ಗೆಲ್ಲುವ ಲೆಕ್ಕಾಚಾರದಲ್ಲಿ ಸಾಮಾಜಿಕ ನ್ಯಾಯವನ್ನು ತಬ್ಬಲಿ ಮಾಡಿತೇ ಕಾಂಗ್ರೆಸ್!?

political analysis

ಗೆಲ್ಲುವ ಲೆಕ್ಕಾಚಾರದಲ್ಲಿ ಸಾಮಾಜಿಕ ನ್ಯಾಯವನ್ನು ತಬ್ಬಲಿ ಮಾಡಿತೇ ಕಾಂಗ್ರೆಸ್!?

99% ಲೋಕಲ್

ಕುಚ್ಚಂಗಿ ಪ್ರಸನ್ನ

ಗೆಲ್ಲುವ ಲೆಕ್ಕಾಚಾರದಲ್ಲಿ ಸಾಮಾಜಿಕ ನ್ಯಾಯವನ್ನು ತಬ್ಬಲಿ ಮಾಡಿತೇ ಕಾಂಗ್ರೆಸ್!?

ಶಿರಾ-ಟಿಕೆಟ್ ವಂಚಿತ ಸಾಸಲು ಸತೀಶರತ್ತ ಜೆಡಿಎಸ್ ಚಿತ್ತ ?

      ಚುನಾವಣೆ ಕಾವೇರುತ್ತಿದೆ, ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪಕ್ಷಗಳು ತಿಣುಕುತ್ತಿವೆ. ಯಾವ ಕ್ಷೇತ್ರದಲ್ಲೂ ಸರ್ವ ಸಮ್ಮತ ಅಥವಾ ‘ಅಜಾತ ಶತ್ರು’ ಎನ್ನುವಂತ ಅಭ್ಯರ್ಥಿಯನ್ನು ಹುಡುಕುವುದು ‘ ಸಾವಿರದ ಮನೆಯಲ್ಲಿ ಸಾಸಿವೆ ಕೇಳಿದಂತೆ ಎಂಬ ಸನ್ನಿವೇಶವಿದೆ.

ಹಾಲಿ ಶಾಸಕರು, ಮಾಜಿ ಶಾಸಕರು, ಕಳೆದ ಸಲ ಗೆಲುವಿನ ಸಮೀಪಕ್ಕೆ ಬಂದು ಸೋತಿರುವ ‘ಪರಾಜಿತ; ಅಭ್ಯರ್ಥಿಗಳಲ್ಲದೇ ಹೊಸದಾಗಿ ರಾಜಕಾರಣ ಪ್ರವೇಶ ಬಯಸಿರುವವರಲ್ಲಿ ಕೆಲವರು ಐದಾರು ವರ್ಷಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು, ಇನ್ನು ಕೆಲವರು ಹಣದ ಗಂಟನ್ನೇ ನಂಬಿಕೊಂಡು ಚುನಾವಣೆ ಇನ್ನಾರು ತಿಂಗಳಿದೆ ಎನ್ನುವಾಗ ದಂಡು ದಾಳಿ ಕಟ್ಟಿಕೊಂಡು ಕ್ಷೇತ್ರ ಸುತ್ತುತ್ತಿರುವವರು, ಇವೆಲ್ಲ ತಂಟೆಯೇ ಬೇಡ ಎಂದು ಹಗಲಿರುಳೂ ಹೈಕಮಾಂಡ್ ಗಳ ಮನೆ ಬಾಗಿಲು ಕಾಯುತ್ತಿರುವರೆಲ್ಲರೂ ತಂತಮ್ಮ ಪಕ್ಷಗಳ ಟಿಕೆಟ್ ದಕ್ಕುವುದೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ.

ಗೆಲ್ಲುವುದೇ ಮಾನದಂಡ ಎಂದು ಹೇಳುತ್ತಿರುವ ಕಾಂಗ್ರೆಸ್, ಬಿಜೆಪಿ ಮುಂದೆ ಆಕಾಂಕ್ಷಿಗಳ ವಿದ್ಯಾರ್ಹತೆ, ಕೌಟುಂಬಿಕ ಹಿನ್ನೆಲೆ, ಸಾಮಾಜಿಕ ಬದ್ಧತೆ, ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳೆಲ್ಲ ದಂಡ ಎನ್ನುವಂತಾಗಿ ಬಿಟ್ಟಿದೆ.

