ಸಚಿವಾಲಯ ಸಹಕಾರ ಸಂಘಕ್ಕೆ ಹೈಕೋರ್ಟ್ ತೀರ್ಪಿನಂತೆ ಮತ್ತೆ ಚುನಾವಣೆ: ಯು.ಡಿ.ನರಸಿಂಹಯ್ಯ ಬಣದ ಮೇಲುಗೈ

ಸಚಿವಾಲಯ ಸಹಕಾರ ಸಂಘಕ್ಕೆ ಹೈಕೋರ್ಟ್ ತೀರ್ಪಿನಂತೆ ಮತ್ತೆ ಚುನಾವಣೆ:

ಯು.ಡಿ.ನರಸಿಂಹಯ್ಯ ಬಣದ ಮೇಲುಗೈ

ಬೆಂಗಳೂರು: ಇಲ್ಲಿನ ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಹಕಾರ ಸಂಘದ ಪದಾಧಿಕಾರಿಗಳ ಸ್ಥಾನಕ್ಕೆ ಮತ್ತೊಮ್ಮೆ ಚುನಾವಣೆ ನಡೆದು ಅಧ್ಯಕ್ಷರಾಗಿ ಅಧಿಕಾರಿ ಹೆಚ್.ಹನುಮೇಗೌಡ ಹಾಗೂ ಉಪಾಧ್ಯಕ್ಷರಾಗಿ ವಿಧಾನ  ಮಂಡಲದ ಅಧಿಕಾರಿ ಹೆಚ್.ಸಿ.ಗೀತಾ ಚುನಾಯಿತರಾಗಿದ್ದಾರೆ. ಇವರ ಆಯ್ಕೆಯಿಂದಾಗಿ ಸಂಘದಲ್ಲಿ ಸುದೀರ್ಘ ಅವಧಿಗೆ ಆಡಳಿತ ನಡೆಸಿದ್ದ ಯು.ಡಿ. ನರಸಿಂಹಯ್ಯ ಬಣ ಮೇಲುಗೈ ಸಾಧಿಸಿದಂತಾಗಿದೆ.

ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಹಕಾರ ಸಂಘದ ನಿರ್ದೇಶಕ ಮಂಡಳಿಗೆ 2020ರ ಮಾರ್ಚಿ 01ರಂದು ಮುಂದಿನ ಐದು ವರ್ಷಗಳ ಅವಧಿಗೆ ಚುನಾವಣೆ ನಡೆದಿತ್ತು ಹಾಗೂ ಅದೇ ಮಾರ್ಚಿ 12ರಂದು ನಡೆದಿದ್ದ ಪದಾಧಿಕಾರಿಗಳ ಚುನಾವಣೆಯಲ್ಲಿ ಮಹದೇವಯ್ಯ ಮಠಪತಿ ಬಣದ ಎಸ್.ಅಭಿಜಿತ್ ಅಧ್ಯಕ್ಷರಾಗಿ ಹಾಗೂ ಜಯಲಕ್ಷ್ಮಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು, ಆದರೆ ಆ ದಿನ ಚುನಾಯಿತ ನಿರ್ದೇಶಕರ ಪೈಕಿ ಡಾ.ಎಲ್.ಗೀತಾ ಹಾಗೂ ಬಿ.ಎಲ್.ಕಾಂತರಾಜು ಅವರಿಗೆ ಪದಾಧಿಕಾರಿಗಳ ಸ್ಥಾನದ ಚುನಾವಣೆಯಲ್ಲಿ ಭಾಗವಹಿಸದಂತೆ, ಸ್ಪರ್ಧಿಸದಂತೆ, ಮತ ಚಲಾಯಿಸದಂತೆ ಸಹಕಾರಿ ಸಂಘಗಳ ಜಂಟಿ ನಿಬಂಧಕರು ದಿನಾಂಕ 11.03.2020ರಂದು ಆದೇಶ ಹೊರಡಿಸಿದ್ದರು. ಹೀಗಾಗಿ ಇವರಿಬ್ಬರೂ ಪದಾಧಿಕಾರಿಗಳ ಚುನಾವಣೆಯಿಂದ ಹೊರಗುಳಿದಿದ್ದರು ಮತ್ತು ಯು.ಡಿ.ನರಸಿಂಹಯ್ಯ ಬಣದ ಇತರ ನಿರ್ದೇಶಕರು ಚುನಾವಣೆಯನ್ನು ಬಹಿಷ್ಕರಿಸಿದ್ದರು. ಹೀಗಾಗಿ ಮಠಪತಿ ಬಣದ ಅಭಿಜಿತ್ ಹಾಗೂ ಜಯಲಕ್ಷ್ಮಿ ಅವಿರೋಧವಾಗಿ ಆಯ್ಕೆಯಾಗಿ ಕಳೆದ 20 ತಿಂಗಳಿಂದ ಆಡಳಿತ ನಡೆಸುತ್ತಿದ್ದರು.

