ತುಮಕೂರಲ್ಲಿ ಈ ಸಲ ಯಾರು ಗೆಲ್ಲಬಹುದು !?

tumkur- political- view

ತುಮಕೂರಲ್ಲಿ ಈ ಸಲ ಯಾರು ಗೆಲ್ಲಬಹುದು !?

ಒಂದು ಗಳಿಗೆ


ಕುಚ್ಚಂಗಿ ಪ್ರಸನ್ನ 


ತುಮಕೂರಲ್ಲಿ ಈ ಸಲ ಯಾರು ಗೆಲ್ಲಬಹುದು !?


      2023ರ ವಿಧಾನ ಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಗಿದು, ಸಲ್ಲಿಸಿದ ನಾಮಪತ್ರಗಳು ಕ್ರಮಬದ್ಧವಾಗಿವೆಯೋ ಇಲ್ಲವೋ ಎಂಬುದೂ ಖಚಿತಗೊಂಡಿದೆ. ಯಾವ್ಯಾವ ಸಿಟ್ಟು ಸೆಡವಿನ ಕಾರಣಕ್ಕೋ ನಾಮಪತ್ರ ಸಲ್ಲಿಸಿರುವವರು ಅವರ ಉಮೇದುವಾರಿಕೆಯನ್ನು ವಾಪಸ್ ಪಡೆಯಲು ಇನ್ನು ಒಂದು ದಿನ ಮಾತ್ರ ಉಳಿದಿದೆ. ಅಬ್ಬರದ ನಾಮಪತ್ರ ಸಲ್ಲಿಕೆ ರೋಡ್ ಶೋಗಳೂ ಸೇರಿದಂತೆ ಚುನಾವಣೆಯ ಹೆಸರಿನಲ್ಲಿ ಕಳೆದ ಆರು ತಿಂಗಳಿಂದ ಇವತ್ತಿನವರೆಗೆ ಆಡಿದ ಎಲ್ಲ ಆಟಗಳನ್ನೂ ಗ್ರೇಸ್ ಅಂತಲೇ ಪರಿಗಣಿಸಿದಲ್ಲಿ, ಮಂಗಳವಾರದಿಂದ ರಿಯಲ್ ದ ರಿಯಲ್ಸ್ ಶುರುವಾಗುವುದು ಖಂಡಿತಾ.


     ತುಮಕೂರು ಜಿಲ್ಲೆಯ ಹನ್ನೊಂದು ವಿಧಾನ ಸಭಾ ಕ್ಷೇತ್ರಗಳ ಪೈಕಿ ತುಮಕೂರು ನಗರ ವಿಧಾನ ಸಭಾ ಕ್ಷೇತ್ರದಷ್ಟು ಚಿತ್ರಾನ್ನವೆದ್ದಿರುವ ಕ್ಷೇತ್ರ ಮತ್ತೊಂದಿಲ್ಲ. ಬಿಜೆಪಿಯ ಶಾಸಕ ಜಿ.ಬಿ.ಜ್ಯೋತಿಗಣೇಶ್ ಎದುರು ನಾಲ್ಕು ಸಲ ಶಾಸಕರಾಗಿದ್ದ ಸೊಗಡು ಶಿವಣ್ಣ ಸೆಡ್ಡು ಹೊಡೆದು ನಿಂತಿದ್ದಾರೆ. “ಕಳೆದ ಚುನಾವಣೆಯಲ್ಲೇ ಇಂಥದ್ದೊಂದು ದೃಶ್ಯ ಸೃಷ್ಟಿಯಾಗಬೇಕಿತ್ತು. ಪಕ್ಷದ ಹಿರಿಯರು ಅಂಥ ಅಂದುಕೊAಡವರೆಲ್ಲ ಹೇಳಿದ ಮಾತನ್ನು ಕೇಳಿ ಸುಮ್ಮನಾದೆ, ಇವತ್ತು ನೋಡಿದರೆ ಬಿಜೆಪಿ ಹೈಕಮಾಂಡ್‌ನ ಟಿಕೆಟ್ ಹಂಚಿಕೆ ಬೌನ್ಸರ್‌ಗಳ ಎದುರು ಬ್ಯಾಟ್ ಎತ್ತಲಾರದೇ ಎಲ್ಲ ಚೆದುರಿಹೋಗಿಬಿಟ್ಟಿದ್ದಾರೆ, ಯಾರನ್ನ ಕೇಳಲಿ” ಎನ್ನುತ್ತಾರೆ ಸೊಗಡು ಶಿವಣ್ಣ.


     ತಿಂಗಳ ಉಪವಾಸ ಪೂರೈಸಿ, ಚಂದ್ರನನ್ನು ಕಂಡ ಬಳಿಕ ಆಚರಿಸುವ ಹಬ್ಬದ ದಿನ ಕಾಂಗ್ರೆಸ್ ಟಿಕೆಟ್ ವಂಚಿತ ಮಾಜಿ ಶಾಸಕ ಡಾ.ಎಸ್.ರಫೀಕ್ ಅಹ್ಮದ್ ಮನೆಗೆ ಸೊಗಡು ಶಿವಣ್ಣ ಭೇಟಿ ನೀಡಿದ್ದಾರೆ. ಇಬ್ಬರು ಸಮಾನ ದುಃಖಿಗಳು, ಏನೇನು ಮಾತಾಡಿಕೊಂಡರು ಎನ್ನುವುದನ್ನು ಇಬ್ಬರಲ್ಲಿ ಒಬ್ಬರಾದರೂ ಹೇಳಲೇಬೇಕು. ಹೇಳುತ್ತಾರೆ ಇರಿ, ಹೇಳದೇ ಹೋದರೂ ವಾಟ್ಸಪ್ ಗಳಲ್ಲಿ ಯಾರಾದರೂ ಸ್ಟೋರಿ ಸೃಷ್ಟಿಸಿ ವೈರಲ್ ಮಾಡೇ ಮಾಡುತ್ತಾರೆ. 


