೬೦ರ ಹಿನ್ನೋಟ- ಮಾದಪ್ಪನ ‘ಬಕೆಟ್’ ರಹಸ್ಯ ಮತ್ತು ಬೆಲ್ಲ -ಹೆಚ್.ವಿ.ರಂಗಸ್ವಾಮಿ
೬೦ರ ಹಿನ್ನೋಟ- ಮಾದಪ್ಪನ ‘ಬಕೆಟ್’ ರಹಸ್ಯ ಮತ್ತು ಬೆಲ್ಲ -ಹೆಚ್.ವಿ.ರಂಗಸ್ವಾಮಿ
೬೦ರ ಹಿನ್ನೋಟ-
ಮಾದಪ್ಪನ ‘ಬಕೆಟ್’ ರಹಸ್ಯ ಮತ್ತು ಬೆಲ್ಲ
-ಹೆಚ್.ವಿ.ರಂಗಸ್ವಾಮಿ
ಪಂಚನಹಳ್ಳಿ ಮಾಧ್ಯಮಿಕ ಶಾಲೆಗೆ ಸೇರಿಕೊಂಡು ಹಾಸ್ಟಲ್‌ನಲ್ಲಿ ಇರತೊಡಗಿದೆ. ಹಾಸ್ಟಲ್ ಪಂಚನಹಳ್ಳಿ ಕಾಲೇಜಿನ ಮುಂಭಾಗದ ವೃತ್ತದಿಂದ ಕಣಕಟ್ಟೆ ಮಾರ್ಗದಲ್ಲಿ ರಸ್ತೆಯ ಎಡ ಭಾಗಕ್ಕೆ ಎರಡು ಫÀರ್ಲಾಂಗು ದೂರದಲ್ಲಿತ್ತು. ಆಣೆಗೆರೆಯಲ್ಲಿ ಏಳನೇ ಕ್ಲಾಸ್ ಪಾಸಾದ ಶಿವಣ್ಣ, ನಮ್ಮೂರಿನ ಗುಡೇಗೌಡರ ಮೊಮ್ಮಗ ಶ್ರೀನಿವಾಸ್, ಹಾರ್ನಳ್ಳಿ ಮಹೇಶ್ ಇವರೆಲ್ಲಾ ಹಾಸ್ಟಲ್ ಸೇರಿದ್ದರು. ಇವರಾರು ಬಡವರೇನೂ ಆಗಿರಲಿಲ್ಲ. ಅನುಕೂಲಕ್ಕಾಗಿ ಮಾತ್ರವೇ ಹಾಸ್ಟಲ್‌ನಲ್ಲಿದ್ದರು. ನಾನು ಮೊದಲೇ ಹೇಳಿದಂತೆ ಇದು ಜನರಲ್ ಹಾಸ್ಟಲ್. ಇಲ್ಲಿ ಎಲ್ಲಾ ವರ್ಗದ ಎಲ್ಲಾ ಜಾತಿಯ ಜನರಿದ್ದರು. ಸುತ್ತಮುತ್ತಲಿನ ಊರವgಷ್ಟೇ ಅಲ್ಲ, ಜಿಲ್ಲೆಯ ಇತರ ಭಾಗಗಳಿಂದ, ಅಕ್ಕ-ಪಕ್ಕದ ಜಿಲ್ಲೆಗಳಿಂದಲೂ ಇಲ್ಲಿಗೆ ಓದಲು ಬರುತ್ತಿದ್ದವರು ಹಾಸ್ಟಲ್‌ನಲ್ಲಿ ಸೇರಿಕೊಳ್ಳುತ್ತಿದ್ದರು. ಆಣೇಗೆರೆಯವರೆಂದರೆ ಪುಂಡಾಟಕ್ಕೆ ಹೆಸರುವಾಸಿಯಾದ ಹುಡುಗರು ಇರಲಾಗಿ, ಅದೆಷ್ಟು ಮಾಮೂಲಿಯಾಗಿತ್ತು ಅಂದರೆ ಹಾಸ್ಟಲ್‌ಗೆ ಸಂಬAಧಪಟ್ಟAಗೆ ಏನಾದರೂ ಗದ್ದಲ ಗಲಾಟೆಯಾದರೆ,ಬೇರೆ ಯಾರಾದರೂ ಆದಲ್ಲಿ ನಿರ್ದಿಷ್ಟವಾಗಿ ಹೇಳಬೇಕಿತ್ತು, ಆದರೆ ಆಣೆಗೆರೆಯವರಾದರೆ, ʼಅದೇ ಆಣೆಗೆರೇವುʼ ಅಂತ ಮುಗಿಸಿಬಿಡುತ್ತಿದ್ದರು.
