ಹಿಂಡೆನ್‌ಬರ್ಗ್‌ ಎಂಬ ಹಳೇ ಢಮಾರ್‌

ಇನ್ನು ಕೆಲವೇ ವರ್ಷಗಳಲ್ಲಿ ಪೆಟ್ರೋಲ್‌ -ಡೀಸೆಲ್‌ ಬದಲು ಹೈಡ್ರೊಜನ್‌ ಶಕ್ತಿಯಿಂದಲೇ ವಾಹನಗಳು ಓಡಲಿವೆ

ಹಿಂಡೆನ್‌ಬರ್ಗ್‌ ಎಂಬ ಹಳೇ ಢಮಾರ್‌

ಇತಿಹಾಸ

ನಾಗೇಶ್‌ ಹೆಗಡೆ

ಹಿಂಡೆನ್‌ಬರ್ಗ್‌ ಎಂಬ ಹಳೇ ಢಮಾರ್‌

[ಅದೇ ಹಿಂಡೆನ್‌ಬರ್ಗ್‌, ಅದೇ ಹೈಡ್ರೊಜನ್‌ ಇವೆರಡೂ ಮತ್ತೊಮ್ಮೆ ಢಮ್ಮೆಂದ ವಿಸ್ಮಯದ ಕಥನ ಇದು. ಈಗಂತೂ ಅದಾನಿ ಆಸ್ತಿಯ ಕುಸಿತವೇ ಎಲ್ಲ ಪತ್ರಿಕೆಗಳಲ್ಲಿ, ಟಿವಿ ಚಾನೆಲ್‌ಗಳಲ್ಲಿ ಸಂಸತ್ತಿನಲ್ಲಿ ಪ್ರತಿಧ್ವನಿಸುತ್ತಿದೆ. ಹಿಂಡೆನ್‌ಬರ್ಗ್‌ ಎಂಬ ಕಂಪನಿ ಅದಾನಿ ಸಾಮ್ರಾಜ್ಯಕ್ಕೆ ಒಂದು ಸಣ್ಣ ಬತ್ತಿ ಇಟ್ಟಿದ್ದೇ ಅದರ ಮೌಲ್ಯ 120 ಶತಕೋಟಿ ಡಾಲರ್‌ನಷ್ಟು ಕುಸಿದಿದೆ. ಅದರೊಂದಿಗೆ ಜೀವವಿಮಾ ನಿಗಮ, ಸ್ಟೇಟ್‌ ಬ್ಯಾಂಕ್‌ ಮುಂತಾದವುಗಳ ಶೇರು ಮೌಲ್ಯವೂ ಕುಸಿದಿದ್ದರಿಂದ ಅಜಮಾಸು ಐದು ಕೋಟಿ ಭಾರತೀಯ ಹೂಡಿಕೆದಾರರು ತಮ್ಮದಲ್ಲದ ತಪ್ಪಿಗೆ ನಷ್ಟ ಅನುಭವಿಸಬೇಕಾಗಿ ಬಂದಿದೆ. ೮೬ ವರ್ಷಗಳ ಹಿಂದೆ ʻಹಿಂಡೆನ್‌ಬರ್ಗ್‌ʼ ಬಲೂನ್‌ ವಿಮಾನವೊಂದು ಹೀಗೇ ಭಗ್ಗೆಂದು ಉರಿದು, ಅದೆಷ್ಟೊ ಜನರು ಆಕಾಶದಿಂದ ಉರಿದು ಉದುರುದುರಿ ಬಿದ್ದು ಸತ್ತರು. ಅದನ್ನು ʻಆಕಾಶದ ಟೈಟಾನಿಕ್‌ ದುರಂತʼ ಎಂದೇ ಹೇಳಬಹುದು. ವಿವರ ಇಲ್ಲಿದೆ.]

 

ಕಳೆದ ವಾರ ಜರ್ನಲಿಸಂ ವಿದ್ಯಾರ್ಥಿಗಳಿಗೆ ಹೈಡ್ರೊಜನ್‌ ಶಕ್ತಿಯ ಬಗ್ಗೆ ಪಾಠ ಮಾಡುತ್ತಿದ್ದೆ. ಹೇಗೆ ಇನ್ನು ಕೆಲವೇ ವರ್ಷಗಳಲ್ಲಿ ಪೆಟ್ರೋಲ್‌ -ಡೀಸೆಲ್‌ ಬದಲು ಹೈಡ್ರೊಜನ್‌ ಶಕ್ತಿಯಿಂದಲೇ ವಾಹನಗಳು ಓಡಲಿವೆ ಅಂತೆಲ್ಲ ಹೇಳುತ್ತಿದ್ದೆ. ಅದಾನಿಯ ಗ್ರೀನ್‌ ಎನರ್ಜಿ ಕಂಪನಿ ಹೈಡ್ರೊಜನ್‌ ಉತ್ಪಾದನೆಗೆಂದೇ ನಾಲ್ಕೂವರೆ ಲಕ್ಷ ಕೋಟಿ ಹೂಡಿಕೆ ಮಾಡುತ್ತಿರುವ ಸುದ್ದಿ ಅದೇ ತಾನೆ ಪ್ರಕಟವಾಗಿತ್ತು.

