ಅಂಕಸಂದ್ರ ಪ್ರಕರಣ: ಜಿಲ್ಲೆಯ ಅರಣ್ಯದಲ್ಲಿ ಹುಲಿಗಳಿರುವುದು ನಿಜ

ಭಾರತದಲ್ಲಿರುವ ಹುಲಿ ಪ್ರಬೇಧವನ್ನು ರಾಯಲ್ ಬೆಂಗಾಲ್ ಟೈಗರ್ ಎಂದು ಕರೆಯಲಾಗುತ್ತದೆ

ಅಂಕಸಂದ್ರ ಪ್ರಕರಣ: ಜಿಲ್ಲೆಯ ಅರಣ್ಯದಲ್ಲಿ ಹುಲಿಗಳಿರುವುದು ನಿಜ

 

ಅಂಕಸಂದ್ರ ಪ್ರಕರಣ: ಜಿಲ್ಲೆಯ ಅರಣ್ಯದಲ್ಲಿ ಹುಲಿಗಳಿರುವುದು ನಿಜ

 

ಬರಹ-ಚಿತ್ರಗಳು

ಟಿ. ವಿ. ಎನ್. ಮೂರ್ತಿ

 

 

ತುಮಕೂರು: ಇತ್ತೀಚೆಗೆ ಗುಬ್ಬಿ ಬಳಿಯ ಅಂಕಸಂದ್ರ ಅರಣ್ಯ ಪ್ರದೇಶದಲ್ಲಿ ಸಿಕ್ಕ ಹುಲಿ ಕಳೇಬರ ಜಿಲ್ಲೆಯ ಹುಲಿಯ ಸ್ಥಿತಿ ಗತಿ ಹಾಗೂ ಇತಿಹಾಸದ ಬಗ್ಗೆ ಹೊಸ ಆಯಾಮವನ್ನೇ ನೀಡಿದೆ. ತುಮಕೂರಿಗೆ ತನ್ನದೇ ಆದ ಹುಲಿಯ ಇತಿಹಾಸವಿದೆ. ಸ್ಕಾಟ್ ಲ್ಯಾಂಡ್ ಮೂಲದ ಖ್ಯಾತ ಬೇಟೆಗಾರ ಹಾಗೂ ಬರಹಗಾರ  ಕೆನೆತ್ ಆಂಡರ್ಸನ್  1950 ರಲ್ಲಿ ಬರೆದಿರುವ ಪುಸ್ತಕದಲ್ಲಿ ದೇವರಾಯನ ದುರ್ಗ ಅರಣ್ಯದಲ್ಲಿ ನರಭಕ್ಷಕ ಹುಲಿಯ ಬಗ್ಗೆ " ದಿ ಹರ್ಮಿಟ್  ಆಫ್ ದೇವರಾಯನ ದುರ್ಗ" ಎಂಬ ಅಧ್ಯಾಯದಲ್ಲಿ ದಾಖಲಿಸಿದ್ದು,  ಇದೊಂದು ಅಧಿಕೃತ ದಾಖಲೆಯಾಗಿದೆ.

