ಆ ಕತ್ತಲಲ್ಲಿ ಹಲಸಿನ ಮರದಿಂದ ಧೊಪ್ ಅಂತ ಬಿದ್ದದ್ದು ಕಾಯೋ, ಕರಡಿಯೋ? -ಹಳ್ಳಿ ಹೈದನ ನೂರೆಂಟು ನೆನಪುಗಳು -  -ಸಿ.ಚಿಕ್ಕಣ್ಣ ಐಎಎಸ್(ವಿ)

ಆ ಕತ್ತಲಲ್ಲಿ ಹಲಸಿನ ಮರದಿಂದ ಧೊಪ್ ಅಂತ ಬಿದ್ದದ್ದು ಕಾಯೋ, ಕರಡಿಯೋ

 ಆ ಕತ್ತಲಲ್ಲಿ ಹಲಸಿನ ಮರದಿಂದ ಧೊಪ್ ಅಂತ ಬಿದ್ದದ್ದು ಕಾಯೋ, ಕರಡಿಯೋ? -ಹಳ್ಳಿ ಹೈದನ ನೂರೆಂಟು ನೆನಪುಗಳು -   -ಸಿ.ಚಿಕ್ಕಣ್ಣ ಐಎಎಸ್(ವಿ)

 ಹಳ್ಳಿ ಹೈದನ ನೂರೆಂಟು ನೆನಪುಗಳು -

 -ಸಿ.ಚಿಕ್ಕಣ್ಣ ಐಎಎಸ್(ವಿ)

'ಧೊಪ್' ಎಂದು ಒಂದು ಭಾರವಾದ ವಸ್ತು ಹಲಸಿನ ಮರದಿಂದ ಬಿತ್ತು. ಬಿದ್ದ ಜಾಗದಲ್ಲಿ ಗುಂಡಿ ಬಿದ್ದು ಅದರ ಕೆಸರೆಲ್ಲ ನನ್ನ ಮೇಲೆ ಸಿಡಿಯಿತು. 'ಪರಕಾ, ಹಲಸಿನ ಕಾಯಿ ಬಿತ್ತೋ, ಬೇಗ ಬಾರೋ' ಎಂದು ಕೂಗಿಕೊಂಡು, ಲಾಟೀನು ಹಿಡಿದು, ಗುಂಡಿಬಿದ್ದ ಜಾಗಕ್ಕೆ ಓಡಿ ನೋಡಿದೆ. ದೊಡ್ಡ ಕರಡಿಯೊಂದು ದಪ್ಪ ಗಾತ್ರದ ಹಲಸಿನ ಹಣ್ಣನ್ನು ತಬ್ಬಿಕೊಂಡು ಅಂಗಾತ ಮೇಲಿಂದ ಕೆಳಗೆ ಬಿದ್ದಿದೆ. ಲಾಟೀನು ಬೆಳಕಿನಲ್ಲಿ ಕರಡಿಯನ್ನು ನೋಡಿ ಧಂಗಾದ ನನಗೆ ತಲೆ ತಿರುಗಿದಂತಾಯ್ತು.

ಆ ಕತ್ತಲಲ್ಲಿ ಹಲಸಿನ ಮರದಿಂದ ಧೊಪ್ ಅಂತ

ಬಿದ್ದದ್ದು ಕಾಯೋ, ಕರಡಿಯೋ?

1957 ಏಪ್ರಿಲ್ ಕೊನೆಯ ವಾರ ತಂದೆಯವರ ಜೊತೆ ಬಂದು ಶಾಲಾ ಫೀ ಕಟ್ಟಿದೆ. ಈ ವರ್ಷ ಮಧುಗಿರಿಯಲ್ಲಿಯೇ ವಾಸ್ತವ್ಯ ಎಂದು ತೀರ್ಮಾನಿಸ ಲಾಗಿತ್ತು. ವೆಂಕಟರಮಣ ದೇವಸ್ಥಾನದ ಸಂದಿಯಲ್ಲಿ ಮಾಲಿಮರಿಯಪ್ಪ ವಿದ್ಯಾರ್ಥಿನಿಲಯದ ವಾರ್ಡನ್ ಮತ್ತು ವಕೀಲರು ಆದ ಆರ್. ಚಿಕ್ಕಯ್ಯನವರನ್ನು ನೋಡಲು ಹೋದೆವು. ಸದ್ಯ, ಅವರು, ಕೋರ್ಟಿಗೆ ರಜ ಇದ್ದುದರಿಂದ ಮನೆಯಲ್ಲಿಯೇ ಇದ್ದರು. ನಮ್ಮ ತಂದೆಯವರನ್ನು ನೋಡಿ ಹೊರಗೆ ಬಂದು 'ಬಾ ಅಣ್ಣ, ಏನು ನಮ್ಮ ಮನೆ ಕಡೆ ಪಾದ ಬೆಳೆಸಿದ್ದೀಯಾ' ಎಂದರು. ಪಕ್ಕದಲ್ಲಿ ನಿಂತಿದ್ದ ನಾನು ನಮಸ್ಕಾರ ಸಾರ್' ಎಂದೆ. “ನಿನ್ನ ಮಗನಾ' ಅಂತ ಕೇಳಿದರು. 'ಹೂನಪ್ಪ ಇಲ್ಲೇ ಹೈಸ್ಕೂಲ್ ಓದ್ತಾ  ಅವನೆ. ಈ ವರ್ಷ ಎಸ್‌ಎಸ್‌ಎಲ್‌ಸಿ ಅದಕ್ಕೆ ನಿಮ್ಮ ಹಾಸ್ಟೆಲಿಗೆ ಸೇರಿಸಬೇಕು. ಒಂದು ಸೀಟು ಕೊಡು' ಎಂದರು. ಅದಕ್ಕೇನಂತೆ, ಈ ಹಾಸ್ಟೆಲ್ ಮಾಲಿಮರಿಯಪ್ಪನವರು ಮಾಡಿರೋದೇ ಹಳ್ಳಿ ಹುಡುಗರಿಗೆ ಅನುಕೂಲ ಆಗಲಿ ಅಂತ. ಸೀಟು ಕೊಡ್ತೀನಿ, ಆದರೆ ದುಡ್ಡು ತಿಂಗಳಿಗೆ 10 ರೂಪಾಯಿಯಂತೆ ವರ್ಷಕ್ಕೆ 100 ರೂ. ಕಟ್ಟಬೇಕು, ದುಡ್ಡು ಕೊಡೋಕಾಗಲ್ಲ ಅಂದರೆ ಒಂದು ಪಲ್ಲ ಅಕ್ಕಿ, 50 ತೆಂಗಿನ ಕಾಯಿ 10 ಸೇರು ಬೇಳೆ ಕೊಡಬಹುದು' ಎಂದು ಹೇಳಿ 'ನಿನಗೇನು, ಅಕ್ಕಿ ಚೆನ್ನಾಗಿ ಬೆಳಿತೀಯಂತೆ, ಒಂದು ಪಲ್ಲ ಅಕ್ಕಿ ತಂದಾಕು. ಮುಂದಿನ ತಿಂಗಳು ಹುಡುಗನ್ನ ಕಳುಹಿಸಿ, ಹಾಸಿಗೆ ಬಟ್ಟೆಬರೆ ಎಲ್ಲ ನೀನೇ ತರಬೇಕು' ಎಂದರು. ನನ್ನ ಕಡೆ ನೋಡಿ `ಉಪಕಾರ ಆಯ್ತು' ಎಂದು ಹೇಳಿದ ಅಪ್ಪ ಕೈ ಮುಗಿದು ಕಾಲಿಗೆ ಬೀಳೋ ಎಂದರು ನನಗೆ, ನಾನು ಅವರ ಕಾಲಿಗೆರಗಿದೆ. 'ಚೆನ್ನಾಗಿ ಓದೋ, ಎಲ್.ಎಸ್. ನಲ್ಲಿ ಯಾವ ಕ್ಲಾಸಿನಲ್ಲಿ ಪಾಸು ಮಾಡಿದ್ದೆ' ಎಂದರು ಚಿಕ್ಕಯ್ಯನವರು,

'ಫಸ್ಟ್ ಕ್ಲಾಸ್ ಸರ್', ಎಂದೆ, Very Good, SSLCನಲ್ಲೂ First Classನಲ್ಲಿ ಪಾಸಾಗಬೇಕು, ಚೆನ್ನಾಗಿ ಓದು' ಎಂದು ಹರಸಿದರು.

 

ಮೇ ತಿಂಗಳ ಮೊದಲ ವಾರ ಕಮಾನು ಗಾಡಿಯಲ್ಲಿ ಮಂಡಿಗೆ ಅಡಿಕೆ ಹಾಕಿಕೊಂಡು, ಒಂದು ಭರ್ತಿ ಚೀಲ ಅಕ್ಕಿ, 50 ತೆಂಗಿನ ಕಾಯಿ, 10 ಕೆ.ಜಿ.ಯಷ್ಟು ತೊಗರಿ ಬೇಳೆ ಹಾಕಿಕೊಂಡು ಮಧುಗಿರಿಗೆ ಬಂದೆವು. ಮೊದಲು ಕೇಶವಯ್ಯನ ಮಂಡಿಪೇಟೆಯಲ್ಲಿ ಅಡಿಕೆ ಇಳಿಸಿ ತೂಕ ಹಾಕಿಸಿ ಚೀಟಿ ತೆಗೆದುಕೊಂಡು, ನಂತರ ಮಲ್ಲೇಶ್ವರಸ್ವಾಮಿ ಗುಡಿ ಬೀದಿಯಲ್ಲಿದ್ದ ಮಾಲಿಮರಿಯಪ್ಪ ಹಾಸ್ಟೆಲ್‌ನ ಹತ್ತಿರ ಹೋಗಿ ಅಕ್ಕಿ, ಕಾಯಿ, ಬೇಳೆಗಳನ್ನು ಹಾಸಿಗೆ, ಬಟ್ಟೆ, ಪುಸ್ತಕಗಳ ಟ್ರಂಕನ್ನು ಇಳಿಸಿ, ಅಲ್ಲಿದ್ದ ಮೇಲ್ವಿಚಾರಕರಿಗೆ ಇವೆಲ್ಲದರ ಲೆಕ್ಕಕೊಟ್ಟು ನನ್ನ ಸ್ವವಿವರಗಳನ್ನು ಒದಗಿಸಿ ಹಾಸ್ಟೆಲ್‌ನಲ್ಲಿ ದಾಖಲು ಮಾಡಿಕೊಂಡೆ. ನಂತರ ಗಾಡಿಯನ್ನು ತಂದಿದ್ದ ತಿಪ್ಪನಿಗೆ ಹೋಟೆಲ್‌ನಲ್ಲಿ ಊಟ ಹಾಕಿಸಿ, ನಾನೂ ಉಂಡು, ಗಾಡಿಯನ್ನು ಊರಿಗೆ ಕಳುಹಿಸಿದೆ. ಅಂದಿನಿಂದ ನಾನು ಮಧುಗಿರಿ ವಿದ್ಯಾರ್ಥಿನಿಲಯದ ವಾಸಿಯಾದೆ.

