ಪತ್ರಕರ್ತನ ಸರಹದ್ದು- ಒಂದು ಚರ್ಚೆ

ಪತ್ರಕರ್ತನ ಸರಹದ್ದು- ಒಂದು ಚರ್ಚೆ

ಪತ್ರಕರ್ತ ಮತ್ತು ಪತ್ರಿಕೋದ್ಯಮ

ದಿನೇಶ್‌ ಅಮಿನ್‌ ಮಟ್ಟು ‌

ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು( 2016ರಲ್ಲಿ) ಪತ್ರಕರ್ತನ ಸ್ವಾತಂತ್ರ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ಅವರು ಬರೆದಿದ್ದು:

ವೃತ್ತಿಯಾಗಿದ್ದ ಮಾಧ್ಯಮ ಕ್ಷೇತ್ರ ಸಂಪೂರ್ಣವಾಗಿ ಉದ್ಯಮವಾಗಿ ಬದಲಾವಣೆಯಾಗಿರುವ ವಾಸ್ತವವನ್ನು ಒಪ್ಪಿಕೊಂಡು ಇಂದಿನ ಪತ್ರಕರ್ತರು ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಆಕ್ಷೇಪ ಇದ್ದವರು ಬೇರೆ ದಾರಿ ನೋಡಿಕೊಳ್ಳಬೇಕಾಗುತ್ತದೆ. ಇದರ ಬದಲಿಗೆ 'ನಾನು ಒಳಗಿದ್ದೇ ಹೋರಾಡುತ್ತೇನೆ, ಇವರನ್ನೆಲ್ಲ ಬಯಲು ಮಾಡುತ್ತೇನೆ, ಇದನ್ನು ಬದಲಾಯಿಸಿಯೇ ತೀರುತ್ತೇನೆ” ಎಂದು ಹೊರಟವರ ಹೋರಾಟ ತಕ್ಷಣ ಫಲ ನೀಡಲಾರದು. ಆ ಹೋರಾಟದ ಹಾದಿ ಹಿಡಿದರೆ ಪತ್ರಕರ್ತನಾಗಿ ತಾನು ಮಾಡಬಯಸಿದ್ದನ್ನು ಕೂಡ ಮಾಡಲಾಗದೆ ಕೊರಗುತ್ತಾ ಇರಬೇಕು- ಇದು ನನ್ನ ಖಚಿತ ಅಭಿಪ್ರಾಯ.