ಸಂದರ್ಭಕ್ಕೆ ತಕ್ಕಂತೆ ಹೈಡ್ರೊಜನ್‌ ಇಂಧನದ ಹಳೇ ಕತೆಯೊಂದನ್ನು ಅವರಿಗೆ ಹೇಳಿದೆ. ಟೈಟಾನಿಕ್‌ ಹಡಗಿನ ದುರಂತವನ್ನು ಹೋಲುವ ಕತೆ ಅದು. ಹೈಡ್ರೊಜನ್‌ ಇಂಧನದಿಂದಾಗಿ ಹಿಂಡೆನ್‌ಬರ್ಗ್‌ ಸ್ಫೋಟ ಹೇಗಾಯಿತು ಎಂದು ಸಂಕ್ಷಿಪ್ತ ವಿವರಿಸಿದೆ.

ಆ ಹಳೇ ದುರಂತದ ಕತೆ ಹೀಗಿದೆ:

ರೈಟ್‌ ಸಹೋದರರು ರೆಕ್ಕೆಯುಳ್ಳ ವಿಮಾನವನ್ನು ಸೃಷ್ಟಿಸುವ ತುಸು ಮೊದಲು ವಿಮಾನ ಎಂದರೆ ಹೈಡ್ರೊಜನ್‌ ತುಂಬಿದ ಬಲೂನ್‌ನಲ್ಲಿ ಸವಾರಿ ಮಾಡುವುದಾಗಿತ್ತು. ಈ ಅನಿಲ ತೀರಾ ಹಗುರವಾದ್ದರಿಂದ ಬಲೂನ್‌ನಲ್ಲಿ ಅದನ್ನು ತುಂಬಿಸಿ ಮೇಲಕ್ಕೆ ಹಾರಿಸುವುದನ್ನು ನಾವು ಜಾತ್ರೆಗಳಲ್ಲಿ ನೋಡಿದ್ದೇವೆ.

ಭಾರೀ ದೊಡ್ಡ ಗಾತ್ರದ ಬಲೂನಿಗೆ ತೊಟ್ಟಿಲು ಕಟ್ಟಿ ಆಕಾಶದಲ್ಲಿ ಸಂಚರಿಸುವ ವಿಧಾನ ಯುರೋಪ್‌ನಲ್ಲಿ ಚಾಲ್ತಿಗೆ ಬಂದಿತ್ತು. ಮೊದಮೊದಲು ಮಿಲಿಟರಿಗೆ ಅದು ಬಳಕೆಯಾಗುತ್ತ ಕ್ರಮೇಣ ಪ್ರಯಾಣಿಕರನ್ನೂ ಕೂರಿಸಿ ಸಾಗಿಸುವ ಬಿಸಿನೆಸ್‌ ಚಾಲ್ತಿಗೆ ಬಂತು. ಅದಕ್ಕೆ ಏರ್‌ ಶಿಪ್‌ (ಗಾಳಿಯಲ್ಲಿ ತೇಲುವ ಹಡಗು- ಹವಾಯಿ ಜಹಾಜ್‌) ಎಂತಲೇ ಹೆಸರಿತ್ತು. ದೊಡ್ಡ, ಇನ್ನೂ ದೊಡ್ಡ ಬಲೂನ್‌ ವಿಮಾನಗಳನ್ನು ನಿರ್ಮಿಸುವ ಪೈಪೋಟಿಯೇ ಆರಂಭವಾಗಿತ್ತು.

ಈ ವೇಳೆಗೆ 1920ರ ದಶಕದಲ್ಲಿ ರೈಟ್‌ ಸಹೋದರರ ಮೂಲಕ ವಿಕಾಸಗೊಂಡ ಪೆಟ್ರೋಲ್‌ ಪ್ರೊಪೆಲ್ಲರ್‌ ಎಂಜಿನ್‌ ವಿಮಾನಗಳನ್ನು ಮಿಲಿಟರಿಯವರು ಸುಧಾರಿಸಿ ಬಳಸಲು ತೊಡಗಿದ್ದರೂ ಬಲೂನ್‌ ವಿಮಾನಗಳ ಥ್ರಿಲ್ಲೇ ಬೇರೆ ಇತ್ತು. ತೂಗುತೊಟ್ಟಿಲ ಬದಲು ಬಲೂನಿನ ಒಳಗೇ ಪ್ರಯಾಣಿಕರನ್ನು ಕೂರಿಸಿ ಒಯ್ಯುವ ವಿಮಾನಗಳು ತಯಾರಾಗಿದ್ದವು.