     ಬಂಡಾಯ ನಾಮಪತ್ರ ಸಲ್ಲಿಸಿರುವ ಸೊಗಡು ಶಿವಣ್ಣನವರನ್ನು ಕಣದಿಂದ ಹಿಂದಕ್ಕೆ ಬರುವಂತೆ ಯಡಿಯೂರಪ್ಪನವರು ಮನವೊಲಿಸಿದ್ದಾರೆ ಎಂಬ ಕತೆಯನ್ನೂ ಕಟ್ಟಿ ಹೀಗೇ ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಡಲಾಗಿದೆ, ಈ ಅಂತೆಕಂತೆಗಳನ್ನೆಲ್ಲಾ ನಂಬಬೇಡಿ, ಜೋಡಿ ಜೋಳಿಗೆ ಕೆಳಗಿಳಿಸುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ ಒಂದು ಕಾಲದ ಕಬ್ಬಡ್ಡಿ ನ್ಯಾಶನಲ್ ಪ್ಲೇಯರ್ ಸೊಗಡು ಶಿವಣ್ಣ.


ಆರ್ ಎಸ್ ಎಸ್‌ನ ಭಜರಂಗದಳ, ಹಿಂದೂ ಜಾಗರಣ ವೇದಿಕೆ. ವಿಶ್ವ ಹಿಂದೂ ಪರಿಷತ್ತುಗಳಂಥ ಮಿಲಿಟೆಂಟ್ ಔಟ್ ಫಿಟ್‌ಗಳನ್ನು ನಿಭಾಯಿಸುತ್ತಿರುವ ಅರ್ಜುನ್ ಬೇಕರಿ ಖ್ಯಾತಿಯ ಜಿ.ಕೆ.ಶ್ರೀನಿವಾಸ್(ಕಲ್ಕೆರೆ) ಕೂಡಾ ಅದ್ಯಾವ ಕಾರಣಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರೋ ಗೊತ್ತಿಲ್ಲ ಎಂದು ಬಿಜೆಪಿಯ ಅಧಿಕೃತ ಅಭ್ಯರ್ಥಿ ಪರದಾಡುವಂತಾಗಿದೆ.
ಶನಿವಾರ ಇದೇ ಜಿ.ಕೆ.ಶ್ರೀನಿವಾಸ್ ಅವರನ್ನು ಹೆಗಲು ತಡವಿ ಮಾತನಾಡಿಸಲೆಂದು ಜಿಲ್ಲೆಯ ಅತ್ಯಂತ ಅನುಭವೀ ರಾಜಕಾರಣಿ ಹಾಗೂ ತುಮಕೂರು ನಗರ ಶಾಸಕರ ಅಪ್ಪಾಜಿ ಹೋಗಿದ್ದರಂತೆ, ಮಾತನಾಡುವುದಿದ್ದರೆ ಎಲ್ಲರ ಎದುರೇ ಮಾತನಾಡಿ, ಕಾನ್ಫಿಡೆನ್ಷಿಯಲ್ ಎಲ್ಲ ನನ್ನತ್ರ ಇಲ್ಲ ಎಂದರಂತೆ ಜಿಕೆ. ಸರಿ ಕೊಟ್ಟ ಕಾಫಿ ಕುಡಿದು ಸುಮ್ಮನೇ ಎದ್ದು ಬಂದಿದ್ದಾರೆ ಜಿಎಸ್‌ಬಿ.


    ಮತ್ತು ಇವತ್ತು ಭಾನುವಾರ ಖುದ್ದು ಜ್ಯೋತಿಯೇ ಜಿಕೆ ಮನೆಗೆ ಹೋಗಿದ್ದರೆಂದೂ, ಅಯ್ಯೋ ನಾನು ಇನ್ನೂ ಸ್ನಾನ,ಮಡಿ, ಪೂಜೆ ಅಂತೆಲ್ಲ ಮುಕ್ಕಾಲು ಗಂಟೆ ಆಗುತ್ತೆ, ಆಮೇಲೆ ಬನ್ನಿ ಅಂದರಂತೆ, ಸರಿ ಅಂತ ಇವರು ಹೊರಟರಂತೆ, ಇಷ್ಟೆಲ್ಲ ಆದ ಮೇಲೆ ಪಕ್ಷದ ನಿಷ್ಟಾವಂತ ಜಿ.ಕೆ.ಶ್ರೀನಿವಾಸ್ ನಾಮಪತ್ರ ವಾಪಸ್ ತೆಗೆದರು ಅಂತಾನೇ ಅರ್ಥ ಬಿಡಿ. ಒಂದು ಮಗ್ಗುಲ ಮುಳ್ಳು ಕಮ್ಮಿ ಆಯಿತು ಅಂದುಕೊಳ್ಳಿ.


ನಾಳೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ತುಮಕೂರಿಗೆ ಬರುತ್ತಿದ್ದಾರೆ, ಅವರಾದರೂ ಹೇಳಿ ಸೊಗಡು ಅವರನ್ನು ಪಿಚ್ ನಿಂದ ಆಚೆ ಕಳಿಸಬಾರದಾ ಅಂತ ಯಾರಾದರೂ ಅಂದುಕೊಂಡರೆ ತಪ್ಪೇನಿಲ್ಲ. ಬೊಮ್ಮಾಯಿಗೆಲ್ಲ ಬಗ್ಗುವ ಆಳು ಸೊಗಡು ಅಲ್ಲ ಅಂತಾರೆ ಅವರ ಬೆಂಬಲಿಗರು. 


ಹೊಸ ನೀರು ಹಳೆ ನೀರನ್ನು ಕೊಚ್ಚಿಕೊಂಡು ಹೋದ ಕತೆ ಬಿಜೆಪಿಯದು. ತುಮಕೂರು ಜಿಲ್ಲೆಯ ರಾಜಕಾರಣದಲ್ಲಿ ಅರ್ಧ ಶತಮಾನ ಪಳಗಿದವರು ಗಂಗಸಂದ್ರ ಶಿವಣ್ಣ ಬಸವರಾಜು, ಗುರು ಹೇಳಿಕೊಟ್ಟ ಪಟ್ಟುಗಳನ್ನು ಆ ಗುರುವಿಗೇ ಪ್ರಯೋಗಿಸಿ ಹಾದಿ ಸುಗಮ ಮಾಡಿಕೊಂಡವರು. ಕೊಂಡಾಪುರ ಲಕ್ಕಪ್ಪ ಎಂಬ ಹಳೇ ಹುಲಿಯನ್ನು ನೆನಪಿಗೆ ತಂದುಕೊಳ್ಳಿ ಅರ್ಥವಾಗುತ್ತದೆ.