ಪಂಚನಹಳ್ಳಿಯಲ್ಲಿ ಆಗ ಸಿನಿಮಾ ಟೆಂಟು ಇರಲಿಲ್ಲ. ಸಿನಿಮಾ ನೋಡಬೇಕೆಂದರೆ ಪಂಚನಹಳ್ಳಿಯಿAದ ಹತ್ತಿರದ ಸಿನಿಮಾ ಟೆಂಟು ಇದ್ದ ಊರು ಕಣಕಟ್ಟೆಗೆ ಹೋಗಬೇಕಿತ್ತು. ಒಂದು ದಿನ ನಮ್ಮ ಹಾಸ್ಟಲ್‌ನ ಅಡಿಗೆಯವರೊಬ್ಬರು ಅದಾವುದೋ ಸಿನಿಮಾಕ್ಕೆ ಹೋಗುವ ಬಗ್ಗೆ ಹುರಿದುಂಬಿಸಿ ಒಂದೆAಟತ್ತು ಜನರನ್ನ ಹೊರಡಿಸಿಯೇ ಬಿಟ್ಟರು. ಪಂಚನಹಳ್ಳಿಯಿಂದ ಕಣಕಟ್ಟೆಗೆ ʼಫಸ್ಟ್ ಶೋʼ ಶುರುವಾಗುವ ಸಮಯಕ್ಕೆ ತಲುಪುವಂತೆ ಸರ್ಕಾರಿ ಕೆಂಪು ಬಸ್ಸೊಂದು ಜೂನಿಯರ್ ಕಾಲೇಜಿನ ಮುಂದೆ ಬಂದು ಕಣಕಟ್ಟೆ ಕಡೆ ಮುಖ ಮಾಡಿಕೊಂಡು ನಿಂತು ಬಿಡುತ್ತಿತ್ತು. ನಾವು ಹಾಸ್ಟಲ್ ನಿಂದ ಕಾಣುವಷ್ಟು ದೂರದಲ್ಲಿ ನಿಂತು ಪೂರ್ತ ʼಆಫ್ʼ ಆಗದೆ ಬುರ್ ಬುರ್ ಅಂತ ಶಬ್ಧ ಮಾಡುತ್ತಾ ತರಾತುರಿಯಲ್ಲಿರುತ್ತಿದ್ದುದು ನಮಗೆ ʼರ‍್ರಿ , ರ‍್ರಿ ಸಿನಿಮಾಕ್ಕೆ ಹೋಗೋಣʼ ಅಂತ ಕರೆಯುತ್ತಿರುವಂತೆ ಭಾಸವಾಗುತ್ತಿತ್ತು. ಈ ರೀತಿ ಪ್ರಚೋದನೆಗೊಂಡವರು ಆಗಾಗ ಸಿನಿಮಾಕ್ಕೆ ಹೋಗಿ ಬರುವ ಬಗ್ಗೆ ಮ್ಯಾನೇಜರ್ ಪರ್ಮಿಶನ್‌ನೊಂದಿಗೆ ಅಡಿಗೆ ಸಗುಣಪ್ಪನ ಜೊತೆಯಲ್ಲೋ, ಶಿವಮ್ಮ, ಮಹಂತಮ್ಮನವರ ಜೊತೆಯಲ್ಲೋ ಹೋಗಿ ಬರುತ್ತಿದ್ದು ರೂಢಿಯಲ್ಲಿತ್ತು.
