ಕನಸಿಗೆ ನುಗ್ಗಿ ನಿದ್ದೆಗೆಡಿಸುವ ಕಾರಮರಡಿಯ ಅವಧೂತ

ಬಿಳಿ ಅಥವಾ ನಸು ಖಾವಿ ಬಣ್ಣದ ಜುಬ್ಬಾ, ಬಿಳಿ ಪಂಚೆ, ಉದ್ದನೆಯ ಗಡ್ಡ, ಬೋಳು ತಲೆ, ಮುಖಕ್ಕೇ ಪ್ರಾಯವಾದ ದಪ್ಪ ಮೂಗು, ಮೂಗಿನ ಸೇತುವೆ ಮೇಲಿಂದ ಪದೇ ಪದೇ ಜಾರಿ ಬರುತ್ತಿದ್ದ  ದಪ್ಪ ಕಪ್ಪು ಕಟ್ಟಿನ  ಕನ್ನಡಕವನ್ನು ಬೆರಳಿನಿಂದ ಹಿಂದಕ್ಕೆ ತಳ್ಳುತ್ತ, ಎದುರು ಕುಂತವರನನ್ನು ತುಸು ಗುಮಾನಿಯಿಂದಲೇ  ನೋಡುವ ಕಣ್ಣುಗಳು ಮತ್ತು ಅವರದ್ದೇ ಆದ ವಿಶಿಷ್ಟ ಶೈಲಿಯ ನಗು.

ಕನಸಿಗೆ ನುಗ್ಗಿ ನಿದ್ದೆಗೆಡಿಸುವ ಕಾರಮರಡಿಯ ಅವಧೂತ


ಕನಸಿಗೆ ನುಗ್ಗಿ ನಿದ್ದೆಗೆಡಿಸುವ ಕಾರಮರಡಿಯ ಅವಧೂತ

 

“ಲೋ ಬಡ್ಡೆತ್ತವಾ, ಅದು ಹಂಗಲ್ಲ ಕಣೋ” ಅಂತ ಎಡಗೈಯಲ್ಲಿ ಬೆಳ್ಳಿ ಗಡ್ಡ ನೀವಿಕೊಳ್ಳುತ್ತಾ, ಬಲಗೈಯನ್ನು ಅಷ್ಟುದ್ದಕ್ಕೂ ಚಾಚಿ, ಏರಿದ ದನಿಯಲ್ಲಿ ಹೇಳುತ್ತಿದ್ದರೆ, ದಡ್ಡರಂತೆ ಎದುರು ಕುಂತು ಕೇಳಲು ನಮಗೆ ನಿಜಕ್ಕೂ ಒಂತರಾ ಆನಂದವೇ ಆಗುತ್ತಿತ್ತು. ಹೌದು, ಅದು ಕೆ.ಎಂ.ಶಂಕರಪ್ಪನವರ ವಿಶಿಷ್ಟ ಶೈಲಿಯೇ ಆಗಿತ್ತು.

ಶಂಕರಪ್ಪ, ಕೆ.ಎಂ.ಶಂಕರಪ್ಪ, ಕಾರಮರಡಿ ಶಂಕರಪ್ಪ, 'ಮಾಡಿ ಮಡಿದವರು ಶಂಕರಪ್ಪ, ಶಂಕರಪ್ಪ ತಾತ, ಶಂಕರಪ್ಪ ಗುರುಗಳು, ಇವರೆಲ್ಲ ಒಬ್ಬರೇ ಆಗಿದ್ದ ಆ ಅವರು ಬುದ್ಧ ತೋರಿದ ಹಾದಿಯನ್ನು ಒಂದು ಸಮುದಾಯಕ್ಕೆ ತೋರಿದ ಗುರು ಸ್ವರೂಪಿಯೂ ಅಗಿದ್ದರು.

ಅದು. ಎಂಬತ್ತರ ದಶಕದ ಕೊನೆ ತೊಂಬತ್ತರ ದಶಕದ ಆರಂಭ,  ಒಂದು ದಿನ ಬೆಳಂಬೆಳಗ್ಗೆಯೇ ಪತ್ರಿಕ ಹಂಚುವ ಹುಡುಗನೊಂದಿಗೆ ರೂಟ್ ಪರಿಶೀಲಿಸಿದ ಬಳಿಕ, ಬಕಾಲ ಖ್ಯಾತಿಯ ಕವಿ ಕೇಬಿ ಸಿದ್ಧಯ್ಯನವರ 'ಬಯಲಿ'ಗೆ ಕಾಲಿಟ್ಟ ನನಗೆ, ಅಂಗಳದ ಕಲ್ಲು ಬೆಂಚಿನ ಮೇಲೆ ಯಾರೋ ಬಿಳಿ ಜುಬ್ಬಾ, ಪಂಚೆ, ಎಂ.ಎಸ್.ಸತ್ಯುವಿನಂತೆ ಗಡ್ಡ ಹೊಂದಿದ್ದ ಅನಾಮಿ ಕೊರೆವ ಚಳಿಯಲ್ಲೂ ಏನನ್ನೂ ಹೊದೆಯದೆ ಮಲಗಿದ್ದು ಕಂಡು ಅಚ್ಚರಿಯಾಗಿತ್ತು.

