ಸಾಹಿತ್ಯ ! ಹಾಗೆಂದರೇನು ? ಕೆ.ಪಿ.ನಟರಾಜ್
ಕವಿ, ವಿಮರ್ಶಕ ಡಾ.ಕೆ.ಪಿ.ನಟರಾಜ್ ಇತ್ತೀಚೆಗೆ ಮಧುಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ ಭಾಷಣದ ಒಂದು ಸುಸಂಬದ್ಧ ಉದೃತ ಭಾಗ- ʼ ಕಿನ್ನರಿʼಯ ಓದುಗರಿಗಾಗಿ
ಸಾಹಿತ್ಯ ಅಥವಾ ಯಾವುದೇ ಕಲಾಕೃತಿಯ ಅಪ- ಓದಿನ , ಅಪ- ವ್ಯಾಖ್ಯಾನದ , ಅಪ ಸ್ವೀಕರಣೆಯ ಅಪಾಯವನ್ನು ಮಾನವ ಕುಲ ಉದ್ದಕ್ಕೂ ಮೇಲೆಳೆದುಕೊಂಡೇ ಬರುತ್ತಿದೆ ಅನ್ನಬಹುದು . ನಮ್ಮ ಕಾಲವೂ ಇದರಿಂದ ಹೊರತಾಗಿಲ್ಲ . ಈ ಕಾರಣದಿಂದ ಸೃಜನಶೀಲ ಸಾಹಿತ್ಯ ಅಥವಾ ಕಲೆಯ ಈ ನಿಟ್ಟಿನ ಜಿಜ್ಞಾಸೆಯು ನಮ್ಮನ್ನು ಇತ್ತ ಗಮನಹರಿಸಲು ನೆರವಾಗುತ್ತದೆ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆಯಾಗಿದೆ .
ಕಲೆಯನ್ನು ಕಲೆಯಲ್ಲದ್ದರಿಂದ ಪ್ರತ್ಯೇಕಿಸುವ ಮತ್ತು ಕಲೆಯನ್ನು ಹೇಗೆ ನೋಡಬೇಕೆಂಬ ಬಗ್ಗೆ ಜಗತ್ತಿನಲ್ಲಿ ಬಹುದೊಡ್ಡ ವಾಗ್ವಾದಗಳೇ ನಡೆದಿರುವ ಕುರುಹುಗಳು ಕಾಣುತ್ತವೆ . ಸಾಹಿತ್ಯ ,ಚಿತ್ರ ,ಶಿಲ್ಪ ,ಸಂಗೀತ , ನಾಟಕ,ನೃತ್ಯ ಎಲ್ಲವೂ ಕಲೆಯ ಪ್ರಕಾರಗಳು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ
"ಕಲೆಯನ್ನು ಸರಿಯಾಗಿ ನೋಡಲಾಗದ ಕಾರಣಕ್ಕೇ ಜಗತ್ತಿನಲ್ಲಿ ಇಷ್ಟೊಂದು ದುಃಖವಿದೆ "ಎಂಬ ಅರ್ಥದ ಮಾತನ್ನು ಟಾಲ್ಸ್ಟಾಯ್ ಹೇಳುತ್ತಾರೆ .ಅವರು ತಮ್ಮ ಎಪ್ಪತ್ತರ ವಯಸ್ಸಿನಲ್ಲಿ ಯೂರೋಪು ರಷ್ಯಾ ಬಾರತ ಹೀಗೆ ಅವರ ಓದಿಗೆ ಲಭ್ಯವಿದ್ದ ಸಾಹಿತ್ಯ ನಾಟಕಾದಿ ಕಲೆಗಳ ಕುರಿತ ಜಾಗತಿಕ ಮನ್ನಣೆಯ ಕೃತಿಗಳನ್ನು ಓದುತ್ತಾ ಈ ಬಗ್ಗೆ ಆಳವಾಗಿ ವಿವೇಚಿಸುತ್ತ What is art ? ಕಲೆ ಎಂದರೇನು ?