ಅಭಿಮಾನಿಗಳ ಹೃದಯದ ‘ಕೋಟ್ಯಧಿಪತಿ’

ಅಭಿಮಾನಿಗಳ ಹೃದಯದ ‘ಕೋಟ್ಯಧಿಪತಿ’
ಕನ್ನಡದ ವರನಟ ಡಾ.ರಾಜ್ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ, ಹಾಡಿ ದಂತಕತೆಯಾಗಿ ರೂಪುಗೊಂಡರೆ ಅಜ್ಜ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅಪ್ಪನ ವೃತ್ತಿಯನ್ನೇ ಮುಂದುವರೆಸಿದರೂ 20 ವರ್ಷಗಳ ಅವಧಿಯಲ್ಲಿ ಕೇವಲ 29 ಸಿನಿಮಾಗಳಲ್ಲಿ ಅಭಿನಯಿಸಿದರೂ ಇಡೀ ನಾಡಿಗೆ ಶಾಕ್ ನೀಡಿ ಶುಕ್ರವಾರ ದೇಹ ತ್ಯಜಿಸಿದ ಪವರ್ ಸ್ಟಾರ್ ಕನ್ನಡದ ಹೃದಯಗಳ ಕೋಟ್ಯಧಿಪತಿಯಾಗಿ ಉಳಿಯುವ ಮೂಲಕ ಮತ್ತೊಂದು ದಂತಕತೆಯಾಗಿ ಬಿಟ್ಟರು. ಅಭಿನಯದ ಜೊತೆಗೆ ನೊಂದವರ ಕಣ್ಣೀರು ಒರೆಸುವ ಸಾರ್ವಜನಿಕ ಸೇವೆ ಪುನೀತ್ ವ್ಯಕ್ತಿತ್ವಕ್ಕಿಟ್ಟ ಮೆರುಗಾಗಿತ್ತು.
ರಾಜಕುಮಾರ್ ಮತ್ತು ಪಾರ್ವತಮ್ಮನವರ ಕಿರಿಯ ಹಾಗೂ ಮೂರನೇ ಮಗನಾಗಿ ಅಣ್ಣಂದಿರಾದ ಹೆಸರಾಂತ ನಟರೂ ಆಗಿರುವ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಅವರ ಮುದ್ದಿನ ಸೋದರನಾಗಿ 17.03.1975ರಂದು ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಲೋಹಿತ್ ಆರು ತಿಂಗಳ ಪುಟ್ಟ ಮಗುವಾಗಿದ್ದಾಗಲೇ ಕ್ಯಾಮೆರಾ ಕಣ್ಣಿಗೆ ಬಿದ್ದ ‘ ಪ್ರೇಮದ ಕಾಣಿಕೆ’ . ಬಾಲ ನಟ ಪುನೀತನಾಗಿ ವಸಂತ ಗೀತ(1980), ಭಾಗ್ಯದಾತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು(1983) ಮತ್ತು ಬೆಟ್ಟದ ಹೂವು(1985), ಭಕ್ತ ಪ್ರಹ್ಲಾದ ಮೊದಲಾದ ಚಿತ್ರಗಳಲ್ಲಿ ವಿನೀತನಾಗಿ ಅಭಿನಯಿಸಿ ಅಸಂಖ್ಯ ಅಭಿಮಾನಿಗಳನ್ನು ಸೃಷ್ಟಿಸಿಕೊಂಡದ್ದು ಈಗ ಇತಿಹಾಸ. ‘ಬೆಟ್ಟದ ಹೂವು’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಶ್ರೇಷ್ಟ ನಟ ರಾಷ್ಟ್ರ ಪ್ರಶಸ್ತಿ ಗಳಿಸಿ ಚಿನ್ನದ ಗರಿ ಸಿಕ್ಕಿಸಿಕೊಂಡ ರಾಮು ಪಾತ್ರದ “ಭಾಗ್ಯವಂತ’ ಈ ಪುನೀತ.
