ಇಂದಿರಾ ಕ್ಯಾಂಟೀನ್ ಇನ್ನಿಲ್ಲ!?

ಇಂದಿರಾ ಕ್ಯಾಂಟೀನ್‌ ಮುಚ್ಚುತ್ತಿರುವ ಬಗ್ಗೆ ವರ್ತಮಾನ

ಇಂದಿರಾ ಕ್ಯಾಂಟೀನ್ ಇನ್ನಿಲ್ಲ!?

ಇಂದಿರಾ ಕ್ಯಾಂಟೀನ್ ಇನ್ನಿಲ್ಲ!?

ವರ್ತಮಾನ

ಆರ್.ಹೆಚ್.ನಟರಾಜ್

ಒಂದು ದೇಶದ ವ್ಯವಸ್ಥೆಯನ್ನು ಪರೀಕ್ಷಿಸುವುದು ಅಲ್ಲಿರುವ ಲಕ್ಷಾಧೀಶರ ಸಂಖ್ಯೆಯಿಂದ ಅಲ್ಲ . ಬದಲಾಗಿ ಆ ದೇಶದ ಜನಗಳು ಹಸಿವಿನಿಂದ ಮುಕ್ತರಾಗಿದ್ದಾರೆಯೇ ಎನ್ನುವುದರಿಂದ -ಮಹಾತ್ಮ ಗಾಂಧಿ.

ಜೀವ ಸಂಕುಲ ವ್ಯವಸ್ಥೆಯಲ್ಲಿ ಯಾವುದೇ ಜೀವಿ ಹಸಿವಿನಿಂದ ನರಳಬಾರದು ಎನ್ನುತ್ತದೆ ಸಾಮಾಜಿಕ ವ್ಯವಸ್ಥೆ ಹೀಗಾಗಿ ಹಸಿವನ್ನು ನೀಗಿಸುವುದು ಸರ್ಕಾರಗಳ ಆದ್ಯತೆಯಾಗಿದೆ.ಯಾವುದೇ ದೇಶ ಯಾವ ಮಟ್ಟದ ಪ್ರಗತಿಯಲ್ಲಿದೆ ಎಂದು ತಿಳಿಸುವುದು ಆ ದೇಶದ ಹಸಿವಿನ ಸೂಚ್ಯಂಕ. ಈ ವಿಷಯದಲ್ಲಿ ಭಾರತ ತೀವ್ರ ಹಿನ್ನಡೆಯನ್ನು ಅನುಭವಿಸಿದೆ.

ಇತ್ತೀಚೆಗೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ತತ್ತರಿಸಿದ ನೆರೆ ಶ್ರೀಲಂಕಾ, ಪಾಕಿಸ್ತಾನದ ಹಸಿವಿನ ಸೂಚ್ಯಂಕಕಿಂತಲೂ ಭಾರತದ ಹಸಿವಿನ ಸೂಚ್ಯಂಕ ಅತ್ಯಂತ ಕೆಳಮಟ್ಟದಲ್ಲಿರುವುದು ಕಳವಳಕಾರಿಯಾದ ಸಂಗತಿಯಾಗಿದೆ.ಇಂತಹ ಸಮಯದಲ್ಲಿ ಸರ್ಕಾರದ ಆದ್ಯತೆ ಹಸಿದ ಹೊಟ್ಟೆಯನ್ನು ತುಂಬಿಸುವುದಾಗಬೇಕು.

ಇದಕ್ಕಾಗಿ ಕಂಡುಕೊಂಡ ಮಾರ್ಗ ಸಾರ್ವಜನಿಕ ಪಡಿತರ ವ್ಯವಸ್ಥೆ. ಅಗ್ಗದ ದರದಲ್ಲಿ ಅಗತ್ಯವಿರುವ ಕುಟುಂಬಗಳಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಪೂರೈಸಲಾಗುತಿತ್ತು.

