ಬೈ ಎಲೆಕ್ಷನ್‌:  ಬೈ ದಿ ಬೈ ಯಾರಿಗೆ ಲಾಭ- ಯಾರಿಗೆ ನಷ್ಟ

ಅಂದಹಾಗೆ ಉಪಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲಿ ಸಂಡೂರು ಕ್ಷೇತ್ರ ಮಾತ್ರ ಕಾಂಗ್ರೆಸ್ ವಶದಲ್ಲಿದ್ದರೆ ಚನ್ನಪಟ್ಟಣದಲ್ಲಿ ಜೆಡಿಎಸ್ ಮತ್ತು ಶಿಗ್ಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಅಂದರೆ ಮೈತ್ರಿ ಪಕ್ಷಗಳವರು ಆಯ್ಕೆಯಾಗಿದ್ದರು

ಬೈ ಎಲೆಕ್ಷನ್‌:  ಬೈ ದಿ ಬೈ ಯಾರಿಗೆ ಲಾಭ- ಯಾರಿಗೆ ನಷ್ಟ

ಚುನಾವಣೆ ವಿಶ್ಲೇಷಣೆ

ಆರ್‌.ಹೆಚ್.ನಟರಾಜ್‌

   ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಎಲ್ಲ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಸೋತರೂ ರಾಜ್ಯ ಸರ್ಕಾರವೇನೂ ಬಿದ್ದು ಹೋಗುವುದಿಲ್ಲ. ಈ ಮೂರರಲ್ಲಿ ಒಂದರಲ್ಲಿ ಮಾತ್ರವೇ 2023ರಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಆದರೆ ಒಂದು ವೇಳೆ  ಕಾಂಗ್ರೆಸ್ ಗೆಲುವು ಸಾಧಿಸಿದರೆ, ಸಿದ್ದರಾಮಯ್ಯನವರ ವಿರುದ್ಧದ ಮುಡಾ  ನಿವೇಶನ ಹಂಚಿಕೆ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ  ಬಹುಕೋಟಿ ಭ್ರಷ್ಟಾಚಾರ ಸೇರಿದಂತೆ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ನಾಡಿನ ಜನತೆ ನೀಡಿರುವ ಉತ್ತರ ಎಂದು ಬಿಂಬಿಸಲಾಗುತ್ತದೆ. ಅದೇ ರೀತಿ ಪ್ರತಿಪಕ್ಷಗಳು ಗೆಲುವು ಸಾಧಿಸಿದರೆ, ಇದು ಸರ್ಕಾರದ ವಿರುದ್ಧ ಜನಾದೇಶ ಎಂದು ಬಿಂಬಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಮತ್ತಷ್ಟು ಉತ್ಸಾಹದಿಂದ ಹೋರಾಟ ಮಾಡಲು ಅವಕಾಶ ಕಲ್ಪಿಸಲಿದೆ.

 

   ಆದರೆ ಆಡಳಿತದಲ್ಲಿರುವ ಕಾಂಗ್ರೆಸ್‌ಗಿಂತ ವಿರೋಧ ಪಕ್ಷವಾಗಿರುವ ಬಿಜೆಪಿಯಲ್ಲಿ ಕೆಲ ಪ್ರಮುಖ ವಿದ್ಯಮಾನಗಳಂತೂ ನಿಶ್ಚಿತವಾಗಿ ನಡೆಯಲಿವೆ .ಬಿಜೆಪಿ ಹಿನ್ನಡೆ ಅನುಭವಿಸಿದರೆ ಅದರ ನೇರ ಹೊಣೆಗಾರಿಕೆಯನ್ನು ಪಕ್ಷದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೆಗಲಿಗೆ ಕಟ್ಟುವ ತಂತ್ರಗಾರಿಕೆ ಈಗಾಗಲೇ ಸಿದ್ಧಗೊಂಡಿದೆ, ಈ ಸೋಲುಗಳ ಕಾರಣದಿಂದಾಗಿಯೇ ವಿಜಯೇಂದ್ರ ಅವರ ನಾಯಕತ್ವವನ್ನು ಒಪ್ಪಲು ಸಿದ್ದರಿಲ್ಲ ಎಂದು ಘೋಷಿಸಿರುವ ಬಿಜೆಪಿ ಭಿನ್ನರ ಗುಂಪು ಮತ್ತಷ್ಟು ಕ್ರಿಯಾಶೀಲರಾಗುವ ಸಾಧ್ಯತೆ ಇದೆ.