ಭಾರತದಲ್ಲಿರುವ ಹುಲಿ ಪ್ರಬೇಧವನ್ನು ರಾಯಲ್ ಬೆಂಗಾಲ್ ಟೈಗರ್ ಎಂದು ಕರೆಯಲಾಗುತ್ತದೆ.  ಇವು ಭಾರತದ ಜೊತೆಗೆ ಚೀನಾ, ಭೂತಾನ್, ಬಾಂಗ್ಲಾದೇಶ, ಹಾಗೂ ಬರ್ಮಾಗಳಲ್ಲೂ ಕಾಣ ಸಿಗುತ್ತವೆ. ಬೆಂಗಾಲ್ ಟೈಗರ್ ಗಳು ಒಂದು ಮತ್ತೊಂದರಂತೆ ಎಂದಿಗೂ ಇರುವುದಿಲ್ಲ, ಅದರ ಮೈ ಮೇಲಿರುವ ಪಟ್ಟಿಗಳು ಒಂದರಂತೆ ಇನ್ನೊಂದಕ್ಕೆ ಇರುವುದಿಲ್ಲ ನಮ್ಮ ಬೆರಳಿನ ಗುರುತುಗಳು ಹೇಗೆ ಒಬ್ಬರಿಂದ ಒಬ್ಬರಿಗೆ ಬೇರೆ ಇರುತ್ತವೆಯೋ ಅದೇ ರೀತಿಯಲ್ಲಿ ಇವುಗಳ ಮೈಮೇಲೆ ಇರುವ ಪಟ್ಟೆಗಳು ಒಂದಕ್ಕಿಂತ ಇನ್ನೊಂದು ಭಿನ್ನವಾಗಿರುತ್ತದೆ. ಈ ಪಟ್ಟಿಗಳಿಂದಲೇ ಹುಲಿಗಳ ಗುರುತು ಪತ್ತೆ ಹಚ್ಚಬಹುದು.

ಹುಲಿಗಳು ಮೂಲತಹ ನಾಚಿಕೆ ಸ್ವಭಾವದ ಪ್ರಾಣಿಗಳು. ಮಾನವ ವಾಸ ಸ್ಥಳದಿಂದ ಆದಷ್ಟು ಅಂತರ ಕಾಯ್ದುಕೊಳ್ಳುತ್ತವೆ.   ಇವುಗಳು ಸುಮಾರು10 ರಿಂದ 15 ವರ್ಷದವರೆಗೆ ಬಾಳುತ್ತವೆ. ಗಂಡು ಹುಲಿ ಸುಮಾರು ೨೨೫ ಕೇಜಿಯಷ್ಟು ತೂಗಿದರೆ ಹೆಣ್ಣು ಹುಲಿ ಸುಮಾರು 135 ಕೇಜಿ ತೂಕವಿರುತ್ತದೆ. ಸಾಮಾನ್ಯವಾಗಿ ಅರಣ್ಯದಲ್ಲಿರುವ ಜಿಂಕೆ, ಕಡವೆ, ಹಂದಿ, ಕಾಡೆಮ್ಮೆ ಹೀಗೆ ಸಸ್ತನಿಗಳನ್ನು ತಿಂದು ಜೀವಿಸುತ್ತವೆ. ಒಂದು ಬಾರಿಗೆ ಸುಮಾರು ನಲವತ್ತು ಕೇಜಿಯಷ್ಟು ಮಾಂಸವನ್ನು ಹುಲಿಗಳು ತಿನ್ನಬಲ್ಲವು ಹಾಗೂ 60 ಕಿಮಿ ವೇಗವಾಗಿ ಓಡಬಲ್ಲವು.  ರಾತ್ರಿ ಸಮಯದಲ್ಲಿ ಬೇಟೆಯಾಡಿ ತಮ್ಮ ಹಸಿವನ್ನು ತೀರಿಸಿಕೊಳ್ಳುತ್ತವೆ. ಸರ್ವ ರುತುವಿನಲ್ಲೂ ಮಿಲನವಾಗುವ ಗಂಡು ಹೆಣ್ಣುಗಳು ಛಳಿಗಾಲದಲ್ಲಿ ಹೆಚ್ಚು ಮಿಲನವಾಗುತ್ತವೆ. ಮೂರು ತಿಂಗಳ ಗರ್ಭಾವಸ್ತೆಯನಂತರ ಸಾಮಾನ್ಯವಾಗಿ ನಾಲ್ಕರಿಂದ ಐದು ಮರಿಗಳಿಗೆ ಜನ್ಮ ನೀಡುತ್ತವೆ.  ಹುಲಿಗಳು ಅತೀ ಬುದ್ದಿವಂತ ಪ್ರಾಣಿಗಳು ಅವುಗಳು ಅವುಗಳ ನೆನಪಿನ ಶಕ್ತಿ ಮಾನವನಿಗಿಂತಾ ಅಗಾಧವಾಗಿದೆ, ಒಮ್ಮೆ ನೋಡಿದವರನ್ನು ಮತ್ತೊಮ್ಮೆ ಅವು ಗುರುತಿಸಬಲ್ಲವು.