'ಏನ್ಸಾರ್, ನೀವೂ ಹೀಗೆ ಹೇಳಿದರೆ ಹೇಗೆ?' ಎಂದು ನನ್ನ ಯುವ ಪತ್ರಕರ್ತ ಮಿತ್ರರು ನನ್ನನ್ನು ದಬಾಯಿಸಬಹುದು. ಉದ್ಯಮಿಗಳ ಹಿಡಿತದಿಂದ ಮಾಧ್ಯಮ ಕ್ಷೇತ್ರವನ್ನು ಬಿಡುಗಡೆಗೊಳಿಸುವುದು ಸುದೀರ್ಘವಾದ ಹೋರಾಟ. ಅದು ನನ್ನ ತಲೆಮಾರಿನಲ್ಲಿ ಮುಗಿಯುವ ಭರವಸೆ ನನಗಿಲ್ಲವಾದರೂ ಈ ಹೋರಾಟ ವ್ಯರ್ಥ ಎಂದು ನಾನು ಹೇಳಲಾರೆ. ಈ ಹೋರಾಟ ಮುಂದುವರೆಯಬೇಕು. ನ್ಯಾಯಾಲಯದ ಒಂದು ತೀರ್ಪು, ಜ್ಞಾನೋದಯದ ಫಲವಾಗಿ ಶಾಸಕಾಂಗ ಕೈಗೊಳ್ಳುವ ಒಂದು ಜನಪರ ತೀರ್ಮಾನ ಎಲ್ಲವನ್ನೂ ಬದಲಾಯಿಸಿಬಿಡಬಹುದೇನೋ? ಆ ಭರವಸೆ ನಮ್ಮಲ್ಲಿರಲಿ, ಆದರೆ ಆ ದಿನ ಬರುವವರೆಗೆ ನಾನು ಪೆನ್ ಕೈಗೆತ್ತಿಕೊಳ್ಳುವುದಿಲ್ಲ, ಕೀಪ್ಯಾಡ್ ಮುಟ್ಟುವುದೇ ಇಲ್ಲ ಎಂದು ಪತ್ರಕರ್ತರು ತೀರ್ಮಾನ ಕೈಗೊಂಡರೆ ಅದು ಮೂರ್ಖತನವಾಗುತ್ತದೆ. ನಮ್ಮಂತಹವರೆಲ್ಲ ಐಕಾನ್ ಎಂದು ಸ್ವೀಕರಿಸಿರುವ ಪಿ. ಸಾಯಿನಾಥ್ Everybody loves a good drought ಪುಸ್ತಕದ ಲೇಖನಗಳನ್ನು ಬರೆದಿರುವುದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಎನ್ನುವುದನ್ನು ಮರೆಯಬಾರದು, ಸಾಯಿನಾಥ್ ತನ್ನದೊಂದು ಆಸಕ್ತಿಯ ಕ್ಷೇತ್ರವನ್ನು ಹುಡುಕಿಕೊಳ್ಳದೆ ಮೊದಲು ಟೈಮ್ಸ್ ಆಫ್ ಇಂಡಿಯಾದೊಳಗೆ ಸಂಪಾದಕೀಯ ವಿಭಾಗದ ತಲೆ ಮೇಲೆ ಕೂತಿರುವ ಜಾಹೀರಾತು ವಿಭಾಗದವರ ವಿರುದ್ಧವೇ ಬರೆಯುತ್ತೇನೆ, ಇಲ್ಲದೆ ಇದ್ದರೆ ಅದರ ಮಾಲೀಕರಾದ ಜೈನ್‌ ಬಳಗದ ಉದ್ಯಮದ ಬಗ್ಗೆಯೇ ತನಿಖಾ ವರದಿ ಮಾಡುತ್ತೇನೆ ಎಂದು ಹೊರಟಿದ್ದರೆ ನಮಗೊಬ್ಬ ಸಾಯಿನಾಥ್‌ ಸಿಗುತ್ತಿರಲಿಲ್ಲ. ಸಾಯಿನಾಥ್‌ ಕೆಲಸ ಮಾಡಿದ ಪತ್ರಿಕೆಗಳಲ್ಲೆಲ್ಲಾ ಇಂತಹ ಬಿಕ್ಕಟ್ಟುಗಳಿದ್ದವು. ಕಾಸಿಗಾಗಿ ಸುದ್ದಿ ಹಗರಣದ ಬಗ್ಗೆ ಬರೆದದ್ದು ಇತ್ತೀಚಿನ ವರ್ಷಗಳಲ್ಲಿ, ಅಲ್ಲಿಯವರೆಗೆ ಸುದ್ದಿಯ ಛದ್ಮವೇಷದಲ್ಲಿ ಪ್ರಕಟಗೊಳ್ಳುತ್ತಿರುವ ಜಾಹೀರಾತು ಬಗ್ಗೆ ಅವರಿಗೆ ಗೊತ್ತಿರಲಿಲ್ಲವೇ? ಖಂಡಿತ ಗೊತ್ತಿತ್ತು. ಆದರೆ ಅವರ ಆದ್ಯತೆ ಬೇರೆ ಇತ್ತು. ಈ ವಿವೇಚನೆ ಒಬ್ಬ ಪತ್ರಕರ್ತನಿಗೆ ಇರಬೇಕೆಂದು ನನ್ನ ಅಭಿಪ್ರಾಯ, ಇದನ್ನು ಪ್ರಾಯೋಗಿಕ ನೋಟ ಎನ್ನುತ್ತೀರೋ? ವ್ಯವಸ್ಥೆಯ ಜೊತೆ ರಾಜಿ ಎನ್ನುತ್ತೀರೋ, ಇದು ನಿಮಗೆ ಬಿಟ್ಟದ್ದು.

ನಾನು ಪ್ರಜಾವಾಣಿಯಲ್ಲಿದ್ದಾಗ ಹೊಸಬರ ನೇಮಕದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದೆ. ಹೆಚ್ಚಿನವರಿಗೆ ವರದಿಗಾರರಾಗಬೇಕೆಂಬ, ಅದರಲ್ಲೂ ರಾಜಕೀಯ ವರದಿಗಾರರಾಗುವ ಆಸೆ. ಯಾರೊಬ್ಬರೂ “ನನಗೆ ಸಾಯಿನಾಥ್ ರೀತಿಯ ಪತ್ರಕರ್ತ ನಾಗಬೇಕೆಂಬ ಉದ್ದೇಶ” ಎಂದು ಹೇಳಿದ್ದನ್ನು ಕೇಳಿರಲಿಲ್ಲ. ಇದು ನಮ್ಮ ಸಮಸ್ಯೆ. ಆರು ವರ್ಷಗಳ ಹಿಂದೆ ನಾನು ತೀರಾ ಅನಾರೋಗ್ಯದಿಂದ ಚೇತರಿಸಿಕೊಂಡು ಕಚೇರಿಗೆ ಬಂದಾಗ ನಮ್ಮ ಸಂಪಾದಕರು ರಾಜ್ಯದಲ್ಲಿ ಅತಿವೃಷ್ಟಿ ಪೀಡಿತ ಪ್ರದೇಶದ ಪರಿಹಾರ ಕಾರ್ಯದ ಬಗ್ಗೆ ಹೋಗಿ ವರದಿ ಮಾಡಿ ಎಂದರು. ಆಗಿನ್ನೂ ನಾನು ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಯಾರಾದರೂ ಕಿರಿಯರು ತಾವು ಹೋಗ್ತೇವೆ' ಎಂದು ಕೈ ಎತ್ತಬಹುದೇ ಎಂದು ಕಾದೆ. ಯಾರೂ ಕಾಣಲಿಲ್ಲ. ಈಗ ಪತ್ರಿಕೋದ್ಯಮದ ಬಗ್ಗೆ ತಮ್ಮ ಅಂಕಣಗಳಲ್ಲಿ ಪಾಠ ಮಾಡುವ ನನ್ನ ಹಿರಿಯ ಸಹೋದ್ಯೋಗಿಗಳು ಕೂಡಾ ಬಾಯಿ ಬಿಟ್ಟಿರಲಿಲ್ಲ.