 

ಒಂದು ದೊಡ್ಡ ಹಾಲ್‌ನಲ್ಲಿ ನನ್ನ ಹಾಸಿಗೆ, ಟ್ರಂಕನ್ನು ಇರಿಸಿದೆ. ನೆಲದ ಮೇಲೆ ಹಾಸಿಕೊಂಡು, ಓದಲು, ಬರೆಯಲೂ, ಮಲಗಲೂ ಇದೇ ವ್ಯವಸ್ಥೆ ಎಂದರು. ಶಾಲಾ ಪಠ್ಯಕ್ರಮ ಇನ್ನೂ ಆರಂಭವಾಗಿಲ್ಲದೆ ಬಿಡುವಿತ್ತು. ರಾತ್ರಿ 7 ಗಂಟೆಯ ಶೋಗೆ ಶಂಕರ ಟಾಕೀಸಿನಲ್ಲಿ ನಡೆಯುತ್ತಿದ್ದ 'ಮಾಯಾ ಬಜಾರ್' ಸಿನಿಮಾ ನೋಡಿದೆ. ತೆಲುಗಿನ ದೊಡ್ಡ ದೊಡ್ಡ ನಟರೆಲ್ಲಾ ನಟಿಸಿದ್ದ ಸಿನಿಮಾದ ಘಟೋದ್ಭಜ ಹಾಡುತ್ತಿದ್ದ, 'ವಿವಾಹ ಭೋಜನವಿದು' -ಹಾಡು ನನ್ನನ್ನು ಅನೇಕ ಸಲ ಗುನುಗುವಂತೆ ಮಾಡಿತು.

 

ಹಾಸ್ಟೆಲ್‌ನಲ್ಲಿ ನನ್ನನ್ನೂ ಸೇರಿ 12 ಜನರಿದ್ದು, ಇನ್ನೂ ಸೇರುತ್ತಿದ್ದರು. ಅಡುಗೆ ಭಟ್ಟನ ನೇಮಕ ನಡೆಯುತ್ತಿತ್ತು. ಆದ್ದರಿಂದ ನಾವೆಲ್ಲ ಕೃಷ್ಣಭವನದಲ್ಲೇ ಊಟ-ತಿಂಡಿ ಮಾಡುತ್ತಿದ್ದೆವು, ಕಾಲಕಳೆಯಲು ಕಷ್ಟವಾಗುತ್ತಿತ್ತು. ಮಧ್ಯಾಹ್ನ ಶಂಕರ ಟಾಕೀಸಿನಲ್ಲಿ ರಾಜಕಪೂರ್ ಅವರ 'ಆವಾರ' ಸಿನಿಮಾ, ಮೊದಲ ದಿನ First Showಗೆ, ಮತ್ತೆ ಮಾಯಾಬಜಾರ್, ಹೀಗೆ ಸಿನಿಮಾ ನೋಡುವ ಚಟ ನನಗೆ ಅಂಟಿಕೊಂಡಿದ್ದಲ್ಲದೆ, ಆ ಸಿನಿಮಾ ಹಾಡುಗಳನ್ನು ಸರಾಗವಾಗಿ ಗುನುಗುವುದನ್ನು ಕಲಿತುಬಿಟ್ಟೆ.

 

ಮೇ ತಿಂಗಳ ಮಧ್ಯದಿಂದ ಶಾಲೆಯಲ್ಲಿ ಪಾಠಪ್ರವಚನಗಳು ಆರಂಭವಾದವು. ಹಾಸ್ಟೆಲಿನ ಸಂಖ್ಯೆ 28ಕ್ಕೆ ಏರಿತ್ತು. ಒಬ್ಬ ಆಡಿಗೆಯವರು, ಒಬ್ಬ ಕ್ಲೀನರ್ ನೇಮಕವಾಗಿದ್ದರು. ಬೆಳಿಗ್ಗೆ ಚಿತ್ರಾನ್ನ, ಉಪ್ಪಿಟ್ಟು ಮುಂತಾದ ತಿಂಡಿಗಳನ್ನು ಮಾಡಿದರೆ, ರಾತ್ರಿ ರಾಗಿ ಮುದ್ದೆ, ಅನ್ನ ಸಾರು, ಮಜ್ಜಿಗೆ ಊಟ: ಮಧ್ಯಾಹ್ನ ಊಟವಿಲ್ಲ, ಹೊಟ್ಟೆ ಹಸಿದಾಗಲೆಲ್ಲಾ ಕೃಷ್ಣ ಭವನದಲ್ಲಿ ತಿಂಡಿ ತಿಂದು ಕ್ಲಾಸಿಗೆ ಹೋಗುತ್ತಿದ್ದೆ.

