ಪುನೀತ್ ಮರಣದ ಆಘಾತ:  ಇಬ್ಬರು ಅಭಿಮಾನಿಗಳ ಆತ್ಮಹತ್ಯೆ

ಪುನೀತ್ ಮರಣದ ಆಘಾತ:  ಇಬ್ಬರು ಅಭಿಮಾನಿಗಳ ಆತ್ಮಹತ್ಯೆ


ಪುನೀತ್ ಮರಣದ ಆಘಾತ: 


ಇಬ್ಬರು ಅಭಿಮಾನಿಗಳ ಆತ್ಮಹತ್ಯೆ

ತುಮಕೂರು: ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವು ತಾಳಲಾರದೆ ಇಬ್ಬರು ಯುವಕರು ಆತ್ಮಹತ್ಯೆಗೀಡಾಗಿ, ಒಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಕಳೆದ ಶುಕ್ರವಾರ ಪುನೀತ್ ರಾಜ್‌ಕುಮಾರ್ ನಿಧನರಾದ ನಂತರ ಅವರ ಅಭಿಮಾನಿಗಳು ದುಃಖದಲ್ಲಿ ಮುಳುಗಿದ್ದು, ಕೆ.ಆರ್. ನಗರ, ಬೆಳಗಾವಿಯಲ್ಲಿ ಇಬ್ಬರು ಆತ್ಮಹತ್ಯೆ ಮಾಡಿ ಕೊಂಡಿದ್ದರು. ಈಗ ಮತ್ತೆ ತುಮಕೂರು ಹಾಗೂ ದಾವಣಗೆರೆಯಲ್ಲಿ ಮತ್ತಿಬ್ಬರು ಖಿನ್ನತೆಗೆ ಒಳಗಾಗಿ ಸಾವನ್ನಪ್ಪಿದ್ದಾರೆ. 

ತುಮಕೂರು ವರದಿ: ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎಂದು ತಿಳಿಯುತ್ತಿದ್ದಂತೆಯೇ ತೀವ್ರವಾಗಿ ನೊಂದಿದ್ದ ತುಮಕೂರು ತಾಲ್ಲೂಕಿನ ಕೋಡಿಪಾಳ್ಯದ ಭರತ್ ಎಂಬಾತ (30) ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾನು ಅಪುö್ಪವನ್ನು ಇಲ್ಲದ ಜಗತ್ತು ನೋಡಲು ಆಗುತ್ತಿಲ್ಲ. ಅವರ ಜಾಗಕ್ಕೆ ತೆರಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟು ವಿಷ ಕುಡಿದಿದ್ದಾನೆ. ಗಾರೆ ಕೆಲಸ ಮಾಡುತ್ತಿದ್ದ ಭರತ್ ಪುನೀತ್ ಅವರ ಅಭಿಮಾನಿಯಾಗಿದ್ದ. ಹಲವಾರು ಬಾರಿ ಪುನೀತ್ ತುಮಕೂರಿಗೆ ಬಂದಾಗ ಅವರನ್ನು ಭೇಟಿ ಕೂಡ ಆಗುತ್ತಿದ್ದ ಎಂದು ಆತನ ಸ್ನೇಹಿತರು ತಿಳಿಸಿದ್ದಾರೆ.

ಡೆತ್‌ನೋಟ್‌ನಲ್ಲಿ ಆತ ತನ್ನ ಕಣ್ಣುಗಳನ್ನು ದಾನ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಆದರೆ ವಿಷ ಕುಡಿದಿರುವುದರಿಂದ ಆತನ ಅಂತಿಮ ಇಚ್ಛೆ ನೆರವೇರಲು ಸಾಧ್ಯವಾಗುತ್ತಿಲ್ಲ. ಹೆಬ್ಬೂರು ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಹೃದಯಾಘಾತ: ಎರಡು ದಿನಗಳ ಕಾಲ ಹರಸಾಹಸ ಪಟ್ಟು ಬೆಂಗಳೂರಿಗೆ ಬಂದು ಪುನೀತ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ತುಮಕೂರಿಗೆ ತೆರಳಿದ್ದ ಅಪುö್ಪ ಅಭಿಮಾನಿ ಶ್ರೀನಿವಾಸ್ (32) ಹೃದಯಾಘಾತದಿಂದ ನಿಧನರಾಗಿದ್ದಾರೆ.