ಸಹಕಾರಿ ಸಂಘಗಳ ಜಂಟಿ ನಿಬಂಧಕರ ದಿನಾಂಕ 11.03.2020ರ ತಡೆ ಆದೇಶವನ್ನು  ಪ್ರಶ್ನಿಸಿ ಡಾ.ಎಲ್.ಗೀತಾ ಹಾಗೂ ಬಿ.ಎಲ್.ಕಾಂತರಾಜು ರಿಟ್ ಅರ್ಜಿ ಸಂಖ್ಯೆ 5854/2020ರಲ್ಲಿ ರಾಜ್ಯ ಹೈಕೋರ್ಟ್‍ನಲ್ಲಿ ್ಲ ದಾವೆ ಹೂಡಿದ್ದರು. ಮಾನ್ಯ ಹೈಕೋರ್ಟ್ ದಿನಾಂಕ 19.07.2021ರಂದು ತೀರ್ಪು ನೀಡಿ ಸಹಕಾರ ಸಂಘದ ತಡೆ ಆದೇಶಗಳನ್ನು ವಜಾ ಮಾಡಿತು ಹಾಗೂ ಸಂಘಕ್ಕೆ ಹೊಸದಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡುವಂತೆ ಆದೇಶಿಸಿತು.  ಈ ಹಿನ್ನೆಲೆಯಲ್ಲಿ ಡಾ.ಎಲ್.ಗೀತಾ ಹಾಗೂ ಬಿ.ಎಲ್.ಕಾಂತರಾಜು ಅವರಿಗೆ ಪದಾಧಿಕಾರಿಗಳ ಆಯ್ಕೆಯಲ್ಲಿ ಪಾಲ್ಗೊಳ್ಳಲು ಅವಕಾಶ ದೊರಕಿತು. ಸಹಕಾರ ಇಲಾಖೆಯ ಅಧಿಕಾರಿಯಾದ ಸಿ.ಸುಬ್ರಮಣ್ಯಗೌಡ ಅವರು ದಿನಾಂಕ 27.10.2021ರಂದು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದರು.ಅದರಂತೆ ಶನಿವಾರ ಮಧ್ಯಾಹ್ನ ವಿಧಾನಸೌಧದ ನೆಲಮಹಡಿಯಲ್ಲಿರುವ ಸಂಘದ ಕಚೇರಿಯಲ್ಲಿ ಚುನಾವಣೆ ನಡೆಯಿತು. 

ಕರ್ನಾಟಕ ಸಚಿವಾಲಯ ಕ್ಲಬ್‍ನ ಗೌರವ ಕಾರ್ಯದರ್ಶಿ ಯು.ಡಿ.ನರಸಿಂಹಯ್ಯನವರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, “ಸತ್ಯ ಬೆಳಕಿಗೆ ಬರಲು ನಿಧಾನವಾಗಬಹುದು ಆದರೆ ಸತ್ಯಕ್ಕೆ ಸಾವಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ, ನಿಯಮಾನುಸಾರ ಚುನಾಯಿತರಾದ ಡಾ.ಎಲ್.ಗೀತಾ ಹಾಗೂ ಬಿ.ಎಲ್.ಕಾಂತರಾಜು ಅವರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ತಡೆದು ನಮ್ಮ ಬಣವು ಅಧಿಕಾರಕ್ಕೆ ಬರುವುದನ್ನು ತಪ್ಪಿಸಲಾಗಿತ್ತು. 20 ತಿಂಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಸತ್ಯಕ್ಕೆ ಜಯ ದೊರಕಿದೆ. ನಮ್ಮ ಆಡಳಿತಾವಧಿಯಲ್ಲಿ ನೀಡಿದ್ದಂತೆ ಗರಿಷ್ಟ ಪ್ರಮಾಣದ ಲಾಭಾಂಶ ನೀಡಲು ಹೊಸ ಪದಾಧಿಕಾರಿಗಳು ಶ್ರಮಿಸುವ ಭರವಸೆ ನನಗಿದೆ. ಮತ್ತೊಂದು ಬಣ ಸೋತರೂ ಸಹಕಾರ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನವಾಗಿ ಭಾಗವಹಿಸಿ ಸಂಘವನ್ನು ಅಭಿವೃದ್ಧಿಪಡಿಸಬೇಕು” ಎಂದು ಆಶಿಸಿದರು.

ವಿಧಾನ ಮಂಡಲ ನೌಕರರ ಮುಖಂಡ ಶ್ರೀಕಾಂತ್ ಮಾತನಾಡಿ, ಸಚಿವಾಲಯ ನೌಕರರ ಸಹಕಾರ ಸಂಘದಲ್ಲಿ ವಿಧಾನ ಮಂಡಲದ ನೌಕರರು ಸದಸ್ಯರಾಗಿದ್ದರೂ ಈವರೆಗೆ ಅಧ್ಯಕ್ಷ ಅಥವಾ ಉಪಾಧ್ಯಕ್ಷರಾಗಲು ಅವಕಾಶ ದೊರಕಿರಲಿಲ್ಲ. ವಿಧಾನ ಮಂಡಲದ ಪರವಾಗಿ ಹೆಚ್.ಸಿ.ಗೀತಾ ಅವರನ್ನುಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಸಚಿವಾಲಯ ನೌಕರರ ಸಹಕಾರ ಸಂಘದ ನಿರ್ದೇಶಕರಾದ ಡಾ.ಎಲ್.ಗೀತಾ, ಬಿ.ಎಸ್.ಲಕ್ಷ್ಮಣ, ಹೇಮಂತ್ ನಾಯಕ್ , ಬಿ.ಎಲ್.ಕಾಂತರಾಜು, ಎಲ್.ಎನ್. ನಾಗಭೂಷಣ, ಸಚಿವಾಲಯ ನೌಕರರ ಮುಖಂಡ ಹಾಗೂ ಮುಖ್ಯಮಂತ್ರಿಯವರ ಆಪ್ತ ಸಹಾಯಕ ಟಿ.ಜೆ.ಹರೀಶ್, ನೌಕರರ ಮುಖಂಡರಾದ ಮಹೇಂದ್ರ, ರಮೇಶ್, ಸಚಿವಾಲಯ ಕ್ಲಬ್ ಕೃಷ್ಣಕುಮಾರ್, ಪಿ.ಎನ್.ಕೃಷ್ಣಮೂರ್ತಿ,  ಮೊದಲಾದವರು ಹಾಜರಿದ್ದು ಶುಭ ಹಾರೈಸಿದರು.