  

  

ಚನ್ನಪಟ್ಟಣ ಬೊಂಬೆಯ ಸೂತ್ರ

ಈಗ ಯಾರ ಕೈಯಲ್ಲಿದೆ ಸ್ವಾಮಿ!

     ಬೊಂಬೆ ನಗರಿ ಚನ್ನಪಟ್ಟಣ ರಾಮನಗರ ಜಿಲ್ಲೆಯ ಅತ್ಯಂತ ಪ್ರಮುಖ ನಗರ ರಾಜಕೀಯವಾಗಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು ಜನತಾ ಪರಿವಾರ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು ಆದರೆ ಮತ್ತೆ ಸಾದತ್ ಅಲಿ ಖಾನ್ ಅವರು ಈ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ಬರುವಂತೆ ಮಾಡಿದ್ದರು.

     ಆದರೆ 1999ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಉದ್ಯಮಿ ಹಾಗೂ ಚಿತ್ರನಟ ಕಾಂಗ್ರೆಸ್ ಟಿಕೆಟ್ ಸಿಗದೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸುವ ಮೂಲಕ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣವನ್ನು ಬದಲಾಯಿಸಿದರು. ಈ ಕ್ಷೇತ್ರವನ್ನು ಪಕ್ಷರಾಜಕಾರಣದ ಮುಷ್ಟಿಯಿಂದ ಹೊರಗೆಳೆದು ವ್ಯಕ್ತಿಗತ ರಾಜಕಾರಣದ ಅಖಾಡವಾಗಿ ಪರಿವರ್ತಿಸಿದರು.

    ಅಂದಿನಿಂದ ಇಂದಿನವರೆಗೆ ಈ ಕ್ಷೇತ್ರ ರಾಜಕೀಯ ಪಕ್ಷದ ಬದಲಾಗಿ ವ್ಯಕ್ತಿ ಪ್ರತಿಷ್ಠೆಯ ಅಖಾಡವಾಗಿ ಪರಿಣಮಿಸಿದೆ. ಅದರಲ್ಲೂ ಸಿಪಿ ಯೋಗೇಶ್ವರ್ ಈ ಕ್ಷೇತ್ರದ ಅತ್ಯಂತ ಪ್ರಭಾವಿ ವ್ಯಕ್ತಿ ಎನಿಸಿಕೊಂಡರೆ ಇವರಿಗೆ ತೀವ್ರ ಪೈಪೋಟಿ ನೀಡುತ್ತಿರುವುದು ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಕೇಂದ್ರ ಮಂತ್ರಿ ಕುಮಾರಸ್ವಾಮಿ.

    ಚನ್ನಪಟ್ಟಣ ಕ್ಷೇತ್ರದಲ್ಲಿ ಯೋಗೇಶ್ವರ್ ಪ್ರಾಬಲ್ಯ ಸಾಧಿಸುತ್ತಿದ್ದಂತೆ ಇಲ್ಲಿ ಕಾಂಗ್ರೆಸ್ ತನ್ನ ವರ್ಚಸ್ಸು ಕಳೆದುಕೊಂಡಿತು. ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಸಮಯದಲ್ಲಿ ದಾಖಲೆ ಅಂತರದೊಂದಿಗೆ ಕಾಂಗ್ರೆಸ್ ಜಯಗಳಿಸಿದೆ. ಯೋಗೇಶ್ವರ್ ಕಾಂಗ್ರೆಸ್ ಬಿಟ್ಟ ಸಮಯದಲ್ಲಿ ಪಕ್ಷದ ಸಾಧನೆ ಶೋಚನೀಯವಾಗಿದೆ.

