ಸರಗಳ್ಳತನ: ಕುಸಿದು ಬಿದ್ದ ಮಹಿಳೆ

ಸರಗಳ್ಳತನ: ಕುಸಿದು ಬಿದ್ದ ಮಹಿಳೆ

ತುಮಕೂರು: ಮೂತ್ರ ವಿಸರ್ಜನೆಗೆಂದು ರಸ್ತೆ ಬದಿ ಹಳ್ಳದ ಬಳಿ ಹೋದ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯದ ಸರವನ್ನು ಯಾರೋ ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದು, ಸರ ಕಿತ್ತ ರಭಸಕ್ಕೆ ಸದರಿ ಮಹಿಳೆ ಪ್ರಜ್ಞಾಹೀನರಾಗಿ ಕುಸಿದುಬಿದ್ದ ಘಟನೆ ಬೆಳಕಿಗೆ ಬಂದಿದೆ.

ತುಮಕೂರು ತಾಲ್ಲೂಕು ಭೈರಸಂದ್ರ ಬಳಿ ಸೆ. 28 ರಂದು ಬೆಳಗ್ಗೆ 11 ಗಂಟೆಯಲ್ಲಿ ಈ ಘಟನೆ ಜರುಗಿದೆ. ತುಮಕೂರು ನಗರದ ಶಿರಾಗೇಟ್ ನಿವಾಸಿ ನರಸಪ್ಪ ಎಂಬುವವರು ತಮ್ಮ ಪತ್ನಿ ಗಂಗಮ್ಮ (50) ಅವರೊಡನೆ ದ್ವಿಚಕ್ರ ವಾಹನದಲ್ಲಿ ತಮ್ಮ ಸ್ವಗ್ರಾಮ ಗೂಳೂರು ಹೋಬಳಿ ಕಮ್ಮಂಜಿಪಾಳ್ಯಕ್ಕೆ ಸೆ. 28 ರಂದು ತೆರಳುತ್ತಿದ್ದರು. ಭೈರಸಂದ್ರ ಬಳಿ ಹೋಗುವಾಗ ಇವರ ಪತ್ನಿ ಮೂತ್ರ ವಿಸರ್ಜನೆಗಾಗಿ ಇಳಿದು, ರಸ್ತೆ ಬದಿಯ ಹಳ್ಳವೊಂದರ ಬಳಿ ಹೋಗಿದ್ದಾರೆ. ಸುಮಾರು 15-20 ನಿಮಿಷಗಳಾದರೂ ಅವರು ವಾಪಸ್ ಬರದ ಹಿನ್ನೆಲೆಯಲ್ಲಿ ಪತಿ ನರಸಪ್ಪ ಗಾಬರಿಯಾದರು. ಅಷ್ಟರಲ್ಲಿ ಯಾರೋ ಮಹಿಳೆ ಆ ದಾರಿಯಾಗಿ ಬಂದವರು, ಹಳ್ಳದ ಬಳಿ ಮಹಿಳೆಯೊಬ್ಬರು ಒದ್ದಾಡುತ್ತಿದ್ದಾರೆಂದು ಹೇಳಿದರು. ತಕ್ಷಣ ಇವರು ಅಲ್ಲಿಗೆ ಹೋಗಿ ನೋಡಿದಾಗ ಇವರ ಪತ್ನಿ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಒಡನೆಯೇ ಅವರ ಮುಖಕ್ಕೆ ನೀರು ಚಿಮುಕಿಸಿ ಎಚ್ಚರಿಸಿದಾಗ, ಯಾರೋ ತಮಗೆ ಹಿಂದಿನಿAದ ಬಂದು ಕುತ್ತಿಗೆ ಹಿಡಿದಂತೆ ಆಯಿತು ಎಂದರು. ಬಳಿಕ ಕೊರಳಲ್ಲಿದ್ದ ಸರ ನೋಡಿಕೊಂಡಾಗ ಸರ ಇಲ್ಲದಿರುವುದು ಗಮನಕ್ಕೆ ಬಂತು. ಯಾರೋ ದುಷ್ಕರ್ಮಿಗಳು ಇವರ ಕೊರಳಲ್ಲಿದ್ದ ಅಂಜಲಿ ಡಿಸೈನ್‌ನ ತಾಳಿ, ಎರಡು ಚಿನ್ನದ ಗುಂಡುಗಳು ಇದ್ದ ಚಿನ್ನದ ಸರವನ್ನು ಕದ್ದೊಯ್ದಿರುವುದು ತಿಳಿದುಬಂದಿದೆ. ಇದರ ಮೌಲ್ಯ ಸುಮಾರು 90,000 ರೂ. ಎಂದು ಅಂದಾಜಿಸಲಾಗಿದೆ. ಸೆ. 29 ರಂದು ರಾತ್ರಿ ಕ್ಯಾತಸಂದ್ರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.