ಉತ್ತರಪ್ರದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆಯೇ ?
ಅಶುತೋಷ್ ವಾರ್ಷ್ಣೆ ಅವರು ತಮ್ಮ ಸಮೀಕ್ಷೆಯ ಅನುಸಾರ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮತ ಹಂಚಿಕೆ ಕಡಿಮೆಯಾಗುವ ಸಾಧ್ಯತೆಗಳು ನಿಚ್ಚಳವಾಗಿದೆ ಎಂದು ಹೇಳುತ್ತಾರೆ. ಈ ನಿಟ್ಟಿನಲ್ಲಿ ಕೆಲವು ನಿರೂಪಣೆಗಳನ್ನೂ ನೀಡುತ್ತಾರೆ.
ವರ್ತಮಾನ
ನಾ ದಿವಾಕರ
ಲೋಕಸಭಾ ಚುನಾವಣೆಗಳ ನಾಲ್ಕನೆ ಹಂತ ಮುಗಿಯುತ್ತಿದ್ದಂತೆಯೇ ಅಂತಿಮ ಫಲಿತಾಂಶಗಳ ಬಗ್ಗೆ ಹಲವು ವಿಭಿನ್ನ ವಿಶ್ಲೇಷಣೆಗಳು, ಅಭಿಪ್ರಾಯಗಳು ಕೇಳಿಬರುತ್ತಿವೆ. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ʼ ಯೋಗಿ ಮಾದರಿʼ ಆಡಳಿತವನ್ನು ಅತಿ ಹೆಚ್ಚು ಪ್ರಚಾರಕ್ಕೆ ಬಳಸಿರುವ ಬಿಜೆಪಿಗೆ ಉತ್ತರಪ್ರದೇಶದಲ್ಲೇ ಹಿನ್ನಡೆಯಾಗುವ ಸಾಧ್ಯತೆಗಳನ್ನು ಕೆಲವು ಸಮೀಕ್ಷೆಗಳು, ತಳಮಟ್ಟದ ಅಧ್ಯಯನಗಳು ನಿರೂಪಿಸುತ್ತವೆ. ಅಮೇಥಿಯ ಚಹಾ ಅಂಗಡಿಯ ಹಿರಿಯ ನಾಗರಿಕರೊಬ್ಬರು ಹೇಳುವಂತೆ “ ಈ ಚುನಾವಣೆಗಳಲ್ಲಿ ಬದಲಾವಣೆ ಬರುತ್ತಿರುವುದರಿಂದ ಎಲ್ಲೆಡೆ ಮೌನ ಆವರಿಸಿದೆ ”. ಭಾರತದ ಚುನಾವಣೆಗಳಲ್ಲಿ ಉತ್ತರಪ್ರದೇಶದ ಫಲಿತಾಂಶಗಳು ಸದಾ ನಿರ್ಣಾಯಕವಾಗಿಯೇ ಇರುತ್ತದೆ. ಈ ಬಾರಿಯೂ ಅನಿರೀಕ್ಷಿತ ಫಲಿತಾಂಶಗಳು ಹೊರಬರುವ ಸಾಧ್ಯತೆಗಳಿವೆ ಎಂದು ವಿದ್ವಾಂಸ ಅಶುತೋಷ್ ವಾರ್ಷ್ಣೆ ಹೇಳುತ್ತಾರೆ.