ತುಮಕೂರು ತಾಲ್ಲೂಕಿನ ಹಿರೇಹಳ್ಳಿ ಮೂಲದವರಾದ ಶ್ರೀನಿವಾಸ್ ಪುನೀತ್ ನಿಧನದ ಸುದ್ದಿ ತಿಳಿದ ತಕ್ಷಣವೇ ಬೆಂಗಳೂರಿಗೆ ಬಂದು ಪುನೀತ್ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಬಾರದ ಮನಸ್ಸಿನಲ್ಲಿಯೇ ವಾಪಸಾಗಿದ್ದರು.

ರಾತ್ರಿ ಮಲಗಿದ್ದಾಗ ಏಕಾಏಕಿ ಶ್ರೀನಿವಾಸ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತುಮಕೂರಿನಲ್ಲಿ ಇಬ್ಬರು ಪುನೀತ್ ಅಭಿಮಾನಿಗಳು ಮೃತಪಟ್ಟಿದ್ದಾರೆ.

ದಾವಣಗೆರೆ ವರದಿ: ಮರೆಯಾದ ಪುನೀತ್ ನೆನಪಿನಲ್ಲೇ ಖಿನ್ನತೆ ಒಳಗಾಗಿ ದಾವಣಗೆರೆಯ ವಿಜಯನಗರ ಬಡಾವಣೆ ಸಾಯಿ ಮಂದಿರದ ಸಮೀಪದ ನಿವಾಸಿ ಸಿ.ಕುಮಾರ್ (25), ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪುನೀತ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಕುಮಾರ್ ಪ್ರತಿಯೊಂದು ಚಿತ್ರವನ್ನು ತಪ್ಪದೇ ನೋಡುತ್ತಿದ್ದ. ಅವರ ಹುಟ್ಟುಹಬ್ಬ ಚಿತ್ರ ಬಿಡುಗಡೆಯಾದ ದಿನ ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದ.

ಶುಕ್ರವಾರ ಪುನೀತ್ ಕೊನೆಯುಸಿರೆಳೆದ ಸುದ್ದಿ ತಿಳಿಯುತ್ತಿದ್ದಂತೆ ಕಣ್ಣೀರು ಸುರಿಸಿ ಹೊರಗಿದ್ದ. ತನ್ನ ಸ್ನೇಹಿತರು ಮನೆಯವರೊಂದಿಗೆ ಮಾತನಾಡದೆ, ಒಬ್ಬಂಟಿಯಾಗಿಯೇ ತನ್ನ ಕೋಣೆಯಲ್ಲಿ ಇರುತ್ತಿದ್ದ. ನಿನ್ನೆ ಮನೆಯವರೆಲ್ಲರೂ ಹೊರಗೆ ಹೋಗಿದ್ದಾಗ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಯಿಂದ ಕುಟುಂಬಸ್ಥರು ಆಘಾತಗೊಂಡಿದ್ದಾರೆ. ದಾವಣಗೆರೆಯ ಗಾಂಧಿನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

ಪುನೀತ್ ಅಗಲಿಕೆಯಿಂದ ಆತ್ಮಹತ್ಯೆ ಹಾಗೂ ಹೃದಯಾಘಾತದಿಂದ ನಿಧನರಾದ ಅಭಿಮಾನಿಗಳ ಸಂಖ್ಯೆ 12ಕ್ಕೆ ಏರಿಕೆ ಆಗಿದೆ ಎಂದು ತಿಳಿದು ಬಂದಿದೆ.