ಜರ್ಮನಿಯ ಕಂಪನಿಯೊಂದು ಜಗತ್ತಿನ ಅತಿ ದೊಡ್ಡ ಹೈಡ್ರೊಜನ್‌ ಏರ್‌ ಶಿಪ್‌ಗಳನ್ನು ನಿರ್ಮಿಸಿ ಅವಕ್ಕೆ “ಹಿಂಡೆನ್‌ಬರ್ಗ್‌ʼʼ ವಿಮಾನಗಳು ಎಂತಲೇ ಹೆಸರಿಟ್ಟಿತು. ಹಿಟ್ಲರ್‌ ಆಡಳಿತಕ್ಕೆ ಬರುವ ಮೊದಲು ಜರ್ಮನಿಯ ಜನಪ್ರಿಯ ಅಧ್ಯಕ್ಷನಾಗಿದ್ದ ಫೀಲ್ಡ್‌ ಮಾರ್ಶಲ್‌ ಪೌಲ್‌ ವಾನ್‌ ಹಿಂಡೆನ್‌ಬರ್ಗ್‌ ಎಂಬಾತನ ಹೆಸರನ್ನೇ ಈ ವಿಮಾನಗಳಿಗೆ ಇಡಲಾಗಿತ್ತು.

ಹೈಡ್ರೊಜನ್‌ (ಜಲಜನಕ) ಇಡೀ ವಿಶ್ವದಲ್ಲೇ ಅತ್ಯಂತ ದಹನಶೀಲ ಅನಿಲ. ತುಸು ಕಿಡಿ ಹೊಮ್ಮಿದರೂ ಸಾಕು ಢಮಾರೆಂದು ಸ್ಫೋಟವಾಗಿ ಅನಿಲ ಉರಿಯುತ್ತದೆ. ಇಂಥ ಬಲೂನಿನಲ್ಲಿ ಸವಾರಿ ಮಾಡಿ, ಅದು ಸ್ಫೋಟವಾಗಿ ಅದಾಗಲೇ ಅನೇಕರು ಪ್ರಾಣ ಕಳಕೊಂಡಿದ್ದರು. ಆದರೆ ಹಿಂಡನ್‌ಬರ್ಗ್‌ ವಿಮಾನ ಎಂದರೆ (ಟೈಟಾನಿಕ್‌ ಥರಾ) ಅತ್ಯಂತ ಮಜಬೂತಾದ, ಅತ್ಯಂತ ಸುಭದ್ರ ವಿಮಾನಗಳೆಂಬ ಪ್ರತೀತಿ ಇತ್ತು.

ಆ ವಿಮಾನಗಳು ಯುರೋಪ್‌ ಆಚಿನ ಅಟ್ಲಾಂಟಿಕ್‌ ಸಾಗರವನ್ನೂ ದಾಟಿ ಅಮೆರಿಕಕ್ಕೆ ಹೋಗಿ ಬರುತ್ತಿದ್ದವು. ಅದರಲ್ಲೂ ಅತಿದೊಡ್ಡ D-LZ 129 ನಂಬರಿನ ಹಿಂಡೆನ್‌ಬರ್ಗ್‌ ವಿಮಾನದ ಸವಾರಿ ಎಂದರೆ ಪ್ರತಿಷ್ಠೆಯ, ಲಕ್ಷುರಿಯ ಸಂಕೇತವಾಗಿತ್ತು. ಈ ಸುದೀರ್ಘ ಪ್ರಯಾಣಕ್ಕೆ ಮೂರು ದಿನ ಬೇಕಿತ್ತಾದ್ದರಿಂದ ಅಡುಗೆ, ಊಟ, ಆಟ, ವಿನೋದ ಎಲ್ಲ ವ್ಯವಸ್ಥೆ ಅದರಲ್ಲಿತ್ತು. ಸಂಗೀತ ನೃತ್ಯಕ್ಕೆಂದು ಹಗುರ ಅಲ್ಯೂಮಿನಿಯಂನ ವಿಶೇಷ ಪಿಯಾನೋ ಕೂಡ ಅಲ್ಲಿತ್ತು.

36 ಪ್ರಯಾಣಿಕರ ಸೇವೆಗೆ 61 ಸಿಬ್ಬಂದಿ ಇದ್ದರು!

