ವಿಡಂಬನೆಗಳ ನಡುವೆ ಒಂದು ಜನಸಮೂಹ- ನಾದಿವಾಕರ

ವಿಡಂಬನೆಗಳ ನಡುವೆ ಒಂದು ಜನಸಮೂಹ- ನಾದಿವಾಕರ

 

 

ವರ್ತಮಾನ

ನಾ ದಿವಾಕರ

 

75 ವರ್ಷಗಳ ಸ್ವತಂತ್ರ ಭಾರತದಲ್ಲಿ ಜಾತಿ ವ್ಯವಸ್ಥೆಯನ್ನೇ ತೊಡೆದುಹಾಕುವುದು ನಮ್ಮ ಆದ್ಯತೆಯಾಗಬೇಕಿತ್ತು. ಆದರೆ ಪ್ರಾಚೀನ ಕಾಲದ ಅಸ್ಪೃಶ್ಯತೆಯ ಆಚರಣೆಗಳೇ ಇನ್ನೂ ಜೀವಂತವಾಗಿರುವುದು ಮತ್ತೊಂದು ಸಾಮಾಜಿಕ ವಿಡಂಬನೆ.  ಡಾ ಅಂಬೇಡ್ಕರ್‌ ಅವರ ಮುಂದಾಳತ್ವದ ಮಹಾಡ್‌ ಮತ್ತು ಕಾಳಾರಾಮ್‌ ದೇವಾಲಯ ಪ್ರವೇಶದ ಚಳುವಳಿಗಳು ನಡೆದು ಶತಮಾನವೇ ಕಳೆದಿದ್ದರೂ ಇಂದಿಗೂ ನೀರುಮುಟ್ಟಿದ ಬಾಲಕ, ದೇವಾಲಯ ಪ್ರವೇಶಿಸಿದ ಕುಟುಂಬ, ದೇವರ ಕೋಲು ಮುಟ್ಟಿದ ಬಾಲಕ ಜಾತಿಯ ಕಾರಣಕ್ಕಾಗಿ ಹಲ್ಲೆಗೊಳಗಾಗುತ್ತಿರುವುದು ವಿಡಂಬನೆ ಅಲ್ಲವೇ ?

ವಿಡಂಬನೆಗಳ ನಡುವೆ ಒಂದು ಜನಸಮೂಹ

 

ಒಂದು ಸಮಾಜದ ಸ್ವಾಸ್ಥ್ಯ ನಿರ್ಧಾರವಾಗುವುದು ಹೇಗೆ ? ಬಹುಶಃ ಪ್ರಸ್ತುತ ಸಂದರ್ಭದಲ್ಲಿ ಈ ಪ್ರಶ್ನೆ ಸಾವಿರಾರು ಮರುಪ್ರಶ್ನೆಗಳನ್ನು ಹುಟ್ಟುಹಾಕಬಹುದು. ಕಳೆದ ಎರಡು ಮೂರು ದಶಕಗಳಿಂದಲೂ ಸಾರ್ವಜನಿಕ ಸಂಕಥನಗಳಲ್ಲಿ ಪದೇ ಪದೇ ಮೂಡಿಬರುತ್ತಿರುವ ಮತ್ತೊಂದು ಪ್ರಶ್ನೆ ಎಂದರೆ ʼ ನಾವು ಎತ್ತ ಸಾಗುತ್ತಿದ್ದೇವೆ ? ʼ ಎನ್ನುವುದು. ನಿಜ ಭಾರತ ವಿಶ್ವಗುರು ಆಗುವತ್ತ ಸಾಗುತ್ತಿದೆ. ಆರ್ಥಿಕ ನೆಲೆಯಲ್ಲಿ ವಿಶ್ವದ ಅಗ್ರಮಾನ್ಯ ರಾಷ್ಟ್ರಗಳ ನಡುವೆ ಹೆಮ್ಮೆಯಿಂದ ತಲೆಎತ್ತಿ ನಿಲ್ಲುವ ಪ್ರತಿಷ್ಠೆಯನ್ನು ಗಳಿಸಿದೆ. ಈ ಪ್ರತಿಷ್ಠೆ ಮತ್ತು ಗೌರವದ ಶ್ರೇಯ 75 ವರ್ಷಗಳ ಕಾಲ ಭಾರತವನ್ನು ಕಟ್ಟಿ ಬೆಳೆಸಿದ ಕೋಟ್ಯಂತರ ಶ್ರಮಿಕರಿಗೆ ಸಲ್ಲಬೇಕಾದರೂ, ಅದು ಸಾಮಾನ್ಯವಾಗಿ ಸಲ್ಲುವುದು ಆಳುವವರಿಗೆ. ಬಹುಶಃ ಇದೊಂದು ಚಾರಿತ್ರಿಕ ವಿಡಂಬನೆಯಾಗಿದ್ದು, ವಿಶ್ವ ಇತಿಹಾಸದಲ್ಲೂ ಪರಂಪರೆಯಾಗಿಯೇ ಬೆಳೆದುಬಂದಿದೆ. ಮಣ್ಣು ಗಾರೆ ಇಟ್ಟಿಗೆಗಳನ್ನು ಹೊತ್ತವರು ಇತಿಹಾಸದಲ್ಲಿ ದಾಖಲಾಗದೆ ಇರುವುದು ನಾವು ಒಪ್ಪಿಕೊಂಡು ಬಂದಿರುವಂತಹ ವಿಡಂಬನಾತ್ಮಕ ಸತ್ಯ.