ಬಿಜೆಪಿ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯ ಮೇಲೆ ತೇಲಿ ಹೋಗಿ ವಿಧಾನ ಸೌಧದ ಮೂರನೇ ಮಹಡಿ ತಲುಪುವ ಮಹದಾಸೆ ಹೊಂದಿರುವ ಕಾಂಗ್ರೆಸ್ ಕೂಡಾ ಅಭ್ಯರ್ಥಿಗೆ ಆಯ್ಕೆಗೆ ಇನ್ನಿತರ ಮಾನದಂಡಗಳಿಗಿಂತ ಈತ ಗೆಲ್ಲಬಲ್ಲನೇ ಎಂಬುದೇ ಪ್ರಾಮುಖ್ಯತೆ ಪಡೆದುಕೊಂಡಿರುವ ಕಾರಣ ಸಾಮಾಜಿಕ ನ್ಯಾಯವೆನ್ನುವುದು ಆ ಪಕ್ಷವನ್ನು ನಂಬಿಕೊಂಡ ಅತಿ ಹಿಂದುಳಿದ ವರ್ಗಗಳಿಗೆ ಸೇರಿದ ಸಮುದಾಯಗಳ ಪಾಲಿನ ಮರೀಚಿಕೆಯಾಗಲಿದೆಯೇ ಎಂಬ ಪ್ರಶ್ನೆ ಟಿಕೆಟ್ ಹಂಚಿಕೆ ಪ್ರಕ್ರಿಯೆ ಗಮನಿಸಿದವರೆಗೆ ಅರ್ಥವಾಗತೊಡಗಿದೆ.

ತುಮಕೂರು ಜಿಲ್ಲೆಯ 11 ವಿಧಾನ ಸಭಾ ಕ್ಷೇತ್ರಗಳ ಲೆಕ್ಕಕ್ಕೇ ಬರುವುದಾದಲ್ಲಿ, ಕಾಂಗ್ರೆಸ್ ತುರುವೇಕೆರೆ, ಗುಬ್ಬಿ, ಕುಣಿಗಲ್, ಶಿರಾ, ತುಮಕೂರು ಗ್ರಾಮಾಂತರ ಹೀಗೆ ಐದು ಕ್ಷೇತ್ರಗಳಲ್ಲಿ ಒಕ್ಕಲಿಗರು  ಮತ್ತು ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿಗಳಲ್ಲಿ ಲಿಂಗಾಯಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಖಚಿತವಾಗಿದೆ.

ಕೊರಟಗೆರೆ ಮತ್ತು ಪಾವಗಡಗಳು ಪರಿಶಿಷ್ಟ ಜಾತಿಗಳ ಅಭ್ಯರ್ಥಿಗಳಿಗೆ ಮೀಸಲು ಹಾಗೂ ತುಮಕೂರು ನಗರ ವಿಧಾನ ಸಭಾ ಕ್ಷೇತ್ರ ಮುಸ್ಲಿಮರಿಗೆ ಎನ್ನುವುದನ್ನು ಬಿಟ್ಟರೆ, ಇನ್ನು ಉಳಿಯುವುದು ಮಧುಗಿರಿ ಮಾತ್ರ, ಕೆ.ಎನ್.ರಾಜಣ್ಣನವರ ವೈಯಕ್ತಿಕ ಪ್ರಯತ್ನ ಹಾಗೂ ಸಾಧನೆಯ ಕಾರಣದಿಂದ ಈ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ದಕ್ಕಿದೆ ಎನ್ನಬಹುದಾದರೂ ಕಳೆದ ಚುನಾವಣೆಯಲ್ಲಿ ಗೆದ್ದದ್ದು ಒಕ್ಕಲಿಗ ಅಭ್ಯರ್ಥಿಯೇ .