ಅದರ ನಂತರ ಅಸ್ಸಾಂ ಗಲಭೆಪೀಡಿತ ಪ್ರದೇಶಕ್ಕೆ ಹೋದೆ. ಉತ್ತರಪ್ರದೇಶದ  ತಿಂಗಳು ಸುತ್ತಿದೆ. ರಾಜ್ಯದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಸುಮಾರು 5000 ಕಿಮೀ ಸುತ್ತಿದೆ. ನನ್ನ ಡಂಗುರ ಬಾರಿಸಲು ಇದನ್ನು ಹೇಳುತ್ತಿಲ್ಲ. ನಾನು ಈ ವರದಿ ಮಾಡಲು ಹೋಗದೆ ಪ್ರಜಾವಾಣಿ ಮಾಲೀಕರು ಯಾವುದೋ ಡಿನೋಟಿಫಿಕೇಷನ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಬಗ್ಗೆಯೇ ವರದಿ ಮಾಡುತ್ತೇನೆಂದು ಪಟ್ಟು ಹಿಡಿದು ಕೂತಿದ್ದಲ್ಲಿ ನನಗೆ ಈ ವರದಿಗಳನ್ನು ಮಾಡಲು ಅವಕಾಶ ಸಿಗುತ್ತಿತ್ತೇ?

ಅಂದ ಹಾಗೆ ಇಂತಹ ಆರೋಪ- ಅನುಮಾನಗಳು ಗಾಳಿಯಲ್ಲಿ ಸುಳಿದಾಡುತ್ತಿರುವಾಗಲೇ ನಾನು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಕಟು ಟೀಕೆಗಳ ಅಂಕಣಗಳನ್ನು ಬರೆದೆ, ಸಂಪಾದಕರು ಅದರ ಒಂದು ಸಾಲು ಬದಲಿಸದೆ, ಸಣ್ಣ ಆಕ್ಷೇಪದ ಗೊಣಗಾಟವನ್ನೂ ಮಾಡದೆ ನನಗೆ ಸ್ವಾತಂತ್ರ್ಯ ಕೊಟ್ಟಿದ್ದರು. ನಾನು ಪ್ರಾಯೋಗಿಕವಾಗಿ ನೋಡಲು ಹೋಗಿ ವ್ಯವಸ್ಥೆಯ ಜೊತೆ ರಾಜಿ ಮಾಡಿಕೊಂಡೆ ಎಂದು ಹೇಳುತ್ತೀರಾ? ತೀರ್ಮಾನ ನಿಮಗೆ ಬಿಟ್ಟಿದ್ದು, ನನ್ನ ತೀರ್ಮಾನದ ಹಿಂದೆ ನಾನು ಪ್ರಾರಂಭದಲ್ಲಿಯೇ ಕಲಿತ ಪಾಠ ಮತ್ತು ಕಟು ವಾಸ್ತವದ ಅರಿವು ಇತ್ತು ಎಂದಷ್ಟೇ ಹೇಳಬಲ್ಲೆ.