    ಈ ಬಾರಿ ವಿಭಿನ್ನ ರೀತಿಯ ಚುನಾವಣೆ ನಡೆಯುತ್ತಿದೆ ಯೋಗೇಶ್ವರ್ ಜೆಡಿಎಸ್ ನ ದೊಡ್ಡ ಕುಟುಂಬದ ಮೂರನೇ ವ್ಯಕ್ತಿಯ ವಿರುದ್ಧ ಸೆಣೆಸುತ್ತಿದ್ದಾರೆ. ಮೊದಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿದು ಅವರನ್ನು ಮಣಿಸಿದ ಯೋಗೇಶ್ವರ್ ನಂತರ ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದಾರೆ ಇದೀಗ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡುತ್ತಿದ್ದಾರೆ.

    ಕ್ಷೇತ್ರದಲ್ಲಿ ಒಟ್ಟು 2,17,573 ಮತದಾರರಿದ್ದಾರೆ ಇದರಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ 1,05,000, ಮತದಾರರಿದ್ದರೆ,ಪರಿಶಿಷ್ಟ ಜಾತಿಯ 40,000, ಮುಸ್ಲಿಂ ಸಮುದಾಯದ 35,000, ಲಿಂಗಾಯತರ 11,000, ಹಾಗೂ ಕುರುಬ ಸಮಾಜದ 8,000 ಮಾತುಗಳಿವೆ.ಇತರೆ ವರ್ಗದ 31,000 ಮತಗಳಿವೆ. ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿರುವುದು ಈ ಕ್ಷೇತ್ರದ ವೈಶಿಷ್ಟ್ಯ.

   ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಸಮಯದಲ್ಲಿ ಯೋಗೇಶ್ವರ್ ಎರಡು ಬಾರಿ ಜೆಡಿಎಸ್ ನ ಎಂ ಸಿ ಅಶ್ವತ್ ಅವರನ್ನು ಮಣಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದಾಗ ಎಂ ಸಿ ಅಶ್ವಥ್ ಎದುರು ಸೋಲು ಅನುಭವಿಸಿದ್ದಾರೆ.

  2011ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ  ಯೋಗೇಶ್ವರ್ ಜೆಡಿಎಸ್‌ನ  ಸಿ.ಲಿಂ. ನಾಗರಾಜು ಅವರನ್ನು 17,803 ಮತಗಳ ಅಂತರದಿಂದ ಸೋಲಿಸಿದರು.

   ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದ ಯೋಗೇಶ್ವರ್ ಜೆಡಿಎಸ್ ನ ಅನಿತಾ ಕುಮಾರಸ್ವಾಮಿ ಅವರನ್ನು 8,000 ಮತಗಳ ಅಂತರದಿಂದ ಸೋಲಿಸಿದರು.

    ನಂತರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಯೋಗೀಶ್ವರ್ ಅವರನ್ನು ಕುಮಾರಸ್ವಾಮಿ ಸೋಲಿಸಿದರು.

   ಇದೀಗ ಬದಲಾದ ಲೆಕ್ಕಾಚಾರದೊಂದಿಗೆ ಚನ್ನಪಟ್ಟಣದಲ್ಲಿ ಚುನಾವಣೆ ನಡೆಯುತ್ತಿದೆ. ಮುಸ್ಲಿಂ ಮತ್ತು ಕುರುಬ ಸಮುದಾಯ ಪ್ರಬಲವಾಗಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದೆ. ಈ ಹಿಂದೆ ಅಲ್ಪಸಂಖ್ಯಾತ ಸಮುದಾಯ ಜೆಡಿಎಸ್ ಬೆಂಬಲಕ್ಕೆ ನಿಲ್ಲುತ್ತಿತ್ತು. ಆದರೆ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಪರಿಣಾಮ ಈ ಸಮುದಾಯ ಇದೀಗ ಬಿಜೆಪಿಯಂತೆ ಜೆಡಿಎಸ್ ನಿಂದ ದೂರ ಉಳಿದಿದೆ .

    ಹೀಗಾಗಿ ಪರಿಶಿಷ್ಟ ಜಾತಿ ಇತರೆ ಹಿಂದುಳಿದ ಮತ್ತು ಒಕ್ಕಲಿಗ ಸಮುದಾಯದ ಹೆಚ್ಚಿನ ಮತಗಳನ್ನು ಪಡೆಯಲು ಜೆಡಿಎಸ್ ರಣತಂತ್ರ ರೂಪಿಸಿದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡ ಚುನಾವಣೆ ತಂತ್ರಗಾರಿಕೆ ಹೆಣೆಯುವಲ್ಲಿ ಅತ್ಯಂತ ಚಾಣಾಕ್ಷರು ಹೀಗಾಗಿ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಯೋಗೇಶ್ವರ್ ಪರ ವಾತಾವರಣ ಇದ್ದಂತೆ ಕಂಡು ಬಂದರೂ ಕೂಡ ರಾಜಕೀಯ ಚಾಣಾಕ್ಷರ ತಂತ್ರ ಇವರಿಗೆ ದೊಡ್ಡ ಸವಾಲಾಗಿದೆ.