 

ಭಾರತದಲ್ಲಿ ಒಂದಾನೊಂದು ಕಾಲದಲ್ಲಿ ಸುಮಾರು ಲಕ್ಷಕ್ಕೂ ಮಿಗಿಲಾಗಿ ಹುಲಿಗಳಿದ್ದವು ಎಂದು ಒಂದು ಅಂದಾಜು ಮಾಡಲಾಗಿದೆ.  1875 ರಿಂದ 1925ರ ಅವಧಿಯಲ್ಲಿ ಸುಮಾರು 80000 ಹುಲಿಗಳನ್ನು ಬೇಟೆಯಾಡಿ ಕೊಲ್ಲಲಾಗಿದೆ ಎಂದು ದಾಖಲೆಗಳು ಹೇಳುತ್ತವೆ.  ಹುಲಿಗಳ ಸಂಖ್ಯೆ ಗಣನೀಯವಾಗಿ ಇಳಿದಾಗ ಇದು ಯಾರ ಗಮನಕ್ಕೂ ಬರಲಿಲ್ಲ, ಪ್ರವಾಸಿಗರು ಹುಲಿ ತಾಣಗಳಲ್ಲಿ ಹುಲಿ ಇಲ್ಲ ಎಂಬ ಆಗಾಗ ಕೂಗಿದಾಗ ಭಾರತ ಸರ್ಕಾರ ಎಚ್ಚೆತ್ತುಕೊಂಡು 1972ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ  ಹುಲಿ ಸಂರಕ್ಷಣೆಗಾಗಿ ಹುಲಿ ಯೋಜನೆಯನ್ನು ಘೋಷಿಸಿದರು.  ಇಲ್ಲಿಯವರೆಗೆ ಸುಮಾರು 50 ಹುಲಿ ಸಂರಕ್ಷಿತ ಪ್ರದೇಶಗಳನ್ನು ಪ್ರಾಜೆಕ್ಟ್ ಟೈಗರ್ ನಲ್ಲಿ ಅಳವಡಿಸಿಕೊಳ್ಳಲಾಗಿದೆ.  ಆಗಲೇ ಹುಲಿಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಗುರುತಿಸಲಾಯಿತು. ಬಹಳ ವರ್ಷಗಳ ತನಕ ಅರಣ್ಯ ಇಲಾಖೆ ನೀಡುತ್ತಿದ್ದ ದಾಖಲೆಗಳನ್ನು ಅಧಿಕೃತ ದಾಖಲೆಗಳೆಂದು ಪರಿಗಣಿಸಿ ಹುಲಿಯ ಸಂಖ್ಯೆಯನ್ನು ಘೋಷಿಸಲಾಗುತ್ತಿತ್ತು. 2004 -2005 ರಲ್ಲಿ ರಾಜಸ್ಥಾನದ ಸಾರಿಸ್ಕ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳಿಲ್ಲದಿದ್ದರೂ ಸಾಕಷ್ಟು ಹುಲಿಗಳಿವೆ ಎಂದು ಕೇವಲ ಹೆಜ್ಜೆ ಗುರುತಿನಿಂದ ಅರಣ್ಯ ಸಿಬ್ಬಂದಿ ಹುಲಿಗಳ ಹೆಚ್ಚು ಸಂಖ್ಯೆಯನ್ನು ತೋರಿಸಿದ್ದರು, ಆದರೆ ಪ್ರವಾಸಿಗರು ಒಂದೇ ಒಂದು ಹುಲಿಯನ್ನು ಅರಣ್ಯ ಪ್ರದೇಶದಲ್ಲಿ ನೋಡಿರಲಿಲ್ಲ. ಇದಾದ ನಂತರ ಪನ್ನಾ ರಾಷ್ಟ್ರೀಯ ಉದ್ಯಾನದಲ್ಲಿ ಉದ್ಯಾನವನದಲ್ಲಿ ಸಹ ಇದೇ ತರದ ಕೃತಕ ಹುಲಿ ಸಂಖ್ಯೆಯನ್ನು ಘೋಷಿಸಿದ್ದರಿಂದ ನೈಜವಾಗಿ ಅಷ್ಟು ಹುಲಿಗಳು ಆ ಅರಣ್ಯ ವ್ಯಾಪ್ತಿಯಲ್ಲಿ ಇರಲಿಲ್ಲ.  ಹುಲಿಯ ನೈಜ ಇರುವಿಕೆಯ ಬಗ್ಗೆ ಪ್ರವಾಸಿಗರು ಮತ್ತು ಮಾಧ್ಯಮಗಳು ಅನುಮಾನ ವ್ಯಕ್ತಪಡಿಸಿದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ತನಿಖೆಗೆ ಆದೇಶಿಸಿದರು ಹಾಗೂ ವೈಜ್ಞಾನಿಕವಾಗಿ ಹುಲಿ ಗಣತಿ ಮಾಡಲು ಆದೇಶಿಸಿದರು.  ಅಂದಿನಿಂದ ಹುಲಿಯ ಅಂದಾಜು ಹೆಚ್ಚು ಕಡಿಮೆ ಸರಿಯಾಗಿ ಸಿಗಲು ಆರಂಭಿಸಿತು.