ಮುಂಗಾರು ಪತ್ರಿಕೆಗೆ ಹೋಟೆಲ್ ಉದ್ಯಮಿ ರಾಂಪಣ್ಣ ಕೂಡಾ ಒಬ್ಬ ನಿರ್ದೇಶಕರಾಗಿದ್ದರು. ಅವರ ಮನೆಯಲ್ಲಿ ನಡೆದ ಭೂತದ ಕೋಲದ ಫೋಟೋ: ಮುಂಗಾರು ಪತ್ರಿಕೆಯಲ್ಲಿ ಪ್ರಕಟವಾಗಬೇಕೆಂದು ಅವರ ಬಯಕೆಯಾಗಿತ್ತು. ಇದಕ್ಕಾಗಿ ಆಗಿನ ನಮ್ಮ ಸಂಪಾದಕೀಯ ಬಳಗದಲ್ಲಿ ಒಂದು ದೊಡ್ಡ 'ಸೈದ್ಧಾಂತಿಕ ಯುದ್ಧ'ವೇ ನಡೆದಿತ್ತು. ತಿರುಗಿ ನೋಡಿದಾಗ ಆ ಯುದ್ಧದಲ್ಲಿ ಪಾಲ್ಗೊಂಡವರಿಗೂ ಅಂದಿನ ಜಗಳ ಬಾಲಿಶ ಅನಿಸಬಹುದು, ಮುಂಗಾರು ಇಂದಿಗೂ ಉಳಿದಿದ್ದರೆ ಅವಿಭಜಿತ ದಕ್ಷಿಣ ಕನ್ನಡ ತಥಾಕಥಿತ 'ಹಿಂದೂತ್ವದ ಪ್ರಯೋಗಶಾಲೆ' ಖಂಡಿತ ಆಗುತ್ತಿರಲಿಲ್ಲ ಎನ್ನುವುದು ನನ್ನ ನಂಬಿಕೆ. ವೃತ್ತಿಯ ಪ್ರಾರಂಭದ ದಿನಗಳಲ್ಲಿ ನಾನು ಬೆರಗುಕಣ್ಣುಗಳಿಂದ ನೋಡುತ್ತಿದ್ದ, ಗುರುವೆಂದು ಈಗಲೂ ತಿಳಿದುಕೊಂಡಿರುವ ಎನ್.ಎಸ್.ಶಂಕರ್ ಅವರ ಅಭಿಪ್ರಾಯ ಬೇರೆ ಇರಬಹುದೇನೋ? ಅದನ್ನು ತಿಳಿದುಕೊಳ್ಳುವ ಆಸೆ ನನಗೂ ಇದೆ.

 

ಪತ್ರಿಕೋದ್ಯಮ ಮತ್ತು ಸಮಾಜ ವಿಜ್ಞಾನ

ಎನ್.ಎಸ್.ಶಂಕರ್

ಪತ್ರಿಕೋದ್ಯಮ- ಹೆಸರೇ ಸೂಚಿಸುವಂತೆ, ಅಂದು ಇಂದು ಮುಂದೆ- ಎಂದೆಂದೂ ಉದ್ಯಮವೇ. ಅನ್ನ ಮಾಡಲು ಅಕ್ಕಿ ಬೇಕೇ ಬೇಕು ಎಂಬಷ್ಟೇ ಸರಳವಾದ ಅನಿವಾರ್ಯ ಸತ್ಯವಿದು. ಕೊನೇ ಪಕ್ಷ ಮುಖ್ಯವಾಹಿನಿ  ಪತ್ರಿಕೋದ್ಯಮದ ಮಟ್ಟಿಗಂತೂ ಇದು ನಿತ್ಯ ಸತ್ಯ. ಅಂದ ಮೇಲೆ ಉದ್ಯಮಿಗಳ ಹಿಡಿತದಿಂದ ಮಾಧ್ಯಮಗಳನ್ನು ಪಾರು ಮಾಡುವ ಮಾತಿಲ್ಲಿಯದು? ಮತ್ತು ಯಾವ ಉದ್ಯಮವೇ ಆದರೂ, ಅದಕ್ಕೊಂದು ಸ್ವಹಿತಾಸಕ್ತಿ ಇರಲೇಬೇಕು. ಆದ್ದರಿಂದ ಪತ್ರಕರ್ತರಾದವರಿಗೆ ಸ್ವಾತಂತ್ರ್ಯದ ಪರಿಧಿ ಇರುವಂತೆಯೇ ನಿಷಿದ್ಧ ವಲಯವೂ ಇದ್ದೇ ಇರುತ್ತದೆ. ತನ್ನ ಮಾಲೀಕರ ಸ್ವಹಿತಾಸಕ್ತಿ ವಲಯವನ್ನು ಆತ ಎಂದೂ ಅತಿಕ್ರಮಿಸಲಾರ.