ಉತ್ತರ ಪ್ರದೇಶದ ಚುನಾವಣೆಗಳಲ್ಲಿ ಈ ಬಾರಿಯೂ ಸಹ ಪ್ರತಿರೋಧದ ದನಿಗಳನ್ನು ಹೆದರಿಸುವ ತೆಪ್ಪಗಾಗಿಸುವ ವಾತಾವರಣ ಢಾಳಾಗಿ ಕಾಣುತ್ತದೆ. ಆಳವಾಗಿ ತಳಮಟ್ಟದ ಸಮಾಜದ ನಡುವೆ ಅಧ್ಯಯನ ನಡೆಸಿದಾಗ ವಾಸ್ತವಿಕ ನಿರೂಪಣೆಗಳನ್ನು ಪಡೆಯಬಹುದು ಎಂದು ವಾರ್ಷ್ಣೆ ಹೇಳುತ್ತಾರೆ. ಎಲ್ಲ ಕ್ಷೇತ್ರಗಳಲ್ಲೂ ಭಯದ ವಾತಾವರಣ ಸಾಮಾನ್ಯವಾಗಿರುವುದಾದರೂ ಇದು ಮತದಾನವನ್ನು ಕಡಿಮೆ ಮಾಡುವಂತಹ ಭಯ ಅಲ್ಲ ಎಂದೂ ಹೇಳುತ್ತಾರೆ. ಸಂಭಾಲ್ ಕ್ಷೇತ್ರದಲ್ಲಿ ವರದಿಯಾಗಿರುವ ಮತದಾರರನ್ನು ದಮನಿಸುವಂತಹ ಪ್ರಕರಣಗಳು ಅತಿ ವಿರಳವಾಗಿದ್ದು ಇಂತಹ ಘಟನೆಗಳಿಂದಲೇ ತಳಮಟ್ಟದಲ್ಲಿ ಮುಕ್ತ ಚರ್ಚೆಗೆ ತೊಡಕಾಗುತ್ತಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಸಂಖ್ಯಾಶಾಸ್ತ್ರೀಯ ವಿಧಾನವನ್ನು ಅನುಸರಿಸಿ ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸುವಾಗ ಅಶುತೋಷ್ ವಾರ್ಷ್ಣೆ ಅವರು ಕಂಡ ಕೆಲವು ವಾಸ್ತವ ಸನ್ನಿವೇಶಗಳನ್ನು ಸ್ಪಷ್ಟವಾಗಿ ನಿರೂಪಿಸಿದ್ದಾರೆ. ತಳಮಟ್ಟದ ಸಮೀಕ್ಷೆಯಲ್ಲಿ ಸಾಮಾನ್ಯವಾಗಿ ಎಷ್ಟು ಜನರು ಅಧಿಕಾರದಲ್ಲಿರುವವರಿಗೆ ಅಥವಾ ವಿರೋಧ ಪಕ್ಷಕ್ಕೆ ಮತ ಚಲಾಯಿಸಿದ್ದಾರೆ ? ಯಾವ ಸಾಮಾಜಿಕ ವರ್ಗಗಳು - ಜಾತಿ, ಧರ್ಮ, ಲಿಂಗ, ವಯಸ್ಸು - ಯಾರಿಗೆ ಮತ ಚಲಾಯಿಸಿದರು ? ಚುನಾವಣಾ ತೀರ್ಪಿಗೆ ಸಂಬಂಧಿಸಿದ ಪ್ರಮುಖ ವಿಷಯಗಳು ಯಾವುವು ? ಮುಂತಾದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಎರಡನೆಯದಾಗಿ ಪ್ರಮುಖ ಬದಲಾವಣೆಗಳು ಬರಬಹುದೇ ಎಂದು ಅರ್ಥಮಾಡಿಕೊಳ್ಳಲು ಅತ್ಯಂತ ಅಸಂಭವವಾದ ಸನ್ನಿವೇಶವನ್ನು ಸೂಚಿಸುತ್ತದೆ.
ರಾಷ್ಟ್ರೀಯ ಮಟ್ಟದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬುದನ್ನು ನಿರ್ಧರಿಸುವ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶ ಆಗಿರುತ್ತದೆ. ಗುಜರಾತ್ ಹೊರತುಪಡಿಸಿದರೆ ಹಿಂದೂ ರಾಷ್ಟ್ರೀಯವಾದಿ ಪ್ರಾಬಲ್ಯವನ್ನು ಉತ್ತರ ಪ್ರದೇಶದಲ್ಲಿ ಅತಿ ಪ್ರಭಾವಶಾಲಿಯಾಗಿ ಕಾಣಬಹುದು ಎಂದು ಹಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಹಾಗಾಗಿ ಉತ್ತರಪ್ರದೇಶದ ಚುನಾವಣೆಗಳಲ್ಲಿ ಹಿಂದೂ ರಾಷ್ಟ್ರೀಯವಾದಿ ಅಲೆಯಲ್ಲಿ ಕೊಂಚ ಮಟ್ಟಿಗೆ ತಿರುವು ಕಂಡುಬಂದರೂ ಸಹ ಅದನ್ನು ಅತ್ಯಂತ ಅಸಂಭವ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ. ಪ್ರಸಕ್ತ ಚುನಾವಣೆಗಳಲ್ಲಿ ಇದು ಹೆಚ್ಚಿನ ಮಹತ್ವವನ್ನು ಹೊಂದಿದೆ. ಅಶುತೋಷ್ ವಾರ್ಷ್ಣೆ ಅವರ ಅಧ್ಯಯನ ಮತ್ತು ಸಮೀಕ್ಷೆಯ ಅಂಶಗಳು ನಿಜವಾದಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿಯ ಮತ ಹಂಚಿಕೆ ಕಡಿಮೆಯಾಗುವ ಸಾಧ್ಯತೆಗಳಿವೆ. ಸ್ಥಾನಗಳು ಸಹ ಕಡಿಮೆಯಾಗುತ್ತವೆಯೇ ಎಂದು ಸ್ಪಷ್ಟವಾಗಿ ಹೇಳಲಾಗುವುದಿಲ್ಲ ಏಕೆಂದರೆ ಸಂಸದೀಯ ವ್ಯವಸ್ಥೆಯಲ್ಲಿ ಗೆಲುವಿನ ದೊಡ್ಡ ಹಳೆಯ ಅಂತರವು ಕುಗ್ಗಿದರೂ ಅಭ್ಯರ್ಥಿಯು ಗೆಲ್ಲಬಹುದು. ಮತಗಳು ಕಡಿಮೆಯಾಗಬಹುದು, ಆದರೆ ಸ್ಥಾನಗಳು ಹಾಗೆಯೇ ಉಳಿಯಬಹುದು.