 

ಹಾಸ್ಟೆಲ್‌ನಲ್ಲಿ ಎಲ್ಲಾ ಜಾತಿ ವರ್ಗದ ಜನರಿಗೂ ಪ್ರವೇಶ ನೀಡಿದ್ದರು: ಮಾಲಿ ಮರಿಯಪ್ಪನವರು ಗಾಂಧಿವಾದಿಗಳಾದ್ದರಿಂದ ಜಾತಿಭೇದ, ವರ್ಣಭೇದ ನೀತಿ ಪಾಲಿಸುತ್ತಿರಲಿಲ್ಲ. ಹೀಗಾಗಿ ನಮ್ಮ ಹಾಸ್ಟೆಲ್‌ನಲ್ಲಿ ವಡ್ಡರು, ಮಾದಿಗರು, ವಕ್ಕಲಿಗರು, ಸಾದರು, ಗೊಲ್ಲರು ಹೀಗೆ ಎಲ್ಲಾ ಜಾತಿಯವರು ಇದ್ದು, ಅವರ ಜತೆ ಬೆರೆಯಲು ನನಗೆ ಸದಾವಕಾಶ ದೊರೆಯಿತು. ಅವರಲ್ಲಿ 16 ಜನ ವಿದ್ಯಾರ್ಥಿಗಳು ಆ ವರ್ಷ ಎಸ್‌ಎಸ್‌ಎಲ್ ಸಿ ಕಟ್ಟಿದ್ದರು.

 

ಹಾಸ್ಟೆಲ್‌ ವಾತಾವರಣಕ್ಕೆ ಒಗ್ಗಿಕೊಂಡೆ. ಅಲ್ಲಿನ ಎರಡು ಮೂರು ಜನ ನನ್ನ 'ಸಿ' ಸೆಕ್ಷನ್‌ನಲ್ಲಿಯೇ ಓದುತ್ತಿದ್ದರು. ಅವರು ನನ್ನ ಪರಮ ಸ್ನೇಹಿತರಾದರು. ಪ್ರತಿ ಬುಧವಾರ ಮಧುಗಿರಿ ಸಂತೆ. ತಿಂಗಳಲ್ಲಿ ಎರಡು ಮೂರು ಸಾರಿ ತಂದೆಯವರು ಮಧುಗಿರಿಗೆ ಅಡಿಕೆ ಅಥವಾ ಕಡಲೆಕಾಯಿ ಇತ್ಯಾದಿ ಬಸ್‌ ಮೇಲೆ ಹಾಕಿಕೊಂಡು ಒಂದು ಮಾರಾಟ ಮಾಡುತ್ತಿದ್ದರು. ವ್ಯಾಪಾರ ಮುಗಿದ ಮೇಲೆ ಊರಿಗೆ ಹೋಗುವ ಮುನ್ನ ಹಾಸ್ಟೆಲ್‌ಗೆ ಬಂದು ಯೋಗಕ್ಷೇಮ ವಿಚಾರಿಸಿಕೊಂಡು, ನಾನು ಕೇಳಿದ ಅರ್ಧದಷ್ಟು ದುಡ್ಡು ಕೊಟ್ಟು ಹೋಗುವ ಪದ್ಧತಿ ಇಟ್ಟುಕೊಂಡಿದ್ದರು. ಒಂದೊಂದು ಭಾನುವಾರ ಅಥವಾ ರಜಾ ದಿನ ಬಾಡಿಗೆ ಸೈಕಲ್ ಮೇಲೆ ಭಕ್ತರಹಳ್ಳಿಗೆ ಹೋಗಿ, ಸ್ನಾನಾದಿಗಳನ್ನು ಮುಗಿಸಿ, ಬಟ್ಟೆ ಒಗೆದುಕೊಂಡು ಅಕ್ಕ ಮಾಡುತ್ತಿದ್ದ ಒಬ್ಬಟ್ಟು ತಿಂದು ಮಧುಗಿರಿಗೆ ಹಿಂತಿರುಗುತ್ತಿದ್ದ. ಅಕ್ಕನ ಮನೆಯಲ್ಲಿ ಎಲ್ಲವೂ ಸರಿ ಇಲ್ಲ ಎಂದನಿಸುತ್ತಿತ್ತು, ಪಾಪುವಿಗೆ 2 ವರ್ಷ ವಾದರೂ ಇನ್ನೂ ಮಾತು ಬರುತ್ತಿರಲಿಲ್ಲ. 'ಡಾಕ್ಟರ್ ಹತ್ತಿರ ತೋರಿಸಿ' ಎಂದೆ. 'ಇಲ್ಲಿ ಆಗಲ್ಲ ಮೈಸೂರಿಗೆ ಕರೆದುಕೊಂಡು ಹೋಗಿ ಎಂದು ಹೇಳ್ತಾರೆ ಮಧುಗಿರಿ ಡಾ| ಗುಂಡುರಾವ್, ಆದರೆ ನಿಮ್ಮ ಮಾವ ಕಿವಿಗೆ ಹಾಕ್ಕೊಳ್ಳಲ್ಲ' ಎಂದು ಅಕ್ಕ ಕಣ್ಣೀರು ಹಾಕುತ್ತಿದ್ದರು. ಅವರು ಎರಡನೇ ಮಗುವಿನ ಗರ್ಭಿಣಿ ಬೇರೆ.

