ಬಸವಣ್ಣನ ಬೆಟ್ಟದಲ್ಲಿ ಚಿರತೆಗಳ ವಿಹಾರ! ಚಿರತೆ ಭಯಕ್ಕೆ ಮಧುಗಿರಿ ಜನತೆ ತತ್ತರ!!

basavannana-betta-cheeta-found

ಬಸವಣ್ಣನ ಬೆಟ್ಟದಲ್ಲಿ ಚಿರತೆಗಳ ವಿಹಾರ! ಚಿರತೆ ಭಯಕ್ಕೆ ಮಧುಗಿರಿ ಜನತೆ ತತ್ತರ!!


ಬಸವಣ್ಣನ ಬೆಟ್ಟದಲ್ಲಿ ಚಿರತೆಗಳ ವಿಹಾರ!
ಚಿರತೆ ಭಯಕ್ಕೆ ಮಧುಗಿರಿ ಜನತೆ ತತ್ತರ!!

ಮಧುಗಿರಿ: ಪಟ್ಟಣದ ಹೃದಯ ಭಾಗದಲ್ಲಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಹೊಂದಿಕೊAಡAತೆ ಇರುವ ಬಸವಣ್ಣನ ಬೆಟ್ಟದ ಬಂಡೆಯ ಮೇಲೆ (ಆನಂದರಾಯನ ಗುಡ್ಡ) ಕಳೆದ ಒಂದು ವಾರದಿಂದ ನಿರಂತರವಾಗಿ ಮೂರು ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರು ಭಯಬೀತರಾಗಿದ್ದಾರೆ.

ಕಳೆದ ಬುಧವಾರ ಬೆಟ್ಟದಲ್ಲಿ ಎರಡು ಚಿರತೆಗಳು ಪ್ರತ್ಯಕ್ಷವಾಗಿದ್ದವು. ಇದೀಗ ಮೂರು ಚಿರತೆಗಳು ಬೆಟ್ಟದ ಬಂಡೆಯೊAದರ ಮೇಲೆ ವಿರಮಿಸುತ್ತಿದ್ದುದು ಕಂಡು ಬಂದಿದೆ. ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯೆಯ ರಸ್ತೆಯಲ್ಲಿ ನೂರಾರು ಸಾರ್ವಜನಿಕರು ಪ್ರತೀ ದಿನ ಚಿರತೆಗಳನ್ನು ನೋಡುತ್ತಿದ್ದು, ಈ ಮೂರೂ ಚಿರತೆಗಳು ಆರಾಮವಾಗಿ ಬಂಡೆಯ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದುದನ್ನು ಕಂಡು ಭಯಗೊಂಡಿದ್ದಾರೆ. ಬೆಟ್ಟದ ಮೇಲಿನ ಗುಂಡಿನ ನಡುವೆ ಇರುವ ಪೊದೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಚಿರತೆಗಳು ವಾಸವಿದ್ದು, ಆರಾಮವಾಗಿ ಕಾಲಹರಣ ಮಾಡುತ್ತಿವೆ. ಈ ಚಿರತೆಗಳಿಂದ ಇದೂವರೆಗೂ ಸುತ್ತಮುತ್ತಲಲ್ಲಿ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲದಿದ್ದರೂ ಬೆಟ್ಟದ ತಪ್ಪಲಿನಲ್ಲಿ ವಾಸವಿರುವ ಜನತೆ ಆತಂಕದಲ್ಲಿ ವಾಸಿಸುತ್ತಿದ್ದಾರೆ. ಬೆಟ್ಟದ ಸುತ್ತಮುತ್ತಲಿನಲ್ಲಿ ವಸತಿ ಪ್ರದೇಶ, ವಿದ್ಯಾರ್ಥಿನಿಲಯ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಇದ್ದು, ಮಧುಗಿರಿಯಲ್ಲಿ ರಾತ್ರಿ ಸಮಯದಲ್ಲಿ ಜನತೆ ಓಡಾಡಲೂ ಭಯಭೀತರಾಗಿದ್ದಾರೆ.  