ಈ ನಡುವೆ ಎರಡು ಹೊತ್ತಿನ ಊಟಕ್ಕಾಗಿ ದುಡಿಯಬೇಕಾದ ಸ್ಥಿತಿ ಯಾರಿಗೂ ಬರಬಾರದು. ಆಹಾರ ಪ್ರತಿಯೊಬ್ಬ ಜೀವಿಯ ಹಕ್ಕು, ಇದನ್ನು ಜಾರಿಗೊಳಿಸಬೇಕಾದ್ದು ಸರ್ಕಾರದ ಕರ್ತವ್ಯ ಎಂದು ಭಾವಿಸಿದ ಸಮಾಜವಾದಿ ತತ್ವದ ತಮಿಳುನಾಡು ಸರ್ಕಾರ ಪಡಿತರವನ್ನು ಅಗತ್ಯವಿರುವ ಜನಸಂಖ್ಯೆ ಆಧರಿಸಿ ಉಚಿತವಾಗಿ ವಿತರಿಸಲಾರಂಭಿಸಿತು. ಇದನ್ನು ಕರ್ನಾಟಕ ಸರ್ಕಾರ ಕೂಡ ಜಾರಿಗೊಳಿಸಿತು.

ಇದು ಅರ್ಹ ಕುಟುಂಬಗಳಿಗೆ ದೊರೆತ ಅಗತ್ಯ ಸೌಲಭ್ಯವಾದರೆ,ಕೆಲಸ ಮತ್ತಿತರ ಕಾರಣಗಳಿಗಾಗಿ ಮನೆ ಬಿಟ್ಟು ಪಟ್ಟಣ ಪ್ರದೇಶಗಳಿಗೆ ಬಂದ ಜನರ ಹೊಟ್ಟೆ ತುಂಬಿಸಲು ‌ರೂಪಿಸಿದ ವ್ಯವಸ್ಥೆ ಕ್ಯಾಂಟೀನ್. ಮೊದಲಿಗೆ ತಮಿಳುನಾಡಿನಲ್ಲಿ ಅಮ್ಮಾ ಕ್ಯಾಂಟೀನ್ ‌ವ್ಯವಸ್ಥೆ ಜಾರಿಗೆ ಬಂದರೆ, ನಂತರ ಸಿದ್ಧರಾಮಯ್ಯನವರ ಆಡಳಿತಾವಧಿಯಲ್ಲಿ ಕರ್ನಾಟಕದಲ್ಲಿ ಇಂದಿರಾ ಕ್ಯಾಂಟೀನ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿತು. 2017ರ ಆಗಸ್ಟ್ 15 ರಂದು ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಯಿತು. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಹಾಗೂ ಪ್ರಮುಖ ಪಟ್ಟಣಗಳಲ್ಲಿ ಸೇವೆ ಆರಂಭವಾಯಿತು.