“ಕೇಬಿ ಯಾಕಿಂತ ಕೆಲ್ಸ ಮಾಡಿದ್ರು, ಈವಜ್ಜಂಗೆ ಮಲಗೋದಕ್ಕೆ ಒಳಗಡೆ ಒಂಚೂರು ಜಾಗ ಕೊಡಬಾರದಿತ್ತಾ" ಅಂತ ಅನಿಸಿತ್ತು. ಪೆಕರನಂತೆ ಅವರನ್ನೇ ನೋಡುತ್ತ ನಿಂತಿದ್ದ ನನ್ನನ್ನು ಎಷ್ಟೋ ವರುಷಗಳ ಸಲುಗೆಯ ಹಿರೀಕನಂತೆ, “ ಏನಯ್ಯಾ, ಇರಲಿ ಬಾರಯ್ಯಾ' ಎಂದು ಮಾತನಾಡಿಸುತ್ತ, ಹೆಸರಿನೊಂದಿಗೆ ಕುಲವನ್ನೂ ಮುಲಾಜಿಲ್ಲದೇ ಕೇಳಿಕೊಂಡರು, ಎಲ್ಲ ಕೇಳಿದ ಮೇಲೆ, “ ಇರಲಿ ಬಿಡಯ್ಯಾ” ಅನ್ನುತ್ತಾ ಅವರೇ ಸಮಾಧಾನವನ್ನೂ ಹೇಳಿದರು.

ಮೆಲ್ಲನೆ ಜುಬ್ಬಾದ ಜೇಬಿನಿಂದ ಮರದ ಪೈಪ್ ತೆಗೆದು, ಸುನ್ನಾರಿ ಕಾಗದದಲ್ಲಿ ಮಡಿಚಿಟ್ಟಿದ್ದ ಹೊಗೆಸೊಪ್ಪನ್ನು ಇಷ್ಟಿಷ್ಟೇ ತೆಗೆದು ಪೈಪ್‌ ಗೆ ತು೦ಬುತ್ತ “ಇದು ವರ್ಜಿನಿಯಾದಿಂದ ಇಂಪೋರ್ಟ್ ಮಾಡಿಕೊ೦ಡಿರೋ ಹೊಗೆಸೊಪ್ಪು ಕಣೋ, ಬೆಂಗಳೂರಲ್ಲಿ ಒಂದೇ ಕಡೆ ಸಿಗೋದು ಕಣೋ, ಅವನು ನಂಗೇ ಅಂತೆ ಎತ್ತಿ ಇಟ್ಟಿದ್ದಾನೆ" ಅಂತ ಕತೆ ಹೇಳಿದ್ರು. ಹೊಗೆಸೊಪ್ಪು ತುಂಬಿದ ಪೈಪ್‌ಗೆ ಕಡ್ಡಿ ಗೀರಿ ಸೈಲಾಗಿ ಬೆಂಕಿ ಹಚ್ಚುತ್ತ ಪುಸುಪುಸು ಹೊಗೆ ಎಳೆದು ಬಿಡುತ್ತ, ಧೂಮದ ಮೋಡವನ್ನೇ ತಮ್ಮ ಸುತ್ತ ಸೃಷ್ಟಿಸಿಕೊಳ್ಳುತ್ತ, ಆ ಬಿಳಿಯ ಹೊಗೆಯೊಳಗೇ ಅಂತರ್ಧಾನರಾಗಿ ಬಿಡುತ್ತ ಅವರು ಹಿಮಾಲಯದೊಳಗಿನ ಶಂಕರನಾಗಿಬಿಟ್ಟರು.

ಶಂಕರಪ್ಪನವರು ನನಗೆ ಪರಿಚಿತರಾಗುವ ಮೊದಲೇ, ವೀಚಿ, ಜೀವಿ ಆನಂದಮೂರ್ತಿ, ತುಂಬಾಡಿ ರಾಮಯ್ಯ, ಕೇಪಿ ನಟರಾಜ್, ನಟರಾಜ ಬೂದಾಳು, ಡಾ. ಬಸವರಾಜು, ಡಾ.ರಂಗಸ್ವಾಮಿ ಮೊದಲಾದವರಿಗೆಲ್ಲ ಹಳಬರಾಗಿಬಿಟ್ಟಿದ್ದರು. ಎದುರಾದ ಎಲ್ಲರ ಜನ್ಮರಹಸ್ಯ ಹುಟ್ಟೂರು, ಕುಲ, ಬೆಡಗುಗಳನ್ನೆಲ್ಲ ತಿಳಿದುಕೊಂಡು ಅವರ ಜನ್ಮ ಜಾಲಾಡುವವರೆಗೆ ಅವರು ಸುಮ್ಮನಾಗುತ್ತಿರಲಿಲ್ಲ. ಹುಡುಗರನ್ನು 'ದಡ್ಡ ಬಡ್ಡೆತ್ತವು' ಅಂತ ಹುಸಿ ಗದರಿಕೆಯಿಂದ ಬೈಯುತ್ತಲೂ, ಜಾತಿ ತೊರೆದು ಅಪ್ಪ ಅಮ್ಮಂದಿರ ವಿರೋಧ ಕಟ್ಟಿಕೊಂಡು, ಅವರನ್ನು ಕಟ್ಟಿಕೊಂಡ ಹೆಣ್ಣುಮಕ್ಕಳೆಲ್ಲ `ಅಸಾಧಾರಣ ಬುದ್ಧಿವಂತೆಯರು' ಅಂತ ವಾಚಾಮಗೋಚರ ಹೊಗಳುತ್ತಲೂ 'ತಾವು' ಮಾಡಿಕೊಳ್ಳುತ್ತಿದ್ದ ಶಂಕರಪ್ಪನವರು ಅಗಲಿದ  ನನ್ನ ತಾತನನ್ನು ನೆನಪಿಸುತ್ತ, ನಾಸ್ಟಾಲ್ಜಿಕ್ ಆಗಿ ನನ್ನೊಳಗೆ ಸೇರಿಕೊಂಡು ಬಿಟ್ಟರು.

