ಕೆಎನ್‌ಆರ್ ನಮ್ಮನ್ನೇನೂ ಕೇಳಿಲ್ಲ: ಜೆಸಿಎಂ ‘ಈಗ ಪಕ್ಷ ಮುಖ್ಯ- ಬಿಜೆಪಿ ಅಭ್ಯರ್ಥಿ ಗೆಲ್ಲಿಸುತ್ತೇವೆ’
BJP candidate should win in mlc election
ಕೆಎನ್‌ಆರ್ ನಮ್ಮನ್ನೇನೂ ಕೇಳಿಲ್ಲ: ಜೆಸಿಎಂ
‘ಈಗ ಪಕ್ಷ ಮುಖ್ಯ- ಬಿಜೆಪಿ ಅಭ್ಯರ್ಥಿ ಗೆಲ್ಲಿಸುತ್ತೇವೆ’
ತುಮಕೂರು: “ ಚುನಾವಣೆ ಎಂದ ಮೇಲೆ ಶತ್ರುವಿನ ಶತ್ರು ನಮ್ಮ ಮಿತ್ರ ಎಂಬ ನೀತಿಯಡಿ ಯಾರು ಯಾರಿಗೋ ನೆರವಾಗುವುದೆಲ್ಲ ಇದ್ದದ್ದೇ, ಒಂದು ಕಾಲದಲ್ಲಿ ಇಂಡಿಪೆAಡೆAಟ್ ಆಗಿದ್ದ ನಾನು ಎಂಎಲ್‌ಸಿ ಚುನಾವಣೆಯಲ್ಲಿ ಕೆ.ಎನ್.ರಾಜಣ್ಣನವರಿಗೆ ನೆರವಾಗಿದ್ದೆ. ಅಲ್ಲದೆ ಅವರು ಇತ್ತೀಚೆಗೆ ಸೌಜನ್ಯದ ಭೇಟಿಯಾಗಿದ್ದಾಗ ಮಗನ ಚುನಾವಣೆಗೆ ನೆರವಾಗಿ ಎಂದು ಕೇಳಲೂ ಇಲ್ಲ.”
ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಎದುರು ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರನ್ನು ಗೆಲ್ಲಿಸಲು ನೆರವಾಗಿದ್ದ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣನವರ ಮಗ ರಾಜೇಂದ್ರ ಅವರ ಗೆಲುವಿಗೆ ಬಿಜೆಪಿ ನೆರವಾಗುವುದಿಲ್ಲವೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಉತ್ತರಿಸಿದ್ದು ಹೀಗೆ. ಜೊತೆಗೆ ಈ ಕುರಿತು ಸಂಸದ ಜಿ.ಎಸ್.ಬಸವರಾಜು ಉತ್ತರ ನೀಡುತ್ತಾರೆ ಎಂದು ಮೈಕನ್ನು ಅವರಿಗೇ ನೀಡಿದರು.
ಚುನಾವಣೆಯಲ್ಲಿ ಹೇಮಾವತಿ ನೀರನ್ನು ಜಿಲ್ಲೆಗೆ ಬಿಡವುದಿಲ್ಲವೆಂಬ ಹಾಸನ ಜಿಲ್ಲೆಯವರ ಧೋರಣೆ ನಮಗೆ ನೆರವಾಯಿತು ಎಂದ ಜಿಎಸ್‌ಬಿ ಕೆಎನ್‌ಆರ್ ನೆರವಾದ ಬಗ್ಗೆ ಸ್ಪಷ್ಟ ಮಾತುಗಳಲ್ಲಿ ಏನನ್ನೂ ಹೇಳಲಿಲ್ಲ ಮತ್ತೆ ಮಾತು ಮುಂದುವರೆಸಿದ ಜೆಸಿಎ, ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಸರ್ಕಾರ ನೇರ ಹಣ ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರವೂ ಸಾಕಷ್ಟು ಯೋಜನೆಗಳನ್ನು ನೀಡಿದೆ.ಜೊತೆಗೆ ಮುಂದೆಯೂ ಕೆಲಸ ಮಾಡುವ ನಿರೀಕ್ಷೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ನಿರೀಕ್ಷೆಯಿದೆ.