ತಳಮಟ್ಟದ ವಾಸ್ತವಗಳು
ಅಶುತೋಷ್ ವಾರ್ಷ್ಣೆ ಅವರು ತಮ್ಮ ಸಮೀಕ್ಷೆಯ ಅನುಸಾರ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮತ ಹಂಚಿಕೆ ಕಡಿಮೆಯಾಗುವ ಸಾಧ್ಯತೆಗಳು ನಿಚ್ಚಳವಾಗಿದೆ ಎಂದು ಹೇಳುತ್ತಾರೆ. ಈ ನಿಟ್ಟಿನಲ್ಲಿ ಕೆಲವು ನಿರೂಪಣೆಗಳನ್ನೂ ನೀಡುತ್ತಾರೆ.
ಮೊದಲನೆಯದಾಗಿ, ರಾಜ್ಯದಲ್ಲಿ ಕೆಲವೇ ಜನರು ಅಯೋಧ್ಯೆಯ ಬಗ್ಗೆ ಮಾತನಾಡುತ್ತಿದ್ದಾರೆ. ಜನವರಿಯಲ್ಲಿ ಎಲ್ಲೆಡೆ ಸ್ಪಷ್ಟವಾದ ಅಯೋಧ್ಯೆ ಅಲೆ ಇತ್ತು. ಜನವರಿ 22 ರಂದು, ಪ್ರಧಾನಿ ಮೋದಿ ಅವರು "ಕಾಲ ಚಕ್ರ ಬದಲಾಗುತ್ತಿದೆ " ಮತ್ತು " ಮುಂದಿನ 1,000 ವರ್ಷಗಳ ಅಡಿಪಾಯವನ್ನು ಹಾಕಲಾಗಿದೆ " ಎಂದು ಹೇಳಿದಾಗ, ಹಿಂದೂ ಬಹುಸಂಖ್ಯಾವಾದದ ಹೊಸ ರಾಜಕೀಯ ವ್ಯವಸ್ಥೆ ಹುಟ್ಟುತ್ತಿರುವಂತೆ ತೋರಿತು. 2024ರ ಚುನಾವಣೆಗಳ ಫಲಿತಾಂಶಗಳು ಪೂರ್ವನಿರ್ಧಾರಿತ ಎಂಬ ಅಭಿಪ್ರಾಯಗಳೂ ಕೇಳಿಬಂದವು. . ಮೌನ ಮತದಾರನ ಮನಸ್ಸಿನಲ್ಲಿ ಭಿನ್ನವಾದ ಆಲೋಚನೆಗಳು ಇಲ್ಲದೆ ಹೋದಲ್ಲಿ ಚುನಾವಣಾ ಸಂಕಥನದಲ್ಲಿ ಅಯೋಧ್ಯೆಯ ಸುತ್ತಲಿನ ವಿಚಾರವು ದೊಡ್ಡ ಒಗಟನ್ನು ಸೃಷ್ಟಿಸುತ್ತದೆ, ಇದನ್ನು ರಾಜಕೀಯ ವಿಶ್ಲೇಷಕರು ಪರಿಹರಿಸಬೇಕಾಗುತ್ತದೆ. ಏನೇ ಅದರೂ ಅಯೋಧ್ಯೆಯು ಹಿನ್ನಲೆಗೆ ಸರಿಯುವುದು ಬಿಜೆಪಿಯ ಮತಗಳನ್ನು ಕುಗ್ಗಿಸುವ ಸಾಧ್ಯತೆಯಿದೆ.
