ಹೆತ್ತೋರಿಗೆ ಹೆಗ್ಗಣ, ಕಟ್ಟಿಕೊಂಡೋರಿಗೆ ಕೋಡಂಗಿ ಮತ್ತು ಹುಟ್ಟಿ ಬೆಳೆದವರಿಗೆ ಹುಟ್ಟೂರು ಮುದ್ದು ಅಲ್ವಾ 

ಹೆತ್ತೋರಿಗೆ ಹೆಗ್ಗಣ, ಕಟ್ಟಿಕೊಂಡೋರಿಗೆ ಕೋಡಂಗಿ ಮತ್ತು ಹುಟ್ಟಿ ಬೆಳೆದವರಿಗೆ ಹುಟ್ಟೂರು ಮುದ್ದು ಅಲ್ವಾ o-we-need-tumkur-as-satellite-town-of-bengaluru-no

ಹೆತ್ತೋರಿಗೆ ಹೆಗ್ಗಣ, ಕಟ್ಟಿಕೊಂಡೋರಿಗೆ ಕೋಡಂಗಿ ಮತ್ತು ಹುಟ್ಟಿ ಬೆಳೆದವರಿಗೆ ಹುಟ್ಟೂರು ಮುದ್ದು ಅಲ್ವಾ 

ಹೆತ್ತೋರಿಗೆ ಹೆಗ್ಗಣ, ಕಟ್ಟಿಕೊಂಡೋರಿಗೆ ಕೋಡಂಗಿ ಮತ್ತು ಹುಟ್ಟಿ ಬೆಳೆದವರಿಗೆ ಹುಟ್ಟೂರು ಮುದ್ದು ಅಲ್ವಾ 

99% ಲೋಕಲ್
 
ಕುಚ್ಚಂಗಿ ಪ್ರಸನ್ನ

ಹೊರಗಿನಿಂದ ಮೊದಲ ಸಲ ನಮ್ಮೂರು ತುಮಕೂರಿಗೆ ಬಂದವರಿಗೆ ಏನೋ ಬಹಳ ದೊಡ್ಡ ನಗರದಂತೆ ಕಾಣಬಹುದು. ಆದರೆ ಇಲ್ಲೇ ಈ ಊರಿನಲ್ಲೇ ಹತ್ತಾರು ವರ್ಷಗಳಿಂದ ಇರುವವರಿಗೆ ಮತ್ತು ಇದೇ ಊರಿನಲ್ಲಿ ಹುಟ್ಟಿ ಬೆಳೆದವರಿಗೆ ಈಗಲೂ ಪುಟ್ಟ ಹಳ್ಳಿಯಂತೆ ಭಾಸವಾದರೆ ಅಚ್ಚರಿಪಡಬೇಕಿಲ್ಲ. ಎಲ್ಲ ಊರುಗಳೂ ಅಂತದ್ದೊಂದು ಭಾವನೆಯನ್ನು ಇಂಥ ಜನರಲ್ಲಿ ಮೂಡಿಸುವುದು ಸಹಜ.


