ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ ಸಾವರ್ಕರ್ ಅಂಡಮಾನಿನ ಜೈಲಿನಿಂದ ಬುಲ್ ಬುಲ್ ಹಕ್ಕಿಯ ರೆಕ್ಕೆಯೇರಿ ದಿನವೂ ತಾಯ್ನಾಡಿಗೆ ಬಂದು ಹೋಗುತ್ತಿದ್ದರಂತೆ!?
ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ ಸಾವರ್ಕರ್ ಅಂಡಮಾನಿನ ಜೈಲಿನಿಂದ ಬುಲ್ ಬುಲ್ ಹಕ್ಕಿಯ ರೆಕ್ಕೆಯೇರಿ ದಿನವೂ ತಾಯ್ನಾಡಿಗೆ ಬಂದು ಹೋಗುತ್ತಿದ್ದರಂತೆ!?
ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ
ಸಾವರ್ಕರ್ ಅಂಡಮಾನಿನ ಜೈಲಿನಿಂದ
ಬುಲ್ ಬುಲ್ ಹಕ್ಕಿಯ ರೆಕ್ಕೆಯೇರಿ ದಿನವೂ
ತಾಯ್ನಾಡಿಗೆ ಬಂದು ಹೋಗುತ್ತಿದ್ದರಂತೆ!?
ಕಾಲಗಳಲ್ಲಿ ಎಷ್ಟು ವಿಧ ಎಂದು ವಿದ್ಯಾರ್ಥಿಗಳನ್ನು ಕೇಳಿದರೆ , ಭೂತ ಕಾಲ, ವರ್ತಮಾನ ಕಾಲ ಹಾಗೂ ಭವಿಷ್ಯ ಕಾಲ ಎನ್ನುವ ಕಾಲವೊಂದಿತ್ತು. ಈಗ ದೇಶದಲ್ಲಿ ಘಟಿಸುತ್ತಿರುವ ಅವಾಂತರಗಳನ್ನು ತೀವ್ರವಾಗಿ ಗಮನಿಸುತ್ತಿರುವವರ ಮುಂದೆ ಈ ಪ್ರಶ್ನೆ ಇರಿಸಿದರೆ, ಅವರು ಕೆಟ್ಟ ಕಾಲ ಮತ್ತು ಒಳ್ಳೆ ಕಾಲ ಎನ್ನುತ್ತ ನಿಟ್ಟುಸಿರು ಬಿಡಬಹುದಷ್ಟೇ.
ಚಟಾಕು, ಅರಪಾವು, ಪಾವು, ಅಚ್ಚೇರು, ಸೇರು, ದಡಿಯ, ಇಬ್ಬಳಿಗೆ, ಕೊಳಗ, ಮಣ, ಪಲ್ಲ ಹಾಗೂ ಖಂಡುಗದ ಕಾಲ ಹೋಗಿ, ಕಿಲೋಗ್ರಾಮು ಮಿಲಿಗ್ರಾಮುಗಳ ಕಾಲದಲ್ಲಿದ್ದೇವೆ ನಾವೀಗ. ದೇಶಕ್ಕೆ ಸ್ವಾತಂತ್ರö್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿಯ ಸಂಗಾತಿಗಳು ಆಳುತ್ತಿದ್ದ ಕಾಲ ಹೋಗಿ ಪಾಪದ ವಯೋವೃದ್ಧ ನಿರಾಯುಧ ಗಾಂಧೀಜಿಯನ್ನು ಕೊಂದವನನ್ನು, ಕೊಲ್ಲಲು ಪಿತೂರಿ ಮಾಡಿದವರನ್ನು ಆರಾಧಿಸುವವರು ಆಳುತ್ತಿರುವ ಕಾಲದಲ್ಲಿದ್ದೇವೆ. ಇಂತಾ ದುರಂತಕ್ಕೆ ಮತ್ತು ದುರಿತ ದಿನಗಳಿಗೆ ಯಾರೋ ಕಾರಣರು ಅಂತ ಅವರಿವರನ್ನು ದೂಷಿಸುವ ಅಗತ್ಯವಿಲ್ಲ. ವಿದೇಶಿ ಬ್ರಿಟಿಷರನ್ನು ದೇಶದಿಂದ ಹೊರಹಾಕಿಬಿಟ್ಟೆವು ಎನ್ನುವ ನೆಮ್ಮದಿಯಲ್ಲಿ ದೇಶದ ಭವಿಷ್ಯತ್ತನ್ನು ಮರೆತು, ವರ್ತಮಾನದಲ್ಲಿ ಹೊಣೆಗೇಡಿಗಳಾಗಿ ಬಿಟ್ಟ ನಾವೇ ಇವತ್ತಿನ ದುರಂತಕ್ಕೆ ಕಾರಣವಾಗಿದ್ದೇವೆ.
