ಶೇಂಗಾ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ 

ಶೇಂಗಾ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ 


ಶೇಂಗಾ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ
ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ 

ತುಮಕೂರು: ಜಿಲ್ಲೆಯಲ್ಲಿ ನಷ್ಟ ಉಂಟಾಗಿರುವ ಶೇಂಗಾ ಬೆಳೆಗಾರರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ನರೇಗಾ ಯೋಜನೆಯನ್ನು ಸಮರ್ಪಕ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕಾನೂನು, ಸಂಸದೀಯ ವ್ಯವಹಾರಗಳು, ಶಾಸಕ ರಚನೆ ಮತ್ತು ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದರು. 
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ೨ನೇ ತ್ರೆöÊಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೋಗ ಹಾಗೂ ಮಳೆ ಕೊರತೆ ಪರಿಣಾಮ ಶೇಂಗಾ ಬೆಳೆ ನಷ್ಟದಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ಕಲ್ಪಿಸಬೇಕು. ಜಿಲ್ಲೆಯ ಶಿರಾ  ತಾಲೂಕಿನಲ್ಲಿ ಬಿತ್ತನೆಯಾಗಿರುವ ೩೭ ಸಾವಿರ ಹೆಕ್ಟೇರ್ ಶೇಂಗಾ ಬೆಳೆಯಲ್ಲಿ, ಶೇ. ೮೦ ರಷ್ಟು  ಹಾಳಾಗಿದೆ. ಈ ಬಗ್ಗೆ ವರದಿ ಪಡೆದು ರೈತರಿಗೆ ಪರಿಹಾರ ಕಲ್ಪಿಸಲು ಕ್ರಮ ವಹಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ರಾಜ ಸುಲೋಚನಾ ಅವರಿಗೆ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಇದೇ ಪ್ರಮಾಣದಲ್ಲಿ ಮಳೆಯಾದರೆ ರಾಗಿ ಬೆಳೆಯೂ ಹಾಳಾಗಲಿದೆ. ಹಾಗಾಗಿ ಬೆಳೆ ಹಾಳಾಗದಂತೆ ಕ್ರಮ ಕೈಗೊಳ್ಳುವುದರ ಜೊತೆಗೆ ಹಾಳಾದ ಬೆಳೆಗೆ ಸೂಕ್ತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನೀಡುವ ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ರೈತರಿಗೆ ಸಮರ್ಪಕವಾಗಿ ತಲುಪಿಸಬೇಕು. ಅರ್ಹ ಎಲ್ಲಾ ರೈತರಿಗೆ ಯೋಜನೆಯ ಸೌಲಭ್ಯವನ್ನು ತಲುಪಿಸಬೇಕು. ವೈಜ್ಞಾನಿಕವಾಗಿ ಸರ್ವೆ ಮಾಡಿ ಸೌಲಭ್ಯವನ್ನು ನೂರರಷ್ಟು ರೈತರಿಗೆ ತಲುಪಿಸಲು ಕ್ರಮ ವಹಿಸಬೇಕು. ಮುಂದಿನ ತಿಂಗಳೊಳಗೆ ನಿಗದಿತ ಗುರಿಯಂತೆ ರೈತರಿಗೆ ತಲುಪಿಸಬೇಕು ಎಂದು ತಾಕೀತು ಮಾಡಿದರು.
ರೋಗಗಳು ಹರಡದಂತೆ ಜಿಲ್ಲೆಯ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಲು ಕ್ರಮ ಕೈಗೊಳ್ಳಬೇಕೆಂದು ಸಂಬAಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಿದ ಸಚಿವ ಮಾಧುಸ್ವಾಮಿ, ಜಿಲ್ಲೆಯಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಾನುವಾರುಗಳಿಗೆ ರೋಗ ತಗುಲುವುದಕ್ಕೂ ಮುನ್ನವೇ ಮುನ್ನೆಚ್ಚರಿಕೆ ಕ್ರಮವಾಗಿ ಸಮರ್ಪಕವಾಗಿ ಲಸಿಕೆ ಹಾಕಬೇಕು ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
ನರೇಗಾ ಯೋಜನೆ ಅನುಷ್ಟಾನವನ್ನು ಕೇವಲ ವೈಯಕ್ತಿಕ ಕಾಮಗಾರಿಗೆ ಸೀಮಿತಗೊಳಿಸದೆ ಸಾರ್ವಜನಿಕ ಕಾಮಗಾರಿಗಳ ಅನುಷ್ಟಾನಕ್ಕೂ ಆದ್ಯತೆ ಕೊಡಬೇಕು ಎಂದು ಸಚಿವರು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗೆ ಸೂಚಿಸಿದರು. ಈ ವೇಳೆ ಶಾಸಕ ಮಸಾಲೆ ಜಯರಾಮ್ ಮಾತನಾಡಿ, ನರೇಗಾ ಯೋಜನೆಯಡಿ ತಾಲೂಕಿನಲ್ಲಿ ಬಹಳಷ್ಟು ಅವ್ಯವಹಾರ ನಡೆಯುತ್ತಿದೆ. ಪಿಡಿಒಗಳು ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲು ಉದಾಸೀನ ತೋರುತ್ತಿದ್ದಾರೆ. ಜನಪ್ರತಿನಿಧಿಗಳಿಗೂ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಚಿವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನರೇಗಾ ಯೋಜನಾ ಅನುಷ್ಟಾನದ ಸಂಪೂರ್ಣ ಮಾಹಿತಿಯನ್ನು ಕರಪತ್ರದಲ್ಲಿ ಮುದ್ರಿಸಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಹಂಚಬೇಕು ಎಂದು ನಿರ್ದೇಶಿಸಿದರು.
ಸಭೆಯಲ್ಲಿ ಸಂಸದ ಜಿ.ಎಸ್. ಬಸವರಾಜ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‌ಸಿಂಗ್, ಶಾಸಕ ಜಿ.ಬಿ. ಜ್ಯೋತಿಗಣೇಶ್, ರಾಜೇಶ್‌ಗೌಡ, ಡಾ. ರಂಗನಾಥ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.