ಎಂಬ ಪುಸ್ತಕವನ್ನೆ ಬರೆಯುತ್ತಾರೆ . ಆ ಪುಸ್ತಕವನ್ನು ಬಹಳ ಹಿಂದೆಯೇ ನಾಡಿನ ಹಿರಿಯ ವಿದ್ವಾಂಸರಾದ ಸಿಪಿಕೆ ಅವರು ಅನುವಾದ ಮಾಡಿದ್ದಾರೆ .ಆ ಪುಸ್ತಕ ಟಾಲ್ಸ್ಟಾಯ್ ಪ್ರಕಾರ ಅವರ ಅತ್ಯುತ್ತಮ ಪುಸ್ತಕ .. ಮಿಕ್ಕ ಜಗತ್ಖ್ಯಾತಿಯ ಅವರ ಕೃತಿಗಳು ಅವರ ಇಷ್ಟದ ಕೃತಿಗಳ ಪಟ್ಟಿಯಲ್ಲಿಲ್ಲ
ಟಾಲ್ಸ್ಟಾಯ್ ಅವರ ಪ್ರಕಾರ .. "ಲೋಕ ಕಲ್ಯಾಣಕ್ಕಾಗಿ ತುಡಿಯುವ ವಸ್ತುವೊಂದು , ಲೇಖಕನಲ್ಲೂ ಹುಚ್ಚಿನಂತೆ ಅಥವಾ ಧ್ಯೇಯದಂತೆ ಕಾಡಿ ಸಹಜ ರೂಪ ಧಾರಣೆ ಮಾಡಿ ಹುಟ್ಟಿದ ಹೊಸ ವಸ್ತುವೇ ಕಲೆ ..ಈ ಮಾನದಂಡವನ್ನಿಟ್ಟುಕೊಂಡು ಜಗತ್ತಿನ ಪ್ರಸಿದ್ಧ ಸಾಹಿತ್ಯ , ಕಲೆ ,ಸಂಗೀತ, ನಾಟಕ ಕೃತಿಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ಅವುಗಳೊಳಗಿಂದ ನೈಜ ಕಲಾಕೃತಿಗಳನ್ನು ಹೆಕ್ಕುತ್ತ ಹೋಗುತ್ತಾರೆ . ಟಾಲ್ಸ್ಟಾಯ್ ಅವರ ಈ ದೃಷ್ಟಿ ಯ ಹಿಂದೆ ಇದ್ದ ಮಹತ್ವಾಕಾಂಕ್ಷೆ ದೊಡ್ಡದಾಗಿತ್ತು . ಮನುಷ್ಯನ ಸುಖ ದುಃಖದ ಕಾರಣಗಳ ಜೊತೆಗೆ ತಳಕುಹಾಕಿಕೊಂಡಿತ್ತು . ಟಾಲ್ಸ್ಟಾಯ್ , ದುಃಖದ ಕಾರಣಗಳನ್ನು ಅನ್ವೇಶಿಸುತ್ತ ಸಾಗಿದ ಬುದ್ಧ ಗುರುವಿನ ಶೋಧಕ ಪಥದಲ್ಲಿದ್ದರು
ಲೋಕ ದ ಗೋಳಿನ ಮೂಲದಲ್ಲಿ ಕಲೆಯಲ್ಲದ್ದನ್ನು ಕಲೆಯೆಂದು ತಿಳಿಯುವ ಮತ್ತು ಕಲೆಯನ್ನು ಕಲೆಯಲ್ಲದ್ದರಿಂದ ಪ್ರತ್ಯೇಕ ಮಾಡಿ ನೋಡಲಾಗದ ಮಾನವ ಕುಲದ ದೋಷದಲ್ಲಿ ಗುರುತಿಸುವ ಪ್ರಯತ್ನ ಟಾಲ್ಸ್ಟಾಯ್ ಅವರದು ..