ಐವರು ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು ಹಾಗೂ ಇಬ್ಬರು ಸಂಸದರನ್ನು ಜಿಲ್ಲೆಯ ಜನತೆ ಗೆಲ್ಲಿಸಿದ್ದಾರೆ, ಈ ಜನತೆಯ ಓಟಿ ಪಡೆದು ಗೆದ್ದಿರುವ ಗ್ರಾಮ ಪಂಚಾಯಿತಿ ಸದಸ್ಯರು ನಮ್ಮ ವಿಧಾನ ಪರಿಷತ್ ಅಭ್ಯರ್ಥಿಯನ್ನೂ ಗೆಲ್ಲಿಸುತ್ತಾರೆಂಬ ನಿರೀಕ್ಷೆ ನಮಗಿದೆ ಎಂದರು ಮಾಧುಸ್ವಾಮಿ.
ಜಿಲ್ಲಾ ಬಿಜೆಪಿಯಲ್ಲೇ ದೀರ್ಘಾವಧಿಗೆ ಸೇವೆ ಸಲ್ಲಿಸಿರುವ ಯಾರೂ ವಿಧಾನಪರಿಷತ್‌ಗೆ ಸ್ಪರ್ಧಿಸಲು ಮುಂದಾಗಲಿಲ್ಲ ಎಂದ ಸಚಿವರು, ಮಾಜಿ ಸಚಿವ ಸೊಗಡು ಶಿವಣ್ಣನವರು, ಹಿಂದಿನ ಚುನಾವಣೆಯಲ್ಲಿ ಪರಾಭವಗೊಂಡಿರುವ ಡಾ.ಹುಲಿನಾಯ್ಕರ್ ಮತ್ತು ಅವರ ಮಗಳು, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುರೇಶ್‌ಗೌಡರು ಹೀಗೆ ಯಾರೂ ಮುಂದೆ ಬರಲಿಲ್ಲ. ಜೊತೆಗೆ ಸಹಕಾರಿ ಡಾ.ಎನ್.ಎಸ್.ಜಯಕುಮಾರ್ ಅವರನ್ನೂ ಕೇಳಿದೆವು ಅವರೂ ಒಪ್ಪಲಿಲ್ಲ ಎಂದು ಸುದ್ದಿಗೋಷ್ಟಿಯ ಸಭಾಂಗಣದಲ್ಲೇ ಇದ್ದ ಜಯಕುಮಾರ್ ಅವರತ್ತ ನೋಡುತ್ತ ಹೇಳಿ, ಪಕ್ಕದ ದಾಸರಹಳ್ಳಿ ಬಿಬಿಎಂಪಿ ಸದಸ್ಯ ಲೋಕೇಶ್ ಇಲ್ಲಿ ಅಭ್ಯರ್ಥಿಯಾದ ಕಾರಣವನ್ನು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ರಾಜ್ಯ ಉಪಾಧ್ಯಕ್ಷ ನಂದೀಶ್, ಮುಖಂಡರಾದ ಹೆಬ್ಬಾಕ ರವೀಶ್, ಲಕ್ಷಿಶ್ ಇದ್ದರು
ನಾನೂ ಇಲ್ಲಿಯವನೇ: ಲೋಕೇಶ್‌ಗೌಡ
ವಿಧಾನ ಪರಿಷತ್ ಸ್ಥಾನದ ಬಿಜೆಪಿ ಅಭ್ಯರ್ಥಿ ಸ್ಪಷ್ಟನೆ
ತುಮಕೂರು: “ನಾನೂ ತುಮಕೂರು ಜಿಲ್ಲೆಯವನೇ, ಕೊರಟಗೆರೆ ತಾಲೂಕಿನ ವಡ್ಡಗೆರೆ ನನ್ನ ಹುಟ್ಟೂರು, ನಾಗರಾಜು ಮತ್ತು ರಾಮಕ್ಕನವರ ಪುತ್ರ, ಬೆಂಗಳೂರಿನಲ್ಲಿ ಸೆಟಲ್ ಆಗಿದ್ದೇನೆ, ತುಮಕೂರಿನ ಮಧುಗಿರಿ ರಸ್ತೆಯಲ್ಲಿ ಅರಕೆರೆ ಸಮೀಪ ಸ್ವಂತ ಮನೆಯೂ ಇದೆ. ಈಗ ಅದೇ ಮನೆಯನ್ನು ಚುನಾವಣಾ ಕಚೇರಿ ಮಾಡಿಕೊಂಡಿದ್ದೇನೆ. ಚುನಾವಣೆಯಲ್ಲಿ ಗೆದ್ದ ಮೇಲೆ ಇಲ್ಲಿಗೇ ಬಂದು ಮಗನನ್ನು ಇಲ್ಲೇ ಸ್ಕೂಲಿಗೆ ಸೇರಿಸಿ ಇಲ್ಲೇ ಸೆಟಲ್ ಆಗಿಬಿಡುತ್ತೇನೆ.”
ಹೀಗೆ ಒಂದೇ ಉಸಿರಿಗೆ ವಿವರ ನೀಡಿದವರು ಬಿಜೆಪಿಯ ವಿಧಾನ ಪರಿಷತ್ ಅಭ್ಯರ್ಥಿ ಎನ್.ಲೋಕೇಶ್ (ಲೋಕೇಶ್ ಗೌಡ). ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಮತ ಚಲಾಯಿಸಿ ಆಯ್ಕೆ ಮಾಡಬೇಕಿರುವ ವಿಧಾನಪರಿಷತ್ ಸ್ಥಾನಕ್ಕೆ ಬಿಜೆಪಿ ‘ಬಿ’ ಫಾರಂ ಪಡೆದ ಲೋಕೇಶ್‌ಗೌಡರು ಸ್ಥಳೀಯರಲ್ಲ ಎಂಬ ಅಪಸ್ವರಕ್ಕೆ ಉತ್ತರ ನೀಡ ಬಯಸಿದ್ದರು ಅವರು.
“11 ವರ್ಷಗಳ ಹಿಂದೆ ಬೂತ್ ಕಾರ್ಯಕರ್ತನಾಗಿ ರಾಜಕೀಯ ಪ್ರವೇಶಿಸಿದೆ, ನಂತರ ಬಿಬಿಎಂಪಿ ವಾರ್ಡ್ ಅಧ್ಯಕ್ಷನನ್ನಾಗಿ ಪಕ್ಷ ನೇಮಿಸಿತು, ದಾಸರಹಳ್ಳಿ ವಾರ್ಡ್ನಿಂದ ಬಿಬಿಎಂಪಿಗೆ ಚುನಾಯಿತನಾದೆ, 198ನೇ ವಾರ್ಡನ್ನು ಮಾದರಿ ಕ್ಷೇತ್ರವನ್ನಾಗಿ(ಸ್ಮಾರ್ಟ್ ವಾರ್ಡ್) ರೂಪಿಸಿದೆ. ದಾಸರಹಳ್ಳಿ ಬಿಜೆಪಿ ಅಧ್ಯಕ್ಷನಾಗಿ, ಪಾಂಡಿಚೆರಿ ಮತ್ತು ಗುಲ್ಬರ್ಗಗಳಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದೇನೆ. ಇದೀಗ ಪಕ್ಷ ನನ್ನನ್ನು ಎಂಎಲ್‌ಸಿ ಅಭ್ಯರ್ಥಿಯನ್ನಾಗಿ ಮಾಡಿದೆ” ಎಂದರು ಲೋಕೇಶ್.