 

Optional ಹಿಂದಿ ಮತ್ತು History ತೆಗೆದುಕೊಂಡಿದ್ದರಿಂದ ಅಲ್ಪಸ್ವಲ್ಪ ಹಿಂದಿಯಲ್ಲಿ ಮಾತನಾಡುವುದನ್ನು ಕಲಿತೆ, ಹಿಂದಿ ಸಿನಿಮಾ ಡೈಲಾಗ್‌ಗಳು ಅಲ್ಪಸ್ವಲ್ಪ ಅರ್ಥವಾಗುತ್ತಿದ್ದವು. ಹೀಗಾಗಿ ಮಧುಗಿರಿಗೆ ಬರುತ್ತಿದ್ದ ಎಲ್ಲಾ ಹಿಂದಿ ಸಿನಿಮಾಗಳನ್ನು ನೋಡುತ್ತಿದ್ದೆ, ಅದರಲ್ಲಿ ವೈಜಯಂತಿಮಾಲ ನಟಿ ಸಿದ್ಧ ನಾಗಿನ್ ಕೂಡಾ ಒಂದು. ಅವರ ಅಭಿನಯ, ಸಿನಿಮಾದ ಸಂಗೀತ ನನಗೆ ಗುಂಗು ಹಿಡಿಸಿದ್ದವು

 

ಸಿನಿಮಾ ಮುಗಿಸಿ ರಾತ್ರಿ ಹಾಸ್ಟೆಲ್ ಗೆ ಬರುವುದು ರಾತ್ರಿ 9 ಗಂಟೆಯಾಗುವುದು.  ಅಡಿಗೆಯವರು ನನ್ನ ತಟ್ಟೆಯಲ್ಲಿ ಮುದ್ದೆ, ಅನ್ನ, ಸಾರು, ಹಳೆ ಉಗೆಯ ಹತ್ತಿರ ಮುಚ್ಚಿಟ್ಟಿರುತ್ತಿದ್ದರು. ಒಂದು ರಾತ್ರಿ ಹೀಗೆ ಸಿನಿಮಾ ನೋಡಿ 9 ಗಂಟೆಗೆ ಹಾಸ್ಟೆಲ್‌ಗೆ ಬಂದೆ, ವಾರ್ಡನ್ ಆರ್. ಚಿಕ್ಕಯ್ಯನವರು ಕುರ್ಚಿ ಹಾಕಿಕೊಂಡು ಪ್ರವೇಶದ್ವಾರದಲ್ಲಿ ನನಗೋಸ್ಕರ ಕಾಯುತ್ತಿದ್ದರು. 'ಏ, ಬಾರೋ ಇಲ್ಲ, ಏಕೊ ಎಂದು ಸಲ ಸಿನಿಮಾಕ್ಕೆಗಿ ಲೇಟಾಗಿ ಬಂದು ಊಟ ಮಾಡ್ತೀಯಂತೆ, ನಿನ್ನಿಂದ ಹುಡುಗರೆಲ್ಲ ಇದನ್ನೇ ಕಲಿತರೆ ನಾವೇನು ಮಾಡುವುದು' ಎಂದು ಬೈಯಲಾರಂಭಿಸಿದರು. 'ನಿಮ್ಮಪ್ಪನ್ನ  ನಾಳೆ ಬರ ಹೇಳು, ಅವರತ್ರಾನೇ ಮಾತಾಡ್ತೇನೆ” ಎಂದು ಹೇಳಿ ಅಡಿಗೆಯವರನ್ನು ಕರೆದು, “ಇನ್ನು ಮೇಲೆ ಎಲ್ಲಾ ಹುಡುಗರ ಜತೆ ಇವನಿಗೆ ಊಟ ಕೊಡಬೇಕು, ಸಿನಿಮಾಕ್ಕೆ ಹೋದರೆ ಅವತ್ತು ಊಟ ಬಂದ್‌!' ಎಂದು ಎಚ್ಚರಿಸಿದರು.