ಈ ದಿನವೂ ಅದೇ ರೀತಿ ಯಾರೋ ಹುಡುಗರು ಪುಸಲಾಯಿಸಿ ಅಡಿಗೆಯವರೊಂದಿಗೆ ಸಿನಿಮಾಕ್ಕೆ ಹೋಗುವ ಯೋಜನೆ ಸಿದ್ಧವಾಗಿತ್ತು. ಆ ತಂಡದಲ್ಲಿ ನಾನೂ ಇದ್ದೆ. ಈ ಸರ್ಕಾರಿ ಬಸ್ಸನ್ನು ನಾವು ಕರೆಯುತ್ತಿದ್ದುದು ಮಾದಪ್ಪನ ಬಸ್ಸು ಅಂತ. ಪಂಚನಹಳ್ಳಿಗೆ ನಾಲ್ಕಾರು ದಿಕ್ಕುಗಳಿಂದ ಸರ್ಕಾರಿ, ಖಾಸಗಿ ಬಸ್ಸುಗಳು ಬರುತ್ತಿದ್ದವಾದರೂ, ಯಾವುದೇ ಬಸ್ಸನ್ನು ಚಾಲಕನ ಹೆಸರಿಟ್ಟು ಕರೆಯುತ್ತಿರಲಿಲ್ಲ. ಆದರೆ ಈ ಬಸ್ಸಿಗೆ ಮಾತ್ರ ಮಾದಪ್ಪನ ಬಸ್ಸು ಅಂತಲೇ ಕರೆಯಲು ಬಹಳ ಮುಖ್ಯವಾದ ಕಾರಣವಿತ್ತು. ಡ್ರೈವರ್ ಮಾದಪ್ಪ ಭಾರೀ ಧಡೂತಿ ಆಳು. ಅವನ ಇಡೀ ಶರೀರದಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದು ಅವನ ಹೊಟ್ಟೆಯ ಗಾತ್ರ. ಈ ಡೊಳ್ಳೊಟ್ಟೆ ಮಾದಪ್ಪನಿಗೆ ಸ್ಟೇರಿಂಗು ಮತ್ತು ಅವನು ಕೂರುವ ಪೀಠದ ಮಧ್ಯೆ ಸರಿಯಾಗಿ ಅವನ ಹೊಟ್ಟೆ ಫಿಕ್ಸ್ ಆಗಿ, ಆ ಹೊಟ್ಟೆ ಮೇಲು ಭಾಗದಿಂದ ತನ್ನ ಎರಡೂ ಕೈಗಳನ್ನ ಚಾಚಿ ಸ್ಟೇರಿಂಗ್ ತಿರುಗಿಸಲು ಅನುವಾಗುವಂತೆ ಅನುಕೂಲವಿದ್ದ ಒಂದು ಬಸ್ಸನ್ನು ಈತನಿಗಾಗಿಯೇ ಮೀಸಲಿಡಲಾಗಿತ್ತು. ಈ ಮಾದಪ್ಪನ ಇನ್ನೊಂದು ವಿಶೇಷವೇನೆಂದರೆ ಆತನಿಗೆ ಪಂಚನಹಳ್ಳಿಗೆ ಬರುತ್ತಿದ್ದಂತೆ ಒಂದೊAದು ಬಾರಿ ಬಹಿರ್ದೆಸೆಗೆ ತರಾತುರಿಯಾಗಿಬಿಡುತ್ತಿತ್ತು. ಆಗಿನ್ನೂ ಸ್ವಚ್ಛ ಭಾರತ ಅಭಿಯಾನ ಶುರುವಾಗಿರಲಿಲ್ಲವಾಗಿ ಚೆಂಬು ಕೈಯಲ್ಲಿ ಹಿಡಿದು ಎಲ್ಲಿ ಮರೆ ಇದೆಯೋ ಅಲ್ಲಿ ಕೂತು, ಎಲ್ಲಾ ಮುಗಿದ ಮೇಲೆ ತೊಳಕಂಡು ವಾಪಸ್ಸಾಗುವ ಕಾಲವದು. ಮಳೆಗಾಲವಾದರೆ ಚೆಂಬಿನ ಅಗತ್ಯವೇನೂ ಇರುತ್ತಿರಲಿಲ್ಲ. ಎಲ್ಲೋ ಒಂದು ಕಡೆ ನಿಂತ ಎಂತದೋ ನೀರಾದರೂ ಸಾಕು, ಎಡಗೈನಲ್ಲಿ ಎಲ್ಲದೂ ಮುಗಿದುಬಿಡುತ್ತಿತ್ತು. ಆದರೆ ಈ ಮಾದಪ್ಪನಿಗೆ ಮಾತ್ರ ಯಾವದೇ ಕಾಲವಿರಲಿ ಬರೀ ಚೆಂಬಾಗಲಿ, ನಿಂತ ನೀರಾಗಲಿ ಸುತಾರಾಂ ಸಾಧ್ಯವಾಗುತ್ತಿರಲಿಲ್ಲ. ಅವನು ಚೆಂಬಿನ ಬದಲಾಗಿ ಒಂದು ಬಕೆಟ್ಟನ್ನೇ ಈ ಕಾರ್ಯಕ್ಕೆ ಎತ್ತಿಕೊಂಡು ಹೋಗಿ ಬಿಡುತ್ತಿದ್ದ. ಅದಕ್ಕಾಗಿಯೇ ಯಾವಾಗಲೂ ಒಂದು ಕಬ್ಬಿಣದ ಬಕೆಟ್ಟನ್ನೂ ಆ ಬಸ್ಸಿನಲ್ಲಿ ಇಟ್ಟುಕೊಂಡಿರುತ್ತಿದ್ದ. ನಮ್ಮ ಹಾಸ್ಟಲ್ ಮಾರ್ಗದ ಎದುರಿನ ಜೂನಿಯರ್ ಕಾಲೇಜು ಮೈದಾನದ ಪಕ್ಕದ ಹೊಲದ ಬದುವಿನ ಮರೆ ಅವನ ನಿತ್ಯ ಕರ್ಮದ ಪ್ರಶಸ್ತ ಸ್ಥಳ. ನಮಗೆಲ್ಲಾ ಒಂದೇ ಚೆಂಬು ಸಾಕಾದರೆ, ಮಾದಪ್ಪನಿಗೆ ಒಂದು ಬಕೆಟ್ ಸ್ನಾನ ಮಾಡುವಷ್ಟು ನೀರಿನ ಅಗತ್ಯವೇನು ಅನ್ನುವ ಕುತೂಹಲ. ಸಾಮಾನ್ಯವಾಗಿ ಈ ರೀತಿ ಮಾದಪ್ಪ ಬಕೆಟ್ ಎತ್ತಿಕೊಂಡು ಹೊರಟಾಗ ನಮ್ಮ ಹಾಸ್ಟಲ್‌ನ ಕಿಡಿಗೇಡಿ ಹುಡುಗರು ಬೇಕೆಂತಲೇ “ಏನೋ ಲಗೇಜು ಇಳಿಸಿ ಬರಾಕೆ ಹೋಗ್ತಿರಂಗೈತೆ” ಅಂತ ಕಿಚಾಯಿಸುತ್ತಿದ್ದದ್ದು ಸಾಮಾನ್ಯವಾಗಿತ್ತು. ಮಾದಪ್ಪ ಅದಕ್ಕೆ “ನಾನು ಇಳಿಸಿ ಬತ್ತೀನಿ, ಆಮೇಲೆ ನೀನು ಬಂದು ತುಂಬಿ ಕಂಡೋಗು” ಅಂತ ತಿರುಗುಬಾಣ ಬಿಡುತ್ತಿದ್ದ. ಈ ರೀತಿ ಹಾಸ್ಟಲ್ ಹುಡುಗರಾದ ನಮಗೂ, ಮಾದಪ್ಪನಿಗೂ ಒಂದು ರೀತಿ ಬಾದರಾಯಣ ಸಂಬAಧ ಏರ್ಪಟ್ಟಿತ್ತಾದರೂ, ಮಾದಪ್ಪ ಮಧ್ಯಮ ಗಾತ್ರದ ಬಕೆಟ್‌ನೊಂದಿಗೆ ಹೋಗುವುದು ಮಾತ್ರ ನಮಗೆ ಅರ್ಥವಾಗಿರಲಿಲ್ಲ. ಹೀಗಿರುವಾಗ ನಮ್ಮ ಹಾಸ್ಟಲ್‌ನ ಪತ್ತೇದಾರಿಕೆ ಮನೋಭಾವದ ಪುಂಡನೊಬ್ಬ ಈ ಮಾದಪ್ಪನಿಗೆ ಕಾಣದಂತೆ ಅವನನ್ನ ಅನುಸರಿಸಿ ಕಾರಣವನ್ನು ಪತ್ತೆ ಹಚ್ಚಿಬಿಟ್ಟ!