ಸಾಮಾನ್ಯವಾಗಿ ಜಿಲ್ಲೆಯ ಪ್ರತಿ ಹಳ್ಳಿಯಲ್ಲೂ ಅಸ್ತಿತ್ವದಲ್ಲಿರುವ ಹಾಗೂ ಜನ ಸಂಖ್ಯೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಪರಿಶಿಷ್ಟ ಜಾತಿಯ ಎಡಗೈ ಪಂಗಡದ ಪಾವಗಡದಿಂದ ಮಾಜಿ ಸಂಸದ ಚಂದ್ರಪ್ಪ, ಜಿಪಂ ಮಾಜಿ ಸದಸ್ಯ ಹೆಚ್.ಕೆಂಚಮಾರಯ್ಯ ಅಥವಾ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೈದ್ಯೆ ಡಿ.ಅರುಂಧತಿ ಇವರಲ್ಲಿ ಯಾರಾದರೂ ಒಬ್ಬರಿಗೆ ಪಾವಗಡ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸಬೇಕು ಎಂಬ ಕೂಗಿಗೆ ಕಾಂಗ್ರೆಸ್  ಓಗೊಡುವ ಸ್ಥಿತಿಯಲ್ಲಿಲ್ಲ ಎಂಬುದು ಖಚಿತವಾದಂತಿದೆ.ಏಕೆಂದರೆ ಪಾವಗಡ ಹಾಲಿ ಶಾಸಕ ವೆಂಕಟರಮಣಪ್ಪ ಮತ್ತು ಅವರ ಮಗ ಹೆಚ್.ವಿ.ವೆಂಕಟೇಶ್ ಅವರ ನಡುವೆಯೇ ಟಿಕೆಟ್ ಗಾಗಿ ಪೈಪೋಟಿ ಇರುವಾಗ ಎಡಗೈ ಕಷ್ಟ ಕೇಳುವವರಿಲ್ಲ.

ಇದೇ ಪರಿಸ್ಥಿತಿ ಕಾಡುಗೊಲ್ಲರದೂ ಆಗಿದೆ. ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿ ಗೆಲುವಿನ ನಿರ್ಣಾಯಕ ಸಂಖ್ಯೆಯಲ್ಲಿರುವ ಕಾಡುಗೊಲ್ಲರ ಪ್ರತಿನಿಧಿಯಾಗಿ ಡಾ.ಸಾಸಲು ಸತೀಶ್ ಒಬ್ಬರಿಗಾದರೂ ಶಿರಾ ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಅವಕಾಶ ನೀಡಬೇಕೆಂಬ ಕಳೆದ ಐದು ವರ್ಷಗಳ ಆಗ್ರಹ ಫಲ ನೀಡುವಂತೆ ಕಾಣುತ್ತಿಲ್ಲ.

2013ರ ವಿಧಾನ ಸಭಾ ಚುನಾವಣೆಯಲ್ಲಿ ಡಾ.ಸಾಸಲು ಸತೀಶ್ ಅವರಿಗೆ ಹುಟ್ಟು ತಾಲೂಕು ಚಿಕ್ಕನಾಯಕನಹಳ್ಳಿಯಿಂದ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಕಡೇ ಗಳಿಗೆಯ ನಿರ್ಧಾರವಾಗಿದ್ದ ಹಾಗೂ ಮೊದಲ ಚುನಾವಣೆಯಾಗಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಸ್ಪರ್ಧೆ ನೀಡಲು ಅಲ್ಲಿ ಅವರಿಗೆ ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಜೊತೆಗೆ 2018ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ , ಶಿರಾ ಶಾಸಕರೂ ಸಚಿವರೂ ಆಗಿದ್ದ ಟಿ.ಬಿ.ಜಯಚಂದ್ರರವರ ಹಿರಿಯ ಮಗ ಸಂತೋಷ್ ಜಯಚಂದ್ರ ಅವರಿಗೆ ಚಿಕ್ಕನಾಯಕನಹಳ್ಳಿಯಿಂದ ಕಣಕ್ಕೆ ಇಳಿಸಿದ್ದರಿಂದ  ಮತ್ತು ಸಾಸಲು ಸತೀಶ್ ಅವರಿಗೆ ಮತ್ಯಾವ ಕ್ಷೇತ್ರವನ್ನೂ ತೋರಿಸದೇ ಇದ್ದುದರಿಂದ ಕಾಡುಗೊಲ್ಲ ಸಮುದಾಯ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶದಿಂದ ವಂಚಿತವಾಯಿತು. ಶಿರಾದಲ್ಲಿ ಜಯಚಂದ್ರರೂ ಗೆಲ್ಲಲಿಲ್ಲ ಚಿಕ್ಕನಾಯಕನಹಳ್ಳಿಯಲ್ಲಿ ಅವರ ಮಗ ಸಂತೋಷ್ ಸಹ ಗೆಲುವಿನ ದಡ ಮುಟ್ಟಲಿಲ್ಲ ಎಂಬುದು ಈಗ ಇತಿಹಾಸ.