1999ರ ಡಿಸೆಂಬರ್‍ನಲ್ಲಿ ಕಾಫಿ ನಾಡಿನ ಒಲವಿನ ಗೆಳತಿ ಅಶ್ವಿನಿ ಕೈ ಹಿಡಿದು, ದ್ವಿತಿ ಮತ್ತು ವಂದಿತಾ ಎಂಬ ಎರಡು ಹೆಣ್ಣು ಮಕ್ಕಳ ತಂದೆಯಾಗಿ ಕುಟುಂಬದ ಹೊಣೆ ಹೊತ್ತರು. ಜೊತೆಗೆ 2002ರಲ್ಲಿ ‘ಅಪ್ಪು’ ಸಿನಿಮಾ ಮೂಲಕ ಕನ್ನಡಕ್ಕೆ ಮತ್ತೊಬ್ಬ ನಾಯಕ ನಕ್ಷತ್ರದ ಪರಿಚಯವಾಯಿತು. ಲೋಹಿತ್ -ಪುನೀತ್ ಕಡೆಗೆ ಅಪ್ಪು ಆಗಿಯೇ ಎಲ್ಲರ ಪ್ರೀತಿಯ ಅಪ್ಪುಗೆ ಗಳಿಸಿಕೊಂಡರು.
ಅಭಿ (2003), ಆಕಾಶ್ (2005), ಅರಸು (2007), ಮಿಲನ (2007), ಜಾಕೀ (2010), ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014), ಮಿಲನ, ರಾಜಕುಮಾರ ಯುವರತ್ನ, ಸೇರಿದಂತೆ 26 ಸಿನಿಮಾಗಳ ನಾಯಕ ನಟ. ಸಾಮಾಜಿಕ ಕಳಕಳಿಯ ‘ಮೈತ್ರಿ’ಯಲ್ಲಿ ಮಲೆಯಾಳದ ಸೂಪರ್ ಸ್ಟಾರ್ ಮೋಹನ್‍ಲಾಲ್ ಜೊತೆ ನಟಿಸಿ ಸೈ ಎನಿಸಿಕೊಂಡರು. ಅಭಿನಯಕ್ಕೆ ಸೀಮಿತ ಅಲ್ಲ ಎಂಬುದನ್ನು ಸಾಬೀತು ಪಡಿಸಲು ಕನ್ನಡದ ಕೋಟ್ಯಧಿಪತಿ, ಹೂ ವಾಂಟ್ಸ್ ಟು ಬಿ ಮಿಲಿಯನೇರ್ ಎಂಬ ಕನ್ನಡ ಆವೃತ್ತಿಯ ಟೆಲಿವಿಷನ್ ಶೋ ನಿರೂಪಣೆ ಕೂಡ ಮಾಡಿದರು.
ಉದಯೋನ್ಮುಖ ನಟರಿಗೆ ಅವಕಾಶ ನೀಡಲೆಂದೇ ಪುನೀತ್ ಪಿಆರ್ಕೆ ಪ್ರೊಡಕ್ಷನ್ (ಪಾರ್ವತಮ್ಮ ರಾಜ್ಕುಮಾರ್ ಪ್ರೊಡಕ್ಷನ್) ಸ್ಥಾಪಿಸಿ ಕೆಲವು ಸದಭಿರುಚಿಯ ಸಿನಿಮಾಗಳನ್ನು ನೀಡಿದರು. ಕೋವಿಡ್ ನಲ್ಲೂ ಎದೆಗುಂದದೆ ಓಟಿಟಿಯಲ್ಲಿ ಈ ಸಿನಿಮಾಗಳನ್ನು ಬಿಡುಗಡೆ ಮಾಡಿದರು. ಹಲವಾರು ಅನಾಥಾಶ್ರಮ, ವೃದ್ಧಶ್ರಾಮ,ಅಬಲಾಶ್ರಮಗಳು, ಐಎಎಸ್ ತರಬೇತಿ ಕೇಂದ್ರಗಳನ್ನು ಆರಂಭಿಸಿ ನಡೆಸುತ್ತಿದ್ದರು. ಕನ್ನಡದ ಅಮೀರ್ ಖಾನ್ ಎಂದು ಹೆಸರಾಗಿದ್ದ ಪುನೀತ್, ಅನ್ಯಭಾಷಾ ನಟರೊಂದಿಗೂ ಹಾರ್ಧಿಕ ಬಾಂಧವ್ಯ ಹೊಂದಿದ್ದರು. ಅಣ್ಣ ಶಿವರಾಜ್ ಕುಮಾರ್ ಅವರ ಸಿನಿಮಾ ಒಂದನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನಾಗುವ ಪುನೀತ್ ಕನಸು ಹಾಗೇ ಉಳಿದುಬಿಟ್ಟಿದ್ದು ವಿಷಾದನೀಯ.