ಬಡವರು,ಹಮಾಲರು,ಆಟೋ ಚಾಲಕರು ಗಾರ್ಮೆಂಟ್ಸ್, ದಿನಗೂಲಿ ನೌಕರರನ್ನು ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದ ಅವರ ಸಹಾಯಕರು ಇಂದಿರಾ ಕ್ಯಾಂಟೀನ್ ಮೂಲಕ ಅಗ್ಗದ ದರದಲ್ಲಿ ಹೊಟ್ಟೆ ತುಂಬಿಸಿಕೊಳ್ಳತೊಡಗಿದರು.ಕೆಲವೇ ದಿನಗಳಲ್ಲಿ ಇವು ಅತ್ಯಂತ ಜನಪ್ರಿಯಗೊಂಡು ಉತ್ತರ ಪ್ರದೇಶ ಸೇರಿದಂತೆ ಇತರೆ ರಾಜ್ಯಗಳು ಈ ವ್ಯವಸ್ಥೆ ಜಾರಿಗೆ ಆಸಕ್ತಿ ತೋರಿದವು. ಆದರೆ, ಇಂತಹ ಜನಪ್ರಿಯ ವ್ಯವಸ್ಥೆಯೊಂದು ಇದೀಗ ಕಾಲನ ಗರ್ಭ ಸೇರುವ ಹಂತ ತಲುಪಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ನಗರ ಪ್ರದೇಶಗಳಲ್ಲಿ ಅಗ್ಗದ ದರದಲ್ಲಿ ಹಸಿದವರ ಹೊಟ್ಟೆ ತುಂಬಿಸುತ್ತಿರುವ  ಇಂದಿರಾ ಕ್ಯಾಂಟೀನ್‍ಗಳು ಇತಿಹಾಸದ ಪುಟ ಸೇರಲಿವೆಯಾ...? ಹೌದು ಅಂತಹದೊಂದು ಅನುಮಾನ ಈಗ ಬಲವಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಕ್ಯಾಂಟೀನ್ ಗಳ ಹೆಸರಿನ ಬಗ್ಗೆ ತಗಾದೆ ತೆಗೆದು ಅವುಗಳನ್ನು ಮುಚ್ಚುವ ಪ್ರಯತ್ನ ನಡೆದಿತ್ತು. ಆದರೆ ಇದಕ್ಕೆ ಜನ ಸಾಮಾನ್ಯರು, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಪ್ರತಿರೋಧ ಎದುರಾಗುತ್ತಿದ್ದಂತೆ ಸುಮ್ಮನಾಗಿತ್ತು. ಕಾಂಗ್ರೆಸ್ ನಾಯಕರ ಹೆಸರನ್ನೊಳಗೊಂಡ ಯಾವುದೇ ಯೋಜನೆ ಮುಂದಿವರೆಯಲು ಬಯಸದ ಸಂಘ ಪರಿವಾರ ಬಿಜೆಪಿಯನ್ನು ಬಳಸಿಕೊಂಡು ಅಂತಹ ಸಂಸ್ಥೆ, ಯೋಜನೆಗಳನ್ನು ರದ್ದು ಪಡಿಸುತ್ತಿದೆ ಇಲ್ಲವೇ ಹೆಸರು ಬದಲಾಯಿಸುತ್ತಿದೆ. ಇಂದಿರಾ ಕ್ಯಾಂಟೀನ್ ವಿಷಯದಲ್ಲೂ ಇಂತಹ ಪ್ರಯತ್ನ ಮಾಡಿ ವಿಫಲವಾದ ಬಿಜೆಪಿ ಇದೀಗ ವ್ಯವಸ್ಥಿತವಾಗಿ ಇಂದಿರಾ ಕ್ಯಾಂಟೀನ್ ಇಲ್ಲದಂತೆ ಮಾಡುವ ಪ್ರಯತ್ನ ನಡೆಸಿದೆ.

ಇದರ ಭಾಗವಾಗಿ ಇಂದಿರಾ ಕ್ಯಾಂಟೀನ್  ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರಿಗೆ ಕಳೆದ ಒಂದೂವರೆ ವರ್ಷದಿಂದ ಬಿಲ್ ಪಾವತಿ ಮಾಡಿಲ್ಲ.ಇದರ ಪರಿಣಾಮ ಕ್ಯಾಂಟೀನ್ ನಲ್ಲಿ ಕೆಲಸ ಮಾಡುವರ ಸಂಖ್ಯೆಯನ್ನು ಗುತ್ತಿಗೆದಾರರು ಕಡಿಮೆ ಮಾಡಿದ್ದಾರೆ.ಇದರಿಂದಾಗಿ ಕ್ಯಾಂಟೀನ್ ತೆರೆಯುವ ಸಮಯ ಕಡಿತಗೊಂಡಿದೆ.ವಹಿವಾಟು ಕಡಿಮೆಯಿರುವ ಕೆಲವು ಕ್ಯಾಂಟೀನ್ ಗಳನ್ನು ಮುಚ್ಚಲಾಗಿದೆ.ಅಡುಗೆ ಸಿಬ್ಬಂದಿಯ ಕೊರತೆಯಿಂದ ಊಟ-ತಿಂಡಿಯ ಗುಣಮಟ್ಟ ಕೂಡಾ ಕಡಿಮೆಯಾಗಿದೆ.  

ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್‍ ನಿರ್ವಹಣೆ ಮಾಡುತ್ತಿರುವ ಗುತ್ತಿಗೆ ಸಂಸ್ಥೆಗಳಿಗೆ  ಕಳೆದ 10 ತಿಂಗಳಿನಿಂದ 22 ಕೋಟಿ ರೂ.ಗಳನ್ನು ಗುತ್ತಿಗೆದಾರರಿಗೆ ನೀಡಬೇಕಾಗಿದೆ.ಹಲವು ಬಾರಿ ಸರ್ಕಾರಕ್ಕೆ ಇವರು ಮನವಿ ಮಾಡಿದರೂ ಬಿಬಿಎಂಪಿ ಸಂಪನ್ಮೂಲದ ಕೊರತೆಯ ನೆಪವೊಡ್ಡಿ ಹಣ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ಕೂಡಾ ತನ್ನ ಪಾಲಿನ ಹಣವನ್ನು ಪಾಲಿಕೆಗೆ ನೀಡಿಲ್ಲ.ಇದು ಗುತ್ತಿಗೆದಾರರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಬಾಕಿ ಹಣ ನೀಡದ ಹಿನ್ನೆಲೆಯಲ್ಲಿ ಕ್ಯಾಂಟೀನ್‍ಗಳನ್ನು ಮುಚ್ಚಲು ಗುತ್ತಿಗೆ ಸಂಸ್ಥೆಗಳು ಚಿಂತನೆ ನಡೆಸಿದ್ದು, ಇದರಿಂದ ನೂರಾರು ಕಾರ್ಮಿಕರು, ಅಡುಗೆ ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಪಾಲಿಕೆಯಿಂದ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಗುತ್ತಿಗೆ ಸಂಸ್ಥೆಗಳು ದಿನಸಿ, ತರಕಾರಿ ಪೂರೈಸುತ್ತಿದ್ದವರಿಗೆ ಲಕ್ಷಾಂತರ ರೂ. ಬಾಕಿ ಉಳಿಸಿಕೊಂಡಿವೆ. ಅದೇ ರೀತಿ, ನೀರು, ಒಳಚರಂಡಿ ಸಂಪರ್ಕ ಕಡಿತ ಗುತ್ತಿಗೆ ಸಂಸ್ಥೆಗಳು ಜಲಮಂಡಳಿಗೆ ಕೋಟ್ಯಂತರ ರೂ. ಶುಲ್ಕ ಬಾಕಿ ಉಳಿಸಿಕೊಂಡಿವೆ. ಹಾಗಾಗಿ, ಜಲಮಂಡಳಿಯು ಅಡುಗೆ ಮನೆ ಹಾಗೂ ಕ್ಯಾಂಟೀನ್‍ಗಳಿಗೆ ನೀರು, ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸಿದೆ. ಆದ್ದರಿಂದ ಗುತ್ತಿಗೆ ಸಂಸ್ಥೆಗಳು ಖಾಸಗಿ ಟ್ಯಾಂಕರ್‍ಗಳಿಂದ ನೀರು ಖರೀದಿಸುತ್ತಿದ್ದು ಇದೂ ಕೂಡಾ ಹೊರೆಯಾಗುತ್ತಿದೆ.ಈ ಹಿನ್ನೆಲೆಯಲ್ಲಿ ಕ್ಯಾಂಟೀನ್ ನಿರ್ವಹಣೆ ತಮಗೆ ಬೇಡ ಎಂಬ ಹಂತಕ್ಕೆ ಗುತ್ತಿಗೆದಾರರು ತಲುಪಿದ್ದಾರೆ.ತಾವು ಏಕಾಎಕಿ ಕ್ಯಾಂಟೀನ್ ನಿಲ್ಲಿಸಿದರೆ ಬರಬೇಕಾದ ಬಾಕಿಯೂ ಖೋತಾ ಆಗಲಿದೆ ಎಂದು ಭಾವಿಸಿರುವ ಗುತ್ತಿಗೆದಾರರು ಬಾಕಿ ಬರುವವರೆಗಾದರೂ ಇರಲಿ ಕೆಲವೇ ಸಿಬ್ಬಂದಿಯೊಂದಿಗೆ ಅಲ್ಪ ಪ್ರಮಾಣದ ಆಹಾರ ತಯಾರಿಸಿ ಕೆಲವೆ ಗಂಟೆಗಳು ಮಾತ್ರ ಕೆಲವೇ ಕೆಲವು ಕ್ಯಾಂಟೀನ್ ಗಳು ಕೆಲಸ ಮಾಡುವಂತೆ ಮಾಡಿದ್ದಾರೆ. ಹೀಗಾಗಿ ತಮ್ಮ ಹಸಿವು ನೀಗಿಸಲಿದೆ ಎಂದು ಇಂದಿರಾ ಕ್ಯಾಂಟೀನ್ ಗಳನ್ನು ನಂಬಿದ್ದ ಬಡವರು,ಹಮಾಲರು,ಆಟೋ ಚಾಲಕರು ಗಾರ್ಮೆಂಟ್ಸ್, ದಿನಗೂಲಿ ನೌಕರರನ್ನು ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದ ಅವರ ಸಹಾಯಕರು ಮುಚ್ಚಿರುವ ಕ್ಯಾಂಟೀನ್ ಬಾಗಿಲು ಕಂಡು ಹಸಿವೆಯಲ್ಲೇ ವಾಪಾಸಾಗುತ್ತಿದ್ದಾರೆ.