ಸಂಡೂರಿನ ಕೆಂಧೂಳಿನಲ್ಲಿ

ಗಣಿ ಉದ್ಯಮಿಗಳ  ಕದನ

    ವಿಜಯನಗರ ಜಿಲ್ಲೆಯ ಸಂಡೂರು ಕ್ಷೇತ್ರ‌ ಅತ್ಯಂತ ವಿಶಿಷ್ಟವಾದ ಕ್ಷೇತ್ರವಾಗಿದೆ.ಉದ್ಯಮಿಗಳೇ‌ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.ಇಲ್ಲಿ ಯಾರೇ ಅಭ್ಯರ್ಥಿಯಾದರೂ ಗಣಿ ಧಣಿಗಳ ನಡುವಿನ ಪಾರುಪತ್ಯಕ್ಕೆ ವೇದಿಕೆಯಾಗುತ್ತದೆ‌ ಇದಕ್ಕೆ ತನ್ನದೇ ಆದ ಇತಿಹಾಸವಿದೆ

    ಸಂಡೂರಿನ ರಾಜಮನೆತನ ಘೋರ್ಪಡೆ ಅವರ ಭದ್ರಕೋಟೆಯಾಗಿದ್ದ ಈ ಒಮ್ಮೆ ರಾಜವಂಶಸ್ಥ ಘೋರ್ಪಡೆ ಅವರು ಸ್ಪರ್ಧೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಮ್ಮ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮುಖಂಡ ಭೂಪತಿ ಅವರನ್ನು ಕಣಕ್ಕಿಳಿಸಿ ವಿಧಾನಸಭೆಗೆ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ.

    ಇಂತಹುದೇ ಪರಂಪರೆ ಇಲ್ಲಿ ಈಗಲೂ ಮುಂದುವರೆದಿದೆ. ಘೋರ್ಪಡೆ ಅವರ ನಂತರ ಈ ಕ್ಷೇತ್ರದ ಮೇಲೆ ಗಣಿ ಉದ್ಯಮಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಿಡಿತ ಹೊಂದಿದ್ದಾರೆ. ಕ್ಷೇತ್ರ ಪುನರ್ ವಿಂಗಡಣೆ ನಂತರ ಪರಿಶಿಷ್ಟ ವರ್ಗಕ್ಕೆ ಈ ಕ್ಷೇತ್ರ ಮೀಸಲಾದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರಕ್ಕೆ ಹೋದ ಅವರು ಇಲ್ಲಿಂದ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ತುಕರಾಮ್ ಅವರನ್ನು ಕಣಕ್ಕಿಳಿಸಿ ಆಯ್ಕೆಯಾಗುವಂತೆ ನೋಡಿಕೊಂಡರು ಈ ಮೂಲಕ ಕ್ಷೇತ್ರದ ಮೇಲೆ ತಮ್ಮ ಹಿಡಿತ ಅಲುಗಾಡದಂತೆ ನೋಡಿಕೊಂಡಿದ್ದಾರೆ

    ಅದರಂತೆ ಕ್ಷೇತ್ರದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ತುಕಾರಾಮ್ ಇದೀಗ ಈ ಕ್ಷೇತ್ರದಿಂದ ತಮ್ಮ ಪತ್ನಿಯನ್ನು ಕಣಕ್ಕಿಳಿಸಿದ್ದಾರೆ ಎಂದಿನಂತೆ ಸಂತೋಷ್ ಲಾಡ್ ದಂಪತಿಯ ಬೆನ್ನಿಗೆ ನಿಂತಿದ್ದಾರೆ ಮತ್ತೊಂದೆಡೆ ಬಿಜೆಪಿಯಿಂದ ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಕಣಕ್ಕಿಳಿದಿದ್ದು ಅವರಿಗೆ ಮತ್ತೊಬ್ಬ ಗಣಿ ಉದ್ಯಮಿ ಜನಾರ್ಧನ ರೆಡ್ಡಿ, ಬೆಂಗಾವಲಾಗಿದ್ದಾರೆ