 

ಆ ಘಟನೆ ಆದ ಮೇಲೆ ಸಿನಿಮಾ ಕಡಿಮೆ ಮಾಡಿ, ಓದಿನ ಕಡೆ ಗಮನ ಹರಿಸಿದೆ. ಟೆರೇಸ್ ಮೇಲೆ ಹೋಗಿ ಕುಳಿತು ನಾವು ಮೂವರು ಹುಡುಗರೂ ಲೈಟು ಬಿಡಿಸಿಕೊಂಡು ಓದುತ್ತಿದ್ದವು, ರಾತ್ರಿ ಹನ್ನೊಂದರವರೆಗೆ,

 

ಏಪ್ರಿಲ್ 1959, SSLC ಪರೀಕ್ಷೆ ಬಂದೇ ಬಿಟ್ಟಿತು. ಪರೀಕ್ಷೆಯನ್ನು ಧೈರ್ಯವಾಗಿ ಬರೆದೆ . ಗಣಿತ, ಹಿಂದಿ ನನಗೆ ಕಬ್ಬಿಣದ ಕಡಲೆಗಳಾಗಿದ್ದವು. ಇಂಗ್ಲಿಷ್, ಕನ್ನಡ, ವಿಜ್ಞಾನ, ಸೋಷಿಯಲ್ ಸುಲಭವಾಗಿದ್ದವು. ಪರೀಕ್ಷೆ ಮುಗಿಸಿದ ಮರುದಿನ ಸೇವಾದಳದ ತಾಲೂಕು ಜಾಂಬೂರಿಯಲ್ಲಿ ಭಾಗವಹಿಸಿದೆ, ಅದರ ಮರುದಿನ ನಮ್ಮ ಹಾಸ್ಟೆಲಿನ 5 ಜನ ಸ್ನೇಹಿತರೊಂದಿಗೆ ಮಧುಗಿರಿಯ ಬೆಟ್ಟವನ್ನು ಹತ್ತಿ ಆದರೆ ಎತ್ತರದಿಂದ ಶಾಲೆ ಹೇಗೆ ಕಾಣುತ್ತದೆ. ಸುತ್ತಮುತ್ತಲ ಹಳ್ಳಿಗಳು ಕೆರೆಗಳು, ರಸ್ತೆಗಳು, ನಮ್ಮೂರ ಚಂದ್ರಗಿರಿ ಬೆಟ್ಟ, ಮಿಡಗೇಶಿ ಬೆಟ್ಟ, ಚನ್ನರಾಯನದುರ್ಗ ಎಷ್ಟು ಸುಂದರವಾಗಿ ಕಾಣುತ್ತವೆ ಎಂದೆಲ್ಲ ಕಣ್ಣಾರೆ ನೋಡಿ ಆನಂದಿಸಿದೆವು, ಮರುದಿನ ಟಂಕು, ಹಾಸಿಗೆ ಎತ್ತಿಕೊಂಡು ಬಸ್ಸಿನಲ್ಲಿ ಊರಿಗೆ ಹಿಂದಿರುಗಿದೆ. ಅಕ್ಕ ಎರಡನೆಯ ಹೆರಿಗೆಗೆ ಊರಿಗೆ ಬಂದಿದ್ದರು.

 

ಕರಡಿ ಕಾಟ

 ಎಂದಿನಂತೆ, ಈ ಬೇಸಿಗೆಯಲ್ಲಿ ಸಹ ವ್ಯವಸಾಯದ ಕಡೆ ಗಮನ ಹರಿಸಿದೆ. ಆಳುಗಳ ಜತೆ ಬಳೆಹಳ್ಳಿಯ ಬಾವಿ, ದೊಡ್ಡತೋಟದ ಬಾವಿಯಲ್ಲಿ ಕಪಿಲೆ ಹೊಡೆದು ಭತ್ತದ ಗದ್ದೆ, ಅಡಿಕೆ ತೋಟಕ್ಕೆ ನೀರು ಹಾಯಿಸುತ್ತಿದ್ದೆ, ರಂಗಾಮರ ಕರೆ ನೀರನ್ನು ಮುಡುಪಯ್ಯನ ತೋಟಕ್ಕೆ ಹಾಯಿಸಲು ನಾನೇ ಹೋಗುತ್ತಿದ್ದೆ. ತಮ್ಮಂದಿರಾದ ಜಯಣ್ಣ, ದೊಡ್ಡಚೌಡಯ್ಯ ಹೋರಿಗಳು, ಹಸು, ಎಮ್ಮೆ ನೋಡಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದರು.

 

ಹೀಗಿರುವಾಗ ಒಂದು ದಿನ ನೀರಗಂಟಿ ಮನೆಗೆ ಬಂದು 'ಇವತ್ತು ರಾತ್ರಿ ಮುಡುಪಯ್ಯನ ತೋಟಕ್ಕೆ ನೀರು ಬಿಡ್ತೀನಿ. 8 ಗಂಟೆಗೆ ತೋಟದ ಹತ್ತಿರ ಬಂದಿರ್ರಿ' ಎಂದು ಹೇಳಿ ಹೋದ. ರಾತ್ರಿ ಹೊತ್ತು ನೀರು ಹಾಯಿಸೋದು ಸ್ವಲ್ಪ ಕಷ್ಟ, ಜತೆಗೆ ಕರಡಿ ಕಾಟ ಬೇರೆ, ಹಲಸಿನ ಹಣ್ಣಿನ ಕಾಲವಾದ್ದರಿಂದ, ತೋಟ ಹಳ್ಳದ ಪಕ್ಕವೇ ಇದ್ದುದರಿಂದ, ರಾತಿ ಹೊತ್ತು ಬಂದು ಹಲಸಿನ ಮರ ಹತ್ತಿ ಹಣ್ಣುಗಳನ್ನು ಉದುರಿಸಿ, ತಿಂದು ಹೋಗುವುದನ್ನು, ಬೆಳಿಗ್ಗೆ ತೋಟಕ್ಕೋದಾಗ ಹಲಸಿನ ಪಟ್ಟಿ, ಬೀಜ ಬಿದ್ದುದನ್ನು ನೋಡಿ ತಿಳಿದುಕೊಳ್ಳುತ್ತಿದ್ದೆವು.