 

ಆದರೂ ಭಾರತೀಯರು ನಾವು ಎಂದು ಹೆಮ್ಮೆಯಿಂದ ಎದೆತಟ್ಟಿಕೊಳ್ಳುವ ಪ್ರತಿ ವ್ಯಕ್ತಿಯೂ ಜಿಜ್ಞಾಸೆಗೊಳಗಾಗಿರುವುದು, ಮೇಲ್ನೋಟಕ್ಕೆ ಕಾಣದೆ ಹೋದರೂ, ಅಂತರಾಳದಲ್ಲಿ ಗುರುತಿಸಬಹುದು. ನಾವು ಎತ್ತ ಸಾಗುತ್ತಿದ್ದೇವೆ ಎಂಬ ಪ್ರಶ್ನೆಯನ್ನೇ ಗಮನಿಸಿದರೂ ಎಷ್ಟೊಂದು ಆಯಾಮಗಳಲ್ಲಿ ಈ ಪ್ರಶ್ನೆ ಎದುರಾಗಬಹುದು ? ಸಾಂವಿಧಾನಿಕ ನಿಷ್ಠೆ, ಆಡಳಿತ ಕ್ಷಮತೆ, ರಾಜಕೀಯ ಪ್ರಾಮಾಣಿಕತೆ, ಸಾಂಘಿಕ-ಸಾಂಸ್ಥಿಕ ನೈತಿಕತೆ, ಧಾರ್ಮಿಕ-ಆಧ್ಯಾತ್ಮಿಕ ನೈತಿಕತೆ, ಬೌದ್ಧಿಕ ವಸ್ತುನಿಷ್ಠತೆ, ಪಾರದರ್ಶಕತೆ, ಸಾಮಾಜಿಕ ಕಾಳಜಿ, ಸ್ತ್ರೀ ಸಂವೇದನೆ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಮಾನವೀಯತೆ ! ಈ ವಿಚಾರಗಳಲ್ಲಿ ಯಾವುದನ್ನೇ ಆಯ್ಕೆ ಮಾಡಿಕೊಂಡರೂ, ಒಮ್ಮೆ ನಮ್ಮ ಸುತ್ತಲಿನ ಸಮಾಜದತ್ತ ಕಣ್ಣಾಡಿಸಿದಾಗ, ಕೆಲವು ಸುಂದರ ತಾಣಗಳ ಹೊರತಾಗಿಯೂ, ನಮಗೆ ಕಾಣುತ್ತಿರುವುದು ಪಾಪದ ಕೂಪಗಳು, ಅಪರಾಧಗಳ ಬಿಲಗಳು, ಕ್ರೌರ್ಯದ ಸುರಂಗಗಳು, ಹಸಿವು ಅಪಮಾನದ ಬಯಲುಗಳು, ದೌರ್ಜನ್ಯ, ಅಟ್ಟಹಾಸ, ದಬ್ಬಾಳಿಕೆ ಮತ್ತು ದರ್ಪದ ಆವಾಸ ಸ್ಥಾನಗಳು ಇತ್ಯಾದಿ.

 

ಈ ಕರಾಳ ದರ್ಶನದ ಸುತ್ತ ಆವರಿಸಿರುವ ಅಪಾರದರ್ಶಕ ಪರದೆಗಳನ್ನು ಪಕ್ಕಕ್ಕೆ ಸರಿಸಿ ಒಳಹೊಕ್ಕು ನೋಡಿದಾಗ, ಇದು ನಮ್ಮ ಹೆಮ್ಮೆಯ ದೇಶವೇ ಎಂಬ ಪ್ರಶ್ನೆಯೂ ಮೂಡಿದರೆ ಅಚ್ಚರಿ ಪಡಬೇಕಿಲ್ಲ. ಸಾಮಾನ್ಯವಾಗಿ ಯಾವುದೇ ಸಮಾಜದಲ್ಲಿ ಇಂತಹ ಸನ್ನಿವೇಶಗಳಿದ್ದಾಗ ಅಲ್ಲಿನ ಕಲೆ ಮತ್ತು ಸಾಹಿತ್ಯದ ಅಭಿವ್ಯಕ್ತಿ ಮಾಧ್ಯಮಗಳು ವಸ್ತುನಿಷ್ಠತೆಯಿಂದ ತಮ್ಮದೇ ಆದ ರೀತಿಯಲ್ಲಿ ವಾಸ್ತವ ಸನ್ನಿವೇಶವನ್ನು ಬಿಚ್ಚಿಡುತ್ತವೆ. ಭಾರತ ಎದುರಿಸುತ್ತಿರುವ ಮತ್ತೊಂದು ವಿಡಂಬನೆ ಎಂದರೆ ಈ ಅಭಿವ್ಯಕ್ತಿ ಮಾಧ್ಯಮಗಳೂ ಸಹ ಹತ್ತು ಹಲವು ನಿಬಂಧನೆಗಳಿಗೆ, ನಿರ್ಬಂಧ ಕಟ್ಟುಪಾಡುಗಳಿಗೆ ಒಳಗಾಗಿವೆ. ʼಫ್ಯಾಕ್ಟ್‌ ಚೆಕ್‌ʼ ಎನ್ನುವುದು ಮುದ್ರಣ-ದೃಶ್ಯಮಾಧ್ಯಮದ ಒಂದು ಭಾಗವಾಗಿರುವುದು ಇದಕ್ಕೆ ಸಾಕ್ಷಿ. ಹಾಗಾಗಿ ಕಣ್ಣೆದುರಿನ ಅನ್ಯಾಯಗಳನ್ನೂ ಮೌನವಾಗಿ ಸಹಿಸಿಕೊಳ್ಳುವ ಜಾಣ್ಮೆಯನ್ನು ಸಮಾಜವೂ ಬೆಳೆಸಿಕೊಂಡುಬಿಟ್ಟಿದೆ. ಇದನ್ನು ನಿರ್ಲಿಪ್ತತೆ ಎನ್ನಬೇಕೋ ಅಥವಾ ಬೌದ್ಧಿಕ ನಿಷ್ಕ್ರಿಯತೆ ಎನ್ನಬೇಕೋ ಎನ್ನುವುದು ವಿವೇಚನೆಗೆ ಬಿಟ್ಟ ವಿಚಾರ. ಆದರೂ ಸಮಾಜದಲ್ಲಿ ನಡೆಯುವಂತಹ ಅಮಾನುಷ ಕೃತ್ಯಗಳನ್ನೂ ಸಹಿಸಿಕೊಳ್ಳುವುದಾದರೂ ಹೇಗೆ ? ಭಾರತೀಯ ಸಮಾಜ ಶತಮಾನಗಳಿಂದಲೂ ಸೃಷ್ಟಿಸಿರುವ ಅಸ್ಮಿತೆಯ ನೆಲೆಗಳು ಒಂದು ರೀತಿಯಲ್ಲಿ ಸಾಮಾಜಿಕ ವಿಸ್ಮೃತಿಗೆ ಕಾರಣವಾಗುತ್ತವೆ.