ಕರ್ನಾಟಕದಲ್ಲೂ ಕಲೆಯ ಹೆಸರಲ್ಲಿ ,ಕಲೆಯ ರೂಪದಲ್ಲಿ ಅಡಗಿರುವ ಕಲೆಯಲ್ಲದ ಕಗ್ಗವನ್ನು ಸತ್ಯವೆಂದು ನಂಬುವುದರ ಅನಾಹುತದ ಬಗೆಗೆ ಚಿಂತಿಸಿ ಎಚ್ಚರಿಸುವ , ಎಚ್ಚರಗೊಳ್ಳುವ ವಿದ್ಯಮಾನವೊಂದು ಚರಿತ್ರೆಯುದ್ದಕ್ಕೂ ಜಾಗೃತವಾಗಿರುವುದನ್ನು ನಾವು ನೋಡುತ್ತೇವೆ .
ಕಲೆಯ ಬಗೆಗಿನ ಮೂಲಭೂತ ಲೋಕದೃಷ್ಟಿಯನ್ನು ನೀಡಿದವನು ಬುದ್ಧ ಗುರುವೇ ಇರಬಹುದೆಂದು ಕಾಣುತ್ತದೆ.( ಇದು ಜೀವನವನ್ನು ನೋಡುವ ಲೋಕ ದೃಷ್ಟಿಯೂ ಆಗಿದ್ದಿದ್ದು ಅದರ ಗಣ್ಯಾಂಶ ) ಬುದ್ಧನಲ್ಲಿ ಪ್ರಕ್ರಿಯಾ ಮೀಮಾಂಸೆ ಎಂದು ಕರೆಯಲಾಗುವ, ಲೋಕದೃಷ್ಟಿಯು 'ಅನಿಚ್ಚ 'ಅಥವಾ' ಅನಿತ್ಯ'ದ ,ಅಥವಾ ಅಶಾಶ್ವತೆಯ ಬಗೆಗಿನ ಅರಿವನ್ನು ಪ್ರಧಾನವಾಗಿ ಮುಂದೆ ತರುತ್ತದೆ ..
ಎಲ್ಲವೂ ಮನುಷ್ಯನ ಮನಸ್ಸಿನಲ್ಲಿ ಜನಿಸಿ , ಅಸ್ತಿತ್ವ ಸ್ಥಾಪಿಸಿ,ಆಳಿ ಅಲ್ಲಿಯೇ ಕೊನೆಗೊಳ್ಳುತ್ತವೆ ಎಂಬ ಲೋಕ ದೃಷ್ಟಿ ಅದು .ಹೀಗಾಗಿ ಮನುಷ್ಯ ನಂಬಿ ನೆಚ್ಚಿ ಪ್ರತಿಪಾದಿಸಿ ಆ ನೆಚ್ಚುಗೆಯ ಮೇಲೆ ಸ್ಥಾವರ ಮೂರ್ತಿಗಳನ್ನು ಸ್ಥಾಪಿಸಿ ಸಂಸ್ಥೀಕರಿಸಿ ಹಿಂಸೆಯನ್ನು ಆಹ್ವಾನಿಸುತ್ತಾನೆ ಎಂಬುದು ಬುದ್ದ ಗುರುವಿನ ದರ್ಶನವಾಗಿತ್ತು ಎಂಬುದನ್ನು ಬಲ್ಲವರು ಹೇಳುತ್ತಾರೆ
ಈ ನೋಟವನ್ನೆ ಕನ್ನಡದಲ್ಲಿ ಅಲ್ಲಮಪ್ರಭುಗಳು '' ಮೂರ್ತಿಯಾದದ್ದಕ್ಕೆ ಪ್ರಳಯ ತಪ್ಪಿದ್ದಲ್ಲ ' ಎಂದರು . ಇದು ಕನ್ನಡದ ಅನಾಮಿಕ ವಚನವೊಂದರ ಅನಾಮಿಕ ಸಾಲಾಗಿ ಕಂಡರೂ ಇದರಲ್ಲಿ ಮಾನವ ಕುಲಕ್ಕೆ ಬಹುದೊಡ್ಡ ಎಚ್ಚರಿಕೆ ಇದೆ .. ಯಾಕೆಂದರೆ ಸದಾಕಾಲ ತನ್ನ ಲೋಕ ಗ್ರಹಿಕೆ ,ನಂಬಿಕೆ , ಧರ್ಮ , ತತ್ವ ಜ್ಙಾನ ಕಾವ್ಯ ಕಲೆಗಳು ಇತ್ಯಾದಿಗಳನ್ನು ಸೃಜಿಸುತ್ತಲೇ ಅದನ್ನು ಆತ್ಯಂತಿಕ ಸತ್ಯವೆಂದು ನಂಬುವ ,ನೆಚ್ಚುವ ಮನುಷ್ಯ ಅದನ್ನೇ ಆತ್ಯಂತಿಕ ಸತ್ಯವನ್ನಾಗಿ ಮಾಡಿ ಆರಾಧಿಸಲು , ಕಾವಲು ಕಾಯಲು , ಅನ್ಯರ ಮೇಲೆ ಅದನ್ನು ಹೇರಲು , ತನ್ನಾಚೆಗಿನವರು ಕಟ್ಟಿಕೊಂಡ ಲೋಕದೃಷ್ಟಿ , ಕಾವ್ಯ ಪುರಾಣ ,ನಂಬಿಕೆ, ಶ್ರದ್ಧಾದಿ ಮೂರ್ತ ಪ್ರಪಂಚವನ್ನು ಹಳಿಯಲು ಅವಹೇಳನ ಮಾಡಲು , ಭಂಜಿಸಲು ಮುಂದಾಗಿ ಹಿಂಸೆಗಿಳಿಯುತ್ತಾನೆ ಎಂಬುದನ್ನು ಅಲ್ಲಮಪ್ರಭುಗಳ ಈ ಮಾತು ಧ್ವನಿಸುತ್ತಿರುತ್ತದೆ ..
ಹೀಗಾಗಿಯೇ ವಚನಕಾರರೆಲ್ಲರೂ ಸಮಾಜದಲ್ಲಿ . ಬೇರುಬಿಟ್ಟ ರೂಢಿ , ಪದ್ದತಿ , ಸಂಪ್ರದಾಯ , ಜಾತಿ ಮತ ದೈವಾದಿ ಸಂಗತಿಗಳೆಲ್ಲವನ್ನೂ ಹೊಸ ಕಣ್ಣಿನಲ್ಲಿ ನೋಡುವ ಧೀಮಂತಿಕೆಯನ್ನು ಕನ್ನಡ ನಾಡಿನ ಮಣ್ಣಿನಲ್ಲಿ ತೋರಿದರು .
ಈ ಸ್ವತಂತ್ರ ದೃಷ್ಟಿಯ ಸ್ವತಂತ್ರ ಚಿಂತನೆಯ ಕಾರಣದಿಂದ ವಚನ ಚಳವಳಿ ಎಂಬ ಅನುಭಾವಿ ಬಂಡಾಯದ ಯುಗದಲ್ಲಿ ಕೂಡಲ ಸಂಗಮ ದೇವ , ಚೆನ್ನಮಲ್ಲಿಕಾರ್ಜುನ , ರಾಮನಾಥ , ಕಪಿಲ ಸಿದ್ದ ಮಲ್ಲಿಕಾರ್ಜುನ , ಗುಹೇಶ್ವರ ಲಿಂಗ ಮುಂತಾದ ವೈಯಕ್ತಿಕವಾದ ದೈವಗಳ ಉದಯ ಸಾಧ್ಯವಾಯಿತು . . ನಮ್ಮ ಸಮಾಜದಲ್ಲಿ ಅನಂತ ಕಾಲದಿಂದಲೂ ಚಾಲ್ತಿಯಲ್ಲಿರುವ ಮುಕ್ಕೋಟಿ ದೈವಗಳ ಕಲ್ಪನೆಯೂ ಸಹ ಜನ ಸಾಮಾನ್ಯನ ಸ್ತರದಲ್ಲಿ ಜರುಗಿದ ಮತ್ತು ಜರುಗುತ್ತಿರುವ ಬಹುತ್ವವಾದವನ್ನೂ, ವೈಯಕ್ತಿಕವಾದ ದೈವ ,ತತ್ವಜ್ನಾನ , ಲೋಕದೃಷ್ಟಿಗಳ ಅನ್ವೇಷಣೆ ಯ ವಿದ್ಯಮಾನವನ್ನೂ ನಮಗೆ ತೋರುತ್ತದೆ. ಮುಕ್ಕೋಟಿ ದೈವದ ಕಲ್ಪನೆಯನ್ನು 'ಸಾಮಾನ್ಯ 'ವಿಚಾರವಾದ ಗೇಲಿ ಮಾಡುತ್ತಲೇ ಬಂದಿದ್ದರೂ . ಈ ಕಲ್ಪನೆ , ಎಷ್ಟು ಜನರಿದ್ದಾರೋ ಅಷ್ಟೂ ಸಂಖ್ಯೆಯ ದೇವರುಗಳು ಎಂಬ ಮನುಷ್ಯ ನ ನಿಸರ್ಗದತ್ತ ಘನತೆಯನ್ನು ಪ್ರತಿಮಿಸುತ್ತಿರಬಹುದು ಎಂಬುದು ನನ್ನ ಪ್ರಾಮಾಣಿಕ ಸಂಶಯವೂ ,ವಿಶ್ವಾಸವೂ ಆಗಿದೆ ..
ಕಲೆ ಅಥವಾ ಸಾಹಿತ್ಯಕ್ಕೂ ಮತ್ತು ಈ ಬಗೆಯ ಬಹುತ್ವವಾದಿ ಲೋಕದೃಷ್ಟಿಗೂ ಇರಬಹುದಾದ ಸಂಬಂಧವೇನೆಂಬ ಪ್ರಶ್ನೆ ಮೂಡಬಹುದು .ಬುದ್ದ ಗುರುವಿನ ಅಥವಾ ಅಲ್ಲಮಪ್ರಭುಗಳ ಮಾತುಗಳನ್ನು ಮತ್ತೆ ನೆನಪುಮಾಡಿಕೊಂಡರೆ ಈ ಪ್ರಶ್ನೆಗೆ ಉತ್ತರ ಸಿಕ್ಕುತ್ತದೆ . ಮನುಷ್ಯನ ಕಲ್ಪನೆ , ಭಾವನೆ ಅಲೋಚನೆ ಮತ್ತು ಆತ ಸೃಷ್ಟಿಸುವ ಕೃತಿ ಹಾಗೂ ಆತನ ಅಸ್ತಿತ್ವ ಅತವಾ ಇರುವಿಕೆಗಳೆಲ್ಲವೂ ಅನಿತ್ಯ , ಅಶಾಶ್ವತ , ಸಾಪೇಕ್ಷ . ಮತ್ತು ಮೂರ್ತಿಯಾದದ್ದು ಪ್ರಳಯ ಅಥವಾ ಅಂತ್ಯಕ್ಕೆ ಒಳಗು ಎಂಬ ದೃಷ್ಟಿ ಯೆ ಮಾನವ ಸಮಾಜದಲ್ಲಿ ಅನಂತ ದೃಷ್ಟಿಗಳಿರಬಹುದು ಮತ್ತು ಇರುತ್ತವೆ .ಇದೇ ನಿಸರ್ಗ ನಿಯಮ ಎಂಬುದನ್ನು ಹೇಳುತ್ತದೆ.
ಈ ದೃಷ್ಟಿಯನ್ನು , ಕಾಣ್ಕೆಯನ್ನು , ವಿವೇಕವನ್ನು ಧಿಕ್ಕರಿಸುವ ಧೋರಣೆ ಲೋಕದಲ್ಲಿ ಹಿಂಸೆಯನ್ನು ಬಿತ್ತಿಬೆಳೆಯುತ್ತದೆ.. ಇನ್ನೊಬ್ಬನ ಅಭಿಪ್ರಾಯ , ಆಲೋಚನೆ ,ಕಲ್ಪನೆ , ಭಿನ್ನ ಮತ ಎಲ್ಲವನ್ನೂ ಸಹಿಸದೆಹೋಗುತ್ತದೆ ..