ಐದು ವರ್ಷ ಅಥವಾ ಕೆಲವೊಮ್ಮೆ ಆ ನಡುವೆಯೂ ಬರುವ ಚುನಾವಣೆಗಳಲ್ಲಿ ಆ ಕ್ಷಣದ ಬಣ್ಣದ ಮಾತುಗಳಿಗೆ ಮರುಳಾಗಿ ಓಟು ಒತ್ತಿದವರು ಪರಿತಪಿಸತೊಡಗಿದ್ದಾರೆ. ಪ್ರಕೃತಿ ದತ್ತ ನೀರಿಗೂ ಹಣ ಪಾವತಿಸುವ ಕಾಲ ಬಂದಿತು ಎನ್ನುವ ಅಚ್ಚರಿಯ ಮಾತು ಹಳತೀಗ, ಕಾಸು ಕೊಟ್ಟರೂ ಶುದ್ಧ ನೀರು ದೊರೆಯುವ ಖಾತರಿ ಇಲ್ಲ. 35-45 ರೂಪಾಯಿಗೆ ಆಮದಾಗುವ ಪೆಟ್ರೋಲಿಗೆ 105 ರೂ ಪೀಕುವ ಸರ್ಕಾರಗಳು ಥೇಟ್ ದಳ್ಳಾಳಿಗಳಂತೆ ವರ್ತಿಸುತ್ತಿವೆ ಅಂತ ನಿಮಗ್ಯಾರಿಗೂ ಅನಿಸುತ್ತಿಲ್ಲವೇ.
ಜನಪ್ರಿಯ ಸರ್ಕಾರಗಳು ಬಡತನದಲ್ಲಿರುವ ಕುಟುಂಬಗಳಿಗೆ ಎರಡೊತ್ತು ಹೊಟ್ಟೆ ತುಂಬ ಊಟ, ಮೈ ತುಂಬ ಎರಡು ಜೊತೆ ಬಟ್ಟೆ, ವಾಸಕ್ಕೆ ಖಾಯಂ ಸೂರು ಒದಗಿಸುವುದು ತಪ್ಪು , ಈ ಕುರಿತು ಅಧ್ಯಯನ ನಡೆಯಬೇಕು ಎಂದು ಸುಪ್ರೀಂ ಕೋರ್ಟು ಆದೇಶ ನೀಡುತ್ತದೆ, ಆದರೆ ಅದೇ ನ್ಯಾಯಾಲಯಗಳ ನ್ಯಾಯಮೂರ್ತಿಗಳು ವಯೋನಿವೃತ್ತಿ ಹೊಂದಿದ ಮೇಲೂ ಮನೆಕೆಲಸಕ್ಕೆ ಕರೆದುಕೊಳ್ಳುವ ಹೋಮ್ ಆರ್ಡರ್ಲಿಗಳಿಗೆ ನೀಡುತ್ತಿರುವ 25 ಸಾವಿರ ಪಗಾರವನ್ನು 70 ಸಾವಿರಕ್ಕೇರಿಸಿ ಎಂದು ಸರ್ಕಾರಕ್ಕೆ ದುಂಬಾಲು ಬೀಳುತ್ತಾರೆ. ಜೀವನಪೂರ್ತಿ ಅವರು ಮತ್ತು ಅವರ ಕುಟುಂಬದ ಸದಸ್ಯರಿಗೆ ಉಚಿತ ವೈದ್ಯಕೀಯ ಚಿಕಿತ್ಸಾ ವೆಚ್ಚದ 100% ಮರುಪಾವತಿ ಪಡೆಯುತ್ತಾರೆ ಎನ್ನುವುದು ಸುಳ್ಳಲ್ಲ. ಅವರು ಪಡೆಯುವುದಕ್ಕೆ ನಮ್ಮ ವಿರೋಧವಿಲ್ಲ, ಇಲ್ಲದವರಿಗೆ ಸರ್ಕಾರ ಕೊಡುವುದಕ್ಕೂ ಕಲ್ಲು ಹಾಕುವುದೇತಕ್ಕೆ ಎನ್ನುವುದೇ ಪ್ರಶ್ನೆ.