ಕಾಂಗ್ರೆಸ್ ಬರಡೆದ್ದ ಮೇಲೆ ಭಾರತೀಯ ಜನತಾ ಪಾರ್ಟಿ, ಒಂದು ವರ್ಷದ ಅಲ್ಪಾಯು ಯಡಿಯೂರಪ್ಪನವರ ಕೆಜೆಪಿಗೆ ಹೋದದ್ದೇ ಡ್ಯಾಡ್ ಅಂಡ್ ಸನ್ ಇಬ್ಬರಿಗೂ ದೆಸೆ ತಿರುಗಿ ಬಿಟ್ಟಿತು. ಡ್ಯಾಡ್ ಮತ್ತೆ ಎಂಪಿ ಆಗಿಬಿಟ್ಟರು. ಸನ್ ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆದರು, ತುಮಕೂರು ನಗರ ಕ್ಷೇತ್ರದ ಶಾಸಕರೂ ಆಗಿ ಬಿಟ್ಟರು, ಜೊತೆಗೆ ಘಮಘಮ ಪರಮಾನ್ನದಂತೆ ಸ್ಮಾರ್ಟ್ ಸಿಟಿಯೂ ದಕ್ಕಿಬಿಟ್ಟಿತು. ಯಾರಿಗುಂಟು ಯಾರಿಗಿಲ್ಲ. ಆದರೆ ಇರುಳೆಲ್ಲ ಮುಲಿಕಿ ಹೆತ್ತ ಮಗುವನ್ನು ಬೆಳಗ್ಗೆ ತ್ವಾಳ ಎತ್ಕೊಂಡೋಯ್ತAತೆ ಎಂಬ ಪರಿಸ್ಥಿತಿ ಸೊಗಡು ಶಿವಣ್ಣನವರದು.


2013ರ ಚುನಾವಣೆಯಲ್ಲಿ ಬಿಜೆಪಿಯ ಕಮಲದ ತಲೆ ಮೇಲೆ ಯಡಿಯೂರಪ್ಪನವರ ಕೆಜೆಪಿಯ ತೆಂಗಿನಕಾಯಿ ಈಡುಗಾಯಿ ಹಾಕಿದ ಪರಿಣಾಮ ಓಟು ಹಂಚಿಕೆಯಲ್ಲಿ ಕಾಂಗ್ರೆಸ್‌ನ ರಫೀಕ್ ಅಹ್ಮದ್ ಶಾಸಕರಾಗೇಬಿಟ್ಟರು. ಹಿಂದೆ 1994ರಲ್ಲೂ ಸೊಗಡು ಶಿವಣ್ಣನವರು ಶಾಸಕರಾಗಿದ್ದೂ ಇದೇ ತರ, ಅಂದು ಕಾಂಗ್ರೆಸ್‌ನ ಇದೇ ರಫೀಕ್ ಅಹ್ಮದ್‌ರ ಹೆಣ್ಣು ಕೊಟ್ಟ ಮಾವ ಎಸ್. ಷಫಿ ಅಹ್ಮದ್ ಎದುರು ಕಾಂಗ್ರೆಸ್‌ನ ಕೆ.ಎನ್.ರಾಜಣ್ಣನವರು ಎರಡು ಎಲೆ ಗುರುತಿನಡಿ ಬಂಡೆದ್ದು ನಿಲ್ಲದೇ ಹೋಗಿದ್ದರೆ ಸೊಗಡು ಶಿವಣ್ಣನವರು ಶಾಸಕರಾಗುತ್ತಿರಲಿಲ್ಲ ಎನ್ನುವ ಮಾತನ್ನು ಖುದ್ದು ಸೊಗಡೂ ಕೂಡಾ ತಳ್ಳಿಹಾಕುವುದಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಗೆಲ್ಲಿಸಿದ ಕ್ರೆಡಿಟ್ ಕೆಎನ್‌ಆರ್ ಅವರದೇ. ಹೀಗಾಗಿ ಬಿಜೆಪಿಯ ಅಧಿಕೃತ ಮತ್ತು ಬಂಡಾಯ ಅಭ್ಯರ್ಥಿಗಳಿಬ್ಬರೂ ಕೆಎನ್‌ಅರ್ ದಾಕ್ಷಿಣ್ಯದಲ್ಲಿ ಇರುವವರೇ ಆಗಿದ್ದಾರೆ.


ನಂತರದ 1999, 2004 ಹಾಗೂ 2008ರ ಮೂರೂ ವಿಧಾನ ಸಭಾ ಚುನಾವಣೆಗಳಲ್ಲಿ ತುಮಕೂರಿನ ಓಟುದಾರರ ಎದುರು ಮುಸ್ಲಿಮರು ಗೆದ್ದು ಬಿಡುತ್ತಾರೆ ಎಂಬ ಗುಮ್ಮನನ್ನು ತೋರಿಸಿಕೊಂಡೇ ಬಿಜೆಪಿಯಿಂದ ಸೊಗಡು ಶಿವಣ್ಣನವರು ಗೆಲ್ಲುತ್ತಾ ಬಂದರು ಎನ್ನುವ ಮಾತನ್ನೂ ಯಾರೂ ತಳ್ಳಿ ಹಾಕುವುದಿಲ್ಲ. ಆದರೆ ಇವತ್ತು ಅಂಥ ಕೇಕ್ ವಾಕ್ ಸೀನ್ ಜ್ಯೋತಿ ಗಣೇಶ್ ಪಾಲಿಗೆ ಒದಗಿಲ್ಲ ಎಂಬುದೇ ದುರಂತ. 


ನೋಡಿ, ಬಿಜೆಪಿಯ 100% ಓಟ್ ಬ್ಯಾಂಕ್ ಆಗಿದ್ದ ಲಿಂಗಾಯತರು ಈ ಚುನಾವಣೆಯಲ್ಲಿ ಕಟ್ ಅಂಡ್ ಕ್ಲಿಯರ್ ಆಗಿ ಡಿವೈಡ್ ಆಗಿಬಿಟ್ಟಿದ್ದಾರೆ. ಮೂರು ತಿಂಗಳಿಂದಲೂ ಜ್ಯೋತಿಗೆ ಟಿಕೆಟ್ ಕೊಡಬಾರದು ಎಂದು ಪಟ್ಟು ಹಿಡಿದಿರುವವರೂ ಇದೇ ಜನರೇ, ಈವನ್ ಸೊಗಡು ಯಾರದಾದರೂ ಮಾತಿಗೆ ಮಣಿದು ನಾಮಪತ್ರ ವಾಪಸ್ ತೆಗೆದುಕೊಂಡರೂ ಜ್ಯೋತಿ ಗಣೇಶ್ ಗೆಲ್ಲಲ್ಲ ಎನ್ನುವ ಭಂಡವಾದವನ್ನು ಇವರು ಮುಂದೊಡ್ಡುತ್ತಾರೆ. 