     ಗಣಿ ಅಕ್ರಮ ಪ್ರಕರಣಗಳಿಂದಾಗಿ 13 ವರ್ಷಗಳ ಬಳಿಕ ಬಳ್ಳಾರಿಯಲ್ಲೇ ವಾಸ್ತವ್ಯಕ್ಕೆ ಅವಕಾಶ ಪಡೆದಿರುವ ಜನಾರ್ದನರೆಡ್ಡಿ ಜಿಲ್ಲೆಗೆ ಭೇಟಿ ನೀಡಿದ ಮರು ದಿನವೇ ಸಂಡೂರಿಗೆ ತೆರಳಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಅಷ್ಟೇ ಅಲ್ಲ ಅಲ್ಲಿಯೇ ಮನೆ ಮಾಡಿ ವಾಸ್ತವ್ಯ ಕೂಡ ಹೂಡಿದ್ದಾರೆ.

   ಹಲವು ಕಾರಣಗಳಿಂದ ಜನಾರ್ಧನರೆಡ್ಡಿ ಅವರೊಂದಿಗಿನ ಒಡನಾಟ ಕಡಿದುಕೊಂಡಿದ್ದ  ಮಾಜಿ ಸಚಿವ ಶ್ರೀರಾಮುಲು ಬಿಜೆಪಿ ಹಿರಿಯ ನಾಯಕರ ಮನವೊಲಿಕೆಯಿಂದ ನಿಲುವು ಬದಲಾಯಿಸಿದ್ದಾರೆ.

    ಈ ಇಬ್ಬರು ನಾಯಕರು ಒಟ್ಟಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಪಣತೊಟ್ಟು ಅಖಾಡದಲ್ಲಿ ಸೆಡ್ಡು ಹೊಡೆದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಸಾಕಷ್ಟು ಪ್ರಯಾಸ ಪಡಬೇಕಾಗುತ್ತದೆ.

    ಆದರೆ, ಟಿಕೆಟ್ ಆಕಾಂಕ್ಷಿಗಳಾಗಿದ್ದ ದಿವಾಕರ್, ಶಿಲ್ಪಾ ರಾಘವೇಂದ್ರ, ಮಾಜಿ ಸಂಸದ ದೇವೇಂದ್ರಪ್ಪ ಅವರು ನೀಡುವ ಒಳೇಟಿನ ಸಾಧ್ಯತೆ ಬಿಜೆಪಿ ಅಭ್ಯರ್ಥಿಯ ಚಿಂತೆಗೆ ಕಾರಣವಾಗಿದೆ.

   ಕ್ಷೇತ್ರದಲ್ಲಿ 1957 ರಿಂದ 2023ರವರೆಗೆ 14 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಿ ಕ್ಷೇತ್ರ ಕೈ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

    ಕ್ಷೇತ್ರದಲ್ಲಿ ಒಟ್ಟು 2,36,100 ಮತದಾರರಿದ್ದಾರೆ. ಎಸ್ಟಿ 65 ಸಾವಿರ, ಎಸ್ಸಿ 40 ಸಾವಿರ, ಲಿಂಗಾಯತ 35 ಸಾವಿರ, ಕುರುಬರು 30 ಸಾವಿರ, ಮುಸ್ಲಿಂ 10 ಸಾವಿರ, ಹಾಗೂ ಬ್ರಾಹ್ಮಣ, ಶೆಟ್ಟಿ, ಕಮ್ಮ, ಬಲಿಜ ಜಾತಿ ಹಾಗೂ ಇತರ ಸಮುದಾಯದ 40 ಸಾವಿರಕ್ಕೂ ಮತದಾರರಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿಯ ಜೊತೆಗೆ ಸಚಿವರಾದ ಜಮೀರ್ ಅಹ್ಮದ್ ಖಾನ್ ಮಾಜಿ ಸಚಿವ ಬಿ ನಾಗೇಂದ್ರ ನಿಂತಿರುವುದು ಮೇಲ್ನೋಟಕ್ಕೆ ಕಾಂಗ್ರೆಸ್ ಪರವಾಗಿ ವಾತಾವರಣ ಇರುವಂತೆ ಕಂಡುಬರುತ್ತದೆ ಒಳ ಮೀಸಲಾತಿ,ವಾಲ್ಮೀಕಿ ನಿಗಮದ ಅಕ್ರಮ ಮತ್ತು ಜಿಂದಾಲ್ ಗೆ ಭೂಮಿ ಹಸ್ತಾಂತರ ವಿಷಯ ಚುನಾವಣೆಯಲ್ಲಿ ಕೆಲಸ ಮಾಡಿದರೆ ಕಾಂಗ್ರೆಸ್ ಅಭ್ಯರ್ಥಿಗೆ ತೊಡಕಾಗಲಿದೆ.

