ಕಾರ್ಯಕ್ರಮದ ಲಾಂಛನವಾಗಿ ಬಳಕೆಯಾದದ್ದು ಮಹಾತ್ಮ ಗಾಂಧೀಜಿಯ ಕನ್ನಡಕ! ಅನೇಕ ವಿತಂಡವಾದ, ಹಲವಾರು ವಿಭಿನ್ನ ತರ್ಕಗಳಿಂದ ಮಹಾತ್ಮನನ್ನು ಜನರ ಮನಸಿನಿಂದ ಅಳಿಸಿಹಾಕುವ ವಿಫಲ ಪ್ರಯತ್ನಗಳ ನಡುವೆಯೂ ಮಹಾತ್ಮನನ್ನು ಪಕ್ಕಕ್ಕಿಟ್ಟು ಏನೂ ಮಾಡಲಾಗದಷ್ಟು ಆಳವಾಗಿ ಗಾಂಧೀಜಿ ರಾಷ್ಟçದ ಜನರ ಜನಮಾನಸದಲ್ಲಿ ನೆಲೆಯೂರಿದ್ದಾರೆ. ಇತಿಹಾಸವಿರುವವರೆಗೂ ಅಜರಾಮರಾಗಿರುತ್ತಾರೆ! ಎಲ್ಲರಿಗೂ ಮಹಾತ್ಮ ಗಾಂಧೀಜಿ ಜಯಂತಿಯ ಹಾರ್ದಿಕ ಶುಭಾಶಯಗಳು..