 

ಮೊಬೈಲ್ ಫೋನು ಇನ್ನೂ ಕಾಲಿಡದ ದಿನಗಳವು. ಆದರೂ, ಶಂಕರಪ್ಪನವರು ತುಮಕೂರಿಗೆ ಕಾಲಿಟ್ಟವರೆ ಅನ್ನೋ ವಿಷಯ, ಕ್ಷಣಾರ್ಧದಲ್ಲಿ ಎಲ್ಲರನ್ನು ತಲುಪಿ ಬಿಡುತ್ತಿತ್ತು. ಅವರು ಎಲ್ಲಿ ಇದ್ದಾರೋ ಅಲ್ಲಿಗೇ ಹೋಗಿ, ದಿನವೆಲ್ಲಾ ಅವರ ತಲೆ ತಿನ್ನುತ್ತಾ, “ ಅಯ್ಯೋ ಬಿಡೋ ನನ್ನ” ಅಂತ ಗೋಗರೆಯುವವರೆಗೆ ಅವರನ್ನು ಬಿಟ್ಟು ಅಗಲುತ್ತಿರಲಿಲ್ಲ, ಪತ್ರಕರ್ತನಾಗಿ ಇಡೀ ಜಿಲ್ಲೆಯನ್ನು ಇಷ್ಟ ಬಂದಂತೆ ಸುತ್ತುವ ಸ್ವಾತಂತ್ರ್ಯ ಹೊಂದಿದ್ದ ನನ್ನನ್ನು ಶಂಕರಪ್ಪನವರು ಸದುಪಯೋಗ ಪಡಿಸಿಕೊಂಡರು ಅಂತ ಅಂದುಕೊಂಡಿದ್ದೇನೆ. ಒಂದು ಸಲ ಅವರ ಹುಟ್ಟೂರು ಕಾರಮರಡಿಗೂ ಕರೆದುಕೊಂಡು ಹೋಗಿದ್ದರು. ಮಧುಗಿರಿ ಪಟ್ಟಣದ ಉತ್ತರಕ್ಕೆ ಮಿಡಿಗೇಶಿ ರಸ್ತೆಯಲ್ಲಿ ಒಂದೆರಡು ಕಿಮೀ ಸಾಗಿ ಲಿಂಗೇನಹಳ್ಳಿ ಬಳಿ ಬಲಕ್ಕೆ ತಿರುಗಬೇಕು, ಆಗಿನ್ನೂ ಅವರ ಅಮ್ಮ ಊರಿನಲ್ಲಿದ್ದರು. ಮಧುಗಿರಿಯಲ್ಲಿನ ಅವರ ಅಣ್ಣನ ಮನೆಯನ್ನೂ ತೋರಿಸಿದ್ದರು. “ಅವನಿಗೆ ಬಲು ದುರಾಸೆ ಕಣೋ, ಎಲ್ಲ ಅವನಿಗೇ ಬೇಕು” ಅಂತ

೧೯೭೪ರಲ್ಲಿ, ಪುಣೆ ಫಿಲ್ಡ್‌ ಇನ್ಸಿಬಿಟ್ಯೂಟ್‌ ನಿಂದ ಬಂದ ನಂತರ, ಬಸವರಾಜ ಕಟ್ಟೀಮನಿ ಅವರ ಸ್ವಾತಂತ್ರ್ಯಪೂರ್ವ ಕಾಲದ ಕಥನವನ್ನು ಆಧರಿಸಿದ 'ಮಾಡಿ ಮಡಿದವರು' ಸಿನಿಮಾ ಮಾಡಿ ಎರಡನೇ ಅತ್ಯುತ್ತಮ ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡ ಶಂಕರಪ್ಪನವರು ಮತ್ತೆಂದೂ ಸಿನಿಮಾಗಳನ್ನು ಮಾಡಲಿಲ್ಲ. ಸಿನಿಮಾ ಎಂಬ ಇಂಡಸ್ಟ್ರಿಗೆ ತಮ್ಮನ್ನು ಒಗ್ಗಿಸಿಕೊಳ್ಳುವುದು ಅವರಿಗೆ ಆಗಲಿಲ್ಲವೋ, ಇಷ್ಟವಾಗಲಿಲ್ಲವೋ ತಿಳಿಯದು. ಆದರೂ ಹಲವು ಡಾಕ್ಯುಮೆಂಟರಿಗಳನ್ನು ಅವರು ನಿರ್ದೇಶಿಸಿದರು. ಡಾಕ್ಯುಮೆಂಟರಿಗಳನ್ನು ವಾರ್ತಾ ಮತ್ತು ಇತರ ಸರ್ಕಾರಿ ಇಲಾಖೆಗಳು ನಿರ್ಮಿಸುತ್ತಿದ್ದವು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರಗಳನ್ನು ನಿರ್ಮಿಸುವ ಹೊತ್ತಿನಲ್ಲಿ ಅವುಗಳಿಗೆ ಸಂಬಂಧಿಸಿದಂತೆ ಆಳ ಅಧ್ಯಯನ ಮಾಡಲೇಬೇಕಾಗಿ ಬರುತ್ತಿದ್ದುದರಿಂದ, ಯಾವ ವಿಷಯಕ್ಕೆ ಬಂದರೂ ಅದರ ಬಗ್ಗೆ ಅಥೆಂಟಿಕ್ ಆಗಿ ಮಾತನಾಡಬಲ್ಲವರಾಗಿದ್ದರು. ಒಂದು ಸಲ ರೇಷ್ಮೆ ಇಲಾಖೆ ಕುರಿತ ಡಾಕ್ಯುಮೆಂಟರಿ ನಿರ್ಮಿಸಲು ಆ ಇಲಾಖೆಯಲ್ಲಿ ಪರಿಚಿತರು ಇದ್ದರೆ ತೋರಿಸೋ ಅಂತ ಅಂದರು, ಎಲ್ಲೋ ಇಲಾಖೆಯ ಸಮಾರಂಭದಲ್ಲಿ ವೇದಿಕೆ ಮೇಲೆ ಕಾಣಿಸಿದ್ದ ಒಬ್ಬ ಅಧಿಕಾರಿಯನ್ನು ಪರಿಚಯ ಮಾಡಿಕೊಟ್ಟಿದ್ದೆ. ಹಿಂಗೇ ಬಳಸಾಡ್ತಾ ನಂಗೂ ಸಿನಿಮಾ ಗುಂಗು ಅಂಟಿಕೊಳ್ತು,  ಮುಂದೆ ಒಂದೆರಡು ವರ್ಷದಲ್ಲೇ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕವನ್ನು ದಾಖಲಿಸುವ ಹೊಣೆ ಶಂಕರಪ್ಪನವರಿಗೇ ಬಂದು, ತುಮಕೂರಿನಲ್ಲೇ ವರದಿಗಾರರಾಗಿದ್ದ ಶಿವಾಜಿ ಗಣೇಶನ್  ಹಾಗೂ ನನ್ನನ್ನು ಶ್ರವಣಬೆಳಗೊಳಕ್ಕೆ ಬರುವಂತೆ ಹೇಳಿದರು.

ಅವರೇ ಹೇಳುತ್ತಿದ್ದಂತೆ ದೆವ್ವ ಗಾತ್ರದ 35 ಎಂಎಂನ  ನಾಲ್ಕು ಕ್ಯಾಮೆರಾಗಳನ್ನು ತರಿಸಿದ್ದ ಶಂಕರಪ್ಪನವರು, ಮದ್ರಾಸಿನಿಂದ ಪ್ರಸಿದ್ಧ ಛಾಯಾಗ್ರಾಹಕರಾಗಿದ್ದ ಮೂರ್ತಿ ಎಂಬುವರನ್ನೂ ಕರೆಸಿದ್ದರು. ಎರಡು ಕ್ಯಾಮರಾಗಳನ್ನು ಶಿವಾಜಿಯವರ ಸುಪರ್ದಿಗೆ ವಹಿಸಿ, ಮಹಾಮಸ್ತಕಾಭಿಷೇಕ ಮಾಡಿಸಿಕೊಳ್ಳುತ್ತಿದ್ದ ಗೊಮ್ಮಟನ ಎಡ ಬಲಗಳಲ್ಲಿ ನಿಲ್ಲಲು ಹೇಳಿದರು.  

 

ಮತ್ತೊಬ್ಬ ಹೆಸರಾಂಥ ಛಾಯಾಗ್ರಾಹಕ ಅಮೃತ ಘಳಿಗೆ ಖ್ಯಾತಿಯ ಎಸ್.ಆರ್. ಭಟ್ ಅವರಿಗೆ ನನ್ನನ್ನು ತಗಲಿಹಾಕಿ, ಎದುರಿನ ಚಿಕ್ಕ ಬೆಟ್ಟ ಹತ್ತಿ ಶೂಟ್ ಮಾಡಿಸು ಎಂದರು, “ ನೋಡಯ್ಯಾ ನಿನ್ನ ಆಬ್ಜೆಕ್ಟ್ ಪೀಪಲ್” ಎಂದು ಹೇಳಿ ಇನ್ನೊಂದು ಕ್ಯಾಮೆರಾದೊಂದಿಗೆ ಎಲ್ಲೋ  ಮಾಯವಾಗಿ ಬಿಟ್ಟರು. ಕಡೆಗೆ , ೨೦ನಿಮಿಷಗಳ ಡಾಕ್ಯುಮೆಂಟರಿಯಲ್ಲಿ ನಾನು ನಿರ್ದೇಶಿಸಿದ್ದ ದೃಶ‍್ಯಗಳು ಕ್ಷಣಾರ್ಧದಲ್ಲಿ ಕಂಡು ಮಾಯವಾಗಿದ್ದು ಕಂಡು ನಾಚಿಕೆಯಾಗಿತ್ತು. ಆದರೆ ಶಂಕರಪ್ಪನವರು ನನ್ನು ಅಷ್ಟಕ್ಕೇ ಬಿಡಲಿಲ್ಲ. ಒಂದಷ್ಟು ಜೈನ ಪುರಾಣದ ಪುಸ್ತಕಗಳನ್ನು ತಂದು  ಸುರಿದು ಇವನ್ನೆಲ್ಲ ಕರಗಿಸಿ, ಡಾಕ್ಯುಮೆಂಟರಿಗೆ ನಿರೂಪಣೆ ಬರಿ ಅಂತ ಆದೇಶಿಸಿದರು, ಬೆಂಗಳೂರಿನ ಪುಟ್ಟಣ್ಣ ಚಿತ್ರಮಂದಿರದ ಮಹಡಿ ಮೇಲಿನ ಎಡಿಟಿಂಗ್  ರೂಂಗೆ ಕರೆದೊಯ್ದು, ಪ್ರಸಿದ್ಧ ಎಡಿಟರ್ ಒಬ್ಬರ ಮುಂದೆ ಕೂರಿಸಿ, ಎಡಿಟ್  ಆಗಿದ್ದ ದೃಶ್ಯಗಳಿಗೆ ನಿರೂಪಣೆಯನ್ನು ಓದುತ್ತ ಹೊಂದಿಸುವ ಕೆಲಸಕ್ಕೆ ಹಚ್ಚಿದರು. ಹೀಗೆ ನಾನೂ ಒಬ್ಬ ಡಾಕ್ಯುಮೆಂಟರಿಯ ಸಹ ನಿರ್ದೇಶಕನಾದೆ. ಮುಂದೆ, ಭವಬಂಧನಗಳಿಗೆ ಜೋತುಬಿದ್ದ ನನಗೆ ಮುಕ್ತ ಚಲನೆಗೆ ಅಪ್ಪದವಿರದೆ, ಶಂಕರಪ್ಪನವರ ಸಿನಿಮಾ ಶಾಲೆಯ ಡ್ರಾಪ್ ಔಟ್ ವಿದ್ಯಾರ್ಥಿಯಾಗಿಬಿಟ್ಟೆ.