ಇನ್ನೂ ಏನನ್ನಾದರೂ ಹೇಳುವವರಿದ್ದರೇನೋ ಅಷ್ಟು ಹೊತ್ತಿಗೆ ಸುದ್ದಿಗಾರರ ಕಡೆಯಿಂದ ಅವರ ಆರು ವರ್ಷಗಳ ಹಿಂದಿನದೊAದು ಆಡಿಯೋ ಅನ್ನು ಜೆಡಿಎಸ್ ಪಾಳೆಯ ವೈರಲ್ ಮಾಡಿರುವ ಪ್ರಶ್ನೆ ಅವರನ್ನು ತಬ್ಬಿಬ್ಬು ಮಾಡಿತು. ಆ ಆಡಿಯೋದಲ್ಲಿ, ಬಡವರು ಬಿಜೆಪಿಗೆ ಓಟು ಹಾಕುವುದಿಲ್ಲ, ಏನಿದ್ದರೂ ಶ್ರೀಮಂತರು ಮಾತ್ರವೇ ಬಿಜೆಪಿಗೆ ಓಟು ಮಾಡುವುದು” ಎಂದು ಲೋಕೇಶ್ ಮಾತನಾಡಿದ್ದಾರೆ ಎಂಬ ಆರೋಪವಿದೆ. ಆ ಮಾತುಗಳು ನನ್ನವೇ ಆದರೆ, ಅದನ್ನೆಲ್ಲ ಕತ್ತರಿಸಿ ಜೋಡಿಸಲಾಗಿದೆ ಎಂಬುದು ಲೋಕೇಶ್ ಗೌಡರ ಸ್ಪಷ್ಟನೆ. ಆವರ ಸ್ಪಷ್ಟನೆಗೆ ಸುದ್ದಿಗಾರರು ಸಮಾಧಾನಗೊಳ್ಳುವ ಲಕ್ಷಣಗಳು ಕಾಣದೇ ಹೋದಾಗ, ಖುದ್ದು ಸಚಿವ ಮಾಧುಸ್ವಾಮಿಯವರೇ ಪಕ್ಷದ ಅಭ್ಯರ್ಥಿ ರಕ್ಷಣೆಗೆ ಮುಂದಾದರು.
“ಎಲ್ಲೋ ಯಾವತ್ತೋ ಆಡಿದ ಮಾತುಗಳನ್ನು ಈ ಚುನಾವಣೆಗೆ ಅನ್ವಯಿಸಬೇಡಿ, ಆ ಆಡಿಯೋ ವೈರಲ್ ಆದ ಮೇಲೂ ಅವರು ಬಿಬಿಎಂಪಿಗೆ ಚುನಾಯಿತರಾಗಿದ್ದಾರೆ. ಅವರನ್ನು ಅವರ ಪಾಡಿಗೆ ಬಿಡಿ” ಎಂದು ಗುರಾಣಿ ಹಿಡಿದರು ಸಚಿವರು.
‘ಪ್ರವಾಹ ಪೀಡಿತ ಜಿಲ್ಲೆ’ ಎಂದು
ಸದ್ಯದಲ್ಲೇ ಸರ್ಕಾರದ ಆದೇಶ
ತುಮಕೂರು: ಅನಿರೀಕ್ಷಿತ ಅತಿವೃಷ್ಟಿಯಿಂದ 80% ಬೆಳೆ ಹಾಳಾಗಿದೆ ಎಂಬ ವರದಿ ಬಂದಿದ್ದು, ಯಾವ್ಯಾವ ರೈತರಿಗೆ ಬೆಳೆವಿಮೆ ಅನ್ವಯವಾಗುವುದೋ ಆ ಪ್ರಕಾರ ಪರಿಹಾರ ನೀಡುವಂತೆ ಉಳಿದ ರೈತರಿಗೆ ನಿಯಮಾನುಸಾರ ಪರಿಹಾರ ಕೊಡುವಂತೆ ಆದೇಶ ನೀಡಿದ್ದೇನೆ. ಅತಿ ಹೆಚ್ಚು ಬೆಳೆ ನಾಶವಾಗಿರುವುದರಿಂದ ತುಮಕೂರು ಜಿಲ್ಲೆಯನ್ನು ಪ್ರವಾಹ ಪೀಡಿತ ಜಿಲ್ಲೆ ಎಂದು ಪರಿಗಣಿಸುವಂತೆ ಮುಖ್ಯಮಂತ್ರಿಯವರನ್ನು ಕೋರಲಾಗಿದೆ. ಈ ಕುರಿತ ಆದೇಶ ಸದ್ಯದಲ್ಲೇ ಆಗಲಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು, ಸಣ್ಣನೀರಾವರಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಟಿಯಲ್ಲಿ ಬುಧವಾರ ಪ್ರಕಟಿಸಿದರು.