ಯಾವ್ಯಾವ ದೇಶಗಳಲ್ಲಿ ಹೇಗಿದೆಯೋ ಗೊತ್ತಿಲ್ಲ, ನಮ್ಮ ರಿಪಬ್ಲಿಕ್ ಆಫ್ ಇಂಡಿಯಾ ಅಥವಾ ಭಾರತ ಗಣರಾಜ್ಯದಲ್ಲಿ ಸುಳ್ಳೇ ನಮ್ಮ ತಾಯಿ ತಂದೆ ಎನ್ನುತ್ತಿದೆ ನಮ್ಮನ್ನಾಳುವ ಬಿಜೆಪಿ, ತಿನ್ನಲು ಏನೂ ದೊರಕಿದ್ದರೆ ನರಿ ತನ್ನ ಬಾಲವನ್ನೇ ಕಚ್ಚಿಕೊಳ್ಳುತ್ತದಂತೆ. ಭಾರತೀಯ ಜನತಾ ಪಾರ್ಟಿಯ ಪರಿಸ್ಥಿತಿಯೂ ಹಾಗೇ ಆಗಿಬಿಟ್ಟಿದೆ. ಸ್ವಾತಂತ್ರ್ಯದ 75ನೇ ವರ್ಷಾಚರಣೆಯನ್ನು ಅಮೃತ ಮಹೋತ್ಸವ ವರ್ಷ ಅಂತ ವೈಭವೀಕರಿಸಲು ಹೋಗಿ ದೇಶದಲ್ಲಿ ಎಲ್ಲರೂ ಅವರ ಮನೆ ಮೇಲೆ ಮೂರು ದಿನ ರಾಷ್ಟç ಧ್ವಜ ಹಾರಿಸಿ ಎಂಬ ಕರೆ ಕೊಟ್ಟರು ಮಾನ್ಯ ಪ್ರಧಾನಿ. ಮನೆ ಇರುವವರಿಗೇನೋ ಈ ಕರೆ ಸರಿಹೋಯಿತು, ಮನೆಯೇ ಇಲ್ಲದವರು ಏನು ಮಾಡಬೇಕು ಎನ್ನುವ ವ್ಯಂಗ್ಯ ಚಿತ್ರಗಳು ವೈರಲ್ ಆದವು. ಸದಾ ಮೇಕ್ ಇನ್ ಇಂಡಿಯಾ ಹಾಗೂ ಆತ್ಮ ನಿರ್ಭರ ಭಾರತ ಎಂದು ಭಾಷಣ ಬಿಗಿಯುವ ಅಸಾಮಿಯೇ ಕೈಯಲ್ಲಿ ನೂಲು ತೆಗೆದು ಕೈಮಗ್ಗದಲ್ಲಿ ನೇಯ್ದ ಬಾವುಟಗಳನ್ನು ಕಡ್ಡಾಯವಾಗಿ ಬಳಸಿ ಎನ್ನಬೇಕಿತ್ತಲ್ವಾ, ಇಲ್ಲ ಬದಲಿಗೆ ನೈಸರ್ಗಿಕ ಹತ್ತಿಯ ಬದಲು ಕೃತಕ ಪಾಲಿಯೆಸ್ಟರ್ ಬಟ್ಟೆಯಲ್ಲಿ ಮುದ್ರಿಸಿದ, ವಿದೇಶ ಚೀನಾದಲ್ಲಿ ತಯಾರಿಸಿದ ಧ್ವಜಗಳನ್ನು ತರಿಸಿಕೊಳ್ಳಲು ಅನುಮತಿ ನೀಡಿದರು. ಪರಿಣಾಮ ಅವರ ಆಸೆಯೇನೂ ಈಡೇರಿತು, ಮೂರು ದಿನಗಳಾದ ಮೇಲೂ ಮನೆಗಳಿಂದ ಧ್ವಜಗಳು ಕೆಳಗಿಳಿಯಲಿಲ್ಲ, ಗಾಳಿಗೆ ಹಾರಿ ಕಸದ ರಾಶಿಯಲ್ಲಿ ಸೇರಿ ಹೋದವು. ಕಡೇ ಪಕ್ಷ ಒಂದು ಸಾವಿರ ಕೋಟಿ ರೂಪಾಯಿ ಅನ್ಯರ ಪಾಲಾಯಿತು.