2018ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೂಡಾ ಅಧಿಕಾರ ಕಳೆದುಕೊಂಡಿತು. ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಲ್ಪಾಯುವಾಗಿ, ಶಾಸಕರನ್ನು ಖರೀದಿಸಿ ಬಿಜೆಪಿ ಅಧಿಕಾರ ಹಿಡಿಯಿತು. ಶಿರಾದಲ್ಲಿ ಮಾಜಿ ಸಚಿವ ಬಿ.ಸತ್ಯನಾರಾಯಣ ಅವರ ನಿಧನದಿಂದಾಗಿ 2020ರಲ್ಲಿ ನಡೆದ ಉಪ ಚುನಾವಣೆಯಲ್ಲೂ ಮಾಜಿ ಸಚಿವ ಜಯಚಂದ್ರ ಅವರು ಗೆಲ್ಲಲಾಗಲಿಲ್ಲ.ಕಾರಣಗಳೇನೇ ಇರಲಿ ಚುನಾವಣಾ ಆಯೋಗದ ಪ್ರಕಾರ ಸೋಲು ಸೋಲೇ.

ಸಂತೋಷ್ ಜಯಚಂದ್ರ ಸ್ಪರ್ಧೆಯಿಂದಾಗಿ ಮೂಲ ಚಿಕ್ಕನಾಯಕನಹಳ್ಳಿ ಕ್ಷೇತ್ರವನ್ನು ಕಳೆದುಕೊಂಡು ರಾಜಕೀಯವಾಗಿ ಅತಂತ್ರರಾಗಿದ್ದ ಡಾ.ಸಾಸಲು ಸತೀಶ್ ಅವರಿಗೆ “ಶಿರಾ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿರು” ಎಂಬ ಸೂಚನೆ ಪಕ್ಷದ ಉನ್ನತ ವಲಯದಲ್ಲಿ ದೊರಕಿದ್ದೇ ಕಾರಣವಾಗಿ ಅವರು ಶಿರಾ ಕಡೆ ಗಮನ ಹರಿಸಿದರು. ಅಲ್ಲೇ ಕಚೇರಿ, ನಿವಾಸ ಅಂತೆಲ್ಲ ಅಡಿಪಾಯವನ್ನೂ ಹಾಕಿಕೊಂಡರು.

ಕಾಡುಗೊಲ್ಲರು ರಾಜ್ಯದಲ್ಲಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಜಾತಿ, ಶಿರಾ ಕಾಡುಗೊಲ್ಲರ ಸಾಂಸ್ಕೃತಿಕ ರಾಜಧಾನಿ, ಶಿರಾಕ್ಕೆ ಹೊಂದಿಕೊಂಡ ಹಿರಿಯೂರು, ಹೊಸದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಚಿಕ್ಕನಾಯಕನಹಳ್ಳಿ, ತಿಪಟೂರು,ಅರಸೀಕೆರೆ , ಗುಬ್ಬಿ,. ತುರುವೇಕೆರೆ, ಕುಣಿಗಲ್, ತುಮಕೂರು ತಾಲೂಕು, ಕೊರಟಗೆರೆ ಹಾಗೂ ಮಧುಗಿರಿ ತಾಲೂಕುಗಳೂ ಸೇರಿದಂತೆ ಆಸುಪಾಸಿನ 32 ತಾಲೂಕುಗಳಲ್ಲಿ ಚುನಾವಣೆಗಳಲ್ಲಿ ನಿರ್ಣಾಯಕ ಎನ್ನುವಷ್ಟು ಜನಸಂಖ್ಯೆ ಹೊಂದಿದೆಯಲ್ಲದೇ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಎಚ್ಚರ ಪಡೆದುಕೊಂಡಿದೆ.

ಇನ್ನೂಮಹತ್ವದ ಸಂಗತಿ ಎಂದರೆ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಇತ್ತೀಚೆಗೆ ಪರಿಶಿಷ್ಟ ಪಂಗಡದವರಿಗೆ ಮೀಸಲು ಕ್ಷೇತ್ರವಾಗಿ ಘೋಷಣೆಯಾಗುವ ಮೊದಲಿಗೆ 1999ರ ಚುನಾವಣೆಯಲ್ಲಿ ಕಾಡುಗೊಲ್ಲ ಸಮುದಾಯದ ಎ.ವಿ.ಉಮಾಪತಿ ಸ್ವತಂತ್ರರಾಗಿ ಸ್ಪರ್ಧಿಸಿ ಅತ್ಯಧಿಕ ಬಹುಮತಗಳಿಂದ ಇಲ್ಲಿ ಶಾಸಕರಾಗಿ ಚುನಾಯಿತರಾಗಿದ್ದರು.