ತುಮಕೂರು ನಗರದಲ್ಲಿ ವಾಣಿಜ್ಯ, ವ್ಯವಹಾರಗಳನ್ನೆಲ್ಲ ತಮ್ಮ ಕೈ ವಶಮಾಡಿಕೊಂಡಿರುವ ಊರಿನ ದೊಡ್ಡ ಮನುಷ್ಯರು ಎನಿಸಿಕೊಂಡಿರುವವರೆಲ್ಲ ಲಿಂಗಾಯತರಲ್ಲೇ ತಾವು ವೀರಶೈವರು ಎಂದು ಹೆಗ್ಗಳಿಕೆ ತೋರುವ ರಂಭಾಪುರಿ ಮಠಕ್ಕೆ ನಡೆದುಕೊಳ್ಳುವ ಉಪ ಪಂಗಡದವರು. ನಮ್ಮ ಓಟು ಕಮ್ಮಿ ಎಂದರೂ 25 ಸಾವಿರ ಇದೆ ಎನ್ನುವ ಇವರು ಅದ್ಯಾವ ಕಾರಣಕ್ಕೋ ಗಾಂಧಿನಗರದ ಮನೆಯವರು ಎಂದರೆ ಸಾಕು ಕೆಂಡದAತೆ ಕೆಂಪಾಳ ಕಾದು ಬಿಡುತ್ತಾರೆ. ಈ ಸಲ ಯಾವ ಕಾರಣಕ್ಕೂ ಜ್ಯೋತಿಗೆ ಟಿಕೆಟ್ ಕೊಡಬೇಡಿ ಅಂತ ಪಟ್ಟು ಹಿಡಿದಿದ್ದವರೂ ಅವರೇ ಅಂತೆ.


ಉಳಿದ ಲಿಂಗಾಯತರಲ್ಲಿ ಸುಮಾರು 15 ಸಾವಿರ ಓಟುಗಳಿವೆ ಎನ್ನಲಾಗಿರುವ ನೊಣಬ(ನೊಳಂಬ) ಲಿಂಗಾಯತರ ಓಟುಗಳನ್ನು ಇಡಿಯಾಗಿ ಜ್ಯೋತಿ ತೆಗೆದುಕೊಳ್ಳಲಾಗಲ್ಲ, ಯಾಕೆಂದರೆ ಸೊಗಡೂ ಕೂಡಾ ಅದೇ ಉಪ ಪಂಗಡದವರು, ಅವರಿಗೂ ಇದೇ ಊರಲ್ಲಿ ನೆಂಟರು, ಇಷ್ಟರು, ಮಾವ, ಭಾವ, ಭಾವ ಮೈದ ಅಂತ ಇಲ್ವಾ. ಬಿಜೆಪಿಯ ಉಳಿದ ಓಟ್ ಬ್ಯಾಂಕ್ ಶೆಟ್ಟರು, ಜೈನರು,ಬ್ರಾಹ್ಮಣರು, ನವ ಬ್ರಾಹ್ಮಣರೆಲ್ಲ ಒಗ್ಗೂಡಿ ಓಟು ಹಾಕಿದರೂ ಗೆಲುವು ಸುಲಭವಲ್ಲ.


ಹಾಲಿ ಶಾಸಕ ಮಾಜಿ ಶಾಸಕರ ಟಿಕೆಟ್ ಪೈಪೋಟಿ ಗದ್ದಲದ ನಡುವೆ ನಗರದ ಆರ್ ಎಸ್ ಎಸ್ ಬೆಂಬಲಿತ ಡಾ.ಎನ್.ಎಸ್.ಜಯಕುಮಾರ್ ಹಾಗೂ ಸಿದ್ಧಗಂಗಾ ಆಸ್ಪತ್ರೆಯ ಡಾ.ಎನ್.ಪರಮೇಶ್ ಅವರೂ ಟಿಕೆಟ್ ಆಕಾಂಕ್ಷಿಗಳಾಗಿದ್ದರು ಎನ್ನುವುದನ್ನೂ ಈ ಚುನಾವಣೆಯಲ್ಲಿ ಮರೆಯುವಂತಿಲ್ಲ ನೆನಪಿರಲಿ.


ಜೊತೆಗೆ ಆಡಳಿತ ವಿರೋಧಿ ಅಲೆ, ಮೂರೂವರೆ ವರ್ಷದಲ್ಲಿ ಇಬ್ಬರು ಮುಖ್ಯಮಂತ್ರಿಯನ್ನು ಬದಲಿಸಿದ ಬಿಜೆಪಿಯ ಹಿಟ್ ವಿಕೆಟ್ ಶೈಲಿಯ ಆಡಳಿತ, ಜೊತೆಗೆ ತಾವೇ ಸ್ಮಾರ್ಟ್ ಸಿಟಿ ಕಂಪನಿಗೆ ನಗರದಲ್ಲೆಡೆ ಕಳಪೆ ಕಾಮಗಾರಿ ನಡೆಸಲು ಅನುವು ಮಾಡಿಕೊಟ್ಟು ಭಾರೀ ಪ್ರಮಾಣದಲ್ಲಿ ಗಂಟು ಮಾಡಿಕೊಂಡರು ಎಂಬ ಊರಿಡೀ ಹಬ್ಬಿರುವ ದೂರನ್ನು ಮೀರಿ ಗೆಲ್ಲುವುದು ಅಷ್ಟು ಸುಲಭವಲ್ಲ. 


ಜ್ಯೋತಿ ಕಂಡರೆ ಕೆಂಡ ಎನ್ನುವ ಎಲ್ಲ ಲಿಂಗಾಯಿತರೂ ಮೇ10ರವರೆಗೆ ಮುನಿಸು ತೊರೆಯದೇ ಇದ್ದು ಸೊಗಡು ಶಿವಣ್ಣನವರಿಗೆ ಓಟು ಮಾಡಿದರೆ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅತೀಕ್ ಅಹ್ಮದ್ ಜೆಡಿಎಸ್ ಸೇರಿರುವುದರಿಂದ, ಇನ್ನೂ ಕಾಂಗ್ರೆಸ್‌ನೊಳಗೇ ಮುನಿಸಿಕೊಂಡಂತೆ ಮುಖ ಮಾಡಿಕೊಂಡಿರುವ ರಫೀಕ್ ಜೊತೆ ಇರುವ ಒಂದಷ್ಟು ಮುಸ್ಲಿಮರು ಹಾಗೂ ತುಮಕೂರು ನಗರದ ಹಮಾಮ್ ಕೋಮು ಜಾತಿಗಳ ಜನರೆಲ್ಲ ಇಷ್ಟಿಷ್ಟು ಅಂತ ನಿಷ್ಟೆಯಿಂದ ಸೊಗಡು ಶಿವಣ್ಣನವರಿಗೆ ಓಟು ಮಾಡಿದರೆ ಒಂದಿಷ್ಟು ಟ್ಯಾಲಿ ಆದೀತು. ತುಸು ತಾಳ್ಮೆ ಇರಬೇಕಷ್ಟೇ.