 

ವಿಡಂಬನೆಗಳ ಮಹಾಪೂರ

 

ಹಸಿವು, ಅವಮಾನ ಮತ್ತು ಹಿಂಸೆ ಈ ಮೂರೂ ಮನುಷ್ಯ ಜೀವಿಯನ್ನು ಅತಿ ಹೆಚ್ಚು ಕಾಡುವ ವಿದ್ಯಮಾನಗಳು. ಇತ್ತೀಚೆಗೆ ಬಿಡುಗಡೆಯಾಗಿರುವ ಜಾಗತಿಕ ಹಸಿವಿನ ಸೂಚಿಯ ಅನುಸಾರ 121 ರಾಷ್ಟ್ರಗಳ ಪೈಕಿ ಭಾರತ 107ನೆಯ ಸ್ಥಾನದಲ್ಲಿದೆ. ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೇಪಾಲ ಭಾರತಕ್ಕಿಂತಲೂ ಉತ್ತಮ ಸ್ಥಿತಿಯಲ್ಲಿವೆ.  ಈ ಅಂಕಿಅಂಶಗಳೇ ಅಂತಿಮ ಸತ್ಯವಲ್ಲ ಎಂದು ಆಳುವ ವರ್ಗಗಳು ವಾದ ಮಾಡಿದರೂ ಸಹ ಹಸಿವು ನಮ್ಮ ಸುತ್ತ ತಾಂಡವಾಡುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಮತ್ತೊಂದೆಡೆ ಕೇಂದ್ರ ಸರ್ಕಾರವು ಸೆಪ್ಟಂಬರ್‌ನಲ್ಲಿ ಪ್ರಕಟಿಸಿದ ತ್ರೈಮಾಸಿಕ ವರದಿಯ ಅನುಸಾರ 2022ರ ಏಪ್ರಿಲ್-ಜೂನ್‌ ಅವಧಿಯಲ್ಲಿ ಭಾರತದ ಜಿಡಿಪಿ (ಅಂದರೆ ಒಟ್ಟು ದೇಶೀಯ ಉತ್ಪನ್ನ) ಶೇ 13.5ರಷ್ಟು ದಾಖಲಾಗಿದ್ದು, ಭಾರತ ಇಂಗ್ಲೆಂಡನ್ನೂ ಹಿಮ್ಮೆಟ್ಟಿಸಿ ವಿಶ್ವದ ಐದನೆಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶವಾಗಿ ಹೊರಹೊಮ್ಮಿದೆ. ಇದು ಸಮಸ್ತ ಭಾರತೀಯರು ಹೆಮ್ಮೆ ಪಡಬೇಕಾದ ವಿಚಾರ. ಆದರೆ ಸಂಭ್ರಮದ ಚಪ್ಪರದಡಿ ಸೂತಕದ ಛಾಯೆ ಕಾಡಿದಂತೆ, ಹಸಿವಿನ ಸೂಚ್ಯಂಕ ನಮ್ಮನ್ನು ಕಾಡಬೇಕಲ್ಲವೇ. ಈ ಎರಡೂ ವಿದ್ಯಮಾನಗಳು ಅಂಕಿಅಂಶ ಆಧಾರಿತ. ವಾಸ್ತವ ಪ್ರಪಂಚ ಭಿನ್ನವಾಗೇನೂ ಇರಲಾರದು. ಅತಿ ಹೆಚ್ಚಿನ ಕೋಟ್ಯಧಿಪತಿಗಳನ್ನು ಸೃಷ್ಟಿಸುತ್ತಿರುವ ಭಾರತ ಅತಿ ಹೆಚ್ಚಿನ ಹಸಿವನ್ನೂ ಸೃಷ್ಟಿಸುತ್ತಿರುವುದು ವಿಡಂಬನೆ ಅಲ್ಲವೇ ?