ಶಂಕರಪ್ಪನವರು ಬರೀ ಹೊಟ್ಟೆಪಾಡಿಗೆ ಡಾಕ್ಯುಮೆಂಟರಿಗಳನ್ನು ಮಾಡ್ತಾರೆ ಎನ್ನುವುದು ನಿಜವಾದರೂ ಅದು ಆ ಕ್ಷಣದ ಸತ್ಯವಾಗಿತ್ತು. ಡಾಕ್ಯುಮೆಂಟರಿಗಳಿಗಾಗಿ ಸದಾ ಇಲಾಖೆಗಳನ್ನು ಸುತ್ತುವ ಪ್ರೊಫೆಶನಲ್ ಆಗಿರಲಿಲ್ಲ ಅವರು. ವರ್ಷಕ್ಕೆ ಕನಿಷ್ಟ ಎರಡು ಡಾಕ್ಯುಮೆಂಟರಿಗಳು ಅವರಿಗೇ ಮೀಸಲಾಗಿದ್ದವೇನೋ ಎಂಬಂತೆ ಲಭ್ಯವಾಗುತ್ತಿದ್ದವು. ಅಲ್ಲಿವರೆಗೂ ಅಂದರೆ ಸುಮಾರು ಐದಾರು ತಿಂಗಳು ಅವರು ಪುಸ್ತಕಗಳಿಗೆ, ಸಂಚಾರ ಇತ್ಯಾದಿ ಖರ್ಚುಗಳಿಗೆ ಮಾಡುತ್ತಿದ್ದ ಸಾಲವನ್ನು ಆ ಡಾಕ್ಯುಮೆಂಟರಿಯಿಂದ ಬಂದ ಹಣದಿಂದ ತೀರಿಸಿ, ಉಳಿದದ್ದನ್ನು ಮನೆಯ ಮೇಡಂಗೆ ಕೊಟ್ಟು, ಮತ್ತೆ ಸಾಲ ಮಾಡುತ್ತ ಸಂಚಾರ ಆರಂಭಿಸುತ್ತಿದ್ದರು.