ಯಾರಿಗೆ ಏನು ಇರುವುದಿಲ್ಲವೋ ಅದನ್ನು ತನ್ನದನ್ನಾಗಿ ಮಾಡಿಕೊಳ್ಳುವುದೇ ಜೀವನದ ಧ್ಯೇಯವಾಗಿಬಿಟ್ಟಿರುತ್ತದೆಯೋ ಹಾಗೆ ದೇಶದ ಸ್ವಾತಂತ್ರ್ಯ ಹೋರಾಟದ ಮುಖ್ಯವಾಹಿನಿ ಇತಿಹಾಸದಲ್ಲಿ ನೆಲೆಯೇ ಇಲ್ಲದ ಈ ಪಕ್ಷ ಹಾಗೂ ಅದರ ಮಾತೃ ಸಂಘಟನೆ ಆರ್ ಎಸ್ ಎಸ್‌ಗೆ ಈ ಇತಿಹಾಸದ ಪುಟಗಳಲ್ಲಿ ದಾಖಲಾಗುವ ಮಹದಂಬಲ ಸದಾ ಇದ್ದದ್ದೇ. ಹಾಗಾಗಿ ಆಗಸ್ಟ್ 15ರ ಸಂದರ್ಭದಲ್ಲಿ ನೀಡಿದ ಜಾಹಿರಾತಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಹತ್ತು ವರ್ಷ ಜೈಲಿನಲ್ಲಿದ್ದು, ಆ ಬಳಿಕ ಸುದೀರ್ಘ ಅವಧಿಗೆ ದೇಶವನ್ನು ಮುನ್ನಡೆಸಿದ ದಿವಂಗತ ಪ್ರಧಾನಿ ಜವಹರಲಾಲ ನೆಹರೂ ಭಾವಚಿತ್ರ ಮತ್ತು ಮಾಹಿತಿಯನ್ನು ಮರೆಮಾಚಿ, ಆ ಬದಲಿಗೆ ಹಿಂದೂ ಮಹಾ ಸಭಾ ನಾಯಕ ದಿವಂಗತ ವಿನಾಯಕ ದಾಮೋದರ ಸಾವರ್ಕರ್ ಭಾವಚಿತ್ರ ಹಾಗೂ ಮಾಹಿತಿ ಹಾಕಿ ಮೆರೆಯಿತು. ಅದೇ ನೆಪವಾಗಿ ವಾದ, ವಾಗ್ವಾದಗಳು ನಡೆಯುತ್ತ, ಶಿವಮೊಗ್ಗ, ಭದ್ರಾವತಿ, ತುಮಕೂರುಗಳಲ್ಲಿ ಸಾವರ್ಕರ್ ಭಾವಚಿತ್ರವಿದ್ದ ಫ್ಲೆಕ್ಸ್ಗಳನ್ನು ಕಿತ್ತ, ಹರಿದ ಪ್ರಕರಣಗಳು ಸೃಷ್ಟಿಯಾದವು. ಅಷ್ಟು ನೆಪ ಸಾಕಿತ್ತು, ಸಾವರ್ಕರ್ ರಥ ಯಾತ್ರೆ ಘೋಷಣೆಯಾಯಿತು. ಬರುವ ಗಣೇಶೋತ್ಸವಗಳಲ್ಲಿ ಸಾವರ್ಕರ್ ಭಾವಚಿತ್ರ ಹಾಕಿ ಎಂಬ ಫರ‍್ಮಾನು ಹೊರಟಿದೆ. ಎಲ್ಲಿಯ ಗಣೇಶ ಎಲ್ಲಿಯ ಸಾವರ್ಕರ್.