 

ಈಗಾಗಲೇ ವಿಸ್ಮೃತಿಗೆ ಜಾರಿರುವ ಒಂದು ಕಾಲದಲ್ಲಿ (ಹೆಚ್ಚೇನೂ ಇಲ್ಲ ನಾಲ್ಕೈದು ದಶಕಗಳ ಹಿಂದೆ) ಭಾರತದ ಆಡಳಿತ ವ್ಯವಸ್ಥೆಯಲ್ಲಿ , ರಾಜಕಾರಣದಲ್ಲಿ ಭ್ರಷ್ಟಾಚಾರದ ಆರೋಪ ಒಂದು ಕಳಂಕ ಎಂದು ಭಾವಿಸಲಾಗುತ್ತಿತ್ತು. ಒಂದು ರೈಲು ದುರಂತವಾದ ಕೂಡಲೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಇನ್ನೂ ನಮ್ಮ ನೆನಪಿನಲ್ಲಿದ್ದಾರೆ. ಇತ್ತೀಚಿನವರೆಗೂ, ಅಂದರೆ 1990ರವರೆಗೂ ರಾಜಕಾರಣವನ್ನು ಕಳಂಕರಹಿತ ಮಾಡಬೇಕೆಂಬ ಮೌಲ್ಯಾಧಾರಿತ ರಾಜಕಾರಣದ ಆಗ್ರಹ ರಾಜಕೀಯ ವಲಯದಿಂದಲೇ ಕೇಳಿಬರುತ್ತಿತ್ತು. ತಮ್ಮ ವಿರುದ್ಧ ಗುರುತರ ಆರೋಪ ಬಂದ ಕೂಡಲೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದ ಶಾಸಕರು, ಸಂಸದರು ನಮ್ಮ ನಡುವೆ ಇದ್ದರು ಎನ್ನುವುದೇ ಇಂದು ಪುರಾಣ ಕತೆಯಂತೆ ಕೇಳಿಸುತ್ತದೆ. ಸಮಾಜಘಾತುಕ ಶಕ್ತಿಗಳಿಂದ, ಪಾತಕ ಲೋಕದಿಂದ ದೂರ ಉಳಿಯುವ ಮೂಲಕ ಜನತೆಯ ವಿಶ್ವಾಸ ಗಳಿಸಲು ಹಂಬಲಿಸುತ್ತಿದ್ದ ನೂರಾರು ನಾಯಕರ ಮೆರವಣಿಗೆಯನ್ನೇ ನಮ್ಮ ಸ್ಮೃತಿವಲಯದಲ್ಲಿ ಕಾಣಬಹುದು. ಆದರೆ ಇಂದು ಪಾತಕ ಕೃತ್ಯ ಎನ್ನುವುದೇ ಸಾಪೇಕ್ಷ ನೆಲೆಯಲ್ಲಿ ನಿಷ್ಕರ್ಷೆಗೊಳಗಾಗುತ್ತಿರುವುದರಿಂದ, ಒಂದು ಕೋನದಿಂದ ಪಾತಕ ಎನಿಸುವುದು ಮತ್ತೊಂದು ಕೋನದಿಂದ ಸಹಜ-ಸ್ವೀಕೃತ ಎನಿಸಿಬಿಡುತ್ತದೆ. ಹಾಗಾಗಿ ಎಂತಹುದೇ ಆರೋಪ ಹೊರಿಸಿದರೂ, ಅಧಿಕಾರದ ಕುರ್ಚಿಯನ್ನು ಬಿಡದ ಒಂದು ಪರಂಪರೆಯನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ಜನಸಾಮಾನ್ಯರೂ ತಮ್ಮದೇ ಆದ ಕಾರಣಗಳಿಗಾಗಿ ಅಪರಾಧ ಹೊತ್ತವರನ್ನೇ ಆಯ್ಕೆಮಾಡಲು ಹಿಂಜರಿಯದಂತಹ ಪರಿಸ್ಥಿತಿಯನ್ನೂ ನಿರ್ಮಿಸಿಕೊಂಡಿದ್ದೇವೆ. ಹಾಗಾಗಿಯೇ ಬ್ರಹ್ಮಾಂಡ ಭ್ರಷ್ಟಾಚಾರಗಳೇ ನಡೆಯುತ್ತಿದ್ದರೂ, ನಾವು ನಿರುಮ್ಮಳವಾಗಿದ್ದೇವೆ. ಮೌಲ್ಯಾಧಾರಿತ ರಾಜಕಾರಣ ಎನ್ನುವುದು ಅಪಭ್ರಂಶವಾಗಿ ಮಾರುಕಟ್ಟೆ ಮೌಲ್ಯಗಳು ನಿರ್ಣಾಯಕವಾಗುತ್ತಿವೆ.