ಇಲ್ಲಿಗೆ ಬಂದದ್ದಾದರೂ ಹೇಗೆ?: ಪಟ್ಟಣದ ಸಮೀಪವೇ ಇರುವ ಕಾರಮರಡಿ ಗುಡ್ಡದಲ್ಲಿ ಸುಮಾರು ವರ್ಷಗಳಿಂದ ಚಿರತೆಗಳು ಈ ಭಾಗದ ಜನತೆಗೆ ಕಂಡು ಬರುತ್ತಿದ್ದವು. ಆದರೆ ಇತ್ತೀಚೆಗೆ ಇಲ್ಲಿನ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಂಡಿಲ್ಲ. ಕಳೆದ 2  ವರ್ಷದಿಂದ ಕಾರಮರಡಿ ಗುಡ್ಡ ಮತ್ತು ಪಾವಗಡ ರಸ್ತೆಯಲ್ಲಿರುವ ಪ್ರವಾಸಿ ಮಂದಿರದ ಸಮೀಪದ ಗುಡ್ಡದಲ್ಲಿ ಹಾಸ್ಟೆಲ್ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಯ ಶಬ್ದಕ್ಕೆ ಬೆದರಿ ಇವು ಅಲ್ಲಿಂದ ಜಾಗ ಬದಲಿಸಿ ಆನಂದರಾಯನ ಗುಡ್ಡ ಸೇರಿಕೊಂಡಿರಬಹುದಾ..?  ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ. ಆನಂದರಾಯನ ಗುಡ್ಡದ ಹಿಂಭಾಗದ ಪ್ರದೇಶವೆಲ್ಲ ಬೆಟ್ಟಗುಡ್ಡ ಸಾಲುಗಳಿಂದ ತುಂಬಿಕೊAಡಿದ್ದು, ಇವುಗಳು ಇಲ್ಲಿ ಸೇರಲು ಪ್ರಮುಖ ಕಾರಣ. ಇವು ಸಾರ್ವಜನಿಕರ ಮೇಲೆ ಇಲ್ಲಿಯವರೆಗೂ ಯಾವುದೇ ದಾಳಿ ನಡೆಸಿಲ್ಲವಾದರೂ ಬೆಳಗಿನ ಜಾವ ತುಮಕೂರು ರಸ್ತೆ-ದಂಡಿನ ಮಾರಮ್ಮನ ದೇವಸ್ಥಾನ ಮತ್ತು ಬೈಪಾಸ್ ರಸ್ತೆಯ ಕಡೆ ವಾಯುವಿಹಾರಕ್ಕೆ ತೆರಳುವ ನಾಗರಿಕರು ಆದಷ್ಟು ಎಚ್ಚರ ವಹಿಸಬೇಕಿದೆ. 

ಇಷ್ಟಾದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಅನಾಹುತವಾಗುವ ಮುನ್ನ ಅರಣ್ಯ ಇಲಾಖೆಯವರು ಬೆಟ್ಟದಲ್ಲಿ ಬೋನುಗಳಿಟ್ಟು ಚಿರತೆಗಳನ್ನು ಸೆರೆ ಹಿಡಿದು ಬನ್ನೇರುಘಟ್ಟ ಮೀಸಲು ಅರಣ್ಯಕ್ಕೆ ಸಾಗಿಸುವಂತೆ ಒತ್ತಾಯಿಸಿದ್ದಾರೆ.


ಚಿರತೆಗಳಿಗೆ ತೊಂದರೆ ನೀಡಬೇಡಿ


ಚಿರತೆಗಳು ಗುಡ್ಡಗಳಲ್ಲಿ ಇರುವುದು ಸಾಮಾನ್ಯ. ಮೂರರಿಂದ ನಾಲ್ಕು ದಿನ ಇಲ್ಲಿದ್ದು, ಬೇರೆ ಪ್ರದೇಶಕ್ಕೆ ಹೋಗುತ್ತವೆ. ಈಗಾಗಲೇ ಬೆಟ್ಟದಲ್ಲಿ ಪಟಾಕಿ ಸಿಡಿಸಿ, ಬೋನುಗಳನ್ನು ಇಟ್ಟಿದ್ದು, ಸಾರ್ವಜನಿಕರಿಗೆ ಚಿರತೆ ಕಂಡಲ್ಲಿ ಯಾವುದೇ ರೀತಿ ತೊಂದರೆ ನೀಡಬಾರದು ಹಾಗೂ ಒಂದು ವಾರದ ಮಟ್ಟಿಗೆ ಬೆಟ್ಟದ ಮೇಲೆ ಹೋಗಬಾರದು ಎಂದು ಉಪವಲಯ ಅರಣ್ಯ ಅಧಿಕಾರಿ ಮುತ್ತುರಾಜು ಎಚ್ಚರಿಕೆ ನೀಡಿದ್ದಾರೆ.