ಈ ಕಟ್ಟುಪಾಡು ನಮಗೆ ಮೊದಮೊದಲು ದೊಡ್ಡ ಮುಜುಗರದ ಸಂಗತಿಯಾಗಿ ಕಂಡು ಬಾಧಿಸುತ್ತಿತ್ತು. ನಾವು ಪತ್ರಕರ್ತರು ‘ಎಲ್ಲ’ ವಿಷಯಗಳ ಬಗ್ಗೆಯೂ ಯಾಕೆ ನಿರ್ಬಂಧವಿಲ್ಲದೆ ಬರೆಯಲು ಸಾಧ್ಯವಿಲ್ಲ? ಈ ಪ್ರಶ್ನೆಯಿಟ್ಟುಕೊಂಡು ನಾವು ನಮ್ಮ ಸ್ವಾತಂತ್ರ್ಯ, ವೃತ್ತಿನಿಷ್ಠೆ, ಸಾರ್ಥಕ್ಯ ಎಲ್ಲ ಇದೊಂದೇ ಅಂಶದ ಮೇಲೆ ನಿಂತಿದೆ ಎಂಬಂತೆ ಬಿಸಿಬಿಸಿಯಾಗಿ ಗುದ್ದಾಡುತ್ತಿದ್ದವು. ನಮ್ಮ ಜೊತೆಗಾರರು ‘ನೀವು ಪ್ರಜಾವಾಣಿಯಲ್ಲಿ ಇದ್ದುಕೊಂಡೇ ಅಲ್ಲೇ ಸಾರಾಯಿ ಗುತ್ತಿಗೆದಾರರ ವಿರುದ್ಧ ಬರೆಯಲು ಸಾಧ್ಯವೇ?’ ಎಂದು ಹಂಗಿಸುವಂತೆ ಕೇಳಿದಾಗೆಲ್ಲ ಉತ್ತರವಿಲ್ಲದ್ದಕ್ಕೆ ನಮ್ಮ ಮುಖ ಕೆಂಪಾಗುತ್ತಿತ್ತು. ಜೊತೆಗೆ ನಾವೆಂಥ ಹುಂಬರಾಗಿದ್ದೆವೆಂದರೆ, ಪತ್ರಕರ್ತರಾಗಿ ನಾವು ಸಾರಾಯಿ ಗುತ್ತಿಗೆದಾರರ ವಿರುದ್ಧ ಬರೆಯಲೇಬೇಕಾದ ಪ್ರಮೇಯವೇನಿದೆ ಎಂದು ಪ್ರಶ್ನೆಯನ್ನು ಎಂದೂ ಎತ್ತಲೇ ಇಲ್ಲ!....

ಆದರೂ ಈ ಸ್ಥಿತಿ ಮೇಲ್ನೋಟಕ್ಕೆ ಕಾಣುವಂಥ ಅನಿಷ್ಟವೇನಲ್ಲ!

ಭಾರತದಲ್ಲಿ ಮೊದಲಿಂದಲೂ ಸಾಮಾನ್ಯವಾಗಿ ಮಾಲೀಕರು ಕೂಡ ಯಾವುದಾದರೂ ಧ್ಯೇಯಕ್ಕೆ ಬದ್ಧರಾಗಿಯೇ ಪತ್ರಿಕೆ ತರುತ್ತಿದ್ದುದರಿಂದ ಇಡೀ ಭಾರತೀಯ ಪತ್ರಿಕೋದ್ಯಮ ಹೆಚ್ಚೂ ಕಮ್ಮಿ ಸಾರ್ಥಕ ದಿಕ್ಕಿನಲ್ಲಿಯೇ ಚಲಿಸುತ್ತಿತ್ತು. (ಸಾಮಾಜಿಕ ಅನ್ಯಾಯಗಳ ಬಗ್ಗೆ ಮಾಧ್ಯಮಗಳು ಕಣ್ಣು ತೆರೆದಿದ್ದು ತೀರಾ ತಡವಾಗಿ ಎಂಬುದು ನಿಜವಾದರೂ ಅದು ಕೂಡ ಒಟ್ಟಾರೆ ಸಮಾಜದ ಕುರುಡಿನ ಪ್ರತಿಫಲನವಷ್ಟೇ.) ಸ್ವಾತಂತ್ರ್ಯಪೂರ್ವದಲ್ಲಿ ಸ್ವಾತಂತ್ರ್ಯ ಹೋರಾಟದ ಧ್ಯೇಯ, ಸಾತಂತ್ರ್ಯ ಬಂದ ಹೊಸದರಲ್ಲಿ ದೇಶ ಕಟ್ಟುವ ಕನಸು, 70ರ ದಶಕದಿಂದೀಚೆಗೆ ಪ್ರತಿಭಟನೆಯ ಸೊಲ್ಲು- ಹೀಗೆ. ಎಮರ್ಜೆನ್ಸಿಯಲ್ಲಿ ರಾಮನಾಥ ಗೋಯೆಂಕಾ ಪ್ರದರ್ಶಿಸಿದ ಎದೆಗಾರಿಕೆಯನ್ನು ಮರೆತು ‘ಇಂಡಿಯನ್ ಎಕ್ಸ್ ಪ್ರೆಸ್’ನ ವೀರೋಚಿತ ಹೋರಾಟ ನೆನೆಯಲು ಸಾಧ್ಯವೇ?

