ತಲಪರಿಗೆಗಳು ಕಲ್ಯಾಣಿಗಳಾಗುವ  ಅಪಾಯ

ತಲಪರಿಗೆ

ತಲಪರಿಗೆಗಳು ಕಲ್ಯಾಣಿಗಳಾಗುವ  ಅಪಾಯ

 

ಮಲ್ಲಿಕಾರ್ಜುನ

ಹೊಸಪಾಳ್ಯ

 

ತುಮಕೂರು ಜಿಲ್ಲೆ ತಲಪರಿಗೆಗಳಿಗೆ ಪ್ರಸಿದ್ಧಿ. ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಸ್ವಲ್ಪಮಟ್ಟಿಗೆ ತಲಪರಿಗೆಗಳು ಇವೆಯಾದರೂ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವುದು ತುಮಕೂರಿನ ಪಾವಗಡ, ಮಧುಗಿರಿ, ಕೊರಟಗೆರೆ ಹಾಗೂ ಶಿರಾ ತಾಲ್ಲೂಕಿನಲ್ಲಿ. ತುಮಕೂರು ಸುತ್ತ-ಮುತ್ತ ಸಹ ಅವುಗಳ ಕುರುಹು ಇದೆ.

ಇತ್ತೀಚಿನ ದಿನಗಳಲ್ಲಿ ತಲಪರಿಗೆಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಕಾರಣ ಹಲವಾರು. ಜೊತೆಗೆ ಇರುವ ಕೆಲವು ತಲಪರಿಗೆಗಳನ್ನೂ ಅವುಗಳ ಹಿನ್ನೆಲೆ, ಇತಿಹಾಸಗಳನ್ನು ತಿಳಿಯದೆ ಕಲ್ಯಾಣಿ ಎಂದು ಕರೆಯುವ ಪರಿಪಾಠ ಶುರುವಾಗಿದೆ.  ಅದಕ್ಕೆ ಒಂದು ಉದಾಹರಣೆ ಪಾವಗಡ ಬಳಿಯ ರಾಜವಂತಿ ತಲಪರಿಗೆ.

ಪಾವಗಡ ತಾಲ್ಲೂಕಿನ ರಾಜವಂತಿ ಕೆರೆ ಹಿಂದೆ ಒಂದು ತಲಪರಿಗೆ ಇದೆ. ಉತ್ತರ ದಿಕ್ಕಿಗೆ ದೊಡ್ಡ ಬೆಟ್ಟ ಹಾಗೂ ಮೇಲುಗಡೆ ಕೆರೆ ಇರುವುದರಿಂದ ತಲಪರಿಗೆಗೆ ಸದಾ ನೀರಿನ ಸೆಲೆ. ಕೆರೆಯಲ್ಲಿ ನೀರು ಕಡಿಮೆಯಾದಾಗ ಅಚ್ಚುಕಟ್ಟಿನ ಜಮೀನಿಗೆ ಇದು ನೀರುಣಿಸುತ್ತಿತ್ತು. ರಾಜವಂತಿ ಸುತ್ತ-ಮುತ್ತ ಪ್ರಾಗೈತಿಹಾಸಿಕ ಕಾಲದ ಕುರುಹುಗಳು ದೊರೆತಿರುವುದರಿಂದ ಖಚಿತವಾಗಿ ಈ ತಲಪರಿಗೆ ಆ ಕಾಲದ್ದೆಂದು ಹೇಳಬಹುದು.

ನಾವು ೨೦೦೮ರಲ್ಲಿ ತಲಪರಿಗೆಗಳ ದಾಖಲಾತಿ ಮಾಡುವ ಸಮಯಕ್ಕಾಗಲೇ ಇದಕ್ಕೆ ಸ್ಥಳೀಯ ಕಾಡುಗಲ್ಲುಗಳಿಂದ ಕಲ್ಲು ಕಟ್ಟಣೆ ಮಾಡಿ ದಡ ಕುಸಿಯದಂತೆ ಭದ್ರಪಡಿಸಲಾಗಿತ್ತು. ಆದರೆ ಕೆರೆಯಲ್ಲಿ ನೀರು ಸಂಗ್ರಹವಾಗದೆ ತಲಪರಿಗೆಗೂ ಸಹ ನೀರಿನ ಕೊರತೆಯಾಗಿ ಅದರ ಬಳಕೆ ಅಪರೂಪವಾಗಿತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದರು. ಆದರೆ ಅದನ್ನು ಜೋಪಾನವಾಗಿ ಕಾಪಾಡಲಾಗಿತ್ತು.