ಎರಡನೆಯದಾಗಿ, ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ಮೋದಿಯನ್ನು ಭಾರಿ ಪ್ರಮಾಣದಲ್ಲಿ ಬೆಂಬಲಿಸಿದ ಯುವಕರಲ್ಲಿ ನಿರುದ್ಯೋಗ ಪ್ರಮಾಣವು ತೀವ್ರವಾಗಿ ಹೆಚ್ಚಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವು ಉದ್ಯೋಗಗಳನ್ನು ಒದಗಿಸದಿರಲು ರಾಜ್ಯ ಬಿಜೆಪಿ ಸರ್ಕಾರದ ಉದ್ದೇಶಪೂರ್ವಕ ತಂತ್ರವಾಗಿದೆ ಎಂದು ಹಲವು ರಾಜಕೀಯ ತಜ್ಞರು ಹೇಳುತ್ತಿದ್ದಾರೆ. ಬಿಜೆಪಿ ಸರ್ಕಾರದ ಕಲ್ಯಾಣ ಪ್ರಯೋಜನಗಳು ನಿರುದ್ಯೋಗದ ಅಥವಾ ಉದ್ಯೋಗ ಇಲ್ಲದಿರುವ ಪರಿಸ್ಥಿತಿಯನ್ನು ಸರಿದೂಗಿಸುವುದಿಲ್ಲವೇ ಎಂಬ ಪ್ರಶ್ನೆ ಸಹಜವೇ ಆದರೂ ಕಲ್ಯಾಣ ಯೋಜನೆಗಳ ಫಲಾನುಭವಿ ಆಗುವುದಕ್ಕಿಂತ ಸ್ಥಿರ ಉದ್ಯೋಗ ಹೊಂದಿರುವುದು ಉತ್ತಮ ಎಂಬ ಉತ್ತರ ಥಟ್ಟನೆ ಬರುತ್ತದೆ. . ಬಿಜೆಪಿಗೆ ಮತ ಹಾಕುವ ಯುವ ಮತದಾರರು ಸಹ ಉದ್ಯೋಗಗಳು ಬಿಜೆಪಿ ಸರ್ಕಾರದ ಆದ್ಯತೆಯಾಗಿರಬೇಕು ಎಂದು ಹೇಳುತ್ತಿದ್ದಾರೆ. ಉದ್ಯೋಗ ಮತ್ತು ಫಲಾನುಭವಿಗಳ ಸುತ್ತಲಿನ ಸಂಕಥನವು ಮನೆಯನ್ನು ನಿರ್ವಹಿಸುವ ಮಹಿಳೆಯರು ಏನು ಯೋಚಿಸುತ್ತಿದ್ದಾರೆ ಎಂಬುದನ್ನು ಪ್ರತಿಬಿಂಬಿಸುವುದಿಲ್ಲ. 5 ಕೆಜಿ ಉಚಿತ ಪಡಿತರವು ಮೋದಿ ಮಹಿಳೆಯರಲ್ಲಿ ಸಕಾರಾತ್ಮಕ ಅಭಿಪ್ರಾಯ ಮೂಡಿಸಿದ್ದರೂ ಉದ್ಯೋಗಾವಕಾಶಗಳು ಇಲ್ಲದಿರುವುದರಿಂದ ಬಹುಸಂಖ್ಯೆಯ ಯುವಸಮೂಹ ಅಸಮಾಧಾನಗೊಂಡಿದ್ದಾರೆ.