ಐವತ್ತು ವರ್ಷದ ಹಿಂದೆ ಚಿಕ್ಕಪೇಟೆ, ಸಂತೆಪೇಟೆ, ಗುಬ್ಬಿಗೇಟ್, ಹೊರಪೇಟೆ, ಕೆ.ಆರ್.ಬಡಾವಣೆ, ಗಾಂಧಿನಗರ, ವಿನೋಬನಗರ, ಪೂರ್‌ಹೌಸ್ ಕಾಲೋನಿ, ಸೋಮೇಶ್ವರ ಪುರ, ಸಿದ್ದಗಂಗಾ ಬಡಾವಣೆ ಮತ್ತು ಎಸ್‌ಐಟಿಗಳಿಗೆ ಸೀಮಿತವಾಗಿದ್ದ ತುಮಕೂರು ನಗರ ಅದರ ಎರಡು ಪಟ್ಟು ವಿಸ್ತೀರ್ಣಕ್ಕೆ ವಿಸ್ತಾರಗೊಂಡಿದೆ. ಆಗ ನಗರದ ಹೊರವಲಯಗಳಾಗಿದ್ದ ಶಿರಾ ಗೇಟ್, ಪೆಟ್ಟಿಗೆ ಅಂಗಡಿ(ಹನುಮಂತಪುರ), ಶೆಟ್ಟಿಹಳ್ಳಿ,ಮರಳೂರು ದಿಣ್ಣೆ,ಮೆಳೆಕೋಟೆ, ಗಂಗಸAದ್ರ, ಬಂಡೆಪಾಳ್ಯ, ದೇವರಾಯಪಟ್ಣ, ಕ್ಯಾತಸಂದ್ರ ಸಿದ್ಧಗಂಗೆಗಳೆಲ್ಲ ಇವತ್ತು ನಗರದ ಅವಿನಾ ಭಾಗವಾಗಿಬಿಟ್ಟಿವೆ ಈ 50 ವರ್ಷಗಳಲ್ಲಿ. ಹಾಗಾಗಿ ಬೆಂಗಳೂರಿನಲ್ಲಿರುವ ಎಲ್ಲ ಬಡಾವಣೆಗಳ ಹೆಸರುಗಳೂ ಇಲ್ಲಿ ಕಾಪಿ ಆಗಿಬಿಟ್ಟಿವೆ.


1973ರಲ್ಲಿ ಮೂರನೇ ಕ್ಲಾಸಿಗೆ ಅಂತ ಇಲ್ಲಿಗೆ ಬಂದ ನನ್ನ ಕಣ್ಣಿಗೆ ಕಂಡ ಈ ಊರಿನ ಚಿತ್ರಗಳು ಈಗಲೂ ನನ್ನ ಕಣ್ಣ ಪಾಪೆಯಲ್ಲಿ ಹಾಗೇ ಉಳಿದುಬಿಟ್ಟಿವೆ. ಹೆಂಚಿನ ಮಾಡು ಇದ್ದ  ಕೃಷ್ಣ ಸಿನಿಮಾ ಮಂದಿರದಲ್ಲಿ ಮಾರ್ನಿಂಗ್ ಶೋ,ಮ್ಯಾಟಿನಿ ಷೋ ಶುರುವಾದ ಹತ್ತು ನಿಮಿಷ ಬಿಟ್ಟು ಹೋದರೆ, ಹಿಂಭಾಗ ಲೇಡೀಸ್ ಕಡೆ ನಾಲ್ಕಾಣೆ ಇಸಕೊಂಡು ಒಳಕ್ಕೆ ಬಿಟ್ಟು ಮೆಟ್ಟಿಲ ಮೇಲೆ ಕೂರುವಂತೆ ಹೇಳುತ್ತಿದ್ದ ಸಿಬ್ಬಂದಿ. ಆಗ ಇಡೀ ಥಿಯೇಟರ್‌ನ ಒಳಗೆ ಅರ್ಧಕ್ಕೆ ಮೋಟು ಗೋಡೆ ಇತ್ತು ಗೊತ್ತಾ. ಒಂದು ಕಡೆ ಅಡಕೆಲೆ ಮೆಲ್ಲುವ ಹೆಂಗಳೆಯರು, ಮತ್ತೊಂದು ಕಡೆ ಪುಸು ಪುಸು ಬೀಡಿ ಸೀದಿ ಹೊಗೆ ಬಿಡುವ ಗಂಡಸರು.