 

ಇಂದು ಭಾರತದಲ್ಲಿ ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿ ನಡೆಯುತ್ತಿದೆ ಪ್ರಾರಂಭದಲ್ಲಿ 2006ರಲ್ಲಿ ಮೊದಲ ಗಣತಿ ಪ್ರಾರಂಭವಾಯಿತು ಅದು ಕೇವಲ 1411 ಹುಲಿಗಳು ಮಾತ್ರ ಇವೆ ಎಂದು ಅಂದಾಜಿಸಲಾಯಿತು . ಇದು ಅತ್ಯಂತ ಆತಂಕದ ವಿಚಾರವಾಗಿ ಎಲ್ಲರಿಗೂ ಹುಲಿಯ ಮುಂದಿನ ಇರುವಿಕೆಯ ಬಗ್ಗೆ ಅನುಮಾನ ಮೂಡಿಸಿತು. ಎರಡನೇ ಗಣತಿ 2010ರಲ್ಲಿ ನಡೆದು 17006 ಹುಲಿಗಳು ಇವೆ ಎಂದು ಅಂದಾಜಿಸಲಾಯಿತು. ಇವು ಹುಲಿಗಳ ಸಂಖ್ಯೆಯಲ್ಲಿ ಅಬಿವೃದ್ದಿ ಕಂಡಿದ್ದರೂ ಅದೇನೂ ಗಣನೀಯ ಬೆಳವಣಿಗೆ ಯಾಗಿರಲಿಲ್ಲ. ಇತ್ತೀಚಿಗೆ ಅಂದರೆ 2018-19 ರಲ್ಲಿ ನಾಲ್ಕನೇ ಗಣತಿ ನಡೆಸಲಾಯಿತು ಇದರಲ್ಲಿ ದೇಶದಲ್ಲಿ ಸುಮಾರು ೨೯೬೭ ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಈ ಗಣತಿಯ ಬಗ್ಗೆ ಇನ್ನೂ ಹಲವರು ಗೊಂದಲಗಳಿದ್ದರೂ ಕ್ಯಾಮರಾ ಟ್ರಾಪಿಂಗ್ ಮುಖಾಂತರ ಸೆರೆ ಹಿಡಿದ ಛಾಯಾಚಿತ್ರಗಳು ಧಾಖಲೆಯಾಗಿ ಉಳಿದಿವೆ. ಮಧ್ಯಪ್ರದೇಶದ ನಂತರ ಅತೀ ಹೆಚ್ಚು ಹುಲಿ ಸಂತತಿ ಇರುವ ರಾಜ್ಯ ಕರ್ನಾಟಕ ಎಂದು ಘೋಷಿಸಲಾಯಿತು. ರಾಜ್ಯದಲ್ಲಿ ೫೨೪ ಹುಲಿಗಳಿವೆ ಎಂದು ಸಮೀಕ್ಷೆ ತಿಳಿಸುತ್ತದೆ.