 

ಅತ್ಯಂತ ಕ್ಲಿಷ್ಟವಾಗಿ ಕಾಡುವ ಒಂದು ವಿಡಂಬನೆ ಎಂದರೆ ಅಧಿಕಾರ ರಾಜಕಾರಣದ ಸಂವಿಧಾನ ನಿಷ್ಠೆ. ಭಾರತದಲ್ಲಿ ಗ್ರಾಮಪಂಚಾಯತ್‌ ಮಟ್ಟದಿಂದ ಸಂಸತ್ತಿನವರೆಗೂ ಆಯ್ಕೆಯಾಗುವ ಪ್ರತಿಯೋರ್ವ ʼ ಜನಪ್ರತಿನಿಧಿ ʼಯೂ ಪ್ರಾಮಾಣಿಕವಾಗಿ ತಾವು ನಂಬಿದ ಧರ್ಮ, ದೇವರು ಮತ್ತು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಅರ್ಥಾತ್‌ ತಮ್ಮ ಅಧಿಕಾರಾವಧಿಯಲ್ಲಿ ಮತ್ತು ನಂತರದಲ್ಲೂ ಸಹ ಯಾವುದೇ ಅಸಾಂವಿಧಾನಿಕ ರೀತಿಯಲ್ಲಿ ವರ್ತಿಸುವುದಿಲ್ಲ ಎಂದು ಪ್ರಜ್ಞಾಪೂರ್ವಕವಾಗಿ ಪ್ರಮಾಣೀಕರಿಸಿರುತ್ತಾರೆ. ತಮ್ಮ ನಡೆ, ನುಡಿ, ಹಾಗೂ ಸಾಂಘಿಕ-ಸಾಂಸ್ಥಿಕ ಚಟುವಟಿಕೆಗಳಲ್ಲಿ ಭಾರತದ ಸಂವಿದಾನ ವಿಧಿಸಿರುವ ನಿಯಮಗಳಿಗೆ ಬದ್ಧವಾಗಿರುವುದಾಗಿ ಒಪ್ಪಿಕೊಂಡೇ ಅಧಿಕಾರಯುತ ಸ್ಥಾನಗಳನ್ನು ಅಲಂಕರಿಸಿರುತ್ತಾರೆ. ಆದರೆ ಗ್ರಾಮಮಟ್ಟದಿಂದ ದೆಹಲಿಯವರೆಗಿನ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಜನಪ್ರತಿನಿಧಿಗಳ ಮಾತು-ನಡೆ-ನುಡಿ ಎಲ್ಲವೂ ಸಹ ವ್ಯತಿರಿಕ್ತವಾಗಿಯೇ ಕಾಣುತ್ತವೆ. ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರ, ಹಿಂಸೆ, ದೌರ್ಜನ್ಯ, ತಾರತಮ್ಯಗಳಿಗೆ ಮೌನ ವಹಿಸುವ ಅಥವಾ ಕೆಲವೊಮ್ಮೆ ಸಮರ್ಥಿಸುವ ಒಂದು ಹೊಸ ರಾಜಕೀಯ ಪೀಳಿಗೆಯನ್ನೂ ನಾವೇ ಸೃಷ್ಟಿಸಿಕೊಂಡಿದ್ದೇವೆ. ಇದನ್ನು ಸಾಮಾನ್ಯೀಕರಿಸುವುದು ತಪ್ಪಾಗುತ್ತದೆ. ಆದಾಗ್ಯೂ ಗತಕಾಲದ ರಾಜಕಾರಣಕ್ಕೆ ಹೋಲಿಸಿದಾಗ, ಸನ್ನಿವೇಶ ನಿರಾಶಾದಾಯಕವಾಗಿಯೇ ಕಾಣುತ್ತದೆ.

 