 

ಮಾದಿಗರ ಹಟ್ಟಿಗೆ ನಾನೇ ಹೋದೆ, ಮನೆಯ ಆಳು ನರಸಿಂಹಯ್ಯ ಖಾಯಿಲೆ ಎಂದು ಮಲಗಿದ್ದ. ಅವನ ದೊಡ್ಡ ಮಗ ತಿಪ್ಪ ಹೊರಗೆ ತೆಂಗಿನ ನಾರಿನ ಹಗ್ಗ ಹೊಸೆಯುತ್ತಾ ಕುಳಿತಿದ್ದ. 'ಏನ್ ಸ್ವಾಮಿ ಬಂದ್ರೀ' ಅಂದ, 'ರಾತ್ರಿಗೆ ಮುಡುಪಯ್ಯನ ತೋಟಕ್ಕೆ ಕೆರೆ ನೀರು ಬಿಡ್ತಾರಂತೆ. ನಾನೊಬ್ನೇ ಹೋಗೋಕೆ ಆಗಲ್ಲ. ನೀನು ಬಾ ಅಂದೆ. 'ರಾತ್ರಿಯಲ್ಲಿ ನೀರು ಹಾಯಿಸೋಕೆ ಹೋದ್ರೆ ಬೆಳಿಗ್ಗೆ ನಾನು ಕಪಿಲೆಗೆ ಹೋಗೋದೆಂಗೆ ಸ್ವಾಮಿ' ಎಂದು ಅಂದವನೆ, 'ನನ್ನ ತಮ್ಮ ಪರಕನನ್ನು ಕರೆದುಕೊಂಡು ಹೋಗಿ' ಅಂದ. 'ಆಯ್ತು ಬೇಗ ಕಳುಹಿಸು, ಊಟ ಮಾಡ್ಕೊಂಡು ನಾವಿಬ್ಬರೂ ಹೋಗ್ತವೆ' ಎಂದು ಮನೆಗೆ ಬಂದೆ.

 

ಊಟ ಮಾಡ್ಕೊಂಡು ಪರಕನ  ಜತೆ ಹೊರಟೆ, ಕೈಯಲ್ಲಿ ಒಂದು ಸೀಮೆ ಎಣ್ಣೆ ಲಾಟೀನು, ಒಂದು ಮಚ್ಚು ಇತ್ತು. ಪಕ್ಕದ ತೋಟಕ್ಕೆ ನೀರು ಹರಿಸುತ್ತಿದ್ದ ನೀರ ಗಂಟಿನೂ ಅಲ್ಲಿಗೆ ಬಂದು 'ಇನ್ನೊಂದು ಗಂಟೆ ತಡ ಆಗುತ್ತೆ ಸ್ವಾಮಿ, ನೀರು ದಪ್ಪವಾಗಿ ಬರ್ತಾ ಇಲ್ಲ' ಎಂದರು. 'ಸರಿ ಕಾಯ್ತೇವೆ' ಎಂದು ಕಾಲುವೆ ಮೇಲೆ ಕಾಯುತ್ತ ಇಬ್ಬರೂ ಕುಳಿತೆವು. ಹಲಸಿನ ಮರದಿಂದ ಘಂ ಎಂದು ವಾಸನೆ ಬರುತ್ತಿತ್ತು 'ಬೆಳಗ್ಗೆ ಬಂದು ಮರ ಹತ್ತಿ ಹಣ್ಣು ಕಿತ್ತುಕೊಡೋ' ಎಂದೆ. 'ಆಗ್ಲಿ ಸೋಮಿ' ಎಂದ ಪರಕ.

 