ಮೂರನೆಯದಾಗಿ, ಉತ್ತರ ಪ್ರದೇಶದಲ್ಲಿ ಯುವ ದಲಿತ ಮತದಾರರು ಸಂವಿಧಾನದ ಬಗ್ಗೆ ಗಂಭೀರ ಆತಂಕವನ್ನು ವ್ಯಕ್ತಪಡಿಸುತ್ತಾರೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು 370 ಸ್ಥಾನಗಳನ್ನು ಗಳಿಸುವ ಬಗ್ಗೆ ಪದೇ ಪದೇ ಪ್ರಸ್ತಾಪಿಸುವುದೂ ಈ ಆತಂಕಕ್ಕೆ ಕಾರಣವಾಗಿದೆ. ಸಂವಿಧಾನವನ್ನು ಬುಡಮೇಲು ಮಾಡುವುದು ಉದ್ದೇಶವಲ್ಲದಿದ್ದರೆ 370 ಸ್ಥಾನಗಳನ್ನು ಪಡೆಯುವ ಬಗ್ಗೆ ಏಕೆ ಮಾತನಾಡಬೇಕು ? ಸಾಂವಿಧಾನಿಕವಾಗಿ ಪ್ರತಿಪಾದಿಸಲಾದ ಮೀಸಲಾತಿ ಕೊನೆಗೊಳ್ಳುತ್ತದೆಯೇ ? ಎಲ್ಲರೂ ಅಲ್ಲದಿದ್ದರೂ, ಅನೇಕ ದಲಿತ ಮನಸ್ಸುಗಳಲ್ಲಿ, ಈ ಅನುಮಾನಗಳು ಹೊರಹೊಮ್ಮಿವೆ. ದಲಿತ ಸಮುದಾಯದಲ್ಲಿ ಮತ್ತು ಹಿಂದುಳಿದ ವರ್ಗಗಳಲ್ಲೂ ಸಹ ಸಂವಿಧಾನದ ಬಗ್ಗೆ ಅಪಾರ ವಿಶ್ವಾಸ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗೆಗಿನ ಗೌರವ ಅಪಾರವಾಗಿದೆ. ಅಂಬೇಡ್ಕರ್ ತಳಸಮುದಾಯಗಳ ನಡುವೆ ನಿಸ್ಸಂದೇಹವಾಗಿ ಐಕಾನ್ ಆಗಿದ್ದಾರೆ. ಹಾಗಾಗಿ ಸಂವಿಧಾನದ ಬಗೆಗಿನ ಚರ್ಚೆ ಮೇಲ್ಪದರದಲ್ಲಿ ನಡೆಯುತ್ತಿದ್ದರೂ ಅಂತಿಮವಾಗಿ ಸಾಮೂಹಿಕ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇದು ನಿರ್ಣಾಯಕವಾಗುವ ಸಾಧ್ಯತೆಗಳಿವೆ.
ಈ ಎಲ್ಲ ಅಂಶಗಳನ್ನು ಪರಿಗಣಿಸಿದ ನಂತರವೂ ಸಹ ಉತ್ತರಪ್ರದೇಶದಲ್ಲಿ ಮಹಿಳೆಯರು ಹೇಗೆ ಮತ ಚಲಾಯಿಸುತ್ತಾರೆ ಎಂಬುದು ಇನ್ನೂ ಸಹ ಅಸ್ಪಷ್ಟವಾಗಿಯೇ ಕಾಣುತ್ತಿದೆ. ಚುನಾವಣಾ ಸಮೀಕ್ಷೆಗಳು ನಡೆಯುವ ತಳಮಟ್ಟದ ಸಮಾಜದಲ್ಲಿ ಸಂಪರ್ಕಿಸಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ ಬರುವುದಿಲ್ಲ ಬೀದಿ ಬದಿಯ ಚಹಾ ಅಂಗಡಿಗಳಲ್ಲಿ ಕಾಣುವುದಿಲ್ಲ. ಹಾಗಾಗಿಯೇ ಅನೇಕ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಮಹಿಳೆಯರ ಆದ್ಯತೆಗಳನ್ನು ಸಮರ್ಪಕವಾಗಿ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಮಹಿಳೆಯರು ಮೋದಿಯ ಪರವಾಗಿ ಮತ ಚಲಾಯಿಸುತ್ತಾರೆಯೇ ? ಅಥವಾ ಬದಲಾವಣೆಯ ಗಾಳಿಯು ಅವರ ಮೇಲೂ ಪರಿಣಾಮ ಬೀರುತ್ತಿದೆಯೇ ? ಇದು ಈ ಚುನಾವಣೆಗಳ ಅತ್ಯಂತ ನಿರ್ಣಾಯಕ ನಿರ್ಣಾಯಕವಾಗಿ ಪರಿಣಮಿಸಬಹುದು.
( ಆಧಾರ : ಇಂಡಿಯನ್ ಎಕ್ಸ್ಪ್ರೆಸ್ ದಿನಪತ್ರಿಕೆಯಲ್ಲಿ ದಿನಾಂಕ 15.05.2024ರಂದು ಪ್ರಕಟವಾದ ಅಶುತೋಷ್ ವಾರ್ಷ್ಣೆ - ಗೋಲ್ಡ್ಮನ್ ಅವರ ಬರಹ, ಲೇಖಕರು ಪ್ರಾಧ್ಯಾಪಕರು – ಬ್ರೌನ್ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಅಧ್ಯಯನ ಮತ್ತು ಸಮಾಜ ವಿಜ್ಞಾನ ವಿಭಾಗ.