ಕೋಲಾರ ಜಿಲ್ಲೆಯ ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕನಾಗಿ

All India Civil Service ಗೆ ಸೆಲೆಕ್ಟ್ ಆಗಿ ಅಸಿಸ್ಟೆಂಟ್ ಡೈರೆಕ್ಟರ್ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ. ಇನ್ಮುಂದೆ ನಾವು 9 ಜನ ಅಷ್ಟೇ. ನವಗ್ರಹಗಳು ಎಂದು ಗೇಲಿ ಮಾಡಿದ ಶಿವಸ್ವಾಮಿ.

ಕೋಲಾರ ಜಿಲ್ಲೆಯ ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕನಾಗಿ

ಹಳ್ಳಿ ಹೈದನ ನೂರೆಂಟು ನೆನಪು- ಚಿಕ್ಕಣ್ಣ, ಐಎಎಸ್(ನಿ)

 

    

   ಸೋಮವಾರ ಊರಿಂದ ಬಂದವನೇ ಇಲಾಖಾ ನಿರ್ದೇಶಕರ ಕಛೇರಿಗೆ ಹೋದೆ. ಅಲ್ಲಿ ಇತರ ಸ್ನೇಹಿತರೂ ತರಬೇತಿ ಮುಗಿಸಿಕೊಂಡು ಬಂದು ಒಂದೆಡೆ ಸೇರಿದ್ದರು. ನಾನು ಅವರನ್ನು ಸೇರಿಕೊಂಡೆ. 11 ಜನರಲ್ಲಿ 9 ಜನ ಮಾತ್ರ ಇದ್ದೆವು. ನಲ್ಲಮುತ್ತು ಮತ್ತು ಉಗಾಲತ್ ಎಲ್ಲಿ ಎಂದೆ. ಅವರಿಬ್ಬರೂ All India Civil Service ಗೆ ಸೆಲೆಕ್ಟ್ ಆಗಿ ಅಸಿಸ್ಟೆಂಟ್ ಡೈರೆಕ್ಟರ್ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ. ಇನ್ಮುಂದೆ ನಾವು 9 ಜನ ಅಷ್ಟೇ. ನವಗ್ರಹಗಳು ಎಂದು ಗೇಲಿ ಮಾಡಿದ ಶಿವಸ್ವಾಮಿ.

 

ನಮಗೆ ಕುಳಿತುಕೊಳ್ಳಲು ಜಾಗವಿಲ್ಲ. ಸೀದಾ ಜಂಟಿ ನಿರ್ದೇಶಕರಾದ ತೆರೆಸಾ ಭಟ್ಟಾಚಾರ್ಯ ಅವರ ಕಛೇರಿಗೆ ಹೋಗಿ ಸಂದರ್ಶನಕ್ಕೆ ಒತ್ತಾಯಿಸಿದೆವು. ಸ್ವಲ್ಪ ಹೊತ್ತಿನ ನಂತರ ಅವರನ್ನು ಕಾಣಲು ಅವಕಾಶ ಕೊಟ್ಟರು. ಅವರಿಗೆ ವಂದಿಸಿ, ಎಲ್ಲರೂ ಪರಿಚಯ ಮಾಡಿಕೊಂಡ ಮೇಲೆ ಮೀಟಿಂಗ್ ಟೇಬಲ್‌ನಲ್ಲಿ ಕುಳಿತುಕೊಳ್ಳಲು ಹೇಳಿದರು. ತರಬೇತಿಯ ವಿಷಯವನ್ನು ಒಬ್ಬೊಬ್ಬರನ್ನು ಕೇಳಿ ತಿಳಿದುಕೊಂಡರು. ಈಗ ಅಂತಿಮ ಘಟಕದ ತರಬೇತಿ ಕ್ರಮವಾಗಿ ಜಿಲ್ಲಾ ಉಸ್ತುವಾರಿ ಎಂದೆವು. ಸರ್ಕಾರದ ಆದೇಶ ಬಂದಿದೆ ಎಂದು ಹೇಳಿ, ದಾಸ್  ಅವರಿಗೆ ಹೇಳಿ ಕಳುಹಿಸಿದರು. ಅವರು ಬಂದ ನಂತರ ಇವರಿಗೆ ಪೋಸ್ಟಿಂಗ್ ಆರ್ಡರ್ ಪ್ರತಿ ನೀಡಿ ಎಂದು ಹೇಳಿ Wish you Good Luck, ಚೆನ್ನಾಗಿ ಕೆಲಸ ಮಾಡಿ, ಎಂದು ಹೇಳಿದರು.