ನಮ್ಮ ಹೈಸ್ಕೂಲು ದಿನಗಳಲ್ಲಿ ಹೈಸ್ಕೂಲ್ ಫೀಲ್ಡ್ನಲ್ಲಿ ಸೋಮೇಶ್ವರದ ಕಡೆ ಎರಡು ಖೊಕ್ಕೋ ಕೋರ್ಟ್ ಇದ್ದವು. ಅಲ್ಲಿ ವೈಸಿಎಸ್‌ಸಿ ಅಂದ್ರೆ ಯಂಗ್ ಚಾಲೆಂರ‍್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಾವು ಖೊಕ್ ಅನ್ನುತ್ತ ಚೇಸ್ ಮಾಡುತ್ತಿದ್ದೆವು. ಜೊತೆಗೆ ನ್ಯಾಶನಲ್ ಲೆವೆಲ್‌ಗೆ ಆಡುತ್ತಿದ್ದ ಮಹಿಳಾ ಹಾಕಿ ತಂಡ ಇತ್ತು. ಅಲ್ಲದೆ ಮೆಳೆಹಳ್ಳಿಯ ಹೆಣ್ಣುಮಕ್ಕಳು ಕಬ್ಬಡ್ಡಿ ಟೂರ್ನಿಗೆ ಬಂದರೆ ಊರಿಗೆ ಊರೇ ಕೋರ್ಟ್ ಸುತ್ತ ನಿಂತಿರುತ್ತಿತ್ತು. ನಮ್ಮ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಕೂಡಾ ಇದೇ ಮೈದಾನದಲ್ಲಿ ಓಡುತ್ತಿದ್ದ ಒಳ್ಳೆ ಅಥ್ಲೀಟ್ ಗೊತ್ತಾ. ಇವರು ಬಿಎಸ್ಸಿ ಅಗ್ರಿಕಲ್ಚರ್ ಓದುವಾಗ ಜಿಕೆವಿಕೆಯಲ್ಲಿ ಓಡಿಮಾಡಿದ ದಾಖಲೆಯನ್ನು ಇನ್ನೂ ಯಾರೂ ಮುರಿದಿಲ್ಲವಂತೆ. ಇಂಥಾ ಪರಮೇಶ್ವರ ಅವರಿಗೆ ಓಡಲು ಸ್ಫೂರ್ತಿಯಾದದ್ದು ನಮ್ಮ ಟಿ.ಕೆ.ಆನಂದ್. ಆನಂದ್ ಅವರ 74ನೇ ಹುಟ್ಟುಹಬ್ಬವನ್ನು ಮುಂಜಾನೆ ಗೆಳೆಯರ ಬಳಗ ಮತ್ತು ಅವರ ಅಭಿಮಾನಿಗಳು ಸಂಭ್ರಮದಿAದ ಆಚರಿಸಿದರು.