ಆದರೆ, ಈ ವರ್ಷ-ಅಂದರೆ 2023ರಲ್ಲಿ ಗ್ರಾಮ ಪಂಚಾಯ್ತಿಯು ಇದನ್ನು ಅಭಿವೃದ್ಧಿಪಡಿಸಿದೆ. ಮೊದಲು ಇದ್ದ ಕಾಡುಗಲ್ಲುಗಳ ಬದಲಿಗೆ ಚಪ್ಪಡಿಗಳನ್ನು ಬಳಸಲಾಗಿದೆ. ಮೂರು ದಿಕ್ಕಿಗೆ ಚಪ್ಪಡಿ ಹಾಕಿ ಒಂದು ದಿಕ್ಕಿಗೆ-ಅಂದರೆ ತಲಪರಿಗೆ ಕಾಲುವೆ ಭಾಗದಲ್ಲಿ ನೀರು ಹರಿಯಲು ಅನುಕೂಲವಾಗುವಂತೆ ಹಾಗೆಯೇ ಬಿಡಲಾಗಿದೆ.

ಆದರೆ ಬೇಸರದ ಸಂಗತಿ ಎಂದರೆ, ಅಲ್ಲಿ ಹಾಕಿರುವ ಫಲಕದಲ್ಲಿ ʼಕಲ್ಯಾಣಿ ಅಭಿವೃದ್ಧಿʼ ಎಂದು ಬಳಸಲಾಗಿದೆ. ಪಂಚಾಯ್ತಿಯವರಿಗೆ ಕಲ್ಯಾಣಿ ಹಾಗೂ ತಲಪರಿಗೆಗೆ ಇರುವ ವ್ಯತ್ಯಾಸವನ್ನು ತಿಳಿಯಪಡಿಸಬೇಕಿದೆ. ರಾಜವಂತಿಯ ಯಾರಾದರೂ ಹಿರಿಯರನ್ನು ಕೇಳಿದ್ದರೆ ಹೇಳುತ್ತಿದ್ದರು. ಅಲ್ಲದೆ ಈ ತಲಪರಿಗೆ ಸುತ್ತಲೂ ಮಣ್ಣು ಅಗೆದಿದ್ದು ಬೇರೇನೋ ನಿರ್ಮಿಸುವ  ಸೂಚನೆ ಕಾಣುತ್ತಿದೆ. ಇದನ್ನು ತಡೆಯುವುದು ಅವಶ್ಯಕ. ಕಳೆದ ಎರಡು ವರ್ಷ ಒಳ್ಳೆಯ ಮಳೆಯಾಗಿ ತಲಪರಿಗೆಯೂ ತುಂಬಿ ತುಳುಕುತ್ತಿದೆ. ಇದರ ಮೂಲ ಸ್ವರೂಪ ಹಾಗೇ ಉಳಿಯಲಿ.

ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಹಾಗೂ ಅಟಲ್‌ ಭೂಜಲ ಯೋಜನೆಯಡಿ ಜಲಮೂಲಗಳನ್ನು ಅಭಿವೃದ್ಧಿಪಡಿಸುತ್ತಿದ್ದು ಎಲ್ಲೆಡೆಯೂ ಇದೇ ರೀತಿ ಕಲ್ಯಾಣಿ ಎಂದು ಬೋರ್ಡ್‌ ಹಾಕಿದರೆ ಮುಂದಿನ ತಲೆಮಾರಿಗೆ ತಲಪರಿಗೆ ಎಂಬ ಪದವೇ ಮರೆತುಹೋಗುತ್ತದೆ.  

ಜಿಲ್ಲೆಯಲ್ಲಿ ತಲಪರಿಗೆಗಳಿಗೆ ಒದಗುತ್ತಿರುವ ಇನ್ನೊಂದು ಅಪಾಯವೆಂದರೆ, ಕೆಲವರು ನೀರು ನಿಲ್ಲುವ ಜೋಪು ಗುಂಡಿಗಳು, ತೆರೆದ ಬಾವಿ, ದೊಣೆಗಳನ್ನೆಲ್ಲಾ ತಲಪರಿಗೆಗಳೆಂದೇ ಹೇಳುತ್ತಾ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಈ ಎಲ್ಲಾ ಜಲಮೂಲಗಳಿಗೂ ವ್ಯತ್ಯಾಸವಿದೆ. ಅದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. 

ರಾಜವಂತಿ ಪಂಚಾಯ್ತಿಯು ಕಲ್ಯಾಣಿ ಎಂಬುದನ್ನು ತೆಗೆದು ಅಲ್ಲಿ ʼರಾಜವಂತಿ ತಲಪರಿಗೆʼ ಎಂದು ಎಲ್ಲರಿಗೂ ಕಾಣುವಂತೆ ದೊಡ್ಡ ಫಲಕವನ್ನು ತಕ್ಷಣ ಹಾಕಬೇಕು. ಅಥವಾ ಸ್ಥಳೀಯರೇ ಈ ಕೆಲಸಕ್ಕೆ ಮುಂದಾಗಬೇಕು.