ಗುಬ್ಬಿ ತಾಲೂಕಿನಲ್ಲಿ ಹೆಚ್ಚು ಬೆಳೆ ಹಾನಿ ಆಗಿರುವುದಾಗಿ ಮಾಹಿತಿ ಬಂದಿದೆ. ಇಡೀ ಜಿಲ್ಲೆಯಲ್ಲಿ ಆಗಿರುವ ಬೆಳೆ ನಷ್ಟ ಹಾಗೂ ಬಿದ್ದಿರುವ ಮನೆಗಳ ಕುರಿತು ವರದಿ ಕೇಳಿದ್ದೇನೆ. ಅಲೆಮಾರಿ ಜನಾಂಗಕ್ಕೆ ಶಾಶ್ವತ ನೆಲೆ ಕಲ್ಪಿಸಲು ವಸತಿ ಸಚಿವರು ನಿವೇಶನಗಳನ್ನು ಮಂಜೂರು ಮಾಡಿದ್ದಾರೆ. ಜಿಲ್ಲೆಯಲ್ಲಿ ವಸತಿರಹಿತರು ಯಾರೂ ಇಲ್ಲ ಎನ್ನುವವರೆಗೂ ಈ ಯೋಜನೆ ನಿಲ್ಲುವುದಿಲ್ಲ ಎಂದರು.
ಎಪಿಎಂಸಿ ಕಾಯ್ದೆ ನಿರಸನ- ಜೆಸಿಎಂ ತಕರಾರು
ತುಮಕೂರು: ರೈತರ ಸತ್ಯಾಗ್ರಹದ ಕಾರಣ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡತನ ಎಂದು ಬಣ್ಣಿಸಿದ ಕಾನೂನು, ಸಂಸದೀಯ ವ್ಯವಹಾರಗಳು, ಸಣ್ಣನೀರಾವರಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಈ ಕಾಯ್ದೆಗಳನ್ನು ಅನುಸರಿಸಿ ಕರ್ನಾಟಕದಲ್ಲೂ ಎಪಿಎಂಸಿ ಕಾಯ್ದೆಗೆ ಮಾಡಿರುವ ತಿದ್ದುಪಡಿಯನ್ನು ನಿರಸನಗೊಳಿಸಲು ತಮಗೆ ಸಮ್ಮತಿ ಇಲ್ಲ ಎಂಬರ್ಥ ಬರುವ ಮಾತುಗಳನ್ನು ಬುಧವಾರ ಸುದ್ದಿಗೋಷ್ಟಿಯಲ್ಲಿ ಆಡಿದರಲ್ಲದೇ, ಕೇಂದ್ರದ ಮೂರೂ ಕೃಷಿ ಕಾಯ್ದೆಗಳ ಔಚಿತ್ಯವನ್ನು ಸಮರ್ಥಿಸಿಕೊಂಡರು.
ಇತರ ಎಲ್ಲ ಉತ್ಪನ್ನಗಳ ಬೆಲೆಯನ್ನು ನಿಯಂತ್ರಣಗೊಳಿಸದೇ ಕೇವಲ ರೈತರ ಉತ್ಪನ್ನಗಳ ಬೆಲೆಗಳನ್ನು ನಿಯಂತ್ರಿಸುವುದು ಯಾವ ಲೆಕ್ಕ ಎಂದು ಸಚಿವರು ಪ್ರಶ್ನಿಸಿದರು.