ಬಿಳಿ ಅಥವಾ ನಸು ಖಾವಿ ಬಣ್ಣದ ಜುಬ್ಬಾ, ಬಿಳಿ ಪಂಚೆ, ಉದ್ದನೆಯ ಗಡ್ಡ, ಬೋಳು ತಲೆ, ಮುಖಕ್ಕೇ ಪ್ರಾಯವಾದ ದಪ್ಪ ಮೂಗು, ಮೂಗಿನ ಸೇತುವೆ ಮೇಲಿಂದ ಪದೇ ಪದೇ ಜಾರಿ ಬರುತ್ತಿದ್ದ  ದಪ್ಪ ಕಪ್ಪು ಕಟ್ಟಿನ  ಕನ್ನಡಕವನ್ನು ಬೆರಳಿನಿಂದ ಹಿಂದಕ್ಕೆ ತಳ್ಳುತ್ತ, ಎದುರು ಕುಂತವರನನ್ನು ತುಸು ಗುಮಾನಿಯಿಂದಲೇ  ನೋಡುವ ಕಣ್ಣುಗಳು ಮತ್ತು ಅವರದ್ದೇ ಆದ ವಿಶಿಷ್ಟ ಶೈಲಿಯ ನಗು ಹೀಗೆ ಶಂಕರಪ್ಪನವರನ್ನು ಒಂದು ಸಲ ನೋಡಿದ ಕೂಡಲೇ ಯಾರಿಗಾದರೂ ಗೌರವ ಹುಟ್ಟಿಸುವಂತ ವ್ಯಕ್ತಿತ್ವ ಅವರದಾಗಿತ್ತು. ಶಂಕರಪ್ಪನವರು  ಬೆಂಗಳೂರಿನಿಂದ ಬಸ್ಸಿನಲ್ಲಿ ಬಂದು, ಬಿ.ಎಚ್.ರಸ್ತೆಯಲ್ಲೇ ಇದ್ದ ನಾನು ಕೆಲಸ ಮಾಡುತ್ತಿದ್ದ ಪತ್ರಿಕಾ ಕಚೇರಿ ಮುಂದೆ ಆಟೋದಲ್ಲಿ ಬಂದು ಇಳಿಯುತ್ತಿದ್ದರು. ಅವರು ಬಾಗಿಲ ಬಳಿ ನಿಂತು, ತಲೆ ಏನನ್ನೋ ಬರೆಯುತ್ತ ಕುಳಿತಿರುತ್ತಿದ್ದ ನನ್ನ ಕಡೆ ನೋಡುವಷ್ಟರ ಹೊತ್ತಿಗೆ ನನ್ನ ಪತ್ರಿಕಾ ಸಂಪಾದಕರು  ಶಂಕರಪ್ಪನವರನ್ನು ನೋಡಿ ಎದ್ದು ನಿಂತು ಎರಡೂ ಕೈಗಳನ್ನು ಜೋಡಿಸಿ ಕೈಮುಗಿದು, “ಪ್ರನನ್ನ ನೋಡಿ, ಗುರುಗಳು ಬಂದಿದ್ದಾರೆ" ಅಂತ ಹೇಳುತ್ತಿದ್ದರು, ಅವತ್ತು ನನ್ನ ಕಸುಬಿಗೆ ರಜಾ ಮಂಜೂರಾಯ್ತು ಅಂತಾನೇ ಅರ್ಥ.

 

ಹೀಗೇ ಶಂಕರಪ್ಪನವರು ನಮ್ಮೊಳಗೆ ಹರಡಿಕೊಳ್ಳುತ್ತ ಒಂದು ಕಾಲದ ಒಂದು ಹಂತಕ್ಕೆ ನಾವು ಏನನ್ನೇ ಮಾಡಿದರೂ, ಅದರ ಹಿಂದಿನ ಪ್ರೇರಣೆ ಶಂಕರಪ್ಪನವರೇ ಎಂಬ ಗುಮಾನಿ ಹುಟ್ಟಿಕೊಳ್ಳಲು ಕಾರಣರೂ ಆಗಿಬಿಟ್ಟರು. ಹೀಗೇ, ತುಮಕೂರಿನಲ್ಲಿ ಬುದ್ಧ ಪೂರ್ಣಿಮೆಗಳನ್ನು ಅರ್ಥವತ್ತಾಗಿ ಆಚರಿಸತೊಡಗಿ, ಬೋಧಿಮಂಡಲ ಹುಟ್ಟಿಕೊಂಡಿತು. ಬೋಧಿ ಮಂಡಲದ ಮಹತ್ವದ ಸಭೆ ಸಿದ್ಧರಬೆಟ್ಟದಲ್ಲಿ ನೂರಾರು ಜನರ ನಮ್ಮುಖದಲ್ಲಿ ನಡೆಯಿತು. ಸಿದ್ಧರ ಬೆಟ್ಟಕ್ಕೂ ಶಂಕರಪ್ಪನವರಿಗೂ ಬಲು ಬಾಂಧವ್ಯ, ಅವರ ಬಾಲ್ಯದಲ್ಲಿ ಅವರಿಗೆ ದುರ್ಬಲ ದೇಹದ ಕಾರಣ, ಕ್ಷಯ ಅಂಟಿಕೊಂಡಿತ್ತಂತೆ. ಆಗ ಅವರನ್ನು ಅವರ ಅಪ್ಪ ಅಮ್ಮ, ಸಿದ್ಧರ ಬೆಟ್ಟಕ್ಕೆ ಕರೆತಂದು ಅಲ್ಲಿಯೇ ಇರಿಸಿ, ವೈದ್ಯ ಮಾಡಿಸಿದ್ದರಂತೆ. ಸಿದ್ಧರಬೆಟ್ಟದ ಬೆರಕೆ ಸೊಪ್ಪಿನ ರಸ ಕುಡಿಯುತ್ತ, ಬೆಟ್ಟ ಹತ್ತಿಳಿಯುತ್ತ ಕ್ಷಯ ಕಾಣೆಯಾಯಿತಂತೆ, ಸಿದ್ದರ ಬೆಟ್ಟದ ಗುರು ಅಮ್ಮಾಜಮ್ಮ ಕೂಡಾ ಇವರ ರಕ್ತ ಸಂಬಂಧಿಯೇ ಆಗಿದ್ದುದೂ ಇವರ ಪ್ರೀತಿಗೆ ಇನ್ನಷ್ಟು ಕಾರಣವಾಗಿತ್ತು.