ಈ ಡೊಳ್ಳೊಟ್ಟೆ ಮಾದಪ್ಪನಿಗೆ ಎಲ್ಲರಂತೆ ಕುಕ್ಕರಗಾಲ ಮೇಲೆ ಕೂತು ಕಕ್ಕಸ ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ಆ ಬಕೆಟ್ಟನ್ನು ನೆಲದ ಮೇಲಿಟ್ಟು, ಅದರ ಕಂಠ ಹಿಡಿದು ನಿಧಾನಕ್ಕೆ ನೆಲದ ಕಡೆಗೆ ಕುಂಡಿ ಇಳಿಸುತ್ತಾ, ಎರಡೂ ತೊಡೆಗಳ ಮಧ್ಯೆ ಬಕೆಟ್ ಅನ್ನು ಅಡ್ಜಸ್ಟ್ ಮಾಡಿದಾಗ ಮಾತ್ರ ಮುಂದಿನ ಕೆಲಸ ಸಲೀಸು. ನಾವೆಲ್ಲಾ ಗುಂಪಿನಲ್ಲಿ ಸಿನಿಮಾಕ್ಕೆ ಅಂತ ಹೊರಟ ಈ ದಿನವೂ ಮಾದಪ್ಪನ ನಿತ್ಯಕರ್ಮದ ಸರದಿ ಇರಲಾಗಿ ಬಸ್ಸು ಮಾಮೂಲಿಗಿಂತ ಸ್ವಲ್ಪ ಹೊತ್ತು ಜಾಸ್ತಿ ಹೊತ್ತು ನಿಂತಿತ್ತು. ಈ ಮಧ್ಯೆ ಶಿವಣ್ಣ ಮತ್ತು ಮಾಯ-ಮಹೇಶ ಅಂತ ನಿಜ ನಾಮ-ಇಬ್ಬರೂ ಕೂತಿದ್ದವರು ಕೆಳಗೆ ಇಳಿದು ಹೋದರು. ಮಾದಪ್ಪ ಎಲ್ಲಾ ಮುಗಿಸಿ ಹಿಂತಿರುಗಿದರೂ, ಈ ಇಬ್ಬರು ಐನಾತಿಗಳು ಮಾತ್ರ ನಾಪತ್ತೆ. ಸಿನಿಮಾಕ್ಕೆ ಟೇಮು ಮೀರುತ್ತಿತ್ತಾಗಿ, ವಾಪಸ್ಸು ಹಾಸ್ಟಲ್ ಗೆ ಹೋಗಿರಬಹುದು ಅಂತ ನಮ್ಮ ಪಾಡಿಗೆ ನಾವು ಮಾದಪ್ಪನ ಬಸ್ಸಿನಲ್ಲಿ ಕಣಕಟ್ಟೆ ತಲುಪಿದೆವು.
ಸಿನಿಮಾ ನೋಡಿಕೊಂಡು ಹಾಸ್ಟಲ್‌ಗೆ ವಾಪಸ್ಸಾದಾಗ ಈ ನಾಪತ್ತೆಯಾಗಿದ್ದ ಈ ಇಬ್ಬರು ಬೆಲ್ಲದ ಉಂಡೆಗಳನ್ನು ಕೈಯಲ್ಲಿ ಹಿಡ್ಕೊಂಡು ಮೂಗು, ಮುಸುಡಿಯಲ್ಲಾ ಬೆಲ್ಲಮಯ ಮಾಡಿಕೊಂಡು ತಮ್ಮ ಕಡೆ ಆಸೆಯಿಂದ ನೋಡಿದವರಿಗೆ ನಾಯಿಗೆ ಎಸೆದಂತೆ ಒಂದು ಸಣ್ಣ ತುಂಡು ಬೆಲ್ಲವನ್ನು ಎಸೆಯುತ್ತಿದ್ದರು. ಸಿನಿಮಾದಿಂದ ಹಿಂತಿರುಗಿದ ನಮ್ಮನ್ನ ನೋಡಿದವರೆ “ಸಿನಿಮಾ ಚೆನ್ನಾಗಿತ್ತೋ? ಇಲ್ಲಿ ನೋಡ್ರಿ ಬೆಲ್ಲ!” ಅಂತ ಕಿಚಾಯಿಸಿ ಏನೋ ಮಹಾನ್ ಸಾಧನೆ ಮಾಡಿದವರಂತೆ, ತಮ್ಮ ಈ ಸಾಹಸದ ಮುಂದೆ ಆ ಜುಜುಬಿ ಸಿನಿಮಾ ಯಾವ ಮಹಾ?! ಅನ್ನುವಂತೆ ಅಣಕ ಮಾಡಿಬಿಟ್ಟರು. ಅವರ ಕೈಯಲ್ಲಿದ್ದ ಬೆಲ್ಲದ ಉಂಡೆಗಳನ್ನು ನೋಡಿದ ನಮಗೂ ಆ ಕ್ಷಣಕ್ಕೆ ಸ್ವಲ್ಪ ಪಿಚ್ ಅನ್ನಿಸಿದ್ದು ಹೌದು. ಸಾಮಾನ್ಯವಾಗಿ ಪಂಚನಹಳ್ಳಿ ಸಂತೆ ದಿನ ಹಾಸ್ಟಲ್ ಹುಡುಗರು ಸಂತೆ ಬೀದಿಯಲ್ಲಿ, ಅದೂ ಬೆಲ್ಲ, ಕಡಲೆಕಾಯಿ ಗುಡ್ಡೆಗಳಿದ್ದ ಕಡೇನೇ ಗಸ್ತು ತಿರುಗಿ ಒಂದೆರಡು ಉಂಡೆಗಳನ್ನ ಲಪಟಾಯಿಸುತ್ತಿದ್ದುದು ಮಾಮೂಲಿಯಾಗಿತ್ತಾಗಿ, ಆ ಗುಡ್ಡೆ ಮಾಲೀಕರುಗಳು ಬಹಳ ಹುಷಾರಾಗಿರುತ್ತಿದ್ದರು. ಏನೇ ಹುಷಾರಾಗಿದ್ದರೂ ವ್ಯಾಪಾರ ಮಾಡುವ ಜನರ ಮಧ್ಯೆ ತೂರಿಕೊಂಡು ಒಂದೆರಡು ಉಂಡೆ ಲಪಟಾಯಿಸಿ ಹಾಸ್ಟಲ್‌ಗೆ ಬಂದು ತಮ್ಮ ಚಾಣಾಕ್ಷತನದ ಬಗ್ಗೆ ಹೇಳಿಕೊಳ್ಳುವುದು ಇದ್ದೇ ಇತ್ತು. ಇಂತ ಕೃತ್ಯಗಳಿಗೆ ಈ ಜೋಡಿ ಹೆಸರುವಾಸಿಯಾಗಿತ್ತು. ಆದರೆ ಈವತ್ತಿನ ದೃಶ್ಯ ಮಾತ್ರ ಭಿನ್ನವಾಗಿತ್ತು. ಈ ಇಬ್ಬರ ಟ್ರಂಕಿನಲ್ಲಿದ್ದ ಎಲ್ಲಾ ಪುಸ್ತಕಗಳನ್ನ ನಿಕೃಷ್ಟವಾದ ವಸ್ತುಗಳಂತೆ ಹೊರಗೆ ಗುಡ್ಡೆ ಹಾಕಲಾಗಿತ್ತು. ಟ್ರಂಕ್ ಒಳಗಿನ ಪುಸ್ತಕಗಳ ಸ್ಥಾನವನ್ನು ಬೆಲ್ಲದ ಉಂಡೆಗಳು ಆಕ್ರಮಿಸಿಬಿಟ್ಟಿದ್ದವು. ಈ ಇಬ್ಬರ ಟ್ರಂಕ್ ತುಂಬಾ ಬೆಲ್ಲದ ಉಂಡೆಗಳೇ!
ಅನಾಯಾಸವಾಗಿ ಈ ಇಬ್ಬರೂ ಈ ಪಾಟಿ ಬೆಲ್ಲದ ಉಂಡೆಗಳ ಮಾಲೀಕರಾದ ಬಗ್ಗೆ ನಮಗೆ ಸೋಜಿಗ ಮತ್ತು ಹೊಟ್ಟೆಕಿಚ್ಚು. ಈ ಇಬ್ಬರೂ ನಾವೆಲ್ಲಾ ಸಿನಿಮಾಕ್ಕೆ ಹೋಗಲು ಬಸ್ಸು ಹತ್ತಿ ಕೂತಿದ್ದಾಗ ಮಾದಪ್ಪ ಬಕೆಟ್ ಹಿಡಿದು ಹೋದದ್ದು ನೋಡಿ ಕೆಳಗೆ ಇಳಿದವರು ಮತ್ತೆ ನಮ್ಮ ಜೊತೆ ಸಿನಿಮಾಕ್ಕೆ ಬರದ್ದರ ಬಗ್ಗೆ ಈ ಹಿಂದೆ ಹೇಳಿದ್ದೇನೆ. ಬಸ್ಸಿನಿಂದ ಇಳಿದ ಈ ಇಬ್ಬರೂ ಹಿಂದಿನ ಏಣಿಯಿಂದ ಬಸ್ಸಿನ ಮೇಲಕ್ಕೆ ಹತ್ತಿದ್ದಾರೆ. ಆಟಕ್ಕೋ, ಕುಚೇಷ್ಟೆಗಾಗಿಯೋ ಮೇಲೆ ಹತ್ತಿದಾಗ ಮೂಗಿಗೆ ಬೆಲ್ಲದ ವಾಸನೆ ಬಡಿದು ಜಾಗೃತರಾಗಿ ಹುಡುಕಿದಾಗ ಈ ಬೆಲ್ಲದ ಮೂಟೆ ಗೋಚರವಾಗಿದೆ. ಆಗೀಗ ಒಂದೋ, ಎರಡೋ ಉಂಡೆ ಮಾತ್ರ ಬೆಲ್ಲವನ್ನಷ್ಟೇ ಸವಿದು ಇನ್ನೂ ಅತೃಪ್ತ ಆತ್ಮಗಳೇ ಆಗಿದ್ದ ಇವರಿಗೆ, ಆ ಮೂಟೆ ಹರಿದು ಎಷ್ಟು ಬೇಕೋ ಅಷ್ಟು ಉಂಡೆಗಳನ್ನು ಲಪಟಾಯಿಸುವಷ್ಟು ತಾಳ್ಮೆಯಾಗಲಿ, ಅಥವಾ ಮೂಟೆ ಹರಿಯಲು ಹತಾರವಾಗಲಿ ಸಿಗಲಿಲ್ಲವಾಗಿ, ಒಬ್ಬ ಬಸ್ಸಿನ ಮೇಲಿಂದ ಇಳಿಬಿಟ್ಟ ಮೂಟೆಯನ್ನ ಮತ್ತೊಬ್ಬ ಬೆನ್ನಾಯಿಸಿ ಹೊತ್ತುಕೊಂಡಾದ ಮೇಲೆ ಸೀದಾ ಹಾಸ್ಟಲ್‌ಗೆ ಅದನ್ನು ಸಾಗಿಸಿ, ನಿರುಪಯುಕ್ತ ಪುಸ್ತಕಗಳನ್ನ ಟ್ರಂಕ್ ನಿಂದ ಬಿಸಾಕಿ, ಅಮೂಲ್ಯ ಬೆಲ್ಲದ ಉಂಡೆಗಳನ್ನು ಅವುಗಳ ಜಾಗಕ್ಕೆ ಸೇರಿಸಿದ್ದಾರೆ.
ಆ ಬೆಲ್ಲದ ಉಂಡೆಗಳನ್ನ ಇತಿಮಿತಿಯಲ್ಲಿ ತಿಂದಿದ್ದರೂ ಪರವಾಗಿರಲಿಲ್ಲ; ಒಂದು ವೇಳೆ ಎಲ್ಲರಿಗೂ ಹಂಚಿದ್ದರೂ ಆಗಿತ್ತು. ಈ ಎರಡನ್ನೂ ಇವರು ಮಾಡಲಿಲ್ಲವಾಗಿ ಮೂರು ಪರಿಣಾಮಗಳಿಗೆ ಇದು ಕಾರಣವಾಯ್ತು:
ರ‍್ರಾಬರ‍್ರಿ ಬೆಲ್ಲ ತಿಂದದ್ದರಿAದ ಮಾರನೆ ದಿನ ಹೊಟ್ಟೆ ನೋವು ಬೇದಿ ಶುರುವಾಗಿ ಈ ಇಬ್ಬರೂ ಸ್ಕೂಲಿಗೆ ಚಕ್ಕರ್, ಹಾಸ್ಟಲ್ ಪಕ್ಕದ ಹೊಲದಲ್ಲಿ ಹಾಜರ್! ನಮಗೆಲ್ಲಾ ಈ ಇಬ್ಬರಿಗೆ ಈ ಗತಿಯಾದದ್ದಕ್ಕೆ ಆನಂದವೋ ಆನಂದ. ನಮಗೂ ತೃಪ್ತಿಯಾಗುಷ್ಟು ಬೆಲ್ಲ ಕೊಟ್ಟಿದ್ದರೆ ಈ ಗತಿ ಇವರಿಗೆ ಬರುತ್ತಿರಲಿಲ್ಲ ಅನ್ನೋದು ನಮ್ಮ ವಾದ.