ಇದೇ ಗುಂಗಿನಲ್ಲಿ ತುಮಕೂರು ವಿಶ್ವವಿದ್ಯಾಲಯದಲ್ಲೂ ಸಾವರ್ಕರ್ ಅಧ್ಯಯನ ಪೀಠ ಸ್ಥಾಪಿಸಲು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆಯಂತೆ, ಸಿಂಡಿಕೇಟ್ ಸದಸ್ಯರೇ ತಲಾ ಲಕ್ಷ, 25 ಸಾವಿರ ರೂಪಾಯಿ ಅನುದಾನ ನೀಡಲಿದ್ದಾರೆ ಎನ್ನುವುದು ಸುದ್ದಿ. ಸಾವರ್ಕರ್ ಕುರಿತು ಅಧ್ಯಯನ ಮಾಡುವುದೇನೂ ಅಪರಾಧ ಅಥವಾ ದೇಶ ದ್ರೋಹದ ಕರ‍್ಯವಲ್ಲ. ಆದರೆ ಇಲ್ಲ ಸಲ್ಲದ್ದನ್ನು ನಡೆದೇ ಇರದ ಸಂಗತಿಗಳನ್ನು ದಾಖಲಿಸಿ ಇತಿಹಾಸ ಎಂಬುದಾಗಿ ದಾಖಲಿಸಿವುದು ಹಾಗೂ ವಾಸ್ತವದಲ್ಲಿ ನಡೆದ ಸಂಗತಿಗಳನ್ನು ಸಾರ್ವಜನಿಕರ ಕಣ್ಣಿನಿಂದ ಮರೆ ಮಾಚಿ ಇಡುವುದು ಮಾತ್ರ ಅಪರಾಧ ಎನಿಸಿಕೊಳ್ಳುತ್ತದೆ.
ಉದಾಹರಣೆಗೆ ನಮ್ಮ ಎಂಟನೇ ತರಗತಿಯ ಕನ್ನಡ -2 ಪಠ್ಯದಲ್ಲಿ ಕೆ.ಟಿ.ಗಟ್ಟಿಯವರ ‘ ಕಾಲವನ್ನು ಗೆದ್ದವರು’ ಪಾಠದಲ್ಲಿ, ಇದೇ ಸಾವರ್ಕರ್ ಬ್ರಿಟಿಷ್ ಅಧಿಕಾರಿಯನ್ನು ಲಂಡನ್‌ನಲ್ಲಿ ಗುಂಡಿಟ್ಟು ಕೊಂದ ಪ್ರಕರಣದಲ್ಲಿ ಪಿತೂರಿ ಮಾಡಿದ ಆಪಾದನೆ ಮೇರೆಗೆ ಅಂಡಮಾನಿನ ಸೆಲ್ಯುಲರ್ ಜೇಲಿನಲ್ಲಿ ಕರಿನೀರಿನ ಶಿಕ್ಷೆ ಅನುಭವಿಸುವಾಗ ಒಂದು ನೊಣವೂ ಒಳಗೆ ಬರಲು