 

ಪತ್ರಿಕೆ ಓದುತ್ತಲೇ ಬೀ ಕುಡಿಯುತ್ತಿದ್ದ ಶಿಷ್ಯನನ್ನ ಕಂಡು ಜೆನ್ ಗುರುವೊಬ್ಬ ಕೋಪಗೊಂಡು, “ ಪತ್ರಿಕೆ ಓದು ಇಲ್ಲಾ ಟೀ ಕುಡಿ, ಎರಡರಲ್ಲಿ ಒಂದನ್ನು ಮಾಡು ಅಂತ ಬೈಯುತ್ತಾನೆ. ಅದಾದ ತುಸು ಹೊತ್ತಿನ ನಂತರ ಅದೇ ಗುರು, ಪತ್ರಿಕೆ ಓದುತ್ತಾ ಟೀ ಕುಡಿಯುತ್ತಾ ಇರುತ್ತಾನೆ! ಇದನ್ನು ಕಂಡು ಶಿಷ್ಯನಿಗೆ ಅಚ್ಚರಿಯಾಗುತ್ತದೆ. ಶಂಕರಪ್ಪನವರೂ ಇದೇ ಗುರುವಿನ ತರದವರು. ಅವರು ಹೇಳಿಕೊಟ್ಟ ಯಾವುದನ್ನು ಅನುಸರಿಸಿ ಮಾಡ ಹೋದರೂ ಬೈಗುಳ ಗ್ಯಾರಂಬಿ, “ಅದು ಹಂಗಲ್ಲ ಕಣೋ” ಅನ್ನೋದೇ ಅವರ ವಿವರಣೆಯಾಗಿರುತ್ತಿತ್ತು. ಅನುಕರಿಸುವ ಅಥವಾ ಅನುಸರಿಸುವ ಯಾರನ್ನೂ ಅವರು ಒಪ್ಪುತ್ತಿರಲಿಲ್ಲ, ಸ್ವಂತಿಕೆಯನ್ನು ಅವರು ಆದರಿಸುತ್ತಿದ್ದರು. ಕೆಮ್ಮು, ಜ್ವರಗಳಂತ ಕಾಯಿಲೆಗಳಿಗೆಲ್ಲ ವೈದ್ಯರಿಗೆ ತೋರಿಸುತ್ತಿರಲಿಲ್ಲ ಮತ್ತು ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ, ಅವರ ಆಹಾರವೂ ಅಷ್ಟೆ ಬಹಳ ಸರಳವಾಗಿರುತ್ತಿತ್ತು. ಒಂದು ಚಪಾತಿ, ನೆಂಚಿಕೊಳ್ಳಲು ಇಷ್ಟು ಸೊಪ್ಪು-ಕಾಳು, ಮತ್ತು ಇದೇ ಆಹಾರವನ್ನು ಕೊಡಿ ಎಂದು ಯಾರನ್ನೂ ಆಗ್ರಹ ಪಡಿಸುತ್ತಿರಲಿಲ್ಲ. ಅನ್ನ ಅಹಾರಕ್ಕಿಂತ ಟೀ ಅವರ ಪ್ರಮುಖ ದ್ರವಾಹಾರವಾಗಿತ್ತು. “ಟೀ ಕುಡಿಯುವಿರಂತೆ ಇರಿ ಸಾರ್” ಎಂದು ಹೇಳಿ ಅವರನ್ನು ಎಷ್ಟು ಹೊತ್ತು ಬೇಕಾದರೂ ಇರಿಸಿಕೊಳ್ಳಬಹುದಿತ್ತು.

ಶಂಕರಪ್ಪನವರು ಸದಾ ನೆನಪಿಸಿಕೊಳ್ಳುತ್ತಿದ್ದ ಜೀವವೆಂದರೆ ಸ್ನೇಹಲತಾ ರೆಡ್ಡಿ, ಸ್ನೇಹಲತಾ ಅವರೊಂದಿಗೆ ತುರ್ತು ಸ್ಥಿತಿ ಹೋರಾಟದ ದಿನಗಳನ್ನೂ ನೆನಪಿಸಿಕೊಳ್ಳುತ್ತಿದ್ದರು. ಶಂಕರಪ್ಪ ಅಂದರೆ ಇಷ್ಟೇನಾ ಅಂತ ಭಾವಿಸುವಂತಿಲ್ಲ. ಸಿನಿಮಾ ರಂಗದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಅವರು ಇವತ್ತಿಗೆ ಇಡೀ ಇಂಡಿಯಾ ಮರೆಯದ ಇತಿಹಾಸವಾಗಿದ್ದಾರೆ. ಸಿನಿಮಾವೊಂದು ಸಿದ್ಧಗೊಂಡು ಸೆನ್ಸಾರ್ ಮಂಡಳಿಯಿಂದ ಸಾರ್ವಜನಿಕ ಪ್ರದರ್ಶನ ಯೋಗ್ಯ ಎಂದು ಪ್ರಮಾಣ ಪತ್ರ ಪಡೆದು, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೇಲೆ, ಆ ಚಿತ್ರದಲ್ಲಿ ವಿವಾದಾತ್ಮಕ ದೃಶ್ಯಗಳಿವೆ ಎಂದು ಗುಂಪೊಂದು ಆಪಾದಿಸಿ, ಜಿಲ್ಲಾಧಿಕಾರಿ ಮಟ್ಟದ ದಂಡಾಧಿಕಾರಿ ಅಂತಹ ಸಿನಿಮಾಗಳನ್ನು ನಿಷೇಧಿಸುತ್ತಿದ್ದುದರ ವಿರುದ್ಧ ಶಂಕರಪ್ಪನವರು ನ್ಯಾಯಾಲಯದ ಮೆಟ್ಟಿಲು ಹತ್ತಿದರು. ಸೆನ್ಸಾರ್ ಮಂಡಳಿ ಮತ್ತು ಸಿನಿಮಾರಂಗಕ್ಕೆ ಸ೦ಬ೦ಧಿಸಿದ೦ತೆ ತಜ್ಞ ಸದಸ್ಯರನ್ನೊಳಗೊಂಡ ನ್ಯಾಯಮಂಡಳಿಯು ಪರಿಶೀಲಿಸಿದ ಹೊರತು ದಂಡಾಧಿಕಾರಿಗಳ ಮಟ್ಟದಲ್ಲಿ ಯಾವುದೇ ಸಿನಿಮಾಗಳನ್ನು ಯಾವುದೇ ಕಾರಣಕ್ಕೆ ನಿಷೇಧಿಸುವಂತಿಲ್ಲ ಎಂಬ ಐತಿಹಾಸಿಕ ತೀರ್ಪನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯ ದಿನಾಂಕ ೨೮.೧೧.೨೦೦೦ದಂದು ನೀಡಿದೆ(ಸಿವಿಲ್ ಅಪೀಲು ಸಂಖ್ಯೆ ೩೧೦೬/೧೯೯೧ ಕೆ.ಎಂ.ಶಂಕರಪ್ಪ ವರ್ಸಸ್ ಯೂನಿಯನ್ ಆಫ್ ಇಂಡಿಯಾ) ಯಾವುದೇ ಸಾರ್ವಜನಿಕ ವಿರೋಧದ ಕಾರಣಕ್ಕೆ ನಿಷೇಧಕ್ಕೊಳಪಡಿಸುವ ಸಿನಿಮಾಗಳ ಸಂದರ್ಭದಲ್ಲಿ ಈ ತೀರ್ಪನ್ನು ಇವತ್ತಿಗೂ ಉಲ್ಲೇಖಿಸಿಯೇ ವಾದ ಮಾಡಿ ಗೆಲ್ಲಲಾಗುತ್ತಿದೆ. ಆದರೆ ಈ ಕುರಿತು ಶಂಕರಪ್ಪನವರು ಯಾವತ್ತೂ ಹೆಗ್ಗಳಿಕೆಯಿಂದ ಹೇಳಿಕೊಂಡಿದ್ದನ್ನು ನಾನು ಕಂಡಿಲ್ಲ!?