1937ರ ಮೇ 3ರಂದು ಜರ್ಮನಿಯ ಫ್ರಾಂಕ್‌ಫರ್ಟ್‌ ನಗರದಿಂದ ಹೊರಟ ವೈಭವದ ಹಿಂಡೆನ್‌ಬರ್ಗ್‌ ವಿಮಾನ ಮೇ 6ರಂದು ನ್ಯೂಯಾರ್ಕ್‌ ಪಕ್ಕದ ನ್ಯೂಜೆರ್ಸಿಗೆ ಬಂತು. ಎದುರುಗಾಳಿ ಜಾಸ್ತಿ ಇದ್ದುದರಿಂದ ಇನ್ನೂ ತುಸು ಹೊತ್ತು ಆಕಾಶದಲ್ಲೇ ಸುತ್ತಾಡುವಂತೆ ನಿಲ್ದಾಣದಿಂದ ಸೂಚನೆ ಬಂದಿತ್ತು. ವಿಮಾನ ಸದ್ದಿಲ್ಲದೆ ನ್ಯೂಯಾರ್ಕ್‌ ಆಕಾಶದಲ್ಲಿ ತೇಲುತ್ತಿದ್ದಾಗ ಅದನ್ನು ನೋಡಲೆಂದು ಜನರು ಬೀದಿಗೆ ಬಂದಿದ್ದರು. ಅದು ನಿಲ್ದಾಣದಲ್ಲಿ ಇಳಿಯುವ ದೃಶ್ಯವನ್ನು ದಾಖಲಿಸಲೆಂದೇ ನ್ಯೂಸ್‌ರೀಲ್‌ ನಿರ್ಮಾಪಕರು ಮೂವಿ ಕ್ಯಾಮರಾ ಹಿಡಿದು ಸಜ್ಜಾಗಿದ್ದರು. ತುಂತುರು ಮಳೆ ಬರುತ್ತಿತ್ತು.

ಬಲೂನ್‌ ವಿಮಾನದ ಒಂದು ಸಮಸ್ಯೆ ಏನೆಂದರೆ ಅದನ್ನು ಪೂರ್ತಿ ನೆಲಕ್ಕೆ ಇಳಿಸುವುದು ಕಷ್ಟ. ನಿಲ್ದಾಣದ ಬಳಿ ಒಂದೇ ತಾಣದಲ್ಲಿ ಅದನ್ನು ನಿಶ್ಚಲ ನಿಲ್ಲಿಸಬೇಕೆಂದರೆ ಎತ್ತರದ ಕಂಬದ ತುದಿಗೆ ಅದರ ಮೂತಿಯನ್ನು ಹಗ್ಗದಿಂದ ಕಟ್ಟಬೇಕು. ಹಡಗುಗಳಿಗೆ ಲಂಗರು ಹಾಕುವ ಹಾಗೆ. ಇಲ್ಲಾಂದರೆ, ಗಾಳಿ ಬಂದ ದಿಕ್ಕಿಗೆ ಅದು ತೇಲುತ್ತ ದೂರ ಸರಿಯುತ್ತದೆ.

ಕಂಬಕ್ಕೆ ಹಗ್ಗ ಕಟ್ಟುವ ಆ ಕ್ಷಣದಲ್ಲಿ ಅದೇನಾಯ್ತೊ ಸ್ಪಷ್ಟ ಗೊತ್ತಿಲ್ಲ. ಬೆಂಕಿ ಹೊತ್ತಿಕೊಂಡು ಮರುಕ್ಷಣವೇ ಸ್ಫೋಟಗೊಂಡು ಮೂವತ್ತು ಸೆಕೆಂಡ್‌ಗಳಲ್ಲಿ ವಿಮಾನ ಧಗಧಗ ಉರಿದು ಪ್ರಯಾಣಿಕರು ಬೆಂಕಿಯ ಉಂಡೆಗಳಾಗಿ ಕೆಳಕ್ಕೆ ಉದುರತೊಡಗಿದರು. ವಿಮಾನದ 22 ಸಿಬ್ಬಂದಿ ಮತ್ತು 13 ಪ್ರಯಾಣಿಕರು ಉರುಳಿ ನರಳಿ ಸಾವಪ್ಪಿದರು.