ಅತ್ಯಂತ ಸದುದ್ದೇಶ, ಸಾಮಾಜಿಕ ಕಳಕಳಿಯಿಂದ ಜಾರಿಗೊಳಿಸಿದ ಇಂತಹ ಜನಪರ ಯೋಜನೆಯೊಂದು  ರಾಜಕೀಯ ಕಾರಣಕ್ಕಾಗಿ ಅಸ್ತಿತ್ವ ಕಳೆದುಕೊಳ್ಳುವಂತಾಗುತ್ತಿರುವುದು ವಿಷಾದದ ಸಂಗತಿಯಾಗಿದೆ.

ಇದರ ನಡುವೆ ಬೆಂಗಳೂರಿನ ಕೆಲ ಇಂದಿರಾ ಕ್ಯಾಂಟೀನ್ ಗಳ  ನಿರ್ವಹಣೆಯ ಗುತ್ತಿಗೆಯನ್ನು ಅದಮ್ಯ ಚೇತನ, ರಿವಾರ್ಡ್ಸ್ ಮತ್ತು ಚೆಫ್‌ಟಾಕ್‌ ಸಂಸ್ಥೆಗಳಿಗೆ ನೀಡಲಾಗಿದೆ. ಈ ಸಂಸ್ಥೆಗಳು 55.30 ರೂ. ದರಕ್ಕೆ ಆಹಾರ ಪೂರೈಸುತ್ತಿವೆ. ಇದರಲ್ಲಿ ಫಲಾನುಭವಿಗಳಿಂದ 15 ರೂ. ಪಡೆಯುತ್ತಿದ್ದು, ಸರಕಾರದಿಂದ 30.30 ರೂ. ಸಬ್ಸಿಡಿ ನೀಡಲಾಗುತ್ತಿದೆ.

ಇಷ್ಟಾದರೂ ಅವುಗಳ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ವಿದ್ಯುತ್, ನೀರು,ಕಾರ್ಮಿಕರ ವೇತನ ದುಬಾರಿಯಾಗಿದ್ದು, ನಿರ್ವಹಣೆ ಕಷ್ಟ ಎಂಬ ನೆಪವೊಡ್ಡಿ,ಕೆಲವು ಕ್ಯಾಂಟೀನ್ ಗಳನ್ನು ನಿಲ್ಲಿಸಿದ್ದಾರೆ. ಕೆಲವೇ ಕೆಲವು ಮಾತ್ರ ನೆಪಕ್ಕೆಂಬಂತೆ ಕಾರ್ಯ ನಿರ್ವಹಿಸುತ್ತಿದ್ದು ಅವೂ ಕೂಡಾ ಕಾಲನ ಗರ್ಭ ಸೇರಲಿವೆ.ರಾಜಕೀಯ ಕಾರಣಕ್ಕಾಗಿ ಜನ ಸಾಮಾನ್ಯರ ಯೋಜನೆಯೊಂದು ಇಂತಹ ಸ್ಥಿತಿ ತಲುಪಿರುವುದು ದುರದೃಷ್ಟಕರ.