ಬಿಜೆಪಿಯ ಒಳಜಗಳ ಕಂಡು ಜೆಡಿಎಸ್‌ನ ಎನ್.ಗೋವಿಂದರಾಜು ಸಖತ್ ಖುಷಿಯಾಗಿ ನಾನು ಗೆದ್ದೇ ಬಿಟ್ಟಿದ್ದೇನೆ ಎನ್ನುವಂತಿದ್ದಾರೆ ಎಂಬ ವರದಿಗಳು ಬರತೊಡಗಿವೆ. ಹೋದ ಚುನಾವಣೆಯಲ್ಲೇ ಗೆಲ್ಲಬೇಕಿತ್ತು, ಎಲ್ಲೋ ಒಂದಿಷ್ಟು ಮಿಸ್ಟೀಕ್ ಆಗಿಬಿಟ್ಟಿತು ಅಂತ ಗೋವಿಂದರಾಜು ಅಂದುಕೊಳ್ಳುತ್ತಿದ್ದಾರAತೆ.


ತುಮಕೂರಿನ ಸೋಮವಾರ,ಗುರುವಾರದ ಸಂತೆ ದಿನ ಸಂಜೆ ಐದು ಗಂಟೆಗೆ ಸಿವಿಲ್ ಬಸ್ ನಿಲ್ದಾಣದಿಂದ ಒಂದು ಬಸ್ಸಿನ ಜನ ಹಿಡಿಸುವಷ್ಟು ಜಾಗದಲ್ಲಿ ಮೂರು ಬಸ್ಸಿನ ಜನರನ್ನುತುಂಬಿಕೊಂಡು ತೇಕುತ್ತಿದ್ದ ಬಿಲಾಲಿ ಬಸ್ಸಿನೊಳಗೇ ತಳ್ಳಿ ನೂಕಿಕೊಂಡು ತಾವು ಮಾಡಿಕೊಂಡು ಟಿಕೆಟ್ ಕೊಡುವ ಏಜೆಂಟನಿಗಿಂತ ಕಡೆಯಾಗಿ ಕಾಂಗ್ರೆಸ್,ಬಿಜೆಪಿಗಳು ಟಿಕೆಟ್ ಟಿಕೆಟ್ ಅಂತ ಒದ್ದಾಡುತ್ತಿದ್ದಾಗ, ಮೂರು ತಿಂಗಳು ಮೊದಲೇ ಅಭ್ಯರ್ಥಿ ಅಂತ ಘೋಷಣೆ ಮಾಡಿಸಿಕೊಂಡ ನೀರ್ ಖ್ಯಾತಿಯ ಗೋವಿಂದರಾಜು ಟೋಕನ್ ಕೊಟ್ಟು ಎತ್ತೇನಹಳ್ಳಿ, ಜಲಾಧಿಗರಮ್ಮ, ಮುಳ್ಳುಕಟ್ಟಮ್ಮಗಳ ಮುಂದೆಲ್ಲ ಮಾಡಿಸಿಕೊಂಡಿರುವ ಪ್ರಮಾಣವನ್ನಷ್ಟೇ ನಂಬಿಕೊಳ್ಳದೇ ಎರಡು ಮೂರನೇ ಸುತ್ತಿನಲ್ಲಿ ಯಶಸ್ವಿಯಾಗಿ ಸೀರೆ, ನೋಟು ವಿತರಣೆ ಮಾಡಿರುವುದರಿಂದ ನಾನಲ್ಲದೇ ಇನ್ನಾರು ಗೆಲ್ಲಬಲ್ಲರು ಎಂದು ನೆಮ್ಮದಿಯಾಗಿದ್ದಾರಂತೆ, ಇವರ ಈ ನೆಮ್ಮದಿಯನ್ನು ಕೆಡಿಸುವ ಶಕ್ತಿ ಜೆಡಿಎಸ್ ರೆಬೆಲ್ ನರಸೇಗೌಡರಿಗೆ ಇಲ್ಲ, ಜೊತೆಗೆ ನಿನ್ನೆತಾನೇ ಬಿಜೆಪಿ ಪಾಲಾದ ಬೆಳ್ಳಿ ಮತ್ತು ತುಂಬಾಡಿಗಳಿಗೂ ಇಲ್ಲ, ಅದ್ಯಾರನ್ನೋ ಅದೇನಕ್ಕೋ ಕರೆದರು ಎನ್ನುವ ಆಡಿಯೋ ವಿಡಿಯೋಗಳೆಲ್ಲ ಲೆಕ್ಕಕ್ಕೇ ಇಲ್ಲ, ಇದೆಲ್ಲ ನನ್ನ ವಿರುದ್ಧ ಯಾರೋ ಮಾಡುತ್ತಿರುವ ಷಡ್ಯಂತ್ರ ಎಂದು ಗೋವಿಂದ್ ರಾಜ್ ಹೇಳುತ್ತಿದ್ದಾರಂತೆ.


ಇತ್ತ ಕಾಂಗ್ರೆಸ್ ಟಿಕೆಟ್ ಪಡೆದು ಹದಿನೈದು ದಿನಗಳಾದರೂ ಮುನಿಸಿಕೊಂಡವರನ್ನೂ ಮುಟ್ಟಿ ಮಾತಾಡಿಸಲೂ ಟೈಮ್ ಸಾಕಾಗುತ್ತಿಲ್ಲ ಇಕ್ಬಾಲ್ ಅಹ್ಮದ್ ಅವರಿಗೆ. ನೋಡಲು ಸಭ್ಯ, ಮೃದು ಎಂಬೆಲ್ಲ ವಿಶೇಷಣಗಳು ಎಲೆಕ್ಷನ್ ಗೆಲ್ಲಲು ಸಾಕಾಗಲ್ಲ ಅಂತ ಅವರಿಗೂ ಗೊತ್ತು. 