 

ತುಮಕೂರು ಜಿಲ್ಲೆಯಲ್ಲಿ ಹುಲಿ ಸಂತತಿ ಇರುವ ಬಗ್ಗೆ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ 2007 ರಲ್ಲಿ ಪಂಡಿತನಹಳ್ಳಿ ನಡುತೋಪಿನಲ್ಲಿ ಹುಲಿಯ ಹೆಜ್ಜೆಯನ್ನು ಗುರುತಿಸಿ ವರದಿ ಮಾಡಿತ್ತು. ಅದಕ್ಕೂ ಮೊದಲು 1996 ಅಗಸ್ಟ ತಿಂಗಳಲ್ಲಿ ಅಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ. ಉದಯ ವೀರ್ ಸಿಂಗ್ ಹುಲಿಯನ್ನು ಕಂಡಿದ್ದಾಗಿ ವರದಿ ಮಾಡಿದ್ದರು ಆಗಲೂ ಯಾರೂ ನಂಬುವ ಸ್ಥಿತಿಯಲ್ಲಿರಲಿಲ್ಲ ಏಕೆಂದರೆ ಇದು ಹುಲಿಯ ಆವಾಸ ಸ್ಥಾನ ಅಲ್ಲ ಎಂಬ ಕಾರಣಕ್ಕಾಗಿ. 2001 ರ ಅಗಸ್ಟ ತಿಂಗಳಲ್ಲಿ ಅರಣ್ಯ ಪಾಲಕ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಗೆ ಕರೆಮಾಡಿ ಹುಲಿ ಘರ್ಜನೆಯ ಬಗ್ಗೆ ವರದಿ ಮಾಡಿದ್ದ ತಕ್ಷಣ ನಾನು ಹಾಗೂ ಡಾ. ಪ್ರಸನ್ನ ಕುಮಾರ್ ಕುಂಬಾರ ಹಳ್ಳಿ ಸ್ಥಳಕ್ಕೆ ತೆರಳಿದೆವು ಸುಮಾರು ಹದಿನೈದು ನಿಮಿಷ ಎರಡು ಹುಲಿಗಳ ಒಂದಕ್ಕೆ ಮತ್ತೊಂದು ಉತ್ತರ ಕೊಡುವ ರೀತಿಯಲ್ಲಿ ಘರ್ಜಿಸುತ್ತಿದ್ದವು ಅಂದು ನಾವು ನಮ್ಮ ವಿಡಿಯೋ ಕ್ಯಾಮರಾದಲ್ಲಿ ಘರ್ಜನೆಯನ್ನು ಧಾಖಲಿಸಿದೆವು. ಕೆಲ ಕ್ಷಣಗಳಲ್ಲಿ ಘರ್ಜನೆ ನಿಂತು ಒಂದು ದೊಡ್ಡ ಹುಲಿ ಬೆಳೆದು ನಿಂತ ಹುಲ್ಲಿನ ರಾಶಿಯ ಮಧ್ಯ ಓಡಿದ್ದನ್ನು ನಾನೇ ಕಣ್ಣಾರೆ ನೋಡಿದ್ದೆ ಆದರೂ ಯಾರೂ ನಂಬಲಿಲ್ಲ ಏಕೆಂದರೆ ನಾವು ಅದರ ಛಾಯಾಚಿತ್ರ ತೆಗೆಯಲೂ ಆಗಿರಲಿಲ್ಲ.