೮ ತಿಂಗಳಲ್ಲಿ ೨೨ ತಾಯಿ, ೧೫೪ ಶಿಶು ಮರಣ!


ಜಿಲ್ಲೆಯಲ್ಲಿ ಕಳೆದ ಎಂಟು ತಿಂಗಳಲ್ಲಿ ೨೨ ತಾಯಿ ಮರಣ, ೧೫೪ ಶಿಶು ಮರಣ ಪ್ರಕರಣ ವರದಿಯಾಗಿರುವ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಮಾಧುಸ್ವಾಮಿ, ತಾಯಿ ಹಾಗೂ ಶಿಶು ಮರಣ ಪ್ರಮಾಣ ತಗ್ಗಿಸಲು ಆರೋಗ್ಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ತಾಲೂಕು ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸುವ ಕಾರ್ಯಕ್ಷಮತೆ ಹೆಚ್ಚಿಸಿ ಜಿಲ್ಲಾಸ್ಪತ್ರೆ ಮೇಲಿನ ಒತ್ತಡ ಕಡಿಮೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಯಾವುದೇ ವೈದ್ಯಾಧಿಕಾರಿ ಹುದ್ದೆ ಖಾಲಿಯಿಲ್ಲ. ಹೆಚ್ಚುವರಿಯಾಗಿ ವೈದ್ಯರು ಮತ್ತು ಸಿಬ್ಬಂದಿಯನ್ನು ನಿಯೋಜಿಸಿದ್ದರೂ ಆರೋಗ್ಯ ಸೇವೆ ಉತ್ತಮವಾದ ಸ್ಥಿತಿಯಲ್ಲಿಲ್ಲ. ಆರೋಗ್ಯ ಸೇವೆ ಮತ್ತಷ್ಟು ಉತ್ತಮವಾಗಬೇಕು. ತಾಯಿ-ಶಿಶು ಮರಣ ಪ್ರಮಾಣವನ್ನು ಸಂಪೂರ್ಣವಾಗಿ ತಗ್ಗಿಸಬೇಕು. ಬಡವರಿಗೂ ಸಮಗ್ರವಾಗಿ ಆರೋಗ್ಯ ಸೇವೆ ಸಿಗಬೇಕೆಂಬ ಉದ್ದೇಶದಿಂದ ಜಾರಿಗೆ ತರಲಾಗಿರುವ ಆರೋಗ್ಯ ಕಾರ್ಡ್ ಯೋಜನೆಯೂ ಯಶಸ್ವಿಯಾಗಿಲ್ಲ. ಪ್ರತಿ ತಾಲೂಕಿನಲ್ಲಿಯೂ ಹೆಚ್ಚು ಹೆಚ್ಚು ಆರೋಗ್ಯ ಕಾರ್ಡ್ ಮುದ್ರಿಸಿಲು ಕ್ರಮವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದರು.