ಎರಡನೆಯ ಪರಿಣಾಮವೆಂದರೆ, ಮಾರನೆ ದಿನ ಮಧ್ಯಾಹ್ನಕ್ಕೆ ಈ ಇಬ್ಬರ ಟ್ರಂಕ್ ನಲ್ಲಿದ್ದ ಎಲ್ಲಾ ಉಂಡೆಗಳು ಒಂದೂ ಇಲ್ಲದಂತೆ ಮಾಯವಾಗಿದ್ದು. ಯಾವನೋ ಇವರಿಗಿಂತ ಐನಾತಿಯೊಬ್ಬ ಅವುಗಳನ್ನೆಲ್ಲಾ ಎಗರಿಸಿಬಿಟ್ಟಿದ್ದ. ಆ ಬೇದಿ ಮಾಡಿಕೊಂಡು ನಿತ್ರಾಣವಾಗಿದ್ದ ಈ ಇಬ್ಬರೂ, ನಾವು ಮಧ್ಯಾಹ್ನ ಊಟದ ಟೇಮಿಗೆ ಹಾಸ್ಟಲ್ ಹೊಕ್ಕರೆ ಎದೆ ಬಡ್ಕೊಂಡು “ಹೋತಲ್ಲಪ್ಪೋ, ಹೋತಲ್ಲೋ, ಬೆಲ್ಲದ ಉಂಡೆ ಹೋತಲ್ಲೊ “ ಅಂತ ಪರಿತಪಿಸುತ್ತಿದ್ದರು. ಅಲ್ಲದೆ ಅನಾಮಧೇಯ ಕಳ್ಳನಿಗೆ ಇವರು ಬಯ್ಯುತ್ತಿದ್ದ ಬಯ್ಗುಳಗಳ ತೀವ್ರತೆಯನ್ನು ವಿವರಿಸಲು ಕಷ್ಟಸಾಧ್ಯವಾದ್ದು:
“ಅವರ ಹೊಟ್ಟೆ ಬಿರಿಯಾ, ಅವರು ನೆಗೆದು ಬಿದ್ದು ನೆಲ್ಲಿಕಾಯಾಗ! ಅವರ ಮನೆ ಮುಂಡಾ ಮೋಚಾ! ಅವರ ಮನೆ ಮಠ ಎಕ್ಕುಟ್ಟೋಗ …….” ಇತ್ಯಾದಿ.
ಮೂರನೆಯದ್ದು: ನನಗೆ ನೆನಪಿರುವಂತೆ ಸುಬ್ಬೇಗೌಡ ಎಂಬ ಮೂಡಿಗೆರೆ ತಾಲ್ಲೂಕಿನ ಒಬ್ಬರು ಮ್ಯಾನೇಜರ್ ಆಗಿದ್ದುದು ನನಗೆ ನೆನಪು. ಅವರು ತುಂಬಾ ಆಪ್ತವಾಗಿ ಮಕ್ಕಳ ಜೊತೆ ಬೆರೆಯುತ್ತಿದ್ದರು. ನಾನು ಹಾಸ್ಟಲ್‌ಗೆ ಸೇರಿದಾಗ ಇದ್ದ ಮಾನೇಜರ್ ಇವರೆ. ನಾವು ಹಾಸ್ಟಲ್ ಸೇರಿ ಸ್ವಲ್ಪ ದಿನಕ್ಕೇ ಈ ಮ್ಯಾನೇಜರ್ ವರ್ಗಾವಣೆಯಾಗಿಬಿಟ್ಟರು. ಆಮೇಲೆ ಬಂದAತಹ ಮ್ಯಾನೇಜರ್ ಒಂದು ರೀತಿ ವಿಕ್ಷಿಪ್ತ ಮನಸ್ಸಿನವನು. ನಮ್ಮ ಯಾವುದೇ ಬೇಡಿಕೆಗಳಿಗೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ನಮಗಷ್ಟೇ ಅಲ್ಲ, ನಮ್ಮ ಮಾಸ್ತರುಗಳು ನಮ್ಮ ಪರವಾಗಿ ಏನು ಹೇಳಿದರೂ ಅಸಡ್ಡೆ. ಹಾಸ್ಟಲ್ ಹುಡುಗರು ದಂಡಪಿAಡಗಳು ಅನ್ನೋದು ಇವನ ಭಾವನೆ. ಈ ದಂಡಪಿAಡಗಳಿಗೆ ಮನುಷ್ಯ ಶ್ರೇಷ್ಟನಾದ ತಾನು ನೋಡಿಕೊಳ್ಳಬೇಕಲ್ಲ ಅನ್ನೋ ಸಂಕಟ. ಹಂಗಾಗಿ ನಮ್ಮ ಮತ್ತು ಮ್ಯಾನೇಜರ್ ಮಧ್ಯೆ ಒಂದು ರೀತಿ ಬಿಗುವಿನ ವಾತಾವರಣ ಇದ್ದೇ ಇತ್ತು. ಈ ಬಿಗುವಿನ ವಾತಾವರಣಕ್ಕೆ ಈ ಇಬ್ಬರು ಬೆಲ್ಲ ತಿಂದು ಬೇದಿ ಮಾಡಿಕೊಂಡದ್ದು ನೆಪವಾಯ್ತು.
(ಮುಂದಿನ ಕಿನ್ನರಿಗೆ)