ಕಾತುರದಿಂದ ದಾಸ್ ಅವರ ಕಛೇರಿಗೆ ಹೋಗಿ ಆದೇಶದ ಪ್ರತಿ ಪಡೆದೆ, ನನಗೆ ಕೋಲಾರ ಜಿಲ್ಲೆಗೆ ನೇಮಿಸಿದ್ದರು. ಖುಷಿಯಾಯಿತು. ಸದ, ಗುಲಬರ್ಗ ವಿಭಾಗಕ್ಕೆ ಒಬ್ಬೊಬ್ಬರ ನೇಮಕಾತಿ ಆಗಿತ್ತು. ಕಬ್ಬನ್ ಪಾರ್ಕ್‌ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಾ ಸಂಭ್ರಮಿಸಿದೆವು.

 

ಗಣೇಶ ಲಾಡ್ಜ್‌ಗೆ ಬಂದು Rest ತೆಗೆದುಕೊಂಡೆ, ಬೆಳಿಗ್ಗೆ ಕೋಲಾರಕ್ಕೆ ಬಸ್‌ನಲ್ಲಿ ಹೋದೆ. New Extension ನಲ್ಲಿ ಇಲಾಖೆಯ ಕಛೇರಿ ಬಾಡಿಗೆ ಮನೆಯಲ್ಲಿತ್ತು. ಹಾಗೆ ನೋಡಿದರೆ ಯಾವ ಜಿಲ್ಲೆಯಲ್ಲೂ ಇಲಾಖೆಯ ಕಛೇರಿಗಳಿಗೆ ಸ್ವಂತ ಕಟ್ಟಡಗಳಿರಲಿಲ್ಲ. ಅಧಿಕಾರಿಗಳಿಗೆ ಓಡಾಡಲು ಜೀಪುಗಳು ಇರಲಿಲ್ಲ. ಪ್ರಮುಖ ಇಲಾಖೆಯಾಗಿದ್ದರೂ ಸರ್ಕಾರದ ಅವಕೃಪೆಗೊಳಗಾಗಿತ್ತು.

 

ಅಂದಾಜು 11-30ಕ್ಕೆ ಸಹಾಯಕ ನಿರ್ದೇಶಕ ಕಛೇರಿಗೆ ಹೋದೆ, ಸುಧಾಕರನ್ ಎಂಬ ಕೇರಳ ಮೂಲದವರು ಆ ಹುದ್ದೆಯಲ್ಲಿದ್ದರು. ಪರಿಚಯವಾದ ಮೇಲೆ ವರ್ಗಾವಣೆ ವಿಷಯ ಹೇಳಿ ಸರ್ಕಾರಿ ಆದೇಶದ ಪ್ರತಿ ತೋರಿಸಿದೆ. 'ನಮಗೇನು ಈ ಪ್ರತಿ ಬಂದಿಲ್ಲ' ಎಂದು ಹೇಳಿ ಬೆಲ್ ಮಾಡಿದರು. ಸೀನಪ್ಪ ಅಂತ ಸೂಪರಿಂಟೆಂಡೆಂಟ್ ಬಂದರು. ಸಾಹೇಬು ಇಲ್ಲಿಗೆ Assistant Director ಆಗಿ ಪೋಸ್ಟಿಂಗ್ ಆಗಿದೆ. ಆದರೆ ನಮಗೆ ಆದೇಶ ಬಂದಿಲ್ಲ ಎಂದು ಹೇಳಿ ನನ್ನ ಮುಂದೆಯೇ ಕೇಂದ್ರ ಕಛೇರಿಯ ದಾಸ್ ಅವರಿಗೆ ದೂರವಾಣಿಯಲ್ಲಿ ಮಾತಾಡಿ, ಓಕೆ ಪಡೆದುಕೊಂಡರು. ನಾನು ಅವರಿಂದ ಅಧಿಕಾರ ವಹಿಸಿಕೊಂಡೆ. ಸಂಜೆ ಅವರು ಮನೆಗೆ ನನ್ನನ್ನು ಆಹ್ವಾನಿಸಿ ತಿಂಡಿ-ಕಾಫಿ ಕೊಟ್ಟು ಸತ್ಕರಿಸಿ ಗೌರವ ತೋರಿಸಿದರು.