ನ್ಯೂಸ್‌ ರೀಲ್‌ ಚಿತ್ರೀಕರಣದ ಸಿಬ್ಬಂದಿಗೆ ಇದು ಅನಿರೀಕ್ಷಿತವಾಗಿತ್ತು. ಅವರು ಸಜ್ಜಾಗಿರಲಿಲ್ಲ. ಅವಸರದಲ್ಲಿ ಕ್ಯಾಮರಾ ಆನ್‌ ಮಾಡಿ ಕೊನೇ ಕ್ಷಣದ ಜ್ವಲಂತ ದೃಶ್ಯಗಳನ್ನಷ್ಟೇ ಸೆರೆ ಹಿಡಿದರು. ನೋಡನೋಡುತ್ತ ಇಡೀ ಬಲೂನ್‌ ಬರೀ ಅಸ್ಥಿಪಂಜರವಾಗಿ ಉರಿದು ಬಿತ್ತು. ಆದರೆ ನೇರ ಪ್ರಸಾರದ ಕಮೆಂಟರಿ ಕೊಡಲೆಂದು ಮೈಕ್‌ ಹಿಡಿದ ವ್ಯಕ್ತಿ (ಹರ್ಬರ್ಟ್‌ ಮಾರಿಸನ್‌) ಆ ಭೀಭತ್ಸ ಕ್ಷಣಗಳನ್ನು ಪೂರ್ತಿ ರೆಕಾರ್ಡ್‌ ಮಾಡುತ್ತ ಚೀರುತ್ತ ಓಡಿದ. [ವಿಕಿಪೀಡಿಯಾದಲ್ಲಿ hindenburg disaster ಎಂದು ಹುಡುಕಿದರೆ 1937ರ ಮೇ 6ರ ಆ ಇಡೀ ದುರಂತದ ವಿವರಗಳ ಜೊತೆಗೆ ಆತನ ವೀಕ್ಷಕ ವಿವರಣೆಯನ್ನೂ ಕೇಳಬಹುದು.]

ಆ ಘಟನೆಯ ನಂತರ ʼಹಿಂಡೆನ್‌ಬರ್ಗ್‌ʼ ವರ್ಗದ ಎಲ್ಲ ಬಲೂನ್‌ ವಿಮಾನಗಳನ್ನೂ ಗುಜರಿಗೆ ಹಾಕಲಾಯಿತು. ಗಗನದಲ್ಲಿ ತೇಲುತ್ತ ಸಾಗುವ ಸಾಹಸಮಾಲಿಕೆಯೊಂದು ಹೀಗೆ ಅಂತ್ಯಗೊಂಡಿತು. ಹೈಡ್ರೊಜನ್‌ ಇಂಧನದ ಸಹವಾಸವೇ ಸಾಕೆಂದು ಆ ನಿಟ್ಟಿನ ತಂತ್ರಜ್ಞಾನದ ವಿಕಾಸವೇ ಮೊಟಕಾಯಿತು.

ಹೇಗೆ “ಟೈಟಾನಿಕ್‌” ಎಂದರೆ ವೈಭವದ ದುರಂತ ಎಂಬ ಅರ್ಥ ಬರುತ್ತದೊ ಹಾಗೆ “ಹಿಂಡೆನ್‌ಬರ್ಗ್‌” ಎಂದರೆ “ಯುಗ ಸಮಾಪ್ತಿ” ಎಂಬರ್ಥವಿದೆ. ಹಿಂಡೆನ್‌ಬರ್ಗ್‌ ಹೆಸರಿನ ಕಾದಂಬರಿ, ಸಿನೆಮಾ ಎಲ್ಲ ಬಂದಿವೆ.

*

ಈಚೆಗೆ 2017ರಲ್ಲಿ “ಹಿಂಡೆನ್‌ಬರ್ಗ್‌ ರೀಸರ್ಚ್‌” ಹೆಸರಿನ ಕಂಪನಿ ಬೇಕಂತಲೇ ಈ ಹೆಸರನ್ನು ತನ್ನದಾಗಿಸಿಕೊಂಡಿದೆ. ‘ಇದು ಮನುಷ್ಯರ ನಿರ್ಲಕ್ಷ್ಯದಿಂದಾಗಿಯೇ ಸಂಭವಿಸಿದ, ಮನುಷ್ಯ ನಿರ್ಮಿತ ದುರಂತʼ ಎಂದು ಅದು ಬಣ್ಣಿಸುತ್ತದೆ. ಕಾರ್ಪೊರೇಟ್‌ ವ್ಯವಹಾರದಲ್ಲಿ ಅಂಥ ದುರಂತದ ಸಾಧ್ಯತೆ ಇದ್ದಲ್ಲೆಲ್ಲ ಇದು ಮೂಗು ತೂರಿಸಿ, ಅಂಥ ಕಂಪನಿಗಳ ಶೇರು ವ್ಯವಹಾರಗಳ ಸಂಶೋಧನೆ ನಡೆಸುತ್ತದೆ. ತಾನೇ ಶೇರುಗಳನ್ನು ಖರೀದಿಸಿ ಕಡಿಮೆ ಬೆಲೆಗೆ ಮಾರಿ, ದೊಡ್ಡ ಕಂಪನಿಗಳ ಮೌಲ್ಯದ ಕುಸಿತಕ್ಕೂ ಕಾರಣವಾಗುತ್ತದೆ.

ಅದಾನಿ ಕಂಪನಿಯ ಹಣಕಾಸು ವ್ಯವಹಾರಗಳನ್ನು ಹಿಂಡೆನ್‌ಬರ್ಗ್‌ ಕಂಪನಿ ಪರಿಶೀಲಿಸಿತ್ತು. “ಕಳೆದ ಹತ್ತು ವರ್ಷಗಳಿಂದ ಅದಾನಿ ಸಮೂಹದ ಕಂಪನಿಗಳು ಭಂಡ ಧೈರ್ಯದಿಂದ ಶೇರುಮೌಲ್ಯಗಳನ್ನು ಅಪರಾತಪರಾ ತಿರುಚಿ, ಲೆಕ್ಕಪತ್ರದಲ್ಲಿ ವಂಚನೆ ನಡೆಸಿತ್ತು” ಎಂದು ಅದು ಆರೋಪಿಸಿದೆ.

ಹಿಂಡೆನ್‌ಬರ್ಗ್‌ ವರದಿ ಹೊರಬರುತ್ತಲೇ ʻಅದಾನಿ ಟೋಟಲ್‌ ಗ್ಯಾಸ್‌ʼ ಕಂಪನಿಯ ಶೇರುಮೌಲ್ಯ ಹಠಾತ್ತಾಗಿ 44%ರಷ್ಟು ಕುಸಿಯಿತು. ಹೈಡ್ರೊಜನ್‌ ಉತ್ಪಾದನೆಗಾಗಿ ಜಗತ್ತಿನ ಅತಿ ದೊಡ್ಡ ಯೋಜನೆಯನ್ನು ಹಮ್ಮಿಕೊಂಡ ಅದಾನಿ “ಗ್ರೀನ್‌ ಎನರ್ಜಿʼ ಕಂಪನಿಯ ಮೌಲ್ಯವೂ ದಿಢೀರ್‌ ಕುಸಿಯಿತು. 1937ರ ʼಹಿಂಡೆನ್‌ಬರ್ಗ್‌ ದುರಂತʼದ್ದೇ ದಟ್ಟ ಛಾಯೆ!

ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ 3ನೇ ಸ್ಥಾನದಲ್ಲಿದ್ದ ಅದಾನಿ ಈಗಿನ ಈ ಆರ್ಥಿಕ ದುರಂತದಿಂದಾಗಿ ನಿನ್ನೆ 15ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅದಾನಿ ಅಧೀನದ ಏಳು ಕಂಪನಿಗಳು ಒಂದೇ ವಾರದಲ್ಲಿ 120 ಶತಕೋಟಿ ಡಾಲರ್‌ ನಷ್ಟ ಅನುಭವಿಸಿವೆ. ಹೊಸದಾಗಿ ಮೊನ್ನೆಯಷ್ಟೇ ಸಂಗ್ರಹಿಸಿದ್ದ 20 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆದಾರರಿಗೆ ಹಿಂದಿರುಗಿಸುವುದಾಗಿ ಅದಾನಿ ಎಂಟರ್‌ಪ್ರೈಸ್‌ ನಿನ್ನೆ ಹೇಳಿದೆ. ಅದಾನಿಯನ್ನು ಹಿಂದಿಕ್ಕಿ ಅಂಬಾನಿ ಈಗ ಏಷ್ಯದ ಅತಿ ಶ್ರೀಮಂತ ವ್ಯಕ್ತಿಯಾಗಿ ಮೇಲೆದ್ದಿದ್ದಾರೆ.

*

ಹೈಡ್ರೊಜನ್‌ ಅನಿಲದ ಅಂದಿನ ಮತ್ತು ಇಂದಿನ ಈ ಎರಡೂ ದುರಂತಗಳು ಒಟ್ಟಾರೆ ಮನುಕುಲಕ್ಕೆ, ಜೀವಲೋಕಕ್ಕೆ ಒಳ್ಳೆಯದೇನಲ್ಲ. ಹೈಡ್ರೊಜನ್‌ ಇಡೀ ವಿಶ್ವದಲ್ಲಿ ಎಲ್ಲೆಡೆ ಲಭ್ಯವಿರುವ ಅತ್ಯಂತ ಕ್ಲೀನ್‌ ಶಕ್ತಿಮೂಲ. ಅದನ್ನು ನಾವು ಸುಸ್ಥಿರ, ಸುರಕ್ಷಿತ ರೂಪದಲ್ಲಿ ಬಳಸಲು ಸಾಧ್ಯವಿದೆ. ಆದರೆ ಆ ತಂತ್ರಜ್ಞಾನದ ಮುಂಚೂಣಿಯಲ್ಲಿದ್ದ ಅದಾನಿ ಕಂಪನಿಗೆ ಹಿನ್ನಡೆ ಆಗಿದೆ.