ಎರಡೆರಡು ಸಲ ಕೋವಿಡ್ ತಗಲಿದವರ ತರಾ ಸುಸ್ತಾಗಿರುವ ಕಾಂಗ್ರೆಸ್ ಸಂಘಟನಾತ್ಮಕವಾಗಿ ಝೀರೋ ಅಂತ ಹತ್ತಾರು ಸಲ ಪ್ರೂವ್ ಮಾಡಿಬಿಟ್ಟಿದೆ. ಮಾಜಿ ಅಧ್ಯಕ್ಷರು ಬ್ರಾಥಲ್ ಕೇಸಿನಲ್ಲಿ ತಗುಲಿಹಾಕಿಕೊಂಡ ಕೆಲ ತಿಂಗಳು ಹಂಗಾಮಿ ಅಧ್ಯಕ್ಷರಾಗಿದ್ದ ಕೆಂಚ ಮಾರಯ್ಯನವರೇ ಮುಂದುವರೆದಿದ್ದರೆ ಪರವಾಗಿರಲಿಲ್ಲ, ಪಕ್ಷ ನಿಷ್ಟ ಮುಖಂಡರ ಉಚ್ಚಾಟನೆಯ ಹುಚ್ಚಾಟದಲ್ಲಿ ತೊಡಗಿರುವ ಈಗಿನ ಅಧ್ಯಕ್ಷರು ಇನ್ನೂ ಅತ್ತತ್ತ ಎನ್ನುತ್ತಾರೆ ಕಾರ್ಯಕರ್ತರು.


ಕಾಂಗ್ರೆಸ್‌ನ ಮೂವರು ಟಿಕೆಟ್ ಆಕಾಂಕ್ಷಿ ಅಹ್ಮದ್ ಗಳಲ್ಲಿ ಒಬ್ಬರಿಗೆ ಟಿಕೆಟ್ ಸಿಕ್ಕಿತು, ಮತ್ತೊಬ್ಬರು ಮುನಿಸಿಕೊಂಡು ಮನೆಯಲ್ಲಿ ಕುಂತಿದ್ದಾರೆ, ಇನ್ನೊಬ್ಬರು ಸಾಫ್ ಸೀದಾ ರಾಜಿನಾಮೆ ಬಿಸಾಕಿ ತೆನೆ ಹೊತ್ತ ಮಹಿಳೆ ಮಡಿಲಿಗೆ ಬಿದ್ದಿದ್ದಾರೆ. ತುಮಕೂರಿನ ಮುಸ್ಲಿಮರೆಲ್ಲ ಒಗ್ಗಟ್ಟಾಗುವುದು ಕನಸಿನ ಮಾತು. ಖಾಯಂ ಓಟ್ ಬ್ಯಾಂಕಿನಂತಿದ್ದ ಎನ್ ಆರ್ ಕಾಲೋನಿ ಓಟುದಾರರೂ ಮೂರೂ ಪಕ್ಷಗಳಲ್ಲಿ ಹಂಚಿ ಹೋಗಿರುವಾಗ, 35 ವಾರ್ಡುಗಳನ್ನೆಲ್ಲ ಒಂದು ಸುತ್ತು ಬರುವ ಹೊತ್ತಿಗೆ ಓಟು ಮಾಡುವ ಮೇ.10 ಅಲ್ಲ , ಕೌಂಟಿಂಗ್ ಮಾಡುವ ಮೇ ಹದಿಮೂರೇ ಬಂದು ಬಿಡುತ್ತದೆ. ಇದು ಒಂಥರಾ ಅನ್ಯಾಯ ಅಲ್ವಾ, ಯಾವುದೇ ಪಕ್ಷ ಆಗಲಿ, ಅಟ್ ಲೀಸ್ಟ್ ಆರು ತಿಂಗಳು ಮುಂಚಿತವಾಗಿ ಅಭ್ಯರ್ಥಿ ಯಾರು ಅಂತ ಅನೌನ್ಸ್ ಮಾಡಬೇಕಲ್ವಾ. 


ಇಂತಾ ಸನ್ನಿವೇಶದಲ್ಲಿ ಕಣಕ್ಕಿಳಿದಿರುವ ಎಸ್ ಯು ಸಿ ಐ ಎಂಬ ಕಮ್ಯುನಿಸ್ಟ್ ಪಕ್ಷದ ಎಂ.ವಿ.ಕಲ್ಯಾಣಿ , ಆಮ್ ಆದ್ಮಿಯ ಮಹಮದ್ ಗೌಸ್ ಪೀರ್, ಕೆಆರ್‌ಎಸ್ ನ ಗಜೇಂದ್ರಕುಮಾರ್ ಕೆ.ಎಸ್, ಉತ್ತಮ ಪ್ರಜಾಕೀಯ ಪಕ್ಷದ ಟಿ.ಎನ್.ರಾಜೇಶ್ ಗಳೆಲ್ಲ ಅವರವರ ಶಕ್ತ್ಯಾನುಸಾರ ಗಳಿಸುವ ಓಟುಗಳೆಲ್ಲ ಬಹುಪಾಲು ಹಸ್ತದ ಬಟನ್ ಒತ್ತುವವರದ್ದೇ ಆಗಿರುತ್ತವೆ ಎನ್ನುವುದರಲ್ಲೂ ಅನುಮಾನ ಇರಿಸಿಕೊಳ್ಳುವಂತಿಲ್ಲ.


ಇಂತಿಪ್ಪ ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಓಟುದಾರರಿಗೆ ಯಾರು ಹಿತವರು ಈ ಎಲ್ಲರೊಳಗೆ ಎಂಬ ಗೊಂದಲ ಇದೆ ಎಂದೇನೂ ಭಾವಿಸುವಂತಿಲ್ಲ. ಎರಡೂವರೆ ಲಕ್ಷ ಓಟುದಾರರಲ್ಲಿ ಒಂದೈವತ್ತು ಸಾವಿರ ಮಂದಿ ಊರಲ್ಲಿಲ್ಲ ಎಂದುಕೊಂಡರೂ ಉಳಿದ ಎರಡೂಲಕ್ಷ ಚಿಲ್ಲರೆ ಓಟುದಾರರಲ್ಲಿ ಮ್ಯಾಕ್ಸಿಮಮ್ 75-80% ಅಂದರೂ ಚಲಾವಣೆಯಾಗುವ ಸರಿಸುಮಾರು ಒಂದೂವರೆ ಲಕ್ಷ ಚಿಲ್ಲರೆ ಓಟಿನಲ್ಲಿ ಜೆಡಿಎಸ್, ಬಿಜೆಪಿ , ಕಾಂಗ್ರೆಸ್‌ಗಳ ಬೇಸ್ ಓಟುಗಳನ್ನು ಲೆಕ್ಕಕ್ಕೆ ತೆಗೆದುಕೊಂಡು, ಬಂಡಾಯ ಬಿಜೆಪಿ ಅಭ್ಯರ್ಥಿ ಪಡೆಯಬಹುದಾದ ಓಟುಗಳನ್ನು ಮೈನಸ್ ಮಾಡಿದರೂ, 45 ಸಾವಿರ ಪಡೆದವರು ಗೆದ್ದೇ ಬಿಡುತ್ತಾರೆ. ಯಾರು ಗೆಲ್ಲಬಹುದು ಅಂತ ಹೇಳಲು ಇನ್ನೂ ಸಾಕಷ್ಟು ಟೈಮ್ ಇದೆ.