 

ಕೋಲಾರದಲ್ಲಿ ನಮಗೆ ಸರ್ಕಾರಿ ಮನೆ ಇರಲಿಲ್ಲ. ಚಾರ್ಜ್ ತೆಗೆದುಕೊಂಡ ಮೇಲೆ ಸಂಜೆಯವರೆಗೂ ಕಛೇರಿಯಲ್ಲಿ ಎಲ್ಲರೊಡನೆ ಬೆರೆತು ಮಾಹಿತಿ ಪಡೆದು ನಂತರ, ನಾನು ಇಲ್ಲಿ ಮನೆ ಮಾಡಿ Family Shift ಮಾಡಬೇಕು ಎಂದೆ. ಹತ್ತಿರದಲ್ಲಿ ಯಾವುದಾದರೂ ಮನೆ ಖಾಲಿ ಇದ್ದರೆ ನೋಡಿ ಎಂದು ಹೇಳಿ, ಅಲ್ಲಿಯವರೆಗೆ IB ಯಲ್ಲಿ ಒಂದು ರೂಮನ್ನು ರಿಸರ್ವ್ ಮಾಡಲು ಹೇಳಿ ಬೆಂಗಳೂರಿಗೆ ಹಿಂದಿರುಗಿದೆ.

****

ಕೋಲಾರದಲ್ಲಿ ಕೆಜಿಎಫ್ ಬಿಟ್ಟರೆ ಹೆಚ್ಚು ಕೈಗಾರಿಕೆಗಳಿಲ್ಲ. ಚಿಂತಾಮಣಿಯಲ್ಲಿ ಕೆಲವು ಅಗರಬತ್ತಿ ಘಟಕಗಳಿವೆ. BGML ಮತ್ತು ಗೌರಿಬಿದನೂರು ಸಕ್ಕರೆ ಕಾರ್ಖಾನೆ ಎರಡೇ ಬೃಹತ್‌ ಕೈಗಾರಿಕೆಗಳು ಎಂದು ಸುಧಾಕರನ್ ವಿವರಿಸಿದರು.

 

ಮಧ್ಯಾಹ್ನ Staff Meeting ಮಾಡಿದೆ, Supdt ಆಗಿ ಶ್ರೀನಿವಾಸಪುರ ತಾಲ್ಲೂಕಿನ ಸೀನಪ್ಪ, Industrial Supervisor ಆಗಿ ಲಕ್ಷ್ಮೀನಾರಾಯಣ, ನರಸಿಂಹಯ್ಯ, Dist Weaving Supervisor ಶಾಮಣ್ಣ, Weaving Demonstrator ಒಬ್ಬರು, ಗೋವಿಂದಗೌಡ FDC, ಒಬ್ಬರು ಟೈಪಿಸ್ಟ್, ಇಬ್ಬರು ಗ್ರೂಪ್ ಡಿ ನೌಕರರು ಇದ್ದು ನಮ್ಮ ಸಿಬ್ಬಂದಿ 8 ತಾಲ್ಲೂಕುಗಳಲ್ಲೂ ಇದ್ದರು. ನಾಲ್ಕು ತಾಲ್ಲೂಕುಗಳ ಬಿಡಿಎ ಕಛೇರಿಯಲ್ಲಿ ವಿಸ್ತರಣಾಧಿಕಾರಿಗಳಿದ್ದರು.