ಶಿರಾದಲ್ಲಿ ಬೇವಿನಹಳ್ಳಿಯ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಕೆ.ಬಡೀರಣ್ಣ ಕಾಡುಗೊಲ್ಲ ಸಮುದಾಯವನ್ನು ಪ್ರತಿನಿಧಿಸಿ ವಿಧಾನಸಭೆಗೆ ಸ್ವತಂತ್ರರಾಗಿ ಕಣಕ್ಕಿಳಿದಿದ್ದರು. ಒಂದು ಸಲ ನಾಯಕ ಸಮುದಾಯದ ಸಾ.ಲಿಂಗಯ್ಯ,ಮತ್ತೊಂದು ಸಲ ಕುರುಬ ಸಮುದಾಯದ ಎಸ್.ಕೆ.ದಾಸಪ್ಪನವರೂ ಶಾಸಕರಾಗಿದ್ದರು. ಶಿರಾ ಕ್ಷೇತ್ರದಲ್ಲಿರುವ ಜಾತಿಗಳ ಜನಸಂಖ್ಯಾವಾರು ಲೆಕ್ಕ ತೆಗೆದುಕೊಂಡರೆ ಕುಂಚಿಟಿಗರೇನೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲವಾದರೂ ಸಾಮಾಜಿಕವಾಗಿ, ಆರ್ಥಿಕವಾಗಿ ಮಾತ್ರವಲ್ಲದೇ, ಧಾರ್ಮಿಕ ಹಾಗೂ ರಾಜಕೀಯ ಪ್ರಾಬಲ್ಯವೇ ಕಾರಣವಾಗಿ ಪಿ.ಎಂ.ರಂಗನಾಥಪ್ಪನವರ ತರುವಾಯ ಕುಂಚಿಟಿಗರ ಕ್ಷೇತ್ರ ಎಂಬಂತೆ ಭಾಸವಾಗತೊಡಗಿದೆ.

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಮುನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಡೀ ರಾಜ್ಯದಲ್ಲಿ ಸಂಘಟಿಸಿದ ಅಹಿಂದ( ಅಲ್ಪ ಸಂಖ್ಯಾತ, ಹಿಂದುಳಿದ ಮತ್ತು ದಲಿತ) ಕಾರ್ಡ್ ಈ ಸಲದ ಚುನಾವಣೆಯಲ್ಲಿ ಅವರ ಪಕ್ಷದಲ್ಲಿ ಚಲಾವಣೆಗೆ ಬರುತ್ತಿಲ್ಲ ಎನ್ನುವುದು ಎಲ್ಲರಿಗೂ ಅರಿವಾಗಿದೆ. ಒಕ್ಕಲಿಗರು, ಲಿಂಗಾಯತರು ಹಾಗೂ ಕುರುಬರು ಟಿಕೆಟ್ ಹಂಚಿಕೆಯಲ್ಲಿ ಸಮ ಪಾಲು ಕೇಳುತ್ತಿದ್ದಾರೆ. ದಲಿತರಿಗೆ ಮೀಸಲಾದ ಕ್ಷೇತ್ರಗಳಲ್ಲಿ ಅಸ್ಪೃಶ್ಯ ಜಾತಿಗಳಲ್ಲಿ ಮುಖ್ಯವಾದ ಬಲಗೈನವರು ಆಯಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದೇ ಇದ್ದಾಗಲೂ ಸಾಕಷ್ಟು ಪ್ರಾತಿನಿಧ್ಯ ಪಡೆದುಕೊಂಡಿದ್ದಾರೆ, ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಆರು ಮಂದಿ ಬಲಗೈ ಹಾಗೂ ಕೇವಲ ಒಬ್ಬರು ಎಡಗೈ ಶಾಸಕರಿದ್ದರು. ಕಾಡುಗೊಲ್ಲರಿಗೆ ರಾಜಕೀಯ ಪ್ರಾತಿನಿಧ್ಯ ಕೊಡಬೇಕೆನ್ನುವ ಲೆಕ್ಕದಲ್ಲಿ ಅವರು ಚಿತ್ರದುರ್ಗದ ಜಯಮ್ಮ ಬಾಲರಾಜು ಅವರನ್ನು ಎಂಎಲ್ ಸಿ ಮಾಡಿದ್ದರು. ಆದರೆ ಈ ಸಲ ಲೆಕ್ಕ ಬದಲಾಗಿದೆ. ಕಾಡುಗೊಲ್ಲರು ಟಿಕೆಟ್ ವಂಚಿತರಾಗಿದ್ದಾರೆ. ಕಾಂಗ್ರೆಸ್ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ ಎಂದು ನಂಬಿದ್ದ ಕಾಡುಗೊಲ್ಲರು ನಿರಾಶೆಯಿಂದ ಹತಾಶರಾಗಿದ್ದಾರೆ. ಪರಿಣಾಮ ಮುಂದಿನ ಚುನಾವಣೆ ಮೇಲೆ ಆಗಲಿದೆ.