ಟಿ.ಕೆ.ಆನಂದ್ 2016ರ ವಿಶ್ವ ಹಿರಿಯರ ಕ್ರೀಡಾ ಕೂಟದಲ್ಲಿ ರಿಲೇ ಓಟದಲ್ಲಿ ಚಿನ್ನದ ಪದಕ ನಂತರ 2018ರಲ್ಲಿ ಕಂಚಿನ ಪದಕ ಗಳಿಸಿ ನಾಡಿಗೆ ಕೀರ್ತಿ ತಂದವರು ಆನಂದ್. ತಾವಷ್ಟೇ ಓಡಿ ಕೀರ್ತಿ ತಂದರೆ ಸಾಲದು ಎನ್ನುವ ಅವರ ಕ್ರೀಡಾ ಮನೋಭಾವವು ತುಮಕೂರಿನ ಹತ್ತಾರು ಕ್ರೀಡಾ ಪಟುಗಳಿಗೆ ಕ್ರೀಡಾ ಸಲಕರಣೆಗಳು ಹಾಗೂ ಆರ್ಥಿಕ ನೆರವು ನೀಡುವಂತೆ ಆ ಮೂಲಕ ಜಿಲ್ಲೆಗೆ ಇನ್ನಷ್ಟು ಯಶಸ್ವಿ ಕ್ರೀಡಾಳುಗಳನ್ನು ದೊರಕುವಂತೆ ಮಾಡಿದೆ. ಮೊನ್ನೆ ಕೂಡಾ ಅವರ ಬರ್ತ್ಡೇ ದಿನ ಮೂವರು ಕ್ರೀಡಾಪಟುಗಳನ್ನು ಸನ್ಮಾನಿಸಿದರು ಹಾಗೂ ಹತ್ತು ಸಾವಿರ ರೂಪಾಯಿಯನ್ನು ಕೊಡುಗೆಯಾಗಿ ನೀಡಿದರು. 74ನೇ ಇಳಿವಯಸ್ಸಿನಲ್ಲೂ ಪ್ರತಿ ಮುಂಜಾನೆ ಮೈದಾನಕ್ಕಿಳಿದು ಓಡುವ ಇವರನ್ನು ಕಂಡು ಅನಾರೋಗ್ಯವೂ ದೂರ ಓಡಿದೆ. ಆನಂದ್ ಹೆಸರು ನಗರದ ಕ್ರೀಡಾ ಸಮುಚ್ಚಯದಲ್ಲಿ ಶಾಶ್ವತವಾಗಿ ಉಳಿಯವಂತೆ ಮಾಡುವುದು ಅವರ ಗೆಳೆಯರ ಹಂಬಲವಾಗಿದೆ.
*****
ತುಮಕೂರು ಎಜುಕೇಶನ್ ಸಿಟಿ ಅಂತಾರೆ, ಜೊತೆಗೆ ತಟ್ಟೆ ಇಡ್ಲಿ ಹಾಗೂ ಚಿತ್ರಾನ್ನಕ್ಕೂ ತುಮಕೂರು ಜನಪ್ರಿಯವಾಗಿದೆ. ಬೆಳಗಾವಿ ಬಸ್ ನಿಲ್ದಾಣದಲ್ಲಿ ತುಮಕೂರು ತಟ್ಟೆ ಇಡ್ಲಿ ಹೋಟೆಲ್ ಎಂಬ ಬೋರ್ಡ್ ನೋಡಿದಾಗ ನನಗೆ ಇದು ಇನ್ನಷ್ಟು ನಿಖರವಾಯಿತು. ತುಮಕೂರಿನ ಜನರು ಮೆಚ್ಚುವ ಅನೇಕ ಹೋಟೆಲ್‌ಗಳ ಪೈಕಿ ಅಶೋಕ ನಗರದ ನಾಲ್ಕನೇ ಕ್ರಾಸ್‌ನ ಬಾರ‍್ಸ್ ಕ್ಯಾಂಟೀನ್ (ಅಂಬಿಕಾ ಹೋಟೆಲ್) ಕೂಡಾ ಒಂದು. 