ಹಿಂಡೆನ್‌ಬರ್ಗ್‌ ದುರಂತ ಸಂಭವಿಸಿದ್ದರಿಂದ ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನವೆಲ್ಲ 86 ವರ್ಷಗಳ ಹಿಂದೆ ಮೂಲೆಗುಂಪಾಯಿತು. ಅದರ ಬದಲಿಗೆ ಕಾರ್ಬನ್‌ ವಿಷವನ್ನು ಕಕ್ಕುವ ಪೆಟ್ರೋಲಿಯಂ ಮತ್ತು ಕಲ್ಲಿದ್ದಲಿನಂಥ ಪಳೆಯುಳಿಕೆ ಇಂಧನದ ಬಳಕೆ ಎಲ್ಲೆಲ್ಲೂ ಹೆಚ್ಚಿತು. ಅದರ ಪರಿಣಾಮವಾಗಿ ಇಡೀ ಭೂಮಿಯ ತಾಪಮಾನ ಹೆಚ್ಚುತ್ತ ಬಂತು. ಮತ್ತೆ ನಾವೆಲ್ಲ ಹೈಡ್ರೊಜನ್‌ ಇಂಧನಕ್ಕೇ ಶರಣು ಹೋಗಬೇಕಾಗಿ ಬಂದಿದೆ.

ಈಗ ಹೈಡ್ರೊಜನ್‌ ಅನಿಲವನ್ನು ಸಾಕಷ್ಟು ಸುರಕ್ಷಿತವಾಗಿ ಬಳಸುವ ತಂತ್ರಜ್ಞಾನಗಳು ಬಂದಿವೆ. ಹಠಾತ್‌ ಸ್ಫೋಟದ ಸಾಧ್ಯತೆ ತೀರ ಕಡಿಮೆಯಾಗಿದೆ. ನೀರನ್ನು ವಿಭಜಿಸಿದರೆ ಹೈಡ್ರೊಜನ್‌ ಸಿಗುತ್ತದೆ. ಅದನ್ನು ಉರಿಸಿದರೆ ಮತ್ತೆ ನೀರು ಸಿಗುತ್ತದೆ. ಹಾಗಾಗಿ ಅದು ನಿರಂತರ ಸಿಗುವ ಅತ್ಯಂತ ಕ್ಲೀನ್‌ ಶಕ್ತಿಮೂಲವಾಗಬಹುದಾಗಿದೆ.

ಇಸ್ತ್ರಿಪೆಟ್ಟಿಗೆ ಗಾತ್ರದ ʻಫ್ಯುಯೆಲ್‌ ಸೆಲ್‌” ಒಂದರಿಂದ ನಾಲ್ಕಾರು ಮನೆಗಳಿಗೆ ವರ್ಷವಿಡೀ ಸಾಲುವಷ್ಟು ವಿದ್ಯುತ್‌ ಶಕ್ತಿಯನ್ನು ಪಡೆಯಬಹುದು.

ಹೈಡ್ರೊಜನ್‌ ಅನಿಲವನ್ನು ಕೃಷಿತ್ಯಾಜ್ಯದಿಂದ, ಸೆಗಣಿಯಿಂದ ಹಳ್ಳಿಹಳ್ಳಿಯಲ್ಲೂ ಉತ್ಪಾದಿಸಲು ಸಾಧ್ಯವಿದೆ.

ಆದರ ಭಾರತ ಸರಕಾರ ಈ ಅನಿಲವನ್ನು ಉತ್ಪಾದಿಸುವ ಗುತ್ತಿಗೆಯನ್ನು ಅದಾನಿಗೆ ಒಪ್ಪಿಸಿದೆ. ಅದು ವಿಶಾಲ ಭೂಮಿಯಲ್ಲಿ ಸೌರ ವಿದ್ಯುತ್‌ ಉತ್ಪಾದನೆ ಮಾಡಿ, ಆ ವಿದ್ಯುತ್ತಿನಿಂದ ನೀರನ್ನು ವಿಭಜಿಸಿ ಹೈಡ್ರೊಜನ್‌ ಉತ್ಪಾದನೆ ಮಾಡುತ್ತದೆ. ಪರಿಸರಕ್ಕೆ ಧಕ್ಯೆಯಾಗದಂತೆ ಶಕ್ತಿಯನ್ನು ಉತ್ಪಾದಿಸುವುದರಿಂದ ಅದಕ್ಕೆ ʻಗ್ರೀನ್‌ ಎನರ್ಜಿʼ ಎನ್ನುತ್ತಾರೆ.

ಅದಾನಿ ಉತ್ಪಾದಿಸಿದ ಹೈಡ್ರೊಜನ್‌ ಇಂಧನವನ್ನು ತುಂಬಿಸಿದ ಕಾರನ್ನು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಸ್ವತಃ ಓಡಾಡಿಸಿ ಜನಮನ ಗೆದ್ದಿದ್ದಾರೆ.