ಈ ಸದಾವಕಾಶವನ್ನು ಜೆಡಿಎಸ್ ಸದ್ಭಳಕೆ ಮಾಡಿಕೊಳ್ಳುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ. ಶಿರಾದಲ್ಲಿ ಒಂಬತ್ತು ಆಕಾಂಕ್ಷಿಗಳಿದ್ದರೂ ಜೆಡಿಎಸ್ ತನ್ನ ಕ್ಯಾಂಡಿಡೇಟ್ ಯಾರು ಎಂದು ಹೇಳುತ್ತಿಲ್ಲ, ಒಂದು ವೇಳೆ ಶಿರಾದಿಂದ ಕಾಂಗ್ರೆಸ್ ಟಿಕೆಟ್ ವಂಚಿತ ಡಾ.ಸಾಸಲು ಸತೀಶ್ ಅವರಿಗೆ ಜೆಡಿಎಸ್ ಟಿಕೆಟ್ ಕೊಟ್ಟಲ್ಲಿ, ಹಿರಿಯೂರು, ಹೊಸದುರ್ಗ, ಚಿಕ್ಕನಾಯಕನಹಳ್ಳಿ,ಮಧುಗಿರಿ, ಗುಬ್ಬಿ, ತುರುವೇಕೆರೆ,ತುಮಕೂರು ಗ್ರಾಮಾಂತರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅನುಕೂಲ ಮಾಡಿಕೊಳ್ಳುವ ಸಾಧ್ಯತೆಯನ್ನು ಜೆಡಿಎಸ್ ವರಿಷ್ಟರು ತಳ್ಳಿಹಾಕುತ್ತಿಲ್ಲ. ಜಸ್ಟ್ ಕಾದು ನೋಡಿ.

ಕಾಡುಗೊಲ್ಲ-ಊರುಗೊಲ್ಲ ಒಂದೇ ಅಲ್ಲ!?

ಕಾಡುಗೊಲ್ಲ ಹಾಗೂ ಊರು ಗೊಲ್ಲ ಎರಡೂ ಒಂದೇ ಜಾತಿ ಅಲ್ಲ, ಹೆಸರಿನ ಕೊನೆಯಲ್ಲಿ ಗೊಲ್ಲ ಎನ್ನುವುದನ್ನು ಬಿಟ್ಟರೆ ಯಾವ ಸಾಮ್ಯತೆಯೂ ಇಲ್ಲ, ಕೊಡುಕೊಳುವ ಸಂಬಂಧವಿಲ್ಲ, ಸಾಂಸ್ಕೃತಿಕ ಐಕ್ಯತೆ ಇಲ್ಲ, ಜೀವನ ವಿಧಾನದಲ್ಲೂ ಅಷ್ಟೇ, ಕಾಡುಗೊಲ್ಲರ ಸಾಂಸ್ಕೃತಿಕ ನಾಯಕ ಜುಂಜಪ್ಪ ಕೃಷ್ಣನಂತೆಯೇ ಗಣೆ ಊದುತ್ತಿದ್ದ ಎಂಬ ಕಾರಣಕ್ಕೇ ಆತನನ್ನು ಕೃಷ್ಣನ ಅವತಾರಕ್ಕೆ ಸಮೀಕರಿಸಿರುವುದು ಐತಿಹಾಸಿಕ ತಪ್ಪಾಗಿದೆ. ಜೊತೆಗೆ ಕಾಡುಗೊಲ್ಲರ ಪ್ರತಿನಿಧಿ ಎಂಬಂತೆ ಬಿಂಬಿಸಿಕೊಂಡು ಊರುಗೊಲ್ಲರೇ ಎಲ್ಲ ರಾಜಕೀಯ ಲಾಭ ಪಡೆದುಕೊಂಡಿದ್ದಾರೆ.