 

ರಾತ್ರಿ ಐಬಿಯಲ್ಲಿಯೇ ಊಟ ಆಯಿತು. ಬೆಳಗ್ಗೆ 8 ಗಂಟೆಗೇ ಗ್ರೂಪ್ 'ಡಿ' ನೌಕರ ಮುನಿಯಪ್ಪ ಬಂದು ತಿಂಡಿ ತರ್ತೇನೆ ಎಂದು ಹಣ ಪಡೆದು ಹೋದ. ಸ್ನಾನ ತಿಂಡಿ ಆದ ಮೇಲೆ, 'ಸರ್ ನಮ್ಮ ಆಫೀಸ್ ಹಿಂದೇನೇ ಒಂದು ಮನೆ ಖಾಲಿ ಇದೆ, ಬೇಕಾದರೆ ನೋಡಿ' ಅಂದ, ನಮ್ಮ ಕಛೇರಿಗೂ ಐಬಿಗೂ 100 ಮೀಟರ್ ದೂರ, ಹೀಗಾಗಿ ಆತನ ಜತೆ ಹೋಗಿ ಮನೆ ನೋಡಿದೆ. ಕೋಲಾರ ರೈಲ್ವೆ ಸ್ಟೇಷನ್‌ಗೆ ಹೋಗುವ ರಸ್ತೆಯಲ್ಲಿ 2 ರೂಮು, ಒಂದು ಹಾಲು, ಅಡಿಗೆ ಮನೆ, ಬಚ್ಚಲು ವ್ಯವಸ್ಥೆ ಇತ್ತು. ಇಷ್ಟವಾಯಿತು. ನಿನಗೆ ಇವರು ಗೊತ್ತಾ' ಅಂದೆ. 'ಹೌದು ಸಾರ್, ಇದೇ ಮುಳುಬಾಗಿಲು ದ್ವಾರಸಮುದ್ರದ ಅಯ್ಯರ್ ಅವರದು. ಪಕ್ಕದ ಮನೆಯಲ್ಲಿ ಕೀ ಕೊಟ್ಟಿದ್ದರು. ಒಪ್ಪಿಗೆಯಾದರೆ ಬಂದು ಮಾತಾಡ್ತಾರೆ' ಎಂದನು.

 

ಮಾರನೇ ದಿನ ಅಯ್ಯರ್ ನಮ್ಮ ಕಛೇರಿಗೆ ಬಂದರು. ತಿಂಗಳಿಗೆ 75 ರೂ. ಬಾಡಿಗೆ, ಲೈಟ್ ಬಿಲ್, ವಾಟರ್ ಬಿಲ್ ಬೇರೆ ಎಂದು ಹೇಳಿದರು. ಸೀನಪ್ಪನವರನ್ನು ಕರೆಸಿದೆ. ಅವರು ಮಾತನಾಡಿದ ಮೇಲೆ 60 ರೂಗೆ ಸೆಟ್ ಆಯ್ತು. 5 ತಿಂಗಳು ಅಡ್ವಾನ್ಸ್ ಎಂದು 300 ರೂಗಳನ್ನು ಕೊಟ್ಟು, ಬೀಗ ತೆಗೆದುಕೊಂಡೆ.

 