ಈ ವಾತಾವರಣ ಬದಲಾಗಿದ್ದು 90ರ ದಶಕದಿಂದೀಚೆಗೆ- ಜಾಗತೀಕರಣ ನಮ್ಮನ್ನು ಇಡಿಯಾಗಿ ನುಂಗತೊಡಗಿದ ಮೇಲೆ- ಎಲ್ಲವೂ ಮಾರುಕಟ್ಟೆಯ ಸರಕು ಎನ್ನುವಂತಾದ ಮೇಲೆ. ಆಗ ಸುದ್ದಿ ಕೂಡ ಸರಕಾಯಿತು. ಮಾಧ್ಯಮಗಳು ಸುದ್ದಿ ಮಾಲ್ಗಳಾಗಿ ಮಾರ್ಪಟ್ಟವು. ಪತ್ರಿಕೆಗಳಿಗಿಂತ ಹೆಚ್ಚಾಗಿ ಸುದ್ದಿ ವಾಹಿನಿಗಳ ಮಟ್ಟಿಗೆ ಇದು ಇನ್ನೂ ನಿಜ.

ಈ ಸ್ಥಿತಿಯಲ್ಲಿ ನಾವು ಪತ್ರಕರ್ತನ ಸ್ವಾತಂತ್ರ್ಯ ಮತ್ತು ಜವಾಬ್ದಾರಿಗಳ ಮಾತಾಡುತ್ತಿದ್ದೇವೆ.

*

ಈಗ ತುಸು ಹಿಂದೆ ಹೋಗುತ್ತೇನೆ. ‘ಮುಂಗಾರು’ ಬಳಗದ ಮೊಟ್ಟಮೊದಲ ಸಿಪಾಯಿ ನಾನು. ಮಿಕ್ಕವರು ಬಂದು ಸೇರುವ ತಿಂಗಳುಗಳ ಮೊದಲೇ ರಘುರಾಮ ಶೆಟ್ಟರೊಂದಿಗೆ ಊರೂರು ತಿರುಗುತ್ತ, ಮೊದಲ ಇಟ್ಟಿಗೆಯಿಂದ ಆ ಸಂಸ್ಥೆ ಕಟ್ಟುವುದರಲ್ಲಿ ಭಾಗಿಯಾದವನು. ಹಾಗೊಮ್ಮೆ ಸುತ್ತುವಾಗ ಅವರ ಮುಂದೆ ನನ್ನೊಳಗಿನ ಅತೃಪ್ತಿಗಳಿಗೆ ದನಿ ಕೊಟ್ಟು ಪತ್ರಿಕಾವೃತ್ತಿ ಎಂದರೆ ಸಮಾಜ ವಿಜ್ಞಾನ (ಸೋಶಿಯಲ್‌ ಸೈನ್ಸ್‌ ) ಅಂದೆ. ಅಂದರೆ ಮುಂಗಾರು ಹಿಡಿಯಬೇಕಾದ ಹಾದಿ ಅದು ಎಂಬ ಅರ್ಥದಲ್ಲಿ. ಹೀಗೆ ಹೇಳುವಾಗಲೂ ನನ್ನ ತಲೆಯಲ್ಲೂ ಅದೊಂದು ಅಸ್ಪಷ್ಟ ಕಲ್ಪನೆಯಷ್ಟೇ. ಆದರೆ ಶೆಟ್ಟರಿಗೆ ಅದು ಎಷ್ಟು ಇಷ್ಟವಾಗಿಬಿಟ್ಟಿತೆಂದರೆ ಅವರೂ ಆಗಾಗ ಅದನ್ನು ಉಚ್ಚರಿಸುತ್ತಿದ್ದರು! ‘ಮುಂಗಾರು’ ಆರಂಭದ ದಿನಗಳಲ್ಲಿ ನಾವು ಪತ್ರಿಕೆಯ ಮುಖಪುಟದಲ್ಲೇ ‘ಬದುಕು’ ಎಂದು ಹಾಕಿ ಯಾವುದಾದರೂ ನಿರ್ಲಕ್ಷಿತ ಸಮುದಾಯದ ಸ್ಥಿತಿ ಗತಿ ವರದಿ ಪ್ರಕಟಿಸುತ್ತಿದ್ದುದು ನಿಮ್ಮ ನೆನಪಿನಲ್ಲಿರಬಹುದು. ಅದು ಕೂಡ ಆ ಘೋಷವಾಕ್ಯವನ್ನು ಸಾಕಾರಗೊಳಿಸುವ ಹರುಕು ಮುರುಕು ಪ್ರಯತ್ನವೇ... ಆದರೆ ಆಗಲೂ ನಮ್ಮಿಂದ ಪತ್ರಿಕಾವೃತ್ತಿಯನ್ನು ಸಮಾಜ ವಿಜ್ಞಾನವನ್ನಾಗಿ ಎಂಬ ತತ್ವವನ್ನು ಆಚರಣೆಗೆ ತರಲು ಸಾಧ್ಯವಾಗಲಿಲ್ಲ. ಕಾರಣ- ಹಾಗೆಂದರೇನೆಂದು ನಮಗೇ ಸ್ಪಷ್ಟವಾಗಿರಲಿಲ್ಲ!