ಶಿಗ್ಗಾಂವಿಯಲ್ಲಿ 3ನೇ ಬೊಮ್ಮಾಯಿ!

ಬಿಜೆಪಿಯಲ್ಲಿ ವಂಶಾಡಳಿತ ಇಲ್ಲ ಗೊತ್ತಾ!?

    ಹಾವೇರಿ ಜಿಲ್ಲೆಯ ಶಿಗ್ಗಾವಿ- ಸವಣೂರು ವಿಧಾನಸಭಾ ಕ್ಷೇತ್ರ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ ಈ ಕ್ಷೇತ್ರ ಇದೀಗ ಒಂದು ಕುಟುಂಬದ ಮೂರನೇ ತಲೆಮಾರಿನ ವ್ಯಕ್ತಿಯ ಸ್ಪರ್ಧೆಗೆ ಅವಕಾಶ ಕಲ್ಪಿಸಿದೆ.

    ಕ್ಷೇತ್ರದಲ್ಲಿ ಒಟ್ಟು 2,33,158 ಮತದಾರರಿದ್ದಾರೆ ಇದರಲ್ಲಿ ಲಿಂಗಾಯತ - 75,000, ಅಲ್ಪಸಂಖ್ಯಾತರು- 55,000, ಕುರುಬರು-27,000, ಪರಿಶಿಷ್ಟ ಜಾತಿ- 25,000, ಪರಿಶಿಷ್ಟ ಪಂಗಡ- 17,000, ಇತರೆ - 30,000 ಮತದಾರರಿದ್ದಾರೆ.

     ಬಸವರಾಜ ಬೊಮ್ಮಾಯಿ ಸತತವಾಗಿ ನಾಲ್ಕು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದು ಇದೀಗ ತಮ್ಮ ಪುತ್ರನ ಆಯ್ಕೆ ಬಯಸುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಎದುರಿಗೆ ನಾಲ್ಕು ಬಾರಿ ಸೋತಿರುವ ಕಾಂಗ್ರೆಸ್ ಈ ಬಾರಿ ಗೆಲುವಿನ ನಗೆ ಬೀರಲು ತಂತ್ರ ರೂಪಿಸಿದೆ.

    2023ರ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 36,000 ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ವಿನೋದ ಅಸೂಟಿ ಅವರು ಪ್ರಹ್ಲಾದ್ ಜೋಶಿಯವರಿಗಿಂತಲೂ 8,598 ಹೆಚ್ಚು ಮತ ಪಡೆದಿದ್ದರು. ಇದನ್ನು ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ಗೆಲುವಿನ ವಿಶ್ವಾಸದಲ್ಲಿದೆ.

    ಬಿಜೆಪಿಗೆ ಎದಿರೇಟು ನೀಡಬೇಕು ಎಂದು ಕಾಂಗ್ರೆಸ್ ಈ ಬಾರಿ ತನ್ನ ರಣತಂತ್ರ ಬದಲಾಯಿಸಲು ತೀರ್ಮಾನಿಸಿತ್ತು. ಸಾಂಪ್ರದಾಯಿಕವಾಗಿ ಈ ಕ್ಷೇತ್ರವನ್ನು ಕಾಂಗ್ರೆಸ್ ನಿಂದ ಮುಸ್ಲಿಂ ಅಭ್ಯರ್ಥಿಗಳು ಪ್ರತಿನಿಧಿಸುತ್ತಿದ್ದಾರೆ ಈ ಬಾರಿ ಇದನ್ನು ಬದಲಾಯಿಸಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿತ್ತು ಒಂದು ವೇಳೆ ಇದು ಕಾರ್ಯರೂಪಕ್ಕೆ ಬಂದಿದ್ದಲ್ಲಿ ಚುನಾವಣೆಯ ಅಖಾಡದಲ್ಲಿ ಲೆಕ್ಕಾಚಾರಗಳು ಬೇರೆ ರೀತಿಯಲ್ಲಿ ಇರುತ್ತಿದ್ದವು.

    ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಸಾಮಾಜಿಕ ನ್ಯಾಯ ತತ್ವದ ಹಿನ್ನೆಲೆಯಲ್ಲಿ ಈ ಕ್ಷೇತ್ರ ಮತ್ತೆ ಮುಸ್ಲಿಂ ಅಭ್ಯರ್ಥಿಗೆ ದಕ್ಕಿದೆ. ಕಳೆದ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿರುವ ಸೈಯದ್ ಯಾಸಿರ್ ಖಾನ್ ಪಠಾಣ್ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸಲಾಗಿದೆ. ಇವರ ಆಯ್ಕೆಯ ವಿರುದ್ಧ ಬಂಡಾಯ ಸಾರಿದ ಮಾಜಿ ಶಾಸಕ ಅಜ್ಜಂ ಪೀರ್ ಖಾದ್ರಿ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

     ಸಚಿವರಾದ ಜಮೀರ್ ಅಹಮದ್ ಖಾನ್, ಎಚ್ ಕೆ ಪಾಟೀಲ್ ಮತ್ತು ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಚುನಾವಣೆಯ ಜವಾಬ್ದಾರಿ ನೀಡಲಾಗಿದ್ದು ಮೂವರು ತಂತ್ರಗಾರಿಕೆ ಹೆಣೆಯುವಲ್ಲಿ ನಿಪುಣರು. ಆದರೆ ಹುಬ್ಬಳ್ಳಿ ಗಲಭೆಯ ಆರೋಪಿಗಳ ವಿರುದ್ಧದ ಪ್ರಕರಣ ವಾಪಸ್, ಒಳ ಮೀಸಲಾತಿ ಮತ್ತು ಜಾತಿವಾರು ಜನಗಣತಿ ಚುನಾವಣೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಗಳು ಈಗಾಗಲೇ ಗೋಚರಿಸುತ್ತಿದ್ದು ಕಾಂಗ್ರೆಸ್ ಅಭ್ಯರ್ಥಿ ಸಾಕಷ್ಟು ಬೆವರು ಹರಿಸಬೇಕಾಗುತ್ತದೆ.

    ಹಾಗೆ ನೋಡಿದರೆ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಅನುಕೂಲಕರ ಅಂಶಗಳು ಇರುವಂತೆ ಕಂಡುಬರುತ್ತಿದೆ ಕೇಂದ್ರ ಸಚಿವ ಪ್ರಹಲ್ಲಾದ ಜೋಶಿ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಬಸವರಾಜ ಬೊಮ್ಮಾಯಿ ಕ್ಷೇತ್ರದ ಎಲ್ಲಾ ಮುಖಂಡರನ್ನು ಒಟ್ಟಿಗೆ ಕರೆದುಕೊಂಡು ತಮ್ಮ ಪುತ್ರನನ್ನು ದಡ ಸೇರಿಸಲು ತಂತ್ರ ಹೆಣೆಯುತ್ತಿದ್ದಾರೆ ಆದರೆ, ಟಿಕೆಟ್ ಆಕಾಂಕ್ಷಿಗಳಾಗಿದ್ದ ಬೊಮ್ಮಾಯಿ ಅವರ ನಿಕಟವರ್ತಿ ಶಶಿಧರ್ ಎಲಿಗಾರ, ಶ್ರೀಕಾಂತ ದುಂಡಿಗೌಡ್ರ  ಅವರ ಬಂಡಾಯ ಬಿಜೆಪಿ ಅಭ್ಯರ್ಥಿ ಯ ನಿದ್ದೆಗೆಡುವಂತೆ ಮಾಡಿದೆ.