ಮಾರನೆ ದಿನ, ಜಿಲ್ಲಾಧಿಕಾರಿ ಶ್ರೀ ಒಬೇದುಲ್ಲಾ, ಐಎಎಸ್ ಅವರನ್ನು ಭೇಟಿ ಮಾಡಿದೆ. 'ನಿಮ್ಮ ಎಂದರು. ಮಧುಗಿರಿ ತಾಲ್ಲೂಕು ತಿಪ್ಪನಹಳ್ಳಿ ಎಂದೆ. 'ಓಹೋ! ನಾನೂ ಮಧುಗಿರಿಯ ಮೂಲದವನೇ ಕಣಪ್ಪ. ನಮ್ಮ ಅಪ್ಪ, ತಾತ ಮಧುಗಿರಿಯಲ್ಲಿದ್ದರು. ಈಗಲೂ ಒಂದು ಹಳೆಮನೆ ಇದೆ' ಎಂದರು. 'ಮೀಟ್ ಮಾಡ್ತಿರು ಆಗಾಗ್ಗೆ' ಅಂತ ಹೇಳಿದರು. ನಂತರ ಹತ್ತಿರದಲ್ಲೇ ಇದ್ದ ವೈ.ಕೆ. ಪಟ್ಟಸೋಮೇಗೌಡ, ಸಹಾಯಕ ಆಯುಕ್ತರು, ಕೋಲಾರ ಉಪವಿಭಾಗ ಅವರನ್ನು ಭೇಟಿ ಮಾಡಿ ಪರಿಚಯ ಮಾಡಿಕೊಂಡೆ. ನಾನು ಈ ಜಿಲ್ಲೆಗೆ ಬಂದ ವಿಷಯ ತಿಳಿದುಕೊಂಡ ಎಂ.ಕೆ. ಪಾಂಡುರಂಗ ಎ೦ಬ ನನ್ನ ಎಂಕಾಂ ಕ್ಲಾಸ್‌ಮೇಟ್‌, ಕೆಎಸ್‌ಆರ್‌ಟಿಸಿ ಕೋಲಾರದಲ್ಲಿ Accountant ಆಗಿದ್ದು, ಆತನೂ ಬಂದ. ಬಹಳ ಹೊತ್ತು ಮಾತನಾಡಿದೆವು. ನಂತರ ACTO ಚಿಕ್ಕಮರಿಗೌಡ ಅವರ ಕಛೇರಿಗೆ ಫೋನಾಯಿಸಿದೆ. ನೀನು ಇಲ್ಲಿಗೆ ಬಂದೆಯಾ, ಒಳ್ಳೆದಾಯ್ತು. ಈ ಕೋಲಾರದಲ್ಲಿ ಸ್ನೇಹಿತರಿಲ್ಲದೆ ಬೋರ್ ಆಗಿತ್ತು. ಸಾಯಂಕಾಲ ಭೇಟಿ ಮಾಡೋಣ' ಅಂದ, ಸಂಜೆ ಐಬಿಯಲ್ಲಿ ಚಿಕ್ಕಮರಿಗೌಡ, ಪಾಂಡುರಂಗ, ಅವನ ಸ್ನೇಹಿತ ದೇವನಾಥ, ಎಲ್ಲರೂ ಸೇರಿದೆವು. ಅಂದು ಮೂಡಿದ ಸ್ನೇಹ ಅವರ ಸಾವಿನವರೆಗೂ ಮುಂದುವರಿಯಿತು. ನಮ್ಮ ಕಛೇರಿಯ ಪಕ್ಕದಲ್ಲಿ 2 ಸರ್ಕಾರಿ ಬಂಗಲೆಗಳಿದ್ದವು. ಒಂದರಲ್ಲಿ ಕೆ ಪಾಪಣ್ಣರೆಡ್ಡಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಇದ್ದರು. ಅವರ ಪರಿಚಯವೂ ಆಗಿ ಅಲ್ಲಿಂದ ಇಲ್ಲಿಯವರೆಗೂ ಸ್ನೇಹ ಮುಂದುವರಿದಿದೆ.