(ಹೇಳದೇ ಕೇಳದೇ ಕನಸಿಗೆ ನುಗ್ಗಿ , ನಾನು ಪತ್ರಿಕಾ ವೃತ್ತಿಗೆ ಮತ್ತೆ ಮರಳಿದ ಮೇಲೆ ಎಲ್ಲೋ ಒಂಚೂರು ಪಾರು ಮಾಡುವ ನಿದ್ದೆಯನ್ನೂ ಕೆಡಿಸುವ ಕಾರಮರಡಿಯ ಅವಧೂತದ ಕುರಿತ ಈ ನನ್ನ ಲೇಖನ  ತುಮಕೂರು ವಿಶ್ವವಿದ್ಯಾನಿಲಯ ಪ್ರಕಟಿಸಿರುವ ಕೆ.ಎಂ.ಶಂಕರಪ್ಪ ಸ್ಮೃತಿ ಸಂಪುಟ “ ಧರ್ಮ ಮೇಘ” ಪುಸ್ತಕದಲ್ಲಿ ಪ್ರಕಟವಾಗಿದೆ.)

 

ಕೆ.ಎಂ.ಶಂಕರಪ್ಪ

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಧುಗಿರಿ ಪಟ್ಟಣಕ್ಕೆ ಅಂಟಿಕೊಂಡಂತಿರುವ ಕಾರಮರಡಿ ಎಂಬ ಪುಟ್ಟ ಗ್ರಾಮದಲ್ಲಿ ಮುದ್ದಲಿಂಗಯ್ಯ, ಕಾಮಕ್ಕ ದಂಪತಿಗಳಿಗೆ

1939ರ ಏಪ್ರಿಲ್ 09ರಂದು ಜನಿಸಿದ ಶಂಕರಪ್ಪನವರು ಬಿಎಸ್‍ಸಿ ಪದವಿ ನಂತರ, ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟಿನಲ್ಲಿ ನಿರ್ದೇಶನ ಹಾಗೂ ಸ್ಕ್ರಿಪ್ಟ್ ರೈಟಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಶಂಕರಪ್ಪನವರು ನಾಡಿನ ದಿಕ್ಕನ್ನೇ ಬದಲಿಸಿದ ಕರ್ನಾಟಕ ಬರಹಗಾರರ ಕಲಾವಿದರ ಒಕ್ಕೂಟದ ಸಂಸ್ಥಾಪಕರಲ್ಲಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಲ್ಲಿ ಒಬ್ಬರು.

ಒಂದು ಸಿನಿಮಾ, ಹತ್ತಾರು ಅತ್ಯುತ್ತಮ ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿದ್ದಲ್ಲದೇ, ಬೌದ್ಧ ತಾತ್ವಿಕತೆಯನ್ನು ಜನ ಮನ ತಲುಪಿಸುವ ಬೋಧಿಸತ್ವನಂತೆ ಸಂಚರಿಸತ್ತಿದ್ದರು. ವಯೋ ಸಹಜ ಅನಾರೋಗ್ಯದಿಂದ 2014ರ ಜೂನ್ ಐದರಂದು ಬೆಂಗಳೂರಿನಲ್ಲಿ ಪರಿನಿಬ್ಬಾನ ಹೊಂದಿದರು.