ತುಮಕೂರು ಕ್ಷೇತ್ರದ ಚುನಾವಣಾ ಇತಿಹಾಸ

  • 1962ರಲ್ಲಿ ತುಮಕೂರು ಕ್ಷೇತ್ರದ ಏಕೈಕ ಮಹಿಳಾ ಶಾಸಕಿ ಎನಿಸಿಕೊಂಡ ಕಾಂಗ್ರೆಸ್‌ನ ಜಿ.ಸಿ.ಭಾಗೀರಥಮ್ಮ15,178 ಮತಗಳನ್ನು ಪಡೆದು ಗೆದ್ದರು,  ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಟಿ ಎಸ್ ಮಲ್ಲಿಕಾರ್ಜುನಯ್ಯ10,919 ಮತಗಳನ್ನು ಪಡೆದು, 4,259 ಮತಗಳಿಂದ ಸೋತರು.
  • 1967ರಲ್ಲಿ ಪ್ರಜಾ ಸೋಷಿಯಲಿಸ್ಟ್‌ ಪಕ್ಷದ ಬಿ.ಪಿ.ಗಂಗಾಧರ್ 10,509 ಮತಗಳನ್ನು ಪಡೆದರೆ, ಶಾಸಕರಾಗಿದ್ದ ಕಾಂಗ್ರೆಸ್‌ನ ಜಿ.ಸಿ.ಭಾಗೀರಥಮ್ಮ 7,936 ಮತಗಳನ್ನು ಪಡೆದು,  2,573 ಮತಗಳಿಂದ ಸೋತರು.
  • 1972ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಅಬ್ದುಲ್ ಸುಭಾನ್ 11,547 ಮತಗಳನ್ನು ಪಡೆದು ಗೆದ್ದರು, ಭಾರತೀಯ ಜನಸಂಘದ ಎಸ್. ಮಲ್ಲಿಕಾರ್ಜುನಯ್ಯ 9,464 ಮತಗಳನ್ನು ಪಡೆದು, 2,083 ಮತಗಳಿಂದ ಸೋತರು.
  • 1978ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್‌ನ ನಜೀರ್‌ ಅಹಮದ್‌ 34199 ಮತ ಪಡೆದು ಗೆದ್ದಿದ್ದರು, ಜನತಾ ಪಕ್ಷದ ಮೊಹಮ್ಮದ್ ಗೈಬನ್ ಖಾನ್ 24733 ಮತಗಳನ್ನು ಪಡೆದು ಸೋತಿದ್ದರು.  ನಜೀರ್‌ ಅಹಮದ್‌ ವಿದೇಶದಲ್ಲಿ ನೆಲೆಸುವ ಸಲುವಾಗಿ ರಾಜಿನಾಮೆ ನೀಡಿದ್ದರಿಂದ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಎಸ್.ಷಫಿ ಅಹ್ಮದ್‌ ಶಾಸಕರಾಗಿ ಚುನಾಯಿತರಾದರು.
  • 1983ರ ಚುನಾವಣೆಯಲ್ಲಿ ಜನತಾ ಪಕ್ಷದ ಲಕ್ಷ್ಮೀನರಸಿಂಹಯ್ಯ 34,689 ಮತಗಳನ್ನು ಪಡೆದು ಗೆದ್ದರು.  ಕಾಂಗ್ರೆಸ್‌ನ ಎಸ್. ಶಫಿ ಅಹಮದ್ 24,159 ಮತಗಳನ್ನು ಪಡೆದು, 10,530 ಮತಗಳಿಂದ ಸೋತಿದ್ದರು.
  • 1985ರ ಚುನಾವಣೆಯಲ್ಲಿ ಜನತಾ ಪಕ್ಷದ ಲಕ್ಷ್ಮೀನರಸಿಂಹಯ್ಯ 40,440 ಮತಗಳನ್ನು ಪಡೆದು ಗೆದ್ದರೆ,  ಕಾಂಗ್ರೆಸ್‌ನ ಅಲಿಯಾ ಬೇಗಂ 26,910 ಪಡೆದು, 13,530 ಮತಗಳಿಂದ ಸೋತಿದ್ದರು.
  • 1989ರಲ್ಲಿ ಕಾಂಗ್ರೆಸ್‌ನ ಎಸ್.ಶಫಿ ಅಹಮದ್ 44,786 ಮತಗಳನ್ನು ಪಡೆದರೆ, ಜನತಾದಳದ ಲಕ್ಷ್ಮೀ ನರಸಿಂಹಯ್ಯ 39,646 ಮತಗಳನ್ನು ಪಡೆದು, 5,140 ಮತಗಳಿಂದ ಸೋತರು.
  • 1994ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸೊಗಡು ಶಿವಣ್ಣ 39,101 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಎಸ್. ಶಫಿ ಅಹಮದ್ 29,997 ಮತಗಳನ್ನು ಪಡೆದು, 9,104 ಮತಗಳಿಂದ ಸೋತರು.
  • 1999 ರಲ್ಲಿ ಎಸ್.ಶಿವಣ್ಣ ಬಿಜೆಪಿಯಿಂದ ಸ್ಪರ್ಧಿಸಿ, 60,699 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಎಸ್. ಶಫಿ ಅಹಮದ್ 52,111 ಮತಗಳನ್ನು ಪಡೆದು, 8,588 ಮತಗಳಿಂದ ಸೋತರು.
  • 2004ರ ಚುನಾವಣೆಯಲ್ಲಿ ಬಿಜೆಪಿ ಎಸ್ ಶಿವಣ್ಣ ಮೂರನೇ ಸಲ ಆಯ್ಕೆಯಾಗಿ ಹ್ಯಾಟ್ರಿಕ್‌ ಸಾಧನೆ ಮಾಡಿದರು. ಎಸ್‌ ಶಿವಣ್ಣ ಈ ಚುನಾವಣೆಯಲ್ಲಿ 59,977 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಶಫಿ ಅಹಮದ್ ಎಸ್ 51,332 ಮತಗಳನ್ನು ಪಡೆದು, 8,645 ಮತಗಳಿಂದ ಸೋತಿದ್ದರು.
  • 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಗೊಂಡ ನಂತರ ತುಮಕೂರು ನಗರ ಕ್ಷೇತ್ರವಾಗಿ ರಚನೆಯಾಯಿತು. ತುಮಕೂರು ನಗರದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಸೊಗಡು ಶಿವಣ್ಣ ಬಿಜೆಪಿ ಯಿಂದ ಸ್ಪರ್ಧಿಸಿ, 39,435 ಮತಗಳನ್ನು ಪಡೆದರೆ, ಕಾಂಗ್ರೆಸ್‌ನಿಂದ ರಫೀಕ್‌ ಅಹಮದ್‌ 37,486 ಮತಗಳನ್ನು ಪಡೆದು, ಕೇವಲ 1,949 ಮತಗಳ ಅಂತರದಿಂದ ಸೋತಿದ್ದರು.
  • ಸತತ ನಾಲ್ಕು ಬಾರಿ (2008ರವರೆಗೆ) ಗೆಲುವು ಸಾಧಿಸಿದ್ದ ಎಸ್‌ ಶಿವಣ್ಣ ಅವರಿಗೆ 2013ರ ಚುನಾವಣೆ ಕೈ ಕೊಟ್ಟಿತು. ಕಾಂಗ್ರೆಸ್‌ನ ಡಾ ರಫೀಕ್ ಅಹಮದ್ ಎಸ್. 43,681 ಮತಗಳನ್ನು ಪಡೆದು ಕೆಜೆಪಿಯಿಂದ ಸ್ಪರ್ಧಿಸಿದ್ದ ಜಿ ಬಿ ಜ್ಯೋತಿ ಗಣೇಶ್ ಅವರನ್ನು 3,608 ಮತಗಳ ಅಂತರದಿಂದ ಸೋಲಿಸಿ ಗೆದ್ದರು. ಈ ಚುನಾವಣೆಯಲ್ಲಿ ಜ್ಯೋತಿ ಗಣೇಶ್‌ 40,073 ಮತಗಳನ್ನು ಪಡೆದಿದ್ದರು. ಕೆಜೆಪಿಯಿಂದ ಜಿ.ಬಿ. ಜ್ಯೋತಿ ಗಣೇಶ್‌ ಸ್ಪರ್ಧಿಸಿದ ಪರಿಣಾಮ ಮತಗಳು ವಿಭಜನೆಗೊಂಡು ಶಿವಣ್ಣ ಮತ್ತು ಜಿ.ಬಿ.ಜ್ಯೋತಿಗಣೇಶ್‌ ಇಬ್ಬರೂ ಸೋಲು ಕಂಡರು. 
  • 2018ರ ಚುನಾವಣೆಯಲ್ಲಿ ಬಿಜೆಪಿಯ ಜ್ಯೋತಿ ಗಣೇಶ್‌ 60,421 ಮತಗಳನ್ನು ಪಡೆದರೆ, ಜೆಡಿಎಸ್‌ನ ಎನ್‌ ಗೋವಿಂದ ರಾಜು 55,128 ಮತಗಳನ್ನು ಪಡೆಯುವ ಮೂಲಕ 5,293 ಮತಗಳಿಂದ ಪರಾಭವಗೊಂಡರು.ಕಾಂಗ್ರೆಸ್‌ ಮೂರನೇ ಸ್ಥಾನಕ್ಕಿಳಿಯಿತು.