ಮುಂದಿನ ಶುಕ್ರವಾರ, ಶನಿವಾರ ರಜೆ ಹಾಕಿ ಊರಿಗೆ ಹೋಗಿ, ಪಾತ್ರೆ, ಪಡಗ, ಆಕ್ಕಿ, ಬೇಳೆ, ತೆಂಗಿನಕಾಯಿ, ಸಾಂಬಾರು ಪುಡಿ, ಎಲ್ಲ ಪ್ಯಾಕ್ ಮಾಡಿಕೊಂಡು ರೆಡಿಯಾದವು, ನಂತರ ಭಕ್ತರಹಳ್ಳಿಗೆ ಹೋಗಿ ಅಕ್ಕನನ್ನು ಕಂಡು ಯೋಗಕ್ಷೇಮ ವಿಚಾರಿಸಿದೆ. ಕೋಲಾರಕ್ಕೆ ಹೋಗಿರುವುದನ್ನು ಹೇಳಿದೆ. ಮಕ್ಕಳೆಲ್ಲಾ ಅಲ್ಲೇ ಇದ್ದವು. ಮಹದೇವನಿಗೆ ಮಾತು ಬರುತ್ತಿರಲಿಲ್ಲ. ಹಾಗಾಗಿ ಸ್ಕೂಲಿಗೆ ಕಳುಹಿಸಿಲ್ಲ. 2ನೆಯ ಮಗ ರಾಜಣ್ಣ ಅಲ್ಲೇ ಪ್ರೈಮರಿ ಸ್ಕೂಲ್ 3ನೇ ತರಗತಿಯಲ್ಲಿದ್ದರೆ, ಚಿಕ್ಕವನಾದ ಕಾಂತರಾಜನನ್ನು ಶಾಲೆಗೆ ಸೇರಿಸಿರಲಿಲ್ಲ. ಅಕ್ಕನ ಕಷ್ಟಗಳನ್ನು ನೋಡಿ ಮರುಕವಾಯಿತು. ರಾಜಣ್ಣನನ್ನು ನನ್ನ ಜತೆ ಕಳುಹಿಸು ಮುಂದಿನ ವರ್ಷದಿಂದ, ನಾನು ಅವನನ್ನು ಓದಿಸ್ತೇನೆ ಎಂದೆ. ಅಕ್ಕ ಸ್ವಲ್ಪ ಸಮಾಧಾನವಾದಂತೆ ಕಂಡರು. ನಂತರ ಊರಿಗೆ ಬಂದು ಭಾನುವಾರ ಬೆಳಿಗ್ಗೆ ಬಸ್‌ನಲ್ಲಿ ಲಗೇಜು ಹಾಕಿಕೊಂಡು ಬೆಂಗಳೂರಿನವರೆಗೂ ಬಂದು, ಅಲ್ಲಿಂದ ಒಂದು ಸಣ್ಣ ಟೆಂಪೋ ಬಾಡಿಗೆ ಮಾಡಿಕೊಂಡು ನಾನೂ ಅವಳು ಕೋಲಾರ ಸೇರಿದೆವು. ಮಾರನೆ ದಿನ ನಮ್ಮ ಕಛೇರಿ: ಮುನಿಯಪ್ಪನ ಸಹಾಯದಿಂದ ಸಾಮಾನುಗಳನ್ನು ಜೋಡಿಸಿ ಸಂಸಾರ ಆರಂಭಿಸಿದೆವು. ಇಲ್ಲಿ ಕೋತಿಗಳ ಕಾಟ ಹೇಳತೀರದು, ಬಹಳ ತೊಂದರೆ ಕೊಡುತ್ತಿದ್ದವು.

 