*

ನಾನು ಮಾಧ್ಯಮ ವಿದ್ಯಾರ್ಥಿಗಳೊಂದಿಗೆ ಚರ್ಚಿಸುವಾಗಲೆಲ್ಲ ಕೆಲವೊಂದು ಸಲಹೆಗಳನ್ನು ಅವರ ಮುಂದಿಡುತ್ತೇನೆ. ಅದು ಇಲ್ಲಿ ಪ್ರಸ್ತುತ ಎನಿಸಿದ್ದರಿಂದ ನಿಮ್ಮೊಂದಿಗೂ ಹಂಚಿಕೊಳ್ಳುತ್ತೇನೆ:

“ಈ ಭಾರತೀಯ ಸಮಾಜವನ್ನು ಅರ್ಥ ಮಾಡಿಕೊಳ್ಳದವನು ಇಲ್ಲಿ ಪತ್ರಕರ್ತನಾಗಲು ಸಾಧ್ಯವೇ ಇಲ್ಲ. ಆದರೆ ಇಷ್ಟು ಅಗಾಧವಾದ, ಜಟಿಲವಾದ ಈ ಸಮಾಜವನ್ನು ಅರಿಯುವುದು ಹೇಗೆ? ಎಲ್ಲಿಂದ ಆರಂಭಿಸುವುದು? ಅದಕ್ಕೆ ನಿಮಗೊಂದು ಸುಲಭದ ದಾರಿ ಹೇಳುತ್ತೇನೆ. ನೀವು ಮೊದಲು ನಿಮಗೆ ನೀವೇ ಎರಡು ಪ್ರಶ್ನೆಗಳನ್ನು ಕೇಳಿಕೊಳ್ಳಿ:

ಕಳೆದ ಇಪ್ಪತ್ತು ವರ್ಷಗಳಲ್ಲಿ ದೇಶದಲ್ಲಿ ಸುಮಾರು ಮೂರು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾಕೆ?

ದೇಶಕ್ಕೆ ಸ್ವಾತಂತ್ರ್ಯ ಬಂದು 68 ವರ್ಷದ ಮೇಲಾಯಿತು, ಆದರೆ ಈಗಲೂ ಸಮ್ಮ ಸಮಾಜದಲ್ಲಿ ಅಸ್ಪೃಶ್ಯತೆ ಹೋಗಿಲ್ಲವಲ್ಲ, ಯಾಕೆ?

ನೀವು ಈ ಎರಡು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದ ಹಾಗೆ ನಿಮಗೆ ಈ ಸಮಾಜ ಅರ್ಥವಾಗುತ್ತ ಹೋಗುತ್ತದೆ” ಎಂದು ಆ ವಿದ್ಯಾರ್ಥಿಗಳನ್ನು ಕೆಣಕಲು ಯತ್ನಿಸುತ್ತಿದ್ದೆ.

ವಿದ್ಯಾರ್ಥಿಗಳಷ್ಟೇ ಅಲ್ಲ, ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ನಮ್ಮ- ಅಂದರೆ ಪತ್ರಕರ್ತರ ಕಸುಬೂ ಹೌದು, ಕಾರ್ಯಕ್ಷೇತ್ರವೂ ಹೌದು, ನನ್ನ ಪ್ರಕಾರ.

ಮತ್ತು ಪತ್ರಿಕಾವೃತ್ತಿಯನ್ನು ಸಮಾಜ ವಿಜ್ಞಾನವಾಗಿ  ಎಂದರೇನು ಎನ್ನಲೂ ಇಲ್ಲಿ ಸುಳಿವುಗಳಿವೆ, ಬಹುಶಃ.

***

ಮೂರು ದಶಕಗಳಿಂದಲೂ ಈ ಗೊಂದಲ- ಪ್ರಶ್ನೆಗಳನ್ನಿಟ್ಟುಕೊಂಡೇ ಬಂದಿದ್ದೇನೆ. ಆಗಂತೂ ಯಾವ ಸ್ಪಷ್ಟತೆಯೂ ಇರಲಿಲ್ಲ, ಆದರೀಗ ಅಷ್ಟೊಂದೇನೂ ಗೊಂದಲವಿಲ್ಲ. ಹಾಗಾಗಿ ಈಗ, ಪತ್ರಕರ್ತನ ಸ್ವಾತಂತ್ರ್ಯ ಜವಾಬ್ದಾರಿಗಳ ಬಗ್ಗೆ ನಾವು ಆಡುತ್ತಿರುವ ಮಾತುಗಳ ʼಸಂದರ್ಭʼವನ್ನೇ  ಪಲ್ಟಾಯಿಸುವುದು ತೀರಾ ಅಗತ್ಯವೆಂದು ಅನಿಸತೊಡಗಿದೆ. ಅಂದರೆ ‘ಯಾವುದು ಸುದ್ದಿ’ ಎಂಬ ನಮ್ಮ ಮೂಲಭೂತ ಕಲ್ಪನೆಗಳೇ ಬದಲಾಗದಿದ್ದರೆ ನಮ್ಮ ಲೋಕ ಬೆಳೆಯುವುದೇ ಇಲ್ಲ. (ಒಂದು ಮಟ್ಟಕ್ಕೆ ಸುದ್ದಿ ವಾಹಿನಿಗಳು ಟಿಆರ್‌ ಪಿ ಸುತ್ತಲೇ ಸುದ್ದಿಯ ಹೊಸ ವ್ಯಾಖ್ಯಾನವನ್ನು ರೂಪಿಸಿಬಿಟ್ಟಿವೆ! ಅದನ್ನು ಬಿಟ್ಟೇ ಮಾತನಾಡೋಣ.)