ಸಂದಿಯಿಲ್ಲದ ಕತ್ತಲ ಕೋಣೆಯಲ್ಲಿದ್ದಾಗ ದಿನವೂ ಬುಲ್ ಬುಲ್ ಹಕ್ಕಿಯ ರೆಕ್ಕೆಯ ಮೇಲೇರಿ ದಿನವೂ ತಾಯ್ನಾಡಿಗೆ ಹೋಗಿ ಬರುತ್ತಿದ್ದರು ಎಂದು ಬರೆದು ಪ್ರಕಟಿಸಿ, ಎಳೆಯ ಮನಸುಗಳಿಗೆ ಓದಿಸುವುದಿದೆಯಲ್ಲ, ಅದನ್ನು ಹೇಗೆ ಚಿಕ್ಕ ಮಕ್ಕಳಿಗೆ ಅರ್ಥ ಮಾಡಿಸುವುದು ಎಂದು ಶಿಕ್ಷಕರು ಗೋಳಾಡುವುದಿದೆಯಲ್ಲ, ಶಿಕ್ಷಕರ ಈ ದೂರನ್ನು ಕೇಳಿದ ಮಾನ್ಯ ಶಿಕ್ಷಣ ಸಚಿವರು, ಪರ‍್ವಾಗಿಲ್ಲ, ಸಾವರ್ಕರ ದೊಡ್ಡ ದೇಶ ಪ್ರೇಮಿ, ಹಾಗೆ ವೈಭವೀಕರಿಸಿದರೆ ತಪ್ಪಲ್ಲ ಎಂದು ಲಜ್ಜೆಯಿಲ್ಲದೇ ಸಮರ್ಥಿಸಿಕೊಳ್ಳುವುದಿದೆಯಲ್ಲ ಅದು ಇತಿಹಾಸದ ಕಣ್ಣಲ್ಲಿ ಅಪರಾಧ ಎನಿಸಿಕೊಳ್ಳುತ್ತದೆ.
ನಮ್ಮ ದೇಶದಲ್ಲಿ ‘ಭೂತ’ಕಾಲವು ನಮ್ಮ ವರ್ತಮಾನ ಹಾಗೂ ಭವಿಷ್ಯತ್ ಕಾಲಗಳನ್ನು ನುಂಗಿ ನೊಣೆಯುತ್ತಿರುವುದು ಹೀಗೆಯೇ. ಆದ್ದರಿಂದ , ತುಮಕೂರು ವಿಶ್ವವಿದ್ಯಾಲಯದಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತ ಅಧ್ಯಯನ ಪೀಠವೂ ಸ್ಥಾಪನೆಯಾಗಲಿ, ಅವರ ಕುರಿತ ವಸ್ತು ನಿಷ್ಟ , ಇತಿಹಾಸದ ವಾಸ್ತವಿಕ ಅಂಶಗಳನ್ನು ಆಧರಿಸಿದ ಸಮಗ್ರ ಪ್ರಾಮಾಣಿಕ ಅಧ್ಯಯನವೂ ನಡೆಯಲಿ.