ಜಿಲ್ಲೆಯನ್ನೆಲ್ಲಾ ಬಸ್‌ನಲ್ಲಿ ಸುತ್ತಾಡಿದೆ. ಸೂಪರ್‌ವೈಸರ್‌ಗಳ ಜತೆ ಚಿಕ್ಕಬಳ್ಳಾಪುರದಲ್ಲಿನ ಎಟಿಐಗೆ ಭೇಟಿ ಇತ್ತೆ, ಗೌರಿಬಿದನೂರಿನ Sheet Metal and Electroplating Centreನ ತಪಾಸಣೆ ನಡೆಸಿದೆ. ಕೆಜಿಎಫ್‌ನಲ್ಲಿರುವ BEML ಮತ್ತು BGML ಗೆ ಭೇಟಿ ನೀಡಿ ಆ ಸಂಸ್ಥೆಗಳಿಗೆ ಬೇಕಾದ ಪೂರಕ ಘಟಕಗಳನ್ನು ಆರಂಭಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿದೆ. ನಂತರ ಕೆಜಿಎಫ್‌ನ ಇಂಡಸ್ಟ್ರಿಯಲ್ ಎಸ್ಟೇಟ್‌ಗೆ ಭೇಟಿ ನೀಡಿದೆ. 8 ಷೆಡ್‌ಗಳಲ್ಲಿ ಎಲ್ಲವೂ ಖಾಲಿ ಹೊಡೆಯುತ್ತಿದ್ದವು. ನಂತರ ಮಾಲೂರಿಗೆ ಭೇಟಿ ನೀಡಿದೆ. Tiles Factory ಗಳ ಸಮಸ್ಯೆಗಳನ್ನು ತಿಳಿದುಕೊಂಡೆ. ಶಿವಾರಪಟ್ಟಣಕ್ಕೆ ಭೇಟಿ ನೀಡಿ ಅಲಿ ನಡೆಯುತ್ತಿದ್ದ ಶಿಲ್ಪಕಲಾ ಘಟಕಗಳ - ಪರಿವೀಕ್ಷಣೆ ಮಾಡಿ ಅವರ ಕಷ್ಟನಷ್ಟಗಳ ಬಗ್ಗೆ ಚರ್ಚೆ ಮಾಡಿದೆ. ಸುಮಾರು 15 ಜನ ಒಂದೇ ಬೀದಿಯಲ್ಲಿದ್ದುಕೊಂಡು ವಿಗ್ರಹಗಳನ್ನು ಬಿಸಿಲಲ್ಲಿ ಕುಳಿತು ಕೆತ್ತುತ್ತಿದ್ದರು. ಅವರಿಗೆ ಒಂದು Common Working Shed with Hand Operated Machine ಗಳನ್ನು ಮಾಡಿಕೊಡಬೇಕೆಂದು ಸಲಹ ಬಂತು, ಮತ್ತೊಂದು ದಿನ ಚಿಂತಾಮಣಿಗೆ ಭೇಟಿ ನೀಡಿ ಅಲ್ಲಿದ್ದ 8-10 ಅಗರಬತ್ತಿ ಘಟಕಗಳಿಗೆ ಭೇಟಿ ನೀಡಿದೆ. ಅವರಿಗೆ Imported Essence ಗೆ ಲೈಸೆನ್ಸ್ ಬೇಕಾಗಿತ್ತು. ಅದರ ಬಗ್ಗೆ ಚರ್ಚಿಸಿದೆ. ನಂತರ ಅಲ್ಲಿನ ಶಾಸಕರಾದ ಆಂಜನೇಯರೆಡ್ಡಿಯವರನ್ನು ಕಂಡು ತಾಲ್ಲೂಕು ಕೈಗಾರಿಕೆಗಳ ಅಭಿವೃದ್ಧಿ ಬಗ್ಗೆ ಚರ್ಚಿಸಿದೆ. ಕೋಲಾರದಲ್ಲಿಯೇ ಇದ್ದ ಉಣ್ಣೆ ನೇಯ್ದ ತರಬೇತಿ ಕೇಂದ್ರಕ್ಕೆ ಆಗಾಗ ಭೇಟಿ ನೀಡುತ್ತಿದ್ದೆ.

 

ಬಸ್‌ಗಳಲ್ಲಿ 9 ತಾಲ್ಲೂಕುಗಳಿಗೂ ಹೋಗಿ ಭೇಟಿ ನೀಡುವುದು ಕಷ್ಟದಾಯಕವೆನಿಸಿತ್ತು. ಜಿಲ್ಲೆಯ ಇತರ ಹೊಸ ಇಲಾಖೆಗಳಲ್ಲಿ ಯಾವುದೋ ಒಂದು ಯೋಜನೆಯಡಿ ಒಂದು ಜೀಪು ಕೊಂಡು 'ಜಂ' ಅಂತ ಓಡಾಡುತ್ತಿದ್ದರೆ, ಎಲ್ಲಾ ಇಲಾಖೆಗಳಿಗಿಂತಲೂ ಮುಂಚೆ ಆರಂಭವಾದ ನಮ್ಮ ಇಲಾಖೆ ಈ ವಿಷಯದಲ್ಲಿ ತೀರಾ ಹಿಂದುಳಿದಿತ್ತು. ಮುಂದಿನ ಸಭೆಯಲ್ಲಿ ನಿರ್ದೇಶಕರೊಡನೆ ಚರ್ಚಿಸಲು ನಿರ್ಧರಿಸಿದೆ. ಕೋಲಾರ ಇಂಡಸ್ಟ್ರಿಯಲ್ ಕೋ ಆಪರೇಟಿವ್‌ ಬ್ಯಾಂಕಿನ ಸರ್ಕಾರಿ ನಿರ್ದೇಶಕನಾಗಿದ್ದೆ. ಅದರ ಒಂದು ಜೀಪು ಇತ್ತು. ಭಾನುವಾರ ಅದರ ಜತೆ ಶ್ರೀನಿವಾಸಪುರ ರಸ್ತೆಯ ಹಳೆಯ ಏರ್‌ಪೋರ್ಟ್‌ನಲ್ಲಿ ಡ್ರೈವಿಂಗ್ ಕಲಿತು, ಡ್ರೈವಿಂಗ್ ಲೈಸೆನ್ಸ್‌ ಪಡೆದುಕೊಂಡೆ.