ತುಮಕೂರು ವಿವಿ ಕ್ಯಾಂಪಸ್‌ನಲ್ಲಿ ವಾಕ್ ಬರುವ ಬಹುಪಾಲು ಎಲ್ಲರಿಗೂ ಈ ಹೊಟೆಲ್ ಅಡ್ಡೆ ಮತ್ತು ಕೆಲವರಿಗೆ ಇಡೀ ದಿನದ ತಂಗುದಾಣ. ಇನ್ನು ಕೆಲವರಿಗೆ ಆಶ್ರಯತಾಣ. ಈ ಹೋಟೆಲ್‌ನ ಕಾಫಿ ಕುಡಿಯದ ಗಂಡಸರೇ ತುಮಕೂರಿನಲ್ಲಿ ಇಲ್ಲವೇನೋ ಎಂದರೆ ಇಲ್ಲ ಎನ್ನುವವರು ಕಡಿಮೆ. ನಮ್ಮ ಮಾಜಿ ಸಚಿವ ಹಾಗೂ ಗುಬ್ಬಿಯ ಜನರ ಪ್ರೀತಿಯ ಎಂಎಲ್‌ಎ ವಾಸಣ್ಣನವರೂ ದಿನವೂ ಹಾಜರಿ ಹಾಕುತ್ತಾರೆ, ಕೆಲವೊಮ್ಮೆ ಅವರೇ ಕಾಫಿ ಅಳೆದುಕೊಳ್ಳುವುದೂ ಉಂಟು. ಹೆಸರು ಹೇಳುತ್ತಾ ಹೋದರೆ ಟಿಎಂಸಿಸಿ ಅಧ್ಯಕ್ಷರು ಡಾ. ಎನ್.ಎಸ್.ಜಯಕುಮಾರ್, ಸಿನಿಮಾ, ಟಿವಿ ಕಲಾವಿದ ಹನುಮಂತಗೌಡರೂ  ಸೇರಿದಂತೆ ನಮ್ಮೂರಿನ ಎಷ್ಟೊಂದು ಫೇಮಸ್ ಪರ್ಸನಾಲಿಟಿಗಳನ್ನು ಇಲ್ಲಿ ಭೇಟಿಯಾಗಬಹುದು. ಬೆಳಗಿನ ಜಾವನ ಬೀಟ್‌ಮುಗಿಸುವ ಪೊಲೀಸರೂ ತಂಡತAಡವಾಗಿ ಬಂದು ಬೆಡ್ ಕಾಫಿ ಹೀರಿ ಹೋಗುತ್ತಾರೆ. ಈ ಹೊಟೆಲ್‌ನ ಮಾಲಿಕ ಕೃಷ್ಣಮೂರ್ತಿ ಬಾಯರ್ ಎಂದರೆ ಯಾರಿಗೂ ಗೊತ್ತಾಗುವುದಿಲ್ಲ, ಭಟ್ಟರು ಅಂದು ನೋಡಿ ಎಲ್ಲರಿಗೂ ಚಕ್ಕಂತ ರೀಚ್ ಆಗಿಬಿಡುತ್ತದೆ.


ಈ ಕ್ಯಾಂಟೀನ್‌ಗೆ ಬರುವ ಒಂದಷ್ಟು ಜನರಿಗೆ ಭಟ್ಟರು ಎರಡನೇ ತಾಯಿಯಂತೆ ಕಾಣುತ್ತಾರೆ. ಅಷ್ಟು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವ ಭಟ್ಟರೂ ಮೊನ್ನೆ ಡಿಸೆಂಬರ್ 29ರಂದು ಹುಟ್ಟು ಹಬ್ಬ ಆಚರಿಸಿಕೊಂಡರು. ಬರ್ತ್ಡೇ ಆಚರಿಸಿಕೊಂಡರು ಅನ್ನುವುದಕ್ಕಿಂತ ಈ ಫೋಟೋದಲ್ಲಿ ಕಾಣುವ ಒಂದಷ್ಟು ಗೆಳೆಯರು ಕೇಕ್ ತರಿಸಿ, ಮೈಸೂರು ಪೇಟ ತೊಡಿಸಿ, ಮಣಿಹಾರ ಹಾಕಿ ಸಂಭ್ರಮಿಸಿದರು. ಇಂತದ್ದೆನ್ನೆಲ್ಲ ನೋಡುವ ಕಣ್ಣಿಲ್ಲದಿದ್ದರೆ ನಮ್ಮೂರು ನಮ್ಮೂರು ಅಂತ ಅನಿಸುವುದೇ ಇಲ್ಲ. 


ನಿನ್ನೆ ತುಮಕೂರಿಗೆ ಬಂದಿದ್ದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ತುಮಕೂರನ್ನು ಬೆಂಗಳೂರಿನ ಉಪನಗರ ಮಾಡುತ್ತೇನೆ ಎಂದು ಹೇಳಿಹೋಗಿದ್ದಾರೆ. ಈಗ ನೀವು ಹೇಳಿ ಸ್ವಂತದ ಅಸ್ತಿತ್ವ ಅಸ್ಮಿತೆ ಹೊಂದಿರುವ ತುಮಕೂರು ಎಂದಾದರೂ ಬೆಂಗಳೂರಿನ ಉಪನಗರ ಆಗಬೇಕಾ?