ಕ್ಯಾ.ಸೋಮಶೇಖರ್‌ ಬೆಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

ಕ್ಯಾ.ಸೋಮಶೇಖರ್‌ ಬೆಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

ಚಿಕ್ಕನಾಯಕನಹಳ್ಳಿ : ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಪ್ರಭಾವಿ ಮುಖಂಡ ಹಾಗು ಹಿಂದುಳಿದ ವರ್ಗಗಳ ನಾಯಕ ಕ್ಯಾ.ಸೋಮಶೇಖರ್ ಮಾಧ್ಯಮಗಳ ಮೂಲಕ ರಾಜೀನಾಮೆಯನ್ನು ಸಲ್ಲಿಸಿದರು.


ಸೋಮಶೇಖರ್ ಅವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮಾಧುಸ್ವಾಮಿ ಗೆಲುವಿಗೆ ಶ್ರಮಿಸಿದ್ದರು. ಇದಲ್ಲದೆ ಬಿಎಸ್ಪಿ ಪಕ್ಷದಿಂದ ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಒಮ್ಮೆ ಸ್ಪರ್ಧಿಸಿ ಸೋತಿದ್ದರು. ಪಕ್ಷದಲ್ಲಿನ ಬೆಳವಣಿಗೆಗಳಿಂದ ಬೇಸತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದೇ ವೇಳೆ ಬಿಜೆಪಿ ಬೆಂಬಲಿತ ಹಿಂದುಳಿದ ವರ್ಗಗಳ ತಾಲ್ಲೂಕು ಮಟ್ಟದ ವೇದಿಕೆಯನ್ನು ವಿಸರ್ಜಿಸಿದರು. ಇನ್ನು ಮುಂದೆ ಈ ವೇದಿಕೆಯ ಮುಖಾಂತರ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.


ನಾನು ವೈಯಕ್ತಿಕ ಲಾಭಕ್ಕಾಗಿ ಯಾವುದೇ ಹೋರಾಟ ಮಾಡುತ್ತಿಲ್ಲ. ನಾನು ಅಜೆಂಡಾ ಇಟ್ಟುಕೊಂಡು ರಾಜಕೀಯಕ್ಕೆ ಬಂದಿದ್ದೇನೆ. 24 ಗಂಟೆಗಳು ಕೆಲಸ ಮಾಡಬೇಕೆಂಬ ನನ್ನ ನಿಲುವಿಗೆ ಪಕ್ಷ ಸಹಕರಿಸುತ್ತಿಲ್ಲ. ಸದಾ ಕ್ರಿಯಾಶೀಲವಾಗಿರುವ ನನಗೆ ಪಕ್ಷ ಜವಾಬ್ದಾರಿ ನೀಡದೆ ನಿಷ್ಕಿçಯಗೊಳಿಸಿದೆ. ಕೆ.ಎಸ್.ಆರ್.ಟಿ.ಸಿ.ಬಸ್ ಡಿಪೋ ನಿರ್ಮಿಸಲು ಎಪಿಎಂಸಿ ಬಳಿ ಇರುವ 3 ಎಕರೆ ಜಾಗ ನೀಡುವಂತೆ ಕೇಳಿದ್ದೆ, ಇಡೀ ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವುದು, ತಾಲ್ಲೂಕಿನಲ್ಲಿ ಕೈಗಾರಿಕ ವಲಯ ಸ್ಥಾಪನೆ ಹಾಗು ನನ್ನ ಒಂದು ಬೇಡಿಕೆಯನ್ನು ಈಡೇರಿಸಬೇಕೆಂದು ಚುನಾವಣೆ ಸಮಯದಲ್ಲಿ ನೀವು ಗೆದ್ದ ನಂತರ ಮಾಡಬೇಕೆಂದು ಮಾನ್ಯ ಸಚಿವರಿಗೆ ತಿಳಿಸಿದ್ದೆ, ಆದರೆ ಇದುವರೆಗೆ ಯಾವ ಕೆಲಸ ಆಗಿದೆಯೋ ನನಗೆ ತಿಳಿದಿಲ್ಲ ಎಂದು ವ್ಯಂಗ್ಯವಾಡಿದರು.


ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ  7 ಲಕ್ಷ ಹಣವನ್ನು ಖರ್ಚು ಮಾಡಿ ಆ ಮನುಷ್ಯನ ಶಕ್ತಿಯನ್ನು ವೃದ್ದಿಸಲು ಹೋರಾಡಿದ್ದೇನೆ. ದುರಹಂಕಾರದ ಒಬ್ಬ ವ್ಯಕ್ತಿ ಹಾಗು ತಾಲ್ಲೂಕಿಗೆ ಕಾಲಿಡದ ವ್ಯಕ್ತಿಯಿಂದ ಚಿಕ್ಕನಾಯಕನಹಳ್ಳಿಯ ಅಭಿವೃದ್ದಿ ಮರೀಚಿಕೆಯಾಗಿದೆ. ನಾಳೆಯಿಂದಲೇ ತಾಲ್ಲೂಕಿನ ಅಭಿವೃದ್ದಿಯ ಬಗ್ಗೆ ಹಿರಿಯರ ಸಲಹೆ ಪಡೆದು ರಚನಾತ್ಮಕ ಕೆಲಸ ಮಾಡಲು ನಿರ್ಧರಿಸಿದ್ದೇನೆ ಎಂದರು.