2001 ರಲ್ಲಿ ಅನುಮಪನಹಳ್ಳಿಯ ದನಕಾಯುವ ಹುಡುಗ ಹುಲಿಯೊಂದು ತನ್ನ ಹಸುವನ್ನು ಕೊಲ್ಲುತ್ತಿದ್ದ ಘಟನೆಯನ್ನು ಸುಮಾರು 7 ರಿಂದ 8 ನಿಮಿಷ ನೋಡಿದ್ದ ಅವನ ವರ್ಣನೆಯನ್ನು ಧಾಖಲಿಸಲಾಗಿತ್ತು.  ಅವನ ಸಂಪೂರ್ಣ ವರ್ಣನೆ ಹುಲಿಯ ವರ್ತನೆಗೆ ಹೋಲುತ್ತಿತ್ತು. 2006 ರಲ್ಲಿ ಅಂದಿನ ವಲಯ ಅರಣ್ಯಾಧಿಕಾರಿಯಾಗಿದ್ದ ಗಂಗಯ್ಯನವರು ಎಂಟನೇ ಮೈಲಿ ಕಲ್ಲಿನ ಹತ್ತಿರ ಕೆಲಕಾಲ ಕಂಡಿದ್ದರು. 2009ರಲ್ಲಿ  ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ  ಶ್ರೀನಿವಾಸ ರವರು ವಲಯ ಅರಣ್ಯ ಅಧಿಕಾರಿ ಎಂ ಎನ್ ನಾಯಕ್ ಎಂಟನೇ ಮೈಲಿ ಕಲ್ಲಿ ನಿಂದ ಮೂರು ಕಿಮಿ ತುಮಕೂರು ಕಡೆಗೆ ಬರುವಾಗ ಒಂದು ಹೆಣ್ಣು ಹು ಹಾಗೂ ಎರಡು ಮರಿಗಳನ್ನು ನೊಡಿದ್ದ ಧಾಖಲೆ ಇದೆ.

 

ಗುಬ್ಬಿ ತಾಲ್ಲೂಕಿನ ಅಂಕಸಂದ್ರ ಬಳಿ ದೊರೆತ ಮೃತ ಹುಲಿ ಸುಮಾರು ಐದರಿಂದ ಆರುವರ್ಷದ ಮಧ್ಯವಯಸ್ಸಿನ ಗಂಡು ಹುಲಿ. ಸಂಪೂರ್ಣ ಆರೋಗ್ಯವಾಗಿದ್ದು 165 ಕೇಜಿ ಭಾರವಿತ್ತು.  ದೇಹದ ಮೇಲೆ ಯಾವುದೇ ಗಾಯಗಳಾಗಲೀ  ಅಥವಾ ಗುಂಡೇಟಿನ ಗುರುತಾಗಲೀ  ಇರಲಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ವಿಷಪ್ರಾಶನವಾದ ಕುರುಹುಗಳಿತ್ತು ಇದರ ಸಂಪೂರ್ಣ ವರದಿ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಬರಬೇಕಾಗಿದೆ. ಈಗಾಗಲೇ ಇದರ ಛಾಯಾಚಿತ್ರಗಳನ್ನು ಕರ್ಣಾಟಕದಲ್ಲಿ ಧಾಖಲಾದ ಹುಲಿಗಳಿಗೆ ಹೋಲಿಸಲಾಗಿದೆ ಮತ್ತು ಇದೊಂದು ಹೊಸ ಹುಲಿ ಎಂದು ಗುರುತಿಸಲಾಗಿದೆ.

 