ರೈತರು ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಆವರಣದೊಳಗೇ ಯಾಕೆ ಮಾರಾಟ ಮಾಡಬೇಕು, ತಿಪಟೂರಿನಲ್ಲಿ ಕೊಬ್ಬರಿ ರಫ್ತುದಾರರು ಹಾಗೂ ಹುಣಿಸೆಹಣ್ಣು ಮಾರುಕಟ್ಟೆಯಲ್ಲಿ ಕೆಲ ವರ್ತಕರು ರೈತರಿಗೆ ಹಣ ಪಾವತಿ ಮಾಡದೇ ಹೋದಾಗ ಯಾರು ವಸೂಲು ಮಾಡಿಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಸಚಿವರು, ರೈತರು ಯಾರಿಗೆ ಎಲ್ಲಿ ಬೇಕಾದರೂ ಯಾವ ದರಕ್ಕೆ ಬೇಕಾದರೂ ಅವರಿಗೆ ಇಷ್ಟಬಂದAತೆ ಮಾರಿಕೊಂಡರೇ ಏನು ತಪ್ಪು ಎಂದರು.
ಪರA ವಿರುದ್ಧ ಜೆಸಿಎಂ ಗರಂ !?
ತುಮಕೂರು: ಹಿಂದಿನ ಕಾಂಗ್ರೆಸ್ ಸರ್ಕಾರ ಕೊರಟಗೆರೆ ವಿಧಾನ ಸಭಾ ಕ್ಷೇತ್ರಕ್ಕೆ ಮಂಜೂರು ಮಾಡಿದ್ದ ಕೋಟಿಗಟ್ಟಲೆ ಮೊತ್ತದ ಅನುದಾನವನ್ನು ಹಿಂದಕ್ಕೆ ಪಡೆಯಲಾಗಿದೆ ಎಂಬ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ ಅವರ ಆಪಾದನೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತುಸು ಗರಂ ಆಗಿಯೇ ಸ್ಪಷ್ಟೀಕರಣ ನೀಡಿದರು.
ಹಾಸನ ಜಿಲ್ಲೆಯ ಅನುದಾನವನ್ನೂ ವಾಪಸ್ ಪಡೆಯಲಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣನವರೂ ಆಪಾದನೆ ಮಾಡಿದ್ದರು, ಅವರಿಗೆ ಸದನದಲ್ಲಿಯೇ ಸ್ಪಷ್ಟನೆ ನೀಡಿದ್ದೇನೆ, ಆಗ ಪರಮೇಶ್ವರ ಸಹ ಅಲ್ಲೇ ಇದ್ದರು,ಅವರು ಆಗಲೇ ಕೇಳಬಹುದಿತ್ತಲ್ಲ” ಎಂದು ಸಚಿವರು ಮರು ಪ್ರಶ್ನೆ ಹಾಕಿದರು.
ಇವರು ಸರ್ಕಾರ ನಡೆಸುವಾಗ ಅವರಿಗೆ ಬೇಕು ಬೇಕಾದ ಕ್ಷೇತ್ರಗಳಿಗೆ ಬೇಕು ಬೇಕೆನಿಸಿದಷ್ಟು ಯೋಜನೆಗಳನ್ನು ಮಂಜೂರು ಮಾಡಿಕೊಟ್ಟ ಪರಿಣಾಮವಿದು. ಕೊರಟಗೆರೆಗೆ 110 ಮನೆ ಮಂಜೂರು ಮಾಡಿ ಚಿನಾಹಳ್ಳಿಗೆ ಕೇವಲ ಎರಡು ಮನೆಗಳನ್ನು ನೀಡಿದರೆ ಯಾವ ಲೆಕ್ಕ? ನಾವು ಅದನ್ನೆಲ್ಲ ಸರಿಪಡಿಸಿ ಎಲ್ಲ ಕ್ಷೇತ್ರಗಳಿಗೂ ಸಮಾನವಾಗಿ ಹಂಚಿಕೆ ಮಾಡಿದ್ದೇವೆ ಎಂದರು ಸಚಿವರು.