ಹಿಂದೂ ಮತ್ತು ಮುಸ್ಲಿಂ ಆಧಾರದ ಮೇಲೆ ದ್ವಿ ರಾಷ್ಟç ಸಿದ್ಧಾಂತವನ್ನು ಮೊದಲು ಪ್ರತಿಪಾದಿಸಿದ್ದು ಯಾರು , ಗಾಂಧೀನಾ, ನೆಹರೂನ ಆಥವಾ ಸಾವಕರ‍್ರಾ ಎಂಬುದು ಸಾಬೀತಾಗಲಿ, ಪಾಕಿಸ್ತಾನದ ಮೊದಲ ಗವರ್ನರ್ ಜನರಲ್ ಮಹಮ್ಮದ್ ಆಲಿ ಜಿನ್ನಾ ಮತ್ತು ಮುಸ್ಲಿಂ ಲೀಗ್ ಜೊತೆ ಸೇರಿ ಸ್ವಾತಂತ್ರö್ಯ ಪೂರ್ವದಲ್ಲಿ ಸಮ್ಮಿಶ್ರ ಸರ್ಕಾರಗಳನ್ನು ಮಾಡಿದ್ದು ಯಾರು ಎಂಬುದು ಸಾಬೀತಾಗಲಿ, ನೇತಾಜಿ ಸುಭಾಶ್ ಚಂದ್ರ ಬೋಸ್ ಇಂಡಿಯನ್ ನ್ಯಾಶನಲ್ ಆರ್ಮಿ ಎಂದು ಸೇನೆ ಕಟ್ಟಿ, ಬರ್ಮಾ ದಿಕ್ಕಿನಿಂದ ಬ್ರಿಟಿಷ್ ಆಡಳಿತದ ಮೇಲೆ ದಾಳಿ ಮಾಡಿದಾಗ ಇಲ್ಲಿದ್ದ ಹಿಂದೂಗಳ್ಯಾರೂ ಬೋಸರ ಸೇನೆ ಸೇರಬೇಡಿ, ಬದಲಿಗೆ ಕೂಡಲೇ ಬ್ರಿಟಿಷ್ ಸೇನೆ ಸೇರಿ, ಅದೇ ನಮಗೆ ಹಿತ ಎಂದು ಕರೆಕೊಟ್ಟದ್ದು ನೆಹರೂನಾ ಅಥವಾ ಸಾವಕರ‍್ರಾ ಎಂಬುದೂ ಸಾಬೀತಾಗಲಿ. ಚಿತ್ರಗುಪ್ತ ಎಂಬ ಕಾವ್ಯನಾಮದಲ್ಲಿ ತನ್ನ ಜೀವನಚರಿತ್ರೆಯನ್ನು ತಾನೇ ಬರೆದುಕೊಂಡು ತನ್ನನ್ನು ತಾನೇ ‘ವೀರ’ ಎಂದು ಕರೆದುಕೊಂಡದ್ದೂ ಸಾಬೀತಾಗಲಿ. ಐದಡಿ ಎರಡಿಂಚು ಮಾತ್ರವೇ ಎತ್ತರವಿದ್ದ ಸಾವರ್ಕರ್‌ಗೆ ಬಾದಾಮಿ ಮಾವಿನ ಹಣ್ಣು, ಐಸ್ ಕ್ರೀಮ್, ಚಾಕೊಲೇಟ್‌ಗಳು ಮತ್ತು ಮಸಾಲೆ ಹಾಕಿದ ಊಟವೇ ಇಷ್ಟವಾಗುತ್ತಿದ್ದುದರ ಜೊತೆಗೆ ಅವರಿಗೆ ಬಹುಪ್ರಿಯವಾಗಿದ್ದ ವಿಸ್ಕಿಯ ಬ್ರಾಂಡ್ ಜಿಂಟನ್ ಹೌದೋ ಅಲ್ಲವೋ, ಅವರು ನಶ್ಯ ಏರಿಸುತ್ತಿದ್ದರೋ ಇಲ್ಲವೋ ಎಂಬುದೂ ಬೆಳಕಿಗೆ ಬರಲಿ.
ಮಂಗಳೂರಿನಲ್ಲಿ ಹಿಂದೂ ಮಹಾ ಸಭಾ ನಾಯಕರು ಸಾವರ್ಕರ್ ಅವರನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕೂಗಿ ಹೇಳಿದ್ದೇಕೆ ಎನ್ನುವುದೂ ಸಾಬೀತಾಗಲಿ. ಹುಸಿ ದೇಶ ಭಕ್ತರ ಹುಸಿ ರಾಷ್ಟ್ರೀಯವಾದ, ಹುಸಿ ದೇಶ ಪ್ರೇಮ ಸಾಬೀತಾಗಲಿ, ಅಲ್ಲಿವರೆಗೂ ಭೂತ ನಮ್ಮ ವರ್ತಮಾನ ಮತ್ತು ಭವಿಷ್ಯವನ್ನು ನುಂಗಿಹಾಕದೇ ಇರಲಿ.