ಜಾತಿ ಬಲ

ಒಕ್ಕಲಿಗರು, ಲಿಂಗಾಯತರು, ದಲಿತರು ಹಾಗೂ ಮುಸ್ಲಿಂ ಮತದಾರರು ಹೆಚ್ಚಾಗಿದ್ದು, ಹಿಂದುಳಿದ ವರ್ಗದ ತಿಗಳರು, ಗೊಲ್ಲರು, ಕುರುಬರು ಹಾಗೂ ಇತರೆ ಸಮುದಾಯದ ಮತದಾರರು ಕೂಡ ಫಲಿತಾಂಶವನ್ನು ಬದಲಾಯಿಸಬಲ್ಲರು.

 


( ಪ್ರಿಯ ಓದುಗರೇ ಗಮನಿಸಿ: ಈ ಅಂಕಣದಲ್ಲಿ ಪ್ರಕಟಿಸಿರುವ ಫೋಟೋಗಳು ಸಾಂದರ್ಭಿಕ, ಯಾವ ಯಾವುದೋ ಸಂದರ್ಭದಲ್ಲಿ ತೆಗೆದ ಫೋಟೋಗಳು, ಕಾಂಗ್ರೆಸ್‌ನ ರಫೀಕ್ ಅಹ್ಮದ್ ಅವರು ರಾಜ್ಯದಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ದೇವೇಗೌಡರ ಪರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಜೆಡಿಎಸ್ ಕರಪತ್ರ ಹಿಡಿದು ಜೆಡಿಎಸ್‌ನ ಹಾಲಿ ಅಭ್ಯರ್ಥಿ ಜೊತೆ ಹೆಜ್ಜೆ ಹಾಕುತ್ತಿರುವ ಹೊತ್ತಿನ ಫೋಟೋ, ಇನ್ನು ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಕೂಡಾ ಇನ್ಯಾವುದೋ ಸಮಾರಂಭದಲ್ಲಿ ಇವತ್ತಿನ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಕೈ ಕುಲುಕುತ್ತಿದ್ದಾರೆ. ಮತ್ತೊಂದು ಸಮಾರಂಭದಲ್ಲಿ ಗೋವಿಂದರಾಜು ಜೊತೆ ನಗುತ್ತ ಕುಳಿತಿದ್ದಾರೆ, ಆದರೆ ಸೊಗಡು ಮತ್ತು ರಫೀಕ್ ಫೋಟೋ ಮಾತ್ರ ಇವತ್ತಿನದು. )