ಅತ್ತ ಗ್ರೀನ್‌ ಎನರ್ಜಿ ಉತ್ಪಾದನೆಗೆಂದು ರಾಜಸ್ತಾನದಲ್ಲಿ ಭಾರೀ ವಿಸ್ತಾರದ ಭೂಮಿಯನ್ನು ಅದಾನಿ ಪಡೆದಿದ್ದಾರೆ. ಕಂಪನಿಯ ಭೀಮಹೆಜ್ಜೆಯಿಂದಾಗಿ ರಾಜಸ್ತಾನದ ಅಪರೂಪದ “ಒರಾಣ್‌” ಎಂಬ ಓಯಸಿಸ್‌ಗಳಿಗೆ ಅಪಾಯ ಬಂದಿದೆ ಎಂದು ʻಫ್ರಂಟ್‌ಲೈನ್‌ʼ ಪತ್ರಿಕೆ ಕಳೆದ ತಿಂಗಳು ದೀರ್ಘ ಚಿತ್ರಲೇಖನವನ್ನು ಪ್ರಕಟಿಸಿದೆ.

ಒರಾಣ್‌ ಎಂದರೆ ಸಣ್ಣಸಣ್ಣ ನೀರಿನ ಕೊಳಗಳು; ಅದರ ಸುತ್ತ ಪುಟ್ಟದೊಂದು ತೋಪು, ದೇವಬನ, ದನಕುರಿಗಳಿಗೆ, ಪಕ್ಷಿಗಳಿಗೆ ನೀರಿನಾಸರೆ ಅಲ್ಲಿತ್ತು. ತೀರ ಅಪರೂಪದ ಬಸ್ಟಾರ್ಡ್‌ ಪಕ್ಷಿಗಳ ಆಶ್ರಯತಾಣವಾಗಿತ್ತು ಅದು.

ಗ್ರೀನ್‌ ಎನರ್ಜಿಗಾಗಿ ಈ ʻಓರಾಣ್‌ ಬನಗಳನ್ನು ಧ್ವಂಸ ಮಾಡಬೇಡಿʼ ಎಂದು ಒತ್ತಾಯಿಸಿ ಜೈಸಾಲ್ಮೇರ್‌ ಸುತ್ತಲಿನ 40 ಗ್ರಾಮಗಳ ಜನರು ಕಳೆದ ಡಿಸೆಂಬರ್‌ ನಲ್ಲಿ 300 ಕಿ.ಮೀ. ಪಾದಯಾತ್ರೆ ಮಾಡಿದ್ದರು. ಪೋಖ್ರಾನ್‌ ಬಳಿ ಅದಾನಿ ಕಂಪನಿಗೆ ನೀಡಲಾಗಿದ್ದ 3800 ಎಕರೆಯಲ್ಲಿ 900 ಎಕರೆಯಷ್ಟು ಊರೊಟ್ಟಿನ ಭೂಮಿಯನ್ನು ಹಿಂದಿರುಗಿಸುವಂತೆ ರಾಜಸ್ತಾನ್‌ ಹೈಕೋರ್ಟ್‌ ಆದೇಶ ನೀಡಿತ್ತು. ʻಒರಾಣ್‌ ಬಚಾವೋʼ ಆಂದೋಲನ ಅಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.

ಹೈಡ್ರೊಜನ್‌ ʻಗ್ರೀನ್‌ ಎನರ್ಜಿʼ ನಮಗೆ ಬೇಕು ನಿಜ. ಆದರೆ ಅದು ಹಳ್ಳಿಗಳಲ್ಲೇ ಉತ್ಪನ್ನವಾಗಬೇಕು. ಅಲ್ಲಿ ವ್ಯರ್ಥವಾಗಿ ಆಕಾಶಕ್ಕೆ ಸೋರುತ್ತಿರುವ ತ್ಯಾಜ್ಯಶಕ್ತಿಯನ್ನೇ ಬಳಸಿ ಹಳ್ಳಿಗರನ್ನು ಸಶಕ್ತೀಕರಣಗೊಳಿಸುವ ತಂತ್ರಜ್ಞಾನ ನಮಗೆ ಬೇಕಿತ್ತು.

ಆದರೆ ಅದಾನಿಯಂಥ ಸಬಲರ ಶಕ್ತಿಯನ್ನೇ ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ʻನಿಟ್ಟಿನ್‌ʼ ಗಡ್ಕರಿ ಪ್ರಚಾರಾಂದೋಲನ ನಡೆಸಿದ್ದಾರೆ.

ಹಿಂಡೆನ್‌ಬರ್ಗ್‌ ಕಂಪನಿ ಈಗ ಅದಾನಿ ಬಲೂನಿಗೆ ಸೂಜಿ ಚುಚ್ಚಿದೆ.