ಅಧ್ಯಾತ್ಮ ಮತ್ತು ಧರ್ಮ ಭಾರತೀಯ ಪರಂಪರೆಯ ಉಸಿರು ಎಂದೇ ಹೇಳಲಾಗುತ್ತದೆ. ಯಾವುದೇ ಮತಧರ್ಮದ ನೆಲೆಯಲ್ಲಿ ನೋಡಿದಾಗಲೂ, ಈ ಎರಡೂ ನೆಲೆಗಳಲ್ಲಿ ಭಾರತೀಯ ಸಮಾಜದ ಬಹುಸಂಖ್ಯಾತ ಜನತೆ ಅತಿ ಹೆಚ್ಚು ವಿಶ್ವಾಸ ಹೊಂದಿರುವುದನ್ನು ಗುರುತಿಸಬಹುದು. ತಮ್ಮ ನಿತ್ಯ ಜೀವನದ ಜಂಜಾಟಗಳಿಗೆ ಸಾಂತ್ವನದ ನೆಲೆಗಳಾಗಿ ಆಧ್ಯಾತ್ಮಿಕ-ಧಾರ್ಮಿಕ ಸಂಸ್ಥೆಗಳನ್ನು ಕಾಣುವ ಸಾಮಾನ್ಯ ಜನತೆಗೆ ಈ ಸಾಂಸ್ಥಿಕ ಚೌಕಟ್ಟುಗಳೇ ಒಂದು ಆದರ್ಶ ಸಮಾಜದ ದಿಕ್ಸೂಚಿಗಳಾಗಿಯೂ ಕಾಣುವುದು ವಾಸ್ತವ. ಇಲ್ಲಿ ನಾವು ಕಾಣಬಹುದಾದ ವಿಡಂಬನೆ ಎಂದರೆ ಈ ಆಧ್ಯಾತ್ಮಿಕ-ಧಾರ್ಮಿಕ ಸಾಂಸ್ಥಿಕ ನೆಲೆಗಳೇ ಇಂದು ಅತ್ಯಾಚಾರ, ದೌರ್ಜನ್ಯಗಳ ಕೇಂದ್ರಗಳಾಗುತ್ತಿವೆ. ಸಾಮಾನ್ಯ ಜನರ, ಭಕ್ತಾದಿಗಳ, ಅನುಯಾಯಿಗಳ ವಿಶ್ವಾಸಕ್ಕೇ ಕುಂದು ತರುವಂತಹ ಘಟನೆಗಳು ಕೆಲವು ಸಂಸ್ಥೆಗಳಲ್ಲಿ ನಡೆಯುತ್ತಿವೆ. ಇಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಅಪರಾಧ ಮತ್ತು ಅಪರಾಧಿಗಳ ನಿಷ್ಕರ್ಷೆಯಾಗುವುದಾದರೂ, ನೈತಿಕ ನೆಲೆಯಲ್ಲಿ ನಿಂತು ನೋಡಿದಾಗ, ಸಮಾಜವೇ ತಲೆ ತಗ್ಗಿಸುವಂತಹ ಘಟನೆಗಳು ವರದಿಯಾಗುತ್ತಿವೆ. ಬಾಹ್ಯ ಸಮಾಜಕ್ಕೆ ಆದರ್ಶಪ್ರಾಯರಂತಿರಬೇಕಾದ ಧಾರ್ಮಿಕ ನಾಯಕರು ಆರೋಪಿಗಳಾಗಿ ನಿಲ್ಲುವುದೇ, ಸಮಾಜದ ಆತ್ಮಸ್ಥೈರ್ಯವನ್ನು ಅಲುಗಾಡಿಸುವಂತಹ ಪ್ರಕ್ರಿಯೆಯಾಗುತ್ತದೆ. ಸುತ್ತಲಿನ ಸಮಾಜದಲ್ಲಿನ ದೌರ್ಜನ್ಯ, ಕ್ರೌರ್ಯ ಮತ್ತು ಕಿರುಕುಳಗಳಿಂದ ಮುಕ್ತಿ ಪಡೆಯಲು, ಮಾನಸಿಕ ಸಾಂತ್ವನದ ನೆಲೆಗಳಂತೆ ಈ ಕೇಂದ್ರಗಳನ್ನು ನಂಬಿ ನಡೆಯುವ ಅಮಾಯಕ ಜನತೆಯ ವಿಶ್ವಾಸಕ್ಕೆ ಭಂಗ ತರುವಂತಹ ಘಟನೆಗಳು ಸಂಭವಿಸುತ್ತಿವೆ. ಇದೇ ಒಂದು ವಿಡಂಬನೆಯಾದರೆ, ಇದನ್ನು ಸಹಿಸಿಕೊಳ್ಳುವ-ಸಮರ್ಥಿಸಿಕೊಳ್ಳುವ ಒಂದು ವರ್ಗ ನಮ್ಮ ನಡುವೆ ಇರುವುದು ಮಹಾ ವಿಡಂಬನೆ ಅಲ್ಲವೇ ?

 

ಅರಿವೇ ಗುರು, ಗುರುವೇ ದೇವರು ಎಂಬ ಪರಂಪರೆಯಲ್ಲೇ ಬೆಳೆದುಬಂದಿರುವ ಭಾರತದಲ್ಲಿ ಶಿಕ್ಷಣ ಇಂದಿಗೂ ಮರೀಚಿಕೆಯಾಗಿರುವ ಬೃಹತ್‌ ಸಮೂಹವೇ ಇದೆ. ಆದಾಗ್ಯೂ ಸಾಕ್ಷರತೆಯಲ್ಲಿ ಮಹತ್ತರ ಸಾಧನೆ ಮಾಡಿರುವ ಭಾರತ ವಿಶ್ವಕ್ಕೆ ಅತ್ಯುತ್ತಮ ಶಿಕ್ಷಕರನ್ನು ಕೊಡುಗೆಯಾಗಿಯೂ ನೀಡಿದೆ. ಶಿಕ್ಷಕರನ್ನು ದೈವಸಮಾನವಾಗಿ ಕಾಣುವ ಈ ದೇಶದಲ್ಲಿ, ಪೋಷಕರಿಗಿಂತಲೂ ಶಿಕ್ಷಕರಿಗೆ ಹೆಚ್ಚಿನ ಗೌರವ ನೀಡುವ ಸಮಾಜದಲ್ಲಿ ಇಂದು ಶಿಕ್ಷಕರು ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರ ಎಸಗುತ್ತಿರುವುದು, ಜಾತಿಯ ಕಾರಣಕ್ಕಾಗಿ ಹಲ್ಲೆ ನಡೆಸಿ ಹತ್ಯೆ ಮಾಡುವುದು ಇಂತಹ ಘಟನೆಗಳು ನಡೆದಿವೆ. ಇದು ನವ ಭಾರತದ ಮತ್ತೊಂದು ವಿಡಂಬನೆ. ಧರ್ಮ, ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳನ್ನು ಬಿತ್ತಬೇಕಾದ ಫಲವತ್ತಾದ ಭೂಮಿಕೆಯಲ್ಲಿರುವ ಶಿಕ್ಷಕ ಸಮೂಹ ನಾಚಿ ತಲೆತಗ್ಗಿಸುವ ರೀತಿಯಲ್ಲಿ ಕೆಲವು ಘಟನೆಗಳು ನಡೆಯುತ್ತಿರುವುದು ಆಘಾತಕಾರಿಯಷ್ಟೇ ಅಲ್ಲ, ಆತಂಕಕಾರಿಯೂ ಆಗಿದೆ.  ಶಾಲಾ ಆವರಣಗಳಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಬೇಕು ಎನ್ನುವ ಒಂದು ಆಲೋಚನೆಯನ್ನೂ ಮಾಡದ ರೀತಿಯಲ್ಲಿ ನಾಗರಿಕ ಸಮಾಜ ನಿರ್ಲಿಪ್ತತೆಯಿಂದಿದೆ. ಇಡೀ ಶಿಕ್ಷಕ ಸಮೂಹವೇ ಒಕ್ಕೊರಲಿನಿಂದ ಖಂಡಿಸಬೇಕಾದ ಒಂದು ಘಟನೆ ಸಮಾಜದಲ್ಲಿ ನಿತ್ಯ ನಡೆಯುವ ಮತ್ತೊಂದು ಘಟನೆಯಾಗಿ ಕಾಣುತ್ತಿರುವುದು ಮಹಾ ವಿಡಂಬನೆಯಲ್ಲವೇ ?

 

75 ವರ್ಷಗಳ ಸ್ವತಂತ್ರ ಭಾರತದಲ್ಲಿ ಜಾತಿ ವ್ಯವಸ್ಥೆಯನ್ನೇ ತೊಡೆದುಹಾಕುವುದು ನಮ್ಮ ಆದ್ಯತೆಯಾಗಬೇಕಿತ್ತು. ಆದರೆ ಪ್ರಾಚೀನ ಕಾಲದ ಅಸ್ಪೃಶ್ಯತೆಯ ಆಚರಣೆಗಳೇ ಇನ್ನೂ ಜೀವಂತವಾಗಿರುವುದು ಮತ್ತೊಂದು ಸಾಮಾಜಿಕ ವಿಡಂಬನೆ.  ಡಾ ಅಂಬೇಡ್ಕರ್‌ ಅವರ ಮುಂದಾಳತ್ವದ ಮಹಾಡ್‌ ಮತ್ತು ಕಾಳಾರಾಮ್‌ ದೇವಾಲಯ ಪ್ರವೇಶದ ಚಳುವಳಿಗಳು ನಡೆದು ಶತಮಾನವೇ ಕಳೆದಿದ್ದರೂ ಇಂದಿಗೂ ನೀರುಮುಟ್ಟಿದ ಬಾಲಕ, ದೇವಾಲಯ ಪ್ರವೇಶಿಸಿದ ಕುಟುಂಬ, ದೇವರ ಕೋಲು ಮುಟ್ಟಿದ ಬಾಲಕ ಜಾತಿಯ ಕಾರಣಕ್ಕಾಗಿ ಹಲ್ಲೆಗೊಳಗಾಗುತ್ತಿರುವುದು ವಿಡಂಬನೆ ಅಲ್ಲವೇ ? ನಾಗರಿಕತೆಯ ಉತ್ತುಂಗದಲ್ಲಿರಬೇಕಾದ ಒಂದು ಸುಶಿಕ್ಷಿತ ಸಮಾಜದಲ್ಲಿ ಇಂದಿಗೂ ಸ್ಪರ್ಶ ಎನ್ನುವುದು ಅಪರಾಧವಾಗಿರುವುದು ಮಹಾ ವಿಡಂಬನೆ ಅಲ್ಲವೇ ? ಅತ್ಯಾಚಾರ, ದೌರ್ಜನ್ಯ, ತಾರತಮ್ಯ, ಕಿರುಕುಳ ಇವೆಲ್ಲವೂ 21ನೆಯ ಶತಮಾನದ ಮೂರನೆಯ ದಶಕದಲ್ಲೂ ಜಾತಿ ಆಧಾರಿತವಾಗಿಯೇ ಉಳಿದಿರುವುದು ವಿಡಂಬನೆಯಲ್ಲವೇ ? ಇದಕ್ಕಿಂತಲೂ ಹೆಚ್ಚು ವಿಷಾದಕರ ಸಂಗತಿ ಎಂದರೆ ಅಸ್ಪೃಶ್ಯತೆಯಂತಹ ಹೀನ ಆಚರಣೆ ನಮ್ಮ ನಡುವೆ ಜೀವಂತವಾಗಿದ್ದರೂ ಸಹ ನಮ್ಮ ಬಾಹ್ಯ ಸಮಾಜ ನಿರ್ಲಿಪ್ತವಾಗಿ, ಮೌನವಾಗಿರುವುದು.

 