ವಚನಕಾರರು ಈ ವಿಚಾರದಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟವರು ಮತ್ತು ಸದಾ ಕಾಲ,ತಾವು ನಂಬಿದ ಜಾತಿ ಮತಾದಿ ಧರ್ಮಾಚಾರಗಳ ಇಷ್ಟಾನಿಷ್ಟಗಳ ಬಂಧಿಯಾಗಿ ಸೆರೆವಾಸದಲ್ಲಿ ನರಳುತ್ತಿದ್ದ ಸಮಾಜವನ್ನು ಸ್ವತಂತ್ರವಾಗಿಸಲು ಸಮಾಜದ ಸ್ಥಾವರವಾದಿಗಳನ್ನು ಎದೆಗೊಟ್ಟು ಎದುರಿಸಿನಿಂತವರು .
ವಚನಕಾರರ ಚಿಂತನ ಸ್ವಾತಂತ್ರ್ಯ ವನ್ನು ಪ್ರಖರವಾಗಿ ಪ್ರಕಟಿಸುವ ಒಂದು ವಚನವನ್ನು ಇಲ್ಲಿ ಪ್ರಸ್ಥಾಪಿಸಲು ಬಯಸುತ್ತೇನೆ .
"ಗಂಗಾದೇವಿ ಮುಂಡೆಯಾದಳು ಗೌರಿದೇವಿ ಓಲೆಯ ಕಳೆದಳು ಚಂದ್ರಸೂರ್ಯರಿಬ್ಬರೂ ನೀರಿಳಿದರು ವಾಯುದೇವ ವಿಮಾನವ ಹೊತ್ತ ವಾಸುದೇವ ತಲೆಗೊಳ್ಳಿಯನಿರಿದ ಅಲ್ಲಿಂದತ್ತ ಗುಹೇಶ್ವರ ಸತ್ತನೆಂಬ ಸುದ್ದಿ"
ಈ ವಚನದಲ್ಲಿ ಮಹಾದೇವ ಶಿವನ ಸಾವಿನ ಸುದ್ದಿ ಬಂದಿದೆ ಗಂಗಾದೇವಿ ಮತ್ತು ಗೌರಿದೇವಿಯರಿಗೆ ವೈಧವ್ಯ ಪ್ರಾಪ್ತಿಯಾಗಿದೆ ವಾಯು ವಿಷ್ಣು ಸೂರ್ಯ ಚಂದ್ರಾದಿಗಳೂ ಇಲ್ಲಿ ಶಿವನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ಕಣ್ಣಿಗೆ ಕಟ್ಟುವ ಎದೆನಡುಗಿಸುವ ದೃಶ್ಯವಿದೆ, ಜನ ಸಾಮಾನ್ಯರು ಕಲ್ಪಿಸಲೂ ಬೆಚ್ಚಿಬೀಳುವ ಸನ್ನಿವೇಶವೊಂದನ್ನು ಇಲ್ಲಿ ಅಲ್ಲಮಪ್ರಭುಗಳು ಚಿತ್ರಿಸಿದ್ದಾರೆ. ತನ್ನ ಇಷ್ಟದೈವವಾದ ಗುಹೇಶ್ವರ ಸತ್ತ ಸುದ್ದಿಯನ್ನು ಲೋಕಕ್ಕೆ ಸಾರುತ್ತ ನಿಂತಿದೆ ಈ ವಚನ ..