ಅಂದರೆ ಇದುವರೆಗೆ ನಾವು ರಾಜಕೀಯದ ಸುತ್ತ (ಅಂದರೆ ರಾಜಕೀಯ ಪ್ರಕ್ರಿಯೆಯೂ ಅಲ್ಲ, ಕೇವಲ ದಿನದಿನದ ರಾಜಕೀಯ ಘಟನಾವಳಿಗಳ ಸುತ್ತ) ನಮ್ಮ ಸುದ್ದಿಯ ವ್ಯಾಖ್ಯಾನವನ್ನು ಕಟ್ಟಿಕೊಂಡಿದ್ದೇವೆ. ನನ್ನ ಪ್ರಕಾರ ಇದು ತೀರಾ ತೀರಾ ಸೀಮಿತವಾದ- ಕೂಪಮಂಡೂಕ- ಪರಿಧಿ. ನನ್ನ ಪ್ರಕಾರ ನಮ್ಮ ದೃಷ್ಟಿ ಕೇಂದ್ರ ಈಗಲಾದರೂ ವಿಧಾನಸೌಧದ ಬದಲು ಸಮಾಜದತ್ತ ತಿರುಗಬೇಕು. ಅಂದರೆ ನಮ್ಮ ಗಮನವಿರಬೇಕಾದ್ದು ಈ ಕಾಲಮಾನದ ಮೂಲ ಸಂಘರ್ಷಗಳ ಕಡೆಗೆ. (ಅದರಲ್ಲಿ ರಾಜಕೀಯವೂ ಇರುತ್ತದೆ, ಒಂದು ಭಾಗವಾಗಿ ಮಾತ್ರ.) ಈ ದೃಷ್ಟಿಪಲ್ಲಟ ಸಂಭವಿಸದೆ, ನೀವು ನಮ್ಮೆಲ್ಲರ ಐಕಾನ್ ಎಂದು ಸೂಕ್ತವಾಗಿಯೇ ಉಲ್ಲೇಖಿಸುವ ಪಿ. ಸಾಯಿನಾಥ್ ಜನ್ಮ ತಳೆಯುತ್ತಲೇ ಇರಲಿಲ್ಲ.

ಮಾಧ್ಯಮಗಳಲ್ಲಿ ಈ ತಿಳಿವು ಮೂಡಿದ ದಿನ- ಪತ್ರಕರ್ತನ ಸ್ವಾತಂತ್ರ್ಯ ಜವಾಬ್ದಾರಿಗಳ ಪ್ರಶ್ನೆಗೆ ಬೇರೆಯೇ ಬಣ್ಣ ಬರುತ್ತದೆ. ನಮ್ಮ ಬಿಕ್ಕಟ್ಟುಗಳ ಸ್ವರೂಪವೂ ಬದಲಾಗುತ್ತದೆ. ಈಗ ಕೆಲವರು ಯಾವುದನ್ನು ರಾಜಿ ಹೊಂದಾಣಿಕೆ ಎನ್ನುತ್ತಿದ್ದಾರೋ, ಆಗ ಆ ಮಾತೇ ಹಾಸ್ಯಾಸ್ಪದವಾಗಿ ಕಾಣತೊಡಗುತ್ತದೆ.

ಈ ತಿಳುವಳಿಕೆಯಿದ್ದರೆ, ಒಟ್ಟಾರೆ ನಂನಮ್ಮ ವೈಯಕ್ತಿಕ ತಾತ್ವಿಕ ನಿಲುವಿಗೆ ತೀರಾ ವಿರುದ್ಧವಿರದ ಯಾವ ಮಾಧ್ಯಮದಲ್ಲೂ, ರಾಜಿ ಹೊಂದಾಣಿಕೆಯ ಪ್ರಸಂಗ ಎದುರಾಗುವ ಮೊದಲೇ, ನಾವು ಒಂದು ಜೀವಮಾನಕ್ಕಾಗುವಷ್ಟು ಕೆಲಸಗಳನ್ನು ಮಾಡಬಹುದು. ಮಾಡಲೂಬೇಕು.