ಮಹಿಳಾ ದೌರ್ಜನ್ಯ ಇರಲಿ, ಅಪ್ರಾಪ್ತ ಬಾಲೆಯರ ಮೇಲಿನ ಅತ್ಯಾಚಾರಗಳಿಗೂ ಒಂದು ವರ್ಗದ ಮಹಿಳಾ ಸಮೂಹದ ಮೌನ, ಅಸ್ಪೃಶ್ಯತೆಯಂತಹ ಹೀನ ಆಚರಣೆಗೂ ತಳಸಮುದಾಯಗಳ ಮೌನ, ಬ್ರಹ್ಮಾಂಡ ಭ್ರಷ್ಟಾಚಾರಗಳಿಗೂ ವಿದ್ಯಾವಂತ ಸಮೂಹದ ಮೌನ ಇವೆಲ್ಲವೂ ಸಾಮಾನ್ಯೀಕರಣ ಮಾಡಲಾಗದ ವಿಡಂಬನೆಗಳು. ಹಾಗೆಯೇ ಹಂತಕರನ್ನು, ಅತ್ಯಾಚಾರಿಗಳನ್ನು ಸನ್ಮಾನಿಸುವುದು, ಹತ್ಯೆಕೋರರನ್ನು ಆರಾಧಿಸುವುದು, ಹಲ್ಲೆಕೋರರನ್ನು ಸಮರ್ಥಿಸುವುದು, ಸಮಾಜಘಾತುಕ ಶಕ್ತಿಗಳನ್ನು ರಕ್ಷಿಸುವುದು, ದ್ವೇಷಾಸೂಯೆಗಳನ್ನು ಸುಶಿಕ್ಷಿತ ವಲಯದಲ್ಲೇ ಪೋಷಿಸುವುದು, ಸಾಂಘಿಕ ಮತ್ತು ಸಾಂಸ್ಥಿಕ ದ್ವೇಷವನ್ನು ಘನೀಕರಿಸುವುದು ಇವೆಲ್ಲವೂ ಭಾರತ ಸಹಿಸಿಕೊಂಡೇ ಬಂದಿರುವ ಮಹಾ ವಿಡಂಬನೆಗಳು. ತಿನ್ನುವ ಆಹಾರ, ಬಾಳ ಸಂಗಾತಿಯ ಆಯ್ಕೆ, ಧರಿಸುವ ಉಡುಪು ಇವೆಲ್ಲವೂ ಧಾರ್ಮಿಕ ನೆಲೆಯಲ್ಲಿ ನಿಷ್ಕರ್ಷೆಗೊಳಗಾಗುತ್ತಿರುವುದು ಮತ್ತೊಂದು ವಿಡಂಬನೆ. ಇದರಾಚೆಗೆ ಕಳೆದ 75 ವರ್ಷಗಳ ಅಭಿವೃದ್ಧಿ ಪಥದಲ್ಲಿ ಸರ್ಕಾರಿ ಸ್ವಾಮ್ಯದ ಶೈಕ್ಷಣಿಕ, ಔದ್ಯೋಗಿಕ, ಔದ್ಯಮಿಕ ಮತ್ತು ಬೌದ್ಧಿಕ ಸಂಸ್ಥೆಗಳಿಂದಲೇ ಇಂದು ಸುಭದ್ರ ನೆಲೆಯಲ್ಲಿ ನಿಂತಿರುವ ಹಿತವಲಯದ ವಿದ್ಯಾವಂತ ಸುಶಿಕ್ಷಿತ ಸಮಾಜವೇ ತನ್ನ ಬೆನ್ನ ಹಿಂದಿನ ವಾಸ್ತವ ಚರಿತ್ರೆಯನ್ನೇ ನಿರಾಕರಿಸಿ ಇಂದು ಎಲ್ಲ ವಲಯಗಳನ್ನೂ ಕಾರ್ಪೋರೇಟ್‌ ಖಾಸಗಿಯವರಿಗೆ ವಹಿಸಿ ಎಂದು ಹೇಳುತ್ತಿರುವುದು, ಎಲ್ಲವೂ ಬಿಕರಿಯಾಗುತ್ತಿದ್ದರೂ ಮೌನವಾಗಿರುವುದು,  ದುರಂತಮಯ ವಿಡಂಬನೆ ಎನಿಸುವುದಿಲ್ಲವೇ ?

 

ಈ ವಿಡಂಬನೆಯ ನಡುವೆಯೇ ಗುಜ್ಜುಕೋಲು ಘಟನೆಯ ಬಾಲಕ, ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯರು, ಬಿಲ್ಕಿಸ್‌ ಬಾನು ಅವರಂತಹ ಸಂತ್ರಸ್ತರು, ಅಸ್ಪಷ್ಟ ಭವಿಷ್ಯದತ್ತ ಮುಖ ಮಾಡಿರುವ ನಿರುದ್ಯೋಗಿ ಸಮೂಹ, ಅನಿಶ್ಚಿತತೆಯಲ್ಲೇ ಬದುಕುತ್ತಿರುವ ಆದಿವಾಸಿಗಳು, ಇಂದಿಗೂ ಸೂರಿಗಾಗಿ ಹೋರಾಡುತ್ತಿರುವ ಕೋಟ್ಯಂತರ ಜನರು, ಹಸಿವು ಅವಮಾನಗಳಿಂದ ಕುಗ್ಗಿಹೋಗಿರುವ ಅಸಂಖ್ಯಾತ ಜನತೆ, ಒಂದು ಸುಂದರ ದೇಶದ ಕನಸು ಕಾಣುತ್ತಲೇ ಬದುಕುತ್ತಿದ್ದಾರೆ. ಈ ಜನತೆಯ ಸಂಖ್ಯೆ ಎಷ್ಟು ಎನ್ನುವುದಕ್ಕಿಂತಲೂ, ಈ ಪರಿಸ್ಥಿತಿಯನ್ನೆದುರಿಸುತ್ತಿರುವ ಒಂದು ಜನಸಮೂಹ ನಮ್ಮ ನಡುವೆ ಇದೆ ಎನ್ನುವುದು ಮುಖ್ಯ. ಇವರತ್ತ ಕಣ್ಣೆತ್ತಿಯೂ ನೋಡದೆ, ತಮ್ಮದೇ ಆದ ಹಿತವಲಯದಲ್ಲಿ ಬದುಕುತ್ತಿರುವ ಬೃಹತ್‌ ಜನಸಮೂಹವೇ ಸ್ವತಂತ್ರ ಭಾರತದ ಒಂದು ಮಹಾ ವಿಡಂಬನೆ, ಅಲ್ಲವೇ?

-೦-೦-೦