 

ಮಾರ್ಚ್ 1968 ಮುಗಿದು, ಬೇಸಿಗೆ ರಜೆ ಬಂತು. ಅಮ್ಮ, ಅಕ್ಕ, ತಮ್ಮ ಮಗ ರಾಜಣ್ಣನೊಂದಿಗೆ ಕೋಲಾರಕ್ಕೆ ಬಂದರು. ಅವರಿಗೆ ಚಿನ್ನದ ಗಣಿ ನೋಡುವಾಸೆ. ನಂತರ ಚಿಕ್ಕತಿರುಪತಿ ಹೀಗೆ ಒಂದು Taxiಮಾಡಿಕೊಂಡು ತೋರಿಸಿ, ಮುಳಬಾಗಿಲು ಆಂಜನೇಯನ ದರ್ಶನ ಪಡೆದವು. 10 ದಿನಗಳು ನಮ್ಮ ಜತೆ ಖುಷಿಯಿಂದ ಇದ್ದು ಚಿಕ್ಕಬಳ್ಳಾಪುರ, ಗೌರಿಬಿದನೂರು ಮೂಲಕ ಊರಿಗೆ ಹಿಂದಿರುಗಿದರು. ರಾಜಣ್ಣ ನಮ್ಮಲ್ಲಿಯೇ ಉಳಿದ. ಅವನನ್ನು 4ನೇ ತರಗತಿಗೆ ಬಳೇಪೇಟೆಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಸೇರಿಸಿದೆ.

 

ಏಪ್ರಿಲ್‌ನಲ್ಲಿ ಇಲಾಖಾ ನಿರ್ದೇಶಕರಾದ ಟಿ ಆರ್ ಸತೀಶಚಂದ್ರ ಅವರು ಎಲ್ಲಾ ಜಿಲ್ಲಾ ಸಹಾಯಕ ನಿರ್ದೇಶಕರ ಸಭೆ ಕರೆದರು. ನನ್ನ ಜಿಲ್ಲೆಯ ಕೆಲವು ಮಹತ್ತರ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಹೋಗಿದ್ದೆ. ಅದರಲ್ಲಿ ಮುಖ್ಯವಾಗಿ Industrial Estate ನಲ್ಲಿ ಶೆಡ್‌ಗಳು ಖಾಲಿ ಇರುವುದು ಮತ್ತು BEML / BGML ಸಂಸ್ಥೆಗಳ ಪೂರಕ ಕೈಗಾರಿಕೆಗಳನ್ನು ಸ್ಥಾಪಿಸಲು ಹುರಿದುಂಬಿಸುವುದು ಮತ್ತು ಜಿಲ್ಲಾ ಸಹಾಯಕ ನಿರ್ದೇಶಕರುಗಳಿಗೆ ಜೀವ ವ್ಯವಸ್ಥೆ ಮಾಡುವುದು. ಕೆಜಿಎಫ್‌ನಲ್ಲಿ ಒಂದು ಸೆಮಿನಾ‌ ಮಾಡಿ ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಲು ತೀರ್ಮಾನಿಸಿ ಅದನ್ನು ನಿರ್ವಹಿಸುವಂತೆ MSSUE ಮತ್ತು MSFC ಯ ಎಂಡಿಯವರೆಗೆ ಸೂಚನೆ ನೀಡಿದರು. ಆದರೆ ಜಿಲ್ಲೆಗೊಂದು ಜೀಪು ಕೊಡುವ ವಿಚಾರವಾಗಿ ಯಾವ ನಿರ್ಧಾರವನ್ನು ಕೊಡದೆ ಸ್ವಂತ ಕಾರು ಬಳಸಿದರೆ ಮೈಲೇಜು ನೀಡುವುದಾಗಿ ಸೂಚಿಸಿ ಅದರಂತೆ ಸುತ್ತೋಲೆ ಹೊರಡಿಸಲು ಜಂಟಿ ನಿರ್ದೇಶಕ (ಆಡಳಿತ)ರಿಗೆ ಸೂಚಿಸಿದರು.