ಸುಮಾರು ಒಂಭತ್ತು ಗಂಟೆಗೆ ನೀರುಗಂಟಿ ತೋಟಕ್ಕೆ ನೀರು ಬಿಟ್ಟ, ಸಣ್ಣಗೆ ಹರೀತಿದ್ದು ರಾತ್ರಿ ಎಲ್ಲಾ ಹಾಯಿಸಿದರೂ ನಮ್ಮ ತೋಟ ಹಾಯಲ್ಲ ಅಂದೆ. 'ಅಂಗೇ ಮಾಡ್ರಿ' ಅಂದವನೆ ಮನೆ ಕಡೆ ಹೋದ ಉಣ್ಣಲು, ಸುಮಾರು ಅರ್ಧ ಎಕರೆ ಅಡಿಕೆ ತೋಟ, 20 ಮಡಿಗಳು, ಒಂದು ಮಡಿ ನೀರು ಹಾಯೋಕೆ ಒಂದು ಗಂಟೆ ಆಗೋದು, ಬೇಜಾರಾಗಿ ನಾನು ಹಿಂದಿ, ಕನ್ನಡ ಹಾಡುಗಳನ್ನು ಗುನುಗಲು ಶುರುಮಾಡಿದೆ. `ಜೋರಾಗಿ ಹೇಳಿ ಸೋಮಿ, ನಾನೂ ಕೇಳ್ತೀನಿ” ಅಂದ ಪರಕ, ದನಿ ಏರಿಸಿ ಏಳೆಂಟು ಹಾಡುಗಳನ್ನು ಹಾಡಿ, ಬಾಯಿ ನೋವು ಬಂದು ಸುಮ್ಮನಾದೆ. 'ಹಲಸಿನ ಮರ ಇದ್ದ 6ನೇ ಮಡಿ ಹಾಯ್ದು ಏಳನೇ ಮಡಿಗೆ, ನೀರು ತಿರುವೋ' ಎಂದೆ. 'ನೀರು ಯಾಕೋ ನಿಂತಾವೆ ಸ್ವಾಮಿ' ಅಂದ ಪರಕ, 'ಮೇಲೆ ಹೋಗಿ ನೋಡೋ ಎಲ್ಲಾದ್ರೂ ಹರಿದುಕೊಂಡು ಹೋಗಿರಬಹುದು' ಎಂದೆ. 'ಲಾಟೀನು ಕೊಡಿ' ಅಂದ. 'ಊಹೂ, ನನ್ನೊಬ್ಬನಿಗೇ ಭಯ ಆಗುತ್ತೆ' ಅಂದೆ. 'ಆ ಅಡಿಕೆ ಗರಿಗಳ ಸುಡಿಗೆ ಮಾಡು' ಎಂದೆ. 2 ಗರಿ ಒಟ್ಟಿಗೆ ಕಟ್ಟಿ ಸೊಡರು ಮಾಡಿಕೊಂಡು, ಲಾಟೀನು ಬತ್ತಿ ಎತ್ತಿ ಸುಡಿಗೆ ಹಚ್ಚಿಕೊಂಡು ಪರಕ ಹೋದ,.

ಭಯ ಹೋಗಲಾಡಿಸಲು ಮತ್ತೆ ಹಾಡಲು ಶುರು ಮಾಡಿದೆ. ಅಷ್ಟರಲ್ಲಿ ಮೇಲಿಂದ 'ಧೊಪ್' ಎಂದು ಒಂದು ಭಾರವಾದ ವಸ್ತು ಹಲಸಿನ ಮರದಿಂದ ಬಿತ್ತು. ಬಿದ್ದ ಜಾಗದಲ್ಲಿ ಗುಂಡಿ ಬಿದ್ದು ಅದರ ಕೆಸರೆಲ್ಲ ನನ್ನ ಮೇಲೆ ಸಿಡಿಯಿತು. 'ಪರಕಾ, ಹಲಸಿನ ಕಾಯಿ ಬಿತ್ತೋ, ಬೇಗ ಬಾರೋ' ಎಂದು ಕೂಗಿಕೊಂಡು, ಲಾಟೀನು ಹಿಡಿದು, ಗುಂಡಿಬಿದ್ದ ಜಾಗಕ್ಕೆ ಓಡಿ ನೋಡಿದೆ. ದೊಡ್ಡ ಕರಡಿಯೊಂದು ದಪ್ಪ ಗಾತ್ರದ ಹಲಸಿನ ಹಣ್ಣನ್ನು ತಬ್ಬಿಕೊಂಡು ಅಂಗಾತ ಮೇಲಿಂದ ಕೆಳಗೆ ಬಿದ್ದಿದೆ. ಲಾಟೀನು ಬೆಳಕಿನಲ್ಲಿ ಕರಡಿಯನ್ನು ನೋಡಿ ಧಂಗಾದ ನನಗೆ ತಲೆ ತಿರುಗಿದಂತಾಯ್ತು. ಎದ್ದೆನೋ ಬಿದ್ದೆನೋ ಎಂದು ಲಾಟೀನನ್ನು ಅಲ್ಲಿಯೇ ಬಿಸಾಕಿ ಬದುಗಳನ್ನು ಹಾರಿಕೊಂಡು, ಕಾಲು ದಾರೀಲಿ ಓಡಿ ಮನೆ ಸೇರಿದೆ. ಮೂರು ದಿನ ಜ್ವರ ಬಂದು ಮಲಗಿದೆ. ರಂಗಜ್ಜ ಬಂದು ಮಂತ್ರ ಹಾಕಿದರು. ಬೂದಿ ಚೌಡಪ್ಪನವರು ಫೂ, ಪೂ… ಅಂತ ಬೂದಿ ಊದಿ ನನ್ನ ಭಯ ಓಡಿಸಲು ಪ್ರಯತ್ನ ಮಾಡಿದರು. ಇದು ನನ್ನ ಗ್ರಾಮೀಣ ಬದುಕಿನ ಮರೆಯಲಾಗದ ಘಟನೆ.