ಈ ವಚನವನ್ನು ಬರೆಯುವ ಅಲ್ಲಮ ಪ್ರಭುಗಳು ಲೋಕದ ಸಮಾಜಕ್ಕೆ ಏನನ್ನು ಹೇಳಲು ಮುಂದಾಗಿದ್ದಾರೆ ? ಇದನ್ನು ಓದಿದ ,ಕೇಳಿದ ಲೋಕ ವ್ಯಗ್ರವಾಗಿ ಅವರ ಮೇಲೆ ಹಲ್ಲೆ ಅಕ್ರಮಣಗಳಿಗಿಯಲು ಮುಂದಾಗದೆ ? ಎಂಬಂತಹ ಪ್ರಶ್ನೆಗಳಿವೆ ..
ಯಾಕೆಂದರೆ ಸಮಾಜ ಅತ್ಯಂತ ಗೌರವದಿಂದ ಪೂಜ್ಯತೆಯಿಂದ ಅರಾಧಿಸಿದ ಸಮಸ್ತ ಚಿರಂಜೀವ ದೈವಗಳನ್ನೂ ಇಲ್ಲಿ ಸಾವಿಗೆ , ವೈಧವ್ಯಕ್ಕೆ ಶೋಕಕ್ಕೆ ದೂಡಲಾಗಿದೆ ....
ಅದರೆ ಅಲ್ಲಮ ಪ್ರಭುಗಳಿಗೆ ಮನುಷ್ಯನ ನಿಸರ್ಗದತ್ತ ಸ್ವಾತಂತ್ರ್ಯ ವನ್ನು ಕಿತ್ತುಕೊಂಡು ಮನುಷ್ಯನ ಮನಸ್ಸಲ್ಲಿ ಭದ್ರವಾಗಿ ಬೇರು ಬಿಟ್ಟಿರುವ ಜಾತಿ ಮತ ಧರ್ಮ ಸಂಪ್ರದಾಯ , ರೂಡಿದತ್ತ. ನಂಬಿಕೆ ಶ್ರದ್ಧೆ ದೈವಾದಿಗಳ ನ್ನು ಹೊರದೂಡಿ ಹೊಸ ಸ್ವತಂತ್ರ ಚಿಂತನೆಗೆ ದಾರಿ ಮಾಡಿಕೊಡುವ ಮಹದುದ್ದೇಶ ಇಲ್ಲಿದೆ. ಪೂಜ್ಯ ದೈವಗಳಾದರೂ ಸರಿಯೆ , ಆವಾಹಿಸುವ ಅಥವಾ ಆಹ್ವಾನಿಸುವ ಅಥವಾ ಸೃಷ್ಟಿಸುವ ಮತ್ತು ಅದೇ ಕಾಲಕ್ಕೆ ತಿದ್ದುವ . ವಿಮರ್ಶಿಸುವ , ವಿಸರ್ಜಿಸುವ ಸ್ವಾತಂತ್ರ್ಯವು ಮುಖ್ಯವಾದದ್ದೆಂಬ ನಿಷ್ಟುರತೆ ಧೀಮಂತಿಕೆ ಇಲ್ಲಿದೆ . ಹೀಗಾಗಿಯೇ ಅಲ್ಲಮಪ್ರಭು ಗಳು ತಮ್ಮ ಇಷ್ಟದೈವವಾದ ಗುಹೇಶ್ವರ ಲಿಂಗದ ಸಾವನ್ನೂ ಸುದ್ದಿಯಂತೆ ಇಲ್ಲಿ ಬಿತ್ತುತ್ತಾರೆ
ಅದರೆ ಲೆಕ್ಕವಿಲ್ಲದಷ್ಟು ಆಚಾರ ,ವಿಚಾರ ,ಶ್ರದ್ಧಾ ,ದೈವಾದಿ ಪೂರ್ವಾಗ್ರಹಗಳಿಗೆ ಬಂದಿಯಾದ ಲೋಕ ಅಲ್ಲಮ ಪ್ರಭುಗಳ ವಿಚಾರದ ದಾರಿಗೆ ಬರುವುದೇ ? ಎಂಬುದೆ ಇಲ್ಲಿರುವ ಪ್ರಶ್ನೆ ಯಾಗಿದೆ
(ಮುಂದಿನ ʼ ಕಿನ್ನರಿʼಗೆ)
bevarahani1