ಹುಲಿ ಬಂದಿದ್ದಾದರೂ ಎಲ್ಲಿಂದ? ಅತೀ ಹತ್ತಿರದ ಪ್ರದೇಶ ವೆಂದರೆ ಬನ್ನೇರುಘಟ್ಟ ಉದ್ಯಾನವನ ಸುಮಾರು ಎಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿದೆ. ಅಥವಾ ಕಾವೇರಿ ವನ್ಯಜೀವಿಧಾಮ ಸುಮಾರು ನೂರು ಕಿಲೋಮೀಟರ್ ದೂರವಿದೆ. ಭದ್ರಾ ಅಭಯಾರಣ್ಯ ಹತ್ತಿರದ ಕಡೂರಿನ ವರೆಗೂ ವ್ಯಾಪಿಸಿದೆ ಹಾಗಾದರೆ ಎಂಬತ್ತು ಕಿಮಿ ನೇರ ದೂರ ( ಏರಿಯಲ್ ಡಿಸ್ಟೆನ್ಸ) ಬಂದಿರ ಬಹುದೇ? ಧಾಖಲಾಗಿರುವ ಹುಲಿ ಚಿತ್ರಗಳಲ್ಲಿ ಮೃತ ಹುಲಿ ಇಲ್ಲ ಅಂದರೆ ಇದು ಇದೇ ಪ್ರದೇಶಲ್ಲಿ ವಾಸವಾಗಿದ್ದು ಚಿರತೆ ತಿಂದಿದ್ದು  ಎಂದು ಭಾವಿಸಿದ್ದ ಕೆಲ ಬೇಟೆಗಲೂ ಹುಲಿಯದ್ದೆ?  ಅಥವಾ ಯಾರಾದರೂ ಕೊಂದು ಇಲ್ಲಿ ತಂದು ಹಾಕಿರುವರಾ? ಇದಂತೂ ಸಾಧ್ಯವಿಲ್ಲ ಏಕೆಂದರೆ ಮೃತ ಹುಲಿಯನ್ನು ಎತ್ತಲು ಕನಿಷ್ಟ ಎಂಟು ಜನ ಬೇಕು ಹಾಗೂ ಅದರ ದೇಹ ದೊರೆತ ಸ್ಥೆಳದಲ್ಲಿ ಮನುಷ್ಯರ ಚಲನವಲನದ ಯಾವುದೇ ಕುರುಹು ಪತ್ತೆಯಾಗಿಲ್ಲ.

ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಮೃತ ಹುಲಿ ನಮ್ಮ ಜಿಲ್ಲೆಯಲ್ಲೇ ಇತ್ತು ಏಕೆಂದರೆ ಮತ್ತೊಂದು ಕಡೆಯಿಂದ ಬಂದಿದ್ದರೆ ಬಲಿ ಪ್ರಾಣಿಗಳ ಕೊರತೆಯಿಂದ ನಿತ್ರಾಣವಾಗಿರ ಬೇಕಿತ್ತು. ಇದು ಗಂಡಾದ್ದರಿಂದ ಹೊಸ  ಪ್ರದೇಶ (ಟೆರಿಟರಿ) ಹುಡುಕುತ್ತಾ ಬಂದಿರಬಹುದು. ಇನ್ನೂ ಅನೇಕ ಹುಲಿಗಳು ಈ ಪ್ರದೇಶದಲ್ಲಿ ವಾಸವಾಗಿರಬೇಕು. ಸತತ ಹುಲಿಯ ಕುರುಹುಗಳು ಹಿಂದಿನಿಂದ ದಾಖಲಾಗಿರುವದರಿಂದ ಇಲ್ಲಿಯೇ ವಾಸವಿರಲಿಲ್ಲ ಎನ್ನಲು ಸಾಧ್ಯವಿಲ್ಲ. ಈ ಎಲ್ಲ ಜಟಿಲ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು. ಏನೇ ಆಗಲಿ ಮೂರು ದಶಕದಿಂದಾ ಹುಲಿಯ ಇರುವಿಕೆಯ ಕುರುಹುಗಳಿದ್ದರೂ ಯಾರೂ ನಂಬುತ್ತಿರಲಿಲ್ಲ ಇಂದು ನಾನಿದ್ದೇನೆ ಎಂದು ನಮ್ಮೆದುರು ಬಂದು ದರ್ಶನ ನೀಡಿದರೂ ಉಸಿರು ನಿಂತ ನಂತರ ಕಂಡಿದ್ದು ಯಾರೂ ಮರೆಯದ ದುರಂತ.

 

 (ಲೇಖಕರು ತುಮಕೂರು ನಗರದ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಮುಖ್ಯಸ್ಥರಾಗಿದ್ದು, ಭಾರತ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸಲಹಾ ಸಮಿತಿ ಸದಸ್ಯರಾಗಿದ್ದಾರೆ.)