ಶಾಲಾ ಕೊಠಡಿಗಳ ನಿರ್ಮಾಣದಲ್ಲಿ ವಿಳಂಬ ಧೋರಣೆ:

ಅಧಿಕಾರಿಗಳ ಅಮಾನತ್ತಿಗೆ ಸಚಿವ ಜೆಸಿಎಂ ಸೂಚನೆ


ತುಮಕೂರು: ಶಾಲಾ ಕೊಠಡಿಗಳ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಮಂಜೂರಾಗಿ ಮೂರ್ನಾಲ್ಕು ವರ್ಷಗಳಾದರೂ ಕಟ್ಟಡಗಳ ಕಾಮಗಾರಿ ಮುಗಿದಿಲ್ಲ. ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಅನುಷ್ಠಾನ ಕಾರ್ಯದಲ್ಲಿ ವಿಳಂಬ ಮಾಡುವ ಅಧಿಕಾರಿಗಳನ್ನು ಅಮಾನತ್ತು ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರಿಗೆ ನಿರ್ದೇಶಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ೨ನೇ ತ್ರೆöÊಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲಾ ಕೊಠಡಿಗಳ ಕಟ್ಟಡಗಳ ನಿರ್ಮಾಣಕ್ಕೆ ಮಂಜೂರಾಗಿರುವ ಅನುದಾನ ಸಮರ್ಪಕವಾಗಿ ಸದ್ಬಳಕೆಯಾಗಿಲ್ಲ. ಶಾಲಾ ಕಟ್ಟಡಗಳ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗಿದೆ. ಜಿಲ್ಲೆಯಲ್ಲಿ ೨೦೧೯-೨೦ನೇ ಸಾಲಿನ ಶಾಲಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾದರೆ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಸಚಿವರು ಪ್ರಶ್ನಿಸಿದರು.
ಇನ್ನೆರಡು ತಿಂಗಳಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಿ ಶೀಘ್ರ ಶಾಲಾ ಕೊಠಡಿಗಳ ಕಟ್ಟಡಗಳ ನಿರ್ಮಾಣವನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯ ಕುಂಠಿತವಾಗಿರುವುದಕ್ಕೆ ಸಚಿವರು ಕಾರಣ ಕೇಳಿದಾಗ, ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಅಧಿಕಾರಿಗಳು ಕಾಮಗಾರಿ ಬದಲಾವಣೆ (ಚೇಂಜ್ ಆಫ್ ವರ್ಕ್) ಆಗಿರುವ ಕಾರಣ ತಡವಾಗಿದೆ ಎಂದು ಸಚಿವರಿಗೆ ಮಾಹಿತಿ ಒದಗಿಸಿದರು. ಈ ವೇಳೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ೨೦೧೯-೨೦ನೇ ಸಾಲಿನ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಎಷ್ಟು ಸಲ ಕಾಮಗಾರಿ ಬದಲಾವಣೆ ಮಾಡೋದು ಎಂದು ಕಟುವಾಗಿ ಪ್ರಶ್ನಿಸಿದರು.